“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ?”
ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-
“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ ಅದನ್ನು ನಿನ್ನ ಗಂಡನೆ ಹೇಳ್ತಾರೆ ಅವರ ಬಾಯಿಂದಲೇ ಕೇಳು…”ಎಂದು ಹೇಳಿದಾಗ ಆಶ್ಚರ್ಯವೆಂಬಂತೆ ಅಲ್ಲಿ ರಾಮಚಂದ್ರಯ್ಯ ಪ್ರತ್ಯಕ್ಷಗೊಂಡಿದನು.
ರಾಮಚಂದ್ರಾಯನನ್ನು ಕಂಡು ಪದ್ಮಿನಿ ಬೆಚ್ಚಿಬಿದ್ದಿದಳು.
ರಾಮಚಂದ್ರಯ್ಯ-
“ಪದ್ಮಿನಿ… ನೀನು ಬಡವರ ಮನೆಯ ಒಳ್ಳೆಯ ಸುಂದರ ಹೆಣ್ಣು ಅಂತ ತಿಳಿದು ನಾನು ನಿನ್ನನ್ನು ಮದುವೆ ಆದೆ. ಆದರೆ ನೀನು… ನೀನೊಂದು ನೀತಿಗೆಟ್ಟ ಹೆಣ್ಣು !
ಸೌಂದರ್ಯ ಸರ್ಪ! ವಿಶ್ವಕನ್ನೆ! ವಿಷ ಕಾರುವ ನಾಗರಹಾವು ಅಂತ ನಾನು ನನ್ನ ಕನಸು ಮನಸ್ಸಿನಲ್ಲಿಯೂ ಸಹ ಅಂದುಕೊಂಡಿರಲಿಲ್ಲ ಪದ್ಮಿನಿ. ಪದ್ಮಿನಿ… ನೀನು ಹೆಸರಿಗೆ ಮಾತ್ರ ಪದ್ಮಿನಿ ! ನೀನೊಂದು ಚಿತ್ತಿನಿ ಜಾತಿಗೆ ಸೇರಿದ ಡಾಕಿನಿ ಅಂತ ನಿನ್ನ ಬಗ್ಗೆ ಎಳ್ಳಷ್ಟು ಅರಿಯದೆ ಈ ರೀತಿ ಮೋಸ ಹೋದೆನಲ್ಲ ನಾನು ! ನಾನು ನಿನಗೇನು ಕಡಿಮೆ ಮಾಡಿದೆ ಅಂತ ನೀನು ಈ ರೀತಿ ನನಗೆ ಮೋಸ ಮಾಡ್ದೆ ಪದ್ಮಿನಿ ? ನಿನಗೋಸ್ಕರ ಹಗಲು ರಾತ್ರಿ ಅನ್ನದೆ ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ ನಿನ್ನ ಬಗ್ಗೆ ಅದೇನೇನೋ ! ಸಾವಿರ ಸುಂದರ ಕನಸುಗಳು ಕಟ್ಟಿಕೊಂಡಿದ್ದೇನಲ್ಲ ನಾನು! ಅಯ್ಯೋ…! ನಾನೆಂಥ ಮೂರ್ಖ ! ಯಾಕೆ ಪದ್ಮಿನಿ, ನಿನ್ನ ಮುಖದ ರೀತಿ ಬದಲಾಗಿದೆಯಲ್ಲ? ಮಾತಾಡು ಪದ್ಮಿನಿ, ಯಾಕೆ ಈ ರೀತಿ ಕಂಪಿಸುತ್ತಿದ್ದೀಯ? ಈ ನಿನ್ನ ಕಲ್ಯಾಣ ಕಾರ್ಯದ ಬಗ್ಗೆ ನನಗೆ ಹೇಗೆ ಗೊತ್ತಾಯ್ತು ಅಂತ ಆಶ್ಚರ್ಯನಾ ? ನಿನ್ನ ನೀಚತನದ ಬಗ್ಗೆ ಕರಿಯ ನನಗೆಲ್ಲಾ ತಿಳಿಸಿದ. ಅವತ್ತೇ ನಿನ್ನ ಕೊಂದು ಬಿಡಬೇಕೆಂಬಷ್ಟು ಕೋಪ ಬಂದಿತ್ತು ನನಗೆ. ಆದರೂ ಸಹ ನಾನು ತುಂಬ ಕಂಟ್ರೋಲ್ ಮಾಡ್ಕೊಂಡೆ. ತಿಳಿದು ತಿಳಿಯದಂತೆ ನಟಿಸಿದೆ. ಯಾಕೆ ಅಂತ ಗೊತ್ತಾ? ಕಿವಿಯಿಂದ ಕೇಳಿದ್ದು ಕಣ್ಣಾರೆ ಕಂಡಿದ್ದೂ ಸಹ ಸುಳ್ಳಾಗುತ್ತೆ; ಪ್ರಮಾಣಿಸಿ ನೋಡು ಅಂತ ತಿಳಿದವರು ಹೇಳಿದ್ದಾರೆ. ಅಂತ ತಾಳ್ಮೆಯಿಂದ ಕಾದು ನೋಡಿದೆ. ಇವತ್ತು ನಿನ್ನ ನಿಜ ರೂಪ ಏನು ಅಂತ ತಿಳಿಯಿತು. ಅಬ್ಬ…! ಎಂಥ ಹೆಣ್ಣು ನೀನು ! ಕರಿಯನ ಮಾತು ಕೇಳಿ ಕೈ ಹಿಡಿದ ಗಂಡನನ್ನೇ ವಿಷ ಉಣಿಸಿ ಕೊಲ್ಲಲು ನೋಡಿದೆಯಲ್ಲ ನೀನು… ನಿಜಕ್ಕೂ ಮೆಚ್ಚಬೇಕು ನಿನ್ನಂತ ಪತಿವ್ರತೆ ಮಹಾಸತಿಗೆ ! ಕರಿಯ ನೀಡಿದ ಬೇವಿನ ಮರದ ತೊಗಟೆಯನ್ನು ವಿಷ ಎಂದು ತಿಳಿದು ಊಟದಲ್ಲಿ ಬೆರೆಸಿ ಖುಷಿಯಿಂದ ನನ್ನನ್ನು ಉಣಿಸಿ ಸಾಯಿಸಲು ನೋಡಿದೆಯಲ್ಲ ನೀನು! ಹುಟ್ಟಿಸುವನು-ಕಾಪಾಡುವನು ದೇವರಿರುವಾಗ ನೀನೆಷ್ಟರದವಳೇ ನನ್ನನ್ನು ಸಾಯಿಸುವುದಕ್ಕೆ ? ಹೆಣ್ಣನ್ನು ಪವಿತ್ರ ಪೃಥ್ವಿಗೆ ಹೋಲಿಸಿದ್ದಾರೆ. ಒಳ್ಳೆ ಹೆಣ್ಣನ್ನು ದೇವತೆ ಅಂತಾರೆ. ಗಂಡನನ್ನೇ ಸರ್ವಸ್ವ ಎಂದು ನಂಬಿದ ಹೆಣ್ಣಿಗೆ ಮಹಾಸತಿ ಪತಿವ್ರತೆ ಅಂತಾರೆ. ನಿನ್ನಂತ ನೀತಿಗೆಟ್ಟ ಹೊಲಸು ಹೆಣ್ಣಿಗೆ ಮಾರಿ… ಹೆಮ್ಮಾರಿ ! ಕೊಳಕು ರಂಡಿ ಅಂತಾರೆ !!
ನನ್ನ ನಿನ್ನ ಸಂಬಂಧ ಮುಗಿದುಹೋಗಿದೆ. ನನಗೆ ಕೋಪ ಬರುವ ಮುಂಚೇನೆ ಹೊರಟು ಹೋಗು. ನನ್ನ ಕಣ್ಣಮುಂದಿನಿಂದ! “ಎಂದಾಬ್ಬರಿಸಿದನು.
ಬೆಚ್ಚಿಬಿದ್ದು ಹೌಹಾರಿದ ಪದ್ಮಿನಿ-
“ದಯವಿಟ್ಟು ಇದು ಒಂದೇ ಒಂದ್ಸಲ ಈ ಪಾಪಿಯನ್ನು ಕ್ಷಮಿಸಿಬಿಡಿ “ಎಂದು ಕಂಪಿಸುವ ಸ್ವರದಲ್ಲಿ ಕ್ಷಮೆ ಕೇಳಿದಳು.
ವ್ಯಗ್ರಗೊಂಡಿದ ರಾಮಚಂದ್ರಯ್ಯ-
“ಈ ರೀತಿ ಕ್ಷಮೆ ಕೇಳೋಕೆ ನಾಚಿಕೆ ಆಗಲ್ವೇ ಕತ್ತೆ ನಿನಗೆ ? ಕ್ಷಮೆ… ನಿನ್ನಂತಹ ಅಸತಿಗೆ ಕ್ಷಮಿಸಲಾಗುವುದೇನೇ ಕೊಳಕು ಮುಂಡೆ ?”ಎಂದು ಅವಾಚ್ಚವಾಗಿ ಬೈಯುತ್ತಾ ಕೋಪ ಮತ್ತು ತಿರಸ್ಕಾರದಿಂದ ಅವಳ ಎದೆಗೆ ಜಾಡಿಸಿ ಒದ್ದನು.
ಅವಳು ದಡಾನೆ ಮುಗ್ಗರಿಸಿ ಬಿದ್ದಳು.
ಬಿದ್ದವಳನ್ನು ಮೇಲೆತ್ತಿ ಬಾಯಿಗೆ ಬಂದಂತೆ ಮತ್ತಷ್ಟು ಕೆಟ್ಟದಾಗಿ ಬೈಯುತ್ತಾ ಮನೆಯಿಂದ ಆಚೆ ಒದ್ದೋಡಿಸಿದನು ರಾಮಚಂದ್ರಯ್ಯ.
“ನನಗೂ ಸಹ ಕ್ಷಮೆ ಕೇಳೊ ಅರ್ಹತೆ ಇಲ್ಲ. ಆದರೂ ಸಹ ನಾನು ನಿಮ್ಮನ್ನು ಕ್ಷಮೆ ಕೇಳುತ್ತಿದ್ದೇನೆ. ಈ ಪಾಪಿಯನ್ನು ಕ್ಷಮಿಸಿಬಿಡಿ ಯಜಮಾನರೇ. ನಿಮ್ಮಂತಹ ಒಳ್ಳೆಯವರ ಜೊತೆ ಬದುಕುವ ಭಾಗ್ಯ ನಾನು ಕಳೆದುಕೊಂಡಿದ್ದೇನೆ. ಅದಕ್ಕಾಗಿ ನಾನೀಗ ನಿಮ್ಮನ್ನು ಈ ಊರನ್ನು ಬಿಟ್ಟು ಎಲ್ಲಾದರೂ ದೂರ ಹೊರಟೋಗಿ ಬದುಕೋತೀನಿ. ನಾನ್ ಬರ್ತೀನಿ ಯಜಮಾನ್ರೆ. ನನ್ನನ್ನು ಕ್ಷಮಿಸಿಬಿಡಿ ಯಜಮಾನ್ರೆ “ಎಂದು ಕೈ ಜೋಡಿಸಿ ಮತ್ತೊಮ್ಮೆ ಕ್ಷಮೆ ಕೇಳಿ ಕರಿಯ ಅದು ಎಲ್ಲಿಗೋ ಹೊರಟು ಹೋಗಿದ್ದನು.
***
ಮರುದಿನ ತೋಟದ ಬಾವಿಯಲ್ಲಿ ಪದ್ಮಿನಿಯ ಹೆಣ ತೇಲಿತ್ತು.
ಪದ್ಮಿನಿಯ ಅಣ್ಣ ವೀರಭದ್ರಯ್ಯ ಪೊಲೀಸ್ ಕೇಸ್ ಮಾಡಿದನು.
ಕೆಲ ತಿಂಗಳುಗಳ ಕಾಲ ರಾಮಚಂದ್ರಯ್ಯ ಕೋರ್ಟ್- ಕಚೇರಿ ಅಂತ ಅಲೆದಾಡಿದನು.
ಕೊನೆಗೆ ರಾಮಚಂದ್ರಯ್ಯ ನಿರಪರಾಧಿ ಎಂದು ಸಾಬೀತುಕೊಂಡಿತ್ತು.
ರಾಮಚಂದ್ರಯ್ಯ ಬಿಡುಗಡೆಗೊಂಡಿದ್ದನು.
***
ಪದ್ಮಿನಿ ಎಂಬ ಆಸತಿ ನೀಡಿರುವ ಈ ಆಘಾತದಿಂದಾಗಿ ರಾಮಚಂದ್ರಯ್ಯನಿಗೆ ಬದುಕಿನಲ್ಲಿ ವೈರಾಗ್ಯ ಭಾವನೆ ಮೂಡಿತು.
ರಾಮಚಂದ್ರಯ್ಯ ತುಂಬ ಯೋಚಿಸಿದನು.
ಈ ಬದುಕು ಬರೀ ನಶ್ವರ ಅನಿಸಿತು.
‘ಈ ಬದುಕಿನಲ್ಲಿ ನಾವು… ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ದುಡ್ಡು, ನನ್ನ ಹೊಲ-ನನ್ನ ಮನೆ… ಎಂದೇನೆಲ್ಲ ಅಂದುಕೊಂಡು ಪರದಾಡುತ್ತಲೇ ಇರುತ್ತೇವೆ. ತಮ್ಮ ಹೆಂಡತಿ ಮಕ್ಕಳ ಸುಖಕ್ಕಾಗಿ ಪರರ ಕಷ್ಟ-ಸುಖ ಯೋಚಿಸದೆ ಮೋಸ ಮಾಡಿ ದುಡ್ಡು ಗಳಿಸುತ್ತೇವೆ. ಅವಳ ಪ್ರೀತಿ ಸಂಪಾದಿಸಬೇಕು. ಇವರ ಪ್ರಶಂಸೆಗೆ ಪಾತ್ರರಾಗಬೇಕು. ಅವರಿಂದ ಯಜಮಾನ, ಸೇಠ್-ಸಾಹೇಬ್,
ಧಣಿ- ಸಾಹುಕಾರ ಅನಿಸಿಕೊಳ್ಳಬೇಕು… ಜೀವನದಲ್ಲಿ ನಾವುಗಳು ಏನೆಲ್ಲ ಅಂದುಕೊಳ್ಳುತ್ತೇವೆ. ಆದರೆ ಇಲ್ಲಿ ನಾವು ಅಂದುಕೊಳ್ಳುವದೊಂದು ಅದು ಆಗುವುದು ಬೇರೊಂದು. ಕೆಲವರು ಅಂದುಕೊಂಡಿದ್ದೆಲ್ಲವನ್ನು ಸಾಧಿಸುತ್ತಾರೆ. ಕೊನೆಗೆ ಸಾಧಿಸಿದೆಲ್ಲವನ್ನು ಇಲ್ಲೇ ಬಿಟ್ಟು ಖಾಲಿ ಕೈಯಲ್ಲಿ ಹೋಗುತ್ತಾರೆ. ಜೊತೆಗೆ ಏನೂ ಸಹ ಕೊಂಡುಯುವುದಿಲ್ಲ. ಜೊತೆಗೆ ಯಾರೂ ಸಹ ಬರೋದಿಲ್ಲ. ಈ ಬದುಕು ಮೋಸ ವಂಚನೆಯಿಂದ ಕೂಡಿದೆ. ಈ ಬದುಕಿಗೆ ಅರ್ಥ ಇಲ್ಲ. ಎಂಥ ವಿಚಿತ್ರ ಈ ಬದುಕು. ಹುಟ್ಟು ಸಹಜವಾಗಿದೆ. ಸಾವು ಅನಿವಾರ್ಯವಾಗಿದೆ. ಈ ಹುಟ್ಟು ಸಾವು ಪರಮ ಪಾಪವಾಗಿದೆ. ಈ ಹುಟ್ಟು ಸಾವು ಎಂಬುದನ್ನು ಜಯಸಬೇಕು. ಅದಕ್ಕಾಗಿ ಜೀವನದಲ್ಲಿ ಮುಕ್ತಿ ಪಡೆಯಬೇಕು’ ಅಂದುಕೊಂಡು ರಾಮಚಂದ್ರಯ್ಯ ತಾನು ಸಂಪಾದಿಸಿದ ಹಣ ಆಸ್ತಿ ಅಂತಸ್ತು ಎಲ್ಲವನ್ನು ಅನಾಥಾಶ್ರಮಕ್ಕೆ ದಾನ ನೀಡಿ ಮುಕ್ತಿ ಪಡೆಯುವುದಕ್ಕೆಂದು ಹಿಮಾಲಯದತ್ತ ಹೊರಟು ಬಂದಿದ್ದನು.
ನದಿ ಸರ್ವರಗಳನ್ನು ದಾಟುತ್ತಾ, ಗುಡ್ಡಗಾಡುಗಳಲ್ಲಿ ಅಲಿಯುತ್ತಾ ಅನೇಕ ಸಾಧುಸಂತರನ್ನು ಸಂದರ್ಶಿಸಿದನು.
ಹಿಮಾಲಯದಲ್ಲಿ ಒಬ್ಬ ಸಾಧು ರಾಮಚಂದ್ರಯ್ಯನಿಗೆ ಗುರುವಾಗಿ ಸಿಕ್ಕಿದರು.
ಗುರುವಿನ ಕೃಪೆಯಿಂದಾಗಿ ಕೆಲವು ವರ್ಷಗಳ ಕಾಲ ಜಪ-ತಪಗೈಯುತ್ತ ಆಧ್ಯಾತ್ಮಿಕದ ಬಗ್ಗೆ ಅಭ್ಯಾಸ ಮಾಡಿ ಅಪಾರ ಜ್ಞಾನ ಸಂಪಾದಿಸಿದನು.
ರಾಮಚಂದ್ರಯ್ಯ ಈಗ… ಮೊದಲಿನ ರಾಮಚಂದ್ರಯ್ಯ ಅಲ್ಲ. ರಾಮಚಂದ್ರಯ್ಯ… ಈಗ ಮಹಾನ್ ಸಂತಶ್ರೀರಾಮಚಂದ್ರಯ್ಯನವರಾಗಿದ್ದಾರೆ.
ಗುರುಗಳಿಗೆ ತುಂಬ ವಯಸ್ಸಾಗಿದ್ದರಿಂದ ಶ್ರೀರಾಮಚಂದ್ರಯ್ಯನವರೇ ಗುರುವಿನ ಸ್ಥಾನ ಅಲಂಕರಿಸಿದ್ದಾರೆ.
ಶ್ರೀರಾಮಚಂದ್ರಯ್ಯನವರ ನಿತ್ಯ ಸತ್ಸಂಗ ಪ್ರವಚನ ಕೇಳಲು ಆಶೀರ್ವಾದ ಪಡೆಯಲು ಪ್ರತಿದಿನ ನೂರಾರು ಭಕ್ತರು ಆಶ್ರಮಕ್ಕೆ ಬರುತ್ತಾರೆ.
ಶ್ರೀರಾಮಚಂದ್ರಯ್ಯ ತಮ್ಮ ದಿವ್ಯ ಕಂಠದಿಂದ ಪ್ರವಚನ ನೀಡುತ್ತಾರೆ.
ಮುಕ್ತ ಮನಸ್ಸಿನಿಂದ ಆಶೀರ್ವದಿಸುತ್ತಾರೆ.
ಭಕ್ತರು ಪುನೀತರಾಗುತ್ತಾರೆ.
– ಜಿ.ಎಲ್.ನಾಗೇಶ
ಧನ್ನೂರ್ (ಆರ್)
ಬಸವಕಲ್ಯಾಣ