Oplus_131072

     ಕೇಡು ಬಗೆವ ಜನ. (ಕತೆ)

     

ಬಸ್ಸು ಗಕ್ಕನೆ ನಿಂತಿತ್ತು.
ಕಣ್ತೆರೆದು ನೋಡಿದೆ. ಕಲ್ಬುರ್ಗಿ ನಗರದ ತಿರಂದಾಜ ಟಾಕೀಜ್ ಕಾಣಿಸಿತ್ತು. ಅಲ್ಲಿ ಬಸ್‌ ಸ್ಟಾಪ್ ಇರುವುದರಿಂದ  ಜನ ಇಳಿಯತೊಡಗಿದರು. ನಾನು ತಿಮ್ಮಾಪುರಿ ಚೌಕಿಗೆ ಇಳಿಯಬೇಕು. ಅಂದುಕೊಂಡಿದ್ದೆ. ಆಗ ಥಟ್ಟನೆ ಆ ನಗರದ  ಸರ್ಕಾರಿ ಆಸ್ಪತ್ರೆ ನೆನಪಾಯಿತು. ಅಂದ್ರೆ ನಂಗೆ ಕಾಯಿಲೆ ಅಂತ ತಿಳ್ಕೊಬೇಡಿ .ಯಾಕೆ ನೆನಪಾಯಿತ್ತು ಅಂದ್ರೆ  ಆ ಆಸ್ಪತ್ರೆಯಲ್ಲಿ ನಮ್ಮೂರ ಪೋರಿಯೊಂದು ಕಾಯಿಲೆ ಬಿದ್ದು ವಾಸಿಯಾಗದೆ  ‘ಸತ್ತಿದೆ” ಅನ್ನೋ ಸುದ್ದಿ ಕೇಳಿದೆ. ಆ ಹುಡುಗಿ ಜೋತೆಗೆ ಅವಳ ತಾಯಿ ಬಿಟ್ರೆ ಬೇರೆ ಯಾರು ಇಲ್ಲವಂತೆ. ಹುಡುಗಿ ಹೆಣ ತರಬೇಕಾದ್ರೆ  ಅವಳ ತಾಯಿ ಹತ್ರ ದುಡ್ಡು ಇಲ್ಲವಂತೆ
” ಊರಲ್ಲಿ ಯಾರಾದ್ರೂ ಬನ್ನಿ , ನನ್ ಮಗಳ ಹೆಣ ಒಯ್ಯಲಿಕ್ಕಾದ್ರೂ ಸಹಾಯ ಮಾಡಿ ” ಅಂತ ವಾಗಮಾರೆಯವರ ಮನೆಗೆ ಫೋನ ಮಾಡಿ ಗೋಗರೆದಳಂತೆ ಅವಳ ತಾಯಿ ಪಂಕಜಮ್ಮ.

ಆರತಿ 10ನೇ ಇಯತ್ತಿನ್ಯಾಗೆ ಓದುತ್ತಿರೋ ಹದಿನಾರರ ಹರೆಯದ ಹುಡುಗಿ. ಪಂಕಜಮ್ಮಳ ಕೊನೆ ಮಗಳು. ಇವ್ರಪ್ಪ ಕುಡುಕ ಲೋಕನಾಥ ಅಂತ ಅವ್ನ ಹೆಸ್ರು. ಕುಡಿದು ಲೋಕವನ್ನೆ ತನ್ನದು ಅನ್ನೋಹಾಂಗ್‌ ಮಾತಾಡಾವ. ಆದ್ರ ಸಂಸಾರ ಹೆಂಡ್ರು ಮಕ್ಳು ಬಗ್ಗೆ ಎಳ್ಳಷ್ಟು ಚಿಂತಿ ಮಾಡಾವಲ್ಲ. ಪಂಕಜಮ್ಮ ಒಬ್ಳೆ ಕೂಲಿ ಕೆಲ್ಸ ಮಾಡಿ ಮಕ್ಳ ಮುಂದಿನ ಉಜ್ವಲ ಭವಿಷ್ಯಕ್ಕೋಸ್ಕರ ಕಣ್ಣಾಗ ನೂರಾರು ಬಣ್ಣ ಬಣ್ಣದ ಕನಸ್ಸು ಹೊತ್ತುಕೊಂಡಿದ್ದಳು. ಇಂತದರಾಗ  ಆರತಿಯ ಆರೋಗ್ಯ ಕೆಟ್ಟು ಹೋಗಿತ್ತು. ‘ಹೊಟ್ಟೆ ಹೊಟ್ಟೆ’ ಅಂತ ಹೊಟ್ಟಿಗಿ ಕೈ ಹಿಡ್ಕೊಂಡು ನರಳುತ್ತಿದ್ದಳು. ವಿಪರೀತ ನೋವಾದಾಗ ನೆಲಕ್ಕೆ ಬಿದ್ದು ಉರುಳಾಡುತ್ತಿದ್ದಳು. ಅಷ್ಟೇಯಲ್ದೆ ನೋವು ತಾಳಲಾರದೆ ಪೋರಿ “ಯವ್ವ ಸತ್ತೇ ! ” ಅಂತ ಚೀರಿ ಅಳೋದನ್ನು ನೋಡಿದರೆ
‘ಅಯ್ಯೋ ಪಾಪ!’ ಅನ್ನೋ ಹಾಂಗಿತ್ತು ಅವಳ ಸ್ಥಿತಿ.
ಪಂಕಜ ಮಗಳ ಹೊಟ್ಟೆ ನೋವಿನ ತಾಪ ನೋಡಲು ಆಗದೆ  “ದವಾಖಾನಿಗರ ಒಯ್ಯಬೇಕು” ಅಂತ ಊರಾಗ ಅವ್ರಿವರ ಮನಿಗಿ ಹೋಗಿ ಸಾಲ ತಗೊಂಡು ಕಲಬುರಗಿ ಸರಕಾರಿ ದವಾಖಾನಿಗಿ ಒಯ್ಯುತ್ತಿದ್ದಿನಿ” ಅಂತ  ಹೇಳಿ ಹೋಗಿದ್ದಳಂತೆ. ಹೋಗಿ ಎರಡ ದಿನ ಆಗಿಲ್ಲ. ಪೋರಿ ‘ ಸತ್ತಿದೆ’ ಅಂತ ಸುದ್ದಿ ಬ್ಯಾರೆ ಬಂತು. ಆದ್ರ ಊರಾಗ ಯಾರು ಆಕಿನ ಹೆಣ ತರ‍್ಲಿಕ್ ಮುಂದಾಗಲಿಲ್ಲ. ಊರಾನ ಮಂದಿ ಬಡವರ ಮಗಳು ಸತ್ತಿದ್ದಾಳೆ ಅಂದ್ರೆ ಚಂದಾಪಟ್ಟಿ ಮಾಡಿಯಾದ್ರು  ಹೆಣ ತರ‍್ತಾರೇನೋ ! ಅಂದುಕೊಂಡೆ.ಅದೂ ಕೂಡ ಮಾಡಲಿಲ್ಲ.
“ಏನಿಲ್ಲ ಅಂದ್ರು ಐದಾರು ಸಾವಿರ ರುಪೈ ಬೇಕು. ಹೆಣ ತರ‍್ಲಿಕ್. ನಾ ಮುಂದಾಗಿ ಯಾನೋ !  ತರಬೊದು . ಆದ್ರ ನಾಳಿಗಿ ಆಕಿಗಿ ಆದ ಖರ್ಚೆಲ್ಲಾ ನಂಗ್ಯಾರು ಕೋಡೋರು? ಪೋರಿ ತಾಯಿ ಪಂಕಜ ಒಂಟಿ ಹೆಂಗ್ಸು.  ಗಂಡ ಇದ್ದು ಇಲ್ಲದಾಂಗ ಹಳಾ. ಅಷ್ಟೊಂದು ದುಡ್ಡು ಕೇಳಿದ್ರೆ ಎಲ್ಲಿಂದ ಕೊಡ್ತಾಳ ? ಹ್ಯಾಂಗೂ ಪರದೇಶಿ ದಿಕ್ಕಿಲ್ಲದೊರ ಹೆಣಾ” ಅಂತ ಸರಕಾರ ದವಾಖಾನ್ಯಾಗ ಸುಟ್ಟ ಹಾಕ್ತಾರ. ಹಾಕಲಿ. ಅದಕ್ಯಾಕ್ ಅಷ್ಟೊಂದು ತಲಿ ಕೆಡಿಸ್ಕೋತ್ತಿರಿ?” ಅಂತ ಊರಾಗ ಮಂದಿ ಆಲಗಿಡದ ಕಟ್ಟಿ ಮ್ಯಾಲ್ ಕುಂತು ಪಂಚೇತಿ ಸಭೆದಾಗ  ತೀರ್ಮಾನ ಮಾಡಿದಾಂಗ ಮಾತಾಡತೊಡಗಿದರು. ಆ ಪೋರಿ ಕಾಕ ರಾಮಪ್ಪ ಆಕಿನ ಹೆಣ ತರ‍್ಲಿಕ್ ತಯಾರಾಗುತ್ತಾನೇನೋ ! ಅಂತ ಅಂದುಕೊಂಡೆ. ಅದು ಆತ ಸುತಾರಂ ಒಪ್ಪಲಿಲ್ಲ. ಅವನ ಈ ಹಿಂಜರಿತಕ್ಕೆ ಒಂದು ಬಲವಾದ ಕಾರಣವೂ ಇತ್ತು. ಅದೇನಂದ್ರೆ ಆ ಪೋರಿ ಆರತಿ ಊರಲ್ಲಿ ಒಬ್ಬ ಪೋರನಿಗೆ ಪಿರುತಿ ಮಾಡಿ ಊರಿಗೆ ರೋಮಿಯೋ- ಜೂಲಿಯಟ್, ಲೈಲಾ -ಮಜ್ನುವಿನಂತೆ ಅವರಿಬ್ಬರು ಪ್ರಸಿದ್ಧರಾಗಿದ್ದರು. ಅದು ಅವರ ಕಾಕ ರಾಮಪ್ಪನಿಗೆ ತಮ್ಮ ಕುಟುಂಬದ ಮರ್ಯಾದೆಗಾಗಿ ಅವಳಿಗೆ ಜೀವಂತವಾಗಿಯೇ ಅದೇಷ್ಟೋ ! ಸಲ ಕೊಲ್ಲಬೇಕೆಂದು  ಸಂಚು ಹೂಡಿದ. ಆತನಿಗೆ ಸತ್ತ ಮೇಲೆ ಹೇಗೆ ತಾನೆ ಆಗಿರಬೇಕು.? ಸತ್ತರೆ ಪರವಾಗಿಲ್ಲ. ನಮ್ಮ ಮನೆ ಮಾನ ಮರ್ಯಾದೆ ಉಳಿತು. ಅಂತ ಆತ ಕುಡಿದು ಊರ ನಡು ಬಿದಿಯಲ್ಲಿ ಒದರುತ್ತಿದ್ದ.
ಹೌದು. ನಿಜ, ಆರತಿ ಒಬ್ಬನಿಗೆ ಪ್ರೀತಿಸಿದ್ದು ಊರಿಗೆ ಗೋತ್ತಿತ್ತು. ಆಕೆಯ ಪ್ರೀಯಕರ ನನಗೆ ತುಂಬಾ ಹತ್ತಿರದವ. ಆತನಿಗೆ ಈ ವಿಷಯ ತಿಳಿಸಿದೆ.
“ಪೋರಿ ಜೀವ ನಿನ್ನಿಂದ ಹಾಳಾಯಿತು. ಕೊನೆಯ ಘಳಿಗೆಯಲ್ಲಾದರೂ ಅವಳ ಮುಖ ನೋಡಿ, ನಿನ್ನ ಈ ಪ್ರೇಮದ  ಬುದುಕು ಸಾರ್ಥಕ ಪಡಿಸಿಕೋ ! ”  ಅಂತ ಅವರ ಮನೆಗೆ ಹೋಗಿ ಹೇಳಿದೆ. ಆಗ ಆತ ” ನಾನೇಕೆ  ಅವಳ ಹೆಣ ತರ್ಲಿಕೆ ಹೋಗಬೇಕು ?  ನಾನೇನು
ಅವಳ ಮದುವೆ ಆಗಿದ್ದೇನೆಯೇ  ? ಎನ್ ಮಾತಾಡ್ತಿದ್ದಿ  ನೀನು ?  ತಲೆ ಕೆಟ್ಟಿದ್ದೇಯಾ ನಿಂಗೆ ? ಮೊದ್ಲು ನಡಿ ಇಲ್ಲಿಂದ ! ಜಾಗ ಖಾಲಿ ಮಾಡು ” ಅಂತ ನನ್ನನ್ನೇ ಬೈದು ಅವರ ಮನೆಯಿಂದ ಅವಮಾನ ಮಾಡಿ ಕಳಿಸಿದ. ನನಗೂ ಆಕೆಗೂ ಯಾವ ಸಂಬಂಧವೇ ಇಲ್ಲ. ಅನ್ನುವಂತೆ ಮಾತಾಡಿದ.
ಆತ ಆಕೆಗೆ ಎಷ್ಟು ಪ್ರೀತಿಸುತ್ತಿದ್ದ !  ಆದ್ರೆ ಈಗ ಹೀಗೇಕೆ ಮಾತಾಡುತ್ತಿದ್ದಾನೆ. ಅನ್ನೋದಕ್ಕೆ ನನಗೆ ಅರ್ಥವಾಗಲಿಲ್ಲ. ಹಾಗೆ ಸುಮ್ಮನೆ ನನ್ನ ದಾರಿ ನಾನು ಹಿಡಿದೆ. ಆರತಿಯ ಪ್ರೀಯಕರನ ಮನೆಯಲ್ಲಿ ಎಲ್ಲರೂ ಯಾಕೋ ಬಹಳಷ್ಟು ಖುಷಿಯಲ್ಲಿದ್ದರು. ಕಾರಣ ಆರತಿ ಸತ್ತಿದ್ದ ವಿಷಯಕ್ಕೆ  ‘ ಪೀಡೆ  ತೊಲಗಿತು’ ಎನ್ನುವಂತೆ ಮಾತಾಡುತ್ತಿದ್ದರು.
” ಏನೋ ! ತಮ್ಮ ಆ ಪೊರಿ ಸತ್ತಿದೆ  ಅಂತಲ್ಲಾ ? ನಮಗಂತು  ಅವಳು ಸತ್ತ ಸುದ್ದಿ ಕೇಳಿ ಭಾಳ್  ಖುಷಿಯಾಯ್ತು. ಅದಕ್ಕಂತಲೆ ಇವತ್ತು ನಾವು  ಬ್ಯಾಳಿ ಹಾಕಿ ಹೋಳಗಿ ಮಾಡ್ತಿದ್ದಿವಿ ” ಅಂತ ಆ ಹುಡುಗನ ಅಕ್ಕ ಕಡ್ಲಿ ಬ್ಯಾಳಿ  ಕೆರುತ್ತಿದ್ದಳು.ಅವರವ್ವ ನಗುತ ಕಲ್ಲಗಲ್ಲಿನಲ್ಲಿ ಬೆಲ್ಲ ಕುಟ್ಟುತ್ತಿದ್ದಳು.
ನಾನು ಇದ್ಯಾವುದು ಲೆಕ್ಕಿಸದೆ ನಡೆದೆ. ಆದರೂ ನನ್ನ ಕಿವಿಯಲ್ಲಿ ಈ ಜನರಾಡಿದ ಮಾತುಗಳು ಪದೇ ಪದೇ ಗುಯ್ಯಿ ಗುಟ್ಟತೊಡಗಿದವು. ಅರೆ ! ಎಂಥಾ ಜನರು ಇವರು ಬಡವರ ಮಗಳು ಸತ್ತಿದ್ದಾಳಂದ್ರೆ ಒಂದಿಷ್ಟು ಕರುಣೆ ಅನುಕಂಪ ಅನ್ನೋದಾದ್ರೂ ಬೇಡ್ವಾ ಇವ್ರಿಗೆ? ಸಾವು ಯಾರಿಗೂ ತಪ್ಪಿದ್ದಲ್ಲ. ಸತ್ತಮೇಲೆ ಸುದ್ದಿ ಬಂದ್ರೆ ಈ ಜನ ಹಿಂಜರಿತ್ತಾರಲ್ಲ.! ಇವರೆಂಥ ಜನರು? ಅಲ್ಲಾ ಆ ಹುಡುಗ  ಆಕಿನ ಪ್ರೀತಿಸಿದ . ಈಗ ಸಂಬಂಧವೇ ಇಲ್ಲಾ ಅಂತಾನೆ.  ಇದೆಂಥ ಪ್ರೀತಿ ? ಅವರವ್ವ ಅಕ್ಕ ಖುಷಿ ಪಡ್ತಿರುವುದು ನೋಡಿದರೆ,  ಛೇ ! ಮನಸ್ಸಿಗೆ ಬೆಸರ ತರಿಸಿತ್ತು. ಅಲ್ಲಾ ! ಅವನು ಆಕೆಗೆ ಎಷ್ಟು ಪ್ರೀತಿಸುವವ ಹಿಂಗ್ಯಾಕಾದ ? ಪ್ರೀತಿಯ ಹೆಸರಿನಲ್ಲಿ ಮೋಹಿಸಿ ಅವ ಕಾಮ ತೃಷೆಗಾಗಿ ಹೀಗೆ ಮಾಡಿದನೆ ?  ಅಂತ ನನ್ನೋಳಗೆ ನಾನೇ ಯೋಚಿಸುತಾ ಅವರ ಮನೆಯಿಂದ ಹೊರಬಂದೆ. ಮಾನವೀಯ ದೃಷ್ಟಿಕೋನದಿಂದ ಹೇಳಲು ಹೋದ ನಾನು ಇದ್ಯಾವುದೂ ಸಿರಿಯಸ್ಸಾಗಿ ತೆಗೆದುಕೊಳ್ಳಲ್ಲಿಲ್ಲ. ಆದರೂ ನಾನು ಆ ದಿನ ಕಲ್ಬುರ್ಗಿಗೆ ಪ್ರಯಾಣ ಬೆಳೆಸಿದೆ. ಕಾರಣ ನಾನೊಬ್ಬ
ಫೋಟೊಗ್ರಾಫರ್ ಆಗಿದ್ದರಿಂದ ವಾರಕ್ಕೊಮ್ಮೆ ಕಲ್ಬುರ್ಗಿಗೆ ಹೋಗಿ ಫೋಟೊ ಪ್ರಿಂಟ್ ಹಾಕ್ಕೊಂಡು ಬರಬೇಕು. ಇವತ್ತು ನಂಗೆ ತುಂಬ ಜರೂರು ಫೋಟೊ ಪ್ರಿಂಟ್‌ಗಾಗಿ ಹೋಗಬೇಕಾಗಿತ್ತು.  ಕ್ಯಾಮೆರಾ ಬ್ಯಾಗು ಬಗಲಿಗೆ ಹಾಕ್ಕೊಂಡು ಎಕ್ಸಪೋಜ್ ಮಾಡಿದ ರೀಲುಗಳು ಅಚ್ಚುಕಟ್ಟಾಗಿ ಡಬ್ಬಿಯಲ್ಲಿ ಇಟ್ಕೊಂಡು ಬಸವಕಲ್ಯಾಣ ಬಸ್ ನಿಲ್ದಾಣಕ್ಕೆ ಬಂದು ನಿಂತಿದ್ದೆ. ಅಷ್ಟೋತ್ತಿನ್ಯಾಗೆ ಬಂದ ಬೆಳಗಾಂವ ಬಸ್ಸಿಗೆ  ಹತ್ತಿದೆ.
…………………………………….

ಬಸ್ಸು ತಿರಂದಾಜ ನಿಲ್ದಾಣದಿಂದ ಬಿಡೋದಕ್ಕೆ ತಡ ಮಾಡುತ್ತಿತ್ತು.
” ಇಲ್ಲೆ ಇಳಕೊಂಡ್ರೆ ಸರಕಾರಿ ದವಾಖಾನೆ ಪಕ್ಕದಲ್ಲೇ ಇದೆ ಹೋಗಿ ಬರೋಣ” ಅಂತ ನಿರ್ಧರಿಸಿ ಇಳಿದೆ. ದವಾಖಾನಿಗಿ ಹೋಗುವಾಗ ನನ್ ತಲ್ಯಾಗ ಹತ್ತಾರ ವಿಚಾರಗಳು ಬರುತ್ತಿದ್ದವು. “ಊರಾಗ ಸತ್ತ ಸುದ್ದಿ ಕೇಳಿದ ಮ್ಯಾಗ್ ಯಾರು ಕರುಣೆ ತೊರ‍್ಲಿಲ್ಲ. ಖಾಸ್ ಪೋರಿಯ ಕಾಕ್ಕಂದಿರು ಮತ್ತು ಸಣ್ಣವ್ವದ್ದೇರು ಒಂದ್ ಹನಿ ಕಣ್ಣೀರ್ ಆದ್ರು ಹಾಕಲಿಲ್ಲ. ನಾನಾದ್ರೂ ಹೋಗಿ ಏನ್‌ ಮಾಡ್ಲಿ ? ಆ ಹೆಣ ತರ‍್ಲಿಕ್ ನನ್ನಿಂದ ಆಕಿಗಿ ಸಹಾಯ ಆಯತ್ತದೆ ? ಇಲ್ಲಾ ! ನನ್ನಿಂದ ಅಂತಹ ಸಹಾಯ ಆಗಲ್ಲ. ಆದ್ರ ಮಗಳನ್ನು ಕಳೆದುಕೊಂಡ ಪಂಕಜಮ್ಮಗ ಸಾಂತ್ವನವನ್ನಾದ್ರೂ ಹೇಳಿ ಬರಬೇಕು ಅಂತ ಅಂದ ಕೊಂಡು ಹಾಂಗೆ ಮುಂದುಕ್ ಹೆಜ್ಜಿ ಹಾಕಿದ್ದೆ. ಯಾರೋ ನನ್ನ ಹೆಸ್ರು ಕೂಗಿ ಕರೆದಂತಾಯಿತು. ತಿರ‍್ಗಿ ನೋಡಿದೆ. ನಮ್ಮೂರ ಕುಂಟ ಸುಬ್ಯಾ ನಿಂತಿದ್ದ ‘ಅರೇ! ನಿನ್ಯಾಕೋ ಇಲ್ಲಿ ?’ ಅಂತ ಕೇಳಿದ್ದೆ ತಡಾ ಎಲ್ಲ ವಿಷ್ಯ ಒಂದೇ ಉಸುರಿಗಿ ಹೇಳಿ ಬಿಟ್. ಇಬ್ರೂ ಕೂಡಿಕೊಂಡು ಮಾತಾಡ್ಕೋತ ಆಸ್ಪತ್ರೆ ವಾರ್ಡಿನ ಕಡೆಗೆ  ಬರ‍್ತಾ ಇರೋವಾಗ ಅಣ್ಣ ವೃಷಭೇಂದ್ರ ಪೋಲೀಸ್ ಸೇವೆಯಲ್ಲಿ  ಆಸ್ಪತ್ರೆಯ ಮುಂಭಾಗಕ್ಕೆ ಇರೋದು ಕಾಣಿಸಿತ್ತು. ನಮ್ಮಿಬ್ರನ್ನು ಕಂಡು ಅವನೇ ಮಾತಾಡಿಸಿದ. ವಿಷಯ ತಿಳಿದ ಕೂಡಲೆ ಅವನೂ ನಮ್ಮೊಂದಿಗೆ ಧಾವಿಸಿದ.          ………………………………………..

ಪಂಕಜಮ್ಮ ರೋಗಿಗಳ ವಾರ್ಡಿನೊಳಗೆ ತನ್ ಮಗ್ಳಿಗೆ ಗ್ಲೂಕೋಸ್‌ನ್ನು  ನಾಡಿಯ ಮೂಲಕ ಏರುತ್ತಿರುವುದು ನೋಡಕೋತ್ ಮಾರಿ ಸಪ್ಪಗ ಮಾಡ್ಕೊಂಡು ಕುಂತಿದ್ಳು. ಅವ್ಳ ಕಣ್ಣಗಳನ್ನು ನೋಡಿದೆ. ಇದಕ್ಕೂ ಮೊದ್ಲು ಒಬ್ಳೆ ಕುಂತು ಅತ್ತಿದ್ಳೇನೋ ! ಅನ್ನಿಸಿತ್ತು. ಮೈ ಮ್ಯಾಲಿನ ಖಬರೆ ಇರದಾಂಗ ಹುಚ್ಚಿಯಂತೆ ಕಾಣುತ್ತಿದ್ದಳು. ನಾವ್ ಬಂದ್ ಕೂಡ್ಲೆ “ಬರ‍್ರೀ! ತಮ್ಮಾ! ಬರ‍್ರೀ! ” ಅಂತ ತಾನು ಕುಂತ ಜಾಗದಿಂದ ಎದ್ದು ನಮಗೆ ಕುಳಿತು ಕೊಳ್ಳಲು ಕೈ ಮಾಡಿ ಹೇಳಿದಳು. ಪೋರಿ  ಆರತಿ ಬೆಡ್ ಮ್ಯಾಲೆ ಉಚಾಕ್s  ಮಲಕ್ಕೊಂಡು ‘ ಪಿಳಿ ಪಿಳಿ’ ಎಡ್ಡು ಕಣ್ಣು ಮಾತ್ರ ಬಿಡುತ್ತಿತ್ತು. ಗ್ಲೂಕೋಸ್ ಬಾಟ್ಲೆ ಹಾಗೆ ಚಾಲಿ ಇತ್ತು. ” ಆರಾಮ ಇದ್ದಿಯಾ?” ಅಂತ ಕೇಳಿದೆ. ಉತ್ತರವಿಲ್ಲ. ಆಕಿ ಕಣ್ಣಲ್ಲಿ ಜೀವ ಹಿಡಿದುಕೊಂಡಂತಿದ್ದಳು.
ಪೋರಿ ಇನ್ನೂ ಜೀವಂತವೆ ಇರುವಾಗ ‘ಸತ್ತಳು’ ಅಂತ ಪಂಕಜಮ್ಮ ಫೋನ್ ಯಾಕ ಮಾಡಿದ್ಳು.? ಅನ್ನೋ ವಿಚಾರ ಆಕೆಯಿಂದಲೆ ತಿಳ್ಕೋಬೇಕು ಅಂತ ಕೇಳಿದೆ.
“ನಿನ್ನೆ ರಾತ್ರಿ ಈಕಿಗಿ ಆಪರೇಷನ ಆಗೋವಾಗ ಮೂರ್ ಬಾಟ್ಲಿ ರಕ್ತ ಬೇಕಂತ ಡಾಕ್ಟರು ಹೇಳಿದ್ರು. ರಕ್ತ ತಂದ್ರೆನೆ ಆಪರೇಷನ್ ಮಾಡೋದು ಇಲ್ಲಂದ್ರ ಆಪರೇಷನ್ ಮಾಡೋದಿಲ್ಲ. ಅಂತನೂ ಹೇಳಿದ್ರು.
‘ಅಫೆಂಡಿಕ್ಸ್” ಬ್ಯಾನಿ ತಾಳಲಾರದಕ್ಕೆ ಪೋರಿ ನೆಲಕ್ ಬಿದ್ದು ಹ್ವಾಳಾಡತಿತ್ತು. ಆ ಹೊತ್ತಿನ್ಯಾಗ ಕಲ್ಬುರ್ಗಿಯಲ್ಲಿ ಇದ್ದ ಸುಬ್ಬುಗ್
ಫೋನ್ ಮಾಡಿ ಕರಸ್ಕೊಂಡೆ. ಮೂರ್ ಬಾಟ್ಲಿ ರಕ್ತ ಹ್ಯಾಂಗ್ ಮಾಡೋದು? ” ಅಂತ ಕೇಳಿದ್ದೆ. ಸೊಲ್ಲಾಪುರದಿಂದ ತರೋ ವಿಷ್ಯ ತಿಳಿಸಿದ್ದ . ಆದ್ರ ನನ್ನಲ್ಲಿ ದುಡ್ಡರ‍್ಲಿಲ್ಲ. ನಾವಿಬ್ರು ರಕ್ತ ಕೊಡ್ಲಿಕ್ ತಯಾರಾದೇವು. ನಮ್ ತೂಕ ಬರ‍್ಲಿಲ್ಲ. ಮಗಳು ಒಂದೇ ಸವನೆ ನರಳಾಡುತ್ತಿದ್ದಳು.
“ಸಾಬ್ರೆ! ಹ್ಯಾಂಗಾರ ಮಾಡ್ರಿ ನನ್ ಮಗಳ ಜೀವ ಉಳಿಸ್ಕೊಂಡು ಪುಣ್ಯ ಕಟ್ಕೋಳ್ರೀ” ಅಂತ ಡಾಕ್ಟರ್ ಕಾಲ ಹಿಡ್ಕೊಂಡು ಪ್ರಾಣ ಭೀಕ್ಷೆ ಕೇಳಿದೆ. ಡಾಕ್ಟರ್  ಕರುಳ ‘ಚುರ್’ಽ  ಅಂತೋ  ಯಾನೋ ಪಾಪ !  ಆಪರೇಷನ್ ಮಾಡಿ “ನೋಡಮ್ಮ ! ನಿನ್ ಮಗಳಿಗಿ ಆಪರೇಷನ್ ಅಂತು ಆಯಿತು. ಎರಡು ಬಾಟ್ಲಿ ರಕ್ತ ನನ್ ಪೇಷಂಟು ಅಂತ ಕನಿಕರಪಟಗೊಂಡು ಹಾಕಿದ್ದೀನಿ.  ಇನ್ನೊಂದು ಬಾಟ್ಲಿ ಬೇಕು. ಅದು ನೀ ಹ್ಯಾಂಗರ ಮಾಡಿ ತರಬೇಕು. ತಂದ್ರೆನೆ ಆಕಿ ಜೀವ ಉಳಿತದ ಇಲ್ಲಾಂದ್ರ ದ್ಯಾವ್ರೆ ಗತಿ” ಅಂತ ಹೇಳಿದ್ರು. ರಕ್ತ ಖರೀದಿ ತರಬೇಕಾದ್ರ
ನನ್ನಲ್ಲಿ ದುಡ್ಡಿಲ್ಲ. ಮತ್ ಈ ಕಲಬುರ್ಗಿಯಂತ ದೊಡ್ಡ ಊರಾಗ ನನ್ ಮಗಳಿಗೆ ರಕ್ತದಾನಕ್ಕಾಗಿ ಯಾರೂ ಮುಂದ ಬರ‍್ಲಿಲ್ಲ. ಅದಕ್ಕ ಊರ ಕಡಿಗಿ ‘ಸತ್ತಳು’ ಅಂತ ಫೋನ್ ಮಾಡಿದ್ರೆ ಯಾರಾದ್ರೂ ಬಂದು ಪುಣ್ಯ ಕಟ್ಟಕೋತಾರೇನೋ !  ಅಂತ ಫೋನ್ ಮಾಡಿದ್ದೆ ಅಷ್ಟೇ. ಇನ್ನೂ ದ್ಯಾವರು ದೊಡ್ಡೋನು. ನಿಮ್ಮಂಥೋರಿಗೆ ಕಳಿಸಿದ್ದಾನೆ. ಅಂತ ತನ್ನ ಗೋಳೆಲ್ಲ ಹೇಳುತ್ತಾ ಕಣ್ಣೀರ ತಂದು ‘ತಮ್ಮಾ ಸೊಲ್ಲಾಪುರದಿಂದ ಒಂದ್ ಬಾಟ್ಲಿ ರಕ್ತ ತರಸ್ತಿನಿ. ನಿನ್ನತ್ರ ದುಡ್ಡಿದ್ರೆ ಕೊಡು” ಅಂತ ಅಣ್ಣನ ಕಡೆಗೆ ತಿರ‍್ಗಿ ಹೇಳಿದಳು.
“ನೋಡಕ್ಕಾ,! ನನ್ ಪಗಾರ ಇನ್ನೂ ಆಗಿಲ್ಲ. ಅಷ್ಟೊಂದು ಅರ್ಜೇಂಟಾಗಿ ಅಂದ್ರೆ ದುಡ್ಡು ನನ್ನಲಿಲ್ಲ. ಕಷ್ಟದಲ್ಲಿರೋ ನಿಂಗೆ ಸಹಾಯ ಮಾಡಬೇಕು ಅಂದ್ರೆ ‘ನಾನೇ ಒಂದ್ ಬಾಟ್ಲಿ ರಕ್ತ ಕೊಡ್ತಿನಿ’ ಅಂತ ಆಕೆಯ ಗಂಭೀರ ಪರಿಸ್ಥಿತಿ ನೋಡಿ ಬ್ಲಡ್ ಬ್ಯಾಂಕಿನಲ್ಲಿ ರಕ್ತ  ಪರೀಕ್ಷೆಗಾಗಿ ತನ್ನ ಕೈಯೊಡ್ಡಿದ. ಇದು ಯಾಕೋ ನನಗೆ ಸರಿ ಅನಿಸಲಿಲ್ಲ. ಸುಮ್ಮನೆ ಇದ್ದವನಿಗೆ ಕರೆದುಕೊಂಡು ಹೋಗಿ ರಕ್ತ ಕೋಡಿಸುತ್ತಿದಂತೆ ಅನಿಸಿತು. ಅಣ್ಣನಿಗೆ ಬಾಜು ಕರೆದು “ಬೇಡಣ್ಣ,ನೀನು ಪೊಲೀಸು, ರೇಸ್ಟು ಬೇರೆ ಸಿಗೋಲ್ಲ. ರಕ್ತ ಕೊಡಬೇಡ. ಈ ಮುಂಚೆ ಎರಡು ಸಲ ರಕ್ತದಾನ ಮಡಿದ್ದಿಯಾ ಈಗ ಇದು ಮೂರನೇ ಸಲ ಅಂದ್ರೆ ಹ್ಯಾಂಗೆ ? ಆರೋಗ್ಯ ಹಾಳಾಗುತ್ತದೆ. ಬ್ಯಾಡ ” ಅಂದ್ರೆ ಅವಾ ಕೇಳಲಿಲ್ಲ. “ರಕ್ತದಾನ, ಜೀವದಾನ’ ಅಂತ ಹೇಳ್ತಾರೆ ರಕ್ತದಾನ ಮಾಡಿದ್ರೆ ಆರೋಗ್ಯ ಹಾಳಾಗೊಲ್ಲ. ಮತ್ತೆ ಯಾವುದೇ ರೋಗದ ಬಾಧೆಯಿಲ್ಲ ಅಷ್ಟೇಯಲ್ದೆ ಸಾಯೋ ಜೀವ ಉಳಿತದೆ. ಇಂತಹ ಕಷ್ಟದಲ್ಲಿರುವವರಿಗೆ ಅವರ‍್ಯಾರೆ ಆಗಲಿ ಸಹಾಯ ಮಾಡಿದರೆ ಅದನ್ನೆ ಉಪಕಾರ ಅನ್ನೋರು. ನೀನು ಸುಮ್ಮನಿರು. ಒಂದ್ ಬಾಟ್ಲೆ ರಕ್ತ ಕೊಡೊದರಿಂದ್ ನಂಗೇನು ಆಗೊಲ್ಲ” ಅಂತ ನಂಗೆ ಬುದ್ಧಿವಾದ ಹೇಳಿದ.
“ನನ್ನಣ್ಣ ರಕ್ತದಾನ ಮಾಡುವ ಹುಚ್ಚು ಹಿಡ್ದು ಮುಂದಾಗಿದ್ದಾನೆ. ಹ್ಯಾಂಗಾದ್ರು ಮಾಡಿ ಇವನನ್ನು ತಡಿಯಲೆ ಬೇಕು. ಇಲ್ಲಾಂದ್ರೆ
ಮನೆಲಿ ಅವ್ವ ಬೈತಾಳೆ” ಅಂತ ಮನದಲ್ಲಿ ಅಂದುಕೊಂಡು “ಅಣ್ಣಾ”! ನೀನು ರಕ್ತದಾನ ಮಾಡಬೇಡ ನಿಂಗೆ ವಿಶ್ರಾಂತಿ ಸಿಗೋದು ಕಷ್ಟ. ಹಾಗಾಗಿ ನಾನೆ ರಕ್ತದಾನ ಮಾಡ್ತಿನಿ. ರಕ್ತದಾನ ಜೀವದಾನ. ಈ ಮಾತು ನೂರಕ್ಕೂ ನೂರು ಸತ್ಯ. ನಾನೇ ರಕ್ತದಾನ ಮಾಡ್ತಿನಿ. ನೀ ಸುಮ್ಮನಿರು ” ಅಂತ ಅವನಿಗೆ ಹಿಂದೆ ಸರಿಸಿ ಇಪ್ಪತ್ತೆರಡು ತುಂಬಿದ ನನ್ನ ದೇಹದ ತೂಕವಾದ ಮೇಲೆ ಕೈಯೊಂದು ಬ್ಲಡ್ ಟೆಸ್ಟಿಗಾಗಿ ಚಾಚಿದ್ದೆ.
ರಕ್ತ ಪರೀಕ್ಷೆಯಾಯಿತು. ಬಿ.ಪಾಜಿಟಿವ್ ಎಂದು ಗೊತ್ತಾದ ಮ್ಯಾಲೆ ಒಂದ್ ಬಾಟ್ಲಿ ರಕ್ತದಾನ ಮಾಡಿದೆ.
ಖಾಸಗಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿರುವುದರಿಂದ ಅಲ್ಲಿಯ ರಕ್ತ ಪರೀಕ್ಷೆ, ಬಾಟ್ಲಿ ಪ್ಯಾಕಿಂಗ್ ಫೀಸು ಸೇರಿಕೊಂಡು ಒಟ್ಟು 250 ರೂ. ಆಸ್ಪತ್ರೆಯಲ್ಲಿ ಪಾವತಿಸಬೇಕಾಯಿತು. ಅದು ಭರಿಸಲು ನಮ್ಮಲ್ಲಿ ಸದ್ಯ ದುಡ್ಡಿಲ್ಲದ ಕಾರಣ ಆ ಫೀಸು ಪಂಕಜಮ್ಮಳ ವತಿಯಿಂದ ಕೊಡಿಸಿದ್ದೇವು. ಆಗ ಆರತಿಯ ಜೀವ ಉಳಿಯಿತು. ಊರಲೆಲ್ಲ. ಆರತಿ ಸತ್ತಿಲ್ಲ. ಬದುಕಿದ್ದಾಳೆ ಎಂಬ ಸುದ್ದಿ. ರಕ್ತದಾನ ಮಾಡಿ ಒಂದು ಜೀವ ಉಳಿಸಿದೆ ಎಂಬ ಹೆಮ್ಮೆ ನನ್ನದು. ಊರಲ್ಲೆಲ್ಲ ಕೇಳಿದವರಿಗೆ ಹಾಗೆ ಹೇಳಿದೆ.  ಜನ ನನ್ನ ಬಗ್ಗೆ ಒಳ್ಳೆಯ ಮಾತಾಡಿದರು. ಮೆಚ್ಚಿದರು. ಹೊಗಳಿದರು. ನನಗೂ ಒಂದು ನಮೂನೆ ಖುಷಿ ಆಯ್ತು.
ಆದ್ರೆ ಪಂಕಜಮ್ಮ ಬಂದು ಊರಲ್ಲೆಲ್ಲ ಏನ್ ಹೇಳಿದ್ಳು ಅಂದ್ರೆ
” ಅವನೇನು ರಕ್ತ ಪುಗಸಟ್ಟೆ ಕೊಟ್ಟಿಲ್ಲ. ಆಸ್ಪತ್ರೆಯಲ್ಲಿ ಅದ್ಯಾವದೋ ಬಿಲ್ಲು ಕಟ್ಟಬೇಕಂತ ಹೇಳಿ 250 ರೂ. ಇಸ್ಕೊಂಡು ರಕ್ತ ಮಾರಿಕೊಂಡಿದ್ದಾನೆ” ಅಂತ ಅಂದಳಂತೆ. ಈ ಮಾತು ನನ್ನ ತಾಯಿ ಕಿವಿಗೆ ಬಿದ್ದಾಗ ಆಕೆಯ ವಿರುದ್ಧ ಧ್ವನಿ ಎತ್ತಿದ್ದಾಳೆ. “ಅಂಥವರಿಗೆ ಸಹಾಯ ಮಾಡೋದು ತಪ್ಪು” ಅಂತ ಅವ್ವಾ ನನ್ನನ್ನು ಬೈದಳು. ಆದ್ರೆ ನನಗೇನು ತೋಚಲಿಲ್ಲ. ಯಾಕಂದ್ರೆ ರಕ್ತದ ವಿಷಯ ಹಾಗೆಲ್ಲ ಮಾತಾಡಬಾರದೆಂದು ಸುಮ್ಮನಾದೆ.

     – ಮಚ್ಚೇಂದ್ರ ಪಿ.ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ