ಚಳಿಗೆ ಹೇದರಿ ಮುದುಡಿ ಮಲಗಿರುವ ಮಾಂತ್ಯಾ ಅದ್ಯಾವುದೋ ವಾಹನದ ಕರ್ಕಸ ಧ್ವನಿಗೆ “ಬುಸ್ಸುಕನೆ” ಎದ್ದು ಕುಳಿತ. ಎದ್ದವನೆ ಮೈ ತುಂಬಾ ಹೊದ್ದುಕೊಂಡು ಮಲಗಿರುವ ಚಾದರ ಎಡ,ಬಲ,ತಲೆ,ಮೈ ಕೈಗಳೆಲ್ಲ ಸುತ್ತಿಕೊಂಡು ಕಿಸೆಯಲ್ಲಿನ ಒಂದು ಬೀಡಿ ತೆಗ್ದು
“ಇವ್ವನವುನ್ ! ಏನಪ್ಪಾ ಈ ಚಳಿ ?” ಅಂತ ತನ್ನಲ್ಲಿ ತಾನೆ ಅಂದು ಕೊಳ್ಳುತ್ತಾ ಕಡ್ಡಿಗೀರಿ ಬೀಡಿ ಹೊತ್ತಿಸಿಕೊಂಡು ಒಂದ್ ದಮ್ ಹೊಗೆ ಎಳೆದು “ಉಫ್” ಅಂತ ಹೊರಬಿಟ್ಟು, ಕೈಯಲ್ಲಿನ ಗಡಿಯಾರ ಬೀಡಿಯ ಅತೀ ಸಣ್ಣ ಬೆಳಕಿನಿಂದ ನೋಡಿದ.
ಸಮಯ ನಾಲ್ಕುವರೆ. ಇನ್ನೇನು ತಿರ‍್ಗಿ ಮಲಗುವುದರಲ್ಲಿ ಅರ್ಥವಿಲ್ಲವೆಂದು ಡಾಂಬಾರ್ ಗರಂ ಮಾಡುವುದಕ್ಕಾಗಿ ಲೋಳಾರದಲ್ಲಿಟ್ಟಿದ ‘ಘಾಸ್ಲೆಟ್’ ಕ್ಯಾನು ಮತ್ತು ಫಿವರ್ ಡಿಕ್ಕಿಯಲ್ಲಿನ ಕಟ್ಟಿಗೆಗಳು ತಗೊಂಡು ಗರಂ ಮಾಡುವುದಕೊಸ್ಕರ ನಡೆದು ದೂರದಲ್ಲಿ ನಿನ್ನೆ ಕೆಲ್ಸ ಸುರು ಮಾಡಿದ ಸ್ಥಳದಲ್ಲಿ ಬಿದ್ದ ತುಂಬಿದ ಬ್ಯಾರೆಲ್ಲು ಚಳಿಗೆ ಗಟ್ಟಿಯಾಗಿ ನೆಲಕ್ಕಂಟ್ಟಿ ಬಿಟ್ಟಿತ್ತು. ತನ್ನ ಶಕ್ತಿ ಸಾಮಾರ್ಥ್ಯವನ್ನೆಲ್ಲ ಉಪಯೋಗಿಸಿ ತಿಣುಕಾಡಿ ನೆಲ ಬಿಡಿಸಿದಾದ ಮೇಲೆ ಒಂದು ಫರ್ಲಾಂಗವರೆಗೂ ಉರುಳಿಕೊಂಡು ಇಂದು ಕೆಲ್ಸ ಸುರುವಾಗುವ ಸ್ಥಳದಿಂದ ಸ್ವಲ್ಪ ಮುಂದೆ ಹೋಗಿ ರಸ್ತೆಯ ಪಕ್ಕಕ್ಕೆ ಕಾಸಲು ಕಟ್ಟಿಗೆಯ ಮೇಲೆ ‘ಘಾಸ್ಲೆಟ್ ‘ ಚೆಲ್ಲಿ ಕಡ್ಡಿ ಗೀರಿದ.
ಅಗ್ನಿ ಜ್ವಾಲೆಯಾಗಿ ಉರಿಯತೊಡಗಿತ್ತು. ಮಾಂತ್ಯಾ ಗರಂ ಮಾಡುತಿರುವ ಡಾಂಬಾರ ಬ್ಯಾರೆಲಿನ ಒಲೆಯ ಹತ್ತಿರವೆ ಕುಳಿತು ತನ್ನ ಮೈ ಕೈಗಳು ಕಾಸಿಕೊಳ್ಳುತ್ತಾ ಮತ್ತೇ ಒಂದು ಬೀಡಿ ತೆಗ್ದು ಅದೇ ಒಲೆಯ ಬೆಂಕಿಗೆ ಹೊತ್ತಿಸಿಕೊ೦ಡು ಅದರ ಮುಂದೆ ತನ್ನ ಕಾಲು ಚಾಚಿಕೋಳ್ಳುತ್ತಾ ಬೀಡಿ ಕೊಡುವ ಕ್ಷಣಿಕ ಸುಖದಲ್ಲಿ ವಿರಮಿಸತೊಡಗಿದ.
ಮಾಂತ್ಯಾ , ಇನ್ನೂ ಹದಿನಾರು ತುಂಬಿದ ಯುವಕ.ಕಡು ಬಡತನದಲ್ಲಿ ಹುಟ್ಟಿದರು ಎಸ್.ಎಸ್.ಎಲ್.ಸಿ ವರೆಗೂ ಓದಿ ಪರೀಕ್ಷೆ ಬರೆದಿದ್ದ. ಪರೀಕ್ಷೆಯಲ್ಲಿ ಫೇಲ್ ಆದ ಒಂದೇ ಕಾರಣಕ್ಕಾಗಿ ಮುಂದೇನು ಮಾಡಲು ತೊಚದೆ ಒಂದು ನಿರ್ಧಾರ ಮಾಡಿದ. ಅದೇನಂದ್ರೆ ಊರಲ್ಲಿ “ರಮಣಾನಂದ’ ಎಂಬ ಮೊಕಾದಂ ಲೇಬರ‍್ಗಳನ್ನು ಜಮಾಯಿಸಿಕೊಂಡು ಪುಣೆಗೆ ಹೋಗುತಿದ್ದ. ದಿನಕ್ಕೆ ಮೂವತ್ತು ರೂಪಾಯಿ ಕೊಲಿಯಂತೆ . ಪರ‍್ವಾಗಿಲ್ಲ! ಈ ವರ್ಷಾ ಪೂರ್ತಿ ಕೆಲಸ ಮಾಡಿಕೊಂಡು ಸರಿಯಾದ ಒಂದೆರಡು ಜೋಡು ಬಟ್ಟೆ ಬರೆಗಳನ್ನು ತಗೊಂಡು ಮತ್ತು ಮುಂದೆ ಪರೀಕ್ಷೆ ಬರೆದು ಪಾಸಾದ ಮೇಲೆ ಕಾಲೇಜಿನಲ್ಲಿ ‘ಡೊನೆಷನ್’ ಹಾವಳಿ ಜಾಸ್ತಿ ಇದೆ.ಅದು ಜಮಾ ಮಾಡಕೊಂಡು ‘ಬಸ್ ಪಾಸ್’ ತೆಗ್ದು ದಿನಾ ಬಸವಕಲ್ಯಾಣದ ಖೂಬಾ ಕಾಲೇಜಿಗೆ ಹೋಗಿ ಬರುವ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಮನೆಲಿ ತಂದೆ ತಾಯಿಗಿ ಈ ವಿಷಯ ತಿಳಿಸಿದ ಮೇಲೆ ‘ಮೊಕಾದಂ’ನ ಜೋತೆಗೆ ಹತ್ತಾರು ಕೂಲಿಗಳೊಂದಿಗೆ ಪುಣೆಗೆ ಬಂದಿದ್ದ. ಈ ಕೂಲಿಗಳು ನಸುಕಿನಲ್ಲಿ ಬೇಗ ಎದ್ದು ಸ್ನಾನ ಮಾಡಿ ಅಡಿಗೆ ಮಾಡಿಕೊಂಡು ಸೂರ್ಯ ಮೂಡುವ ಮೊದ್ಲೆ ದಗದಕ್ಕೆ ಹೋಗುವ ತರಾತುರಿಯಲ್ಲಿ ನಾಯಿ ತರಹ ಗಬಗಬನೆ ತಿಂಡಿ ತಿಂದಾದ ಮೇಲೆ, ಕಂಪನಿ ತೆಗೆದು ಕೊಂಡ ಟೆಂಡರಿನ ರಸ್ತೆಯಲಿ ಡಾಂಬಾರು ಹಾಸುವ ಕಾಯಕಕ್ಕೆ ರೆಡಿಯಾಗಿ, ಉಗಿ ಬರುವ ಡಾಂಬಾರು ಮಿಶ್ರಿತ ಹರಳು ತುಂಬಿ ನಿಂತ ಟ್ಟಿಪ್ಪರಿನ ಮೇಲೇರಿ ದಿನಾ ನೂರು, ನೂರೈವತ್ತು ಕೀಲೊ ಮೀಟರ್ ದೂರ ಅಂದ್ರೆ ಪುಣೆಯಿಂದ ದಕ್ಷಿಣದ ಸಾತಾರ,ಕರಾಡವರೆಗೂ ,ಪಶ್ಚಿಮದ ಲೌನಾಳದವರೆಗೂ, ಪೂರ್ವದ ದೌಂಡವರೆಗೂ ಉತ್ತರದ ನಾಶಿಕವರೆಗೂ ಕೆಲಸಕ್ಕೆ ಹೋಗುವರು . ಹೀಗೆ ಮುಂಜಾನೆಯಿಂದ ಸಂಜೆವರೆಗೂ ಒಬ್ಬೊಬ್ಬರದು ಒಂದೊಂದು ರೀತಿಯ ಕಾಯಕ.
ಡಾಂಬಾರು ತುಂಬಿದ ಟ್ಟಿಪ್ಪರ ದಗದದ ಸ್ಥಳಕ್ಕೆ ಬಂದು ತಲುಪಿದ ಕೂಡಲೆ ಡಾಂಬಾರು ಹಾಸುವ ಮೊದ್ಲು ಕೆಲ ಕೂಲಿಗಳು ರಸ್ತೆ ಕಸಗೂಡಿಸುವ ಕಾರ್ಯದಲ್ಲಿ ನಿರತನಾದರೆ,ಇನ್ನೂ ಕೆಲವರು ಡಾಂಬಾರು ನಿರಂತರ ಕಾಸುವ ಕಾರ್ಯದಲ್ಲಿ ,ಮತ್ತೆ ಕೆಲವರು ಲೊಳಾರ (ರಸ್ತೆ ಗಟ್ಟಿಗೊಳಿಸುವ ಯಂತ್ರ) ದ ಗಾಲಿಗಳಿಗೆ ನೀರು ಸವರುವ ಕಾಯಕದಲ್ಲಿ ನಿರತರಾಗುವರು. ಇನ್ನೂ ಕೆಲವರು “ಫಿವರ್” (ಡಾಂಬಾರು ಹರಳು ಸಮತಟ್ಟವಾಗಿ ಹಾಸುತ್ತಾ ಮುಂದೆ ಸಾಗುವ ) ಯಂತ್ರದ ಹಿಂದೆ ‘ಸೇವಳ್ ‘ ಎಂಬ ಸಲಕರಣೆಯಿಂದ ತಗ್ಗುಗಳಿದ್ದಲ್ಲಿ ಮಾಲ್ ತುಂಬುವರು. ಮತ್ತೊರ್ವ ವ್ಯಕ್ತಿ ತಲೆ ಎತ್ತರದ ‘ರೆಗಮಲ್’ ಎನ್ನುವ ಸಾಧನದಿಂದ ಸಮತಟ್ಟಗೊಳಿಸುವ ಕಾರ್ಯದಲ್ಲಿ ನಿರತರಾದರೆ, ಅವನೊಟ್ಟಿಗೆ ಚಿಕ್ಕ ಕಟ್ಟಿಗೆಯ ಮೂಲಕ ಡಾಂಬಾರು ಹಾಸಿದಾಗ ಬರುವ ‘ಖಡಿ’ ಆಯುವ ಕಾರ್ಯದಲ್ಲಿ ನಿರತರಾಗುವರು.
ಇವರೆಲ್ಲ ಕೂಲಿಗಳ ಹಿಂದೆ ಒಬ್ಬ ಮೊಕಾದಂ, ಮತ್ತೊಬ್ಬ ಕಂಪನಿಯ ಸೂಪರ್ ವೈಜರ್.ಮುಂಜಾನೆಯಿಂದ ಸಂಜೆವರೆಗೂ ಕೆಲಸ ಮಾಡಿದ ಮೇಲೆ ‘ಫಿವರ್’ ಮತ್ತು ‘ಲೊಳಾರ’ ಯಂತ್ರಗಳು ಆ ದಿನದ ಅಪೂರ್ಣಗೊಂಡ ರಸ್ತೆಯ ಪಕ್ಕಕ್ಕೆ ವಾಸ್ತವ್ಯ ಹೂಡಬೇಕಾದದ್ದು ಅನಿವಾರ್ಯ. ಆ ಯಂತ್ರಗಳು ನೋಡಿಕೊಳ್ಳಲು ‘ವಾಚಮನ್ ‘ ಆಗಿ ಕೂಲಿಗಳಿಬ್ಬರಿಗೆ ನೇಮಿಸುತ್ತಿದ್ದರು. ಮತ್ತು ಇಬ್ಬರ ಬದಲು ಒಬ್ಬನೆ ವಾಚಮೆನ್ ಆಗಿ ಉಳಿದರೆ ಆತನಿಗೆ ದಿನದ ಮತ್ತೊಂದು ಹಾಜರಿ ಲಭ್ಯವಾಗುತ್ತಿತ್ತು. ಆ ವಾಚಮೆನಗಳ ಕಾರ್ಯಗಳೇನೆಂದರೆ, ನಸುಕಿನಲ್ಲಿ ಬೇಗ ಎದ್ದು ಆ ದಿನದ ಡಾಂಬರಿಕರಣಕ್ಕೆ ಬೇಕಾಗುವಷ್ಟು ಬ್ಯಾರೆಲ್‌ಗಳಲ್ಲಿನ ಗಟ್ಟಿಯಾಗಿರುವ ಡಾಂಬರ ಉರಿಹಚ್ಚಿ ಕಾಯಿಸಿ ಇಡುವುದು. ಮತ್ತು ಲೋಳಾರ ಗಾಲಿಗಳಿಗೆ ನೀರು ಸಂಗ್ರಹಿಸಿ ಇಡುವುದು . ಹಾಗಾಗಿ ಮಾಂತ್ಯಾ ಆ ದಿನ ಡಾಂಬಾರು ಕಾಸುವ ಕಾರ್ಯದಲ್ಲಿ ನಿರತನಾಗಿದ್ದ. ಮಾಂತ್ಯಾ ರಸ್ತೆಯ ಮಸಿನರಿಗಳ ಮೇಲೆ ವಾಚಮೇನ್ ಆಗಿ ಇರಲು ‘ಡಬಲ್’ ಹಾಜರಿ ಸಿಗುತ್ತದೆ ಅನ್ನೋ ಕಾರಣವೇನು ಇರ‍್ಲಿಲ್ಲ. ಈ ಕೆಲ್ಸ ಮಾಡುವ ಕೂಲಿಗಳ ಬದುಕು ಅವಿಶ್ರಾಂತವಾಗಿರುದರಿಂದ ಆತ ವಿಶ್ರಾಂತಿ ಬಯಸಿ ‘ವಾಚಮೇನ್’ ಆಗಿ ಪಡೆಯಬೇಕೆಂದು ಒಬ್ಬನೆ ಉಳಿದಿದ್ದ. ಮತ್ತು ದಿನಾ ಕಂಪನಿಗೆ ಹೋಗಿ ಬರುವ ಕೂಲಿಗಳ ದಿನಚರಿಯನ್ನು ಕುರಿತು:
“ನಾಯಿ ತರಹ ತಿಂಡಿ ತಿಂದು ಕತ್ತೆ ತರಹ ದುಡಿದು ದುಡಿದು ಹಂದಿಯಂತೆ ಮಲಗಿ ಬಿಡ್ತಾರೆ ! ಈ ಡಾಂಬಾರು ಜನ ಹಂದಿಯಂತೆ ಮಲಗಿ ಬಿಡ್ತಾರೆ !!
“ಅಂತ ಹಾಡಿ ಹಾಸ್ಯ ಮಾಡುತ್ತಿದ್ದ .ಆ ಕಂಪನಿಯ ಎಲ್ಲಾ ಕೂಲಿಗಳ ಬದುಕು ಈ ಮೂರು ಪ್ರಾಣಿಗಳಂತೆ ಸಾಗುತ್ತಿರುವುದರಿಂದ ಅವರು “ಹೌದಲ್ಲಾ !” ಎಂದು ಆಚರ್ಯಚಕಿತರಾಗುತ್ತಿದ್ದರು.
ಹೌದು ! ಈ ಡಾಂಬರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಳು ನಸುಕಿನಲ್ಲಿ ಬೇಗ ಎದ್ದು ಸ್ನಾನ,ಅಡಿಗೆ ಮಾಡಿಕೊಂಡು ದಗದಕ್ಕೆ ಹೋಗುವ ತರಾತುರಿಯಲ್ಲಿ ನಾಯಿಯಂತೆ ಗಬಗಬನೆ ತಿಂದಾದ ಮೇಲೆ ದಿನಂಪೂರ್ತಿ ದುಡಿದರೂ ಓವರ್ ಟೈಂನಲ್ಲಿ ಗಂಟೆಗೆ ಹತ್ತು ರೂಪಾಯಿ ಅನ್ನೋ ಆಸೆ ಹಚ್ಚಿ ಕಂಪನಿ ಅವರಿಗೆ ಕತ್ತೆ ತರಹ ರಾತ್ರಿ ಹನ್ನೋಂದು ,ಹನ್ನೇರಡರವರೆಗೆ ದುಡಿಸಿಕೊಳ್ಳುತ್ತಿತ್ತು. ಆಗ ಕೆಲಸ ಮುಗಿಸಿಕೊಂಡು ಕೂಲಿಗಳು ಟಿಪ್ಪರಿನಲ್ಲಿ ಕಂಪನಿಯಲ್ಲಿರುವ ಮನೆಗೆ ಮರಳಬೇಕಾದರೆ ಮಧ್ಯರಾತ್ರಿ ಒಂದೋ ! ಅಥವಾ ಎರಡು ಗಂಟೆಗಳಾಗಿರುತಿತ್ತು. ಆ ಸಮಯದಲ್ಲಿ ಬೆಳಗಾಗುವುದಕ್ಕೆ” ಮೂರೆ ತಾಸು, ಬೇಗ ಏಳಬೇಕು ” ಎಂಬ ಅವಸರದಲ್ಲಿ ಹಂದಿಯಂತೆ “ಮುಸ್ಸ್” ಅಂತ ಮಲಗಿ, ನಿದ್ರೆ ಹೋಗುತಿರುವುದನ್ನು ನೋಡಿಯೆ ಮಾಂತ್ಯಾ ಹಾಡುತ್ತಿದ್ದ. ಈ ಕೂಲಿಗಳ ಪರಿಸ್ಥಿತಿ ನೋಡಿಯೆ ಆತ ಸೈಡ್ ಮೇಲೆ ವಾಚಮೇನ್ ಆಗಿರಲು ಬಯಸಿದ. ಇದು ಮಾಂತ್ಯಾನಿಗೆ ಎಲ್ಲರಿಗಿಂತಲ್ಲೂ ತಾನ್ನೋಬ್ಬ ವಿಶ್ರಾಂತಿ ಜೀವಿ ಎಂದೆನಿಸಿತ್ತು. ಹಾಗಾಗಿ ಆತ ಈ ವಿಶ್ರಾಂತಿಯ ಸಮಯದಲ್ಲಿ ಒಮ್ಮೆ ಕಲ್ಪನಾ ಲಹರಿಯಲ್ಲಿ ತೇಲಾಡುತ್ತಾ ತನ್ನ ಬಾಲ್ಯದ ಮೊರೆ ಹೋಗಿದ್ದ.
” ಮಾಂತೂ ! ಏ ಮಗಾ ! ಇಲ್ ಬಾರೊ .ಈ ಬೀಡಿ ಹೊತ್ತಿಸ್ಕೊಂಡು ಬಾ. ” ಅಂತ ಒಂದು ಬೀಡಿ ಅಪ್ಪಾ ಕೈಗಿಟ್ಟಾಗ ಮಾಂತ್ಯ ದೀಪದ ಕುಡಿಗೆ ಹೊತ್ತಿಸಿಕೊಂಡು ತಂದ್ ಕೊಡುತ್ತಿದ್ದ. ಆ ಬೀಡಿ ಅವರು ಸೇದುವ ರೀತಿ ನೋಡಿ ಮಾಂತ್ಯನಿಗೆ ಕುತೂಹಲ ಮೂಡಿಸುತಿತ್ತು. ಮತ್ತೊಂದು ದಿನಾ ಕಿಟ್ಟಪ್ಪ ಮಗನಿಗೆ ಬೀಡಿ ಹೊತ್ತಿಸಿಕೊಂಡು ಬರಲು ಹೇಳಿದಾಗ ಮಾಂತ್ಯಾ ಅಲ್ಲೆ ಮೂಲ್ಯಾಗ ನಿಂತು ಒಂದು ‘ಜುರಕಿ’ ಎಳೆದಾಗ ಅದು ನೇತ್ತಿಗೇರಿ “ಕೊಯ್ ಕೊಯ್ “ಎಂದು ಕೆಮ್ಮಲು ಸುರು ಮಾಡಿದ.
” ಯಾಕೊ ,ಮಗಾ ! ಖೆಮ್ತಾ ಇದ್ದಿ. ? ” ಅಂತ ಕುಳಿತಲ್ಲಿಯೆ ಕಿಟ್ಟಪ್ಪಾ ಕೇಳಿದಾಗ ಕಸಿವಿಸಿಗೊಂಡ ಮಾಂತ್ಯ
“ಯಾಕೂ ಇಲ್ಲಪೋ !” ಅಂತ ಹೇಳ್ತಾ . ಬಾಯಲ್ಲಿ ಹಿಡಿದ ಬೀಡಿಗೆ ಜೊಲ್ಲು ಹತ್ತಿರುವುದರಿಂದ ಅದನ್ನು ಒರೆಸಿ ತಂದು ಕೊಟ್ಟ. ಹೀಗೆ ದಿನಾ ಅಪ್ಪಾ ಕೊಟ್ಟ ಬೀಡಿಯ ಒಂದೆರಡು ಜುರುಕಿಯ ‘ದಮ್’ ಹೊಡೆದು ಮಜಾ ಅನುಭವಿಸುತ್ತಾ ಬಾಲ್ಯದಲ್ಲಿಯೆ ಅದರ ಮರ್ಮ ತಿಳಿದು ಕೊಂಡಿದ್ದ. ನಂತರ ಅಪ್ಪನ ಕಿಸೆಯಲ್ಲಿನ ಬೀಡಿ ಕದ್ದು ಸೇದುವುದು, ಮತ್ತೆ ಅರ್ಧ ಸುಟ್ಟಿ ಬಿದ್ದ ಅಂಗಡಿ ರಸ್ತೆ ಬದಿಯ ಬೀಡಿಗಳು ಆಯ್ದುಕೊಂಡು ಸೇದುವುದು .ಹೀಗೆ ಬಾಲ್ಯದಿಂದಲೂ ಮಾಂತ್ಯನಿಗೆ ಬೀಡಿ ಸೇದುವ ಚಟ ಅಂಟಿಕೊಂಡಿತ್ತು. ಮುಂದೆ ಬರುಬರುತಾ ಶಾಲೆ ಕಲಿಯುವ ಹೊತ್ತಿನಲ್ಲಿ ಬೀಡಿ ಚಟ ಬಿಟ್ಟಿದ್ದ . ಆದರೆ, ಯಾವಾಗ ಹತ್ತನೇ ಫೇಲ್ ಆಗಿ ಹದಿನಾರನೆ ವಯಸ್ಸಿನಲ್ಲಿ ಈ ಡಾಂಬಾರು ಕಂಪನಿಗೆ ಬಂದನೋ ! ಆಗಲೆ ಆ ಹಳೆಯ ಬೀಡಿ ಸಂಬಂಧಕ್ಕೊ !ಅಥವಾ ಮಾಗಿಯ ಚಳೆಗೊ ! ಈ ಬೀಡಿ ಸೇದುವ ಚಟಕೆ ದಾಸನಾಗಿಬಿಟ್ಟಿದ್ದ. ಹಾಗಾಗಿ ವಾಚ ಮ್ಯಾನ ಕೆಲಸದಲ್ಲಿ ಆರಾಮವಾಗಿ ಕುಳಿತು ಮಾಂತ್ಯಾ ಬೀಡಿ ಸೇದುವ ಚಟಕ್ಕೆ ಅಂಟ್ಟಿಕೊಂಡ್ಡಿದ್ದ.
ಒಲೆಯಲ್ಲಿಯ ಬೆಂಕಿಯು ಗಾಳಿಗೆ ತಾಕಿ ಒಮ್ಮೆಲೆ ಕಾಲಿಗೆ “ಚರ್” ಅಂತ ಸುಟ್ಟಾಗ ಇನ್ನೇನು ಕನಸಿನಲ್ಲಿ ಮುಳುಗಿ ಹೋಗಿದ್ದ ಮಾಂತ್ಯಾ ಮತ್ತೊಮ್ಮೆ ಗಡಿಬಿಡಿಯಲ್ಲಿ ಎಚ್ಚೆತ್ತುಕೊಂಡು, ಜಾಗ್ರತನಾಗಿ ಕೈಯಲ್ಲಿ ಹಿಡಿದ ಬೀಡಿ ನೋಡಿದ. ಅದು ನಂದಿ ಹೋಗಿರುವುದರಿಂದ ತುಸು ಕೋಪಗೊಂಡ ಮಾಂತ್ಯಾ ” ಥೂತ್ ! ಇದರವುನ್ ” ಅಂತ ಬೀಸಾಕಿ ಮತ್ತೊಂದು ಬೀಡಿ ತೆಗ್ದು ಅದೇ ಒಲೆಯ ಬೆಂಕಿಯಲ್ಲಿ ಹೊತ್ತಿಸಿಕೊಂಡು ಮೇಲಿಂದ ಮೇಲೆ ಹೊಗೆ ಏಳೆದು ಕೋಳ್ಳುತ್ತಾ ಬೀಡಿ ಸೇದುತಿದ್ದಂತೆ ಬೆಳಕು ಹರಿದಿತ್ತು .ಡಾಂಬಾರು ಗರಂ ಆಗಿ ಕೊತ ಕೊತನೆ ಕುದಿಯತೊಡಗಿತ್ತು. ಬೆಂಕಿ ಕೆಳಗೆ ನಿಗಿನಿಗಿ ಕಂಗೋಳಿಸುತಿತ್ತು
“ಇನ್ನೇನು ಡಾಂಬಾರ್ ಟಿಪ್ಪರಗಳು ಬರ‍್ತಾವೆ ಬೇಗ ರೆಡಿಯಾಗಬೇಕೆಂದು ಮೈಮ್ಯಾಲಿನ ಚಾದರ ತೆಗೆದಿಟ್ಟ.ಮಾಂತ್ಯಾ ಡಾಂಬಾರು ಗಾಡಿಗೊಳು ಬರುವುದನ್ನೆ ನಿರಿಕ್ಷಿಸುತ್ತಿದ್ದ. ಅದೇ ಕ್ಷಣ ಒಂದರ ಹಿಂದೆ ಒಂದೊಂದು ಟಿಪ್ಪರಗಳು ‘ ಬುರ‍್ರ ! ಬರ‍್ರು ! ‘ ಅಂತ ಸಾಲುಗಟ್ಟಿ ನಾಕಾರು ಬಂದು ನಿಂತವು.
“ಏ ! ಇವತ್ ಸೇಠ ಬರಾವ್ ಹನಾ .ಯಾರು ಏಲ್ಗೂ ಹೋಗದೆ ನಿಮ್ ನಿಮ್ ಕೆಲ್ಸ ಸರಿಯಾಗಿ ಮಾಡ್ರಿ.” ಅಂತ ಮೊಕಾದಂ ರಮಣಾನಂದ ಹೇಳಿದಾಗ ಕೂಲಿಗಳು ಅವರವರ ಕೆಲಸದ ಮೇಲೆ ತಲ್ಲಿನರಾಗಿದ್ದರು .ಯಾಕೆಂದ್ರೆ ಆ ಸೇಠ ಕೂಲಿಗಳ ಹಿಡಿದು ಕಂಪನಿ ಮ್ಯಾನೇಜರನವರೆಗೂ ಯಾರೆ ಆಗಲಿ ಕೆಲ್ಸ ಮಾಡದೆ ಮೈಗಳ್ತನ ಮಾಡಿದ್ದು ಕಂಡು ಬಂದ್ರೆ ದನಕ್ ಬಡಿದಂಗ್ ಬಡಿತಿದ್ದ. ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿದ್ದವು.ಕೆಲ್ಸ ಸುರುವಾಗಿತ್ತು. ಪಿವರ್ ‘ಫಳಕಾ’ ಆಗಲಿಸಿತ್ತು .ಟಿಪ್ಪರ ಡಾಂಬರ ಮಿಶ್ರಿತ ಮಾಲ್ ತಂದು ಹಾಕಿ, ಅರ್ಧ ಉಳಿಸಿಕೊಂಡು ಸ್ವಲ್ಪ ಮುಂದೆ ಹೋಗಿ ನಿಂತಿತ್ತು. ಮಾಂತ್ಯಾ ಫಿವರ್ ಯಂತ್ರದ ಮುಂದೆ ಚೆಲ್ಲುವುದಕ್ಕಾಗಿ ಬಿಸಿ ಬಿಸಿಯಾದ ಡಾಂಬಾರು ಬಕೆಟ್‌ನಲ್ಲಿ ತಂದು ಕೊಡುತ್ತಿದ್ದ.ಸುಬ್ಬು ಝಾರಿಯಿಂದ ರಸ್ತೆಯಲಿ ಹರಡುತ್ತಿದ್ದ. ಮಾಂತ್ಯಾ ಮತ್ತೆ ಡಾಂಬಾರು ತರಲು ಬ್ಯಾರೆಲ್ ವರೆಗೆ ನಡೆದಿದ್ದ .ಸುಬ್ಬು, ಮಾಂತ್ಯಾ ಝಾರಿಯಲ್ಲಿ ಸುರಿದ ಡಾಂಬಾರು ರಸ್ತೆ ತುಂಬ ಹರಡಿ ಮತ್ತೆ ಅವನಿಗಾಗಿ ಕಾಯುತ್ತಿದ್ದ. ಅಷ್ಟೋತ್ತಿನಲ್ಲಿ ಕರಿಯ ಬಣ್ಣದ ಕಾರೊಂದು ಸುಬ್ಬುನ ಎದುರಿಗೆ ಬಂದು ನಿಂತಿತ್ತು. ಅದರೊಳಗಿಂದ ಇಳಿದವರು ಮಾಲಿಕನೆಂದು ಗೊತ್ತಾದ ಮ್ಯಾಲೆ ಇನ್ನೇನು ಯಾರಿಗೆ ಯಾವ ತಪ್ಪಿಗಾಗಿ ಹೊಡಿತ್ತಾನ್ನೋ ! ಅನ್ನೋ ಭಯ ಎಲ್ಲರಲ್ಲೂ ಒತ್ತರಿಸಿತ್ತು.
” ಏ ! ಇದರ್ ಆವ್ ! .ಡಾಂಬಾರ್ ಕೋನ್ ಮರ‍್ರಾ ಹೈ ?” ಅಂತ ಸುಬ್ಬುನ ಹತ್ತಿರ ಬರುತಾ ಕೇಳಿದ.” ಮೈ ಹು ಮರ‍್ರಾ ಹೈ ಸಾಹೇಬ್ ” ಅಂತ ಅಳುಕು ಧ್ವನಿಯಲ್ಲಿ ಹೇಳಿದ್ದೆ ತಡ ಸಿಟ್ಟಿನಿಂದ ಸುಬ್ಬುಗೆ ಕಪಾಳಮೋಕ್ಷ ಮಾಡಿದ.
” ಕೈಕು ಮರ‍್ರಾ ಹೈ ಡಾಂಬಾರ್ ? ಐಸಾ ಹಿ ಮರ‍್ತಾ ಹೈ ಕ್ಯಾ ? ಅಚ್ಯಾ ಮಾರ್ ” ಅಂತ ಮತ್ತೊಂದು ಹೋಡೆದ.” ನಹಿ ಸಾಹೇಬ್ ! ಅಚ್ಚಾ ಹಿ ಮಾರ‍್ತು ಸಾಹೇಬ್ .” ಅಂತ ಸುಬ್ಬು ಧೀನನಾಗಿ ನುಡಿದ.
” ಮಾರ್ ಅಭೀ ಮಾರ್ ಮೈ ದೇಖತು. ” ಅಂತ ಅಲ್ಲೆ ನಿಂತ್ತು ದಿಟ್ಟಿಸುತ್ತಿದ್ದ.
ಸುಬ್ಬು ಮಾತ್ರ”ಸಾಹೇಬ್ ,ಡಾಂಬಾರ್ ಲಾನೆಕೆಲಿಯೆ ಗಯೆಯೆ ಸಾಹೇಬ್ .” ಅಂತ ಹೇಳಿದ .
ಆತ ಹಿಂದಕ್ಕೆ ತಿರುಗಿ” ಕೋನ್ ಹೈ ಡಾಂಬರ್ ವಾಲಾ ? ” ಅಂತ ಸಿಟ್ಟಿನಿಂದ ಗರ್ಜಿಸಿದ.
ಮಾಂತ್ಯಾ ಡಾಂಬಾರು ತರಲು ಬಂದಿದ್ದ. ಆದ್ರೆ ಡಾಂಬಾರು ಬಾಗಿಸಿಕೊಡುವ ವ್ಯಕ್ತಿ ಅಲ್ಲಿ ಕಾಣಲಿಲ್ಲ. ಅವನಿಗಾಗಿ ಕಾಯುತ್ತಾ ವಿಳಂಬ ಮಾಡಿದರೆ ಸೇಠ ತನಗೂ ಹೊಡೆಯುತ್ತಾನೆಂದು ಹೆದರಿ ಭಯದಿಂದ ಗರಂ ಆದ ಬ್ಯಾರೆಲ್ ಹಿಂಬದಿಗೆ ಚೀಲದ ತಟ್ಟಿನಿಂದ ಹಿಡಿದು ತಗ್ಗಿನಲ್ಲಿಟ್ಟ ಬಕೆಟ್‌ನೊಳಗೆ ಡಾಂಬಾರು ಬೀಳುವಂತೆ ಸಾವಕಾಶವಾಗಿ ಬಾಗಿಸುವಾಗ ‘ಕೊತ ಕೊತನೆ ಕುದಿಯುತ್ತಿದ್ದ ಡಾಂಬಾರ್ ಬ್ಯಾರೆಲ್ ‘ಗ್ಯಾಸ್’ ಹಿಡಿದಿರುವುದರಿಂದ ಒಮ್ಮೆಲೆ ಸ್ಪೋಟಗೊಂಡಿತ್ತು.
ಡಾಂಬಾರ್ ಬ್ಯಾರೆಲ್ ಬಾಗಿಸುತ್ತಿದ್ದ ಮಾಂತ್ಯಾ ಗರಂ ಗರಂ ಆದ ಡಾಂಬಾರು ಮಡುವಿನಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದ. ಅವನ ಮೈ ,ಮುಖ, ಕೈ, ಕಾಲುಗಳೆಲ್ಲ ಬಿಸಿ ಡಾಂಬಾರಿನಲ್ಲಿ ಕರ‍್ರಗೆ ಮುಚ್ಚಿ ಹೋಗಿದ್ದವು. ಎಲ್ಲರೂ ಓಡಿ ಬಂದರು .ಆದರೆ ಸುಡುವ ಡಾಂಬರಿನೊಳಗಿದ್ದ ಮಾಂತ್ಯಾನಿಗೆ ಯಾರು ಮುಟ್ಟುವ ಹಾಗಿಲ್ಲ. ನೀರೆರೆದು ಅವನ ಮೇಲೆ ಚಲ್ಲುವ ಹಾಗಿಲ್ಲ. ಬಟ್ಟೆಯಿಂದ ನಂದಿಸಲು ಅದೇನು ಬೆಂಕಿಯಲ್ಲ. ತುಂಬಾ ಕಾದ ಡಾಂಬಾರ್ ನೆಲವೆ ಸುಟ್ಟಂತೆ ಬಾಸವಾಗುತ್ತಿರುವಾಗ ಮಾತ್ಯಾನ ಗತಿ ? ಕ್ಷಣಾರ್ಧದಲ್ಲಿ ಅವನ ಉಸಿರು ನಿಂತಿತ್ತು.
ಸೈಡಿನಲ್ಲಿದ್ದವರೆಲ್ಲ ಈ ಅಘಾತ ನೋಡಿ ದಿಗಿಲುಗೊಂಡಿದ್ದರು. ಸೇಠ್ ಮಾತ್ರ ಮೊಕಾದಂ’ನನ್ನು ಕುರಿತು
“ಕೆಲ್ಸಕೆ ಬಾರದವರನ್ನು ತಂದು ಕೆಲ್ಸಕೆ ಹಚ್ಚಿದ್ರೆ ಇನ್ನೇನ್ ಆಗೋದು” ಅಂತ ವಟಗುಟ್ಟತೊಟಗಿದ್ದ.ಮಾಂತ್ಯಾನ ಸಮವಯಸ್ಕನಾದ ಸುಬ್ಬುಗೆ ಮಾತ್ರ ಈಗ ಮಾಂತ್ಯಾನ ಹಾಡು ಅದ್ಯಾಕೋ ನೆನಪಾಗತೊಡಗಿತ್ತು.
– ಮಚ್ಚೇಂದ್ರ ಪಿ.ಅಣಕಲ್.
( ಈ ಕತೆ ಸೆಪ್ಟೆಂಬರ 2-2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ವಿಶ್ವಕನ್ನಡ ಕಥಾ ಸ್ವರ್ಧೆಯಲ್ಲಿ ಆಯ್ಕೆಯಾಗಿ “ದೀಪಾತೋರಿದೆಡೆಗೆ” ಎಂಬ ಕಥಾ ಸಂಕಲನದಲ್ಲಿ ಪ್ರಕಟವಾಗಿದೆ.).