ಪೊರಕೆ ಪರಿ
ದೊಡ್ಡ – ದೊಡ್ಡ ಗದ್ದಲದ ಟಿ. ವಿ. ಸದ್ದಿನ ಮುಂದೆ, ಜಾತಿ ಜಾತಿಗಳ ಜಗಳ, ಧರ್ಮ ಧರ್ಮಗಳ ನಡುವಿನ ವೈಷಮ್ಯ, ರಾಜಕೀಯ ದ್ವೇಷ, ಇವೆಲ್ಲವುಗಳ ನಡುವೆ ಅಮ್ಮಳ ಕಣ್ಣು ಟಿ.ವಿ. ಯನ್ನು ದಿಟ್ಟಿಸುತ್ತಲೇ, ಕಾಲುಗಳು ಚಾಚಿ, ಕೈಗಳಿಂದ ತರಕಾರಿ ಹೋಳುವಲ್ಲಿ ನಿರತವಾಗಿದ್ದವು.
ಇದನ್ನು ಗಮನಿಸಿದ ಪರಿ ,ಸ್ವಲ್ಪ ತಡದವರೆಗೆ ಅಮ್ಮನೆಡೆ ನೋಡುತ್ತಾ, “ಅಮ್ಮ… ! ನೀನು ಹೀಗೆ… ಮಾಡುವ ಕೆಲಸದ ಮೇಲೆ ಗಮನವಿಲ್ಲದಿದ್ದರೆ…! ಮರೆತು ಏನಾದರೂ ಗಾಯವಾದರೆ…? ದಿನಾ… ನಮ್ಮನ್ನು ತಯಾರಿ ಮಾಡಿ ಶಾಲೆಗೆ ಕಳಿಸುವವರು ಯಾರಮ್ಮ” ? ಎಂದು ಪರಿ ತನ್ನ ಅಳಲು ತೋಡಿಕೊಂಡಳು.
ಪರಿಯ ಈ ಮಾತು ತಮಾಷೆಗೆ ತೆಗೆದುಕೊಂಡ ಅಮ್ಮ ,
“ಯಾಕೆ ಪರಿ… ನಿನಗೀ… ಪ್ರಶ್ನೆ ? ಏನಾಗಿದೆ ಈಗ ! ” ಹುಂ.. ಹುಂ.. ಎಂದು ಮುಗುಳ್ನಕ್ಕಳು.
ಅಮ್ಮಳ ಮುಗುಳ್ನಗುವಿನ ನಡುವೆ ಪರಿ ಬಾಯಿ ಹಾಕಿ, “ಇಲ್ಲಮ್ಮ …! ಆ.. ಟಿ.ವಿ. ಆ.. ಜಗಳ. ಆ ಧರ್ಮಗಳ ಕಿತ್ತಾಟ… ನೋಡುತ್ತಲೇ… ! ತರಕಾರಿ ಕೋಯಿತ್ತಿರುವೆ. ನಿನ್ನ ಕೈಗೇನಾದರೂ.. ಗಾಯವಾದರೆ ಹೇಗೆ ? ಅದಕ್ಕೆ ಈ ಪ್ರಶ್ನೆ ಕೇಳಿದೆ. ” ಎಂದಳು.
ಮಗಳ ಕಾಳಜಿಗೆ ಮನಸೋತ ಅಮ್ಮ ,
” ಆಯ್ತು. ಸರಿಯಮ್ಮಾ ! ಆ ಪೊರಕೆ ತೊಗೊಂಡು ಈ ಕಸಗುಡಿಸು.” ಎಂದಿದಕ್ಕೆ ಪರಿ, ಪೊರಕೆ ಹಿಡಿದು ನಿಂತುಕೊಂಡಳು. ಸ್ವಲ್ಪ ಸಮಯದ ನಂತರ
ಆ ಕಡೆಯಿಂದ ” ಪರಿ…! ಏ ಪರಿ…. ಕಸ ಗುಡಿಸೊದು ಆಯ್ತೇನೆ…. ! ಇಲ್ಲಿ ಬಾ…” ಎಂದು ಅಮ್ಮ ಕೂಗಿದರು ಯಾವ ಪರಿಯಿಂದಲೂ ಪರಿಯ ಕಿವಿ ಪರದೆಗೆ ತಾಗಲಿಲ್ಲ.
ಏನೋ ! ಯೋಚಿಸುತ್ತ ನಿಂತುಕೊಂಡಳು.
ಪರಿಯ ಮನದಲ್ಲಿ….
ಪೊರಕೆ “ಏ… ಪರಿ ! ಯಾಕೆ ? ನನ್ನನ್ನೇ ದಿಟ್ಟಿಸಿ ನೋಡುತ್ತ ನಿಂತಿದ್ದಿಯಲ್ಲ…! ನಾನೇನು ಈ ಜಗದ ಭುವನ ಸುಂದರಿಯೇ….! ಮಳ್ಳಿ ನರಿಹಂಗ ನಿಂದ್ರಬೇಡ. ಹೋಗು ಅಮ್ಮಳ ಮಾತು ಕೇಳು. ಅವಳ ಮಾತಿನಲ್ಲಿ ಬದುಕಿನ ಹುಮ್ಮಸ್ಸಿನ ಹೊಸ ಚಿಗುರು ಅರಳುವುದು. ಹೋಗು ನನ್ನಲ್ಲಿ ನಿಂತು ನನ್ನಂತ್ತಾಗ ಬೇಡ….! ಉಗುಳೋ ! ಜಾಗದಾಗ ನಿಲ್ಲಬ್ಯಾಡ.!!” ಎಂದ ಪೊರಕೆಯ ಮಾತುಗಳು ಪರಿಯ ಕಿವಿಗೆ ತಾಗಿದವು.
“ಯಾರು ? ಪೊರಕೆ ನೀನಾ ! ಮಾತಾಡಿದ್ದು ? ಆಗಲಿ ಬಿಡು ನಿನ್ನಂತಾದರೇನಂತೆ !! ಅಲ್ಲಾ… ನೀವೆಲ್ಲ ಸೇರಿ ಒಟ್ಟಿಗೆ, ಒಂದೇ ಸೂರಿನಲ್ಲಿ ಅದೇಷ್ಟು ಚಂದ ಒಗ್ಗಟ್ಟಿನಿಂದ ಇರುವಿರಿ”.
“ ನಾವು ಈ ಮಾನವರಂತಲ್ಲ… ನಾವು ಕೂಡ ಈ ಸಮಾಜದಲ್ಲಿ ನಮ್ಮದೇ ಆದ ಘನತೆಯ, ಸಮತೆಯ ಪ್ರತಿಪಾದಕರು. ನಾವೆಲ್ಲ ಕೂಡಿ ಬಾಳಿದರೇನೆ ನಮ್ಮ ಉಳಿವು ಹಾಗೂ ಸತ್ಕಾರ್ಯ. ನಮ್ಮ ಅಗಲಿಕೆ ಯಲ್ಲಿ ನಮ್ಮ ಅಂತ್ಯವಿದೆ. ನಮ್ಮ ಒಗ್ಗಟ್ಟಿನಲ್ಲಿ ಸೇವೆಯ ಬಲವಿದೆ. ನಾವು ಒಂದು ಗೂಡಿದರೆನೇ ಸ್ವಚ್ಚತೆಯ ಮತ್ತು ಸಾಧನೆಯ ಮಂತ್ರವಿದೆ” ಎಂದು ಪೊರಕೆ ಹೇಳಿತು.
“ ಆಹಾ… ಆಹಾ…! ನಿನ್ನ ಮಾತು ಅದೇಷ್ಟು ಸುಂದರ, ಎಂತಹ ಸತ್ಯ. ಇನ್ನೂ ಕೇಳಬೇಕೆನಿಸುತ್ತದೆ ಈ ಮನಕೆ.” ಎಂದು ಪರಿ ಆನಂದದ ನಗೆ ಬಿರಿದಳು.
“ ಓ.. ಹೋ..! ಬಳಸಿ ಮೂಲೆಗೆ ಬೀಸಾಡುವ ಮನಕೆ, ಅದು ಹೇಗಾಯಿತು ನನ್ನ ಮಾತು ಮನವರಿಕೆ. ನನ್ನ ಸೇವೆಯ ಸಾರ ಅರ್ಥವಾಯಿತೇ ! ಈ ಮನುಕುಲಕೆ ! ಛೆ..! ಛೆ.. ! ಈ ನೀಚ ಬುದ್ದಿಯ ಮಾನವನ ಮಾತುಗಳು ಆಡಿ ನನ್ನ ಬಾಯಿ ಹೊಲಸು ಮಾಡಿಕೊಂಡೆ ಅನಿಸುತ್ತೆ.
ಸರಿ… ಸರಿ… ಅನರ್ಥ ನುಡಿವದು ಬೇಡ ನನಗದು ತರವಲ್ಲ” ಎಂದು ಪೊರಕೆ ವಿಡಂಬನೆಯ ಮಾತು ಆಡಿತು.
“ಅದೇಕೆ ಪೊರಕೆ… ಅಷ್ಟೊಂದು ಬೇಸರದಿ ನುಡಿವೆ ? ನಿನ್ನಂತಹ ಭಾವನೆಗಳು ನಮ್ಮಲ್ಲಿಯೂ ಇವೆ. ಆದ್ದರಿಂದಲೇ ಅನೇಕ ಸಾಧಕರು, ಸಮಾಜ ಸುಧಾರಕರು, ಜ್ಞಾನಿಗಳು, ಮಾನವತವಾದಿಗಳು, ಈ ಸಮಾಜಕ್ಕೆ ಹಾಗೂ ಈ ಮನಸ್ಸಿಗೆ ಅಂಟಿದ ಕೊಳೆ ತೊಳೆದು, ಕಸ ಬಳಿದು, ಹೊಸ ಭಾವ, ಹೊಸನಾದದಿ ಬರಡಿಗೆ ಹೊಸ ಚಿಗುರು ಬರಿಸಿದ್ದಾರೆ” ಎಂದು ಪರಿ ಸಮರ್ಥರಿಸಿಕೊಂಡಳು.
“ ಏ.. ಪರಿ…. ! ಹೋಗು ಪೋರಿ !! ನಿಮ್ಮಮ್ಮಳ ಕೂಗು ಕೇಳು. ಅಮ್ಮ ಬಂದರೆ, ನನ್ನಿಂದಲೆ ಒದೆ ತಿಂತಿಯಾ ನೋಡು. ಹೋಗೆ… ಬೇಗ ಕಸ ದೂಡು” ಎಂದು ಪರಿಗೆ ಪೊರಕೆ ಅಮ್ಮಳ ಬರುವಿಕೆಯ ಎಚ್ಚರಿಕೆ ನೀಡಿತು.
“ ಏ.. ಪರಿ.. ! ಏ.. ಪರಿ. ಏನ್ ಮಾಡ್ಲಾತ್ತಿದ್ದಿಯೇ…? ಅಷ್ಟೋತ್ತಿಂದ ಎಷ್ಟು ಕೂಗಿದರೂ ಕಿವಿಗೇ ಹಾಕೊಳ್ಳತ್ತಿಲ್ಲ ” ಎನ್ನುತ, ಅಡುಗೆ ಮನೆಯಿಂದ ಹೊರ ಬಂದ ಅಮ್ಮ
“ ಏ .. ಪರಿ … ! ಏನಾಯ್ತೇ ನಿಂಗೆ !! ಎಂದು ಸಿಟ್ಟಿನಿಂದ ಪರಿಯ ಕೈಯಲ್ಲಿನ ಪೊರಕೆ ಅಮ್ಮಳ ಕೈ ಸೇರಿತು.
“ ಅಮ್ಮಾ… ! ಎಂದು ಜೋರಾಗಿ ಚೀರಿದಳು. ಆ ಪೊರಕೆ ಮ್ಯಾಲೆ ಅದ್ಯವುದೋ ಹುಳ ಇತ್ತು. ನನ್ನ ತಲೆ ಮೇಲೆ ಬಂದಂತಾಯ್ತು. ಅದಕ್ಕೆ ಸುಮ್ಮನೆ ನಿಂತಿದ್ದೆ ಅಮ್ಮ ಎಂದು ಪರಿ ನೆಪ ಹೇಳಿದಳು.
“ ಅದ್ಯಾವುದೇ ಹುಳ ! ಅದು ಎಲ್ಲೇ ಅದಾ ? ಸರಿ ಬೇಗ ಕಸ ಗುಡಿಸು ಶಾಲೆಗೆ ಹೊತ್ತಾಯಿತು. ಎಂದು ಹೇಳಿ ನಡೆದಳು.
“ ಸರಿ ಅಮ್ಮ…! ಎಂದ ಪರಿ.. ಪೊರಕೆಯ ಎಲ್ಲಾ ಕಡ್ಡಿಗಳು ಬೇರೆ ಬೇರೆ ಮಾಡಿ ಬಿಚ್ಚಿಡುತ್ತಾ, ಎಲ್ಲಾ ಬೇರೆ ಬೇರೆ ಮಾಡಿದಳು”. ಒಂದೆಡೆ ಟಿ. ವಿ. ಸದ್ದು, ಮತ್ತೊಂದೆಡೆ ಅಮ್ಮಳ ಅವಸರದ ಕೂಗು.
“ ಕಸ ಹೊಡೆಯೊದು ಆಯಿತೇನೆ…? ಏ, ಪರಿ ! ಎಂದು ಪುನಃ ಕೂಗಿದ ಅಮ್ಮಳ ಮಾತು, ಕಲ್ಲು ಬಂಡೆಯಂತಿದ್ದ ಪರಿಯಿಂದ ಯಾವ ಪದದ ಪ್ರತಿಕ್ರಿಯೆ ಬರದಿದ್ದಕ್ಕೆ ಅಮ್ಮಳು ಮತ್ತೆ ಬಂದಳು. ಅಲ್ಲಿ ಕಸ ಗುಡಿಸಿದ ಲಕ್ಷಣಗಳಿಲ್ಲ. ಕಸ ಗುಡಿಸಲು ಪೊರಕೆ ಇಲ್ಲ . ಅಮ್ಮ ಗಾಬರಿಯಿಂದ ವಿಚಲಿತಗೊಂಡು,
“ಇದೇನ್ ಮಾಡಿದ್ದೇ ಪರಿ… ! ಏನಾಯ್ತೆ ನಿನಗ ? ” ಎಂದು ಗಾಬರಿಯಲ್ಲಿ ಅಮ್ಮ ಪರಿಯ ಭುಜಕ್ಕೆ ಒಂದೇಟಿನ ಬಿಸಿ ಮುಟ್ಟಿಸಿದಳು.
“ ಸ್ವಲ್ಪ ತಡಿಯಮ್ಮ ….! ಅದೇನು ? ಆ ಟಿ.ವಿ. ಮಾದ್ಯಮದವರ ತರಹ ಅವಸರವಸರ ಮಾಡ್ತಿಯಾ ? ಸ್ವಲ್ಪನಾದರೂ ಸಮಾಧಾನದಿಂದ ಇರು ಅಮ್ಮ. ಯಾಕೆ ? ಏನು ? ಅಂತ ವಿಚಾರಿಸು. ಎಲ್ಲಾ ಬಿಚ್ಚಿಟ್ಟು ಬಯಲಿಗೆ ಬಿದ್ದಿರುವ ಬಾರಿಗೆನೆ ಅಷ್ಟೋಂದು ಸಮಾಧಾನವಾಗಿರುವಾಗ, ನಿನಗೇತಕೆ ಅವಸರ ಅಮ್ಮ ?” ಎಂದು ಪರಿಯ ಬಾಯಿಂದ ನೀತಿಯ ನುಡಿಗಳು ಹೊರ ಬಂದವು.
“ ಏನಾಯ್ತೇ ! ಪರಿ ನಿನಗ ! ಇವಾಗೆ ಚನ್ನಾಗಿದ್ದಿಯಲ್ಲೇ …. ಅಯ್ಯೋ…. ! ದೇವರೆ, …. ! ನನ್ನ ಮಗಳಿಗೆ ಏನಾಯ್ತೋ….! ಏನೋ ! ಇವಳ್ಯಾಕೆ ಹೀಗೆ ಹುಚ್ಚುಚ್ಚು ಆಡ್ತಿದ್ದಾಳೊ ! ಏನೊ ! ಎಂದು ಅಮ್ಮ ಹಣೆ ಹಣೆ ಬಡಿದುಕೊಳ್ಳುವಾಗ, ಪರಿ ಅಮ್ಮಳ ಕೈ ಹಿಡಿದು,
“ ಅಮ್ಮ ಕ್ಷಮಿಸು. ಅದೇನೋ ಅರುಗೇಡಿ ತರ ಏನೇನೋ ಮಾತಾಡಿದೆ.
“ ಇರಲಿ ಬಿಡೇ… ! ಆಗಿದ್ದಾದರೂ ಏನು ? ಸರ್ಯಾಗಿ ಹೇಳು. ಎಂದಳು ಅಮ್ಮ.
“ ಅಮ್ಮ ಈ ಒಂದು ಬಾರಿಗೆಯ ಬಾಳಿಕೆ ಎಷ್ಷು ತಿಂಗಳಮ್ಮ”
“ ನಾಲ್ಕರಿಂದ ಐದು ತಿಂಗಳು”
“ ಈ ಬಾರಿಗೆ ಬಿಡಿ ಬಿಡಿಯಾಗಿ ಭಾಗಿಸಿ, ಒಂದೊಂದೇ ಕಡ್ಡಿಯಿಂದ ಕಸ ಗುಡಿಸಿದರೆ, ಒಂದೆರಡು ವರ್ಷಗಳ ವರಗೆ ಹೋಗಬಹುದೇನಮ್ಮ” ?
“ ಅದ್ಹೇಗೆ ಸಾಧ್ಯ ? ಏನ್ ತಲೆ ಒಡಕ್ ಇದ್ದೇ…? ಹುಚ್ಚಳಂತೆ ಮಾತಾಡ್ತಾ ಇದ್ದಿ.
ಬಿಡಿಸಿಟ್ಟರೇ ಕಸ ಗುಡಿಸೊದು ಹೇಗೆ ? ಈ ರೀತಿ ಬಿಡಿ ಬಿಡಿ ಚಲ್ಲಾಪಿಲ್ಲಿ ಮಾಡಿ ಬೀಸಾಡಿದ ಎಲ್ಲಾ ಎಸಳುಗಳು ಸೇರಿದರೆ ಒಂದು ಬಾರಿಗೆ. ಅದೇ ಕಸ ಗುಡಿಸಲು ಒಂದು ಪೊರಕೆ ಆಗುತ್ತದೆ. ಇಲ್ಲ ಅಂದ್ರೆ ಮನೆನೆ ಕಸದ ತೊಟ್ಟಿ ಆಗುತ್ತದೆ. ಆಯ್ತು ಸಾಕು ಬಿಡು ನಿನ್ನ ಮುಠಾಳತನದ ಪ್ರಶ್ನೆಗಳನ್ನ”. ಎಂದು ಅಮ್ಮ ಕೋಪದಲ್ಲಿ ಗದರಿಸಿದಳು.
“ ಅಮ್ಮಾ….! ಗರಿಬರು, ಸೌಕಾರರು, ಗಂಡು, ಹೆಣ್ಣು, ಆ ಜಾತಿ, ಈ ಜಾತಿ, ಎಂದು ಬಡಿದಾಡುವುದು. ಆ ಧರ್ಮ ಈ ಧರ್ಮ ಅಂತ ಹೊಡೆದಾಡುವುದು. ನಾವೆಲ್ಲ ಹೀಗೇ… ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಬೇರೆ ಬೇರೆಯಾಗಿ ಒಗ್ಗಟಿಲ್ಲದೆ ಬದುಕಿದರೆ, ನಮ್ಮ ದೇಶದಲ್ಲಿ ಜಿಡ್ಡುಗಟ್ಟಿರುವ ಹೊಲಸು ಕಸ ಗುಡಿಸೋದು ಹ್ಯಾಗೆ ? ಆ ದೇವರು ಈ ದೇವರು ಅಂತ ಇಲ್ಲ ಸಲ್ಲದ ಗುಲ್ಲು, ಕಪೋಲ ಕಲ್ಪಿತ ದೇವರ ಹೆಸರಿನಲ್ಲಿ ಸುಲಿಗೆ, ವಂಚನೆ ಎಬ್ಬಿಸಿದರೆ, ಮನದೊಳಗೆ ನಿರ್ಮಳ ಎಲ್ಯಾದ ? ದೇಶ್ಯಾದಾಗ ಶಾಂತಿ ಎಲ್ಯಾದ. ಎಂದಳು ಪೊರಕೆ .
“ ವ್ಹಾ… ವ್ಹಾ… ಏನೇ ಪರಿ … ಎಷ್ಟೊಂದು ಚನ್ನಾಗಿ ತಿಳ್ಕೊಂಡಿದ್ದೇ… ಹೇಳು ಹೇಳು ಹಾಗೆ ಮುಂದೆ ಹೇಳು”.
“ ಈ ಸೊಡ್ಡು (ಬಾರಿಗೆ) ಬಿಚ್ಚಿ ಬಿಡಿಯಾಗಿಸಿ ಬೀಸಾಡಿದರೆ, ಕಸ ಗುಡಿಸಲು ಹೇಗೆ ಸಾಧ್ಯವಿಲ್ಲವೋ… ! ಹಾಗೆನೇ, ನಾವೆಲ್ಲರೂ ಮೌಢ್ಯತೆ, ಧರ್ಮಾಂಧತೆ, ಜಾತೀಯತೆ, ಮೇಲು ಕೀಳಿನ ಕೊಳೆ ತೊಲಗಿಸಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೈಗೂಡಿಸಿಕೊಂಡರೆ, ನಮ್ಮ ನಮ್ಮ ಧರ್ಮಗಳಲ್ಲಿನ, ನಮ್ಮ ನಮ್ಮ ಸಮಾಜದಲ್ಲಿನ ಈ ಹೊಲಸು ಕಸ ಗುಡಿಸಲು ಸಾಧ್ಯವಿಲ್ಲೇನಮ್ಮ ? ನಮ್ಮ ದೇಶ ಬರಿ ಹೇಳಿಕೆಗಳಿಂದ ವಿಶ್ವಕ್ಕೆ ಗುರುವಾಗು ವುದಾದರೂ ಹೇಗೆ ? ಎಂದು ತಾರ್ಕಿಕ ಪ್ರಶ್ನೆ ಕೇಳಿದಳು.
“ ಬಹಳ ಸರಿಯಾಗಿ ಹೇಳ್ದೆ ನೋಡು ಪರಿ. ಇದೆಲ್ಲ … ಈ ಮತಾಂಧರಿಗೆ, ದೇಶದ್ರೋಹಿಗಳಿಗೆ, ಸ್ವಾರ್ಥಿಗಳಿಗೆ ಅರ್ಥವಾಗಲ್ಲ ನೋಡು. ಇದಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಎಂದು ಅಮ್ಮಳು ನುಡಿಗೆ ನುಡಿ ಜೋಡಿಸಿದಳು.
“ ಅಮ್ಮ ಇಂದಿನಿಂದ ನಮ್ಮ ಮನೇಲಿ ಜಾತಿ, ಭೇಧ, ಮೇಲು ಕೀಳು, ಮೌಢ್ಯತೆ, ಧರ್ಮಾಂಧತೆ ಬಿತ್ತುವ ಕಾಲ್ಪನಿಕ ದೇವರುಗಳಿಗೆ ಮತ್ತು ನರಿಬುದ್ಧಿ ನರರಿಗೆ ಸ್ಥಾನವಿಲ್ಲ. ಈ ಬಾರಿಗೆಯ ಒಗ್ಗಟ್ಟಿನ ನೀತಿ ನಮಗೆ ಆತ್ಮಬಲ. ತರ್ಕವಿಲ್ಲದ ಮೂರ್ಖತನದ ಆ ಕಾಲ್ಪನಿಕತೆಯ ಬದಲಿಗೆ, ದುಡಿದು, ಸವೆದು, ಸೊರಗಿ, ಸೋತರೂ, ಬಿಡದೇ ಸಮಾಜವನ್ನು ಶುಚಿಗೊಳ್ಳಿಸುವ ಈ ಪೊರಕೆಯನ್ನು ಗೌರವಿಸುತ್ತೇನೆ. ಇದು ನನ್ನ ಮೊದಲ ಆದ್ಯತೆ ! ನಿಮಗಾಗಿ… .
– ದೇವೇಂದ್ರ ಕಟ್ಟಿಮನಿ ದೈ.ಶಿ.ಶಿ. ಕಮಲಾಪುರ, ಕಲಬುರಗಿ ಜಿಲ್ಲೆ.