ಅದೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಲಲಿತ ಅಂತ ಒಬ್ಬಳು ಗೃಹಿಣಿ. ಅವಳು ನೋಡಲು ಬಹಳ ಸುಂದರಿ. ಒಂದು ದಿನ ದಾರಿಯಲ್ಲಿ ಹೋಗುತ್ತಿದ್ದಾಗ ಅವಳ ಸ್ನೇಹಿತರು “ಏನವ್ವಿ, ಎತ್ಲಾ ಕಡೆ ಹೊಂಟೆ, ನಮಗು ಸ್ವಲ್ಪ ಹೇಳು, ಅದೇನು ಕೆಲ್ಸ ಅಂತ ನಾವೂ ಮಾಡ್ತೀವಿ, ಅಂತ ರಾಗ ತೆಗೆದರು. ಲಲಿತ ‘ಯೇ, ಒಸಿ, ಸುಮ್ಕಿರ್ರಿ, ಕೆಲ್ಸ ಆಗೋ ಮುಟ್ಟ, ಯಾರ್ಗು ಹೇಳ್ಬೇಡ ಅಂದವನೇ ನನ್ನ ಯಜಮಾನ. ಕೆಲ್ಸ ಆದ ತಕ್ಷಣ ಹೇಳು ಅಂದಿದ್ದಾನೆ. ಕಣ್ರಮ್ಮಿ. ಅಂತ ಸರ ಸರ ಓಡಿ ಆಟೋ ಹಿಡಿದುಕೊಂಡು ಮಾರ್ಕೆಟ್ ಗೆ ಹೊರಟಳು. ಅವಳ ಸ್ನೇಹಿತರು ಅವಳ ಅಂದವನ್ನು ಕಣ್ತುಂಬಿ ಕೊಂಡು ನೋಡುತ್ತಿದ್ದರು.
ಹಾಲು ಬಿಳಿ ಬಣ್ಣದ ಅವಳ ಮುಖದಲ್ಲಿ ಏನೋ ಆಕರ್ಷಣೆ. ಉದ್ದ ಮೂಗು. ಬಟ್ಟಲು ಕಣ್ಣುಗಳು ನೋಡುವವರಿಗೆ ಬೆರಗಾಗಿಸುತ್ತಿತ್ತು. ಆದರೆ ಸ್ವಲ್ಪವೂ ಅಹಂಕಾರ ಇರಲಿಲ್ಲ. ಎಲ್ಲರ ಜೊತೆಯಲ್ಲಿ ನಗುತ್ತಾ ಮಾತನಾಡುತ್ತಿದ್ದಳು. ಅವಳು ಉದ್ದ ಜಡೆಯನ್ನು ಕಟ್ಟಿಕೊಂಡು ಹೂ ಮೂಡಿದರಂತೂ ಲಲಿತಾ ದೇವಿಯನ್ನೇ ನೋಡಿದಂತೆ ಕಾಣುತ್ತಿತ್ತು. ಬಿಳಿಯ ಪಾದಗಳು ಗೆಜ್ಜೆ ಅಲಂಕಾರದಲ್ಲಿ ಮುದ್ದಾಗಿ ಕಾಣುತ್ತಿತ್ತು.ಅವಳ ಯಜಮಾನರು ಆ ಊರಿನ ಶಾಲೆಯ
ಶಿಕ್ಷಕನಾಗಿದ್ದರು . ಈಶ್ವರ್ ಸರ್ ಎಂದರೆ ಆ ಊರಿನ ಮಕ್ಕಳು, ದೊಡ್ಡವರಿಗೆಲ್ಲಾ ಅಚ್ಚು ಮೆಚ್ಚು. ಮಾಸ್ಟರ್ ಹೆಂಡತಿ ಲಲಿತಾ ಅಂದರೆ ಗೌರವ. ಅವಳು ಪಕ್ಕದ ಹಳ್ಳಿಯಲ್ಲೇ ಹುಟ್ಟಿ ಬೆಳೆದು ಬಂದ ಕಾರಣ ಎಲ್ಲರೂ ಪರಿಚಯ. ಈಶ್ವರ್ ಸೋದರ ಮಾವನ ಮಗ ಲಕ್ಷ್ಮಿ ಯವರಿಗೆ ಅಂದರೆ ಲಲಿತಾ ತಾಯಿಗೆ. ಸಂಬಂಧದಲ್ಲೇ ಮದುವೆ ಮಾಡಲು ನಿರ್ಧಾರ ತೆಗೆದುಕೊಂಡು, 18 ವರ್ಷಕ್ಕೇ ಮದುವೆ ಮಾಡಿದರು. ಲಲಿತಾ ಪಿ ಯು ಸಿ ವರೆಗೆ ಓದಿದ್ದಳು. ಹಳ್ಳಿ ಹುಡುಗಿ ಯಾವುದಕ್ಕೂ ಹೆದರುತ್ತಿರಲಿಲ್ಲ.ತನ್ನ ಗಂಡನಿಗೆ ಸದಾ ಯಶಸ್ಸನ್ನು ಬಯಸುತ್ತಿದ್ದಳು.
ಅಂದು ತನ್ನ ಯಜಮಾನ ಒಂದು ತೋಟವನ್ನು ಖರೀದಿ ಮಾಡಲು ಆ ಹಳ್ಳಿಯಲ್ಲಿ ಒಬ್ಬರಿಗೆ ಹೇಳಿದ್ದನು ಅದನ್ನು ಇವತ್ತು ತೋರಿಸುತ್ತಾರೆ. ಎಂದು ಬೇಗ ಬೇಗ ಆಟೋ ಹಿಡಿದುಕೊಂಡು ಬಂದಿದ್ದಳು ಅವಳು ತೋಟವನ್ನು ತೆಗೆದು ಕೊಳ್ಳಲು ತುಂಬಾ ಆಸೆಯಿಂದ ಕಾಯುತ್ತಿದ್ದಳು. ತೋಟದಲ್ಲಿ ಗಿಡಮರಗಳ ಜೊತೆ ಮಾತನಾಡಲು ಅವಳಿಗೆ ಇಷ್ಟ. ಅದಕ್ಕೆ ಒಂದು ಸಣ್ಣ ಎರಡು ಎಕರೆ ತೋಟ ಖರೀದಿ ಮಾಡಲು ತನ್ನ ಗಂಡನಿಗೆ ಹೇಳುತ್ತಿದ್ದಳು.
ಈಗ ಅವಳು ತೋಟವನ್ನು ತೆಗೆದುಕೊಂಡು ಅದಕ್ಕೆ ಮನಸ್ಸಿಟ್ಟು ಪೂಜೆ ಮಾಡಿ ಬೋರೆವೆಲ್ ತೆಗೆಸಿ, ಅಡಿಕೆ ಸಸಿಗಳನ್ನು ನೆಟ್ಟಳು. ಅವು ಸ್ವಲ್ಪ ದೊಡ್ಡದಾದ ಮೇಲೆ ಅದರ ನಡುವೆ ಬಾಳೆಗಿಡಗಳನ್ನು ನೆಟ್ಟಳು ಅವಳಿಗೆ ಪತಿ ಈಶ್ವರ್ ಸಹಾಯವು ಸಿಗುತ್ತಿತ್ತು. ಇಬ್ಬರೂ ದುಡಿದು ಪ್ರತಿ ವರ್ಷ ಲಾಭ ಪಡೆದುಕೊಂಡರು. ಈಗ ಅವರು ಇಬ್ಬರಲ್ಲ ಮೂವರು. ಅವರ ಕರುಳ ಕುಡಿ ಮಗ ಅವರ ಬಾಳಿಗೆ ಬಂದಿದ್ದನು.
ಮಗ ಸುಬ್ರಮಣ್ಯ ನೋಡಲು ಸುಂದರವಾಗಿದ್ದನು. ಪ್ರತಿದಿನ ಅವನಿಗೆ ದೃಷ್ಟಿ ತೆಗೆದು ಹಾಕುತ್ತಿದ್ದರು. ಅವರ ದಾಂಪತ್ಯ ನೋಡಿ ಜನರು ಬದುಕಿದರೆ ಲಲಿತ ಮತ್ತು ಈಶ್ವರ್ ಥರ ಬದುಕಬೇಕು ಎಂದು ಹೇಳುತ್ತಿದ್ದರು.
-ಭಾರತಿ ಬಾಯಿ
ಸ ಶಿ ದುರ್ಗಿಗುಡಿ
ಶಿವಮೊಗ್ಗ