ಗ್ರಾಮ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಹೋರ ಬಿದ್ದಿದೆ ತಡ ಊರಲೆಲ್ಲ `ಎಲೇಕ್ಷನ್’ ಗುಲ್ಲೆದ್ದಿತ್ತು. ಓಣಿ ಓಣಿಗಳಲ್ಲಿಯ ಎಲ್ಲ ಜನರ ಬಾಯಲ್ಲೂ ಒಂದೇ `ಎಲೇಕ್ಷನ, ಎಲೇಕ್ಷನ್,ಎಲೇಕ್ಷನ್.’ ಈ ಮಾತು ಊರ ತುಂಬೆಲ್ಲ ಬಳ್ಳಿಯಂತೆ ಪಸರಿ ಬಿಟ್ಟಿತ್ತು. ಆಲದ ಕಟ್ಟೆಯ ಮೇಲೆ ಜನರ ಚರ್ಚೆ ಮುಂದುವರೆದಿತ್ತು. “ ಈ ಸಲ ಯಾರು ನಿಲ್ತಾರೆ ? ಯಾರು ಗೆಲ್ತಾರೆ ?’’ ಎಂಬ ಪ್ರಶ್ನೆಗಳು ಒಂದೆಡೆಯಾದ್ರೆ “ಅವನನ್ನು ಗೆಲ್ಲಿಸಿದ್ರೆ ಚಂದ. ಇವನನ್ನು ಗೆಲ್ಲಿಸಿದ್ರೆ ಚಂದ.’’ ಅನ್ನೊ ಮಾತುಗಳು ಕೇಳಿ ಬರುತಿದ್ದವು. “ಆ ಕುರ್ಸಾಲ್ಯ ನನ್ ಮಕ್ಳಿಗೆ ಈ ಸಲ ಚೋಲೊ ಬುದ್ಧಿ ಕಲಿಸಬೇಕು. ಹ್ವಾದ ಸಲ ಆರಿಸಿ ಬಂದೊರು ಏನು ಮಾಡದೆ, ತಮ್ಮ ಸ್ವಾರ್ಥಕ್ಕೆ ಮಾಡಿಕೊಂಡಿದ್ದಾರೆ. ಈ ಸಲ ಅವಕ್ಕೆ ಪಾಠ ಕಲ್ಸಬೇಕು.’’ ಅಂತ ಚುಟ್ಟಾ ಸೇದ್ತಾ ಲಕ್ಕಜ್ಜಿ ಹೇಳಿದ.
“ಏ, ಮುದಕ್ಕಾ ! ಹಿಂದೆ ಬಂದೋರು ಯಾರೇನು ಮಾಡ್ಯಾರ ? ನಿಂಗೇನು ಗೊತ್ತಾದ ? ಸುಮ್ಕೀರು. ಈ ಸಲ ಮತ್ತೇ ಅವರೆ ಬರ‍್ತಾರೆ. ಅವರ ಕೈ ಮ್ಯಾಲ್ ಆಗೋ ಕೆಲ್ಸ ಇನ್ನೂ ಅರ್ಧಕ್ಕೆ ನಿಂತಾವೆ. ಅವು ಪೂರ್ತಿಯಾಗಬೇಕಾದ್ರೆ ಅವರನ್ನೆ ಗೆಲ್ಲಿಸಬೇಕು.’’ ಅಂತ ಕಾಳಪ್ಪ ಸಾಹುಕಾರ ನಡುವೆ ಮಾತಾಡಿ ಮುದುಕನ ಬಾಯಿ ಮುಚ್ಚಿಸಿದ. ಕಾರಣ ಆತ ಅವರಿಗೆ ಕಾಮಗಾರಿ ಟೆಂಡರ್ ಹಾಕಲು ಸಾಲ ನೀಡಿದ.
“ಇಲ್ಲ ! ಇಲ್ಲ ! ಈ ಸಲ ಹೊಸ ಕುದುರೆನೆ ರೆಡಿ ಮಾಡಬೇಕು’’ ಅಂತ ಹೊಲೆಯಾರ್ ಸುಬ್ಬುನ ವಾದ. ಅದ್ರೆ ಆರಿಸಿ ಬರೋರು ನಾವು ಹೇಳಿದಷ್ಟೇ ಕೇಳಬೇಕು ಅನ್ನೋದು ಊರ ಗೌಡ್ರ ಲೆಕ್ಕಚಾರ.
“ಎಲ್ಲಾ, ಗೌಡ್ರದೆ ಆಗ್ಯಾದ. ಗೌಡಕಿ ನಿಂತ್ಹೋದ್ರು ,ಹಿನ್ನಾ ಇವ್ರ ಗದ್ದಲ ನಿಂತ್ತಿಲ್ಲ. ಈ ಸಲ ಅವ್ರು ನಿಲ್ಸಿದ ಕ್ಯಾಂಡೆಟ್ ಗೆ ಸೊಲಿಸಲೆಬೇಕು” ಅಂತ ಕೆಲವರು ಗೌಡರ ವಿರುದ್ಧವು ಸಿಟ್ಟು ತೊರ್ಪಡಿಸುತ್ತಿದ್ದರು.
“ಕಳೆದ ಸಲ ಸುರೇಶನ ಗೆಲ್ಲಿಸಿದ್ದಿವಿ. ಅವಾ, ಏನು ಮಾಡ್ದಾ ?. ಈ ಸಲ ಅವನ ಬಿಟ್ಟು ರಮೇಶನ ಗೆಲ್ಲಿಸಬೇಕು” ಅನ್ನೊರು ಒಂದೆಡೆಯಾದರೆ,ಇವರಿಬ್ಬರ ನಡುವೆ ಬೀರನ ಗೆಲ್ಲಿಸಬೇಕು ಅಂತ ಮತ್ತೊಂದು ಬಣ. ಈ ಸುರೇಶ,ರಮೇಶ,ಬೀರ ಯಾರು ಬೇಡ ನನ್ನದೆ ಒಂದು ಕ್ಯಾಡೆಟ್ ಇರ‍್ಲಿ ಅಂತ ನೂರಂದಯ್ಯ ವಡ್ಡರ ಮರೇಪ್ಪಜ್ಜನ ರೆಡಿ ಮಾಡಿದ್ರು.
“ ಈ ಸುರೇಶ ಮತ್ತು ರಮೇಶ ಈ ಹಿಂದೆ ಒಬ್ಬರ ನಂತರ ಒಬ್ಬರು ಆರಿಸಿ ಬಂದವರೆ ನಾನೆ ಅವರಿಗೆ ಬೆಂಬಲಿಗನಾಗಿ ಗೆಲ್ಲಿಸಿದ್ದು.ಆದ್ದರಿಂದ ಈ ಸಲ ನಾನು ನಿಂತು ಗೆಲ್ಲಬೇಕು” ಅಂತ ಬೀರ ವಿಚಾರ ಮಾಡಿದ.
ಬೀರ ದಲಿತ ಕೇರಿಯ ಬಡ ಕುಟುಂಬದಲ್ಲಿ ಹುಟ್ಟಿದರು ಕೂಡ ಸದಾ ಗ್ರಾಮಾಭ್ಯುದಯದ ಬಗ್ಗೆ ಯೋಚಿಸುತ್ತಿದ್ದ. ಊರಲ್ಲಿನ ಜನರಿಗೆ ಸಮಯಕ್ಕೆ ಸರಿಯಾಗಿ ನೀರು,ಬೆಳಕು, ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಮತ್ತು ಬಡ ಕುಟುಂಬಗಳಿಗೆ ವಾಸಿಸಲು ಸೂಕ್ತ ಮನೆಗಳಿಲ್ಲದಿರುವುದು ಹಾಗೂ ಅವರು ಮುಂಬೈ -ಪುಣೆೆಗೆ ಕೆಲಸಕ್ಕೆ ವಲಸೆ ಹೋಗೊದು ನೋಡಿ “ಈ ಸಲ `ಎಲೇಕ್ಷನ್’ ನಲ್ಲಿ ಗೆದ್ದು ಅದೃಷ್ಠ ಒಲಿದರೆ ಅಧ್ಯಕ್ಷನಾಗಿ `ಗ್ರಾಮರಾಜ್ಯ ರಾಮರಾಜ್ಯ’ಎಂಬ ಗಾಂಧಿ ತಾತನ ಸ್ವಚ್ಚ ಭಾರತದ ಕನಸ್ಸು ಏಕೆ ನನಸು ಮಾಡಬಾರದೆಂದು ಯೋಚಿಸುತ್ತಾ ದಲಿತ ಕೇರಿ ಸಮುದಾಯ ಭವನದಲ್ಲಿ ಸಭೆ ಕರೆದು ತಾನು `ಎಲೇಕ್ಷನ್’ ನಿಲ್ಲುವ ಬಗ್ಗೆ ಖಚಿತ ಪಡಿಸಿದ. ಈ ವಿಷಯ ಊರಲ್ಲಿನ ಜಾತಿವಾದಿಗಳ ಕಿವಿಗೆ ಬಿದ್ದು “ಏ, ಈ ಸಲ ಬೀರ ಚುನಾವಣೆಗೆ ನಿಲ್ತಾನಂತ್ರೋ! ಅವಾ ಬಂದ್ರೆ ನಮ್ ಆಟ ಏನೂ ನಡೆಯೊಲ್ಲ. ಅವ್ನಿಗಿ ಓಟ ಹಾಕ್ಬೇಡ್ರಿ. ಅವ್ನ ಬದಲು ಗುಡ್ಡದ ಬೀರನಿಗೆ ರೆಡಿ ಮಾಡ್ರಿ ” ಅಂತ ಅದೇ ಹೆಸರಿನವ ಊರ ಬಿಟ್ಟು ಒಂದು ಕಿ.ಮಿ. ಹೊರಗೆ ಕಾಡು ಜನರಂತೆ ವಾಸಿಸುತ್ತಿರುವ ವ್ಯಕ್ತಿಯೊಬ್ಬನ ತಯಾರಿ ನಡೆದಿತ್ತು.ಕಾರಣ ಬೀರ ತುಂಬ ಹೋರಾಟವಾದಿ ಆತ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಕೂಡ ಅದರ ವಿರುದ್ಧ ಪ್ರತಿಭಟಿಸುತ್ತಿದ್ದ. ಮತ್ತು ಆತ ಚಿಕ್ಕಂದಿನಲ್ಲಿಯೆ ಅಸ್ಪೃಶ್ಯತೆಯ ವಿರುದ್ದ ಹೋರಾಟ ಮಾಡಿದ ಆಗ ಊರ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ದಲಿತರು ಸವರ್ಣಿರ ಬಾವಿಯ ನೀರು ಮುಟ್ಟುವ ಹಾಗಿರಲಿಲ್ಲ. ಹೋಟೆಲ್ ನಲ್ಲಿ ಅವರಿಗೆ ಚಹಾ ಎತ್ತಿ ಹಾಕೋದು ಜಾತಿಯಿಂದ ಕೀಳಾಗಿ ಕಾಣೊದು, ದಲಿತರ ಕೇರಿಗಳಲ್ಲಿ ಸವರ್ಣಿಯರು ತಿಪ್ಪೆಯ ಕಸ ಎಸೆಯುವುದು,ರಾತ್ರಿ ಹೊತ್ತಿನಲ್ಲಿ ಬೆಳಕಿಲ್ಲದ ದಲಿತ ಕೇರಿಯ ಕಡೆಗೆ ಬಂದು ಕಕ್ಕಸ ಮಾಡೊದು, ಕೇಳಲು ಹೋದವರಿಗೆ “ಹೊಲಗೇರಿ ಅಂದ್ರೆ ಮತ್ ಹ್ಯಾಂಗ್ ಇರ‍್ತದ” ಅಂತ ಆ ಮಾಲಿಪಾಟೀಲನೆ ಕಾಲು ಕೆದರಿ ಜಗಳ ತೆಗೆದದ್ದು, ಕಟಿಂಗ್ ಮಾಡಲು ಆ ವ್ಯಕ್ತಿ ನೀರಾಕರಿಸೋದು ಇವುಗಳೆಲ್ಲ ಅಂಬೇಡ್ಕರರ ಜೀವನ ಚರಿತ್ರೆಯಲ್ಲಿ ಓದಿ ತಿಳಿದ ಬೀರ ನಮ್ಮೂರಿನಲ್ಲೂ ಇಂತಹ ಕೆಟ್ಟ ಪದ್ದತಿ ಇನ್ನೂ ಜೀವಂತವಾಗಿದೆಯಲ್ಲ ? ಅದರ ಹುಟ್ಟಡಗಿಸಬೇಕು ಅಂತ ನಿರ್ಧರಿಸಿ, ಅಂಬೇಡ್ಕರ ಕಾಳರಾಮ ಗುಡಿ ಪ್ರವೇಶ ಮಾಡಿ, ಚೌಡರ ಕೇರೆಯ ನೀರು ಕುಡಿದಂತೆ ಈತ ಊರಲ್ಲಿನ ಗುಡಿ ಪ್ರವೇಶ ಮಾಡಿ,ಅವರ ಬಾವಿಗೆ ಇಳಿದು ಗದ್ದಲು ಮಾಡಿದ್ದರಿಂದ ಬೀರನಿಗೆ ಚುನಾವಣೆಯಲ್ಲಿ ಗೆಲ್ಲಿಸಬಾರದು ಅನ್ನೊ ಮಾತು ಒಳಗೊಳಗೆ ಚರ್ಚೆಯಾಗುತ್ತಿತ್ತು.
“ಗೌಡ್ರೆ, ನಮ್ ಬೀರ `ಎಲೇಕ್ಷನ್’ ನಿಲ್ತಾನಂತೆ ದಲಿತ ಕೇರಿಯಲೆಲ್ಲ ಅದೇನೋ ಊರು ಉದ್ದಾರ ಮಾಡ್ತಿನಿ. ನೀವು ನಂಗೆ ಓಟ ಹಾಕಿ ಅಂತ ಕೇಳ್ತಾನೆ.’’ ಅಂತ ಬೀರನ ದಾಯಾದಿಯೊಬ್ಬ ಗೌಡ್ರ ಮುಂದೆ ಹಳೆ ಪುಟ ಬಿಚ್ಚಿಟ್ಟ.
“ಅಲ್ಲ ಗೌಡ್ರೆ ! ಹತ್ತು ವರ್ಷದ ಹಿಂದೆನೆ ಅವಾ ಊರ ಗುಡ್ಯಾಗ್ ಹೋಗಿ, ಜಗಳ ತೆಗೆದದ್ದು, ಚಿಕ್ಕ ಧಣೆರಿಗೂ ಅವುಂಗೂ ಕೈ ಬಾಯಿ ಆದದ್ದು, ಕೊನೆಗೆ ಅವುನೆ ಅದೇಂಥದೋ `ಅಟರಾ ಸಿಟಿ’ ಅಂತ ಹೆದರಿಸಿ ಕೇಸ್ ಮಾಡಿ ವಾಪಾಸ್ ತಗೊಂಡಿದ್ದು, ನಿಮ್ಗೆ ನೆನಪಿಲ್ಲೇನು ? ನೀವು ಹ್ಯಾಂಗೆ ಅವ್ನಿಗೆ ಓಟ ಹಾಕ್ತಿರಿ ?’’ ಅಂತ ಹೊಟ್ಟೆ ಕಿಚ್ಚಿನಿಂದ ಬೀರನ ಬಗ್ಗೆ ಮಾತಾಡಿದ.
ಚುನಾವಣೆಯ ದಿನಾಂಕ ಪ್ರಕಟವಾದಂತೆ ಗ್ರಾಮದ ಎಲ್ಲ ಮೂರು ಸ್ಥಾನಗಳಿಗೆ ಉಮೇದುವಾರರು ನಾಮಪತ್ರ ಸಲ್ಲಿಸಿದರು. ಅದರಲ್ಲಿ ಬೀರ ಪರಿಶಿಷ್ಠ ಜಾತಿ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ. ಅವನೆದುರಿಗೆ ಮತ್ತೊಬ್ಬ ಗುಡ್ಡದ ಬೀರ ಸೇರಿ ಮೂರು ಜನ, ಇವಾ ಒಬ್ಬ ಒಟ್ಟು ನಾಲ್ಕು ಜನ ಸ್ಪರ್ಧೆಗಿಳಿದರು.ಅದೇ ವಾರ್ಡಿನಲ್ಲಿ ಇದ್ದ ಇನ್ನೂ ಎರಡು ಪರಿಶಿಷ್ಠ ಪಂಗಡದ ಮಹಿಳಾ ಮತ್ತು ಪುರುಷ ಸ್ಥಾನಗಳಿಗೆ ತಲಾ ಇಬ್ಬರು ನಾಮಪತ್ರ ಸಲ್ಲಿಕೆಯಾಗಿತ್ತು. ಇಲ್ಲಿ ಬೀರನ ಸ್ಥಾನ ಮಾತ್ರ ಪೈಪೋಟಿ. ಯಾರಾದ್ರು ಕಣದಿಂದ ಹಿಂದೆ ಸರಿಯುತ್ತಾರೇನೋ ! ಎಂಬ ಮಾತು ಬಂದಾಗ. ಬೀರನ ಎದುರಿನಲ್ಲಿದ್ದ ಆ ಇಬ್ಬರು ದಾಯಾದಿಗಳು ನಾಮಪತ್ರ ವಾಪಾಸು ತೆಗೆದುಕೊಂಡ್ರೆ ಬೀರನ ಗೆಲುವು ಖಚಿತ ಎನ್ನುವ ಮಾತು ಕೂಡ ಕೇಳಿ ಬರತೊಡಗಿತ್ತು. ಯಾಕೆಂದ್ರೆ ಊರಲ್ಲಿ ದಲಿತ ಕೇರಿಯ ಜನರಲ್ಲಿ ಬೀರನ ಕುಟುಂಬವೆ ಇನ್ನೂರ ಐವತ್ತರಕಿಂತಲೂ ಹೆಚ್ಚು ಮತಗಳು ಇದ್ದದ್ದು, ಅವು ಒಂದ ಸೈಡ್ ಆದ್ರೆ ಉಳಿದ ಆಪ್ತ ವಲಯದ ಮತಗಳು ಪಡೆದರೆ ಅವನೇ ಗೆಲ್ಲೊದು ಖಚಿತ. ಹಾಗಾಗಿ ಅವನ ಎದುರಿಗೆ ದಾಯಾದಿಗಳು ನಿಲ್ಲುವಂತೆ ಅದ್ಯಾರೋ ಕುಂಟಗಾಲಿನವರು ಸಂಚು ಹೂಡಿದ್ದಾರೆಂದು ತಿಳಿದು ಬೆಸತ್ತು ಹೋಗಿದ್ದ. ದಾಯಾದಿ ದೊಡ್ಡಪ್ಪನ ಮಗ ರಮೇಶನಲ್ಲಿಗೆ ಹೋಗಿ “ಅಣಾ ! ಈ ಸಲ ನಾನು ಸ್ಪರ್ಧೆಗಿಳಿದಿದ್ದೇನೆ ದಯವಿಟ್ಟು ನೀನು ವಾಪಾಸ್ಸು ತೆಗೆದುಕೋ ! ’’ ಎಂದಾಗ ಅವಾ “ಇಲ್ಲ. ಪ್ರತಿಯೊಬ್ಬರಿಗೂ ಸ್ಪರ್ಧಿಸುವ ಹಕ್ಕಿದೆ .ನಾನು ನಾಮ ಪತ್ರ ವಾಪಾಸ್ ತೆಗೆದುಕೊಳ್ಳಲ್ಲ.ನನಗೆ ಊರಲ್ಲಿ ಸಾಹುಕರ‍್ರು ಓಟು ಹಾಕಿಸ್ತಿನಿ ಅಂತ ಹೇಳಿ ನಿಲ್ಸಸ್ಯಾರ ನಾನ್ಯಾಕ್ ವಾಪಾಸ್ ತಗೊಳ್ಲಿ ? ಒಂದು ವೇಳೆ ನಾ ವಾಪಾಸ್ ತಗೊಂಡ್ರೆ ಉಳಿದವರು ನಿನ್ನೊಂದಿಗೆ ಸ್ಪರ್ಧೆ ಮಾಡ್ತಾರೆ. ನೀನ್ಹೇಗೆ ಗೆಲ್ತಿ ? ಅವರವರ ಹಣೆಬರಹ ಅವರಿಗಿ ಬಿಟ್ಟಿದ್ದು. ನಾನಂತು ವಾಪಾಸ್ ತೆಗೆಯೋಲ್ಲ. ಬೇಕಿದ್ರೆ ನೀನು ತೆಕ್ಕೋ! ನಿಂಗೆ ಇಲ್ಲಿಯವರೆಗೆ ಆದ ಖರ್ಚು ನಾನೇ ಕೊಡ್ತೇನೆ.’’ ಅಂತ ಬೀರನ ಮಾತಿಗೆ ಆತ ನಿರಾಕರಿಸಿದ. ಆದರೂ ಸುರೇಶನನ್ನು ಮನ ಒಲಿಸಿ ಕಣದಿಂದ ಹಿಂದೆ ಸರಿಸಿದ್ರೆ ಹೇಗೆ ? ಅಂತ ಯೋಚಿಸಿ ಕೇಳಿದ.
“ನೋಡ ತಮ್ಮಾ ! ನಾ ನಿನ್ ವಿರುದ್ಧ ಸ್ಪರ್ಧಿಸಿಲ್ಲ. ಆ ರಮೇಶ ನಿಂತಿದ್ದಾನಲ್ಲ ? ಅವನಿಗೆ ಸೋಲಿಸಬೇಕಂತಲೆ ನಾ ನಿಂತ್ತಿರೋದು .ನೀನೇನು ವರಿ ಮಾಡ್ಕೊಬೇಡ. ನಿನಗೆ ನನ್ನಿಂದ ಯಾವುದೇ ತೊಂದರೆ ಇಲ್ಲ. ನಾನು ಆ ರಮೇಶನ ಓಟು ಹಾಳ ಮಾಡುತ್ತಿದ್ದೇನೆ ಅಷ್ಟೇ. ಒಂದು ವೇಳೆ ನಾನು ಕಣದಿಂದ ಹಿಂದೆ ಸರಿದರೆ ನನಗೆ ಬೀಳುವ ಮತಗಳು ನಿನಗೆ ಬೀಳದೆ ರಮೇಶನ ಪಾಲಾಗುತ್ತವೆ. ಮತ್ತೆ ನೀನು ಆ ಗುಡ್ಡದ ಕೇರಿಯ ಜನರ ವಿರುದ್ದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರಿಂದ ಅವರ ಮನಸ್ಸಿಗೆ ತುಂಬ ನೋವಾಗಿದೆ. ಹಾಗಾಗಿ ಅವರು ನಿನಗೆ ಅವ್ರು `ಖತಾಯಿ’ ಓಟು ಹಾಕೋಲ್ಲ ಅಂತ ಜಗಜಾಹಿರವಾಗಿದೆ. ಆದ್ದರಿಂದ ನಾನು ಕಣದಲ್ಲಿರುವುದರಿಂದ ನಿನಗೆ ಯಾವುದೇ ತೊಂದರೆ ಇಲ್ಲ. ಬೇಕಿದ್ರೆ ನೀನೇ ವಾಪಾಸು ತೆಗೆದುಕೋ ! ’’ ಅಂತ ಅವನು ಹಾಗೆ ಹೇಳಿದ.
1982 ರಲ್ಲಿ ಮುಲ್ಲಾಮಾರಿ ನದಿಯಲ್ಲಿ ಮುಳುಗಡೆಯಾಗಿ ಹೊಲ ಮನೆ ಕಳೆದುಕೊಂಡ ಕಿಣ್ಣಿ ಜನರಿಗೆ ಸರ್ಕಾರ ಪುರ್ನವಸತಿ ಸೌಕರ್ಯ ಒದಗಿಸಿ ಹಕ್ಕು ಪತ್ರ ಕೊಟ್ಟರು ಕೂಡ ಅರ್ಧದಷ್ಟು ದಲಿತ ಕೇರಿಯ ಜನ ಊರ ಹೊರಗೆ ಕಾಡು ಜನರಂತೆ ನದಿಯ ಆಚೆ ದಡದ ಗುಡ್ಡದ ಮೇಲೆ ನೆಲೆನಿಂತು, ನೀರು,ಬೆಳಕು ಶಾಲೆ ಮೊದಲಾದ ಮೂಲಭೂತ ಸೌಕರ್ಯಗಳಿಲ್ಲದೆ ಸೌಲಭ್ಯ ವಂಚಿತರಾಗಿ ಸರ್ಕಾರಿ ಗೋಮಾಳ ಭೂಮಿಯಲ್ಲಿ ಅಕ್ರಮ ಮನೆಕಟ್ಟಿಕೊಂಡು ವಾಸ ಮಾಡುತ್ತಿದ್ದರಿಂದ ಅವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಕಾರಣಕ್ಕಾಗಿ ಬೀರ ವiಕ್ಕಳ ಹಕ್ಕು ಉಲಂಘನೆ ಯಾಗಬಾರದೆಂದು ಸಾಮಾಜಿಕ ಕಳಕಳಿಯಿಂದ ಅವರಿಗೆ ಪುರ್ನವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಂತ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ. “ಹೊಲೆಯರು ಊರ ಹೊರಗಿದ್ರೆ ಚಂದ. ಅವರು ಅಲ್ಲೆ ಇರ‍್ಲಿ’’ ಅಂತ ಜಾತಿವಾದಿಗಳು ಮಾತಾಡುತ್ತಿದ್ದರಿಂದ ಅವರಿಗೆ ಊರೊಳಗೆ ತರಬೇಕೆಂದು ಬೀರ ಹಾಗೆ ಮಾಡಿದ.ಆದ್ರೆ ಅವರೆ ಈ ರೀತಿ ತಿರುಗಿ ಬಿದ್ದಿರುವುದನ್ನು ಕೇಳಿ “ ಛೆ ! ಇವನವ್ವುನ್ ನಾ ಈ ಎಲೇಕ್ಷನ್‌ಕ್ಕ ಯಾಕಾದ್ರೂ ನಿಂತನೋ ! ಮೊದ್ಲೆ ಗೊತ್ತಿದ್ರೆ ಬ್ಯಾರೆ ಯಾರನಾದ್ರು ನಿಲ್ಸಬೊದಿತ್ತು. ಈಗ ನಾನು ರಮೇಶ, ಸುರೇಶ ಹೇಳಿದಂತೆ ನಾಮಪತ್ರ ವಾಪಾಸು ತೆಗೆದುಕೊಂಡ್ರೆ ? ಜನ ಹೆದರಿದ ಅಂತಾರೆ. ಇಲ್ಲಾ ಯಾರಿಗೋ ಹಣ ತಗೊಂಡು ‘ಸೆಟ್ಲ’ ಆದ ಅಂತ ನಗ್ತಾರೆ.ಸುಮ್ಮನಿದ್ರೆ ಒಂದ ಮಾತು. ಸುಮ್ಮನಿರದಿದ್ರೆ ಹಳೆಯದೆಲ್ಲ ತಿರುವಿ ಹಾಕ್ತಾರೆ. ಛೇ ! ಎಂತಹ ಜನರಿವರು ? ’’ ಅಂತ ಯೋಚಿಸುತ್ತಾ ಹೆಜ್ಜೆ ಹಾಕ್ತಿದಂತೆ
“ ಏ, ತಮ್ಮಾ ! ನೀ ಎಲೆಕ್ಷನ್ ಗೆ ನಿಂತಿದ್ದಿ ನಿಂಗ ಈ ಮೇಲ್ವರ್ಗದ ಜನ ಅದ್ಯಾಂಗ್ ಓಟು ಹಾಕ್ತಾರೆ ? ನೀನು ಊರಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ ಆ ಹೋಟೆಲ್ ಸ್ವಾಮಿಗಿ `ಚಹಾ ಮೇಲಿಂದ ಹಾಕ್ತಾನಂತ ಅವ್ನ ಹೋಟೆಲ್ಲೆ ಮುಚ್ಚಿಸಿದ್ದಿ ? ಊರ ಗುಡಿ ಬಾರೆದಾಗನು ಜಗ್ಡಾ ಮಾಡಿದ್ದಿ . ಅಲ್ದೇ ಊರಾಗಿನ ಸಾರಾಯಿ ಬಂದ ಮಾಡಿ ನಮ್ಮಂಥವರಿಗೆ ಬೇರೆ ಊರಿಗಿ ಹೋಗಿ ಕುಡ್ದು ಬರುವಾಂಗ ಮಾಡ್ದಿ . ನಿನಗ್ಯಾರು ಓಟು ಹಾಕ್ತಾರೆ ? ಹೋಗು ನಿಮ್ ದೊಡ್ಡಿಯಲ್ಲೆ ಮೂರ್ ನಾಕ್ ಜನಾ ನಿಂತ್ರೆ ಓಟು ಹಾಕ್ತಾರೆ ? ಆ ಗುಡ್ಡದ ಕೇರಿ ಬೀರನೆ ಬರೋದು.ಹೋಗ್ ಹೋಗ್ ! ಏನೋ ಗೆದ್ದು ಬಂದು ಊರ ಉದ್ದಾರ ಮಾಡ್ತಾನಂತೆ. ಹಿಂದೆ ಯಾರು ಮಾಡ್ದೆ ಇರೋದು ಇವಾ ಮಾಡ್ತಾನಂತೆ. ಕನ್ನಡಿಯಲ್ಲಿ ಮುಸಡಿ ನೋಡೊಕೊಂಡಿದ್ದಿಯಾ ?’’ ಅಂತ ಕುಡಕ್ ಚಂದು ಒದರಾಡುತ್ತಿದ್ದ.ಇದನ್ನು ಗಮನಿಸಿದ ಬೀರ ಕಿಸೆಯಲ್ಲಿನ ನೂರ್ ರುಪೈ ತೆಗೆದು ಅವನೆಡೆಗೆ ಹಿಡಿದ ಆಗ ಅವಾ ಬಾಯಿ ಬೆಳ್ಳಗ್ ಮಾಡಿ ಕಣ್ಣು ಪಿಳುಕಿಸಿ “ಅಳೆದೇರು, ನಾನು ಸುಮ್ಮನೆ ಅಂದೆ. ಈ ಸಲ ನೀವೆ ಬರ‍್ತಿರಿ. ಆ ನನ್ ಮಗ ಗುಡ್ಡದ ಬೀರ, ನನ್ ನಾಕ್ ಎಕ್ರೆ ಜಮಿನು ಕೆಸ್ ಹಾಕ್ಸಿ,ಆ ನನ್ ಮೊದ್ಲನೆ ಹೆಂಡ್ತಿ ಮಕ್ಳಿಗಿ ಹಿಸ್ಸಾ ಮಾಡ್ಸಿದ್ದಾನೆ.ಅವನಿಗ್ಯಾಂಗ್ ನಾ ಓಟ್ ಹಾಕ್ತಿನ್ರೀ! ಇಕಾ, ತಾ ಅದು. ನಿನ್ ಹೆಸ್ರು ಹೇಳಿ ಒಂದ ಕ್ವಾಟ್ರ ಹಾಕಿ ಪ್ರಚಾರ್ ಮಾಡ್ತಿನಿ.’’ ಅಂತ ಬೀರನ ಕೈಯಲ್ಲಿನ ನೋಟು ಗಬಕನೆ ಕಸಿದುಕೊಂಡ. ಆಗ ಬೀರ “ ನೋಡ್ ಮಾಮ, ನಿನ್ ಮ್ಯಾಲೆ ನಂಗೆ ತೋಲ್ ನಂಬಕಿ ಅದಾ .ಇರ‍್ಲಿ. ನೀ ಅದು ಖರ್ಚು ಮಾಡು ’’ಅಂತ ಹೇಳಿ ಆ ನೋಟ್ ತನ್ನದಲ್ಲವೆಂದು ಬಿಟ್ಟುಕೊಟ್ಟಿದ.
ಬೀರನಿಗೆ ಈ ಜನರನ್ನು ಯಾವ ರೀತಿ ಹಿಡಿದಿಟ್ಟು ಕೊಳ್ಳಬೇಕೆಂದು ಒಂದು ತೋಚುತ್ತಿಲ್ಲ. ಮತದಾರರು ಹಣ ಹೆಂಡದ ಹಿಂದೆ ಬೀಳುತ್ತಾರೆ. ಏನು ಕೊಡ್ದೆ ಹೋದ್ರೆ ಎದುರಿನವರ ಜೋತೆಗೆ ಗುರ್ತಿಸಿಕೊಳ್ಳುತ್ತಾರೆ. ನಿಜವಾದ ಪ್ರಜಾಪ್ರಭುತ್ವದ ಅರ್ಥವೇ ಗೋತ್ತಿಲ್ಲದವರು. ಬಾಬಾಸಾಹೇಬ್ ಅಂಬೇಡ್ಕರರು ಹದಿನೆಂಟು ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿರುವುದರಿಂದ ಈ ಕುಡಕರಿಗೂ, ಆ ತಲೆ ಹಿಡುಕರಿಗೂ ಕೈ ಜೋಡಿಸಿ, ಕತ್ತೆಗಳಿಗೆ ಕಾಕ್ ಅನಬೇಕಂದ್ರೆ ಏನೀದು ? ತಪ್ಪು ಮಾಡಿದವರಿಗೆ ಬುದ್ಧಿ ಹೇಳಿದ್ರೆ ಚುನಾವಣೆಯಲ್ಲಿ ಬರ‍್ಲಿ ನಮಗೂ ಒಂದ ಮತ ಇದೆ ಅಂತಾರೆ. ಇಂಥವರಿಗೆ ಮತದಾನದ ಹಕ್ಕು ಇಲ್ಲದಿದ್ದರೆ ಆಗ ಅವರ ಸೊಕ್ಕು ಅಡಗಿಸಬಹುದಿತ್ತು.’’ ಅಂತ ಬೀರ ಒಳಗೊಳಗೆ ಶಪಿಸಿದ.
`ಎಲೇಕ್ಷನ್’ ಕಾವು ದಿನೇ ದಿನೇ ಹೆಚ್ಚಾಗ ತೊಡಗಿತ್ತು. ಬೀರ ಪ್ರಚಾರಕ್ಕೆ ಹೊದಲ್ಲೆಲ್ಲ ಕುಡುಕರು, ಆಸೆಬುರಕರ ದಂಡೆ ಸೇರತೊಡಗಿತ್ತು. ಊರಲ್ಲಿ ಸಾರಾಯಿ ನಿಷೇಧ ಮಾಡಿದ್ದರಿಂದ ಹೆಣ್ಣು ಮಕ್ಕಳ ಮತಗಳು ಬೀರನಿಗೆ ಬಿಳುತ್ತವೆ ಎಂಬ ಖಾತರಿ ಒಂದೆಡೆಯಾದರೆ ದಲಿತ ಕೇರಿಯ ಅರ್ಧದಷ್ಟು ಮತಗಳು,ಮುಸ್ಲಿಂರ ಪೂರ್ತಿ ಮತಗಳು ಮತ್ತು ಮೇಲ್ವರ್ಗದ ಆಪ್ತ ವಲಯದ ಮತಗಳು ಅವನ ಕಡೆಗೆ ಇದ್ದಿದ್ದರಿಂದ ಒಮ್ಮೊಮ್ಮೆ ಗೆಲ್ಲುವ ಲೆಕ್ಕದಲ್ಲಿ ಕೂತುಹಲ ಮೂಡಿಸುತ್ತಿದ್ದವು. ಗುಡ್ಡದ ಕೇರಿಯ ಜನರು ಬೀರನಿಗೆ ಮತಗಳು ನೀಡುವುದಾಗಿ ಭರವಸೆ ನೀಡಿ ಹಣ, ಹೆಂಡದ ಬಯಕೆಯನಿಟ್ಟಿದರು ಆದರೆ ಯಾಕೋ ಮನಸ್ಸಾಗದೆ ಅವರ ಆಸೆ ಪೂರೈಸಲಿಲ್ಲ.
ಗುಡ್ಡದ ಕೇರಿಯು ಕಿಣ್ಣಿ ಗ್ರಾಮ ಭೂತದೊಳಗೆ ಬರುವ ವಾರ್ಡಿನ ಒಂದು ಚಿಕ್ಕ ಜನ ಸಮೂಹ.ಇಲ್ಲಿ ಪ್ರತಿ ಚುನಾವಣೆಯಲ್ಲಿ ಒಬ್ಬರೆ ನಿಲ್ಲೊದು.ಯಾಕೆಂದ್ರೆ ಊರ ದಲಿತ ಕೇರಿಯವರು ಗೆದ್ದು ಬಂದ್ರೆ ಆಕ್ರಮವಾಗಿ ಉಳಿದ ನಮ್ಮ ಗುಡ್ಡದ ಕೇರಿಗೆ ಸೌಲತ್ತು ತಪ್ಪಿಸುತ್ತಾರೆ. ಹಾಗಾಗಿ ಎಲ್ಲರೂ ಇಲ್ಲಿಯ ಮತಗಳು ಬೇರೆಯವರಿಗೆ ಹಾಕದೆ ಅವರ ಮತವೇ ಪಡೆದು ಗೆಲ್ಲಬೇಕೆಂಬುದು ಅವರ ಒಳಗುಟ್ಟು. ಗ್ರಾಮದ ಜಾತಿವಾದಿಗಳು “ಊರ ಹೊರಗಿನ ದಲಿತರು ಆರಿಸಿ ಬಂದರೆ ನಮಗೆ ಯಾವುದೆ ತೊಂದರೆ ಇಲ್ಲ’’ ಅಂತ ಇಪ್ಪತ್ತು ವರ್ಷಗಳಿಂದ ಗುಡ್ಡದ ಕೇರಿಯ ಕತ್ತೆ ನಿಂತರು ಅವರಿಗೆ ಮತ ಹಾಕುತ್ತಾ ಬಂದಿದ್ದರು. ಈ ಸಲ ಬೀರ ನಿಂತ್ತಿರುವುದರಿಂದ ಅಪ್ಪಿ- ತಪ್ಪಿ ಅವಾ ಏನಾದ್ರೂ ಗೆದ್ರೆ ನಮಗೂ ಕಂಟಕ. ಮತ್ತೆ ಊರ ಹೊರಗಿನ ದಲಿತರಿಗೆ ಪುರ್ನವಸತಿಗೆ ಸ್ಥಳಾಂತರಿಸಿದರೆ ಊರಲ್ಲಿನ ದಲಿತರೆದುರು ನಾವು ಅಲ್ಪಸಂಖ್ಯಾತರಾಗಿ ಬದುಕಬೇಕಾಗುತ್ತದೆ.ಅನ್ನೊದು ಅವರ ಚಿಂತೆಯಾಗಿತ್ತು.
ಬೀರ ಚುನಾವಣೆಯಲ್ಲಿ ಗ್ರಾಮ ಸ್ವರಾಜ್ಯದ ಕುರಿತು ಉತ್ತಮ ಭರವಸೆಗಳನ್ನು ನೀಡುತ್ತಾ ಮಾತಾಡುತ್ತಿದ್ದರಿಂದ ಅವನ ಮಾತಿಗೆ ಜನ ಹೌದೆಂದು ತಲೆ ಅಲ್ಲಾಸುತ್ತಾ ಮತಗಳು ನೀಡುವ ಭರವಸೆಗಳನ್ನು ನೀಡತೋಡಗಿದರು. ಇವನ ಮಾತಿನ ಕಲೆಗಾರಿಕೆಗೆ ಜನ ಬೀರನ ತರುವುದರಲ್ಲಿ ತಪ್ಪೇನು ಇಲ್ಲ ಅಂತ ಉತ್ತಮ ಮಾತುಗಳನ್ನು ಆಡತೊಡಗಿದ್ದರು. ಪರಿಶಿಷ್ಠ ಪಂಗಡದ ಸ್ಪರ್ಧಿಗಳು ಇವನಲ್ಲಿಗೆ ಬಂದು “ಬೀರಣ್ಣಾ ! ನಿನ್ ಪರವಾಗಿದ್ದವರಿಗೆ ನನಗೂ ಒಂದು ಮತ ಹಾಕಲು ಹೇಳು.ನಾನು ನನ್ ಪರವಾಗಿದ್ದವರಿಗೆ ನಿನಗೆ ಮತ ಹಾಕಸಲು ಹೇಳುವೆ.” ಅಂತ ಕಮಲಕ್ಕ ಹೇಳಿದಾಗ “ನಿಮ್ಮನ್ನು ಹೇಗೆ ನಂಬೊದು ? ಅಂತ ಪ್ರಶ್ನೆ ಮಾಡಿದಕ್ಕೆ ಆಕೆ ಮನೆದೇವರ ಆಣೆ ಪ್ರಮಾಣ ಮಾಡಿದಳು.ಆಗ ನಂಬಿದ ಬೀರ ತನ್ ಪೇನಲ್ ದವಳಿಗೆ ಕೈ ಬಿಟ್ಟು ಈಕೆಗೆ ಮತ ಹಾಕಲು ಹೇಳಿದ.ಕಾರಣ ತನ್ ಪೇನಲ್ ದವರು ಬೀರನಿಗೆ ಬಿಟ್ಟು ಪ್ರಚಾರ ಮಾಡುತ್ತಿದ್ದರಿಂದ ಹಾಗೆ ಮಾಡಿದ.
ಈ ಚುನಾವಣೆಯಲ್ಲಿ ರಮೇಶ,ಸುರೇಶ ಮತ್ತು ಬೀರ ಮೂವರು ಒಂದೇ ಕುಟುಂಬದವರಾಗಿ ಸ್ಪರ್ಧೆಗಿಳಿದಿರುವುದರಿಂದ ಕೊನೆಯ ಘಳಿಗೆಯಲ್ಲಿ ಅವರೆಲ್ಲ ಒಂದಾಗಿ ಒಬ್ಬರಿಗೆ ಮತ ಹಾಕಿಸಿಕೊಂಡ್ರೆ ? ಅವರಲ್ಲಿಯ ಒಬ್ಬರ ಗೆಲುವು ಖಚಿತವಾಗುತ್ತದೆ.ಆದ್ದರಿಂದ ಅವರ ಎದಿರು ಗುಡ್ಡದ ಬೀರ ಗೆಲ್ಲಬಾರದು ಅಂದ್ರೆ ನಾನೊಂದು ಡಮ್ಮಿ ಕ್ಯಾಡೆಟ್ ಯಾಕ್ ಹಾಕಬಾರದು ? ಅಂತ ನೂರಂದಯ್ಯ ಅರವತ್ತು ತುಂಬಿದ ವಡ್ಡರ ಮರೆಪ್ಪಜ್ಜನಿಗೆ ಕಣದಲ್ಲಿ ತುರುಕಿ ಹಾಕಿದ್ದರಿಂದ ಆ ಮರೆಪ್ಪಜ್ಜ ತನ್ ಶಕ್ತಿ ಮೀರಿ ಪ್ರಚಾರ ಸುರು ಮಾಡಿದ.ಚುನಾಚಣೆಯ ಖರ್ಚು ವೆಚ್ಚಕ್ಕಾಗಿ ಊರಲ್ಲಿ ತಾನು ಸಾಕಿದ ನೂರಾರು ಹಂದಿಗಳು ಮಾರಾಟ ಮಾಡಿದ್ದರಿಂದ ದಲಿತ ಕೇರಿಯ ಕತ್ತಲೆಯಲ್ಲಿ ಅವರು ಮಾಡಿದ `ಕಕ್ಕಸ’ ಊರು ಗಬ್ಬು ನಾರತೊಡಗಿತ್ತು. ಅ ನೂರಂದಯ್ಯ ದಲಿತರ ಕಡು ವೈರಿ. ಈತ ಹಿಂದೊಮ್ಮೆ ದಲಿತ ಮಹಿಳೆ ನೀರಿಗೆ ಬಂದಾಗ ತನ್ನ ಕೊಡ ಮುಟ್ಟಿ ಮೈಲಿಗೆ ಮಾಡಿದ್ದಾಳೆಂದು ಆಕೆಯ ಮನೆಯವರೆಗೂ ಅಟ್ಟಿಸಿಕೊಂಡು ಹೋಗಿ ಅವಳ ಗಂಡನ ಎದುರಿನಲ್ಲಿಯೆ ಆ ಪ್ಲಾಸ್ಟಿಕ್ ಕೊಡ ಒಡೆಯುವರೆಗೆ ಹೊಡೆದು ಸೇಡು ತಿರಿಸಿಕೊಂಡಿದ್ದ ಮತ್ತು ಅವನ ಮೇಲೆ `ಅಟ್ರಾಸಿಟಿ’ ದಾಖಲಾಗಿ ಕೇಸು ಅನುಭವಿಸಿದ್ದರಿಂದ “ಊರಲ್ಲಿ ಯಾವ ಹೊಲೆ ಮಾದಿಗರು ಗೆದ್ದು ಬರಬಾರದು’’ ಅಂತ ಇಲ್ಲ ಸಲ್ಲದ ಅಪಪ್ರಚಾರ ಮರೆಪ್ಪಜ್ಜನ ಮೂಲಕ ಮಾಡಿಸುತ್ತಿದ್ದ.
“ಬೀರ ಯಾವಾಗ್ ಏನು ಇಲ್ದೆ ನಮ್ ಕಿರಾಣಿ ಅಂಗಡ್ಯಾಗಿಂದ ಸಾರಾಯಿ ಹಿಡ್ಸಿ ಊರಲ್ಲಿ ಮಾರಾಟ ಮಾಡೊದು ಬಂದ ಮಾಡಿಸಿದ್ದಾನಂದ್ರೆ , ಅವ್ಗಿಗೆ ಒಂದ ಕೈ ನೋಡ್ಲೆಬೇಕು” ಅಂತ ಕಾಳಪ್ಪ ಸಾಹುಕಾರ ತನ್ ಹುರಿ ಮೀಸೆ ಮ್ಯಾಲೆ ಕೈಯಾಡಿಸಿ ರಮೇಶನಿಗೆ ಸೂಚಕನಾಗಿ “ನಾನೆ ನಿನ್ ಚುನಾವಣೆ ಖರ್ಚು- ವೆಚ್ಚ ಮಾಡ್ತಿನಿ ನೀ ಸುಮ್ನೀರು ’’ ಅಂತ ಕಣಕ್ಕಿಳಿಸಿದ್ದು ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ.
ಚುನಾವಣೆಯ ಪ್ರಚಾರದ ದಿನಗಳಲ್ಲಿ ಯಾರೋ ಒಂದಿಬ್ಬರು ದಲಿತ ಕೇರಿಗೆ ಬಂದು `ಗುಡಿಸಲು ಮನೆಗಳು’ ಬರ‍್ತಾವೆ ಪೋಟೋ ತೆಕ್ಕೊಳ್ಳಿ ’ ಅಂತ ಹೇಳಿ ಪ್ರತಿ ಬಡವರ ಹತ್ತಿರ 500 ರೂಪಾಯಿ ವಸೂಲಿ ಮಾಡಿ “ಆ ಗುಡ್ಡದ ಕೇರಿಯ ಬೀರನಿಗೆ ಓಟು ಹಾಕಿ ಅವರೆ ನಿಮಗೆ ಮನೆ ಮಾಡಿಸುತ್ತಾರೆ’’ ಅಂತ ಆಮಿಷ್ಯ ಒಡ್ಡಿ ಅನಕ್ಷರಸ್ಥರ ಮತಗಳು ಲೂಟಿ ಮಾಡುತ್ತಿರುವುದು ಗೊತ್ತಾಗಿ ಬೀರ ಸಹಾಯಕ ಆಯುಕ್ತರಿಗೆ ಕರೆ ಮಾಡಿ ತಿಳಿಸಿದಾಗ ಪಂಚಾಯ್ತಿ ಕಾರ್ಯದರ್ಶಿ ಓಡಿ ಬಂದು ಅವರಿಗೆ ಬೈದು ಕಳಿಸಿದ. ಆಗ ಜನ ಯಾಕೆ ಏನಾಯ್ತು ? ನಮ್ಮ ಮನೆಯ ಪೋಟೋನು ತೆಗ್ದು ಹೋಗ್ರಿ ’’ ಅಂತ ಅಂದಾಗ ಆತ “ ನಿಮ್ಗೆ ಬರೋ ಮನೆಗಳಿಗೆ ನಿಮ್ಮೂರಿನ ಬೀರ ಎಸಿಗೆ ಪೋನ್ ಮಾಡಿ ಕ್ಯಾನಸಲ್ ಮಾಡಿದ್ದಾನೆ. ಹಾಗಾಗಿ ಯಾರು ಅವನಿಗೆ ಮತ ಹಾಕಬೇಡಿ” ಅಂತ ಹೇಳಿ ಹೋಗಿದ್ದ. ಹಾಗಾಗಿ ಓಣಿಯಲ್ಲಿಯ ನಲವತ್ತು ಮನೆಯ ಜನರು ಬೀರನಿಗೆ ತಪ್ಪು ಮಾಡಿದ್ದಾನೆಂದು ಬೈಯತೊಡಗಿದರು. ತನ್ನ ದೊಡ್ಡಪ್ಪನ ಮನೆಯವರು ಇವನ ವಿರುದ್ದವೇ ಪ್ರಚಾರ ಮಾಡುತ್ತಿದ್ದರಿಂದ ಆತ ಅವರ ಮನೆಗೆ ಹೋಗಿ ಯಾಕೆ ನನ್ನ ವಿರುದ್ಧ ಹಾಗೆಲ್ಲ ಅಪಪ್ರಚಾರ ಮಾಡುತ್ತಿದ್ದರೆಂದು ಕೇಳಿದರೆ ಅವರು ಮರು ಮಾತಾಡದೆ ಹೊದದ್ದು, ಓಣಿಯಲ್ಲಿ ಬೀರ ಬರುವುದನ್ನು ಕಂಡು ಕೆಲವರು ಮುಖ ತಿರುಗಿಸಿ ಬೆನ್ನು ಮಾಡಿ ನಿಲ್ಲೊದು ನೋಡಿದ್ರೆ ಆ ಗುಡಿಸಲು ಮನೆಯ ಅವಾಂತರವೆ ಇದೆಂದು ತಿಳಿಯದೆ ಇರಲಿಲ್ಲ. ” ಛೇ ! ಎಂಥಹ ಜನರಿವರು ! ಯಾರದೋ ಎಂಜಿಲುದಾಸೆಗೆ ಏನೇನೋ ವೇಷ ಹಾಕಿಕೊಂಡು ನನ್ನ ವಿರುದ್ಧ ಅಪಪ್ರಚಾರದ ಸಂಚು ಹೂಡಿದ್ದಾರಲ ? ಅಂತ ನೊಂದುಕೊಂಡ ಬೀರ “ಚುನಾವಣೆಯ ನೀತಿ ಸಂಹಿತೆಯಲ್ಲಿ ಯಾವುದೇ ಸರ್ಕಾರಿ ಕೆಲಸಗಳು ಆಗುವುದಿಲ್ಲ ಅಂತ ಈ ನನ್ನ ಜನರಿಗೆ ಹೇಗೆ ಹೇಳಲಿ ? ಆಸೆ ಹಚ್ಚಿ ಸುಳ್ಳು ಹೇಳಿದವರಿಗೆ ಇದ್ದ ಹಣವು ಕೊಟ್ಟು ಕನಸ್ಸು ಕಾಣುವ ಇವರನ್ನು ನಾನ್ಹೇಗೆ ಬದಲಾವಣೆಗೆ ತರಲಿ ? ’’ ಅಂತ ಮನದೊಳಗೆ ಮರುಗಿದ.
“ಚುನಾವಣೆಯಲ್ಲಿ ಈ ಕಿಣ್ಣಿ ಬೀರ ಗೆದ್ದು ಬಂದರೆ ಗುಡ್ಡದ ಕೇರಿಯರ ಹಕ್ಕುಗಳನ್ನು ಕಸಿದು ಅವರನ್ನು ಪುನರ್ವಸತಿಗೆ ಸ್ಥಳಾಂತರಿಸುತ್ತಾನೆ.ಆದ್ದರಿಂದ ಬಹುದಿನಗಳಿಂದ ನೆಲೆ ನಿಂತ ನಿಮ್ಮ ಗೋಮಾಳ ಭೂಮಿ ಸರ್ಕಾರದ ಪಾಲಾಗುತ್ತದೆ ಮತ್ತು ನಿಮ್ಗೆ ಯಾವುದೇ ಸವಲತ್ತು ಸಿಗುವುದಿಲ್ಲ” ಅಂತ ಅದ್ಯಾರೋ ಅವರ ತಲೆಗೂ ಪುಂಗಿ ಊದಿದರು.
ಚುನಾವಣೆಯ ಹಿಂದಿನ ದಿನಗಳವರೆಗೆ ಬಹುನಿಷ್ಠಾವಂತರಾಗಿದ್ದ ಗ್ರಾಮದ ಜನ, ನಾಳೆ ಮತದಾನ ಇರುವುದರಿಂದ ಇಂದಿನ ರಾತ್ರಿಯೇ ಅವರು ಬೀರನಿಗೆ ಭ್ರಷ್ಟರಾದಂತೆ ತೊರುತ್ತಿದ್ದರು. “ನಾಳೆ ನನಗೆ ಓಟು ಹಾಕಿ” ಅಂತ ರಾತ್ರಿ ಕೊನೆಯ ಸಲ ಮನವಿ ಮಾಡಲು ಹೊದಲೆಲ್ಲ ಆ ಜನಾ ಎನಾದ್ರೂ ಕೊಡ್ತಾರೇನೋ ! ಅಂತ ಬೀರನ ಕೈಗೆ ಆಸೆ ಮಾಡೊದು ಕಂಡು ಬರುತ್ತಿತ್ತು.
“ ನೋಡ ತಮ್ಮಾ ! ಯಾರ್ ಬಂದು ಏನ್ ಮಾಡ್ಯಾರ್ ? ಪ್ರತಿ ಸಲ ಓಟ ಹಾಕಿ, ಹಾಕಿ ನಾವ್ ಮುದುಕರೆ ಆದ್ವಿ. ಆದ್ರೆ ನಮ್ಗೆ ಯಾವನೂ ಒಂದ್ ಮನಿ ಆಡ್ಲಿಲ್ಲ.ಕೊನೆಗೆ ಸರ್ಕಾರದಿಂದ ತಿಂಗ್ಳಾ ರೊಕ್ಕ ಮಾಡಸ್ರಿ ಅಂದ್ರ ಯಾರು ಕಿವ್ಯಾಗೆ ಹಾಕ್ಕೊಂಡಿಲ್ಲ.ಅಂದ ಮ್ಯಾಗ್ ನಾವ್ ಯಾರಿಗಿ ಯಾಕ್ ಓಟ್ ಹಾಕ್ಬೇಕು ? ನಮ್ ಓಟು . ನಾವ್ ಯಾರಿಗೂ ಹಾಕ್ಕೊಲ್ಲ ಹೋಗ್ರಿ ’’ ಅಂತ ಎಪ್ಪತ್ತು ತುಂಬಿದ ಮುದುಕನೊಬ್ಬ ಕುಡಿದು ಒದರುತ್ತಿದ್ದರೆ, ಮತ್ತೊಬ್ಬರು ಬೀರನ ಹತ್ತಿರ ಬಂದು “ನೋಡು ಬೀರಣ್ಣನವರೆ ! ನಮ್ ಓಣಿಯಲ್ಲಿರೋ ದೇವರ ಗುಡಿಗೆ ಒಂದೈವತ್ತು ಸಾವಿರ ರುಪೈ ಕೊಟ್ರೆ ನಮ್ ಕಡಿಂದ ಬರೋಬರಿ ನೂರ್ ಓಟ್ ಹಾಕಸ್ತಿವಿ.” ಅಂತ ಹೆಂಗಸೊಬ್ಬಳು ಹಾದಿಗೆ ಹೋಗುವ ಇವನಿಗೆ ದುಂಬಾಲು ಬಿದ್ದಿದಳು. ಆದರೂ ಸುಮ್ಮನಾಗಿ ಮುಂದೆ ಸಾಗಿದಂತೆಲ್ಲ ಆ ರಾತ್ರಿ ಬೀದಿಯಲ್ಲಿ ನಾಳಿಗಳಂತೆ ಕುಡುಕರ ದಂಡು ಅವನ ಹಿಂದೆ ಬರುತ್ತಿರುವುದನ್ನು ನೋಡಿದ್ದ. ಆ ಜನಗಳ ಮುಖಗಳು ಒಮ್ಮೆ ಚದುರಂಗರು ಬರೆದ ಶವದ ಮನೆಯ ದೆವ್ವಗಳಂತ ಭಾಸವಾಗುತ್ತಿರುವುದರಿಂದ ನೇರವಾಗಿ ಮನೆಗೆ ಬಂದು ಸುಖ ನಿದ್ರೆ ಮಾಡಿದ.
ಮಾರನೇ ದಿನ ಎಲೇಕ್ಷನ್. ಮುಗಿತ್ತು.ಆದ್ರೆ ಬೀರ ಗೆಲ್ಲಲಿಲ್ಲ. ಕೆಲವೇ ಕೆಲವು ಮತಗಳಿಂದ ಸೊಲುಂಟಾಗಿರುವುದರಿಂದ ಆತನ ಮನಸ್ಸು ಭಾರವಾಗಿ ಒಬ್ಬನೆ ಕುಳಿತು ಕುಡಿಯಬೇಕೆಂದು ನಿರ್ಧರಿಸಿ, ಬಸವಕಲ್ಯಾಣ ಬಂಗ್ಲಾ ಹತ್ತಿರದ ದಾಬಾದ ಗಾರ್ಡನಲ್ಲಿ ಬಂದು ಕುಳಿತು ವಿಸ್ಕಿ ಆರ್ಡರ್ ಮಾಡಿ, ಬಲಬದಿಯ ಟೆಬಲ್ ಕಡೆಗೆ ತರ‍್ಗಿ ನೋಡಿದ. ಚುನಾವಣೆಯಲ್ಲಿ ಗೆದ್ದು ಬಂದ ತನ್ನೂರಿನ ಗುಡ್ಡದ ಬೀರ ಅಲ್ಲಿದ್ದ.ಚುನಾವಣೆ ಕಣದಲ್ಲಿದ್ದ ಸುರೇಶ,ರಮೇಶ,ಮತ್ತು ಕಾಳಪ್ಪ ಸಾಹುಕಾರ, ಊರ ಗೌಡ್ರು, ನೂರಂದಯ್ಯ ಸೇರಿದಂತೆ ಬೀರನ ದಾಯಾದಿಗಳು ಅಲ್ಲಿ ಕುಳಿತು ಗಹಗಹಿಸಿ ನಗುತ್ತಾ ಪಾರ್ಟಿ ಮಾಡುತ್ತಾ ಕುಡಿಯ ತೊಡಗಿದರು. ಮತ್ತು ಕರಿದ ಕೋಳಿಯ ಕಾಲು ನೂರಂದಯ್ಯ ಬಾಯಲ್ಲಿ ಹಿಡಿದು ಜಗ್ಗತೊಡಗಿದ್ದ. ಕಾಳಪ್ಪ ಸಾಹುಕಾರ ಕುಡಿದ ನಿಶೆಯಲ್ಲಿ ಸಿಗರೇಟು ಸೇದುತ್ತಾ ಒಮ್ಮೆ ಹುರಿ ಮೀಸೆಯ ಮೇಲೆ ಕೈಯಾಡಿಸಿ ಬೀರನ ನೋಡಿ ಮುಗುಳು ನಗೆ ಬೀರಿದ.
– ಮಚ್ಚೇಂದ್ರ ಪಿ.ಅಣಕಲ್.