ಅದೊಂದು ಮಹಾರಾಷ್ಟ್ರದ ಲೌನಾವಳಾ ನಗರದ ರಸ್ತೆಯ ಡಾಂಬರಿಕರಣ ಮಾಡುವ ಕೆಲ್ಸಕ್ಕಾಗಿ ಮಾಂತ್ಯಾ ರಸ್ತೆಲಿ ಬಿಟ್ಟ ಫಿವರ್, ಮತ್ತು ಲೋಳಾರ ಗಾಡಿಗಳ ಮೇಲೆ ‘ವಾಚಮೇನ್’ ಆಗಿ ಉಳಿದು ಕಂಪನಿಯಿಂದ ಡಾಂಬಾರು ಮಿಶ್ರೀತ ಟಿಪ್ಪರಗಳೊಂದಿಗೆ ಬರುವ ಕೂಲಿಗಳ ಗ್ಯಾಂಗಿಗಾಗಿ ಕಾಯುತ್ತಿದ್ದ. ಹೊತ್ತು ಏರಿ ಬಹಳ ಸಮಯವಾದರೂ ಡಾಂಬಾರ್ ಗಾಡಿಗಳು ಬರ‍್ದೆ ಇದ್ದಿದ್ದರಿಂದ ” ಛೇ! ಟೈಂ ಹನ್ನೆರಡಾದರೂ ಇನ್ನೂ ಬರಲಿಲ್ಲವಲ್ಲಾ ?” ಅಂತ ಕಿಸೆಯಲ್ಲಿನ ಒಂದು ಬೀಡಿ ತೆಗ್ದು ಕಡ್ಡಿ ಗೀರಿ ಹೊತ್ತಿಸಿ, ಒಂದ್ ದಮ್ ಹೊಗೆ ಎಳೆದು “ಉಫ್ ! ಅಂತ ಹೊರ ಬಿಡ್ತಿದ್ದಂತೆ ” ಬುರ್ರ ! ಬುರ್ರ ! ” ಅಂತ ಒಂದರ ಹಿಂದೆ ನಾಕಾರು ಟಿಪ್ಪರಗೋಳು ಬಂದು ನಿಂತದ್ದೆ ತಡ .ಅವುಗಳ ಮೇಲೆ ಕುಂತು ಬಂದ ಗಂಡು ವಾನರರಂತ ಕೂಲಿಗಳು ಇಳಿಯತೋಡಗಿದರು. ಇತ್ತ ಮಾಂತ್ಯ ಬೀಡಿ ಸೇದುತ್ತಿದ್ದದನ್ನು ಗಮನಿಸಿದ ರಮಾಣನಂದ ಮೊಕಾದಂ ” ಏ, ಮಾಂತ್ಯಾ ! ಚೊಟುದ್ದ ಇದ್ದಿ ಏನ್ ಬೀಡಿ ಸೇದ್ತಿಯೋ ಖುರ್ಸಾಲ್ಯ ? ಟೈಂ .ಬಾರಾ ಆಯ್ತು ಗಾಡಿಗೋಳು ಬಂದು ನಿಂತ್ವು .ಡಾಂಬಾರ್ ಕಾಸಿದಿಲ್ಲ ಮತ್ ? ಲೋಳಾರಕ್ಕೆ ನೀರು ? ಅಂತ ಕೇಳಿದ” ಡಾಂಬಾರ್ ಕಾಸಿದ್ದಿನಿ ಮಾಮಾ, ಆದ್ರ ಲೊಲಾರಕ್ಕೆ ನೀರು…. ಸ್ವಲ್ಪ ದೂರ ಅದ್ಕೆ ತರಲಿಲ್ಲ ” ಅಂತ ಮಾಂತ್ಯ ಹೇಳ್ತಿದಂತೆ ರಮಣಾನಂದ ಸ್ವಲ್ಪ ಸಿಡಿಮಿಡಿಗೊಂಡು ” ಛೇ ! ಏನ್ ಕೆಲ್ಸ ಮಾಡ್ತಿರೋ ಏನೋ ನೀವು. ಸೂರ್ಯ ನೆತ್ತಿ ಮ್ಯಾಗ್ ಬಂದ್ರು ಖಬರ್ ಇಲ್ದೆ ಕುಂತ್ತಿದಲ್ಲಾ ! ನೀರ್ ತಂದಿಡ್ಬೇಕಂತ ತಿಳ್ಯಾಲ್ಲ ನಿಂಗೆ ? ಹೋಗು, ಈಗ ದಂಧಾ ಸುರು ಆಗ್ತದೆ .ನೀನೆ ನಿಂತು ನೀರ್ ತಂದ್ ಹಾಕು ” ಅಂತ ಹೇಳಿ , ಕೂಲಿಗಳಿಗೆ ಅವರವರ ಕೆಲ್ಸಕ್ಕೆ ಸನ್ನದ್ಧರಾಗುವಂತೆ ಹೇಳತೊಡಗಿದ. ಆಗ ರಸ್ತೆಯ ಪಕ್ಕಕ್ಕೆ ನಿಂತ್ತಿರುವ ಪಿವರ್ ಮತ್ತು ಲೋಲಾರ ಯಂತ್ರಗಳು ನಿನ್ನೆ ಅರ್ಧಕ್ಕೆ ಬಿಟ್ಟು ಹೋದ ಜಾಗಕ್ಕೆ ಬಂದವು, ಪಿವರ್ ಫಳಕಾ ಆಗಲಿಸಿತ್ತು. ಟಿಪ್ಪರ ನಿಧಾನಕ್ಕೆ ಹಿಂದೆ ಸರಿದು ಡಾಂಬರ್ ಮಿಶ್ರೀತ ಹರಳು ಅರ್ಧ ಹಾಕಿ, ಸ್ವಲ್ಪ ಮುಂದೆ ಹೋಗಿ ನಿಂತ್ತಿತ್ತು. ಮಾಂತ್ಯಾ ನೀರು ತರಲು ಪ್ಲಾಷ್ಟಿಕ್ ಕೊಡ ತಗೊಂಡು ಹೆಜ್ಜೆ ಹಾಕಿದ. ನೀರಿಗಾಗಿ ಅತ್ತಲಿತ್ತ ಹುಡುಕಾಡಿದಾಗ ಅದೊಂದು ದಟ್ಟವಾದ ಗಿಡಗಂಟೆಗಳಿಂದ ಕೂಡಿದ ಮಸಣದ ಭೂಮಿ .ಅಲ್ಲಿಯ ಸ್ಮಶಾನದೊಳಗಿನ ನೀರು ತುಂಬಿಕೊಂಡು ಬರುತ್ತಿದ್ದಾಗ ದಾರಿಯಲ್ಲಿ ಶವ ಸಂಸ್ಕಾರಕ್ಕೆ ತಂದ ಹೂವಿನ ಹಾರಗಳು ಮತ್ತು ಬಳೆಗಳ ಚೂರು ಒಡೆದು ಬಿದ್ದಿದವು. ಅವುಗಳ ಮಧ್ಯದಲ್ಲಿ ಮಾಂಗಲ್ಯದ ಸರವೊಂದು ಬಿದ್ದಿದ್ದರಿಂದ ಅದು ತಗೊಂಡು ಹಾಗೆ ಸೀದಾ ಬಂದು ಲೊಲಾರ ಗಾಲಿಗಳಿಗೆ ನೀರು ಸವರುತ್ತಿದ್ದ, ಸುಬ್ಯಾನಿಗೆ ತೋರಿಸಿದ. ಮಾಂತ್ಯಾನಿಗೆ ಬಂಗಾರದ ತಾಳಿ ಸಿಕ್ಕಿರುವುದನ್ನು ನೋಡಿದ ಸುಬ್ಯಾನಹ್ವಾಟ್ಟಿ ಉರಿಲಾಕ್ ಹತ್ತಿತ್ತು. ಏನಿಲ್ಲಂದ್ರೂ ಅದು ಎಡ್ ಸಾವ್ರಿ ರುಪೈದ್ ಅದಾ .ಅದು ಹ್ಯಾಂಗಾದ್ರೂ ಮಾಡಿ ಕಸ್ಕೊಬೇಕಂತ ಯೋಚಿಸಿದ ಸುಬ್ಯಾ.” ಏ ಮೊದ್ಲು ಅದು ಬಿಟಾಕು ಹೆಣಾ ಸುಡೊ ಜಾಗದಾಂದು ಏನೇ ತಗೊಂಡ್ರು ಅದು ರಾತ್ರಿ ಕನಸಿನ್ಯಾಗ್ ದೆವ್ವಾಗಿ ಬಂದು ಕಾಡ್ತಾದೆ ” ಅಂತ ಹೇಳಿದಾಗ ಮಾಂತ್ಯಾ ಒಮ್ಮೆ ಭಯಭೀತನಾಗಿ ದೂರ ಎಸೆದಿದ್ದ. ಒಡನೆ ಸುಬ್ಯಾ ಲೊಲಾರ ಗಾಲಿಗೆ ನೀರು ಸವರುವುದು ಬಿಟ್ಟು ಓಡಿ ಹೋಗಿ ಆ ತಾಳಿ ತಗೊಂಡ. ಅದು ನೋಡಿದ ಮಾಂತ್ಯಾ,” ಏ ,ನಂಗ್ ಬಿಟಾಕ್ಲಾಕ್ ಹೇಳಿ ನೀ ತಗೊತ್ತಿ ? ” ಎಂದಾಗ ” ಈಗಿದು ನಂದು . ಇದ್ಕೂ ಮೊದ್ಲೂ ನಿಂಗೆ ಸಿಕ್ಕಾಗ ಇದು ನಿಂದಾಗಿತು . ಈಗ ನಂಗೆ ಸಿಕ್ಕಿದೆ ,ಇದು ನಂದಾಯಿತ್ತು” ಅಂತ ಹೇಳಿ ಗಹಗಹಿಸಿ ನಗತೋಡಗಿದ . ಆಗ ಕೊಪಗೊಂಡ ಆತ” ಏ ,ಚೋಲೊ ಅಲ್ಲ ನೋಡ ಮತ್. ನಂಗ್ ಅಂಜಿಸಿ ಬಿಟಾಕ್ಲಾಕ್ ಹೇಳಿ ನೀ ತಗೊತ್ತಿ ಮಗ್ನೆ ” ಅಂತ ಅವನಿಗೆ ಹೊಡೆಯಲು ಕೈ ಎತ್ತಿದಾಗ ” ಏ, ಹೇ ! ನಿಂದ್ರೋ ! ಇದು ಬಂಗಾರದ್ ಅದಾನೋ ! ಇಲ್ಲಾ ಮರಾಠಿ ಭಂಗಾರ ಅದಾನೋ “ಅಂತ ಹ್ಯಾಂಗ್ ತಿಳ್ಕೊತ್ತಿ ? .ಇದ್ಕೆ ಉಜ್ಜಿ ನೋಡ್ಬೇಕು. ಮೊದ್ಲ ಮೋಕಾದಂ ಮಾಮಾಗ್ ತರ‍್ಸಾಂ ಬಾ” ಅಂತ ಹೇಳಿ ಕರೆದುಕೊಂಡು ಹೋದ. ಮೋಕಾದಂ ರಮಾಣಾನಂದ ಎಲ್ಲಾ ಟಿಪ್ಪರಗೋಳು ಖಾಲಿ ಮಾಡಿ ಮತ್ತೆ ಬರೋ ಗಾಡಿಗಳಿಗಾಗಿ ಕಾಯುತ್ತಾ ಗ್ರೀಟಿನ್ ಮ್ಯಾಲೆ ಕುಂತು ನಾಕಾರು ಕೂಲಿಗಳೊಂದಿಗೆ ಮಾತಾಡ್ತಾ ಬೀಡಿ ಹೊಗೆ ಬಿಡತೊಡಗಿದರು. ಸುಬ್ಯಾ ಮಾಂತ್ಯಾರನ್ನು ಕಂಡ ಆತ ” ಯಾಕ್ರೋ ! ಲೊಲಾರಕ್ ನೀರ್ ಹಚ್ಚಾದು ಬಿಟ್‌ಕೆಸಿ ಈಕಡ್ಯಾಕ್ ಬಂದ್ರಿ ?” ಅನ್ನುತ್ತಿದ್ದಂತೆ ” ಮಾಮ,! ಇದು ಬಂಗಾರದಾ ಅಥವಾ …….” ಅಂತ ಸುಬ್ಯಾ ತೊರಿಸುತ್ತಿದಂತೆ ರಮಾಣಾನಂದ ಆತನಲ್ಲಿನ ತಾಳಿ ತಗೊಂಡು ಅಲ್ಲಿನ ಕಲ್ಲಿಗೆ ಉಜ್ಜಿ ತಿಕ್ಕಿ ನೋಡಿ ,” ಇದು ಬಂಗಾರದೆ ಅದಾ ಯಾರಿಗಿ ಸಿಕ್ಕದಾ ? ” ಅಂತ ಕೇಳಿದಾಗ ಮಾಂತ್ಯಾ ಖುಷಿಲಿಂದ ” ನಂಗೆ ಸಿಕ್ಕಿದೆ ಮಾಮ .’ ಅಂತ ಹೇಳಿದ.ಆಗ ಮೊಕಾದಂ ಒಮ್ಮೆ ಅವನೆಡೆಗೆ ನೋಡಿ ” ಹ್ಞಾ ! ತಗೋ ” ಅಂತ ಹೇಳಿ. ” ಹ್ಞೂಂ ! ಹೋಗ್ರಿ , ದಂಧಾ ಮಾಡ್ರಿ.” ಅಂತ ಹೇಳಿ ಕಳಿಸಿದ. ಆಗ ಮಾಂತ್ಯಾ ಸುಬ್ಯಾನ ಮುಖಾ ನೋಡಿ.ಆ ತಾಳಿ ಹಿಂದಿನ ಕಿಸೆಯಲ್ಲಿಟ್ಟುಕೊಂಡು ನಗುತ್ತಾ ಲೋಲಾರ ಕಡೆಗೆ ಹೆಜ್ಜೆ ಹಾಕಿದ . ಈಗ ಸುಬ್ಯಾನಿಗೆ ” ಇದು ನಂಗೆ ಸಿಗ್ದೆ ಹೋಯಿತ್ತಲ್ಲಾ ?” ಅಂತ ನಿರಾಸೆಯಾಗಿ ಲೊಲಾರ ಗಾಲಿಗಳಿಗೆ ನೀರು ಸವರುತ್ತಾ ಅದರ ಬೆನ್ನಟ್ಟಿದ. ಸಂಜೆಯಾಗುತ್ತಿದ್ದಂತೆ ಎಲ್ಲಾ ಕೂಲಿಗಳು ಕೆಲ್ಸ ಮುಗಿಸಿ ತಮ್ ತಮ್ ಮನೆಗೆ ತೆರಳಲು ಸಿದ್ದರಾದರು, ಪಿವರ್,ಲೋಲಾರ ಯಂತ್ರಗಳು ಆ ಸ್ಮಶಾನ ಭೂಮಿಯ ಹತ್ತಿರದ ಆಲದ ಮರದ ಕೆಳಗೆ ನಿಲ್ಲಿಸಿ ಡ್ರೇವರ್‌ಗಳು ಟಿಪ್ಪರಿನೊಳಗೆ ಕುಂತು ಎಲ್ಲ ಕೂಲಿಗಳೊಂದಿಗೆ ಪುಣೆಯ ಕಂಪನಿಗೆ ವಾಪಾಸಾದರು. ಮಾಂತ್ಯಾ ಮಾತ್ರ ಆ ಸೈಡಿನಲ್ಲಿ ಒಬ್ಬನೆ ವಾಚಮೆನ್.ಅಂದ್ರೆ ರಸ್ತೆಯಲ್ಲಿ ಬಿಟ್ಟು ಹೋದ ಯಂತ್ರಗಳು ಕಾಯುವುದು ಅಲ್ಲದೆ ಅಲ್ಲಿಯ ಕಾಮಗಾರಿಗೆ ಬೇಕಾಗುವ ನೀರು ತುಂಬುವುದು ಮತ್ತು ಟಿಪ್ಪರಗಳು ಬರೋದ್ಕೆ ಮುಂಚೆ ಡಾಂಬಾರ್ ಬ್ಯಾರೆಲ್ ಕಾಸಿ ಇಡೋದು ಅವನ ಕೆಲ್ಸವಾಗಿತ್ತು. ಈ ಕೆಲ್ಸ ಮಾಡೊದರಿಂದ ಅವ್ನಿಗೆ ಡಬಲ್ ಹಾಜರಿ ಸಿಗುತ್ತಿತ್ತು.ಆದ್ದರಿಂದ ಇವತ್ತು ಕೂಡ ಲೌನಾವಳದ ಎನ್.ಎಚ್-4 ರಸ್ತೆಯ ಪಕ್ಕಕ್ಕೆ ಇರುವ ಸ್ಮಶಾನ ಭೂಮಿಯ ಪಕ್ಕದ ರಸ್ತೆಯಲ್ಲಿ ದಗದ ಮಾಡಿರುವುದರಿಂದ ಅಲ್ಲೆ ಆಲದ ಮರದ ಕೆಳಗೆ ನಿಂತ ಪಿವರ್ ಗಾಡಿಯ ಮೇಲೆ ರಾತ್ರಿ ಕತ್ತಲು ಆವರಿಸಿರುವುದರಿಂದ ‘ಸ್ಟೋ’ ಹೊತ್ತಿಸಿ ಅದರ ಮೇಲೆ ಅನ್ನ, ಸಾರು ಮಾಡಿದ ಮೇಲೆ ‘ಸ್ಟೋ’ ಸಣ್ಣಗೆ ಉರಿಯುವ ದೀಪದಂತೆ ಬೆಳಕಿಟ್ಟು ಹಾಗೆ ಅಲ್ಲೆ ಕುಂತು ಬಿಸಿ ಬಿಸಿ ಊಟ ಮಾಡಿದ. ನಂತರ ಅದರ ಮೇಲೆ ಚೀಲದ ತಟ್ಟೊಂದು ಹಾಸಿ ಒಂದ್ ಬೀಡಿ ಹೊತ್ತಿಸಿ, ಮತ್ತೆ “ಉಫ್ ! ಉಫ್ ! ” ಅಂತ ಹೊಗೆ ಹೊರ ಬಿಡ್ತಾ ಕ್ಷಣಿಕ ಸುಖದಲ್ಲಿ ವಿರಮಿಸುತ್ತಾ ಮೇಲೆ ನೋಡಿದ .ಈಗ ಮರದಿಂದ ಗೂಬೆಯೊಂದು ಹಾರಿ ಹೋದ ಅನುಭವವಾದ್ದರಿಂದ ಸ್ವಲ್ಪ ಭಯವಾದರೂ ಧೈರ್ಯ ತಂದುಕೊಂಡು ಎದ್ದು ಕುಳಿತು ಮತ್ತೆ ಬೀಡಿಯ ಹೋಗೆ ತೀವ್ರವಾಗಿ ಎಳೆದು ಮತ್ತೆ ಮತ್ತೆ ಹೊರಬಿಟ್ಟ . ಕರಾಳ ರಾತ್ರಿ ಪಕ್ಕದ ಎನ್.ಎಚ್.4 ರ ರಸ್ತೆಯಲ್ಲಿ ತಿರುಗುವ ಗಾಡಿಗಳ ಸಪ್ಪಳ ಬಿಟ್ರೆ ಬೇರೇನು ಕೇಳಿಸುತ್ತಿಲ್ಲ. ಜನ ಸುಳಿಯುವಂತ ಪ್ರದೇಶವಂತು ಅದೂ ಅಲ್ಲವೇ ಅಲ್ಲ. ಮೊದ್ಲೆ ಇದು ಶ್ಮಾಸನವಾಗಿದ್ದರಿಂದ ಭಯಗೊಂಡ ಮಾಂತ್ಯಾ, “ಈ ಹಾಳಾದ ಸೂಳೆ ಮಗಾ ಡ್ರೇವರ್, ಯಾಕಾದ್ರೂ ಇಲ್ಲಿ ತಂದು ನಿಲ್ಲಿಸಿ ಹೊದ್ನೋ ! ಮೊದ್ಲೆ ಗೊತ್ತಾಗಿದ್ರೆ ಇಲ್ಲಿಂದ ಬೇರೆಡೆಗೆ ನಿಲ್ಲಿಸಲು ಹೇಳುತ್ತಿದೆ.ನಂಗೆ ಬಂಗಾರ ಸಿಕ್ಕ ಖುಷಿಯಲ್ಲಿ ಹೇಳೊದೆ ಮರ‍್ತು ಬಿಟ್ಟಿದ್ದೆ. ಇರ‍್ಲಿ.! ಏಟಾದ್ರೂ ನನ್ನಲ್ಲಿ ಬೆಂಕಿ ಪೊಟ್ಟಣವಿದೆ. ಬೆಂಕಿಗೆ ದೆವ್ವ ಭೂತಗಳು ಸುಳಿಯೊದಿಲ್ಲಾಂತ ಹೇಳ್ತಾರೆ ” ಅಂತ ಮತ್ತೊಂದು ಬೀಡಿ ತೆಗ್ದು ಒಂದರ ಮೆಲೊಂದೊಂದು ಸೆದ್ತಾ ಗಂಟಲಿಗೆ “ಚುರ್ ” ಎಂದಾಗ್ಲೆ ಬಿಟಾಕಿ ಚಾದರ್ ಹೊದ್ದುಕೊಂಡು ಮಲಗಿದ.” ಗೂಕ್,ಗೂಕ್ ! ಎಂದು ಗೂಗಿಯ ದನಿ ಕೇಳತೊಡಗಿತ್ತು. ಆ ಕೂಗಿಗೆ ಜೊಂಪು ಹತ್ತುತಿದ್ದ ನಿದ್ರೆಯಿಂದ ಎಚ್ಚೆತ್ ಮಾಂತ್ಯಾ ಮೇಲೇಳಬೇಕೆಂದು ಕೊಂಡ ಅದ್ಯಾಕೋ ಏಳಲೂ ಆಗದೆ ಹಾಗೆ ಮಲಗಿದ. ಕಣ್ಣಾದ್ರೂ ತೆರೆದು ನೋಡಬೇಕೆಂದು ಪ್ರಯತ್ನಿಸಿದ. ರೆಪ್ಪೆಗಳು ತೆರೆಯಲೊಲ್ಲವು. ಎಷ್ಟೇ ಪ್ರಯತ್ನಿಸಿದ್ದರೂ ಆಗದೆ ಸುಮ್ಮನೆ ಹಾಗೆ ಮಲಗಿದ .ಆಗ ಮೇಲಿನಿಂದ ಏನೋ ” ದೊಪ್ಪನೆ ” ಪಿವರ್ ಟಾಪಿನ ಮೇಲೆ ಬಿದ್ದ ಸಪ್ಪಳಕ್ಕೆ ಮತ್ತೆ ಭಯವಾಗಿ ಬೆಂಕಿ ಪೊಟ್ಟಣ ಹುಡುಕಲು ಕೈ ಎತ್ತುತಿದ್ದಂತೆ ಅದೂ ಎಳದೆ ಹೋಯಿತು. ಕಾಲುಗಳು ಹಾಗೆ ಸೆಟೆದಂತೆ ಭಾಸವಾದವು. ದೇಹದ ಯಾವುದೆ ಅಂಗಗಳು ಕೆಲ್ಸ ಕಾರ್ಯಗಳು ಮಾಡದೆ ಸತ್ತ ಹೆಣದಂತೆ ಜೀವಂತವಾಗಿ ಬಿದ್ದು ಮಲಗಿದ. ಆಗ ಎದೆಯ ಮೇಲೆ ಯಾಕೋ ಭಾರವಾಗತೊಡಗಿತ್ತು. ” ಯಾರು ? ಯಾರು ? ” ಅಂತ ಚಡಪಡಿಸಿ ಕಷ್ಟಪಟ್ಟು ಕಣ್ಣು ತೆರೆದ. ತಲೆಯಿಲ್ಲದ ಮಾನವನಂತೆ ಒಬ್ಬ ಕುಳಿತಿದ್ದ. ಒಡನೆ ಚಟ್ಟನೆ ಚೀರಬೇಕೆಂದ. ಆದರೆ ಅದರ ಕೈಗಳು ಕುತ್ತಿಗೆ ದಬಾಯಿಸಿದ್ದರೆ ? ಎಂದು ಭಯಗೊಂಡು ಮನದೋಳಗೆ “ಓಂ ನಮಃ ಶಿವಾಯ ” ಎಂದು ಜಪಿಸಿದ. ಈಗ ಎದೆ ಹಗುರವಾಗಿತ್ತು. ಒಡನೆ ಮತ್ತೆ ಕಣ್ಣು ತೆರೆದು ನೋಡಿದ. ಯಾರು ಕಾಣಲಿಲ್ಲ. ಹಾಗೆ ಹಾಸಿಗೆಯಿಂದಲೆ ದೂರದೆಡೆ ಕಳ್ಳ ದೃಷ್ಟಿ ಬೀರಿದ. ಅದೇ ತಲೆ ಇಲ್ಲದ ಮಾನವ ತನ್ನೆರಡು ಕೈಗಳನ್ನು ಬೀಸುತ್ತಾ ಬರತೋಡಗಿದ.ಮತ್ತೆ ಆತ ಹತ್ತಿರ ಬರುತ್ತಾ ” ಎಲೈ ! ಯುವಕನೇ ! ಹೇದರಬೇಡ .ನಂಗೆ ತಲೆ ಇಲ್ಲದವನೆಂದು ತಿಳಿಯಬೇಡ. ನೀನು ತಲೆ ಇದ್ದರು ತಲೆ ಇಲ್ಲದವನಾಗಿದ್ದಿ. ನಾನು ಒಂದು ವರ್ಷದ ಹಿಂದೆ ಅಂದ್ರೆ, ಇದೆ ಆಲದ ಮರದ ಕೆಳಗೆ ಎಕ್ಷಿಡೆಂಟ್ ನಲ್ಲಿ ನನ್ನ ಕುತ್ತಿಗೆ ಹಾರಿ ಹೋಯ್ತು. ಈಗ ಉಳಿದದ್ದು ನನ್ನ ದೇಹ ಮಾತ್ರ. ನಾನು ಮನೆಗೆ ಹೋಗ್ಬೇಕು, ಹೆಂಡ್ತಿ,ಮಕ್ಳಿಗಿ ನೋಡಬೇಕೆಂದು ಅದೇಷ್ಟೋ ಸಲ ಅಂದುಕೊಂಡಿದ್ದೇನೆ. ಆದ್ರೆ ಏನು ಮಾಡ್ಲಿ ?” ಅಂತ ನನ್ ತಲೆ ಸಿಗದೆ ಪಿಶಾಚಿಯಾಗಿ ಅಲೆಯುತ್ತಿದ್ದೆನೆ. ದಿನಾ ನಾನು ಮಲಗುವ ಜಾಗದಲ್ಲಿ ನೀನು ಮಲಗಿದ್ದಿಯಾ, ಮಲಗು. ನಾನು ಎಕ್ಷಿಡೆಂಟ್ ನಲ್ಲಿ ಸತ್ತಾಗ ನನ್ನ ಶವಕ್ಕೆ ಇದೆ ಸ್ಮಶಾನದಲ್ಲಿ ಬೆಂಕಿ ಹಚ್ಚಲಾಯಿತ್ತು. ಪಾಪ ! ನನ್ನ ಹೆಂಡ್ತಿ ತುಂಬಾ ಪತಿವೃತೆ ಆಕೆ ತನ್ ಮುತೈದೆತನವನ್ನೆಲ್ಲ ತೆಗೆದಿಟ್ಟು ಹೊದ್ಳು. ನಾನು ಅವಳು ತೆಗೆದಿಟ್ಟಿದ ಮಾಂಗಲ್ಯಾ ನೋಡ್ತಾ ಅದರಲ್ಲಿ ಅವಳನ್ನು ಕಾಣ್ತಿದ್ದೆ.ಈಗ ಅದು ನಿನ್ನಲ್ಲಿ ಇದೆ. ಅದು ಮಸಣದೊಳಗೆ ಬಂದು ಎಲ್ಲಿತ್ತು ಅಲ್ಲಿ ಇಟ್ಟು ಹೋಗು ಇಲ್ಲಾಂದ್ರೆ…….” ಅಂತ ಗಹಗಹಿಸಿ ನಗತೊಡಗಿದ. ಆ ಶಬ್ದಕ್ಕೆ ಹೆದರಿ “ಬುಸ್ಸುಕನೆ” ಎದ್ದ ಮಾಂತ್ಯಾ ಸುತ್ತಲೆಲ್ಲ ಕಣ್ಣಾಡಿಸಿದ.ನಿರವತೆಯ ವಾತಾವರಣ ಕಿಸೆಯಲ್ಲಿ ಕೈ ಹಾಕಿ ಮಾಂಗಲ್ಯಾ ಸರ ಇರುವುದ ಖಾತ್ರಿ ಪಡಿಸಿಕೊಂಡು , “ಇದ್ಯಾಕೋ ಕೆಟ್ಟ ಕನಸ್ಸು ” ಅಂತ ತಿಳಿದು ಮಾಂಗಲ್ಯಾ ಸರ ಬಿಟ್ಟುಕೊಡಲು ಮನಸ್ಸಾಗದೆ ಛೇ ! ಅಂತ ಯಾಕೋ ಒಂಥರ ಭಯದ ವಾತಾವರಣಕ್ಕೆ ಹೆದರಿ ಮತ್ತೆ ಕಡ್ಡಿ ಗೀರಿ ಬೀಡಿ ಹೊತ್ತಿಸಿಕೊಂಡು ಟೈಂ ನೋಡಿದ. ಬರೋಬರಿ ಮಧ್ಯರಾತ್ರಿ ಹನ್ನೇರಡುವರೆಯಾಗಿತ್ತು. ಇದು ದೆವ್ವಗಳ ಸಮಯವೆಂದು ಹೆದರಿ ಕೈಯಲ್ಲಿಯ ಬೀಡಿ ಬಿಸಾಕಿ ಅಂಜುತ್ತಾ ಮುಸುಕು ಹಾಕಿಕೊಂಡು ಮಲಗಿದ. ಆದ್ರೆ ಅದ್ಯಾಕೋ ಸುಬ್ಬ್ಯಾ ಹೇಳಿದ ಮಾತು “ಏ ! ಮೊದ್ಲು ಅದು ಬಿಟಾಕು. ಹೆಣಾ ಸುಡೋ ಜಾಗದಾಂದು ಏನೇ ತಗೊಂಡ್ರು ಅದು ರಾತ್ರಿ ಕನಸಿನ್ಯಾಗ್ ದೆವ್ವಾಗಿ ಬಂದು ಕಾಡ್ತಾದೆ .” ಎಂದ ಮಾತು ಮತ್ತೆ ಮತ್ತೆ ನೆನಪಾಗತೊಡಗಿತ್ತು. ಹಾಗೆ ಹೆದರಿ ಮಾಗಿಯ ಕಾಲವಾದ್ದರಿಂದ ಚಳಿಗೆ ‘ಗಡಗಡ ‘ ನಡುಗುತ್ತಾ ಮಾಂತ್ಯಾ ನಿದ್ರೆ ಹೋಗದೆ ಡುಕ್ಕು ಹೋಡೆದು ಮಲಗಿದ.ಬೆಳಿಗ್ಗೆ ಹನ್ನೇರಡು ಗಂಟೆಗೆ ನಾಕಾರು ಡಾಂಬಾರು ಟಿಪ್ಪರಿನೊಂದಿಗೆ ಬಂದ ಮೊಕಾದಂ ರಮಾಣಾನಂದ ಇನ್ನೂ ಮಾಂತ್ಯಾ ಮಲಗಿರುವುದನ್ನು ನೋಡಿ ಮತ್ತೆ ಕೊಪಗೊಂಡ ಆತ’ ಮಾಂತ್ಯಾ ! ಏ , ಮಾಂತ್ಯಾ ! ಏಳೋ ! ಇನ್ನೂ ಮಲಗಿದ್ದೇನೋ ಕುರ್ಸಾಲ್ಯ ? ಏಳು, ಬಾರಾ ಬಡೆದರು ಮಲ್ಕೊತ್ತಾರೇನೊ ಬದ್ಮಾಸಾ.! ನಿನಗಿಂತ ಬೇಗ ಎದ್ದು ಪುಣೆಯಿಂದ ದಿಡಸೆ ಕಿಲೋ.ಮೀಟರ್ ಓಡ್ತಾ ಬರ‍್ತಾ ಇದ್ವಿ . ನೀನು ನೋಡಿದ್ರೆ ಇಲ್ಲಿ ಇನ್ನೂ ಮಲಗಿದ್ದಿಯಾ ? ಏಳು ! ” ಅಂತ ಹೊದ್ದುಕೊಂಡು ಮಲಗಿರುವ ಚಾದರ ಹಿಡಿದು ಎಳೆದಾಗ ಮಾಂತ್ಯಾ ಹೆಣವಾಗಿ ನೆಲಕ್ಕುರುಳಿದ .ಅವನ ಕಿಸೆಯಲ್ಲಿನ ತಾಳಿ ನೇತಾಡುತ್ತಿತ್ತು
– ಮಚ್ಚೇಂದ್ರ ಪಿ.ಅಣಕಲ್.