Oplus_131072

ಭಾರತಕ್ಕಾಗಿ ಕೈ ಎತ್ತು.

ಈ ಸೃಷ್ಟಿಯ ಎಲ್ಲಾ ಜೀವಿಗಳಲ್ಲಿ ಮಾನವ ಜೀವಿ ಮಾತ್ರ ಸ್ವಲ್ಪ ಬುದ್ಧಿವಂತ ಆದರೂ ಉಳಿದ ಜೀವಿಗಳಿಗೆ ಹೋಲಿಸಿದರೆ ಪೆದ್ದ. ಹಾಗೆ ಇಲ್ಲಿ ಮಾನವ ಮಾತ್ರವೇ ಜಾತಿ , ದೇವರು , ಧರ್ಮ ಎನ್ನುವುದು, ಮತ್ತು ಅದರ ಜೊತೆಗೇ ನಿತ್ಯದ ಬದುಕು ನಡೆಸುವುದನ್ನು ನಾವು ಸಹಜವಾಗಿ ಭಾರತ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಕಾಣುತ್ತೇವೆ. ಇಡೀ ಮಾನವ ಕುಲ ಶತ ಶತಮಾನಗಳಿಂದಲೂ , ತನ್ನ ಬುದ್ಧಿ ತಿಳಿದಾಗಿನಿಂದಲೂ ಜಾತಿ , ದೇವರು ಮತ್ತು ಧರ್ಮದ ದಾರಿಯಲ್ಲಿ ಸಾಗಿ ಬಂದಿದೆ. ಮುಂದೆ ಕೂಡ ಹೀಗೆ ಸಾಗುತ್ತಲೇ ಇರುತ್ತದೆ.
ಇದು ಒಂದು ರೀತಿಯಲ್ಲಿ ಇದು ಒಳ್ಳೆಯದೇ. ಇಲ್ಲಿ ಮಾನವನು ತಾನು ತಾನಾಗಿಯೇ ಧರ್ಮದ ಹೆಸರಿನಲ್ಲಿ ಒಂದು ರೀತಿಯ ಕಾನೂನಾತ್ಮಕ ನಿರ್ಬಂಧಿತ ಜೀವನ ನಡೆಸುತ್ತಿರುವ. ತನ್ನ ಜೀವನ , ತನ್ನ ಆಚರಣೆ ತನ್ನಷ್ಟಕ್ಕೆ ತಾನೇ ಅನುಸರಿಸುವುದು ಒಳ್ಳೆಯದು. ಅವುಗಳನ್ನು ಬೇರೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡಬಾರದು. ಇದು ತನ್ನ ಮನೆಗೆ ಮಾತ್ರ ಸೀಮಿತವಾಗಿರಬೇಕು. ಅದು ಹೊಸ್ತಿಲ ಒಳಗೆ ಮಾತ್ರ ಇದ್ದರೆ ಒಳ್ಳೆಯದು. ಹೊರಗೆ ಬರುವಾಗ ಯಾವುದೇ ಸಾಂಕೇತಿಕ ಕೂಡ ಇರಕೂಡದು. ಆಗ ಮಾತ್ರವೇ ನಾವು ನೆಮ್ಮದಿಯ ಜೀವನ ನಡೆಸಲು ಸಾಧ್ಯ.

ಆದರೆ ಹೀಗೆ ಸುಖಮಯ ಜೀವನ ನಡೆಸುತ್ತಿರುವ ಜನರ ನಡುವೆ ಕೆಲ ಪೈಶಾಚಿಕ ಮನಗಳು , ಜಾತಿ ಧರ್ಮ ದೇವರ ಅಮಲೇರಿರುವ ಜನರು ಇದ್ದೇ ಇರುತ್ತಾರೆ. ಅವರು ಸಾಮಾನ್ಯ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ವಿರೋಧದ ಅಲೆಯನ್ನೇ ಸೃಷ್ಟಿಸಿ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಡುತ್ತಾರೆ. ಇದನ್ನು ನಾವು ಗಮನಿಸಬೇಕು. ಅಂತಹ ಸಂದರ್ಭದಲ್ಲಿ ಯಾರೂ ಪ್ರಚೋದನೆಗೆ ಒಳಪಡದೇ ಅವರನ್ನು ಅಲಕ್ಷಿಸಿದರೆ ಆಗ ಆ ಕುತಂತ್ರಿ ಗಳ ಆಟ ಏನೂ ನಡೆಯದು. ಮುಂದೆ ಏನೂ  ಮಾಡಲೂ ಆಗುವುದಿಲ್ಲ.

ಇನ್ನು ದೇವರು ಮತ್ತು ಧರ್ಮಗಳ ವಿಚಾರದಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ದೊಡ್ಡ ಕಂಟಕ ಎದುರಾದಂತೆ ಕಾಣುತ್ತದೆ. ಬಹುತೇಕ ರಾಷ್ಟ್ರಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ಅನೇಕ ಸಂಘಟನೆಗಳು ತಲೆ ಎತ್ತಿ ನಿಂತಿವೆ ಅದರಲ್ಲೂ ಕೆಲವು ಸಂಘಟನೆಗಳು ಮಾನವೀಯತೆಯನ್ನೇ ಮರೆತು ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಮುಗ್ಧ ಜನರ ಮಾರಣ ಹೋಮ ನಡೆಸಿದ್ದಾರೆ. ಈ ರೀತಿಯ ಬೆಳವಣಿಗೆಗಳು ಮುಂದೆ ಮಾನವ ಕುಲದ ವಿನಾಶಕ್ಕೆ ಕಾರಣವಾಗುತ್ತದೆ‌. ಇಲ್ಲಿ ನಮ್ಮ ಎಚ್ಚರಿಕೆಯ ಹೆಜ್ಜೆ ತುಂಬಾ ಮುಖ್ಯ.

ನನ್ನ ಅಭಿಪ್ರಾಯ ಇಷ್ಟೇ ನಮ್ಮ ಭಾರತದಲ್ಲಿ ಇಂತಹ ಪರಿಸ್ಥಿತಿಗೆ ನಾವು ಅವಕಾಶ ನೀಡಬಾರದು. ಅಂತಹ ಭಿನ್ನತೆಯು ಯಾವ ಕಾಲಕ್ಕೂ ಒಳ್ಳೆಯದಲ್ಲ. ಮಾನವ ಒಂದೇ ಕುಲ , ದೇವರು ಎಲ್ಲರಿಗೂ ಒಬ್ಬನೆ , ಧರ್ಮ ಇದು ಬದುಕುವ ರೀತಿ ಅಷ್ಟೇ ಇದು ಆಯಾ ಪರಿಸರಕ್ಕೆ ತಕ್ಕಂತೆ ಇರೋದು. ಇದನ್ನು ಪ್ರತಿಯೊಬ್ಬರೂ ಅರಿತು ನಡೆದರೆ ಜೀವನ ಎಷ್ಟು ಚೆನ್ನಾಗಿರುತ್ತೆ ಅಲ್ಲವೇ.

ಭಿನ್ನತೆ ಸೃಷ್ಟಿಸುವ ಹೇಳಿಕೆಯನ್ನು ಯಾರೂ ಕೂಡ ಕೊಡಬಾರದು. ನಾವೆಲ್ಲ ಭಾರತದಲ್ಲಿ ಇದ್ದುಕೊಂಡು ಏಕತೆಯನ್ನು, ಐಕ್ಯತೆಯನ್ನು ಸಾಧಿಸುವ ಯೊಚನೆ ಮಾಡಬೇಕು. ಅದು ಬಿಟ್ಟು ನಾನು ಹಿಂದೂ,  ನಾನು ಮುಸ್ಲಿಂ. ನಾನು ಕ್ರಿಶ್ಚಿಯನ್ನ್ ,ನಾನು ಭೌದ್ಧ , ನಾನು ಜೈನ ಮತ್ತು ಇನ್ನಾವುದೋ ಎಂದು  ಹೇಳಿಕೊಂಡು ನಮ್ಮತನ ಪ್ರದರ್ಶನ ಮಾಡಬಾರದು. ಹೀಗೆ ಮಾಡುವವರು ಮೊದಲು ಯೋಚನೆ ಮಾಡಬೇಕು ಅದು ಉಂಡ ಮನೆಗೆ  ದ್ರೋಹ ಬಗೆದಂತೆ.

ಭಾರತದ ನೆಲದಲ್ಲಿ ಇರುವ ಎಲ್ಲರೂ ಒಂದೇ. ಜಾತಿ, ಧರ್ಮ, ದೇವರು ಅದೇನೇ ಇರಲಿ ಅವುಗಳನ್ನು  ನಮ್ಮ ಸ್ವಾರ್ಥಕ್ಕಾಗಿ ಬೀದಿಗೆ ತರುವುದು ಹ್ಯೇಯ ಕೆಲಸ. ದೇವರು, ಧರ್ಮ  ಅದು ಏನೇ ಇದ್ದರೂ ನಮ್ಮ ನಮ್ಮ  ವೈಯಕ್ತಿಕ ವಿಚಾರ. ಅವು ಏನಿದ್ದರೂ ನಮ್ಮೆಲ್ಲರ ಮನೆಯಲ್ಲಿಯೇ ಇರಲಿ, ಮನದೊಳಗೆ ಇರಲಿ. ಅದು ಬಿಟ್ಟು ಈ ಕಾರಣಕ್ಕಾಗಿಯೇ ನಮ್ಮ ನಮ್ಮಲ್ಲಿ ಕಿತ್ತಾಡುವುದು ಸರಿಯಲ್ಲ . ಮಾನವ ಕುಲ ಎಂಬುದು ಒಂದೇ. ಅದು ಒಂದೇ ಕುಟುಂಬದ ಹಾಗಿರಬೇಕು. ಹಾಗಾಗಿ, ಎಲ್ಲಾ ದ್ವೇಷ ಅಸೂಯೆ  ಬಿಟ್ಟು ನಮ್ಮ ದೇವರು,  ಧರ್ಮಗಳನ್ನು ಮನೆಯಲ್ಲಿಯೇ ಕೂಡಿಹಾಕಿ ಹೊರ ಬರೋಣ.

ಇಲ್ಲಿ ಇನ್ನೊಂದು ಮುಖ್ಯ ವಿಚಾರ ನಾವು ಅಂದರೆ ಭಾರತೀಯರು ಯಾವಾಗಲೂ, ಯಾರು , ಏನೇ ಕೇಳಿದರೂ ನಾನು ಈ ಧರ್ಮದವ ಅಥವಾ ಈ ಜಾತಿಯವ ನನ್ನ ದೇವರು ಇದೇ ಎಂದು ಹೇಳುವ ಬದಲು , ನಾನು ಭಾರತೀಯ ಎಂಬ ಕೂಗು ಅಥವಾ ಈ ಮಾತೊಂದನ್ನು ಬಿಟ್ಟು ಬೇರೆ ಏನೂ  ಹೇಳದಿದ್ದರೆ ಆಗ ನೋಡಿ ಹೇಗಿರುತ್ತದೆ. ಆಗ ಜಾತಿ ಧರ್ಮ ಮೂಲೆ ಗುಂಪಾಗಿ ಹೋಗುತ್ತವೆ. ಆಗ ಭಾರತೀಯ ಕೀರ್ತಿ ವಿವಿಧತೆಯಲ್ಲಿ ಏಕತೆ ಎಂಬ ಆಶಯದೊಂದಿಗೆ ವಿಶ್ವಕ್ಕೆ ಹರಡಿ ಒಂದು ಸುಂದರ ಮಾದರಿ ದೇಶವಾಗಿ ನಿಲ್ಲುತ್ತದೆ.
ಅದಕ್ಕೆ ನಾನು ಹೇಳೋದು
ಭಾರತಕ್ಕಾಗಿ ಕೈ ಎತ್ತು ,
ನೋಡಾಗ ಭಾವೈಕ್ಯತೆಯ ಗತ್ತು.
ನಾವೆಲ್ಲರೂ ಭಾರತೀಯರು. ಜೈ ಭಾರತ.

ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ ರಾಯಚೂರು.

Oplus_131072

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ