ವಲಸೆ ಹಕ್ಕಿಗಳ ಆಕರ್ಷಿತ ತಾಣ: ಯಾದಗಿರಿಯ ಬೋನಾಳ ಪಕ್ಷಿಧಾಮ.
– ಮಚ್ಚೇಂದ್ರ ಪಿ ಅಣಕಲ್.
ಕರ್ನಾಟಕದಲ್ಲಿ ಒಟ್ಟು 25 ಪಕ್ಷಿಧಾಮಗಳಿದ್ದು ಅವುಗಳಲ್ಲಿ ಮಂಡ್ಯದ ರಂಗನತಿಟ್ಟು, ಮೊದಲ ಸ್ಥಾನದಲ್ಲಿದ್ದರೆ , ಯಾದಗಿರಿ ಜಿಲ್ಲೆಯ ‘ಬೋನಾಲ್ ‘ ಪಕ್ಷಿಧಾಮವು ರಾಜ್ಯದ ಎರಡನೇ ಅತಿದೊಡ್ಡ ಪಕ್ಷಿಧಾಮವಾಗಿದೆ.
ನಮ್ಮ ಭಾರತದಲ್ಲಿ ಹಲವಾರು ಪ್ರಮುಖ ಪಕ್ಷಿಧಾಮಗಳಿವೆ. ಆ ಪಕ್ಷಿಧಾಮಗಳಲ್ಲಿರುವ ಪ್ರತಿಯೊಂದು ಪಕ್ಷಿಯು ವಿಭಿನ್ನ ನೈಸರ್ಗಿಕವಾದ ಆವಾಸ ಸ್ಥಾನವನ್ನು ಹೊಂದಿವೆ ಆದ್ದರಿಂದ ನಾವು ಎಲ್ಲ ಕಡೆಯೂ ಒಂದೇ ರೀತಿಯ ಪಕ್ಷಿಗಳನ್ನು ಕಾಣುವುದು ಅಸಾಧ್ಯವಾಗಿದೆ.
ಪಕ್ಷಿಗಳು ಮತ್ತು ಅವುಗಳ ಜಾತಿಗಳನ್ನು ರಕ್ಷಿಸಲು ನಮ್ಮ ದೇಶದಲ್ಲಿ ಹಲವು ಪಕ್ಷಿಧಾಮಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ಈ ಪಕ್ಷಿಧಾಮಗಳು ಪಕ್ಷಿಗಳ ಸಂರಕ್ಷಿತವಾಗಿಡುವ ಪ್ರದೇಶಗಳಾಗಿವೆ. ಮತ್ತು ಅವು ಸ್ಥಳೀಯ ಪಕ್ಷಿ ಪ್ರಭೇದವನ್ನು ಸಂರಕ್ಷಿಸಿ, ರಕ್ಷಿಸುತ್ತವೆ ಎಂದು ಹೇಳಬಹುದು.
ಪಕ್ಷಿಗಳ ಉಳಿವು ಮತ್ತು ಅವುಗಳ ಸಂತಾನೋತ್ಪತ್ತಿಗಾಗಿ ಈ ನೈಸರ್ಗಿಕವಾದ ಆವಾಸ ಸ್ಥಾನಗಳನ್ನು ಆಯಾ ಸರ್ಕಾರದದ ಒದಗಿಸಲಾಗಿರುತ್ತದೆ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯು (BNHS) ಹೇಳುವಂತೆ ಭಾರತದಲ್ಲಿ ಒಟ್ಟು 72 ಪಕ್ಷಿಧಾಮಗಳು ಮತ್ತು 1210 ಪಕ್ಷಿ ಪ್ರಭೇದಗಳನ್ನು ಹೊಂದಿವೆ ಎಂದು ಅದು ಈ ಹಿಂದೆ ವರದಿ ಮಾಡಿರುತ್ತದೆ.
ಕರ್ನಾಟಕದಲ್ಲಿ ಒಟ್ಟು 25 ಪಕ್ಷಿಧಾಮಗಳಿದ್ದು ಅವುಗಳಲ್ಲಿ ಮಂಡ್ಯ ಜಿಲ್ಲೆಯ ರಂಗನತಿಟ್ಟು, ಮೊದಲ ಸ್ಥಾನದಲ್ಲಿದ್ದರೆ , ಕಲ್ಯಾಣ ಕರ್ನಾಟಕ ಪ್ರದೇಶದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ‘ಬೋನಾಲ್ ‘ ಪಕ್ಷಿಧಾಮವು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುತ್ತದೆ. ಎನ್ನುವುದು ಇಲ್ಲಿಯ ಯಾದಗಿರಿ ಜಿಲ್ಲೆಯ ಜನರಿಗೆ ತುಂಬ ಹೆಮ್ಮೆಯ ವಿಷಯವಾಗಿದೆ.
ಇನ್ನೂ ರಾಜ್ಯದ ಕೆಲ ಪಕ್ಷಿಧಾಮಗಳಿವೆ .ಅವುಗಳಲ್ಲಿ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ, ರಾಮದೇವರ ಬೆಟ್ಟ ರಣಹದ್ದು, ಧಾರವಾಡ ಜಿಲ್ಲೆಯ ಗುಡವಿ, ಆದಿಚುಂಚನಗಿರಿ ನವಿಲು ಪಕ್ಷಿಧಾಮ, ಗದಗದ ಮಾಗಡಿ, ಚಿತ್ರದುರ್ಗ ಜಿಲ್ಲೆ ಸಿರಾ ತಾಲ್ಲೂಕಿನ ಕಗ್ಗಲಡು,ಉತ್ತರ ಕನ್ನಡದ ಅತ್ತಿವೇರಿ,ಕೊಕ್ಕರೆ ಬೆಳ್ಳೂರು ,ಪೆಲಿಕನ್ರಿ ಮೊದಲಾದ ಪಕ್ಷಿಧಾಮಗಳು ಕರ್ನಾಟಕದಲ್ಲಿ ಪ್ರಮುಖವಾಗಿ ಕಂಡು ಬರುತ್ತವೆ.
ಯಾದಗಿರಿ ಜಿಲ್ಲೆಯ ‘ಬೋನಲ್‘ ಪಕ್ಷಿಧಾಕ್ಕೆ ಕೆಲವು ಸಲ ‘ಬೋಹ್ನಾಲ್‘ ಪಕ್ಷಿಧಾಮ ಎಂದು ಕೂಡ ಕರೆಯಲಾಗುತ್ತದೆ. ಇದು ಸುರಪುರ ತಾಲೂಕಿನ ‘ಬೋನಲ್ ‘ ಎಂಬ ಗ್ರಾಮದಲ್ಲಿ ನಿರ್ಮಿಸಲಾಗಿದೆ.
ಈ ಪಕ್ಷಿಧಾಮಕ್ಕೆ ಹೋಗುವ ರಸ್ತೆಯು ಸುರಪುರ ನಗರದಿಂದ ‘ಬೋನಾಳ’ ಪಕ್ಷಿಧಾಮಕ್ಕೆ ಹೋಗುವಾಗ ಸುರಪುರ ನಗರದಲ್ಲೇ ‘ಬೋನಾಳ ಪಕ್ಷಿಧಾಮಕ್ಕೆ ಸ್ವಾಗತ’ ಎಂದು ಒಂದು ದೊಡ್ಡದಾದ ಕಮಾನ್ ಮಾಡಲಾಗಿದೆ. ಅಲ್ಲಿಂದ ಇದು ಪಶ್ಚಿಮಕ್ಕೆ 10 ಕಿಮೀ ದೂರದಲ್ಲಿದೆ.
ಈ ಪಕ್ಷಿಗಳ ಅಭಯಾರಣ್ಯದ ಮೂಲವು ಬೋನಾಲ್ ‘ನ ನೀರಿನ ಸಂರಕ್ಷಣಾ ತೊಟ್ಟಿಯಲ್ಲಿದೆ. ಇದು 17 ನೇ ಶತಮಾನದಲ್ಲಿ ಶೋರಾಪುರದ ಆಡಳಿತಗಾರನಾಗಿದ್ದ ‘ಪಾಮ್ ನಾಯಕ್‘ ಎಂಬಾತನು ನಿರ್ಮಿಸಿದನೆಂದು ತಿಳಿದು ಬರುತ್ತದೆ. ನಂತರದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ, ಸುರಪುರದ ಬ್ರಿಟಿಷ್ ಆಡಳಿತಗಾರನಾದ ಮೆಡೋಸ್ ಟೇಲರ್ ನು 12 ಅಡಿಯ ಸರಾಸರಿ ಆಳದೊಂದಿಗೆ 1600 ಎಕರೆಗಳಿಗೆ ವಿಸ್ತರಿಸಿದನು ಎಂದು ಆತ ತನ್ನ ಆತ್ಮಚರಿತ್ರೆಯಾದ ‘ದಿ ಸ್ಟೋರಿ ಆಫ್ ಮೈ ಲೈಫ್ನಲ್ಲಿ’ ಬರೆದಿದ್ದಾನೆ.
ಬೋನಾಳ ಪಕ್ಷಿಧಾಮದಲ್ಲಿ ವಿವಿಧ ಜಾತಿಯ ಬಣ್ಣ ಬಣ್ಣದ ಪಕ್ಷಿಗಳು ಇರುವುದು ಕಂಡುಬರುತ್ತವೆ.ಅವುಗಳಲ್ಲಿ ನೇರಳೆ ಹೆರಾನ್,ಬಿಳಿ ಕುತ್ತಿಗೆಯ ಕೊಕ್ಕರೆ,ಬಿಳಿ ಐಬಿಸ್,ಕಪ್ಪು ಐಬಿಸ್,ಬ್ರಾಹ್ಮಣಿ ಬಾತುಕೋಳಿ, ಮತ್ತು ಬಾರ್- ಹೆಡ್ ಬಾತುಕೋಳಿ ಸೇರಿದಂತೆ ಸುಮಾರು 21 ಜಾತಿಯ ಪಕ್ಷಿಗಳು ಮತ್ತು136 ಬಗೆ ಬಗೆಯ ಹಕ್ಕಿಗಳನ್ನು ಇಲ್ಲಿ ಇರುವುದಾಗಿ ದಾಖಲಿಸಲಾಗಿದೆ. ಅವುಗಳಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಜಾತಿಯವು ಸ್ಥಳೀಯ ಹಕ್ಕಿಗಳಾದರೆ ಉಳಿದವು ವಿವಿಧ ದೇಶ ವಿದೇಶಗಳ ಕಡೆಯಿಂದ ವಲಸೆ ಬರುವಂತಹವುಗಳಾಗಿವೆ. ಒಮ್ಮೆ ಚಳಿಗಾಲದ ಸಮಯದಲ್ಲಿ 5 ತಾಸಿನ ಅವಧಿಯಲ್ಲಿ 7700 ಕ್ಕೂ ಅಧಿಕ ಹಕ್ಕಿಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ 500 ವಲಸೆ ಬರುವ ಬಾತುಕೋಳಿಗಳಾಗಿವೆ.
ಚಳಿಗಾಲದ ಬೇರೆ ಬೇರೆ ಸಮಯದಲ್ಲಿ ಇಲ್ಲಿ ಕಂಡ ಅಧಿಕ ಸಂಖ್ಯೆಯ ವಲಸೆ ಹಕ್ಕಿಗಳಿವೆ. ಅವುಗಳಲ್ಲಿ ಬಿಳಿ ಹುಬ್ಬಿನ ಬಾತು (ಗಾರ್ಗನಿ), ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್), ಚಲುಕ ಬಾತು (ನಾರ್ದರನ್ ಷೋವೆಲರ್), ಮಿಂಚು ಕೆಂಬರಲು (ಗ್ಲಾಸಿ ಐಬೀಸ್), ನಾಮದ ಬಾತು (ಯುರೋಷಿಯನ್ ವಿಝನ್ ), ಕಂದು ಬಾತು (ರಡ್ಡಿ ಷೆಲ್ಡಕ್ ), ಮೀಸೆ ರೀವ (ವಿಸ್ಕರ್ಡ್ ಟರ್ನ್), ಕಪ್ಪು ಬಾಲದ ಹಿನ್ನೀರು ಗೊರವ (ಬ್ಲಾಕ್ ಟೇಲಡ್ ಗಾಡ್ವಿಟ್), ಕೆಂಪು ರೆಕ್ಕೆಯ ಬಾತು(ಗಡ್ವಾಲ್), ಮತ್ತು ಸೂಜಿ ಬಾಲದ ಬಾತು (ಪಿನ್ ಟೇಲಡ್ ಡಕ್). ಚಳಿಗಾಲದ ಅವಧಿಯಲ್ಲಿ 3-4 ತಾಸಿನಲ್ಲಿ ಸುಮಾರು ನೂರಕ್ಕೂ ಅನೇಕ ಬಗೆಯ ಹಕ್ಕಿಗಳನ್ನು ನೋಡಬಹುದಾದ ಸಾಧ್ಯತೆ ಈ ಪಕ್ಷಿಧಾಮದಲ್ಲಿದೆ. ವಂಶಾಭಿವೃದ್ಧಿ ಮಾಡುವ ಸ್ಥಳೀಯ ಹಕ್ಕಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಅವುಗಳಲ್ಲಿ-
ಮೂರು ಬಗೆಯ ನೀರ್ಕಾಗೆಗಳು: (ಕಾರ್ಮೊರಂಟ್) – ಪುಟ್ಟ ನೀರ್ಕಾಗೆ, ಉದ್ದ ಕೊಕ್ಕಿನ ನೀರ್ಕಾಗೆ, ನೀರ್ಕಾಗೆ
4 ಬಗೆಯ ಬೆಳ್ಳಕ್ಕಿಗಳು– ದೊಡ್ಡ, ಮಧ್ಯಮ, ಪುಟ್ಟ ಹಾಗೂ ಗೋವಕ್ಕಿ (ಇಗ್ರೆಟ್); ಕಬ್ಬಾರೆ-ಕೆನ್ನೀಲಿ ಬಕ (ಗ್ರೇ ಹೆರಾನ್ ಮತ್ತು ಪರ್ಪಲ್ ಹೆರಾನ್), ಬಿಳಿ ಕೆಂಬರಲು (ಬ್ಲಾಕ್ ಹೆಡೆಡ್ ಐಬೀಸ್)ಗಳಲ್ಲದೆ ವರಟೆ (ಸ್ಪಾಟ್ ಬಿಲಡ್ ಡಕ್) ಮತ್ತು ಸಿಳ್ಳೆ ಬಾತುಗಳು (ಲೆಸ್ಸರ್ ವಿಷ್ಲಿಂಗ್ ಡಕ್).ಇತ್ಯಾದಿ ಬಗೆ ಬಗೆಯ ಹಕ್ಕಿಗಳು ಇಲ್ಲಿ ಕಂಡು ಬರುತ್ತವೆ.
ಈ ಪಕ್ಷಿ ಧಾಮವು ಮುಂದಿನ ದಿನಗಳಲ್ಲಿ ಹುಟ್ಟಿ ಬರುವ ಬರುವ ಪೀಳಿಗೆಗೆ ನೋಡಲು ಕಾಪಾಡಿಕೊಂಡು ಬರಬೇಕಾಗಿದೆ. ಇಲ್ಲಿನ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಕ್ಷಸಬೇಕಾಗಿದೆ. ಮತ್ತು ದೂರ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳಾದ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ,ಮತ್ತು ಹೋಗಿ ಬರಲು ಹಾಳಾದ ರಸ್ತೆ ದುರಸ್ತಿ ಮಾಡಬೇಕಾಗಿದೆ. ಅಷ್ಟೇಯಲ್ಲದೆ ರಸ್ತೆಯುದ್ದಕ್ಕೂ ಬೆಳೆದ ಮುಳ್ಳಿನ ಪೊದೆ ಗಿಡಗಂಟೆಗಳು ಕಡಿದು ಸ್ವಚಗೊಳಿಸಬೇಕಾಗಿದೆ. ಅಂದಾಗ ಮಾತ್ರ ದೂರದ ಪ್ರವಾಸಿಗರಿಗೆ ಈ ತಾಣ ನೋಡಿ ಕಣ್ತುಂಬಿಕೊಳ್ಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.
– ಮಚ್ಚೇಂದ್ರ ಪಿ ಅಣಕಲ್.
ಲೇಖಕರ ಪರಿಚಯ:
ಸಾಹಿತಿ ಮಚ್ಚೇಂದ್ರ ಪಿ ಅಣಕಲ್’ ರವರು ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರಾಗಿದ್ದು, ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಇಡಿ ಪದವಿ ಪಡೆದಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ ‘ಲಾಟರಿ’ಕತೆ ಬಹು ಮಾನ ಪಡೆದಿದೆ . 2010ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ ‘ಡಾಂಬಾರು ದಂಧೆ’ ಕತೆ ಬಹುಮಾನ ಪಡೆದು ‘ದೀಪಾತೊರಿದೆಡೆಗೆ’ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ.
ಇವರು ಬರೆದ ಕೃತಿಗಳು : ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು ( ಕವನಸಂಕಲನ), ಜ್ಞಾನ ಸೂರ್ಯ ( ಸಂಪಾದಿತ ಕಾವ್ಯ ), ಜನಪದ ವೈದ್ಯರ ಕೈಪಿಡಿ (ಸಂಪಾದನೆ), ಲಾಟರಿ , ಮೊದಲ ಗಿರಾಕಿ, ಹಗಲುಗಳ್ಳರು ( ಕಥಾಸಂಕಲನ) ಬೀದರ ಜಿಲ್ಲಾ ಸಾಹಿತಿಗಳ ಪರಿಚಯ (ಲೇಖನ ಸಂಕಲನ) ಇತ್ಯಾದಿ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ರಾಜ್ಯ ಮಟ್ಟದ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.