ಸ್ಫೂರ್ತಿ
ಮಾತಿಗೆ ಮಂದಾರವಾದ
ಸ್ಫೂರ್ತಿ
ಮನಸ್ಸಿಗೆ ಮಾಣಿಕ್ಯವಾದೆ,
ಮೈಯೆಲ್ಲಾ ಸಿಂಗಾರವಾಗಿ
ಮುತ್ತೈದೆಯರ ಬಂಗಾರವಾದೆ.
ಸರಳತೆಗೆ ಸಾಕ್ಷಿಯಾದೆ
ಸಹನೆಗೆ ಶರಣಾದೆ,
ಎಲ್ಲರೊಳಗೊಂದಾದೆ
ಎಲ್ಲರಿಗಿಂತ ಮುಂದಾದೆ.
ನಡಿಗೆಯಲ್ಲಿ ನವಿಲಾದೆ
ನುಡಿಯಲ್ಲಿ ಕೋಗಿಲೆಯಾದೆ,
ಬರೆದು ಬರೆದು ಕವಿಯಾದೆ
ಕನ್ನಡಾಂಬೆಯ ಕೂಸಾದೆ.
ಕಹಿ ನುಡಿಯ ಕರಗಿಸಿದೆ
ಸಿಹಿ ನುಡಿಯ ಸದಾ ನುಡಿದೆ.
ಮರೆಯಲು ಪ್ರಯತ್ನಿಸಿದೆ
ಆದರೂ ಮಾತಾಡಿಸಿದೆ.
ಬಾನಿನಲ್ಲಿ ಶಶಿಯಾದೆ
ಬೆಳದಿಂಗಳ ಬಾಲೆಯಾದೆ,
ನಿಲುಕದ ನಕ್ಷತ್ರವಾದ ಆದರೂ
ನನ್ನ ಕವನಕ್ಕೆ ನೀನೇ ಸ್ಫೂರ್ತಿಯಾದೆ.
– ಅಂಬಾರಾಯ ಜಿ ಕಾಂಬಳೆ. ತಡಕಲ್ ತಾ.ಆಳಂದ ಜಿ.ಕಲಬುರಗಿ.
ಕವಿ ಪರಿಚಯ:
ಅಂಬಾರಾಯ ಜಿ ಕಾಂಬಳೆ’ ಯವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದವರು.
ಇವರು ಸ.ಹಿ.ಪ್ರಾ. ಶಾಲೆ ದೇಗಾಂವ ಶಾಲೆಯ ಶಿಕ್ಷಕರಾಗಿ, ತಡಕಲ್ ಕ್ಲಸ್ಟರ್ ಸಿ.ಆರ್.ಪಿ.ಯಾಗಿ ಸೇವೆ ಸಲ್ಲಿಸುತ್ತಿರುವ ಇವರು ‘ಸ್ಪೂರ್ತಿ‘ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.