ಹೆಣ್ಣು ಎಂದರೆ ನಿರಾಕರಿಸುವ, ನಿರ್ಲಕ್ಷಿಸುವ ಲಿಂಗ ತಾರತಮ್ಯ ಧೋರಣೆಯು ಪ್ರಸ್ತುತ ಸಮಾಜದಲ್ಲಿ ಹಲವಾರು ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಸ್ತ್ರೀ-ಪುರುಷರಿಬ್ಬರೂ ಸಮಾನ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೂ ಕೂಡ ಹೆಣ್ಣನ್ನು ಕೀಳು ಭಾವದಲ್ಲಿ ನೋಡುವ ಸ್ವಭಾವದವರು ನಮ್ಮೊಂದಿಗಿದ್ದಾರೆ ಎಂಬುದು ಖೇದಕರ ಸಂಗತಿ.
ಒಂದು ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಾದರೆ ಹೆಣ್ಣಯ-ಗಂಡುಗಳಿಬ್ಬರ ಪಾತ್ರವೂ ಕೂಡ ಬಹುಮುಖ್ಯವಾದದ್ದು.
ಎಲ್ಲ ರಂಗಗಳಲ್ಲಿಯೂ ಸ್ತ್ರೀ ಪುರುಷನಿಗೆ ಸಮನಾಗಿ ದುಡಿಯುತ್ತಾಳೆ.ಹೆಣ್ಣಿನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ಮತ್ತು ಮುಂದಿನ ದಿನದಲ್ಲಿನ ಬಲಿಷ್ಠ ಸಮಾಜದ ನಿರ್ಮಾಣಕ್ಕಾಗಿ ಅಗತ್ಯ ಮತ್ತು ಅನಿವಾರ್ಯವಾಗಿದೆ.ಅನಾದಿಕಾಲದಿಂದಲೂ ಹೆಣ್ಣು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ.ಪ್ರಸ್ತುತ ಸಮಾಜದಲ್ಲಿಯಂತೂ ಹೆಣ್ಣು ಕಾಮದ ಒಂದು ವಸ್ತುವಾಗಿ ಬಿಟ್ಟಿದ್ದಾಳೆ.
ಅತ್ಯಾಚಾರ,ಬಾಲ್ಯವಿವಾಹ,ಹೆಣ್ಣನ್ನು ಬಾಲ ಕಾರ್ಮಿಕರ ರೀತಿ ಉಪಯೋಗಿಸಿಕೊಳ್ಳುವಂತಹ ಸುದ್ದಿಗಳನ್ನು ದೃಶ್ಯ ಮಾಧ್ಯಮ ಮತ್ತು ದಿನಪತ್ರಿಕೆಗಳಲ್ಲಿ ದಿನೇದಿನೆ ವರದಿಯಾಗುವುದನ್ನು ನಮ್ಮ ಕಣ್ಣಾರೆ ನೋಡುತ್ತಿದ್ದೇವೆ. ಆರು ತಿಂಗಳ ಮಗುವಿನ ಮೇಲೆ ಅತ್ಯಾಚಾರ,ಅರವತ್ತು ವರ್ಷದ ವೃದ್ಧೆಯ ಮೇಲೆಯೂ ಅತ್ಯಾಚಾರ ಮಾಡುವ ಕಾಮ ಪಿಶಾಚಿಗಳ ಹೊಡೆತಕ್ಕೆ ಸಿಲುಕಿ,ಹೆಣ್ಣೆಂಬ ಸಮಾಜದ ಕಣ್ಣು ನಲುಗಿ ಹೋಗಿದ್ದಾಳೆ. ತನ್ನ ನೂರಾರು ಬಯಕೆಗಳನ್ನು ತನ್ನಲ್ಲಿಯೇ ಹುದುಗಿಸಿಕೊಂಡು,ಸದಾ ಸಂಸಾರದ ಹೊಣೆಗಾಗಿ ಕಾಯಕದಲ್ಲಿ ನಿರತಳಾಗಿರುತ್ತಾಳೆ.
ಒಂದು ಹೆಣ್ಣು ತನ್ನ ಪ್ರತಿನಿತ್ಯದ ಕೆಲಸಗಳನ್ನು ಮುಂಜಾನೆಯೇ ಮುಗಿಸಿ, ತನ್ನ ಗಂಡನ ಜೊತೆ ತಾನೂ ಕೂಡ ಹೊಲಕ್ಕೆ ಬಂದು ಸೂರ್ಯಾಸ್ತಮಾನದವರೆಗೆ ಗಂಡನಷ್ಟೇ ಶ್ರಮ ಪಟ್ಟು ದುಡಿಯುತ್ತಾಳೆ.ಆದರೆ,ಗಂಡನಿಗೆ ಸಿಕ್ಕಷ್ಟು ಸಂಬಳ ಹೆಣ್ಣಿಗೂ ಕೂಡ ಸಿಗುವುದಿಲ್ಲ.ಹೊರತಾಗಿ ತನಗೆ ಸಿಕ್ಕ ಅಲ್ಪ ಹಣದಲ್ಲಿಯೇ ತಕ್ಕ ಮಟ್ಟಿಗೆ ಹೆಣ್ಣು ತೃಪ್ತಿ ಪಡುತ್ತಾಳೆ.
ಹೆಣ್ಣು ತನ್ನದೇ ಆದ ಆಂತರಿಕ ಮತ್ತು ಬಾಹ್ಯ ದೃಢತೆಯನ್ನು ಹೊಂದಿದ್ದಾಳೆ.ಒಂದು ಸಮಾಜ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿಯಬೇಕಾದರೆ ಲಿಂಗ ತಾರತಮ್ಯವಿಲ್ಲದೆ ಸ್ತ್ರೀ ಮತ್ತು ಪುರುಷ ಸಮನಾಗಿ ಕೆಲಸ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ.ಹೆಣ್ಣನ್ನು ಗೌರವಯುತವಾಗಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಕೂಡ ಹೌದು.ಹೆಣ್ಣಿಗೆ ಅಸಮಾನತೆ ತೋರದೆ,ಹೆಣ್ಣು ಅಬಲೆಯಲ್ಲ ಸಬಲೆ ಎಂದು ಹೆಣ್ಣಿಗೆ ಇಂಬು ತುಂಬುತ್ತಾ ಎಲ್ಲರೂ ಕೂಡ ಸಮನಾಗಿ ಬದುಕೋಣ.
ಗುರುಪ್ರಸಾದ್ ಹಳ್ಳಿಕಾರ್.,
ಲೆಂಕನಹಳ್ಳಿ,
ತುಮಕೂರು ಜಿಲ್ಲೆ.