Oplus_131072

೧೨ನೇ ಶತಮಾನದ, ಶರಣ ಮುಗ್ಧ ಸಂಗಯ್ಯನ ಬೆತ್ತ.

12 ಶತಮಾನದ ಶರಣರಲ್ಲಿ ಒಬ್ಬರಾದ ಮುಗ್ದ ಸಂಗಯ್ಯ ಶರಣರು ಬಳಸಿದ ಬೆತ್ತ ಮತ್ತು ಬಿಸಣಿಕೆಗಳು ಇಂದಿಗೂ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಸಿದ್ರಾಮಯ್ಯ ಸ್ವಾಮಿಗಳ ಮನೆಯಲ್ಲಿ ಕಾಪಾಡಿಕೊಂಡು ಬಂದಿದ್ದಾರೆ. ಈ ಕುರಿತು ಪುಟ್ಟ ಲೇಖನವೊಂದು ಬರೆದು ತಿಳಿಸಿದ ವೀರಶೆಟ್ಟಿ ಎಂ.ಪಾಟೀಲ್ ರ ಶ್ರಮ ಸಾರ್ಥಕವಾಗಿದೆ.” -ಸಂ.

 

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರದಲ್ಲಿ ಹನ್ನೆರಡನೆಯ ಶತಮಾನದ ಮುಗ್ಧ ಸಂಗಯ್ಯನವರು ಬಳಸಿದ ಬೆತ್ತ ಹಾಗೂ ಅವರು ಇಟ್ಟ ಪ್ರಸಾದ ವಿಭೂತಿ ಆದದ್ದು ನೋಡುವದೇ ನಮ್ಮ ಪುಣ್ಯ .

ಊರ ಮಧ್ಯ ಪೂರ್ವಾಭಿಮಖವಾಗಿರುವ ಚಿಕ್ಕ ಮಠ ಎಂದು ಕರೆಯಲಾದ ಈ ಮಠದೊಳಗೆ ಮುಗ್ಧ ಸಂಗಯ್ಯನವರ ಸಮಾಧಿ ಗದ್ದುಗೆ ಇದೆ.
ಇವರ ಜನ್ಮ ಸ್ಥಳ ತಾಲೂಕಿನ ಶಿವಪೂರ ಗ್ರಾಮವಾಗಿದೆ. ಅಲ್ಲಿ ಇವರ ಮನೆ ಅಥವಾ ಮಠ ಮತ್ತು ಪೂಜೆ ಮಾಡುವ ಗವಿ ಇದೆ. ವಿನಾಕಾರಣ ಇವರ ಮೇಲೆ ಸುಳ್ಳಿನ ಅಪವಾದ ಹೊರಿಸಿದ್ದರಿಂದ ಆ ಊರೇ ಬಿಟ್ಟು ಹೋಗಲು ನಿರ್ಧರಿಸಿ ಪಕ್ಕದ ಊರಿನ ನಾರಾಯಣಪೂರಕ್ಕೆ ಬಂದು ಉಳಿಯುತ್ತಾರೆ.

ಮುಗ್ದ ಸಂಗಯ್ಯನ ಬೆತ್ತ ಮತ್ತು ಅವರು ಇಟ್ಟ ಪ್ರಸಾದ ವಿಭೂತಿ ಆಗಿದೆ ಎಂಬ ನಂಬಿಕೆ ಇಲ್ಲಿದೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಆ ಗ್ರಾಮ ಈ ನಾರಾಯಣ ಪೂರದಿಂದ ಕೇವಲ ೧.ಕಿ.ಮೀ.ಮಾತ್ರ ಅಂತರದಲ್ಲಿದೆ. ಶಿವಪೂರದಿಂದ ಒಂದೂವರೆ ಕಿ,ಮೀ. ದೂರದಲ್ಲಿ ತ್ರಿಪೂರಾಂತ ಎಂಬ ಗ್ರಾಮದ ಹೊರಗಡೆ ಇವರ ಒಂದು ಆಶ್ರಮ ಇತ್ತೆನ್ನುವರು. ಇಂದಿಗೂ ಕೂಡ ತ್ರಿಪೂರಾಂತ ಕೆರಯ ದಡದಲ್ಲಿ ಮುಗ್ಧ ಸಂಗಯ್ಯನವರ ಪೂಜಾ ಸ್ಥಳ ಎನ್ನಲಾದದ್ದು ಇರುವುದೆಂದು ಹೇಳುತ್ತಾರೆ.

ಆ ಸ್ಥಳ ಇಂದಿಗೂ ಕಾಣಬಹುದು. ? ಇದರ ಸುತ್ತಮುತ್ತ ಹಲವಾರು ಜನರ ಹೊಲಗದ್ದೆಗಳಿದ್ದವು. ಒಂದು ದಿನ ಒಬ್ಬರ ಆಕಳು, ಮತ್ತೊಬ್ಬರ ಹೊಲದಲ್ಲಿನ ಹುಲ್ಲು ತಿಂದಿರುತ್ತದೆ. ನಂತರ ಆ ಹೊಲದ ಮಾಲಿಕರು, ಆ ಆಕಳನ್ನು ಕೊಂದು ಇವರ ಆಶ್ರಮದ ಮುಂದೆ ತಂದು ಬೀಸಾಕಿ ಹೋದರು. ತದನಂತರ ಈ ಆಕಳನ್ನು ಈ ಮುಗ್ದ ಸಂಗಯ್ಯನೇ ಕೊಂದನೆಂದು ಇವರ ಮೇಲೆ ಆರೋಪ ಮಾಡಿದರು. ಆಗ ಮುಗ್ದ ಸಂಗಯ್ಯನವರು ಒಂದು ಬೆತ್ತವನ್ನು, ತೆಗೆದುಕೊಂಡು ಆ ಆಕಳ ಸುತ್ತಮುತ್ತ ಮೂರು ಸುತ್ತು ತಿರುವಿ , ಆ ಆಕಳಿಗೆ, ಜೀವ ತುಂಬಿ ಅದನ್ನು ಮೇಲೆಬ್ಬಿಸಿದರು. ನಂತರ ನಿನಗೆ ಯಾರು ಕೊಂದಿದ್ದಾರೆ ಅವರ ಮನೆಯಲ್ಲಿ ಹೋಗಿ , ಅಲ್ಲಿ ಮೂರು ಹಿಡಿಕೆಯಷ್ಟು ಹುಲ್ಲು ತಿಂದು, ಅಲ್ಲಿಯೇ ಪ್ರಾಣ ಬಿಡು ಎಂದು ಆ ಆಕಳಿಗೆ ಹೇಳಿದರು. ಆ ಆಕಳು ಹಾಗೆಯೇ ಮಾಡಿತು. ಇಂದಿಗೂ ಆ ಬೆತ್ತ ಈ ಚಿಕ್ಕ ಮಠದಲ್ಲಿ ಜೋಪನವಾಗಿ ಇಡಲಾಗಿದೆ.
ಚಿಕ್ಕಚಿಕ್ಕ ಮಕ್ಕಳಿಗೆ ಜ್ವರ, ಹೊಟ್ಟೆ ನೋವು ಬಂದಿದ್ದರೆ ಈ ಬೆತ್ತ ತಿರುಗಿಸಿದರೆ ಕಡಿಮೆ ಆಗುವದು ಎಂದು ಈ ಮನೆತನದವರಾದ ಸಿದ್ರಾಮಯ್ಯನವರು ಹೇಳುತ್ತಾರೆ.

ಮುಗ್ದ ಸಂಗಯ್ಯ ಶರಣರು ಬಳಸುತ್ತಿದ್ದ ಬಿಸಣಿಕೆಗಳು

ನಮ್ಮ ತಾತ ಮುತ್ತಾತನಿಂದಲೂ ಈ ಬೆತ್ತ ನಮ್ಮ ಜಗುಲಿಯ ಮೇಲೆ ಇಟ್ಟು ಪೂಜಿಸುತ್ತೇವೆ. ಅವರು ಇಟ್ಟ ಪ್ರಸಾದ ವಿಭೂತಿ ಆಗಿರುವದು. ವಿಭೂತಿಗೆ ಗಾಳಿ ಹೊಡೆಯುವ ಬೀಸಣಿಕೆಯು ಇದೆ. ಇದು ಎಂಟುನೂರು ವರ್ಷಗಳಾದ್ದಾದರೂ ಇಂದೇ ಮಾಡಿಸಿದಂತಿದೆ. ನಮ್ಮ ಮನೆಯಲ್ಲಿ ಎರಡು ಗೋಣಿ ಚೀಲದಷ್ಟು ಹಸ್ತ ಪ್ರತಿಗಳು ಇದ್ದವು. ಅವುಗಳು ನಮ್ಮ ತಂದೆಯವರು ದೇಶಾಂತರ ಹೊರಡುವಾಗ ಓದಲು ತೆಗೆದುಕೊಂಡು ಹೋಗಿ ಕಳೆದು ಕೊಂಡು ಬಂದರಂತೆ. ಮತ್ತೆ ಮತ್ತೆ ಬಂದು ಹೋದಾಗ ಅದರಂತೆ ಇದ್ದ ಗ್ರಂಥಗಳೆಲ್ಲ ಖಾಲಿ ಆದವು. ಮುಗ್ಧ ಸಂಗಯ್ಯನವರ ಒಂದು ವಚನ ಹೀಗಿದೆ.

“ಎಣ್ಣೆಕಾಳು ಇಲ್ಲದಂತೆ ಆದತ್ತೋ ಕೇಳು ಬಸವ .
ಜನ, ಬತ್ತಿ ಹೊಸೆದಂತೆ ಮಡಿದು                  ಹೋದಾರೋ ಕೇಳು ಬಸವ !” ಎಂದು ಹೇಳಿ, ಇದು ಕಾಲಜ್ಞಾನದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ದುರ್ದೈವದ ಸಂಗತಿ ಏನೆಂದರೆˌ ಇವರ ವಚನಗಳು ಇಂದಿನವರೆಗೂ ಸಿಕ್ಕಿಲ್ಲ.
ಮುಗ್ಧ ಸಂಗಯ್ಯನವರು, ಅಂಗಾಲು ಮತ್ತು ಮೈಯೆಲ್ಲ ಕಣ್ಣುಳ್ಳ ರುದ್ರರಿರುವ ಶ್ರೀಶೈಲ್ಯದ ಬಿಲ್ವವನದ ಶಿವಯೋಗದಲ್ಲಿದ್ದು ಮತ್ತೆ ಕಲ್ಯಾಣಕ್ಕೆ ಬಂದರು. ಅಲ್ಲಿನ ವಿಟಮೂರ್ತಿಗಳು ವೇಶ್ಯಾಂಗನೆಯರ ಮನೆಗೆ ಹೋಗುವುದನ್ನು ಕಂಡು ತಾನೂ ಹೋಗಬೇಕೆಂದು ಬಸವೇಶ್ವರರಿಗೆ ಕೇಳುತ್ತಾರೆ. ಅಲ್ಲಿಗೆ ಹೋಗಿ ಅಲ್ಲಿನ ವಿಷಯ ಪ್ರಪಂಚವನ್ನರಿಯದೆ ಬೆಳಗಿನ ತನಕ ಶಿವ ಪೂಜೆಮಾಡಿ ಹಿಂದಕ್ಕೆ ಬಂದರು. ಇವರ ಮುಗ್ಧತೆಯನ್ನು ಕಂಡು ಮುಗ್ಧಸಂಗಯ್ಯ ಎಂಬ ಹೆಸರಿನಿಂದ ಕರೆಯತೊಡಗಿದರು.

ಮುಗ್ದ‌ ಸಂಗಯ್ಯನ ಗವಿ ಶಿವಪೂರ

ಆರಡಿ ಎತ್ತರ ಚೌಕಾಕಾರದ ಕಟ್ಟೆ ಮೇಲೆ ಗುಡಿ ಕಟ್ಟಲಾಗಿದೆ. ಮೇಲೆ ಮೇಲ್ಛಾವಣಿ ಇಲ್ಲ. ಒಳಗಡೆ ಅವರ ಗದ್ದುಗೆ ಇದೆ. ಇದರ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದೆ. ಗದ್ದುಗೆಯ ಮುಂದೆ ನಂದಿ ಇರುವದು. ಮುಗ್ಧ ಸಂಗಯ್ಯನವರ ಜೀವಂತ ಸಮಾಧಿ ಇಲ್ಲಿಯೂ ಇದೆ ಮತ್ತು ಉಪ್ಪಲದಿನ್ನಿಯಲ್ಲಿಯೂ ಇದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಸಮಾಧಿಯ ಬಲಭಾಗದಲ್ಲಿ ಮೂರೂವರೆ ಅಡಿಯ ಷಟ್ಟಭುಜಾಕೃತಿಯ ಬಾವಿ ಇದೆ. ಮೇಲಿನಿಂದ ಕೆಳಗಿನವರೆಗೂ ಅಚ್ಚುಕಟ್ಟಾಗಿ ಕಲ್ಲುಗಳನ್ನು ಜೋಡಿಸಲಾಗಿದೆ. ಮತ್ತು ಪೂರ್ತಿ ತಳದವರೆಗೂ ಷಟ್ಟಭುಜಾಕೃತಿಯ ರಚನೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಆಳ ಐವತ್ತು ಅಡಿ ದಾಟಿರುವದಿಲ್ಲ. ಇದರೊಳಗಿನ ನೀರು , ಎಂತಹ ಬರಗಾಲು ಬಂದರೂ ಇಂದಿನವರೆಗೂ ಬತ್ತಿ ಹೋಗಿಲ್ಲ. ಎಂದು ಹೇಳುತ್ತಾರೆ.
ಮಠದ ಪಕ್ಕದಲ್ಲಿ ಗ್ರಾಮಸ್ತರು ಮಲ್ಲಿಕಾರ್ಜುನ ದೇವಾಲಯ ನಿರ್ಮಿಸಲಾಗಿದೆ. ಇಲ್ಲಿ ಮುಗ್ಧಸಂಗಯ್ಯನವರು ಇಲ್ಲಿ ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ.
ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ “ಗಡವಂತಿ”ಯಲ್ಲಿಯೂ ಒಂದು ಗವಿ ಇದೆ. ಇಲ್ಲಿಯೂ ಮತ್ತು ವಿಜಯಪೂರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗ್ಳೇಶ್ವರದ ಬೆಟ್ಟದಲ್ಲಿಯೂ ಅನುಷ್ಠಾನ ಮಾಡಿದ್ದಾರೆಂದು ಹೇಳಲಾಗುತ್ತದೆ.

ಮುಗ್ದ ಸಂಗಯ್ಯನವರ ಪ್ರವಚನ ಹೇಳುವ ಕಟ್ಟೆಯು ಇದೆ . ಆ ಕಟ್ಟೆ ಈ ಚಿಕ್ಕ ಮಠದ ಹೊರಭಾಗದ ಎಡಭಾಗದಲ್ಲಿರುವದು. ಗಾರಿನಿಂದ ಕಟ್ಟಲ್ಪಟ್ಟ ಆ ಕಟ್ಟೆಗೆ ಗಾರಗೊಟ್ಟಿ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಮುಂದೆ ಮುಗ್ಧ ಸಂಗಯ್ಯನವರು ಬಸವನ ಬಾಗೆವಾಡಿ ಹತ್ತಿರ “ಉಪ್ಪಲದಿನ್ನಿ”ಗೆ ಹೋಗಿ, ಅಲ್ಲಿ ಅನುಷ್ಠಾನಮಾಡಿ ಅಲ್ಲಿಯೇ ಜೀವಂತ ಸಮಾಧಿ ಹೊಂದಿದ್ದಾರೆ. ಎನ್ನಲಾಗಿದೆ.

ಚಿತ್ರಲೇಖನ: ವೀರಶೆಟ್ಟಿ ಎಂ. ಪಾಟೀಲ,ಬಸವಕಲ್ಯಾಣ

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ