Oplus_131072

ನವರಾತ್ರಿ ವೈಭವ 

ನಮ್ಮ ಭಾರತ ದೇಶ ಅನೇಕ ಸಂಸ್ಕೃತಿ, ಸಂಪ್ರದಾಯಗಳ ತವರು. ಭಾರತೀಯರಾದ ನಾವು ಆಯಾ ಸಂಪ್ರದಾಯಗಳಿಗನುಗುಣವಾಗಿ ಪ್ರತಿ ವರ್ಷ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ನಾವು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದಸರಾ ಹಬ್ಬವು ವಿಶಿಷ್ಟವಾದುದು. ಈ ಹಬ್ಬವನ್ನು ದೇಶದೆಲ್ಲೆಡೆ ವಿಭಿನ್ನವಾಗಿ ಆಚರಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ಆಶ್ವೀಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಆಚರಿಸುವ ಹಬ್ಬವೇ ದಸರಾ ಹಬ್ಬ ಅಥವಾ ದಸರಾ ಉತ್ಸವ. ಇದು ಶರದೃತುವಿನಲ್ಲಿ ನವ ದುರ್ಗೆಯರನ್ನು ಆರಾಧಿಸುವ ಹಬ್ಬವಾಗಿರುವುದರಿಂದ ಇದನ್ನು ‘ಶರನ್ನವರಾತ್ರಿ‘ ಎಂದೂ ಕರೆಯುತ್ತಾರೆ. ಈ ನವರಾತ್ರಿಯು ದುಷ್ಟ ಶಕ್ತಿಗಳ ಸಂಹಾರ ಮಾಡಿ ಒಳ್ಳೆಯದರ ವಿಜಯವನ್ನು ಆಚರಿಸುವ ಹಬ್ಬವಾಗಿದೆ.

ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಶೈಲಪುತ್ರಿ , ಬ್ರಹ್ಮಚಾರಿಣಿ, ಚಂದ್ರಘಂಟಾದೇವಿ, ಕೂಷ್ಮಾಂಡ ದೇವಿ, ಸ್ಕಂದ ಮಾತೆ, ಕಾತ್ಯಾಯಿನಿ, ಕಾಳರಾತ್ರಿ , ಮಹಾಗೌರಿ ಮತ್ತು ಸಿದ್ಧಿಧಾತ್ರಿ ಎಂಬ ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ಹೀಗೆ ನವರಾತ್ರಿಯ ಒಂಭತ್ತು ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ದೇವಸ್ಥಾನಗಳಲ್ಲಿ ದೇವಿಗೆ ಪ್ರತಿದಿನ ಒಂದೊಂದು ರೂಪದಲ್ಲಿ ಅಲಂಕಾರ ಮಾಡಿ ಪೂಜಿಸುತ್ತಾರೆ. ಆ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದಿರುತ್ತಾರೆ.
‌ ನವರಾತ್ರಿಯಲ್ಲಿ ಪಾಡ್ಯದ ದಿನ ಘಟಸ್ಥಾಪನೆ ಮಾಡಿ ದೇವಿಯನ್ನು ಪೂಜಿಸಿ ದಶಮಿಯ ದಿನ ವಿಸರ್ಜಿಸಲಾಗುತ್ತದೆ. ಸಪ್ತಮಿಯ ದಿನ ಎಲ್ಲರ ಮನೆಯಲ್ಲೂ ಶಾರದಾ ಪೂಜೆ ಮಾಡುತ್ತಾರೆ. ಅಂದು ವಿದ್ಯಾ ದೇವತೆಯಾದ ಸರಸ್ವತಿಯ ಜೊತೆಗೆ ಲೇಖನಿ ಹಾಗೂ ಪುಸ್ತಕಗಳನ್ನು ಇಟ್ಟು ಪೂಜಿಸಲಾಗುತ್ತದೆ. ಮಾರನೆಯ ದಿನ ದುರ್ಗಾಷ್ಟಮಿಯಂದು ದೇವಿ ದುರ್ಗೆಯನ್ನು , ಮಹಾನವಮಿಯಂದು ಆಯುಧಗಳನ್ನು ಪೂಜೆ ಮಾಡಲಾಗುತ್ತದೆ. ಕೊನೆಯ ದಿನ ಅಂದರೆ ವಿಜಯ ದಶಮಿಯಂದು ಬನ್ನಿ ಮರವನ್ನು ಪೂಜಿಸಿ ದೇವರಿಗೆ ಬನ್ನಿ ಪತ್ರೆಯನ್ನು ಮುಡಿಸಿ , ಸಾಯಂಕಾಲ ಗುರು ಹಿರಿಯರಿಗೆ, ಬಂಧು ಬಾಂಧವರಿಗೆ , ನೆರೆಹೊರೆಯವರಿಗೆ ಬನ್ನಿ ಪತ್ರೆ ಕೊಟ್ಟು ‘ಬನ್ನಿ ಬಂಗಾರವಾಗಲಿ’, ‘ಬನ್ನಿ ತಗೊಂಡು ಬಂಗಾರದ್ಹಂಗೆ ಇರೋಣ’ ಎಂದು ಬನ್ನಿಪತ್ರೆಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಿರಿಯರಿಂದ ಆಶೀರ್ವಾದ ಪಡೆಯುತ್ತೇವೆ.

ಶಮೀ ಶಮಯತೇ ಪಾಪಂ
ಶಮೀ ಶತ್ರು ವಿನಾಶನಂ
ಅರ್ಜುನಸ್ಯ ಧನುರ್ಧಾರಿ
ರಾಮಸ್ಯ ಪ್ರಿಯದರ್ಶನಂ

ಬನ್ನಿಯನ್ನು ಕೊಡುವಾಗ ಎಲ್ಲರೂ ಪಠಿಸಬೇಕಾದ ಶ್ಲೋಕವಿದು. ಅಂದರೆ ‘ಶಮೀ ವೃಕ್ಷವು ಪಾಪಗಳನ್ನು ಶಮನ ಮಾಡುತ್ತದೆ, ಶತ್ರುಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಧನುರ್ಧಾರಿಯಾದ ಅರ್ಜುನನಿಗೂ, ಶ್ರೀರಾಮಚಂದ್ರನಿಗೂ ಒಳಿತನ್ನು ಮಾಡಿದ ಶಮೀ ವೃಕ್ಷಕ್ಕೆ ನಮಸ್ಕರಿಸೋಣ’ ಎಂಬುದು ಈ ಶ್ಲೋಕದ ಅರ್ಥ.

ಪಾಂಡವರು ಅಜ್ಞಾತವಾಸದ ಸಮಯದಲ್ಲಿ ಅರ್ಜುನನ ಗಾಂಡೀವದ ಜೊತೆಗೆ ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳನ್ನು ಗಂಟು ಕಟ್ಟಿ ರಹಸ್ಯವಾಗಿ ಬನ್ನಿ ಮರದಲ್ಲಿ ಅಡಗಿಸಿಟ್ಟಿದ್ದರು. ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಮುಗಿಸಿ ಮರಳಿದ ನಂತರ ಮತ್ತೆ ಆ ಆಯುಧಗಳನ್ನು ತೆಗೆದುಕೊಂಡು ಕೌರವರೊಂದಿಗೆ ಹೋರಾಡಿ ಜಯ ಗಳಿಸಿದರು. ಆದಕಾರಣ ಮಹಾನವಮಿಯ ದಿನ ಮನೆಗಳಲ್ಲಿ , ಕಾರ್ಖಾನೆಗಳಲ್ಲಿ , ಆಸ್ಪತ್ರೆಗಳಲ್ಲಿ, ಅಂಗಡಿಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ.
ಇನ್ನು ವಿಜಯದಶಮಿಯ ಬಗ್ಗೆ ಅನೇಕ ದಂತಕಥೆಗಳಿವೆ. ಭೂಲೋಕದ ಹಾಗೂ ಸ್ವರ್ಗ ಲೋಕದ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದ ದುಷ್ಟ ರಾಕ್ಷಸನಾದ ಮಹಿಷಾಸುರನನ್ನು ಸಂಹಾರ ಮಾಡುವುದಕ್ಕಾಗಿ ದುರ್ಗಾ ದೇವಿಯ ಅವತಾರವಾದ ಚಾಮುಂಡೇಶ್ವರಿಯು ಶಕ್ತಿ ಮತ್ತು ಶೌರ್ಯದ ಮೂರ್ತರೂಪದಲ್ಲಿ ಪ್ರತ್ಯಕ್ಷಳಾಗಿ ಹತ್ತು ದಿನಗಳ ಪರ್ಯಂತ ಅವನೊಡನೆ ಕಾದಾಡಿ ಅವನನ್ನು ಸಂಹಾರ ಮಾಡಿ ‘ಮಹಿಷಾಸುರ ಮರ್ದಿನಿ’ ಎನಿಸಿಕೊಂಡಳು. ಮಹಿಷಾಸುರನ ಸಂಹಾರವು ಭೂಲೋಕ ಹಾಗೂ ಸ್ವರ್ಗ ಲೋಕಕ್ಕೆ ಸಂತಸ ತಂದಿದ್ದರಿಂದ ದೇವಿಯನ್ನು ಗೌರವಿಸಿ, ಆರಾಧಿಸುವ ಸಲುವಾಗಿ ಆಚರಿಸುವ ಹಬ್ಬವೇ ವಿಜಯ ದಶಮಿ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ರಾವಣನ ಸಂಹಾರ ಮಾಡಿ ಸೀತೆಯನ್ನು ಮರಳಿ ಪಡೆದದ್ದು ದಶಮಿಯ ದಿನ. ಪಾಂಡವರು ಕೌರವರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ್ದು ಈ ದಿನವೇ. ‌ ದೇವಿಯು ನಾನಾ ರೂಪಗಳಿಂದ ದುಷ್ಟ ರಕ್ಕಸರನ್ನು ಸಂಹರಿಸಿದ ದಿನ. ಆದ್ದರಿಂದ ವಿಜಯದ ಸಂಕೇತವಾಗಿರುವ ಈ ದಿನವನ್ನು ‘ವಿಜಯ ದಶಮಿ’ ಎಂದು ಆಚರಿಸುತ್ತೇವೆ. ನಾನು ಚಿಕ್ಕವಳಿದ್ದಾಗ ನಮ್ಮ ತಂದೆಯವರು ವಿಜಯದಶಮಿಯ ಬಗ್ಗೆ ಹೇಳಿದ ವಿಷಯ ನೆನಪಿಗೆ ಬರುತ್ತದೆ. ‘ಶಮೀವೃಕ್ಷ ‘ ಎಂದರೆ ಬನ್ನಿಮರ. ತಮ್ಮ ಆಯುಧಗಳನ್ನು ಶಮೀವೃಕ್ಷದಲ್ಲಿ ಅಡಗಿಸಿಟ್ಟಿದ್ದ ಪಾಂಡವರಿಗೆ ಈ ವೃಕ್ಷದ ಪ್ರಭಾವದಿಂದ ಜಯ ದೊರೆಯಿತು. ಆದ್ದರಿಂದ ಈ ಶಮೀ ವೃಕ್ಷವನ್ನು ವಿಜಯದ ‘ಶಮೀ‘ ಎಂದು ಕರೆಯುತ್ತಾರೆ. ‘ದಶ’ ಎಂದರೆ ಹತ್ತು , ‘ಅಹರ್ ‘ ಎಂದರೆ ದಿನ ಎಂದರ್ಥ. ದಶ ಹರಾ, ದಶರಾ ಎಂಬುದು ಕೊನೆಗೆ ‘ದಸರಾ‘ ಎಂದು ಖ್ಯಾತಿ ಪಡೆದಿದೆ. ಶಕ್ತಿ ಪೂಜೆಯ ಶರನ್ನವರಾತ್ರಿಯ ನಂತರದ ವಿಜಯೋತ್ಸವದ ದಿನವಿದು. ದುಷ್ಟ ಶಕ್ತಿಗಳ ಮೇಲೆ ವಿಜಯ ಸಾಧಿಸಿದುದರ ಸಂಕೇತವಾಗಿ, ಅಧರ್ಮದ ವಿರುದ್ಧ ಧರ್ಮದ ವಿಜಯದ ಫಲವಾಗಿ ಆಚರಿಸುವ ಹಬ್ಬ. ನಮ್ಮ ಕನ್ನಡ ನಾಡಿನಲ್ಲಿ ‘ನಾಡಹಬ್ಬ’ ಎಂದೇ ಖ್ಯಾತಿ ಪಡೆದಿರುವ ಈ ದಸರಾ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಗೊಂಬೆಗಳನ್ನು ಕೂರಿಸುವುದು. ಗೊಂಬೆಗಳನ್ನು ಕೂರಿಸುವ ಪದ್ಧತಿ ಇರುವವರು ದಸರಾ ಹಬ್ಬದಲ್ಲಿ ಹತ್ತು ದಿನಗಳ ಕಾಲ ರಾಜ, ರಾಣಿ ಎಂಬ ಪಟ್ಟದ ಗೊಂಬೆಗಳ ಜೊತೆಗೆ ರಾಮಾಯಣ, ಮಹಾಭಾರತ ಮುಂತಾದ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಆಕರ್ಷಕವಾದ ಗೊಂಬೆಗಳನ್ನು ಕೂರಿಸುತ್ತಾರೆ. ಪ್ರತಿದಿನ ಬಗೆಬಗೆಯ ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡಿ, ಮನೆಗೆ ಬಂದವರಿಗೆ ಪ್ರಸಾದದ ರೂಪದಲ್ಲಿ ಹಂಚುತ್ತಾರೆ. ಮೈಸೂರಿನಲ್ಲಿ ನಡೆಯುವ ದಸರಾ ಮಹೋತ್ಸವದ ವೈಭವವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬಂದಿರುತ್ತಾರೆ. ಅದರ ವೈಭವವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ತಾಯಿ ಚಾಮುಂಡೇಶ್ವರಿಯ ಪೂಜೆಯೊಂದಿಗೆ ಪ್ರಾರಂಭವಾಗಿ ಹತ್ತು ದಿನಗಳ ಕಾಲ ವಿವಿಧ ಮನರಂಜನೆಯ ಕಾರ್ಯಕ್ರಮಗಳು ನಡೆದು ಜಂಬೂಸವಾರಿಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ‌ತೆರಳಿ ಬನ್ನಿ ಮರದ ಪೂಜೆಯೊಂದಿಗೆ ದಸರಾ ಉತ್ಸವ ಸಂಪನ್ನಗೊಳ್ಳುತ್ತದೆ. ಈ ದಸರಾ ಹಬ್ಬವು ಎಲ್ಲರಿಗೂ ಒಳಿತನ್ನು ಮಾಡಲಿ, ತಾಯಿ ಚಾಮುಂಡೇಶ್ವರಿಯ ಅನುಗ್ರಹ ಎಲ್ಲರ ಮೇಲಿರಲಿ ಎಂದು ನಾವೆಲ್ಲರೂ ಆ ದೇವಿಯನ್ನು ಪ್ರಾರ್ಥಿಸೋಣ.

ಯಾ ದೇವೀ ಸರ್ವ ಭೂತೇಷು
ಶಕ್ತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ
ನಮಸ್ತಸ್ಯೈ ನಮೋ ನಮ:

ಜಿ.ಎಸ್. ಗಾಯತ್ರಿ
ಶಿಕ್ಷಕಿ… ಬಾಪೂಜಿ ಶಾಲೆ
ಹರಿಹರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ