ಧರ್ಮ ಮತ್ತು ಜೀವನ.
ಅಂಡಾಣುವಿನಿಂದಾಗಿ ಈ ಬ್ರಹ್ಮಾಂಡದಲ್ಲಿ ಪಿಂಡಾಣು ಉದಿಸಿ ಈ ಪ್ರಕೃತಿಯು ಚರಾಚರ ಜೀವರಾಶಿಗಳ ಉಗಮಕ್ಕೆ ಕಾರಣವಾಯಿತು. ಹಾಗೆ ಈ ಮಾನವರ ಬದುಕಿನ ಜೊತೆ ಜೊತೆಗೆ ಧಾರ್ಮಿಕ ಆಚರಣೆಗಳು ಕೂಡ ಬೆಳೆದುಬಂದವು. ಎಲ್ಲಾ ಜೀವಿಗಳ ಜೀವನ ಶೈಲಿಯಂತೆ ಮನುಷ್ಯರ ಜೀವನಕ್ಕೆ ತನ್ನದೇ ಆದ ಶೈಲಿ ಅಥವಾ ಅದನ್ನೇ ಧರ್ಮ ಎನ್ನುವುದಾಗಿಯೂ ಅಥವಾ ಜೀವನ ಕ್ರಮ ಎಂದು ಹೇಳಬಹುದು.
ಧರ್ಮ ಎಂದರೆ ಏನು ಎಂಬುದನ್ನು ನಾವು ನೋಡಿದಾಗ
ಧರ್ಮ ಎನ್ನುವುದು ಇದೊಂದು ಮನುಷ್ಯರು ತಮಗೆ ತಾವೇ ಮಾಡಿಕೊಂಡ ಬದುಕಿನ ರೀತಿ ನೀತಿ ನಿಯಮಗಳೇ ಹೊರತು ಬೇರೇನೂ ಅಲ್ಲ.
ಈ ಎಲ್ಲಾ ಜೀವಿಗಳಲ್ಲಿ ಮಾನವ ಪ್ರಾಣಿ ಕೂಡ ಒಂದು. ಅದರಲ್ಲಿ ಈ ಮಾನವ ಜೀವಿಯ ಜೀವನ ಮಾತ್ರ ಸ್ವಲ್ಪ ಭಿನ್ನತೆಯನ್ನು ಪಡೆದುಕೊಂಡಿದೆ. ಕಾರಣ ಇವನ ವಿಚಾರ , ಆಲೋಚನಾ ಶಕ್ತಿ ಮತ್ತು ಮಾತನಾಡುವ ಕ್ರಿಯೆಗಳು ಇದಕ್ಕೆ ಕಾರಣ. ಹಾಗಾಗಿ ಮಾನವರು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬದುಕುವುದನ್ನು ಕಾಣಬಹುದಾಗಿದೆ. ಮಾನವ ತಾನು ಬುದ್ಧಿವಂತ , ತಾನೇ ಶ್ರೇಷ್ಠ ಎನ್ನುವ ಗರ್ವ ತುಂಬಿ ಬದುಕುತ್ತಿರುವ.
ಈ ರೀತಿ ಗರ್ವದಿಂದ ಬದುಕು ಸಾಗಿಸುವ ದಾರಿಯಲ್ಲಿ ಮಾನವ ಮಾನವರ ನಡುವೆ ಕೆಲವು ಅಹಿತಕರ ಘಟನೆಗಳು ನಡೆಯಲು ಪ್ರಾರಂಭವಾಯಿತು. ಮನುಷ್ಯನಲ್ಲಿ ಮೃಗೀಯ ವರ್ತನೆ ಕಾಣತೊಡಗಿತು. ಹಾಗಾಗಿ ಇದನ್ನು ಹೇಗಾದರೂ ಮಾಡಿ ನಿಯಂತ್ರಿಸಲು ಏನು ಮಾಡಬೇಕು ಎಂದು ಕೆಲವು ಬುದ್ಧಿವಂತರು ಕುಳಿತು ಯೋಚಿಸಿ ತನ್ನ ಸಮಾಜದ , ತನ್ನ ಜನ ಜೀವನದ ಅನುಕೂಲಕ್ಕಾಗಿ , ಅವರನ್ನು ಸಂರಕ್ಷಣೆ ಮಾಡುವ ವಿಚಾರದ ಮೂಲಕ ಕೆಲವು ನಿಯಂತ್ರಣದ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರು ಆ ಮೂಲಕ ಕೆಲವು ರೀತಿ ನೀತಿ ನಿಯಮಗಳನ್ನು ಜಾರಿಗೆ ತಂದು ಅವುಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಹಾಗಿದ್ದರೆ ಮಾತ್ರ ತಾನು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ನಿರ್ಧಾರಕ್ಕೆ ಬಂದರು.
ಆಗ ಯಾವುದೇ ಕಾನೂನುಗಳ ಜಾರಿಯಾಗಿರಲಿಲ್ಲ ಆ ನಿಟ್ಟಿನಲ್ಲಿ ಯೋಚಿಸಿ ಕೆಲವು ಆಚರಣೆ ಜೀವನ ಕ್ರಮಗಳನ್ನು ಜಾರಿಗೆ ತಂದರು . ನಂತರ ಸುಮ್ಮನೆ ಹೇಳಿದರೆ ಯಾರೂ ಕೇಳುವುದಿಲ್ಲ ಎಂದು ಅರಿತು ಆ ನಿಯಮಗಳಿಗೆ ಜನ ಬದ್ಧರಾಗಿ ನಡೆಯಲೆಂದು ಅದಕ್ಕೆ ದೈವತ್ವದ ನಂಬಿಕೆ ತುಂಬಿಸಿ ಆ ಮೂಲಕ ಜನರನ್ನು ನಿಯಂತ್ರಿಸುವ ದಾರಿ ಕಂಡುಕೊಂಡನು. ಹೀಗೆ ನಡೆದು ಬಂದ ಜೀವನದ ರೂಢಿ ಸಂಪ್ರದಾಯ ಆಚರಣೆಗಳೇ ಮಾನವ ಧರ್ಮ ಎಂದು ಕರೆಯಿಸಿಕೊಳ್ಳುತ್ತದೆ.
ಈ ರೀತಿಯ ಬೆಳವಣಿಗೆಯಲ್ಲಿ ಮಾನವರ ಜನಸಂಖ್ಯೆ ಹೆಚ್ಚಿದಂತೆ ಮತ್ತು ಅವನ ವಿಚಾರಗಳಲ್ಲಿ ಸ್ವಾರ್ಥ ತುಂಬಿ ಸದ್ಯಕ್ಕೆ ಇರುವ ವಿಚಾರ ಸಂಪ್ರದಾಯ ಕೆಲವರಿಗೆ ಬೇಡವೆನಿಸಿತು. ಅದಕ್ಕಾಗಿ ಹೊಸ ನಿಯಮಗಳನ್ನು ರೂಪಿಸಲಾರಂಭಿಸಿದರು. ಅವುಗಳನ್ನು ಕೆಲವು ಜನರು ಒಪ್ಪಿ ಮೊದಲ ನಿಯಮಗಳನ್ನು ಗಾಳಿಗೆ ತೂರಿ ಹೊಸ ನಿಯಮಗಳನ್ನು ಅನುಸರಿಸಲಾರಂಭಿಸಿದರು. ಹೀಗೆ ನಿರಂತರವಾಗಿ ಶತಮಾನಗಳು ಕಳೆದಂತೆ ಇರುವ ವಿಚಾರಗಳನ್ನು ಸಹಿಸದ ಕೆಲವರು ಚದುರಿ ಬೇರೆ ಬೇರೆ ಆಚರಣೆಗಳಿಗೆ ಹೊಂದಿಕೊಂಡು ಬದುಕಲು ಆರಂಭ ಮಾಡಿದ್ದು ಹೊಸ ಹೊಸ ಮತಗಳ ಉಗಮಕ್ಕೆ ಕಾರಣವಾಯಿತು.
ಹಲವು ಪಂಗಡಗಳ ನಿಯಮ ಆಚರಣೆ ಸಂಪ್ರದಾಯ ಭಿನ್ನ ರೀತಿಯಲ್ಲಿ ಇದ್ದರೂ ಅವು ಮೂಲ ನಿಯಮಗಳಿಂದ ಚದುರಿ ಬಂದವುಗಳೇ ಆಗಿವೆ.
ಆದರೆ ಇಂದು ರೂಢಿಯಲ್ಲಿರುವ ಹಿಂದೂ , ಕ್ರೈಸ್ತ,ಇಸ್ಲಾಂ , ಬೌದ್ಧ, ಜೈನ , ಪಾರ್ಸಿ, ಶಿಖ್ ಈ ಮತಗಳು ಕಾನೂನಿಗಿಂತ ಮಾನವನ ಜೀವನವನ್ನೇ ನಿಯಂತ್ರಣಕ್ಕೆ ತಂದಿವೆ. ಆದರೆ ಇಂದು ಮನುಜರು ಮಾಡಿಕೊಂಡ ಧರ್ಮಗಳು ಇವನಿಗಿಂತಲೂ ಎತ್ತರಕ್ಕೆ ಬೆಳೆದು ನಿಂತಿವೆ. ಆದರೆ ಮಾನವರು ಮಾತ್ರ ಇನ್ನೂ ಪರಿಪೂರ್ಣ ಅರಿವು ಪಡೆಯಲು ಸಾಧ್ಯವಾಗದೇ ಕೆಳಹಂತದಲ್ಲಿಯೇ ಬಿದ್ದು ಒದ್ದಾಡುತ್ತಿದ್ದಾರೆ.
ಇಲ್ಲಿ ಮನುಜರಿಗಿಂತ ಧರ್ಮಗಳು ಹೆಚ್ಚೇನವೇನಲ್ಲ ಮಾನವೀಯತೆ ದೃಷ್ಟಿಯಿಂದ ಮೊದಲು ನೋಡಬೇಕಾಗಿದೆ. ನಮ್ಮ ಜೀವನಕ್ಕೆ ಕುತ್ತು ಬಂದಾಗ ನಾವು ಧರ್ಮವನ್ನು ನೋಡುತ್ತಾ ಕುಳಿತರೆ , ಹಾಳಾಗುವುದು ನಮ್ಮ ಜೀವನವೇ ಹೊರತು ಧರ್ಮಗಳಲ್ಲ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಬದಲಾದ ನಿಯಮಗಳಿಗೆ ಒಪ್ಪಿ ಒಗ್ಗಿ ನಡೆಯುವುದು ಎಲ್ಲರ ನಿಜ ಧರ್ಮ.
ಉದಾಹರಣೆಗೆ ..
ಮಂಗ ಮತ್ತು ಅದರ ಮರಿಯ ಕಥೆಯನ್ನು ಎಲ್ಲರೂ ಬಲ್ಲರು ಮಂಗವನ್ನು ಮತ್ತು ಅದರ ಮರಿಯನ್ನು ಕೊಳದಲ್ಲಿ ನಿಲ್ಲಿಸಿ ನೀರು ಬಿಡುತ್ತಾ ಹೋದಂತೆ ಮಂಗ ತನ್ನ ಮರಿಯನ್ನು ಎತ್ತಿಕೊಂಡು ಕಾಪಾಡುವುದು ನಂತರ ನೀರು ಮೇಲೆ ಬಂದಂತೆಲ್ಲ ಇನ್ನೂ ಮೇಲಕ್ಕೆ ಎತ್ತಿಕೊಳ್ಳುವುದು . ಇನ್ನೇನು ನೀರು ತನ್ನ ಕುತ್ತಿಗೆಯ ಮಟ್ಟದಲ್ಲಿ ಬಂದಾಗಲೂ ತನ್ನ ತಲೆಯ ಮೇಲೆ ಮಗುವನ್ನು ಕೂರಿಸಿ ರಕ್ಷಣೆ ಮಾಡುತ್ತದೆ . ಆದರೆ ಮುಂದೆ ನೀರಿನಲ್ಲಿ ತಾನೇ ಮುಳುಗುವ ಸ್ಥಿತಿ ಬಂದಾಗ ಮಗು ಎಂದು ನೋಡದೇ ಮಗುವನ್ನು ತನ್ನ ಕಾಲಕೆಳಗೆ ಇಟ್ಟು ಅದರ ಮೇಲೇರಿ ನಿಂತು ತನ್ನ ತಾ ರಕ್ಷಣೆ ಮಾಡಿಕೊಳ್ಳುವುದು. ಇದನ್ನು ನೋಡಿದರೆ ನಿಜಕ್ಕೂ ಎಲ್ಲಿದೆ ಧರ್ಮ ಎಂದು ಅನಿಸುತ್ತದೆ ಅಲ್ಲವೇ?
ಹಾಗಾಗಿ ಪರಿಸ್ಥಿತಿ ಮತ್ತು ನಮ್ಮ ಅಗತ್ಯ ಹಾಗೂ ಅನುಕೂಲಕ್ಕೆ ಧರ್ಮಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಬದಲಿಸಿಕೊಂಡು ತಿದ್ದಿ ಅನುಸರಿಸುವ ಮೂಲಕ ಉತ್ತಮ ರೀತಿಯಲ್ಲಿ ಬದುಕುವುದೇ ನಿಜವಾದಾ ಧರ್ಮದ ತಿರುಳು.
–ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ ರಾಯಚೂರು
ಲೇಖಕರ ಪರಿಚಯ:
ಡಾ.ಮಹೇಂದ್ರ ಕುರ್ಡಿ ರವರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮ ದವರು ಬಿ.ಎ. ಎಲ್.ಎಲ್. ಬಿ.ಕಾನೂನು ಪದವೀಧರ ರಾಗಿದ್ದು, ಸದ್ಯ ಹಟ್ಟಿ ಚಿನ್ನದ ಗಣಿಯ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಾಹಿಸುತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿ ಬೆಳೆಸಿಕೊಂಡಿರುವ ಇವರು ‘ಹೊನ್ನಸಿರಿ’ ಬಂಗಾರದ ಶಿಲೆಯ ಮ್ಯಾಲೆ’ ಎಂಬ ಕವನ ಸಂಕಲನಗಳು, ಹಾಗೂ ‘ಮನ ಮಂಥನ ಸಿರಿ’ ಭಾಗ-1.2. ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.