ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಕತೆ, ಕವನ, ಕಾದಂಬರಿ,
ಲೇಖನ,ಚುಟುಕು ಮೊದಲಾದ ಸೃಜನಶೀಲ ಬರಹಗಳನ್ನು ಬರೆದು ನಾಡಿನಾದ್ಯಂತ ಚಿರಪರಿಚಿತರಾದ ಖ್ಯಾತ ಲೇಖಕರೆಂದರೆ ಡಾ.ಎಂ.ಜಿ.ದೇಶಪಾಂಡೆ.
ಇವರು ಬೀದರ ನಗರದ ಗೋವಿಂದರಾವ ದೇಶಪಾಂಡೆ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ 21-3-1952 ರಲ್ಲಿ ಜನಿಸಿದ್ದಾರೆ. ಬಿ.ಎ.ಕನ್ನಡ ಮಾದ್ಯಮದ ಪದವಿಧರರಾದ ಇವರು ವೇಣಾಬಾಯಿ ಯವರೊಂದಿಗೆ ಉತ್ತಮ ವೈವಾಹಿಕ ದಾಂಪತ್ಯದ ಜೀವನದೊಂದಿಗೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಗಡಿನಾಡಿನ ಜಿಲ್ಲೆಯಾದ ಬೀದರ ನಗರದಲ್ಲಿದ್ದುಕೊಂಡು ಸುಮಾರು ಐವತ್ತು ವರ್ಷಗಳಿಂದ ಸತತವಾಗಿ ಸಾಹಿತ್ಯ ಮತ್ತು ಕನ್ನಡ ಸೇವೆಯಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದ ಇವರು 1966 ರಲ್ಲಿಯೆ ಬರೆಯಲು ಪ್ರಾರಂಭಿಸಿದ್ದಾರೆ. 1977 ರಲ್ಲಿಯೆ “ಖ್ಯಾತಿ” ಎಂಬ ಕೈಬರಹದ ‘ಲಿಥೋ’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿ ಇತಿಹಾಸ ದಾಖಲಿಸಿದ ಹಿರಿಮೆ ಇವರದಾಗಿದೆ.
1974 ರಲ್ಲಿ ‘ ಪ್ರಕಾಶ ಜ್ಯೋತಿ’ ಎಂಬ ಮೊದಲ ಕಾದಂಬರಿ ಪ್ರಕಟಿಸಿ ನಾಡಿನಾದ್ಯಂತ ತುಂಬ ಖ್ಯಾತಿಯನ್ನು ಹೊಂದಿದವರು. ಇವರು ಕಥೆ, ಕಾವ್ಯ , ಕಾದಂಬರಿ, ಹೈಕು, ಶಾಯರಿ, ಚುಟುಕು, ಚರಿತ್ರೆ , ಇತಿಹಾಸ, ವ್ಯಕ್ತಿಚಿತ್ರ , ಅನುವಾದ, ಭಕ್ತಿಗೀತೆ, ಸಂಪಾದಕೀಯ ಹೀಗೆ ಹಲವಾರು ಪ್ರಕಾರದಲ್ಲಿ 70 ಕೃತಿಗಳನ್ನು ರಚನೆ ಮಾಡಿದ್ದಾರೆ.
ಇವರು ರಚಿಸಿದ ಕೃತಿಗಳೆಂದರೆ, ‘ಬದುಕು’ ‘ಸಾಹಿತ್ಯ ರತ್ನಗಳು’
‘ಸಂತ ಗವಾಯತ್ರಿ ಮೀರಾಬಾಯಿ’ ‘ಶ್ರಾವಣಿ’ ‘ದೇವಯಾನಿ’ ‘ವಿದುರನಗರಿ’ ‘ಮನ:ಸಾಕ್ಷಿ’ ‘ಜೀವನ ಇಷ್ಟೇನಾ ‘ ‘ಜೀವಸೆಲೆ’ ‘ಬೆಳಕಿನ ಹೆಜ್ಜೆಗಳು’ ‘ಹನಿ ಹನಿ ಸುಧೆ’ ‘ಕಾವ್ಯ ಸೌರಭ’ ‘ಸಾಹಿತ್ಯ ಪ್ರಬೋಧ’ ‘ಮಾಣಿಕ್ಯ ದೀಪ್ತಿ’ ‘ಮಾತು ಮುತ್ತಾದಾಗ.. ‘ ಇವು ಅವರ ಪ್ರಮುಖ ಕೃತಿಗಳಾಗಿವೆ.
ಇವರ ಕಥೆ, ಕವನ, ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ,ಮಯೂರ
ಸುಧಾ, ಮಂಗಳ, ಕರ್ಮವೀರ , ಮುಂತಾದವುಗಳಲ್ಲಿ ಪ್ರಕಟವಾಗಿವೆ.
ಇವರು ‘ಶಾಂತಿ ಕನ್ನಡ ಗೆಳೆಯರ ಬಳಗ ‘ ಹಾಗೂ ಬೀದರ ಜಿಲ್ಲಾ ಲೇಖಕರ ಬಳಗ, ಬೀದರ ಕನ್ನಡ ಸಂಘ, ಜ್ಞಾನ ತರಂಗ ವಿಚಾರ ವೇದಿಕೆ , ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ , ಮಂದಾರ ಕಲಾವಿದರ ವೇದಿಕೆ ಸೇರಿದಂತೆ ಮೊದಲಾದ ಕನ್ನಡಪರ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ ಗಡಿನಾಡಿನಲ್ಲಿ ಕನ್ನಡ ಕಾರ್ಯಕ್ರಮ ಗಳನ್ನು ಮಾಡುವುದರೊಂದಿಗೆ ಅನೇಕ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹಿ
ಆದರ್ಶ ಸಾಹಿತಿಯಾಗಿದ್ದಾರೆ. ಅಷ್ಟೇಯಲ್ಲದೆ ಅನೇಕ ಸಾಹಿತ್ಯ ಮತ್ತು ಸಂಗೀತ ಸಾಧಕರಿಗೆ ತಮ್ಮ ದೇಶಪಾಂಡೆ ಪ್ರತಿಷ್ಠಾನ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುತ್ತಿದ್ದಾರೆ. ಹಾಗೂ ರಾಜ್ಯ ಮಟ್ಟದ ಸಿರಿಗನ್ನಡ ವೇದಿಕೆ ಸೇರಿದಂತೆ ಹಲವು ಉತ್ತಮ ಸಂಘ ಸಂಸ್ಥೆಗಳೊಂದಿಗೆ
ನಿಕಟ ಸಂಪರ್ಕವು ಹೊಂದಿದ್ದಾರೆ.
ಮತ್ತು ಇವರು ಹಲವಾರು,ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ.
ಹಾಗೂ ಅನೇಕ ಸಭೆ ಸಮಾರಂಭದ ವೇದಿಕೆಗಳಲ್ಲಿ ಉದ್ಘಾಟಕರಾಗಿ ,
ಅಧ್ಯಕ್ಷರಾಗಿ ,ಅತಿಥಿಗಳಾಗಿ ಭಾಗವಹಿಸಿರುವುದು ಇವರ ಹೆಗ್ಗಳಿಕೆ. 16ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮತ್ತು ಜಿಲ್ಲೆಯಲ್ಲಿ ಕೆಲವು ಸಂಸ್ಥೆಗಳು ನಡೆಸಿದ ಜಿಲ್ಲಾ. ಮಟ್ಟದ ಸಾಹಿತ್ಯ ಸಮ್ಮೇಳನಗಳಸಂಸ್ಥೆಗಳು ಏರ್ಪಡಿಸಿದ್ದ ರಾಜ್ಯ ಮಟ್ಟದ ಕವಿಸಮ್ಮೇಳದ ಸರ್ವಾಧ್ಯಕ್ಷರಾಗಿರುವುದು ಇವರು ಮಾಡಿದ ಸಾಹಿತ್ಯ ಸೇವೆಗೆ ಗೌರವಗಳು ಸಂದಿವೆ. ಅಲ್ಲದೇ ಹಾಸನದ ಒಂದು ಕನ್ನಡ ಸಂಸ್ಥೆಯಿಂದ ಹಾಗೂ ಚುಟುಕು ಸಾಹಿತ್ಯ ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ ಸರ್ವಾಧ್ಯಕ್ಷರಾಗಿರುವುದು ಮತ್ತೊಂದು ಹೆಮ್ಮೆಯ ಗರಿ ಇವರದಾಗಿದೆ. ಇವರು ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳು ಕನ್ನಢ ಸಾಹಿತ್ಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಗುರುತಿಸಿ
ಪ್ರಶಸ್ತಿ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. ಹಾಗೂ ಬೀದರ ಜಿಲ್ಲೆಯಲ್ಲಿ ತಮ್ಮ ಕನ್ನಡ ಸಂಘಗಳ ವತಿಯಿಂದ ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಮಾಡಿರುವುದು ಇವರ ಶ್ರೇಯಸ್ಸಿಗೆ ಕಾರಣವಾಗಿದೆ. ಅಷ್ಟೇಯಲ್ಲದೆ
ಇವರ ‘ಮೀರಾಬಾಯಿ’ ಕೃತಿ ಮಹಾರಾಷ್ಟ್ರದ ನಾಂದೆಡದ ರಮಾನಂದ ತಿರ್ಥ ವಿಶ್ವವಿದ್ಯಾಲಯದ ಕನ್ನಡ ಬಿ.ಎ ಕಲಾ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಕವನಗಳು ವಿಜಯಪುರ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಮತ್ತು ಇವರ ಕವನ ಐದನೇ ತರಗತಿ, ಬಿ.ಎ ಮೊದಲನೇ ಸೆಮಿಸ್ಟರ್, ಎರಡೇ ಸೆಮಿಸ್ಟರ್ ಮಕ್ಕಳಿಗೆ ಪಠ್ಯವಾಗಿರುವುದು ನೋಡಿದರೆ ಇದು ಇವರ ಸಾಹಿತ್ಯದ ಪ್ರಬುದ್ಧತೆ ಸಾಕ್ಷಿಯಾಗಿದೆ.ಇವರ ಕೃತಿ ಗಳ ಮೇಲೆ ಎಂ.ಫಿಲ್ ಮತ್ತು ಪಿ.ಹೆಚ್ ಡಿ. ಪ್ರಬಂಧಗಳನ್ನು ಮಂಡಿಸಲಾಗಿದೆ. ಇವರ ಬದುಕು ಬರಹ ಕುರಿತಂತೆ ಜಿಲ್ಲೆಯ ಸಾಹಿತ್ಯ ವೃಂದದವರು ಇವರಿಗೆ ” ಸಾಹಿತ್ಯ ಮಂದಾರ” ಅಭಿನಂದನಾ ಗ್ರಂಥ ಸಮರ್ಪಿಸಿದ್ದಾರೆ.
ಹಾಗೂ ಇವರು ಬರೆದ ಅನೇಕ ಚಿಂತನೆಗಳು ಗುಲ್ಬರ್ಗ ಆಕಾಶವಾಣಿಯಿಂದ ಪ್ರಸಾರಗೊಂಡಿವೆ. ಮತ್ತು ಚಂದನ ದೂರದರ್ಶನದಲ್ಲಿ ‘ಬೆಳಗು’ ಕಾರ್ಯಕ್ರಮವು ಪ್ರಸಾರವಾಗಿದೆ. ಇವರ ಕಿರುಚಿತ್ರ “ಚಾಂದಿನಿ” ದೂರದರ್ಶನದಲ್ಲಿ ಪ್ರಸಾರವಾಗಿದೆ.
‘ಬಸವ ಶಿರೋಮಣಿ’ ‘ಭಾರತ ಜ್ಯೋತಿ’ ‘ಬಸವ ಸಾಹಿತ್ಯ ರತ್ನ’ ‘ಸಾಹಿತ್ಯ ಕಾರಂಜಿ’ ‘ಅಣ್ಣ’ ‘ಕರ್ನಾಟಕ ಮೇರು ಸಾಹಿತಿ’ ‘ಸಾಹಿತ್ಯ ಮಂದಾರ ಭೀಷ್ಮ’ ‘ಸಾಹಿತ್ಯ ಭೀಷ್ಮ’ ‘ಕಯ್ಯಾರ ಕಿಞಣರೈ’ ‘ಸಾಹಿತ್ಯ ಕಾರಂಜಿ’ ‘ಕನ್ನಡ ಸೇನಾನಿ’ ಹೀಗೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ
ಮತ್ತು ತುಷಾರ, ಮಯೂರ ಮಾಸಪತ್ರಿಕೆಯವರು ನಡೆಸುವ ‘ಚಿತ್ರ ಕವನ’ ಸ್ಪರ್ಧೆಯಲ್ಲಿ ಇವರು ರಚಿಸಿದ ನೂರಾರು ಕವನಗಳಿಗೆ ರಾಜ್ಯ ಮಟ್ಟದ ಬಹುಮಾನವು ಪಡೆದಿರುವುದು ಮರೆಯಲಾಗದ ಸಂಗತಿಯಾಗಿದೆ.
– ಮಚ್ಚೇಂದ್ರ ಪಿ ಅಣಕಲ್
ಕೃಪೆ- ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.