` ಋಣಾನುಬಂಧ’ ಅಂತ ಇರಬೇಕು ಅತ್ತೆ. ನನಗೆ ಆ ಮನೆಯಲ್ಲಿ ಇರುವ ಭಾಗ್ಯ ಇರಲಿಲ್ಲ ಅಷ್ಟೇ. ನಮ್ಮತ್ತೆ ಮಾವ ದೇವರಂತವರು. ಮೈದುನರು `ಖಾಸ್’ ತಮ್ಮನಂತವರು. ಅವರೆಲ್ಲ ಈಗ ಹೇಗಿದ್ದಾರೆ ? ನಮ್ಮ ಮೈದುನರ ಮದುವೆ ಆಯ್ತೆ ? ಅವರೆಲ್ಲ ಈಗ ಏನ ಮಾಡ್ತಿದ್ದಾರೆ ? ನನಗೆ ಅವರೊಂದಿಗೆ ಕೂಡಿ ಬಾಳುವ ಭಾಗ್ಯ ಆ ದೇವರು ಕರುಣಿಸಲಿಲ್ಲ. ನನ್ನ ಹಣೆಬರಹವೇ ಇಷ್ಟು. ನಾನು ದುರಾದೃಷ್ಠೆ ಅತ್ತೆ.
ನಾನು ದುರಾದೃಷ್ಠೆ. ” ಎಂದು ಗಳಗಳನೆ ಅತ್ತಳಂತೆ ಅತ್ತಿಗೆ.

ಮೊನ್ನೆ ಬೀದರದ ಮದುವೆ ಸಮಾರಂಭವೊಂದರಲ್ಲಿ ನಮ್ಮೂರಿನ ಹೆಂಗಸೊಬ್ಬಳಿಗೆ ಸಿಕ್ಕಿ, ಆಕೆಯ ಕೊರಳಿಗೆ ಹಾಕಿಕೊಂಡು ನಮ್ಮನ್ನೆಲ್ಲ ನೆನೆದು ಬಿಕ್ಕಿ ಬಿಕ್ಕಿ ಅತ್ತಿದಳಂತೆ . ಈ ಮಾತು ಕೇಳಿದ ನನ್ನ ಕಣ್ಣಲ್ಲಿ ನೀರು ಧಾರಕಾರವಾಗಿ ಹರಿದು ಹೋದವು.

ಹೌದು.
ಅತ್ತಿಗೆ ಇರಬೇಕಾಗಿತ್ತು.
ಇಪ್ಪತ್ತು ವರ್ಷದ ಹಿಂದೆ ನಡೆದ ಕಹಿ ಘಟನೆ ಅದು. ಆದರೂ ಅತ್ತಿಗೆ ನಮ್ಮೆಲ್ಲರ ಮೇಲೆ ಎಷ್ಟು ಪ್ರೀತಿ ಕಾಳಜಿ ಉಳ್ಳವಳು ? ಅನ್ನೋದು ಆಕೆ ನಮ್ಮ ಯೋಗ ಕ್ಷೇಮದ ಬಗ್ಗೆ ವಿಚಾರಿಸಿದಾಗಲೆ ಗೊತ್ತಾಗುತ್ತದೆ.

ಅತ್ತಿಗೆ ಶಾಲೆ ಕಲಿತ್ತಿಲ್ಲ ಅನ್ನೋ ಕಾರಣಕ್ಕೊ ! ಅಥವಾ ಅವಳು ಕಪ್ಪಾಗಿದ್ದಾಳೆ. ಅನ್ನೋ ಕಾರಣಕ್ಕೊ ಏನೋ ! ನಮ್ಮಣ್ಣನ ಮನಸ್ಸು ಕೆಡಿಸಿದ ಕಿಡಿಗೆಡಿಗಳು ಅವನ ಸಂಸಾರವೇ ಹಾಳು ಮಾಡಿದರು. ಆದರೆ ಅವಳು ಅಪ್ಪಟ ದೇಶಿ ಹೆಣ್ಣು ಮಗಳು. ಗಂಡನ ಮೇಲೆ ಅಪಾರ ಪ್ರೀತಿ ಉಳ್ಳವಳು. ಅತ್ತೆ ಮಾವಂದಿರನ್ನು ತನ್ನ ತಂದೆ ತಾಯಿಯರಂತೆ, ಮೈದುನರನ್ನು ಒಡಹುಟ್ಟಿದ ಸಹೊದರರಂತೆ ಕಾಣುತ್ತಿದ್ದವಳು. ಅಣ್ಣನೊಂದಿಗೆ ತುಂಬ ಚನ್ನಾಗಿ ಸಂಸಾರ ಮಾಡುತ್ತಿದ್ದ ಅತ್ತಿಗೆಗೆ ಅದ್ಯಾಕ್ಕೋ ಅಣ್ಣ ಇದ್ದಕ್ಕಿದಂತೆ ದ್ವೇಷಿಸಲು ಸುರು ಮಾಡಿದ. ಆದರೂ ಆಕೆ ಗಂಡನ ಕಿರುಕುಳ ತಾಳಿಕೊಂಡು ಒಳಗೊಳಗೆ ನೋವುಂಡು ನಕ್ಕವಳು .ನಾವು ನಮ್ಮ ತಂದೆಗೆ ನಾಲ್ಕು ಜನ ಗಂಡು ಮಕ್ಕಳು ಮಾತ್ರ. ಹೆಣ್ಣು ಮಕ್ಕಳಿಲ್ಲದ ನಮ್ಮ ಕುಟುಂಬದಲ್ಲಿ `ಅತ್ತಿಗೆ’ ಎಂಬ ಹೆಣ್ಣೊಂದು `ಗೋಳೋ’ಎಂದು ಅತ್ತು ಕರೆದು ಹೋದ ಆ ದಿನ ನೆನೆದರೆ ನನ್ನ ಕರುಳು ಹಿಸುಕಿದಂತಾಗುತ್ತದೆ.
ಮೊದ ಮೊದಲು ಮದುವೆಯಾದ ಹೊಸದರಲ್ಲಿ ಅಣ್ಣಾ-ಅತ್ತಿಗೆ ತುಂಬಾ ಪ್ರೀತಿಲೆ ಇದ್ದವರು. ಮದುವೆಯಾದ ಕೆಲ ದಿನಗಳಲ್ಲೆ ಅವರು ಕಲಬುರಗಿಯಲ್ಲಿ ಮನೆ ಮಾಡಿ ಸುಖ ಸಂಸಾರ ನಡೆಸಿದರು. ಅಣ್ಣನಿಗೆ ಸರ್ಕಾರಿ ಹುದ್ದೆ ಬೇರೆ. ಕೈತುಂಬ ಸಂಬಳ. ಯಾವುದೇ ಕೊರತೆಯಿಲ್ಲದೆ ಜೀವನ ಸಾಗಿಸುತ್ತಿದ್ದರು. ನಾನಾಗ ಹೈಸ್ಕೂಲ್ ವಿದ್ಯಾರ್ಥಿ. ತಮ್ಮ ಮಾತ್ರ ಹತ್ತೋ ! ಹನ್ನೇರಡು ವರ್ಷದವನಿರಬೇಕು.
ಇನ್ನೊಬ್ಬ ಅಣ್ಣನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದ.
ಇವರಿಬ್ಬರದು ಒಂದೇ ಹಂದರದಲ್ಲಿ ಮದುವೆಯಾಗಿತ್ತು.

ಕಲಬುರಗಿಯಲ್ಲಿ ಮನೆ ಮಾಡಿ ಸುಖ ಸಂಸಾರ ನಡೆಸುತ್ತಿದ್ದ ಅಣ್ಣನಿಗೆ ಅದ್ಯಾವುದೋ ಅನುಮಾನದ ಭೂತ ಕಾಡತೊಡಗಿತ್ತು. ಕಟ್ಟಿಗೆಯೊಳಗಿನ ಹುಳ ಆ ಕಟ್ಟಿಗೆಯನ್ನೆ ತಿಂದು ಹಾಳು ಮಾಡಿದಂತೆ ‘ಅನುಮಾನ’ ಎನ್ನುವ ಸಂಶಯದ ಭೂತ ಗರಗಸದಂತೆ ಕೊರೆದು ಕೊರೆದು ಅವನ ಮನಸ್ಸು ಛೀದ್ರ ಮಾಡಿತ್ತು. ಅಂದ್ರೆ ಅತ್ತಿಗೆಯ ಮೇಲೆ ಅಣ್ಣನಿಗೆ ಬಲವಾದ ಸಂಶಯ ಕಾಡತೊಡಗಿತ್ತು.

ಅದೊಂದು ದಿನ ಅಣ್ಣ ನೌಕರಿಯಿಂದ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದು ಅಂಗಳದಲ್ಲಿ ಕೈಕಾಲು ತೊಳೆದುಕೊಳ್ಳುತ್ತಿದ್ದಂತೆ ಮನೆಯೊಳಗಿಂದ ಯುವಕನೊಬ್ಬ ಹೊರಗೆ ಬಂದು ಮಾತನಾಡದೆ ಹಾಗೆ ಹೊರ ಹೊದದ್ದು, ಅದು ಯಾರು ? ಎಂದು ಕೇಳಿದಾಗ
ಅತ್ತಿಗೆ “ಅವನು ನಮ್ಮ ಸೋದರತ್ತೆ ಮಗ ”
ಅವನ್ಯಾಕೆ ಬಂದಿದ್ದ ? ಎಂದಾಗ
“ಇಲ್ಲೆ ಪಕ್ಕದಲ್ಲೆ ನಮ್ಮ ಸೋದರತ್ತೆ ಮನೆ ಇದೆಯಲ್ಲಾ ? ಹಾಗೆ ಸುಮ್ಮನೆ ಬಂದಿದ್ದ. ನಿಮ್ಮನ್ನು ಕಂಡು ಮಾತಾಡಲು ಧೈರ್ಯವಿಲ್ಲದೆ ಹಾಗೆ ಹೋಗಿರಬೇಕು ” ಎಂದು ಹೇಳಿದಳು.
ಆ ಹುಡುಗ ಅತ್ತೆಯ ಮಗಳು ಅನ್ನೋ ಕಾರಣಕ್ಕೆ ಮದ್ಯಾಹ್ನದಲ್ಲಿ ಸುಮ್ಮನೆ ಹರಟೆ ಹೊಡೆದು ಮಾತಾಡಿ ಪಕ್ಕದಲ್ಲೆ ಇರುವ ಅವರ ಮನೆಗೆ ಹೋಗುತ್ತಿದ್ದ.
ಅನ್ನೋ ವಿಷಯ ಅಕ್ಕ ಪಕ್ಕದ ಮನೆಯವರು ಅನೈತಿಕ ಸಂಬಂಧ ಕಲ್ಪಿಸಿಕೊಂಡು ಓಣಿಯ ತುಂಬೆಲ್ಲ `ಗುಸುಗುಸು’ ಮಾತಾಡತೊಡಗಿದರು.
ಹೀಗೆ ಪ್ರತಿ ದಿನ ಆ ಹುಡುಗ ಮನೆಗೆ ಬಂದು ಅತ್ತಿಗೆ ಜೋತೆಗೆ ಮಾತಾಡುತ್ತಾ ಕೂಡುತಿದ್ದ. ಅಣ್ಣ ಬಂದ ಕೂಡಲೆ ಮೌನವಾಗಿ ಎದ್ದು ಹೋಗುತ್ತಿದ್ದ. ಅನ್ನೋ ಒಂದೇ ಕಾರಣಕ್ಕೆ ಅಣ್ಣನ ಮನಸ್ಸಿನೊಳಗೆ ಸಂಶಯದ ಭೂತ ಎದ್ದು ಕುಣಿಯತೊಡಗಿತ್ತು.

“ಯಾಕೆ ಅವನು ನಾನಿಲ್ಲದಾಗ ಬರ‍್ತಾನೆ ? ಮತ್ತೆ ನಾನು ಬಂದ ಕೂಡಲೆ ಯಾಕೆ ಹಾಗೆ ಎದ್ದು ಹೋಗ್ತಾನೆ ? ” ಅನ್ನೊ ಪ್ರಶ್ನೆ ಆತನದು
” ಅದು ಅವನ ಸ್ವಾಭಾವ .
ನನ್ನದು ಅವನದು ಯಾವುದೇ ಕಳ್ಳ ಸಂಬಂಧ ಇಲ್ಲ” ಅನ್ನೊದು ಅತ್ತಿಗೆಯ ವಾದ .
ಆದ್ರೆ ಜನ ಸುಮ್ಮನಿರತ್ತಾರ ? ಇಲ್ಲ ಸಲ್ಲದ ಕತೆ ಕಟ್ಟಿ “ನಿನ್ನ ಹೆಂಡ್ತಿ ನೋಡಲು ಅಷ್ಟೊಂದು ಸುಂದರವಲ್ಲ. ಆದರೂ ಇಂಥಹ ನೀಚ ಕೆಲಸ ಮಾಡ್ತಿದ್ದಾಳೆ. ನೀನಿಲ್ಲದಾಗ ಯಾರೋ ಒಬ್ಬ ಬರ‍್ತಾನೆ. ಒಳಗೊಳಗೆ `ಕುಲುಕುಲು’ ನಗ್ತಾರೆ ” ಅಂತ ಅವಳ ಕುರಿತು ಚಾಡಿ ಹೇಳಿದರಂತೆ. ಇದೇ ಒಂದು ದೊಡ್ಡದಾಗಿ ಮಾಡಿಕೊಂಡ ಅಣ್ಣನ ಮನಸ್ಸು ತೀರ ಹದಗೆಟ್ಟಿತ್ತು. ಹಳ್ಳಿಯಲ್ಲಿ ಬೆಳೆದ ಅತ್ತಿಗೆ ತುಂಬ ಮುಗ್ದೆ. ಅವಳಿಗೆ ಈ ನಗರದ ಜನರ ಭಾವನೆಗಳು ಅರ್ಥವಾಗುವುದಿಲ್ಲ.
ಇವರೆಲ್ಲ ಏನೆನೋ ತಪ್ಪು ಕಲ್ಪಿಸಿಕೊಂಡಂತೆ ಅವಳು ಯಾವುದು ಕೆಟ್ಟ ಕೆಲಸ ಮಾಡಿದವಳಲ್ಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವಳು ಸಂಬಂಧಗಳಿಗೆ ಬೆಲೆ ಕೊಟ್ಟವಳು. ಅಣ್ಣ-ತಮ್ಮ, ಅಕ್ಕ-ತಂಗಿ ಅತ್ತೆ-ಮಾವ ಬಂಧು-ಬಳಗ ಎಲ್ಲರ ಜೋತೆಗೆ ಬೆರೆತು ಸ್ನೇಹದಿಂದ ಮಾತಾಡುವುದಷ್ಟೇ ಅವಳ ಸ್ವಾಭಾವ. ಆದ್ರೆ ಎಲ್ಲದಕ್ಕೂ ಸಂಬಂಧ ಕಲ್ಪಿಸಿಕೊಳ್ಳುತ್ತಾರಲ್ಲ ? ಈ ಜನರ ಮಾತು ಅವಳಿಗೆ ಅರ್ಥವಾಗಲೆ ಇಲ್ಲ.
ಒಂದು ದಿನ ಅಣ್ಣ ಅತ್ತಿಗೆಯನ್ನು ನಮ್ಮ ಹಳ್ಳಿಗೆ ಕರೆದುಕೊಂಡು ಬಂದ. ಬಂದವನೆ ಸಿಡಿಮಿಡಿಗೊಂಡು ಅಪ್ಪನ ಮೇಲೆ ರೇಗಾಡಿದ.

“ಇವಳು ನನಗೆ ಬೇಡ. ಇವಳ ಜೋತೆಗೆ ನನಗೆ ಸಂಸಾರ ಮಾಡೋಕ್ಕಾಗಲ್ಲ ” ಎಂದು ಅಳತೊಡಗಿದ.

“ಯಾಕೆ ? ” ಎಂದು ಕೇಳಿದಾಗ ಅದೇ ಆ ಹುಡುಗ ಬಂದು ಹೋಗುವ ಕತೆ ಹೇಳಿದ.
ಅತ್ತಿಗೆ ಮಾತ್ರ ” ಇಲ್ಲ, ನೀವಂದುಕೊಂಡಂತೆ ಅದೇಲ್ಲ ಏನಿಲ್ಲ. ಅತ್ತೆ, ಇವರಿಗೆ ಸಂಶಯದ ಭೂತ ಕಾಡ್ತಿದೆ. ನಾನು ಚನ್ನಾಗಿಯೇ ಇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ” ಎಂದು ಅವಳು ನಮ್ಮ ತಾಯಿಯ ಕಡೆ ಮುಖ ಮಾಡಿ ಗಳಗಳ ಅಳತೊಡಗಿದ್ದಳು.
ಯಾರದು ಸತ್ಯ ? ಯಾರದು ಸುಳ್ಳು ? ಒಂದು ಅರಿಯದೆ ನಮ್ಮ ತಾಯಿ ತಂದೆ ಮೌನ ತಾಳಿದರು. ದುಡುಕಿದರೆ ಮಗನ ಸಂಸಾರ ಹಾಳಾಗುತ್ತದೆ ಅನ್ನೊ ಪರಿಜ್ಞಾನವು ಅವರಲ್ಲಿತ್ತು.

“ಇವಳು ಇಲ್ಲೆ ಇರಲಿ,
ಇವರಪ್ಪಾ ! ಅಣ್ಣಂದಿರು ಬರಲಿ. ಅವರಿಗೆ ಮಾತಾಡ್ತಿನಿ.” ಎಂದು ಹೇಳಿ ಸಿಟ್ಟಿನಿಂದ ಆ ದಿನ ಆಕೆಗೆ ನಮ್ಮ ಹಳ್ಳಿಯಲ್ಲೆ ಬಿಟ್ಟು ಹೋದ. ಆದರೂ ಆಕೆ ಹಳ್ಳಿಯಲ್ಲೆ ಇರಲು ಒಪ್ಪಿದಳು. ಸುಮಾರು ಎಂಟು ತಿಂಗಳು ನಮ್ಮೂರಲ್ಲೆ ನಮ್ಮೊಂದಿಗೆ ತುಂಬಾ ಚನ್ನಾಗಿಯೆ ಇದ್ದಳು. ಆದರೆ ಒಂದು ದಿನವು ಮಾತ್ರ ಅಣ್ಣ ಅವಳ ಹತ್ತಿರ ಬರಲೆ ಇಲ್ಲ.
ಆಕೆ ” ಗಂಡನ ಮನಸ್ಸು ಈಗ ಸರಿ ಹೋಗುತ್ತದೆ, ಆಗ ಸರಿ ಹೋಗುತ್ತದೆ ” ಅಂತ ದಿನಾ ದೇವರಲ್ಲಿ ಹರಕೆ ಹೊತ್ತುಕೊಂಡು ಕಾದಳು. ಆದರೂ ಅವಾ ಬರಲಿಲ್ಲ. ಈ ವಿಷಯ ಅವರ ತವರು ಮನೆಯವರಿಗೂ ಗೊತ್ತಾಗಿ ಕೊನೆಗೆ ಅವರೆ ಬಂದರು. ಅಣ್ಣನಿಗೆ ತಿಳಿ ಹೇಳಿದರೂ ಆದ್ಯಾವುದು ಬಗೆ ಹರಿಯಲಿಲ್ಲ. ಅವಳು `ಅಂತವಳಲ್ಲ’ ಎಂದು ಪದೇ ಪದೇ ಮನವರಿಕೆ ಮಾಡಿಕೊಟ್ಟರು ಅಣ್ಣ ಒಪ್ಪಲಿಲ್ಲ.

“ಅವಳು ಶಾಲೆ ಕಲಿತವಳು ಅಂತ ಸುಳ್ಳು ಬೇರೆ ಹೇಳಿ, ನನಗೆ ಮದುವೆ ಮಾಡಿದ್ದರಿ. ಆದರೆ ಅವಳು ಅಕ್ಷರ ಜ್ಜಾನ ಇಲ್ಲದವಳು. ನೆಂಟಸ್ತನ ನೋಡಲು ಬಂದಾಗ ಬೇರೊಬ್ಬಳನ್ನು ತೋರಿಸಿ ಮದುವೆ ದಿನ ಇವಳನ್ನು ಕರೆತಂದು ಮದುವೆ ಮಾಡಿದ್ರಿ. ನೀವೂ ನನಗೆ ತುಂಬಾ ಮೋಸ ಮಾಡಿದ್ದರಿ .ನನಗೆ ನಿಮ್ಮ ಮಗಳು ಬೇಡ ” ಎಂದು ಮತ್ತೊಂದು ರಾದ್ಧಾಂತದಲ್ಲಿ ಬೀಗರೊಂದಿಗೆ ಅವನ ಜಗಳ ದಿನೇ ದಿನೇ ಹೆಚ್ಚಾಗತೊಡಗಿತ್ತು. ಅತ್ತಿಗೆಯ ಸಹೋದರರು ಆಕೆಯ ಸಂಬಂಧಿಕರು ಸಂಧಾನ ಮಾಡಲು ಬಂದು ಬುದ್ಧಿ ಹೇಳಿದರೂ ಅವರ ಮಾತು ಕೇಳದೆ ತನ್ನದೆ ನಿಜವೆಂದು ಪಟ್ಟು ಹಿಡಿದ. ಆದರೆ ಆಕೆ “ತನ್ನ ಗಂಡ ಇವತ್ತಲ್ಲ ನಾಳೆ ಸರಿ ಹೋಗ್ತಾನೆ ” ಎಂದು ಬಿಕ್ಕಿ ಬಿಕ್ಕಿ ಅತ್ತಿದಳು.
ಅತ್ತಿಗೆಯ ಅಣ್ಣನೊಬ್ಬ ಉನ್ನತ ಹುದ್ದೆಯಲ್ಲಿದ್ದವನು ಅವನಿಗೆ ರೋಷ ತಡಿಯಕ್ಕಾಗಲಿಲ್ಲ. ದಿನಾ ಬಂದು ಜಗಳ ಕಿರಿಕಿರಿ ಮಾಡತೊಡಗಿದ.

“ತನ್ನ ತಂಗಿ ತಪ್ಪು ಮಾಡಿದಕ್ಕೆ ಬುದ್ಧಿ ಹೇಳೊದು ಬಿಟ್ಟು, ನನ್ನೊಂದಿಗೆ ಜಗಳ ಮಾಡ್ತಿಯಾ ? ಏನ್ ಮಾಡ್ತಿ ಮಾಡು. ನಾನು ಇಲಾಖೆಯಲ್ಲೆ ಇರೋದು ನನಗೂ ಕಾಯ್ದೆ ಕಾನೂನು ಗೊತ್ತಿದೆ ” ಎಂದು ಇವನು ಸುಮ್ಮನಾಗಲಿಲ್ಲ. ನಮಗ್ಯಾರಿಗೂ ಗೊತ್ತಿಲ್ಲದೆ ಬೇರೊಂದು ‘ರಜಿಸ್ಟರ್’ ಮದುವೆ ಆಗಿದ್ದಿನಿ . ಅಂತ ಹೇಳಿ ಮತ್ತೊಬ್ಬಳನ್ನು ಮದುವೆಯಾಗಿ ಬಂದ. ಇದನ್ನು ತಿಳಿದ ಮೇಲೆ ಸುಮಾರು ದಿನಗಳ ನಂತರ ಅತ್ತಿಗೆಯ ಅಣ್ಣ ರಮೇಶ ಪೋಲಿಸ್ ಕಟ್ಟೆ ಎರಿದ. ಆದರೆ ಯಾಕೋ ಅವರು ದೂರು ದಾಖಲಿಸಲಿಲ್ಲ.
ಕೊನೆಗೆ ಇಬ್ಬರ ಸಂಬಂಧ ದೂರ ಮಾಡುವ ಮಾತು ಅವನೇ ಆಡಿದ.

“ನನ್ನ ತಂಗಿಗೆ ಈ ಮನೆಯಲ್ಲಿ ಸುಖವಿಲ್ಲವೆಂದರೆ ಮದುವೆಯಲ್ಲಿ ಆದ ನಮ್ಮ ಖರ್ಚು-ವೆಚ್ಚಗಳನ್ನು ಕೊಡು. ನಾವೂ ನಮ್ಮ ತಂಗಿಗೆ ಕರೆದುಕೊಂಡು ಹೋಗುತ್ತೇವೆ ” ಎಂದು ನಮ್ಮೂರಿನ ಗೌಡರ ಸಮ್ಮುಖದಲ್ಲಿ ಕೇಳಿಕೊಂಡಿದ್ದ. ಅತ್ತಿಗೆ ಈ ಮಾತು ಕೇಳಿ ಮತ್ತೆ “ಗೋಳೋ ! ” ಎಂದು ಅಳತೊಡಗಿದಳು. ಅವಳಿಗೆ ಗಂಡನಿಂದ ಬೇರೆಯಾಗುವುದು ಸುತರಾಂ ಇಷ್ಟವಿಲ್ಲ. ಆದರೂ ಅವಳನ್ನೂ ಆ ದಿನವೇ ಅವರಣ್ಣ ಗಂಡನಿಂದ ಬೇರೆ ಮಾಡಲು ನಿರ್ಧರಿಸಿದ. ತಂದೆ ತಾಯಿ ಅಣ್ಣ ಹಾಕಿದ ಗೆರೆಯಲ್ಲಿ ನಡೆದ ಅತ್ತಿಗೆ ಅವರ ಮಾತು ಮಿರುವಂತೆಯು ಕಾಣಲಿಲ್ಲ.
” ಒಂದು ವಾರದ ನಂತರ ಅಂದ್ರೆ ಇದೇ ತಿಂಗಳು ಹತ್ತನೇ ತಾರಿಖಿಗೆ ನಮ್ಮ ತಂಗಿ ಸಮೇತ ಬಂದು ನಿಮ್ಮ ತಾಳಿ ಕೊಟ್ಟು ಹೋಗುತ್ತೇವೆ ” ಎಂದು ರಮೇಶ ರೋಷದಿಂದ ಮಾತಾಡಿ ಹೋದ.
ಒಂದು ವಾರದ ನಂತರ ಬರುತ್ತಾರೆ . ಅಣ್ಣ ಅವರಿಗೆ ಮದುವೇಯಲ್ಲಿ ಆದ ಖರ್ಚು-ವೆಚ್ಚಗಳು ಸೇರಿ ಒಟ್ಟು ಒಂದು ಲಕ್ಷ ರೂಪಾಯಿ ನೀಡಬೇಕು. ಇಪ್ಪತ್ತು ವರ್ಷದ ಹಿಂದೆ ಅದು ದೊಡ್ಡ ಮೊತ್ತವಾಗಿತ್ತು. ” ಇವರೇನು ಕೊಡುತ್ತಾರೆ ನೋಡೊಣ, ಕೊಡದೆ ಹೋದ್ರೆ ತಾನಾಗೆ ದಾರಿಗೆ ಬರ‍್ತಾರೆ.” ಅನ್ನೋ ಭಾವನೆ ಅವರದಾಗಿತ್ತೇನೋ ! ಎಂದು ನಾನು ಊಹಿಸಿಕೊಂಡಿದ್ದೆ. ನನ್ನ ಊಹೆ ತಪ್ಪಾಗಿತ್ತು. ನಿಜವಾಗಿಯು ಇಬ್ಬರ ಮನಸ್ಸು ಒಡೆದು ಛೀದ್ರವಾಗಿದವು .ಆದ್ರೆ ಅತ್ತಿಗೆ ಮನಸ್ಸು ಮಾತ್ರ ಗಂಡನ ಮೇಲೆ ಗಟ್ಟಿಯಾಗಿತ್ತು. ಎಂದು ಅವಳ ಮುಖ ನೋಡಿದಾಗಲ್ಲೆಲ್ಲ ಅರ್ಥವಾಗುವಂತ್ತಿತ್ತು.

ಅದೊಂದು ದಿನ ಅಣ್ಣ ಮತ್ತು ಅತ್ತಿಗೆಯ ಸಂಬಂಧ ಬೇರೆ ಮಾಡುವುದಕ್ಕೆ ಊರ ಹೊರಗಿನ ಸರಕಾರಿ ಶಾಲೆಯ ಆವರಣದಲ್ಲಿ ಜನವೋ ಜನ .ಅಂದು ರವಿವಾರ ಶಾಲೆಗೆ ರಜೆ ಇರುವುದರಿಂದ ಮಕ್ಕಳು ಮಾತ್ರ ಅಲ್ಲಿರಲಿಲ್ಲ. ಗಂಡ ಹೆಂಡತಿಯ ಸಂಬಂಧ ಮುರಿದು ಬಿಳುವ ದೃಶ ನೋಡಲು ಜನ ಬಂದಂತ್ತಿತ್ತು. ಅವರೆಲ್ಲ ತುಂಬ ಕೂತುಹಲದಿಂದ ನೋಡತೊಡಗಿದ್ದರು. ನೂರು ರೂಪಾಯಿ ಛಾಪ ಕಾಗದ ತಂದ ಅಣ್ಣ ಅದ್ಯಾವುದೋ ಒಪ್ಪಂದದ ಬರಹ ಬರೆಸಿಕೊಳ್ಳುತ್ತಿದ್ದ. ಆಗ ಅವರೆಲ್ಲ ಬರೆದು ಸಹಿ ಮಾಡಿದರು. ಅವರು ಮದುವೆಗೆ ಮಾಡಿದ ಖರ್ಚು ಅಣ್ಣನಿಂದ ವಸೂಲಿ ಮಾಡಿದರು. ಈಗ ಅತ್ತಿಗೆ ಆ ಛಾಪಾ ಕಾಗದದ ಮೇಲೆ ಸಹಿ ಮಾಡಬೇಕು. ಇದು ಅಲ್ಲಿಯ ಜನರ ಕೂತುಹಲಕ್ಕೆ ಕಾರಣವಾಗಿತ್ತು.

ಹತ್ತನೇಯ ತಾರಿಖಿಗೆ ಸೇರುವುದಾಗಿ ಹೇಳಿದರಿಂದ ಅಂದು ನಾಗರ ಪಂಚಮಿಯ ಹಬ್ಬ ಬರಬೇಕೆ ? ನಾಗರ ಪಂಚಮಿ ಹಬ್ಬ ಅಂತ ಯಾರಿಗೂ ಗೊತ್ತಿಲ್ಲ . ಹೀಗೆ ರೋಷದಲ್ಲಿ ” ಒಂದು ವಾರದ ನಂತರ ನಿಮ್ಮ ಖರ್ಚು ಕೊಡುತ್ತೇನೆ ಬಂದು ತಗೊಂಡು ಹೋಗು ” ಅಂತ ಅಣ್ಣ ರಮೇಶನಿಗೆ ಹೇಳಿದಾಗ
ಆತ “ ಅಂದ್ರೆ ಇವತ್ತು ಮೂರು ತಾರಿಖಿದೆ. ವಾರದ ನಂತರ ಅಂದ್ರೆ ಹತ್ತನೇ ತಾರಿಖಿಗೆ ಬರುತ್ತೇವೆ. ಅವತ್ತು ಹಣಕೊಡಬೇಕು ” ಅಂತ ವಾದ – ವಿವಾದದಲ್ಲಿ ಮಾತು ಮುಗಿದಿದ್ದರಿಂದ ಎಲ್ಲರೂ ಹತ್ತನೇ ತಾರಿಖಿಗೆ ಒಪ್ಪಿಕೊಳ್ಳಬೇಕಾಯಿತ್ತು. ಅದೇ ದಿನ ನಾಗರ ಪಂಚಮಿ ಅನ್ನೋದು ಯಾರಿಗೂ ತಿಳಿದಿರಲಿಲ್ಲ. ಅವರು ಹತ್ತನೇ ತಾರಿಖಿಗೆ ‘ಜೀಪ್’ ತಗೊಂಡು ಕುಟುಂಬ ಸಮೇತ ಅವರೂರ ಮುಖಂಡರೊಂದಿಗೆ ಬಂದೆ ಬಿಟ್ಟರು.
ನಾಗರ ಪಂಚಮಿ ಹಬ್ಬ ಇರುವುದರಿಂದ ಅಂದು ಊರ ಹೆಣ್ಣು ಮಕ್ಕಳು ಈ ದೃಶ್ಯ ನೋಡಲು ಯಾರು ಬರಲಿಲ್ಲ.

” ನಾಗರ ಪಂಚಮಿ
ನಾಡಿಗೆ ದೊಡ್ಡದು !
ಅಣ್ಣಾ ! ಬರಲಿಲ್ಲ ಕರಿಲಾಕ ! ”

ಅನ್ನೋ ಜಾನಪದ ಗೀತೆ
ನನ್ನ ಕಿವಿಯೊಳಗೆ `ಗುಯ್ ! ಗುಟ್ಟತೊಡಗಿತ್ತು. ಆದರೆ ಅತ್ತಿಗೆಯ ಅಣ್ಣ ರಮೇಶ ತನ್ನ ತಂಗಿಯನ್ನು ಈ ರೀತಿ ನಮ್ಮ ಮನೆಯಿಂದ ಕರೆದುಕೊಂಡು ಹೋಗುತ್ತಿದ್ದಾನಲ್ಲ ? ಎಂದು ಮನದೊಳಗೆ ನೋವು ತುಂಬಿಕೊಂಡಿತ್ತು.
ಅವರು ಮದುವೆಯಲ್ಲಿ ಕೊಟ್ಟಿದ ಎಲ್ಲ ಖರ್ಚು-ವೆಚ್ಚಗಳಿಗೆ ಹಣ ಪಡೆದದ್ದಾಯಿತ್ತು. ಬರೋಬರಿ,
ಒಂದು ಲಕ್ಷ ರೂಪಾಯಿಗಳು ಎರಡೆರಡು ಸಲ ಎಣಿಸಿಕೊಂಡರು. ಎಲ್ಲರೂ ಒಂದು ಕ್ಷಣ ಮೌನವಾದರು. ಅತ್ತಿಗೆ ಜೀಪಿನಲ್ಲಿ ಕುಳಿತು ಕೆಳಗಿಳಿಯದೆ ರೋದಿಸತೊಡಗಿದಳು.

“ಎಲ್ಲ ಖರ್ಚು-ವೆಚ್ಚದ ಹಣ ಪಡೆದದಾಯಿತ್ತು. ಮತ್ಯಾಕೆ ತಡ ? ನಿಮ್ಮ ತಂಗಿ ಸಹಿ ಮಾಡಿಸಿ, ಮಾಂಗಲ್ಯ ಸರಾ ಕೊಟ್ಟು
ಬಿಡು ” ಎಂದು ಅಣ್ಣ ರಮೇಶನಿಗೆ ಹೇಳಿದಾಗ, ಆತ ಅತ್ತಿಗೆಯ ಸಹಿ ಮಾಡಿಸಿಕೊಳ್ಳಲು ಹೋಗಿ ಆಕೆಯ ಮುಂದೆ ಛಾಪ ಕಾಗದ ಹಿಡಿದು, ಸಹಿ ಮಾಡಲು ಕೇಳಿದಾಗ ಆಕೆ ಮತ್ತೊಮ್ಮೆ ‘ಗಳಗಳನೆ’ ಮೂಕ ರೋಧನೆಯಿಂದ ಕಣ್ಣೀರು ಸುರಿಸತೊಡಗಿದಳು.

ಆಕೆಗೆ ಸಹಿ ಮಾಡಲು ಮನಸ್ಸಿಲ್ಲ ‘ ನಾ ಒಲ್ಲೆ ! ‘ ಎಂದು ಚಟ್ಟನೆ ಚಿರಿದಳು. ಆಗ ಅಲ್ಲಿ ನೆರೆದಿದ್ದ ಪಕ್ಕದೂರಿನ ಆಕೆಯ ಸಂಬಂಧಿಯೊಬ್ಬ ಬಲವಂತವಾಗಿ ಅವಳ ಕೈ ಹಿಡಿದೆಳೆದು ಹೆಬ್ಬರಳಿನ ಗುರುತು ಒತ್ತಿಸಿ ಕೊಟ್ಟಿದ.
ಮತ್ತೆ ಆತ `ತಾಳಿ ಸರಾ ಕಿತ್ತು ಬಿಸಾಕು ‘ಎಂದು ದುಂಬಾಲು ಬಿದ್ದಿದ್ದ. ಆದರೆ ಆಕೆ ಮಾತ್ರ “ನಾ ಒಲ್ಲೆ ! ಇದೊಂದು ಮಾತ್ರ ನಾ ಕೊಡಲಾರೆ ! ” ಎಂದು
ನೆಲಕೆ ಬಿದ್ದು ಕೆಂಪ್ಪು ಮಣ್ಣಲ್ಲಿ ಹೊರಳಾಡುತ್ತಾ ಅಳತೊಡಗಿದಳು. ಆಗ ಆತನೆ ಅವಳ ಕೊರಳಿಗೆ ಕೈ ಹಾಕಿ ‘ಖಟ್ ನೆ” ತಾಳಿ ಕಡಿದು, ಮಣಿಗಳೆಲ್ಲ `ಚೆಲ್ಲಾಪಿಲ್ಲಿ ‘ಮಾಡಿ ಸಿಟ್ಟಿನಿಂದ ಬಿಸಾಕಿ ಅಣ್ಣನಿಗೆ ದುರುಗುಟ್ಟಿದ. ಬಲವಂತವಾಗಿ ಅತ್ತಿಗೆಯ ಕೊರಳಲ್ಲಿನ ತಾಳಿ ಕಡಿಯುವಾಗ ಆಕೆ ಬೊಬ್ಬೆ ಹೊಡೆದು ಚಿರಿ ಚಿರಿ ಅಳತೊಡಗಿದ್ದಳು. ಅವಳ ರೋಧನ ಮುಗಿಲು ಮುಟ್ಟಿತ್ತು. ಅವಳ ಶೋಕ ಸಾಗರಕ್ಕೆ ಅಲ್ಲಿಯ ಮರಗಿಡ ಬಳ್ಳಿಗಳು ಕೂಡ ಮರುಗಿದಂತೆ ತೊರುತ್ತಿದ್ದವು.ಆದರೆ ಆ ಮಾನವ
ಹೃದಯಿಗಳು ಮಾತ್ರ ಮರುಗಲಿಲ್ಲ. ಆ ಸಂದರ್ಭದಲ್ಲಿ ಅತ್ತಿಗೆಯ ಮುಖ ನೋಡಿದ ಕೂಡಲೆ ನನ್ನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯತೊಡಗಿದ್ದವು. ಅವಳು ನನ್ನ ನೋಡಿ ನೋಡಿ ಅಳತೊಡಗಿದಳು.
ಇದನ್ನೆಲ್ಲ ನೋಡಲು ಆಗದ ಎಂಟು ವರ್ಷದ ತಮ್ಮ ಮನೆಗೆ ಓಡಿ ಹೋಗಿದ್ದ. ಊರಲ್ಲಿ ನಾಗರ ಪಂಚಮಿ ಹಬ್ಬ ಒಂದೆಡೆಯಾದರೆ ನಮ್ಮ ಮನೆಯಲ್ಲಿ ಶ್ಮಾಸನ ಮೌನದ ವಾತಾವರಣ ಸೃಷ್ಠಿಯಾಗಿತ್ತು. ಅಣ್ಣ ಮಾತ್ರ ಇಷ್ಟೆಲ್ಲ ಆದ ಮೇಲೆ ತನ್ನ ಎರಡನೇ ಹೆಂಡ್ತಿಯ ಕರೆಗೆ ಓಗೊಟ್ಟು ಕಲಬುರಗಿಗೆ ಹೋಗಿ ಬಿಟ್ಟಿದ್ದ. ಮನೆಯಲ್ಲಿ ಮಾತ್ರ ನಾವೂ ಊರವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತ್ತು. ನಾಗರಪಂಚಮಿಯ ದಿನ ಒಂದು ಹೆಣ್ಣಿಗೆ ಅನ್ಯಾಯವಾಗಿ ಮೋಸ ಮಾಡಿದರು. ಅನ್ನೋ ಕೆಟ್ಟ ಪದ ನಾವೂ ಅನಿಸಿಕೊಳ್ಳಬೇಕಾಯಿತ್ತು. ನಮ್ಮದೇನು ತಪ್ಪಿಲ್ಲದಿದ್ದರು ತಪ್ಪಿತಸ್ಥರಾಗಿ ಅನುಭವಿಸಿದ ವೇಧನೆ ಇನ್ನೂ ಕಹಿಯಾಗಿಯೆ ಉಳಿದಿದೆ. ಅಣ್ಣನಿಗೆ ಬೇಡವಾದ ಮೇಲೆ ಅತ್ತಿಗೆಯನ್ನು ನಾವು ಅನಿವಾರ್ಯವಾಗಿ ಮರೆಯಲೆ ಬೇಕಾಗಿತ್ತು. ಆದರೆ ಅವಳು ನಮ್ಮೇಲ್ಲರ ಮೇಲೆ ತುಂಬ ಜೀವ. ಯಾವಾಗಲೂ ನಮ್ಮ ಬಗ್ಗೆಯೆ ಯೋಚಿಸುತ್ತಿದ್ದಳು. ತವರು ಮನೆಯಲ್ಲಿ ಆಕೆಗೆ ‘ಎರಡನೇ ಮದುವೇ ಆಗು’ ಎಂದರೆ ಅವಳು
” ಮೊದಲ ಗಂಡನ ಸುಖವೇ ಕಂಡಿಲ್ಲ . ಇನ್ನೊಂದು ಮದುವೆಯೇ ? ಛೇ ! ಬೇಡ ನನಗೆ ಮತ್ತೊಂದು ಮದುವೆ ಬೇಡವೇ ಬೇಡ ”ಅಂತ ಹಟ ಹಿಡಿದು ಸುಮಾರು ಹತ್ತು ವರ್ಷ ಹಾಗೆ ಉಳಿದಿದ್ದಳಂತೆ . ಆಕೆಯ ಅಣ್ಣಂದಿರು ಒಳ್ಳೆಯವರಾಗಿರಬೇಕು. ಆದರೆ ಆಕೆಯ ಅಣ್ಣನ ಹೆಂಡಿರು ಹೇಗೆ ಸುಮ್ಮನಿರುತ್ತಾರೆ ? ಆಕೆಗೆ `ಗಂಡ ಬಿಟ್ಟವಳು ‘ ಅಂತ ಚುಚ್ಚಿ ಮಾತಾಡಿರಬೇಕು . ಅವಳು ಮನನೊಂದುಕೊಂಡು ಹತ್ತು ವರ್ಷದ ನಂತರ ಮನೆಯವರ ಒತ್ತಡಕ್ಕೆ ಮಣಿದು ಎರಡನೇ ಸಂಬಂಧಕ್ಕೆ ಸೋತು ಮದುವೆಯಾಗಿರಬಹುದು. ಈಗ ಆಕೆಗೆ ಮದುವೆಯಾಗಿ ಮೂರು ಮಕ್ಕಳು ಅಂತ ಗೊತ್ತಾಯಿತ್ತು. ನಮ್ಮೂರಿನಲ್ಲಿ ಆಕೆಗೆ ದೂರದ ಹಳೆ ಸಂಬಂಧಿ ಇರುವುದರಿಂದ ಸದಾ ನಮ್ಮನ್ನು ವಿಚಾರಿಸುತ್ತಾಳೆ ಅಂತ ಗೊತ್ತಾಯಿತ್ತು. ಇದೆಲ್ಲ ನಡೆದದ್ದು ಸುಮಾರು ಇಪ್ಪತ್ತು ವರ್ಷದ ಹಿಂದೆ . ಅತ್ತಿಗೆ ನನ್ನ ಮದುವೆ ನೋಡಿ ಖುಷಿ ಪಡಬೇಕು ಅಂದಿದ್ದಳು .ನನಗೆ ಸರ್ಕಾರಿ ನೌಕರಿ ಸಿಗಬೇಕು’ ಅಂತ ಬಯಸಿದ್ದಳು.ಆದರೆ ಏನು ಮಾಡಲಿ ? ಅತ್ತಿಗೆ ದೂರ ಸರಿದ ಮೇಲೆ ಅಣ್ಣ ನಮ್ಮಿಂದ ದೂರವಾದ. ಎರಡನೇ ಹೆಂಡ್ತಿ ಬಂದ ಮೇಲೆ ನಮ್ಮನ್ನೆಲ್ಲ ನಿರ್ಲಕ್ಷಿಸಿದ. ಹೆಂಡ್ತಿ ಹೇಳಿದಂತೆ ಕೇಳತೊಡಗಿದ. ನನ್ನ ಮತ್ತು ತಮ್ಮನ ಶಿಕ್ಷಣಕ್ಕೂ ಆತ ಸಹಾಯ ಮಾಡಲಿಲ್ಲ. ನಾನು ಇಪ್ಪತ್ತೆರಡು ವಯಸ್ಸಿಗೆ ಬೇಗ ನನ್ನಿಷ್ಟದ ಮೇಲೆ ಮದುವೆಯಾಗಿ ಚಿಕ್ಕ ವಯಸ್ಸಿನಲ್ಲಿ ಸಂಸಾರದ ಜಂಜಾಟದೊಳಗೆ ಸಿಕ್ಕಿಹಾಕಿಕೊಂಡು ಒದ್ದಾಡಿದೆ. ಆದರೂ `ಪೋಟೋಗ್ರಾಫಿ ಕಲೆ ಗೊತ್ತಿದ್ದರಿಂದ ಆ ವೃತ್ತಿಯೊಂದಿಗೆ ಹೇಗೋ ಉನ್ನತ ಶಿಕ್ಷಣ ಪಡೆದೆ. ಬಿ.ಎ ಬಿ.ಎಡ್ ಓದುವಾಗ ಬಿಡುವಿನ ವೇಳೆಯಲ್ಲಿ ‘ಪೋಟೊಗ್ರಾಫಿ’ ಕೆಲಸ ಮಾಡಿ ಶಿಕ್ಷಣ ಪೂರೈಸಿದೆ. ಹೀಗೆ ಸುಮಾರು ಹದಿನಾಲ್ಕು ವರ್ಷ ಕಷ್ಟದ ದಿನಗಳಲ್ಲೆ ಜೀವನ ನಿರ್ವಹಿಸಿದ್ದೆ.
ಅತ್ತಿಗೆಯ ಬಯಕೆಯಂತೆ ನನಗೆ ಈಗ ಸರ್ಕಾರಿ ಹುದ್ದೆ ಕೂಡ ಸಿಕ್ಕಿದೆ. ನಾನೀಗ ಪ್ರಾಥಮಿಕ ಶಾಲೆಯ ಶೀಕ್ಷಕ.ನನಗೆ ಎರಡು ಗಂಡು ಮಕ್ಕಳು. ತಮ್ಮನ ಮದುವೆಯು ಆಗಿದೆ. ಆತನ ಹೆಂಡ್ತಿಯು ಸರ್ಕಾರಿ ಇಲಾಖೆಯೊಂದರ ಸಹಾಯಕ ಇಂಜಿನಿಯರ್. ಅವರಿಗೆ ಒಂದು ಗಂಡು ಮಗುವಿದೆ.ಅವರು ಅತ್ತಿಗೆಯ ಕನಸ್ಸಿನಂತೆ ಚನ್ನಾಗಿದ್ದಾರೆ. ಇದನ್ನೆಲ್ಲ ಯಾಕೆ ಹೇಳ್ತಾ ಇದ್ದೇನೆ ಅಂದ್ರೆ “ನಮ್ಮ ಮೈದುನರಿಗೂ ನನ್ನ ಗಂಡನಂತೆ ಸರ್ಕಾರಿ ಹುದ್ಧೆ ಸಿಗಬೇಕು. ಅವರ ಜೀವನವು ಸುಖಕರವಾಗಬೇಕು ಅದನ್ನು ನಾನು ಕಣ್ತುಂಬ ನೋಡಿ ಖುಷಿ ಪಡಬೇಕು ” ಅಂತ ಆಕೆ ಇನ್ನೊಬ್ಬರ ಮುಂದೆ ಹೇಳಿಕೊಂಡಿದ್ದು ನಾನು ಕೇಳಿದ್ದೆ. ಆದರೆ ಆಕೆಯೆ ಇಲ್ಲದ ಈ ದಿನಗಳಲ್ಲಿ ಅತ್ತಿಗೆಯ ನೆನಪು ಮಾತ್ರ ಇನ್ನೂ ಅಚ್ಚಳಿಯದೆ ಉಳಿದಿದೆ. ಆದ್ರೆ ಅವಳೀಗ ಬೇರೊಬ್ಬನ ಹೆಂಡ್ತಿ. ಆಕೆಯ ಮೊದಲ ಗಂಡನ ತಮ್ಮಂದಿರಾದ ನಮಗೆ ನಮ್ಮೂರಿನವರು ಸಿಕ್ಕಲೆಲ್ಲ “ನಮ್ಮ ಮೈದುನರು ಹೇಗಿದ್ದಾರೆ ? ಎಂದು ನಮ್ಮ ಯೋಗಕ್ಷೇಮ ಕೇಳುತ್ತಾಳಂದ್ರೆ ? ಎಂತಹ ಹೃದಯಿವಂತೆ ಅವಳು ? ನೋವುಂಡ ಮನೆಗೆ ಕೆಡು ಬಗೆಯದೆ ಆಕೆ ಹೂವು ತರುವ ಮೃದು ಸ್ವಾಭಾವದವಳು.
ಏನು ? ಋಣಾನುಬಂಧ ಅಂದ್ರೆ ಇದೇನಾ ? ಎಲ್ಲರೂ ಮರೆತರು ಮರೆಯದೆ ಉಳಿದ ಆ ನೆನಪು ಮಾತ್ರ ಶಾಶ್ವತ. ಅತ್ತಿಗೆ ಇಂದಿಗೂ ನನ್ನ ಮತ್ತು ತಮ್ಮನ ಮನದಲ್ಲಿ ನಿಜವಾದ ಅತ್ತಿಗೆಯ ರೂಪ ಧರಿಸಿ ಮೂರ್ತಿಯಾಗಿ ಉಳಿದಿದ್ದಾಳೆ.
ಅಣ್ಣನು ಒಮ್ಮೊಮ್ಮೆ `ಅವಳು ಇರಬೇಕಾಗಿತ್ತು ‘ ಅಂತ ಪಶ್ಚತಾಪ ಪಟ್ಟಿದಿದೆ. “ಬಡವನ ಸಿಟ್ಟು ದವಡೆಗೆ ಮೂಲ ” ಅನ್ನುವಂತೆ ಆತುರದಲ್ಲಿ ಆದ ಅಪಾರ್ಥ ಅರ್ಥವಾಗುದರೊಳಗೆ ಎನೆಲ್ಲ ನಡೆದು ಹೋಯಿತ್ತು ? ಅತ್ತಿಗೆಗೂ ಆ ಹುಡುಗನಿಗೂ ಯಾವುದೇ ಅನೈತಿಕ ಸಂಬಂಧ ಇರಲಿಲ್ಲ ಅನ್ನೋದು ಬಹಿರಂಗವಾಗುವುದರೊಳಗೆ ಎರಡು ಜೀವಗಳು ಬೇರೆ ಬೇರೆಯಾಗಿ ಹೋಗಿದ್ದವು .
” ಮಾತು ಮನೆ ಕೆಡಿಸಿತ್ತು ….” ಎನ್ನುವಂತೆ ಓಣಿಯ ಜನರ ಮಾತಿಗೆ ತಲೆ ಕೆಡಿಸಿಕೊಂಡ ಅಣ್ಣನ ಸಂಸಾರದಲ್ಲಿ ಹುಳಿ ಬಿದ್ದು ಅತ್ತಿಗೆಯನ್ನು ದೂರ ಮಾಡಿತ್ತು.
ಅನಿವಾರ್ಯವಾಗಿ ನಮ್ಮಿಂದ ದೂರ ಸರಿದ ಅತ್ತಿಗೆಯು ಎಲ್ಲಿಂದಲೋ ! ವಾರೆಗಣ್ಣಿನಿಂದ ನಮ್ಮ
ಯೋಗಕ್ಷೇಮ ಬಯಸುವ ಅವಳ ಬಾಳು ಬಂಗಾರವಾಗಲಿ. ಆದ್ರೆ ಅತ್ತಿಗೆಯು ನಮ್ಮನ್ನು ಮದುವೆಯೊಂದರಲ್ಲಿ ಕೇಳಿ “ಋಣಾನುಬಂಧ’ ಅಂತ ಇರಬೇಕು ಅತ್ತೆ ” ಅಂತ ಅತ್ತಿದ ವಿಷಯ ಅಣ್ಣನಿಗೆ ಹೇಳಿದರೆ ಏನನ್ನುವನೋ ! ಎಂದು ಮನದಲ್ಲೆ ಮರುಗಿ ಮೌನ ತಾಳಿದ್ದೇನೆ.

ಮಚ್ಚೇಂದ್ರ ಪಿ.ಅಣಕಲ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ