ಮುಸ್ಲಿಮರು ಎಂದರೆ ಹಿಂದೂಗಳ ವಿರೋಧಿಗಳು ಎಂಬ ಅಪವಾದ ಹೊಂದಿದ ಮುಸ್ಲಿಂ ಬಾಂದವರು ಇಂದು ಹಿಂದೂಗಳ ಪಾಲಿಗೆ ಹಿಂದೂ – ಮುಸ್ಲಿಂ ಬಾಯ್ -ಬಾಯ್ ಎನ್ನುವುದು ತೋರಿಸಿಕೊಟ್ಟಿದ್ದಾರೆ. ಅದೇನಂತಿರಾ ?
ಹೌದು.
ಬೀದರ ಜಿಲ್ಲೆ ಬಸವಕಲ್ಯಾಣ ನಗರದ ಗಣೇಶ ಉತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಬಾಂಧವದವರು ಆಗಮಿಸಿ ಹಿಂದೂ ಪದ್ದತಿಯಲ್ಲಿ ಗಣೇಶನಿಗೆ ನಮಸ್ಕಾರ ಮಾಡಿ ಅಷ್ಟೇ ಭಕ್ತಿಯಿಂದ ಗಣೇಶನಿಗೆ
ಆರತಿ ಬೆಳಗಿ ಸೌರ್ಹಾದತೆ ಮೆರೆದಿದ್ದಾರೆ .
ದೇಶದಲ್ಲಿ ಗಣೇಶ್ ಉತ್ಸವ, ಮತ್ತು ಈದ್ ಮಿಲಾದ್ ಸೇರಿದಂತೆ ಧಾರ್ಮಿಕ ಹಬ್ಬಗಳು ಬಂದರೆ ಸಾಕು ಜಾತಿ-ಧರ್ಮಗಳ ಹೆಸರಿನಲ್ಲಿ ಅಲ್ಲಲ್ಲಿ ಕೋಮು -ಗಲಭೆಗಳು ನಡೆದು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿ ಸಾರ್ವಜನಿಕ ಅಶಾಂತಿಗೆ ಕಾರಣವಾಗುವುದೇ ಹೆಚ್ಚು. ಅಂತಹದರಲ್ಲಿ ಹಿಂದೂ- ಮುಸ್ಲಿಮರು ಪರಸ್ಪರ ಕೂಡಿಕೊಂಡು ಹಬ್ಬ ಆಚರಿಸಿದರೆ ಎಷ್ಟು ಸೌಹಾರ್ದತೆ ಇರುತ್ತದೆ ಮತ್ತು ಸಾಮಾಜಿಕ ಸಾಂಸ್ಕೃತಿಕ ಬೆಳವಣಿಗೆಗೆ ಸಾಕ್ಷಿ ಯಾಗುತ್ತದೆ ಅನ್ನೊದು ಈ ಸಂದರ್ಭ ಮಾದರಿಯಾಗಿತ್ತು.
ಸಮಾಜಕ್ಕೆ ಮಾದರಿ ಸಂದೇಶ ಸಾರುವ ಇಂತಹ ಪ್ರಸಂಗಗಳೂ ಆಗಾಗ ನಡೆಯುತ್ತಿರುತ್ತವೆ. ಈಗ ಇಂಥದ್ದೇ ಪ್ರಸಂಗಕ್ಕೆ ಶರಣರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಸಾಕ್ಷಿಯಾಯಿತು.
ಗಣೇಶ್ ಹಾಗೂ ಈದ್ ಮಿಲಾದ ಸಂದರ್ಭದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ಬಿಗಿ ಬಂದೋಬಸ್ತನೊಂದಿಗೆ ಕೆಲಸ ಮಾಡುವ ಪೊಲೀಸ್ ಇಲಾಖೆ ಅಧಿಕಾರಿಗಳ ಚಾಣಾಕ್ಷತನದ ನಡೆಯಿಂದಾಗಿ ಹೈ ಟೆನ್ಶನ್ನಲ್ಲಿ ನಡೆಯಬೇಕಿದ್ದ ಈ ಎರಡು ಹಬ್ಬಗಳು ಪರಸ್ಪರ ಸಹಕಾರದೊಂದಿಗೆ ಸಂಭ್ರಮದ ಆಚರಣೆಗೆ ಸಾಕ್ಷಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ತುಂಬ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಾರಿ ಗಣೇಶ್ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಕೇವಲ ಒಂದು ದಿನದ ಅಂತರದಲ್ಲಿ ಒಂದೇ ಬಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಚಾಣಾಕ್ಷತನದ ಉಪಾಯ ಅನುಸರಿಸಿದ ಹುಮ್ನಾಬಾದ್ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡರ್ ಹಾಗೂ ಸಿಪಿಐ ಅಲಿಸಾಬ್ ನೇತೃತ್ವದ ಪೊಲೀಸರ ತಂಡ, ಒಂದು ವಾರಗಳ ಹಿಂದಿನಿಂದಲೇ ಮೇಲಿಂದ ಮೇಲೆ ಹಿಂದೂ ಹಾಗೂ ಮುಸ್ಲಿಂ ಸಮಾಜದ ಗಣ್ಯರ ಸಭೆಗಳನ್ನು ನಡೆಸಿ, ಪರಸ್ಪರ ಸಹಕಾರ ಹಾಗೂ ಸಹಭಾಗಿತ್ವದೊಂದಿಗೆ ಹಬ್ಬಗಳನ್ನು ಆಚರಿಸುವಂತೆ ಪ್ರೇರೇಪಿಸಿದ್ದೇ ಈ ಎರಡು ಹಬ್ಬಗಳು ಶಾಂತಿ ಹಾಗೂ ಸೌಹಾರ್ತೆಯಿಂದ ಆಚರಣೆಗೆ ಸಾಧ್ಯವಾಯಿತು ಎಂದು ಹೇಳಬಹುದು.
ಸೆಪ್ಟಂಬರ್ 16 ರಂದು ನಡೆದ ಈದ್ ಮಿಲಾದ್ ಹಬ್ಬದಂದು ಮೆರವಣಿಗೆಯಲ್ಲಿ ಆಗಮಿಸಿದ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ನಗರದ ಭವಾನಿ ಮಂದಿರದ ಬಳಿ ಹಿಂದೂಪರ ಸಂಘಟನೆಗಳ ಮುಖಂಡರು ಶಾಲು ಹೊಂದಿಸಿ ಸನ್ಮಾನಿಸಿದ್ದರು. ಈ ಹಿನ್ನಲೆಯಲ್ಲಿ ಜಾಗೃತಗೊಂಡ ಬಸವಕಲ್ಯಾಣದ ಸಮಸ್ತ ಮುಸ್ಲಿಂ ಮುಖಂಡರು ಸೆಪ್ಟೆಂಬರ್ 17 ರಂದು ರಾತ್ರಿ ಆಯೋಜಿಸಿದ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಗರದ ಕೋಟೆ ಬಳಿ ವಸುದೈವ ಕುಟುಂಬಕ್ಕೆ ಟೈಟಲ್ನ ಅಡಿಯಲ್ಲಿ ಬೃಹತ್ ಪೆಂಡಾಲ ಹಾಕಿ ಗಣೇಶ್ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ ೧೨ ಗಣೇಶ್ ಮಂಡಲಗಳ ಮುಖಂಡರುಗಳಿಗೆ ವಿಶೇಷವಾಗಿ ಸಿದ್ಧಪಡಿಸಿದ ಸಿಹಿ ತಿನಿಸು ತಿನಿಸಿ, ಸನ್ಮಾನಿಸುವ ಮೂಲಕ ಭಾವೈಕ್ಯತೆಯ ಸಂದೇಶ ರವಾನಿಸಿದರು.
ಇಷ್ಟಕ್ಕೆ ಸುಮ್ಮನಾಗದ ಮುಸ್ಲಿಂ ಮುಖಂಡರು ತಾವೇ ಸ್ವತಃ ಮುಂದೆ ಬಂದು, ಗಣೇಶನಿಗೆ ಕರ್ಪೂರ ಆರತಿ ಬೆಳಗಿ, ಪೂಜೆ ಸಲ್ಲಿಸಿ, ಗಣೇಶ್ ಮೆರವಣಿಗೆಗೆ ಚಾಲನೆ ನೀಡಿ ಗಮನ ಸೆಳೆದಿರುವುದು ಭಾವೈಕತ್ಯೆಯ ನಾಡಲ್ಲಿ ಬಹುಪರಾಕ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡರ ಮಾತನಾಡಿ, ಮುಸ್ಲಿಂ ಬಾಂಧವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಗಣೇಶ್ ಮಂಡಲದವರಿಗೆ ಸನ್ಮಾನಿಸುವ ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿಯಾಗಿದೆ. ಇಂದಿನ ಈ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವ ಜೊತೆಗೆ ಜಗತ್ತಿಗೆ ಮಾದರಿಯಾಗಿದೆ ಎಂದು ಇಲ್ಲಿಯ ಹಿಂದೂಪರ ಜನ ಬಣ್ಣಿಸಿದರು.
ತಹಶೀಲ್ದಾರ್ ದತ್ತಾತ್ರೇಯ ಗಾದಾ ಮಾತನಾಡಿ, ಶರಣರ ನೆಲದಲ್ಲಿ ಹಿಂದೂ ಹಾಗೂ ಮುಸ್ಲಿಮ ಬಾಂಧವರು ಕೂಡಿಕೊಂಡು ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಿರುವುದು ಶ್ಲಾಘನಾರ್ಹವಾಗಿದೆ ಎಂದು ತಿಳಿಸಿದರು.
ಸಿಪಿಐ ಅಲಿಸಾಬ್ ಮಾತನಾಡಿ, ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬದ ಹಬ್ಬಗಳನ್ನು ಎರಡು ಸಮುದಾಯದವರು ಕೂಡಿಕೊಂಡು ಆಚರಣೆ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಪೋಲಿಸ್ ಇಲಾಖೆಯ ಸಮಯೋಚಿತ ಕ್ರಮದಿಂದಾಗಿ ಚಿಕ್ಕ ಪುಟ್ಟ ಗೊಂದಲಗಳು ನಡೆಯದೆ ಬೆಳಗಿನ ಜಾವದವರೆಗೆ ಗಣೇಶ್ ವಿಸರ್ಜನೆ ಮೆರವಣಿಗೆ ಸಂಭ್ರಮದಿಂದ ಜರಗಿತು.
ಈ ಸಂದರ್ಭದಲ್ಲಿ ಈದ್ಗಾ ಕಮಿಟಿ ಅಧ್ಯಕ್ಷ ಅಮೀರ್ ಸೇಟ್, ಮುಸ್ಲಿಂ ಬೈತಲ್ ಮಾಲ್ ಸಂಸ್ಥೆಯ ಅಧ್ಯಕ್ಷ ಮಕ್ದುಮ್ ಮೋಹಿಯೋದ್ದಿನ್, ಕೆಪಿಸಿಸಿ ಸದಸ್ಯ ಎಂ.ಡಿ ರೈಸುದ್ದೀನ್, ನಗರಸಭೆ ಸದಸ್ಯ ಎಜಾಜ್ ಲಾತುರೆ, ಗಫರ್ ಫೇಸ್ಮಾಂ, ಸಗಿರೋದ್ದೀನ್, ಪ್ರಮುಖರಾದ ಮೀರ್ ಅಜರಲಿ ನವರಂಗ, ಖಲೀಲ್ ಅಹ್ಮದ್, ಮಿನಾಜ್ ನವಾಬ್, ಸೈಯದ್ ಯಾಸರಬ ಅಲಿ ಖಾದ್ರಿ, ರಬ್ಬಾನಿ ಬಾಗ್, ಅನ್ವರ್ ಬೋಸ್ಗೆ, ಎಂ.ಡಿ ಕುತ್ಬುದ್ದೀನ್, ಖಲೀಲ್ ಗೊಬ್ರೆ, ಡಾ: ಖದಿರೋದ್ದೀನ್, ನವಾಜ್ ಕಾಜ್ಮಿ, ಅಹಮದ್, ಸಾಧಕ ಮಿಯಾ ಸೇರಿದಂತೆ ಮುಸ್ಲಿಂ ಸಮಾಜದ ಪ್ರಮುಖರು, ಗಣ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಸೇರಿದ ಯುವಕರು ಉಪಸ್ಥಿತರಿದ್ದರು.
ಇಂದಿನ ಸಮಾಜದಲ್ಲಿ ಇಂತಹ ಸೌಹಾರ್ದತೆ ಮೇರೆಯುವ ಸಾರ್ವಜನಿಕರ ಗುಣವೈಶಿಷ್ಠ್ಯ ಮೆಚ್ಚುವಂತಹದಾಗಿದೆ.
ನಮ್ಮ ದೇಶದಲ್ಲಿ ವಿವಿಧ ಧರ್ಮ, ಜಾತಿ, ಪಂಥ ಹಾಗೂ ಸಂಸ್ಕೃತಿಯಿಂದ ಕೂಡಿರುವುದು ನಿಜ ಆದರೆ ವಿವಿಧತೆಯಲ್ಲಿ ಐಕ್ಯತೆ ಮೇರೆಯುವುದು ಎಂದರೆ ನಿಜವಾದ ಪೌರತ್ವದ ಗುಣವಾಗಿದೆ.
ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ನಡವಳಿಕೆಯಲ್ಲಿ ಇಂಥಹ ಭಾವೈಕ್ಯ ಮೇರೆಯುವ ಗುಣ ಬೆಳೆದು ಬಂದರೆ ದೇಶದಲ್ಲಿ ತಾನಾಗಿಯೇ ಸಹೋದರತೆ ಮತ್ತು ಸಮನ್ವಯತೆ ಬೆಳೆದು ಬರುತ್ತದೆ ಎನ್ನುವುದಕ್ಕೆ ಬೇರೆ ಹೇಳಬೇಕಾಗಿಲ್ಲ.
ಹಿಂದೂಸ್ತಾನದಲ್ಲಿ ವಾಸಿಸುವ ನಾವೆಲ್ಲರೂ ಭಾರತೀಯರಲ್ಲವೇ ? ಇರುವಷ್ಟು ದಿನ ನಾವೇಲ್ಲರೂ ಸ್ನೇಹ ಸೌಹಾರ್ದತೆಯಿಂದ ಕೂಡಿ ಬಾಳಿ ಬದುಕೋಣ.
‘ಆ ಮತ ಈ ಮತ ಬೇಡ. ಮನುಜ ಮತ. ವಿಶ್ವ ಪಥ.’ ಎಂದು ಕವಿ ಕುವೆಂಪು ರವರು ಹೇಳಿದಾರೆ .ನಾವೇಲ್ಲ ಆ ದಾರಿಯಲ್ಲಿ ಸಾಗೋಣ.
– ಉದಯಕುಮಾರ ಮುಳೆ
ಬಸವಕಲ್ಯಾಣ