ಕೃಷ್ಣ.

ದ್ವಾಪರಾ ಯುಗದಲ್ಲಿ ಶ್ರೀಕೃಷ್ಣ ಅವತಾರ ಪುರುಷ.ಧರ್ಮದ ಪಾಲನೆಗಾಗಿ ಜನ್ಮವೆತ್ತಿ ಇಡೀ ಲೋಕಕ್ಕೆ ಮಾದರಿಯಾದನು.
ಕೃಷ್ಣ ಶ್ಯಾಮಲ ವರ್ಣದವನು ಕಪ್ಪು ಬಣ್ಣದಲ್ಲೂ ಸೌಂದರ್ಯವಿದೆಯೆಂದು ಸಂದೇಶ ಕೊಟ್ಟವನು.

ಗಿಡಮರ,ಪ್ರಾಣಿ ಪಕ್ಷಿಗಳ ಬಳಿ ಮಾತನಾಡುತ್ತಾ

a painting of a person playing a flute
ಕೃಷ್ಣ.

ಮುಖ್ಯವಾಗಿ ಕೊಳಲನ್ನು ಊದುತ್ತಾ, ಗೋವುಗಳನ್ನು ಮೇಯಿಸುತ್ತಾ, ಗೋಕುಲದಲ್ಲಿ ಬೆಳೆದು ಗೋಪಾಲ ಎನಿಸಿಕೊಂಡವನು ಪ್ರಕೃತಿಯ ಬಳಿ ನಿಕಟ ಸಂಬಂಧ ಹೊಂದಿದರೆ ಆನಂದಮಯ ಬದುಕು ಎಂಬ ಸಂದೇಶ ಸಾರಿದ್ದಾನೆ.

ಕೃಷ್ಣ ಯದುವಂಶದಲ್ಲಿ ಹುಟ್ಟಿದವ ದೇವಕೀಸುತ. ಬಾಲ್ಯದಲ್ಲೇ ತುಂಟ.ಹಾಲು,ಮೊಸರು, ಬೆಣ್ಣೆ ಅವನಿಗೆ ಬಲು ಇಷ್ಟ. ಗೋಪಿಕಾ ಸ್ತ್ರೀಯರ ಮನೆಗಳಿಗೆ ಬೆಣ್ಣೆ ಕದಿಯುತ್ತಿದ್ದ. ಇದರ ಹಿಂದಿನ ಉದ್ದೇಶ ಬೆಣ್ಣೆ,ಹಾಲು ಎಲ್ಲಾ ಕಂಸನ ಊರಿನ ಮಥುರಾಕ್ಕೆ ತಲುಪಬಾರದೆಂಬ ಉದ್ದೇಶ ಇತ್ತು.

ಕೃಷ್ಣನ ತುಂಟಾಟ ಸಹಿಸದೆ ಅವನನ್ನು ಕಟ್ಟಲು ಬಳ್ಳಿ ಹುಡುಕಿ ಸೋತು “ನನ್ನಿಂದ ಆಗದು” ಎಂದಾಗ ಕೃಷ್ಣನೇ ಅವಳಿಗೆ ಹಗ್ಗ ಕಾಣುವಂತೆ ಮಾಡಿ ಅವಳ ಕೈಯಲ್ಲಿ ಕಂಬಕ್ಕೆ ಕಟ್ಟಿಸಿಕೊಳ್ಳುತ್ತಾನೆ. ಅದಕ್ಕೇ ನಾವು “ಎಲ್ಲವೂ ನನ್ನಿಂದ” ಎಂಬ ಸ್ವಾರ್ಥ ಮರೆತು ದೇವರಲ್ಲಿ ಶರಣಾಗಬೇಕು.

ಗೋಕುಲ ನಿವಾಸಿಗಳು ಮಳೆ ಬರುವಂತೆ ಇಂದ್ರನ ಪೂಜೆ ಮಾಡಿ ಸಂಭ್ರಮಿಸಿದಾಗ ಕೃಷ್ಣ ನು ಅದನ್ನು ನಿಲ್ಲಿಸಿ ಗೋವರ್ಧನಗಿರಿಯ ಪೂಜೆಯನ್ನು ಮಾಡಿಸಿದ. ಕೋಪಗೊಂಡ ಇಂದ್ರ ಅತಿವೃಷ್ಟಿ ಸುರಿಸಿದ. ಎಲ್ಲರೂ ಕಂಗಾಲಾಗಲು ಕೃಷ್ಣನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನಲ್ಲೆತ್ತಿ ಹಿಡಿದ. ಉಳಿದ ಜನರನ್ನು ದಂಡಗಳ ಮೂಲಕ ಬುಡವನ್ನು ಹಿಡಿಯಲು ಹೇಳುವ ಮೂಲಕ ಒಗ್ಗಟ್ಟಿನಿಂದ ಬಾಳಲಿ ಎಂಬ ಸಂದೇಶವನ್ನು ಸಾರಿದ.

ಕಾಳಿಂಗ ಸರ್ಪದ ಹೆಡೆಮುರಿದು ಕಟ್ಟಿದ.ಅಷ್ಟು ಸಾಮರ್ಥ್ಯವನ್ನು ಹೊಂದಿದ ಧೀರನವನು. ಯಾರಿಗೂ ಹೆದರಬಾರದು ಎಂಬ ಸಂದೇಶ ಕೊಟ್ಟ.

ಭೂದೇವಿಯು ಒಂದು ಹಿಡಿ ಮಣ್ಣನ್ನು ಕೃಷ್ಣನಿಗೆ ಪ್ರೀತಿಯಿಂದ ನೈವೇದ್ಯವಾಗಿ ಕೊಟ್ಟಾಗ ಅದನ್ನು ಪ್ರೀತಿಯಿಂದ ಸ್ವೀಕರಿಸಿ ತಿಂದ. ಅಣ್ಣ ಬಲರಾಮನು ಯಶೋದೆಯ ಬಳಿ ದೂರು ಹೇಳಿದಾಗ ಅವಳು ಬಂದು ಕೃಷ್ಣನನ್ನು ” ಮಣ್ಣು ತಿಂದೆಯಾ?” ಎಂದು ಗದರಿಸಿದಾಗ ಇಲ್ಲಮ್ಮಾ ಎಂದು ಹೇಳಿ ಬಾಯಿ ಒಡೆದು ಮೂಜಗವ ತೋರಿದ.

ಗೆಳೆಯ ಸುಧಾಮನು ತಂದ ಅವಲಕ್ಕಿಯನ್ನು ತಿಂದು ಅವನನ್ನು ಧನಿಕನನ್ನಾಗಿ ಮಾಡಿದನು.

ನರಕಾಸುರನ ವಧೆ ಮಾಡಿ ಸೆರೆಯಲ್ಲಿದ್ದ ಹದಿನಾರು ಸಾವಿರ ಹೆಂಗಸರನ್ನು ಮದುವೆಯಾದವನು ಕೃಷ್ಣ. ದುಷ್ಟ ಶಕುನಿಯನ್ನೂ ಮಿತ್ರನನ್ನಾಗಿ ಮಾಡಿದ.ವಿದುರನ ಮನೆಗೋಗಿ ತನ್ನ ಉಪದೇಶದಿಂದ ಅವನ ಮನಸ್ಸನ್ನು ಗೆದ್ದ. ಗಾಂಧಾರಿಯ ಶಾಪವನ್ನು ಮನಸಾರೆ ಒಪ್ಪಿದ.

ರಾಧೆ ಕೃಷ್ಣನಿಗೆ ಒಲಿದು ಅವರ ಪ್ರೇಮ ದೈವತ್ವವೆನಿಸಿದೆ.

ದ್ರೌಪದಿಯ ಸೀರೆಯನ್ನು ತುಂಬಿದ ಸಭೆಯಲ್ಲಿ ದುಶ್ಯಾಸನ ಎಳೆದಾಗ ಅವಳು ಕೊನೆಗೆ “ಕೃಷ್ಣ, ಕೃಷ್ಣ ನೀನೇ ಗತಿ ಎಂದಾಗ ಸೀರೆಯನ್ನು ಅಕ್ಷಯವಾಗಿಸಿ ಮಾನ ಉಳಿಸಿದ.

ಕುರುಕ್ಷೇತ್ರ ಯುದ್ದದಲ್ಲಿ ಅರ್ಜುನ ಮನಸ್ಸು ವಿಚಲಿತವಾದಾಗ ಕೃಷ್ಣನು ಗೀತೋಪದೇಶ ಮಾಡಿ,ಇದು ಧರ್ಮ,ಆಧರ್ಮದೊಂದಿಗೆ ನಡೆಯುವ ಯುದ್ಧ ಎಂದು ಪ್ರೇರೇಪಿಸಿದ ಸಂದೇಶವೇ ಭಗವದ್ಗೀತೆ. ಹಿಂದೂಗಳು ಪೂಜಿಸುವ ಧರ್ಮ ಗ್ರಂಥವಾಗಿದೆ.

ಕೊನೆಗೆ ಸಾಮಾನ್ಯ ಬೇಡನೊಬ್ಬ ಬಿಟ್ಟ ಬಾಣದಿಂದ ಪ್ರಾಣತ್ಯಾಗ ಮಾಡಿದ ಕೃಷ್ಣ.

                   –ಸಂಧ್ಯಾ ಶ್ಯಾಮಭಟ್. ಮುಂಡತ್ತಜೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ