ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ
ಭಗವಂತನಿಂದ ವಿಭಕ್ತನಾಗದವನು ಭಕ್ತನೆನಿಸಿಕೊಳ್ಳುತ್ತಾನೆ. ಭಕ್ತಿ ಕೇವಲ ಕೃತಿಯಾಗಿರದೇ ವೃತ್ತಿಯಾಗಿ. ಜೀವನವನ್ನು ಪ್ರೇಮದಿಂದ ನೋಡುವ, ಅನುಭವಿಸುವ ಒಂದು ವಿಶಿಷ್ಟ ವೃತ್ತಿಯೇ ಭಕ್ತಿ. ಸನಾತನ ಪರಂಪರೆಯಿಂದ ಬಂದಿರುವ ಭಕ್ತಿಭಾವವು ಭಾರತದ ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಭಕ್ತ ಮತ್ತು ಭಗವಂತನ ನಡುವೆ ಭಕ್ತಿಯು ಸೇತುವೆಯಾಗಿದೆ. ಭಕ್ತಿಗೆ ಆಧಾರಭೂತ ತತ್ವವಿದೆ. ಯಾರು ಯಾರ ಭಕ್ತಿಯನ್ನು ಮಾಡುತ್ತಾರೆಯೋ, ಅವರಿಗೆ ಶರಣಾಗತರಾಗಬೇಕು. ಭಕ್ತಿಯೆಂದರೆ ಸ್ವಯಂ ವಿಕಸಿತ ಹಾಗೂ ಸ್ವಯಂ ಪ್ರಕಾಶಿತನಾಗುವುದು. ಪರಮಾತ್ಮನ ಶಕ್ತಿಯನ್ನು ತನ್ನ ಶಕ್ತಿಯನ್ನಾಗಿ ಮಾಡಿಕೊಳ್ಳುವುದೇ ಭಕ್ತಿಯಾಗಿದೆ. ಸಾಧಕನು ಆ ಸಾಮರ್ಥ್ಯವನ್ನು ಹೊಂದಿದಾಗ ಮಾತ್ರ ಜೀವ ಶಿವ ಅರಿತು, ಐಕ್ಯಸ್ಥಳದಲ್ಲಿ ನಿಲ್ಲುತ್ತಾನೆ.
ಪ್ರತಿಯೊಬ್ಬ ಜಾತಿ-ಧರ್ಮಗಳಲ್ಲಿ ಮಹಾನ್ ಆತ್ಮಗಳಾದವರು ಭಾರತದ ಜ್ಯೋತಿಗಳಾಗಿ, ಸಾಮಾನ್ಯರಿಗೆ ಮಾರ್ಗದರ್ಶಕರಾಗಿ, ಪ್ರಜ್ವಲಿಸುವ ದಾರಿದೀಪಗಳಾಗಿ ಹೋಗಿದ್ದಾರೆ. ಸೂಕ್ಷ್ಮರೂಪದಲ್ಲಿದ್ದು ದಾರಿ ತೋರುತ್ತಿದೆ. ಅಂತಹ ಮಹಾತ್ಮರ, ಶರಣ-ಶರಣೆಯರ ಚರಿತ್ರೆ ಓದುವುದರಿಂದ, ಕೇಳುವುದರಿಂದ ಮೈ ರೋಮಾಂಚಿತವಾಗುತ್ತದೆ. ನಾವೂ ಮೂಕಸ್ಮಿತರಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಪ್ರಬಲ ಇಚ್ಛೆಯುಂಟಾಗುತ್ತದೆ. ಭಗವಂತನ ಪ್ರಾಪ್ತಿಗೆ ಮನಸ್ಸಿನಲ್ಲಿ ಅತ್ಯಂತ ತಳಮಳ ಇರಬೇಕು. ಬಾಲಕನ ಮುಗ್ಧತೆ, ಬೇಡಿಕೆ ಬೇಕು, ಆದರೆ ದ್ವೇಷವಿಲ್ಲದಿರುವುದು ಬೇಕು. ಬಾಲ್ಯಾವಸ್ಥೆಯಲ್ಲಿ ಶರಣರ ವಚನಗಳನ್ನು ಕಂಠಸ್ಥ ಮಾಡಿಕೊಳ್ಳಬೇಕು. ಯೌವನಾವಸ್ಥೆಯಲ್ಲಿ ಕಾಯಕವೇ ಕೈಲಾಸವೆನುತ ಕ್ರಿಯಾಶೀಲನಾಗಿ ದಾಸೋಹ ಪದ್ಧತಿಯನ್ನು ಅನುಸರಿಸಬೇಕು. ವೃದ್ಧಾವಸ್ಥೆಯಲ್ಲಿ ಸತತ ಭಗವಂತನ ನಾಮಸ್ಮರಣೆ, ಮನನ, ಚಿಂತನಗಳಿಂದ ತನ್ನನ್ನು ತಾನರಿಯಬೇಕು. ಸಮರ್ಪಣೆ ಹಾಗೂ ಶರಣಾಗತಿಯ ಭಾವವಿರಬೇಕು.
ಕಾಯಕಯೋಗಿಯಾಗಿ ಭಕ್ತಿಭಂಡಾರಿ ಬಸವಣ್ಣನವರದು ಅಪರಾ ಭಕ್ತಿಯಾಗಿರದೆ, ಆತ್ಮೋದ್ಧಾರದ ಪರಭಕ್ತಿಯಾಗಿತ್ತು. ಅವರದು ಸತಿ-ಪತಿಗಳೊಂದಾದ ಭಕ್ತಿಯಾಗಿತ್ತು. ಅಷ್ಟೊಂದು ತಾದಾತ್ಮೆಯ ಪವಿತ್ರ ಪ್ರೇಮಭಾವ ಅವರಾಗಿತ್ತು. ಅವರು ತಮ್ಮ ಭಕ್ತಿಯ ಶಕ್ತಿಯಿಂದಲೇ ಸಮಾಜದಲ್ಲಿ ಕ್ರಾಂತಿ ಮಾಡಿದರು. ಜಾತಿ, ವರ್ಗ, ವರ್ಣ, ಲಿಂಗಭೇದ ತೊಡೆದು ಹಾಕಿದರು.
ಶರಣರು ವಚನ ಚಳುವಳಿ ಮಾಡಿ ಜನರಲ್ಲಿ ಜ್ಞಾನಬೀಜ ಬಿತ್ತಿದರು. ಜಡತೆಯಿಂದಿದ್ದ ಜನರನ್ನು ಜಾಗೃತಗೊಳಿಸಿದರು.
ಸಮಷ್ಟಿಯ ಅಭೀಪ್ಸೆಗೆ ಒಂದು ದಿವ್ಯಶಕ್ತಿಯಿದೆ. ಅದರ ಋತಶಕ್ತಿ ಮತ್ತು ಕೃತಶಕ್ತಿಗಳೆರಡೂ ಜಾಗೃತಗೊಂಡ ಸಮ್ಮಿಲನದಿಂದ ದಿವ್ಯಚೇತನವೊಂದು ನಿರ್ಮಾಣಗೊಂಡು, ಸಮಷ್ಟಿಯ ಉದ್ಧಾರವ ಉತ್ಥಾನಕ್ಕೆ ಅವತಾರವೆತ್ತಿ, ಮಹಾತ್ಮಾ ಜಗಜ್ಯೋತಿ ಬಸವೇಶ್ವರರು ಧರೆಗಿಳಿದು ಬರುತ್ತಾರೆ. ಭೂಮಿ ಕಾಯ್ದಾಗಲೇ ಮಳೆ ಅವತರಣವಾಗುವಂತೆ, ಸಮಷ್ಟಿಯ ಜನ ಮನ ಕಾಯ್ದಾಗಲೇ ಮಹಾತ್ಮರ ಅವತರಣವಾಗುತ್ತದೆ.
ಬಸವಣ್ಣನವರು ಉದಾತ್ತ ವಿಚಾರವಂತರು. ಧಾರ್ಮಿಕ ಸಹಿಷ್ಣು, ಲಿಂಗಾಯತ ಧರ್ಮಸಂಸ್ಥಾಪಕ. ಸತ್ಯನಿಷ್ಠ, ಅಹಿಂಸಾವಾದಿ, ಕಾಯಕಯೋಗಿ, ದಾಸೋಹ ಹರಿಕಾರ, ದಾರ್ಶನಿಕ, ಕನ್ನಡ ಹೋರಾಟಗಾರ, ಸ್ತ್ರೀ ಸ್ವಾತಂತ್ರ್ಯವಾದಿ, ದಂಡನಾಯಕ, ಆರ್ಥಿಕತಜ್ಞ. ಹೀಗೆ ಬಸವಣ್ಣನವರು ‘ಒನ್ ಇನ್ ಆಲ್, ಆಲ್ ಇನ್ ಒನ್’ ಆಗಿದ್ದರು. ಮುಂದೆ ಪ್ರಪ್ರಥಮ ಸಂಸದ್ ಭವನ ಸ್ಥಾಪಿಸಿದವರು ಬಸವಣ್ಣ. ಸರ್ವಧರ್ಮ ಸಮವೆಂದು ಸಾರಿದವರು ಬಸವಣ್ಣ. ಇಂಥ ಹೆಮ್ಮೆಯ ಕನ್ನಡಿಗ, ಕರುನಾಡಿನ ಮಣ್ಣಿನ ಮಗ ಬಸವಣ್ಣ. ಸಾಂಸ್ಕೃತಿಕ ನಾಯಕ ಬಸವಣ್ಣ. ಇಂಥ ವಿಶ್ವಗುರು ಬಸವಣ್ಣನವರಿಗೆ ಅನಂತ ಕೋಟಿ ನಮನಗಳು. ಅವರ ಜೀವನ ಚರಿತ್ರೆ ಬಾಲರಿಂದ ವೃದ್ಧರ ವರೆಗೆ ತಿಳಿದ ವಿಷಯವಾಗಿದೆ, ಇಲ್ಲಿ ಮತ್ತೆ ಮಂಡಿಸುವ ಅವಶ್ಯವಿಲ್ಲವೆಂಬುದು ನನ್ನ ಅಂಬೋಣ.
ಭಾರತೀಯ ಭಕ್ತಿಪರಂಪರೆ, ಭಕ್ತಿಪಂಥದ ಆರಂಭವು ಸಾವಿರಾರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಆಯಿತು ಎಂದು ಹಲವು ಗ್ರಂಥಗಳಲ್ಲಿ ಹೇಳಲಾಗಿದೆ. ತಮಿಳುನಾಡಿನಲ್ಲಿ ಅಳ್ವಾರ್ ಸಂತರು, ಪೇಯ್ ಅಳ್ವಾರ್, ತಿರುವನಳ್ವಾರ್, ಅಂಡಾಳ್, ತಿರುಮರಿಯಲ್ ಅಳ್ವಾರ್ ಇವರೆಲ್ಲ ವಿಷ್ಣುಭಕ್ತರಾದರೆ, ನಾಯ್’ನಾರು ಶಿವಭಕ್ತರು. ಕೇರಳದಲ್ಲಿ ವಾಲ್ಮೀಕಿ ಎಂದು ಕರೆಯಲ್ಪಡುವ ತುಂಚಿತ್ತು ಎಂಚಿತ್ತು ಎಂಬ ಹೆಸರಿನ ಮಹಾಸಂತರು, ಹಾಗೂ ನಂಬೂದರಿ ಸಂತರು ಆಗಿಹೋಗಿದ್ದಾರೆ. ವೇಲಪುತ್ತ, ಭಟ್ಟ ನಾರಾಯಣ ಮಹಾತ್ಮರೂ ಅಲ್ಲಿ ಇಬ್ಬರು. ಆಂದ್ರಪ್ರದೇಶದಲ್ಲಿ ತ್ಯಾಗರಾಜರು, ಪೆÇೀತನ್ನಾದಿ ಕ್ಲೇದ, ವೇಮನ್ ಸಂತರು ಇರುತ್ತಿದ್ದರು. ಕರ್ನಾಟಕದಲ್ಲಿ ನಿಜಗುಣ ಶಿವಯೋಗಿ, ಬಸವೇಶ್ವರ, ಅಕ್ಕಮಹಾದೇವಿ, ಪುರಂದರದಾಸ ಮುಂತಾದವರಿದ್ದರು. ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರ, ಸಂತ ತುಕಾರಾಮ, ಸಮರ್ಥ ರಾಮದಾಸರು ಆಗಿಹೋಗಿದ್ದಾರೆ. ಗುಜರಾತದಲ್ಲಿ ನರಸಿಂಹ ಮೆಹತಾ, ಸ್ವಾಮಿ ನಾರಾಯಣರು. ರಾಜಸ್ಥಾನದಲ್ಲಿ ಸಂತ ಮೀರಾಬಾಯಿ, ದಾದುದಯಾಳಸಂತರು. ಆಸ್ಸಾಮದಲ್ಲಿ ಶ್ರೀ ಶಂಕರದೇವ ಮಹಾತ್ಮರು, ಮಾಧವದೇವರು. ಉತ್ತರಪ್ರದೇಶದಲ್ಲಿ ಕಬೀರದಾಸ, ಸೂರದಾಸ, ಕಾಳೀದಾಸರು. ಮಧ್ಯಪ್ರದೇಶದಲ್ಲಿ ಶ್ರೀ ಅನಂತಾನಂತ ಶೈಶ್ ಹಾಗೂ ಬೂರಾನಂದ ಬಾಬಾ. ಬಂಗಾಲದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು, ಕಲಕತ್ತಾದ ರಾಮಕೃಷ್ಣ ಪರಮಹಂಸರು. ಓರಿಸ್ಸಾದ ಸರಳದಾಸರು ಹಾಗೂ ಬಡೇ ಜಗನ್ನಾಥರು. ಬಿಹಾರದಲ್ಲಿ ದರಿಯಾ ಸಂತರು. ಪಂಜಾಬ ಹರಿಯಾಣದಲ್ಲಿ ಗುರು ನಾನಕರು ಹಾಗೂ ಗುರುಗೋವಿಂದಸಿಂಗರು. ಕಾಶ್ಮೀರದಲ್ಲಿ ಪರಮಾನಂದ ಸಂತರು, ಲಲ್ಲೇಶ್ವರಿದೇವಿ. ಲಲ್ಲೇಶ್ವರಿದೇವಿಯು ಅಕ್ಕಮಹಾದೇವಿಯಂತೆ ನಡೆದವಳು. ಅಂಬರವನ್ನೇ ಉಡುಗೆಯನ್ನಾಗಿ ತೊಟ್ಟುಕೊಂಡವಳು
ಹೀಗೆ ನಮ್ಮ ಭಾರತೀಯ ಪರಂಪರೆ ಮುಂದುವರೆದಿದೆ. ಇವರೆಲ್ಲರಲ್ಲಿ ನಮ್ಮ ಭಕ್ತಿ ಭಂಡಾರಿ ಬಸವಣ್ಣನವರು ಗುರು, ಲಿಂಗ, ಜಂಗಮ, ದಾಸೋಹ ಮತ್ತು ಕಾಯಕಕ್ಕೆ ಮಹತ್ವ ಕೊಟ್ಟು, ಸಾವಿರಾರು ವಚನಗಳನ್ನು ರಚಿಸಿ, ಇಡೀ ವಿಶ್ವಕ್ಕೆ ಸಾರಿದರು. ಅವರು ನುಡಿಮತ್ತು ನಡೆಯಲ್ಲಿ ಒಂದಾಗಿ ಬಾಳಿದವರು. ಅವರ ಒಂದು ವಚನ :
ಆಚಾರವನರಿಯಿರಿ, ವಿಚಾರವನರಿಯಿರಿ
ಜಂಗಮಸ್ಥಲ ಲಿಂಗ ಕಾಣಿರಯ್ಯ
ಜಾತಿಭೇದವಿಲ್ಲ ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ
ನುಡಿದಂತೆ ನಡೆಯದಿದ್ದೆಡೆ, ಕೂಡಲಸಂಗಮದೇವ ಮೆಚ್ಚನು ಕಾಣಿರಯ್ಯ.
ಎಂಬ ಅವರ ವಿಚಾರಗಳು ಸಿದ್ಧಾಂತ ರೂಪದಲ್ಲಿದ್ದರೆ, ಆಚಾರವು ಪ್ರಯೋಗಾತ್ಮಕವಾಗಿದೆ. ಜಾತಿಭೇದವನ್ನಾಗಲಿ, ಕುಲವನ್ನಾಗಲಿ ಹುಡುಕಬಾರದು. ಧರ್ಮದ ಎರಡು ಮುಖಗಳು ಆಚಾರ ಹಾಗೂ ವಿಚಾರ ಪರೀಕ್ಷೆ. ನುಡಿದಂತೆ ನಡೆದು ತೋರಿಸಿದರೆ ಮಾತ್ರ ನಮ್ಮ ಕೂಡಲಸಂಗಮ ಮೆಚ್ಚುವನು.
ಭಕ್ತಿಯ ಬಗ್ಗೆ ಹೇಳುವಾಗ:
ಮನ ಮುಟ್ಟಿದ ಭಕ್ತಿಗೆ ತನುವೇ ಅರ್ಪಿತ
ತನು ಮುಟ್ಟಿದ ಭಕ್ತಿಗೆ ಮನವೇ ಅರ್ಪಿತವಯ್ಯ
ಎನ್ನ ತನು ಮನವೆರಡೂ ನಿಮ್ಮ ಚರಣಕ್ಕೆ ವೇದ್ಯ ನೋಡಯ್ಯ
ತ್ರಾಹಿ ತ್ರಾಹಿ ಶರಣಾರ್ಥಿ ನೀವೇ ಬಲ್ಲಿರಿ ಕೂಡಲಸಂಗಮದೇವಾ.
ಶರೀರ ಮತ್ತು ಮನಸ್ಸು ಒಂದಕ್ಕೊಂದು ಪೂರಕ. ಯಾವುದೇ ಕ್ರಿಯೆಯಲ್ಲಿ ಇವೆರಡರ ಪಾತ್ರ ಬಹುಮುಖ್ಯವಾದದ್ದು. ಮನಸ್ಸು ಭಕ್ತಿಪೂರ್ಣವಾಗಿದ್ದಾಗ, ಆ ಭಕ್ತಿ ತನುವಿನ ಮೂಲಕ ಕಾಣುತ್ತದೆ. ದೇಹವು ಭಕ್ತಿಪೂರ್ಣ ಮಾಡಿದರಷ್ಟೇ ಸಾಲದು, ಆ ಭಕ್ತಿ ದೃಢನಿಷ್ಠೆ, ಭಾವಪೂರ್ಣ, ಮನಸ್ಸು ಹಾಗೂ ಅಂತಃಕರಣದಿಂದ ತುಂಬಿದಾಗಲೇ, ಶರಣಾಗತಿಯಿಂದ ಶ್ರೀಗುರುಚರಣ ಸಮರ್ಪಣೆಗೆ ವೇದ್ಯವಾಗುವದು. ಅದುವೇ ಸಾರ್ಥಕ ನೈವೇದ್ಯವೆಂದು ಭಗವಂತನಿಗೆ ವೇದ್ಯವಾಗುವದು.
ಮಹಾತ್ಮರ, ದಿವ್ಯಪುರುಷರ, ಶರಣರ ಉಪದೇಶ, ಮುತ್ತಿನಂಥ ನುಡಿ ಕೇಳಿ ಅದರಂತೆ ನಡೆಯುವುದೇ ಸ್ವಾಧ್ಯಾಯ. ದೇಹವನ್ನು ಸತ್ಕಾರ್ಯದಲ್ಲಿ, ಮನವನ್ನು ಸದ್ಭಕ್ತಿಯಲ್ಲಿ, ಹಾಗೂ ಬುದ್ಧಿಯನ್ನು ಸದ್ವಿಚಾರಗಳಲ್ಲಿ ತೊಡಗಿಸುವುದೇ ‘ಕ್ರಿಯಾಯೋಗ’ ಅಥವಾ ತಪಸ್ಸಾಗಿದೆ. ನಮ್ಮ ಕಣ್ಣಿಗೆ ಕಾಣದ, ಅನುಭವಕ್ಕೆ ಬಾರದ ವಿಶ್ವ, ಹಾಗೂ ವಿಶ್ವಾತೀತ ಸತ್ಯವನ್ನು ಅನುಭಾವಿಗಳ ವಚನಗಳಿಂದ ತಿಳಿದುಕೊಳ್ಳಬಹುದು. ಬಣ್ಣದಲ್ಲಿ ಬಿಡಿಸಲಾಗದ, ಶಿಲೆಯಲ್ಲಿ ಕೆತ್ತಲಾಗದ ಪರಮ ಸತ್ಯ, ಶರಣ ಶರಣೆಯ ನಡೆ-ನುಡಿಗಳಲ್ಲಿ ಬಣ್ಣ ಕಾಣುತ್ತದೆ. ಅವರ ವಚನಗಳಲ್ಲಿಯ ಶಬ್ದ ಮಂತ್ರಮಯವಾಗಿದೆ. ಗೌತಮಬುದ್ಧ ಬಯಲಾನುಭವಿ, ಮಹಾವೀರ ಶಾಂತಮೂರ್ತಿ, ಆದಿ ಶಂಕರಾಚಾರ್ಯರು ಬಾಲಬ್ರಹ್ಮಚಾರಿ, ಬಸವಣ್ಣ ಜ್ಞಾನಭಂಡಾರಿ, ಶರಣೆ ಅಕ್ಕಮಹಾದೇವಿ ವೀರ ವಿರಾಗಿಣಿ. ಶರಣರಾದ ಬಸವಣ್ಣನವರು ಭಕ್ತಿಭಂಡಾರಿ.ಅವರಂಥ ತಪಸ್ಸು, ಭಕ್ತಿ ನಮಗೆ ಸಾಧ್ಯ? ಇವರೆಲ್ಲರ ಜೀವನ ಒಂದು ಕ್ಷಣ ಮನಸ್ಸಿನಲ್ಲಿ ಅನುಭವಿಸಬೇಕು.
ಭಕ್ತಿ ಜ್ಞಾನಗಳು ಒಂದಾದಾಗ ಶರಣ ಆತ್ಮಜ್ಞಾನಿಯಾಗುತ್ತಾನೆ. ಭಕ್ತಿ ಮತ್ತು ಭಕ್ತಿಯ ಮಾರ್ಗ ಇದೊಂದು ದೊಡ್ಡ ಸಂಸ್ಥೆ ಇದ್ದ ಹಾಗೆ. ಅಲ್ಲಿ ವ್ಯಕ್ತಿ ಇಲ್ಲ, ಆದರೆ ಸಂಸ್ಥೆಯ ತತ್ವ, ನಿಯಮ, ಪಂಥ ಮಾರ್ಗಗಳು ಮಾತ್ರ ನಿಶ್ಚಿತ ಉಳಿದಿವೆ. ಬುದ್ಧನಿಂದ ಬೌದ್ಧಧರ್ಮ, ಮಹಾವೀರನಿಂದ ಜೈನಧರ್ಮ, ಬಸವಣ್ಣನಿಂದ ಲಿಂಗಾಯತ ಧರ್ಮ ಉಳಿದುಕೊಂಡಿವೆ. ಮಾರ್ಗಗಳು ಅನೇಕವಿದ್ದರೂ, ಭಕ್ತಿಯೊಂದೇ ತನ್ನನ್ನು ತಾನರಿತು, ಲಿಂಗದಲ್ಲಿ ಒಂದಾಗುವುದು.
12 ನೇ ಶತಮಾನವು ಶರಣ ಚಳುವಳಿಯ ಕ್ರಾಂತಿಕಾರಿ ಬದಲಾವಣೆಯ ಕಾಲಘಟ್ಟ. ವರ್ಗ, ವರ್ಣ, ಲಿಂಗ, ಭೇದ ತೊಡೆದುಹಾಕಿದ ಅಣ್ಣನವರು, ಮಾದರ ಚೆನ್ನಯ್ಯ, ದೋಹರ ಕಕ್ಕಯ್ಯ, ಕುಂಬಾರ ಗುಂಡಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಶರಣೆ ಸತ್ಯಕ್ಕ, ವೇಶ್ಯಾವೃತ್ತಿಯ ಸಂಕವ್ವರಂತಹ ಅಪ್ರತಿಮ ಶರಣ-ಶರಣೆಯರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಬಸವ ತತ್ವಗಳು ವಿಶ್ವಮಾನ್ಯ ತತ್ವ ಅಗತ್ಯ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ವಚನಗಳ ಮೂಲಕ ಸಮೃದ್ಧಿಯಾಗಿವೆ. ಸಮಾನತೆ ಹಾಗೂ ಮಾನವತಾವಾದಿ ಧರ್ಮವನ್ನು ಸ್ಥಾಪಿಸಿದ ಅಣ್ಣನವರು ಕೇವಲ ಕರ್ನಾಟಕಕ್ಕೇ ಅಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರೆಂದು ಹೇಳಬಹುದು….
– ಅನ್ನಪೂರ್ಣ ಸು. ಸಕ್ರೋಜಿ. ಪುಣೆ
ಲೇಖಕಿಯರ ಪರಿಚಯ :
ಹಿರಿಯ ಕವಯತ್ರಿ ಅನ್ನಪೂರ್ಣ ಸು ಸಕ್ರೋಜಿಯವರು ಮೂಲತಃ ಧಾರವಾಡದವರು, ಸದ್ಯ ಇವರು 50 ವರ್ಷಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದಾರೆ. ಪಿ.ಯು.ಸಿ ವರೆಗೆ ಅಧ್ಯಯನ ಮಾಡಿದ ಇವರು ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಪಾಂಡಿತ್ಯ
ಮಹಾರಾಷ್ಟ್ರದಲ್ಲಿ ತಮ್ಮ ಪತಿ ಸುಭಾಷಚಂದ್ರ ಅವರೊಡಗೂಡಿ ಕನ್ನಡ ಸಂಘ ಕಟ್ಟಿ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹಲವಾರು ಸಾಹಿತ್ಯ ಪ್ರಕಾರ ರಚನೆ ಮಾಡಿದ ಇವರು ಮರಾಠಿಯಿಂದ ಕನ್ನಡಕ್ಕೆ ಕೆಲ ಕೃತಿಗಳನ್ನು ಅನುವಾದಿಸಿದ್ದಾರೆ. ಭವಾನಿ ಭಾರತಿ ಅರಬಿಂದೋ ರವರು ಬರೆದ ‘ ಸಚಿತ್ರ ಭಗವದ್ಗೀತೆ ‘ ಮತ್ತು ‘ ಬ್ರಹ್ಮ ಚಿಂತನಿಕಾ ‘ ಎಂಬ ಮರಾಠಿ ಕೃತಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರ ಕರ್ಮಯೋಗಿ ಕವಿಗೆ ಮೆಚ್ಚಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಅಭಿನಂದನಾ ಪತ್ರ ಕಳಿಸಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳಿಂದ ಇವರಿಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಬರಹಗಳು ನಾಡಿನಾದ್ಯಂತ ಹಲವಾರು ಪತ್ರಿಕೆಗಳು ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂದು ವಚನಗಳ ಮೂಲಕ ಬಸವಣ್ಣ ಸಾರಿ ಸಾರಿ ಹೇಳಿದರು, ಇವ ನಮ್ಮವನಲ್ಲ ಇವ ನಮ್ಮವನಲ್ಲ ಇವನೆಂದಿಗೂ ನಮ್ಮೊಂದಿಗೆ ಇಲ್ಲ. ಎನ್ನುವಂತಹ ಪರಿಸ್ಥಿತಿಗಳು ಇಂದಿನ ಸಮಾಜದಲ್ಲಿ ಎಷ್ಟೋ ನಡೆಯುತ್ತಿವೆ. ವಚನಗಳ ಅರ್ಥ ಪಾಲಿಸದವರು ಬಸವಾನುಯಾಯಿಗಳು ಆಗಲು
ಹೇಗೆ ಸಾಧ್ಯ!!
ಬಾ ಬಾ ಎಂದು ಅಪ್ಪಿಕೊಳ್ಳುವವರಾರುಂಟೆ ?