Oplus_131072

ನಗುವಿನ ಒಡೆಯನ ನೆನಪು.

    ಅಪ್ಪು ಅಂದರೆ ಪುನೀತ್ ರಾಜಕುಮಾರ್. ಅವರು ನಮ್ಮನ್ನು ಅಗಲಿ ಮೂರು ವರ್ಷ ಸಂದರೂ ನೆನಪಿನ ಪರದೆಯ ಹಿಂದಿನ ಮಾಸದ ನಗುವಿನ ಒಡೆಯನ ಮರೆಯಲುಂಟೆ ? ಅದೆಷ್ಟೋ ಯುವ ಮನಸ್ಸಗಳ ಕದ ತಟ್ಟಿದ ಅಪ್ಪು ಎಂಬ ಪುನೀತ ಕನ್ನಡಿಗ ಒಬ್ಬ ನಿಜವಾದ ಹೀರೋ. ಪರದೆಯ ಹಿಂದೆ ನಾಯಕನಾಗಿ ಮಿಂಚುವ ಹೀರೋಗಳು ನಿಜ ಜೀವನದಲ್ಲೂ ಹೀರೋಗಳಾದರೆ ಅವರು ಅಜರಾಮರರಾಗುತ್ತಾರೆ. ನಮ್ಮ ನೆನಪಿನ ಪುಟಗಳಲಿ ಶಾಶ್ವತ ನೆನಪಾಗಿ ಉಳಿಯುತ್ತಾರೆ.

ಬೆಟ್ಟದ ಹೂವು ಚಿತ್ರದ ಪುಟ್ಟ ಕಣ್ಮಣಿಯನ್ನು ಶಾಲೆಯಲ್ಲಿ ಓದಲು ಬರುವ ಪುಟ್ಟ ಬಾಲರಲ್ಲಿ ಕಾಣುವ ನನ್ನಂತಹ ಶಿಕ್ಷಕಿಯರಿಗೆ ಅಪ್ಪು ಅಚ್ಚುಮೆಚ್ಚು. ಎಳವೆಯಲ್ಲಿ ಬೇರೆ ಬೇರೆ ಪಾತ್ರಗಳನ್ನು ಸಿನಿ ದಿಗ್ಗಜರೊಂದಿಗೆ ನಿರ್ವಹಿಸಿ ಸೈ ಎನಿಸಿಕೊಂಡ ಅಪ್ಪು ಒಬ್ಬ ನೈಜ ಪ್ರತಿಭೆ. ಹಳ್ಳಿ ಹುಡುಗನಿಂದ ಹಿಡಿದು ಭಕ್ತ ಪ್ರಹ್ಲಾದನಂತಹ ಅದ್ಭುತ ಪಾತ್ರ ನಿರ್ವಹಿಸಿದ ಪುನೀತ ನಮ್ಮ ಲೋಹಿತ.

ಜೀವನದಲ್ಲಿ ಒಂದು ಬಾರಿಯೂ ನೋಡಿರದ ಒಬ್ಬ ವ್ಯಕ್ತಿಯ ಕುರಿತು ನಾವು ತೋರಿಸುವ ಅಭಿಮಾನ ಗೌರವಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅಕ್ಟೋಬರ್ 2022 ರ ಮಧ್ಯಾಹ್ನ ಊಟ ಮಾಡಲೆಂದು ಬುತ್ತಿಯ ತುತ್ತಿಗೆ ಕೈ ಇಕ್ಕಿದ್ದೆ. ಅದೇನೋ ಇದಕ್ಕಿದ್ದಂತೆ ಬಂದ ಅವರ  ಸಾವಿನ ಸುದ್ದಿ ನನ್ನ ತುತ್ತು ಗಂಟಲಿಂದ ಇಳಿಯಲಾರದಷ್ಟು ನಿತ್ರಾಣ ಮಾಡಿತ್ತು. ಎಳೆಯ ಜೀವವನ್ನು ಹೊತ್ತಿದ್ದ ನನ್ನ ತಾಯಿ ಹೃದಯ ಗುನುಗಿದ್ದ ಒಂದೇ ಒಂದು ಮಾತು “ಮತ್ತೊಮ್ಮೆ ಹುಟ್ಟಿ ಬರಬಾರದೆ ನೀವು” ?  ಅಪ್ಪುವನ್ನು ಮತ್ತೊಮ್ಮೆ ಭೂಮಿಗೆ ತರುವ ಅವಕಾಶ ನಮಗೆ ನೀಡಬಾರದೆ ಎಂದು ಅದೆಷ್ಟು ಬಾರಿ ಕೇಳಿಕೊಂಡೆನೋ ತಿಳಿಯದು.

ದಿನ ಕಳೆದಂತೆ ಎಲ್ಲರ ಸಾವಿನ ನೋವು ನಮಗೆ ಮರೆಯಾಗಿ ಕೊನೆಗೊಂದು ದಿನ ಅವರನ್ನೆ ಮರೆತು ಬಿಡುವ ನಾವುಗಳು ಅದೆಷ್ಟು ವರ್ಷಗಳು ಕಳೆದರೂ ಮರೆಯದ ರತ್ನಗಳನ್ನು ನಮ್ಮ ನೆನಪಿನ ಮಾಲೆಯಲ್ಲಿ ಪೋಣಿಸಿ ಇಟ್ಟಿರುತ್ತೇವೆ. ದಿನಕ್ಕೊಮ್ಮೆ ಆ ರತ್ನಗಳನ್ನು ನೆನಪಿಸಿಕೊಂಡು ಜತನದಲ್ಲಿ ಕಾಪಿಡುವ ಅಮೂಲ್ಯ ಮಾಣಿಕ್ಯ ನಮ್ಮ ಪರಮಾತ್ಮ. ವೈವಿಧ್ಯ ಮಯ ಪಾತ್ರಗಳನ್ನು ಮಾಡುತ್ತಾ ಸಿನಿ ರಸಿಕರನ್ನು ರಂಜಿಸುವ ಅಪ್ಪು ಒಬ್ಬ ಮಾಸ್ ಹೀರೋ. ನಿಜ ಜೀವನದಲ್ಲೂ ಅದೆ ಒಳ್ಳೆಯತನವನ್ನು ಕಾದುಕೊಂಡು ಉಳಿಸಿಕೊಂಡ ಅಪ್ಪು ರಿಯಲ್ ಹೀರೋ. ಎಲ್ಲಾ ತಪ್ಪುಗಳನ್ನು ನಾವೆ ಮಾಡಿ ಅದನ್ನು ತಿದ್ದಿ ತೀಡಿ ಮಾನಸಿಕವಾಗಿ ವಿಕಾಸ ಹೊಂದುವಷ್ಟು ಹೊತ್ತು ಜವರಾಯ ಕಾಯಲಾರ. ಪ್ರತಿಯೊಬ್ಬರ ಸಾವು ಬದುಕಿರುವ ನಮಗೆ ಪಾಠವಾಗಬೇಕು. ಪ್ರತಿಯೊಬ್ಬರ ಗೆಲುವು ನಮಗೆ ಜೀವನೋತ್ಸಾಹ ತುಂಬುವ ಟಾನಿಕ್ ಆಗಬೇಕು. ಪ್ರತಿಯೊಬ್ಬರ ಸೋಲು ನಮಗೆ ಆ ತಪ್ಪು ನಾವು ಪುನರಾವರ್ತಿಸದಂತೆ ಎಚ್ಚರಿಸುವ ಘಂಟೆಯಾಗಬೇಕು.

ಹೀಗೆ ಅಪ್ಪು ಹೇಳಿ ಹೋದ ಪಾಠಗಳು ನಮಗೆ ಸರ್ವಕಾಲಿಕವಾದುದು. ದೈಹಿಕ ಕಸರತ್ತು ನಡೆಸಿ ಫಿಟ್ ಅ್ಯಂಡ್ ಫೈನ್ ಆಗಿರುವವರೂ ಸಹ ತಮ್ಮ ಅಮೂಲ್ಯ ಜೀವದ ಬಗ್ಗೆ ಸದಾ ಜಾಗೃತರಾಗಿರಬೇಕು. ತಿನ್ನುವ ಆಹಾರದಷ್ಟೆ ತಲೆಗೆ ತುಂಬುವ ಯೋಚನೆಗಳು ಅವಶ್ಯಕ. ಇದಷ್ಟು ದಿನ ನಮ್ಮದು. ಸುತ್ತಲಿರುವವರನ್ನು ಪ್ರೀತಿಸುವ. ಸಾಧ್ಯವಾದರೆ ನಗಿಸುವ. ಅವರ ನೆನಪಿನ ಪುಟಗಳಲಿ ಒಂದು ರಂಗು ರಂಗಾದ ಚಿತ್ರವಾಗುವ. ಹೇಳುವ ಮಾತುಗಳನ್ನು ಮಧುರ ಧ್ವನಿಯಲ್ಲಿ ಉಲಿಯುವ. ತಪ್ಪಾದಾಗ ನಯವಾಗಿ ತಿಳಿಸಿ ಹೇಳುವ. ತಿನ್ನುವುದನ್ನೆ ಅಮೃತ ಎಂದು ಇಷ್ಟಪಟ್ಟು ತಿನ್ನುವ. ಕಷ್ಟವಾದಾಗ ಅವರಿಂದ ಸಾಧ್ಯವಾದಷ್ಟು ದೂರ ಉಳಿದು ಬಿಡುವ. ನಮ್ಮ ಜೀವನ ನಶ್ವರ ಎಂಬ ಭಾವ ಸದಾ ಕಾಡುತಿರಲಿ. ನಾನು ನನ್ನದು ಎಂಬ ಅಹಂ ಮರೆಯಾಗಿ ದೂರ ಹೋಗಲಿ.

ವಿಮಲಾ ಆದರ್ಶ ಹೆಬ್ರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ