Oplus_131072

ಸಂಭ್ರಮದ ದೀಪಾವಳಿ.
…………………………..
ಉರಿಯುತಿರಲಿ ದೀವಿಗೆ
ಬೆಳಕಾಗಲಿ ಭೂಮಿಗೆ
ಅಜ್ಞಾನದ ತಮವು ಸರಿದು
ಸುಜ್ಞಾನದ ಬೆಳಕು ಹರಿದು
ಆಗಲಿ ಜಗದೇಳಿಗೆ
ಸಂತಸವೀ ಬಾಳಿಗೆ.

ಶ್ರೀ ಕೃಷ್ಣನು ‌ಮಾಡಿದ
ನರಕಾಸುರ ಸಂಹಾರ
ಹದಿನಾರು ಸಾವಿರ
ನಾರಿಯರ ಉದ್ಧಾರ
ಭಕ್ತರಿಂದ ಪಡೆವನವನು
ಪೂಜೆ ಪುನಸ್ಕಾರ.

ಧನತ್ರಯೋದಶಿಯಂದು
ಜಲಕುಂಭವ ಪೂಜಿಸುವರು
ನರಕ ಚತುರ್ದಶಿಯಂದು
ಅಭ್ಯಂಗವ ಮಾಡುವರು.

ಅಮಾವಾಸ್ಯೆ ದಿನವು ಲಕುಮಿ
ಮನೆ ಮನೆಗೆ ಬರುವಳು
ಎಲ್ಲರಿಂದ ಪೂಜೆಗೊಂಡು
ಸಂತಸವ ತರುವಳು.

ದಾನಶೂರನಾದ ಬಲಿಯ
ವಾಮನನು ತುಳಿದ ದಿನ
‘ಬಲಿಪಾಡ್ಯಮಿ’ ಹೆಸರಿನಲಿ
ಪೂಜಿಸುವರು ಜಗದ ಜನ.

ಸಂಭ್ರಮದ ದೀಪಾವಳಿ
ಪಟಾಕಿಗಳ ಬಲು ಹಾವಳಿ
ಆಗದಿರಲಿ ಯಾವ ಕೆಡುಕು
ಆರದಿರಲಿ ಬಾಳ ಬೆಳಕು.

ಸಾಲು ಸಾಲು ದೀಪದಿಂದ
ಮನೆಯೆಲ್ಲಾ ಬೆಳಗಲಿ
ಮನವು ಬೆಳಗಿ ತಮವು ಕರಗಿ
ಹರುಷ ತುಂಬಿ ತುಳುಕಲಿ.

ಸರ್ವರು ಸುಖವಾಗಿ ಇರಲಿ
ಎಂದು ಶುಭವ ಕೋರುವಾ
ಜಗದ ಜನರ ಒಳಿತು ಬಯಸಿ
ಸಂತೋಷವ ಹಂಚುವಾ.

ಜಿ.ಎಸ್.ಗಾಯತ್ರಿ.
ಶಿಕ್ಷಕಿ.
ಬಾಪೂಜಿ ಶಾಲೆ.
ಹರಿಹರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ