Oplus_131072

ಸಂತೃಪ್ತಿ… 

ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಯಾರಿಗೆ ಗೊತ್ತಿಲ್ಲ. ? ನಿಯಮಗಳ ಪ್ರಕಾರ ಆಯ್ಕೆಯಾದ ವ್ಯಕ್ತಿಗೆ ಕೇಳುವ ಪ್ರಶ್ನೆಗಳನ್ನು ಸಮಯದ ಮಿತಿ, ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದದ್ದನ್ನು ಆಯ್ದುಕೊಳ್ಳುವ ಮೂಲಕ ಗೆದ್ದು ಹಣವನ್ನು ಗಳಿಸುವ ಜನಪ್ರಿಯ ಟಿವಿ ಶೋ ಸಾಕಷ್ಟು ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದಿದೆ. ಶೋನಲ್ಲಿ ಭಾಗವಹಿಸುವವರ ಜೊತೆ ಜೊತೆಗೆ ತಮ್ಮ ಮನೆಗಳಲ್ಲಿ ಕುಳಿತು ಈ ಕಾರ್ಯಕ್ರಮವನ್ನು ವೀಕ್ಷಿಸುವ ಹಲವಾರು ಕ್ವಿಜ್ ಪ್ರಿಯರು ಸೂಕ್ತ ಉತ್ತರಗಳನ್ನು ನೀಡಿ ತಮ್ಮ ಉತ್ತರ ಸರಿ ಎಂದು ಗೊತ್ತಾದಾಗ ಸಂತಸ ಮತ್ತು ಹೆಮ್ಮೆಯಿಂದ ಬೀಗುವುದು ಕೂಡ ಉಂಟು.

ಇತ್ತೀಚಿಗಿನ ಒಂದು ಸರಣಿಯಲ್ಲಿ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ನಲ್ಲಿ ಆಯ್ಕೆಯಾದ ನೀರಜ್ ಸಕ್ಸೆನಾ ಅವರನ್ನು ಅಮಿತಾಭ್ ಬಚ್ಚನ್ ಅವರು ಹಾಟ್ ಸೀಟ್ ಗೆ ಆಹ್ವಾನಿಸಿದರು.
ಸಾಮಾನ್ಯವಾಗಿ ಹಾಟ್ ಸೀಟ್‌ಗೆ ಬರುವವರು ಅತ್ಯಂತ ಖುಷಿಯಿಂದ ಕುಣಿಯುತ್ತ, ಹಾರಾಡುತ್ತಾ, ಕೈಗಳನ್ನು ಬೀಸುತ್ತಾ, ಮತ್ತೆ ಕೆಲವೊಮ್ಮೆ ಆನಂದ ಭಾಷ್ಪವನ್ನು ಸುರಿಸುತ್ತಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ ನೀರಜ್ ಸಕ್ಸೆನಾ ಅತ್ಯಂತ ಶಾಂತ ಮನಸ್ಥಿತಿಯಿಂದ ಹಾಟ ಸೀಟ್ ನಲ್ಲಿ ಕುಳಿತರು.
ತಾನು ಪಿ ಹೆಚ್ ಡಿ ಪಡೆದಿರುವ ಓರ್ವ ವಿಜ್ಞಾನಿ, ಕೊಲ್ಕತ್ತಾದ ಯುನಿವರ್ಸಿಟಿಯ ವೈಸ್ ಚಾನ್ಸೇಲರ್ ಆಗಿರುವ ಮತ್ತು ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಅವರೊಂದಿಗೆ ಕಾರ್ಯನಿರ್ವಹಿಸುವ ಸೌಭಾಗ್ಯವನ್ನು ಹೊಂದಿದ ವ್ಯಕ್ತಿ ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡ ನೀರಜ್ ಸಕ್ಸೆನಾ ಅವರದು ಹಸನ್ಮುಖ ಮತ್ತು ಸರಳ ವ್ಯಕ್ತಿತ್ವ. ಈ ಮುಂಚೆ ಕೇವಲ ತನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತ್ರ ಯೋಚಿಸುತ್ತಿದ್ದ ತಾವು ಕಲಾಮ್ ಅವರ ಪ್ರಭಾವದಿಂದ ಸಮಷ್ಟಿಯ ಮತ್ತು ನಮ್ಮ ರಾಷ್ಟ್ರದ ಹಿತ ದೃಷ್ಟಿಯ ಕುರಿತು ಯೋಚಿಸಲಾರಂಭಿಸಿದ್ದೇನೆ ಎಂದು ಅವರು ಹೇಳಿದರು.

ಆಟ ಆರಂಭವಾಗಿ ಪ್ರಶ್ನೆಗಳಿಗೆ ಉತ್ತರ ನೀಡಲು ಆರಂಭಿಸಿದ ನೀರಜ್ ಒಂದಾದ ನಂತರ ಒಂದು ಹಂತಗಳನ್ನು ದಾಟಿದರು. ಡಬಲ್ ಡಿಪ್ ಲೈಫ್ಲೈನ್ ಹೊಂದಿದ ಕಾರಣ ಎರಡು ಬಾರಿ ಆಡಿಯನ್ಸ್ ಪೋಲ್ ಬಳಸಿದ ಅವರು ಅತ್ಯಂತ ಜಾಣ್ಮೆಯಿಂದ ಮತ್ತು ಶಾಂತವಾಗಿ ಪ್ರಶ್ನೆಗಳಿಗೆ ಉತ್ತರಿಸಿದರು. 2ನೇ ಹಂತದಲ್ಲಿ 10ನೆಯ ಪ್ರಶ್ನೆಗೆ ಉತ್ತರಿಸಿ 3,20,000 ಹಣವನ್ನು ಗೆದ್ದ ಅವರು ಅಷ್ಟೇ ಮೊತ್ತದ ಬೋನಸ್ ಹಣವನ್ನು ಕೂಡ ಪಡೆದರು. ತದನಂತರ ವಿರಾಮ ಸಮಯ ಮುಂದುವರೆಯಿತು.

ಬ್ರೇಕ್ ನ ನಂತರ ಕಾರ್ಯಕ್ರಮದ ಹೋಸ್ಟ್ ಆಗಿದ್ದ ಅಮಿತಾಭ್ ಬಚ್ಚನ್ ಡಾಕ್ಟರ್ ಸಾಹೇಬರೊಂದಿಗೆ ಇದೀಗ 11ನೇ ಪ್ರಶ್ನೆಯೊಂದಿಗೆ ಆಟವನ್ನು ಮುಂದುವರೆಸೋಣ ಎಂದು ಘೋಷಿಸಿದಾಗ ನೀರಜ್ ಸಕ್ಸೆನ ಅವರು ತಾನು ಆಟವನ್ನು ಕ್ವಿಟ್ ಮಾಡಲು ಬಯಸುವುದಾಗಿ ಹೇಳಿದರು.

ಅಮಿತಾಭ್ ಬಚ್ಚನ್ ಅವರಿಗೆ ಇಷ್ಟು ಚೆನ್ನಾಗಿ ಆಟವಾಡುತ್ತಿರುವ ವ್ಯಕ್ತಿಯೊಬ್ಬ ಇನ್ನೂ ಮೂರು ಲೈಫ್ ಲೈನ್ ಗಳನ್ನು ಹೊಂದಿದಾಗ್ಯೂ, ಒಂದು ಕೋಟಿ ಹಣವನ್ನು ಗೆಲ್ಲುವ ಸಾಕಷ್ಟು ಅವಕಾಶವಿದ್ದು ಕೂಡ ಆಟವನ್ನು ಕ್ವಿಟ್ ಮಾಡಲು ಯೋಚಿಸಿದ್ದು ಆಶ್ಚರ್ಯಕರವೆನಿಸಿತ್ತು. ಈ ರೀತಿ ಕರೋಡಪತಿಯ ಇತಿಹಾಸದಲ್ಲಿ ಎಂದೂ ಆಗಿರಲಿಲ್ಲ. ಆದ್ದರಿಂದ ಕಾರಣವನ್ನು ಅಮಿತಾಭ ಕೇಳಿದಾಗ ಶಾಂತವಾದ ಸ್ವರದಲ್ಲಿ ನೀರಜ್ ಉತ್ತರಿಸಿದರು… ಇನ್ನೂ ಸಾಕಷ್ಟು ಜನ ಆಟಗಾರರು ಕಾಯುತ್ತಿದ್ದಾರೆ ಮತ್ತು ಅವರು ನನಗಿಂತ ತುಂಬಾ ಚಿಕ್ಕವರು… ಅವರಿಗೂ ಕೂಡ ಅವಕಾಶ ದೊರೆಯಲೇಬೇಕು ಈಗಾಗಲೇ ನಾನು ಸಾಕಷ್ಟು ಹಣವನ್ನು ಗಳಿಸಿದ್ದೇನೆ ಎಂದು ನನಗನ್ನಿಸುತ್ತಿದ್ದು ಇದಕ್ಕಿಂತ ಹೆಚ್ಚಿನದಕ್ಕೆ ಆಸೆ ಪಡಲಾರೆ ಎಂದು ಹೇಳಿದರು.

ಅಮಿತಾಭ್ ಕ್ಷಣ ಕಾಲ ಸ್ಥಂಭೀಭೂತರಾದರು… ಕೆಲಸ ಸೆಕೆಂಡುಗಳ ಕಾಲ ಅಲ್ಲಿ ಗಾಢ ಮೌನ ಆವರಿಸಿತ್ತು. ನಂತರ ಎಲ್ಲರೂ ಎದ್ದು ನಿಂತು ದೀರ್ಘಕಾಲ ಜೋರಾಗಿ ಕರತಾಡನ ಮಾಡುವ ಮೂಲಕ ಅವರ ಕ್ವಿಟ್ ಮಾಡುವ ಆಶಯ ಮತ್ತು ಅದರ ಹಿಂದಿರುವ ಕಾರಣವನ್ನು ಹೃತ್ಪೂರ್ವಕವಾಗಿ ಅನುಮೋದಿಸಿದರು.

ಅಮಿತಾಭ್ ಮಾತನಾಡಿ ‘ಇಂದು ನಾವು ಸಾಕಷ್ಟು ವಿಷಯಗಳನ್ನು ಕಲಿತಿದ್ದು ನೀರಜ್ ಸಕ್ಸೇನಾರಂತಹ ವ್ಯಕ್ತಿಗಳು ವಿರಳ’ ಎಂದು ಉದ್ಗರಿಸಿದರು. ಪ್ರಾಮಾಣಿಕವಾಗಿ ಹೇಳುವುದಾದರೆ ಇನ್ನಷ್ಟು ಹಣ ಗಳಿಸುವ ಸಾಧ್ಯತೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ತಾನು ಗಳಿಸಿದ್ದು ಸಾಕು ಎಂದು ತಮ್ಮ ಅವಕಾಶವನ್ನು ಬಿಟ್ಟು ಕೊಟ್ಟದ್ದು ಅವರ ಔಧಾರ್ಯ ಮತ್ತು ಮಾನವೀಯ ಪ್ರಜ್ಞೆಗೆ ಸಾಕ್ಷಿ,ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ನೀರಜ್ ಸಕ್ಸೆನಾ ಅವರು ಆಟದಿಂದ ನಿರ್ಗಮಿಸಿದ ಮೇಲೆ ಹಾಟ್ ಸೀಟ್ ಗೆ ಬಂದು ಕುಳಿತ ಓರ್ವ ಯುವತಿ ಮೂರು ಜನ ಹೆಣ್ಣುಮಕ್ಕಳೇ ಇರುವ ಕಾರಣ, ತನ್ನ ತಾಯಿ ಮತ್ತು ತಾವು ಮೂರು ಜನ ಸಹೋದರಿಯರನ್ನು ತನ್ನ ತಂದೆ ಮನೆಯಿಂದ ಹೊರ ಹಾಕಿದ್ದು ತಾವೊಂದು ಅನಾಥಾಶ್ರಮದಲ್ಲಿ ಜೀವನ ಸಾಗಿಸುತ್ತಿರುವುದಾಗಿಯೂ ಕೌನ್ ಬನೇಗಾ ಕರೋಡ ಪತಿಯಲ್ಲಿ ದೊರೆತ ಅವಕಾಶ ತಮಗೆ ನೈತಿಕ ಮತ್ತು ಆರ್ಥಿಕ ಧೈರ್ಯವನ್ನು ನೀಡಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದಳು.

ಅಕಸ್ಮಾತ್ ನೀರಜ್ ಸಕ್ಸೆನ ಅವರು ಆಟದಿಂದ ನಿರ್ಗಮಿಸುವ ನಿರ್ಣಯವನ್ನು ಕೈಗೊಳ್ಳದೆ ಹೋದಲ್ಲಿ ಆಟದ ಕೊನೆಯ ದಿನವಾದ ಅಂದು ಮತ್ತೊಬ್ಬ ವ್ಯಕ್ತಿಗೆ ಅವಕಾಶ ದೊರೆಯುತ್ತಿರಲಿಲ್ಲ… ಆದರೆ ಸಕ್ಸೆನ ಅವರ ಸಮಯೋಚಿತ ಪ್ರಜ್ಞೆಯಿಂದಾಗಿ ಓರ್ವ ಬಡ ಯುವತಿಗೆ ಅನುಕೂಲವಾದದ್ದು ಖಂಡಿತವಾಗಿಯೂ ಪ್ರಶಂಸನೀಯ.
.
ಅದೆಷ್ಟೇ ಹಣವನ್ನು ತಾವು ಗಳಿಸಿರಲಿ ಸಂತೃಪ್ತಿ ಇಲ್ಲದ, ದುರಾಸೆಯನ್ನು ಹೊಂದಿರುವ ಇಂದಿನ ಕಾಲದಲ್ಲಿ ಜನರು ಹಣದ ಬೆನ್ನು ಹತ್ತಿ ತಮ್ಮ ವೈಯುಕ್ತಿಕ ಸಂತಸ, ಪ್ರೀತಿ, ಸಂಬಂಧ, ನಿದ್ರೆ ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಕಳೆದುಕೊಂಡಿದ್ದಾರೆ.
ತಮ್ಮ ಆಸ್ತಿಯಲ್ಲಿ ಚಿಕ್ಕಾಸನ್ನು ಕೂಡ ಬೇರೊಬ್ಬರಿಗೆ ಕೊಡಲು ಒಪ್ಪದ ಅದಕ್ಕಾಗಿ ಜಗಳ, ಕೋರ್ಟು, ಕಚೇರಿಗೆ ಅಡ್ಡಾಡುವ,ಕೊಲೆ ಮಾಡಲು ಕೂಡ ಹೇಸದ ಜನರ ನಡುವೆ ನೀರಜ್ ಸಕ್ಸೆನಾ ಸಂತೃಪ್ತ ಮತ್ತು ನಿಸ್ವಾರ್ಥ ವ್ಯಕ್ತಿತ್ವಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.

ದೇವರು ಎಲ್ಲಿದ್ದಾನೆ ಎಂದು ಯಾರಾದರೂ ಕೇಳಿದರೆ ಖಂಡಿತವಾಗಿಯೂ ಸಮಾಜದ ಇನ್ನಿತರ ಜನರ ಕುರಿತು ಯೋಚಿಸುವ ನೀರಜ್ ಸಕ್ಸೇನಾರಂತಹ ಸಹೃದಯರ ಮನದಲ್ಲಿ ಅಡಗಿದ್ದಾನೆ. ಪ್ರಸ್ತುತ ಸಮಾಜಕ್ಕೆ ಇಂಥವರ ಅವಶ್ಯಕತೆ ಬಹಳ. ತನ್ನ ಅವಶ್ಯಕತೆಗಳು ತೀರಿದ ಸಂತೃಪ್ತ ವ್ಯಕ್ತಿ ಬೇರೆಯವರ ಕುರಿತು ಯೋಚಿಸಲೇಬೇಕು ಎಂಬ ಪಾಠವನ್ನು ನಾವು ನೀರಜ್ ಸಕ್ಸೇನರಿಂದ ಕಲಿಯಬಹುದು.
ಏನಂತೀರಾ ಸ್ನೇಹಿತರೇ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ. ಜಿಲ್ಲಾ ಗದಗ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ