Oplus_131072

ಸಂತಸ ಅರಳುವ ಸಮಯ..ಮರೆಯೋಣ ಚಿಂತೆಯ

ಸಂತಸ…. ಎಲ್ಲರೂ ಬದುಕಿನಲ್ಲಿ ಬಯಸುವ ಸ್ಥಿತಿ..
ಲೌಕಿಕರ ಪಾಲಿಗೆ ಒಳ್ಳೆಯ ವಿದ್ಯಾಭ್ಯಾಸ, ಉತ್ತಮ ನೌಕರಿ, ಆರಂಕಿಯ ಸಂಬಳ, ಸುಂದರ ಸಂಗಾತಿ, ಕಾರು, ಬಂಗಲೆ ಇವುಗಳು ಸಂತಸದ ಮಾನದಂಡಗಳಾದರೆ ಜ್ಞಾನಿಗಳ ಪಾಲಿಗೆ ನೆಮ್ಮದಿಯ ಜೀವನ ಸಂತಸಕ್ಕೆ ದಾರಿ.
ಅಲೌಕಿಕರು ಆಧ್ಯಾತ್ಮ ಮತ್ತು ಪಾರಮಾರ್ಥಿಕ ಜೀವನ ಸಾಧನೆಯಲ್ಲಿ ಸಂತಸ ತೃಪ್ತಿಗಳನ್ನು ಕಂಡುಕೊಳ್ಳುವರು.
ಬಹುಶಹ ಉಕ್ರೇನ್ನಂತಹ ದೇಶಗಳಲ್ಲಿ ಯುದ್ಧ ರಹಿತ ಸ್ಥಿತಿ ಅವರಲ್ಲಿ ಸಂತಸವನ್ನು ಹುಟ್ಟಿಸಿದರೆ, ಬಡ ರಾಷ್ಟ್ರಗಳಲ್ಲಿ ಹಸಿವು ಬಡತನವಿಲ್ಲದ ಸ್ಥಿತಿ ಸಂತಸವನ್ನು ತರುತ್ತದೆ.

ಹೀಗೆ ಸಂತಸದ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ, ದೇಶದಿಂದ ದೇಶಕ್ಕೆ ಬದಲಾಗುತ್ತದೆ.
ಈ ಹಿಂದೆ ನಮ್ಮ ಪೂರ್ವಜರು ಕಷ್ಟಗಳು ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತವೆಯೇ? ಎಂದು ಸಮಾಧಾನ ಪಟ್ಟರೆ, ಶರಣರು ‘ಬಾರದು ಬಪ್ಪದು, ಬಪ್ಪದು ತಪ್ಪದು’ ಎಂದು ಕಷ್ಟಗಳು ಬರಹೋಗುವ ಕುರಿತು ಹೇಳಿದ್ದಾರೆ. ಕಷ್ಟದಲ್ಲಿರುವವರಿಗೆ ಸಮಾಧಾನವನ್ನು ಸುಖದಲ್ಲಿರುವವರಿಗೆ ಸ್ಥಿತಪ್ರಜ್ಞತೆಯನ್ನು ತಂದು ಕೊಡುವ ಮಾತನ್ನು ಹೇಳು ಎಂದು ಅರ್ಜುನನು ಭಗವಾನ್ ಶ್ರೀ ಕೃಷ್ಣನನ್ನು ಕೇಳಿದಾಗ ಪಾರ್ಥಸಾರಥಿ ಕೃಷ್ಣ ಹೇಳಿದ ಮಾತು
ಈ ಸಮಯ ಕಳೆದು ಹೋಗುತ್ತದೆ‘ ಎಂದು.
ನಿಜವಲ್ಲವೇ ಸ್ನೇಹಿತರೆ ?

ಸಂತಸದಿಂದ ಖುಷಿಯಿಂದ ತೇಲಾಡುತ್ತಿರುವವರಿಗೆ ಈ ಸಮಯವು ಕಳೆದು ಹೋಗುತ್ತದೆ ಎಂಬ ಮಾತು ಬದುಕಿನ ಏರಿಳಿತಗಳ ಕುರಿತ ಎಚ್ಚರಿಕೆಯನ್ನು ನೀಡಿದರೆ, ಕಷ್ಟದಲ್ಲಿರುವವರಿಗೆ ಈ ಸಮಯ ಕಳೆದುಹೋಗುತ್ತದೆ ಎಂಬುದು ಸಮಾಧಾನವನ್ನು,ಉತ್ತಮ ಭವಿಷ್ಯದ ಕುರಿತ ಆಶಯವನ್ನು ಉಂಟುಮಾಡುತ್ತದೆ.

ಹಾಗಾದರೆ ನಿಜವಾದ ಸಂತಸವನ್ನು ಕಾಣುವ ಬಗೆ ಯಾವುದು?
ಇಲ್ಲಿದೆ ಕೆಲವು ಸಲಹೆಗಳು

೧. ತೊಂದರೆಗಳು ಸಂಕಷ್ಟಗಳನ್ನು ಎದುರಿಸುತ್ತಿರುವವರು ಈ ಪ್ರಪಂಚದಲ್ಲಿ ನಾವೊಬ್ಬರೇ ಅಲ್ಲ ಎಂಬ ಅರಿವನ್ನು ಹೊಂದುವುದು. ಪ್ರಪಂಚದಲ್ಲಿ ಯಾರಾದರೂ ಸುಖವಾಗಿದ್ದಾರೆ ಎಂದರೆ ಅದು ಇನ್ನೂ ಹುಟ್ಟಿರದ ಮತ್ತು ಸತ್ತು ಹೋಗಿರುವ ವ್ಯಕ್ತಿ ಮಾತ್ರ ಎಂಬ ಮಾತು ವಿಚಿತ್ರವಾದರೂ ಸತ್ಯ.

೨. ಸವಾಲುಗಳು ಬದುಕಿನ ಭಾಗ… ಸತ್ತವರಿಗೆ ಮಾತ್ರ ಸವಾಲುಗಳಿರುವುದಿಲ್ಲ. ಸವಾಲುಗಳಿಲ್ಲದ ಬದುಕು ನಿಸ್ಸಾರವಾಗಿರುತ್ತದೆ.

೩. ಪ್ರತಿಯೊಂದು ಬೀಗದ ಕಾಯಿಗೂ ಕೀಲಿ ಇರುವಂತೆ ಪ್ರತಿ ತೊಂದರೆಗೂ ಒಂದು ಪರಿಹಾರ ಇದ್ದೇ ಇರುತ್ತದೆ, ಅಂದರೆ ಪ್ರತಿ ತೊಂದರೆಯೂ ತನ್ನೊಂದಿಗೆ ಪರಿಹಾರವನ್ನು ಕೂಡ ಹೊತ್ತು ತರುತ್ತದೆ.

೪. ನಿಮ್ಮ ಕುರಿತ ಚಿತ್ರಣವನ್ನು ನೀವು ಹೇಗೆ ನಿಮ್ಮ ಮನಸ್ಸಿನಲ್ಲಿ ಮೂಡಿಸಿಕೊಳ್ಳುತ್ತಿರುವಿರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿಂತಿದೆ. ನಿಮ್ಮನ್ನು ನೀವು ಅತ್ಯಂತ ಸುಂದರ ಮತ್ತು ಮೌಲ್ಯಯುತ ವ್ಯಕ್ತಿ ಎಂದು ಭಾವಿಸಿಕೊಳ್ಳಿ. ನಿಮ್ಮ ಬಗ್ಗೆ ಕೀಳರಿಮೆ ಬೇಡ ಮತ್ತು ಸ್ವಾಭಿಮಾನವನ್ನು ಕಳೆದುಕೊಳ್ಳದಿರಿ.

೫ ನಿಮ್ಮ ಕುರಿತ ಜನರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಕೆಲ ಜನರು ಸ್ವಾರ್ಥಿಗಳಾಗಿದ್ದು ಮತ್ತೊಬ್ಬರನ್ನು ಕೀಳಾಗಿ ನೋಡುವುದರಲ್ಲಿ ಅವರು ಸಂತಸ ಪಡುತ್ತಾರೆ.

೬. ನಿಮ್ಮ ಮನಸ್ಥಿತಿಗೆ ಸರಿಹೊಂದುವ ಜನರೊಂದಿಗೆ ನಿಮ್ಮ ಸ್ನೇಹವಿರಲಿ. ಪದೇ ಪದೇ ನಿಮ್ಮನ್ನು ಅವಹೇಳನ ಮಾಡುವ ತಮಾಷೆ ಮಾಡುವ ಮತ್ತು ನಿಮ್ಮ ಬದುಕಿನ ಸವಾಲುಗಳನ್ನು ಎದುರಿಸದವ ಎಂಬಂತೆ ನಿಮ್ಮೊಂದಿಗೆ ವರ್ತಿಸುವವರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ.

೭.ವಿರಾಮದ ಸಮಯದಲ್ಲಿ ನಿಮ್ಮ ಇಷ್ಟದ ಹವ್ಯಾಸಗಳಲ್ಲಿ, ಆಟೋಟಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮಿಷ್ಟದ ಒಳ್ಳೆಯ ಚಲನಚಿತ್ರ ನೋಡಿ ಆನಂದಿಸಿ, ವಿಡಿಯೋ ಗೇಮ್ ಮತ್ತು ಕಂಪ್ಯೂಟರ್ ಗೇಮ್ ಗಳನ್ನು ಆಡಿ.

೮.ಹಣ ಇಲ್ಲವೇ ವಸ್ತುಗಳನ್ನು ಅವಶ್ಯವಿಲ್ಲದೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಬದಲಾವಣೆ ನಿರಂತರವಾಗಿದ್ದು ಇಂದಿನ ಬಡ ವ್ಯಕ್ತಿ ನಾಳೆಯ ಅತ್ಯಂತ ಶ್ರೀಮಂತ ಆಗಬಹುದು. ಸ್ನೇಹದಲ್ಲಿ ಇರಬೇಕಾದದ್ದು ನಂಬಿಕೆ ಹೊರತು ದುಡ್ಡು ಕಾಸುಗಳ ವ್ಯವಹಾರ ಅಲ್ಲ ಎಂಬುದನ್ನು ನೆನಪಿನಲ್ಲಿಡಿ

೯.ಭರವಸೆಯೇ ಬದುಕು ಎಂಬುದನ್ನು ಅರಿತು ಜೀವನದಲ್ಲಿ ಬರುವ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ದರಾಗಿರಬೇಕು. ಧೈರ್ಯಂ ಸರ್ವತ್ರ ಸಾಧನಂ ಎಂದು ಹೇಳಿರುವುದು ಇದಕ್ಕೆ. ಧೈರ್ಯವು ನಮ್ಮ ಸವಾಲುಗಳನ್ನು ಎದುರಿಸಲು ಅರ್ಧ ಶಕ್ತಿಯನ್ನು ನೀಡುತ್ತದೆ.
೧೦.ಪ್ರಜ್ಞಾಪೂರ್ವಕವಾಗಿ ಧ್ಯಾನ ಮಾಡಿ ಕೋರಿಕೆಗಳಿಲ್ಲದೆ ಧ್ಯಾನಿಸಿ… ಸರಿಯಾದ ಸಮಯಕ್ಕೆ ಫಲಪ್ರದವಾಗಲು ಕ್ರಿಯಾಶೀಲರಾಗಿರುವುದರ ಜೊತೆಗೆ ಪ್ರಾರ್ಥನೆ ಅತ್ಯವಶ್ಯಕ. ಪ್ರಾರ್ಥನೆ ಮನದ ಕೊಳೆಯನ್ನು ತೊಳೆದು ಕಶ್ಮಲರಹಿತರನ್ನಾಗಿಸುತ್ತದೆ.

೧೧. ನೀವು ಇಚ್ಛಿಸುವುದನ್ನು ಪಡೆಯುವ ಧೈರ್ಯ ತೋರಿ, ಸವಾಲುಗಳು ಜೀವನದ ಭಾಗ… ನಿಮ್ಮ ಮನದಲ್ಲಿ ಹುದುಗಿಸಿಟ್ಟ ಆಕಾಂಕ್ಷೆಗಳನ್ನು ಈಡೇರಿಸಲು ನೀವು ಸವಾಲುಗಳನ್ನು ಎದುರಿಸಲೇಬೇಕು. ಬೇರೆಯವರಿಗಾಗಿ ನಿಮ್ಮತನವನ್ನು ಎಂದೂ ಬಿಟ್ಟು ಕೊಡಬೇಡಿ… ಬೇರೆಯವರಾರೂ ನಿಮ್ಮ ಪಾತ್ರವನ್ನು ನಿಮ್ಮಷ್ಟು ಚೆನ್ನಾಗಿ ನಿಭಾಯಿಸಲು ಸಾಧ್ಯವಿಲ್ಲ.

ಯು ಆರ್ ದ ಬೆಸ್ಟ ವರ್ಷನ್ ಆಫ್ ಯುವರ ಸೆಲ್ಫ್’
ಅಂತಿಮವಾಗಿ ನಗು ಬಾಳಿನ ಬೆಳಕು, ನಗು ಸಾಂಕ್ರಾಮಿಕ,… ನಿಮ್ಮ ಸಂತಸವನ್ನು ನಿಮಗೆ ನೀವೇ ಕೊಟ್ಟುಕೊಳ್ಳುವ ಅತಿ ದೊಡ್ಡ ಉಡುಗೊರೆ ಎಂಬ ಅರಿವು ನಮ್ಮದಾಗಿಸಿಕೊಂಡು
ಸ್ಮೈಲ್ ಈಸ್ ದ ಆರ್ನಮೆಂಟ್ ವ್ಹಿಚ್ ಕಾಸ್ಟ್ಸ್ ನಥಿಂಗ್, ಬಟ್ ವಿನ್ಸ್ ಎವೆರಿಥಿಂಗ್… ನಗಲು ನಾವು ಹಣ ಕೊಡಬೇಕಾಗಿಲ್ಲ, ಆದರೆ ಒಬ್ಬರ ಮನಸ್ಸನ್ನು ಗೆಲ್ಲಲು ಒಂದು ಮೃದು ಮಂದಹಾಸ ಸಾಕು.. ಸಂತಸ ಬೆಳದಿಂಗಳಂತೆ ಹರಡುತ್ತದೆ. ಅಂತಹ ನಗೆ ಸದಾ ನಮ್ಮ ನಿಮ್ಮೆಲ್ಲರ ಮೊಗದಲ್ಲಿರಲಿ ಎಂದು ಹಾರೈಸುವ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.