ಮೂಕನಾಗಬೇಕು…!
ಮೀನುಗಾರನಾಗಿದ್ದ ತನ್ನ ತಂದೆಯನ್ನು ಕುರಿತು ಮಗ
“ಅಪ್ಪ, ನಾನು ನನ್ನ ಗುರಿಗಳು ಮತ್ತು ಕನಸುಗಳ ಕುರಿತು ಬೇರೆಯವರೊಂದಿಗೆ ಮಾತನಾಡುವುದು ಸರಿಯಾಗಿರುತ್ತದೆಯೇ” ಎಂದು ಕೇಳಿದ. ಕೆಲ ಕ್ಷಣಗಳ ಮೌನದ ನಂತರ ಮೀನುಗಾರ ತಂದೆ ಮಗನನ್ನು ಕುರಿತು “ನೀನೇಕೆ ಅದನ್ನು ತಿಳಿಯಬಯಸುವೆ” ಎಂದು ಕೇಳಿದ.
“ನಿಜವಾಗಿಯೂ ತುಂಬಾ ದೊಡ್ಡ ಕನಸುಗಳು ನನಗಿವೆ ಅಪ್ಪ.. ಜೀವನದ ಎಲ್ಲ ರಂಗಗಳಲ್ಲಿ, ನನ್ನ ಸ್ನೇಹಿತ ವಲಯದಲ್ಲಿ ನನ್ನ ಕನಸುಗಳ ಪ್ರಭಾವ ಬೀರಬೇಕು ಎಂಬ ಆಸೆಗಳಿವೆ. ನನ್ನ ಈ ಎಲ್ಲಾ ಕನಸುಗಳನ್ನು ನಾನು ಸ್ನೇಹಿತರೊಂದಿಗೆ, ಪರಿಚಯದವರೊಂದಿಗೆ ಹೇಳಿಕೊಳ್ಳಬೇಕೋ? ಬೇಡವೋ? ಎಂಬ ಗೊಂದಲ ನನ್ನನ್ನು ಕಾಡುತ್ತಿದೆ”.
ನಸು ನಕ್ಕ ಮೀನುಗಾರ ತನ್ನ ಮಗನಿಗೆ “ನಾವಿಬ್ಬರೂ ಮೀನು ಹಿಡಿಯಲು ಹೋಗೋಣ ನಡೆ, ಅಲ್ಲಿ ಈ ವಿಷಯದ ಕುರಿತಾದ ಮಾತುಕತೆಯನ್ನು ಮುಂದುವರಿಸೋಣ” ಎಂದು ಹೇಳಿದ.
ತಂದೆ ಮಗ ಇಬ್ಬರೂ ತಂತಮ್ಮ ಮೀನಿನ ಗಾಳ ಮತ್ತು ಬಲೆಗಳನ್ನು ತೆಗೆದುಕೊಂಡು ಮೀನು ಹಿಡಿಯಲು ನದಿಯ ಬಳಿ ಬಂದರು. ಮಾಂಸದ ತುಣುಕನ್ನು ತಂತಮ್ಮ ಗಾಳಗಳಿಗೆ ಸಿಲುಕಿಸಿದ ಅವರಿಬ್ಬರೂ ಅವುಗಳನ್ನು ನೀರಿನಲ್ಲಿ ಇಳಿಬಿಟ್ಟು ಮೀನು ಗಾಳಕ್ಕೆ ಸಿಲುಕುವುದನ್ನು ಕಾಯತೊಡಗಿದರು.
ಕೆಲಸಮಯದ ನಂತರ ಅವರು ಹಲವಾರು ಮೀನುಗಳನ್ನು ಹಿಡಿದು ತಮ್ಮ ಬುಟ್ಟಿಯನ್ನು ತುಂಬಿಸಿಕೊಂಡಿದ್ದರು. ಆಗ ತಂದೆ ಮಗನಿಗೆ ಬುಟ್ಟಿಯನ್ನು ತೋರಿಸುತ್ತಾ ”
ಈ ಬುಟ್ಟಿಯಲ್ಲಿರುವ ಮೀನುಗಳನ್ನು ನೋಡು, ನದಿಯಲ್ಲಿರುವ ಮೀನುಗಳಿಗಿಂತ ವಿಭಿನ್ನವಾದ ಜೀವನ ಈ ಬುಟ್ಟಿಯಲ್ಲಿರುವ ಮೀನುಗಳದಾಗಿರುತ್ತದೆ. ಈ ಮೀನುಗಳು ತಮ್ಮ ಜೀವನ, ಕುಟುಂಬ, ಸ್ನೇಹಿತರು ಮತ್ತು ಮನೆಗಳನ್ನು ಕಳೆದುಕೊಂಡಿವೆ. ಇವುಗಳನ್ನು ನಾವು ಮಾರುಕಟ್ಟೆಗೆ ಒಯ್ದಾಗ ಕೊಂಡುಕೊಳ್ಳುವ ಜನರು ಅವುಗಳನ್ನು ಕತ್ತರಿಸಿ, ಹುರಿದು, ಬೇಯಿಸಿ ಹೀಗೆ ಹಲವಾರು ವಿಧಗಳ ಆಹಾರಗಳನ್ನು ತಯಾರಿಸಿ ಸೇವಿಸುತ್ತಾರೆ. ಇದು ಈ ಮೀನುಗಳ ದೌರ್ಭಾಗ್ಯ ಅಲ್ಲವೇ? ಎಂದು ಕೇಳಿದನು.
ಕೆಲ ಕ್ಷಣಗಳ ಕಾಲ ಯೋಚಿಸಿದ ಮಗ “ಅಪ್ಪ, ನನಗೆ ಗೊತ್ತಾಗುತ್ತಿಲ್ಲ ನೀವೇ ತಿಳಿಸಿ ಹೇಳಿ” ಎಂದನು.
ದೀರ್ಘವಾದ ನಿಟ್ಟುಸಿರನ್ನು ಬಿಟ್ಟ ಮೀನುಗಾರ “ಮೀನುಗಳ ಈ ಪರಿಸ್ಥಿತಿಗೆ ಖುದ್ದು ಅವುಗಳೆ ಕಾರಣ. ಅವು ಬಾಯಿ ಬಿಡದೆ ಇದ್ದರೆ ಗಾಳಕ್ಕೆ ಸಿಲುಕಿ ಕೊಳ್ಳುತ್ತಿರಲಿಲ್ಲ. ತನ್ನ ಬಾಯಿಯನ್ನು ತೆರೆಯದ ಮೀನು ಎಂದೂ ಗಾಳಕ್ಕೆ ಸಿಲುಕಿಕೊಳ್ಳುವುದಿಲ್ಲ… ಹಾಗೆ ಬಾಯಿ ತೆರೆದ ಮೀನು ಗಾಳಕ್ಕೆ ಸಿಲುಕಿ ತನ್ನ ಜೀವವನ್ನೇ ಬಲಿ ಕೊಡಬೇಕಾಗುತ್ತದೆ”. ಹೀಗೆ ಹೇಳಿದ ಮೀನುಗಾರ ತನ್ನ ಮಗನ ಹೆಗಲನ್ನು ಬಳಸಿ ನಕ್ಕು ಮತ್ತೆ ಮುಂದುವರಿಸಿದ “ನಮ್ಮ ಜೀವನದಲ್ಲಿ ಕೂಡ ಹೀಗೆಯೇ ಆಗುತ್ತದೆ ಮಗು. ತಮ್ಮ ಜೀವನದಲ್ಲಿ ಗಳಿಸಿದ ಸಾಕಷ್ಟು ಹಣ ಆಸ್ತಿಗಳನ್ನು ಬಹಳಷ್ಟು ಜನ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ವಾಗ್ದಾನ ಮಾಡಿ ಅದನ್ನು ಈಡೇರಿಸುವಲ್ಲಿ ಸೋತಿದ್ದಾರೆ. ಇದೆಲ್ಲವೂ ಅವಶ್ಯಕತೆ ಇಲ್ಲದಿದ್ದರೂ ಬಾಯಿ ಬಿಟ್ಟ ಪರಿಣಾಮವಾಗಿ ಆಗುವ ಪ್ರಮಾದ” ಎಂದು ಮಾರ್ಮಿಕವಾಗಿ ಹೇಳಿದನು.
ಅದೆಷ್ಟು ನಿಜವಲ್ಲವೇ ಸ್ನೇಹಿತರೆ?
ಎಷ್ಟೋ ಬಾರಿ ನಾವು ಕೆಲವು ವಿಷಯಗಳನ್ನು, ನಮ್ಮೊಳಗಿನ ಆತಂಕಗಳನ್ನು, ಕನಸುಗಳನ್ನು ನಮ್ಮ ಆಪ್ತರು ಎಂದೇ ಭಾವಿಸಿ ಕೆಲವರ ಬಳಿ ಹಂಚಿಕೊಂಡಿರುತ್ತೇವೆ. ಆದರೆ ದುರದೃಷ್ಟವಶಾತ್ ಆ ಕನಸುಗಳು ಈಡೇರದಿದ್ದಾಗ, ನಾವು ನಮ್ಮ ಪ್ರಯತ್ನದಲ್ಲಿ ವಿಫಲರಾದಾಗ ನಾವು ನಮ್ಮವರೆಂದು ಹೇಳಿಕೊಂಡ ಆ ವ್ಯಕ್ತಿಗಳೇ ನಮ್ಮನ್ನು ಗೇಲಿ ಮಾಡುವ ಮೂಲಕ ಅವಮಾನಿಸುತ್ತಾರೆ.
ಪ್ರಕೃತಿಯಲ್ಲಿನ ಯಾವುದೇ ಬದಲಾವಣೆಗಳು ಜೋರಾದ ಶಬ್ದದೊಂದಿಗೆ ಒಡಮೂಡುವುದಿಲ್ಲ. ಬೃಹದಾಕಾರದ ಮರವಾಗಿ ಬೆಳೆಯುವ ಶಕ್ತಿ ಇರುವ ಬೀಜವೂ ಕೂಡ ಅತ್ಯಂತ ಶಾಂತವಾಗಿ ಮೊಳಕೆ ಒಡೆದು ಬೆಳೆಯುತ್ತದೆಯಲ್ಲವೇ? ಅಂತೇ ನಮ್ಮ ಬೆಳವಣಿಗೆಯು ನಮ್ಮ ಕೃತಿಯಲ್ಲಿ ಇರಬೇಕೆ ಹೊರತು
ಮುಂಚಿತವಾಗಿ ನಾವಾಡುವ ಮಾತುಗಳಲ್ಲಿ ಅಲ್ಲ ಎಂಬುದನ್ನು ಅರಿತು ಜೀವನದಲ್ಲಿ ಮುಂದೆ ಸಾಗಬೇಕು.
ಏನಂತೀರಾ?
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.