Oplus_131072

ಒಂದು ಹೆಣ್ಣಿನ ಕತೆ.  

ಸುಮಗಲಿ ಹದಿನೆಂಟರ ಹರೆಯದ ತುಂಬು ಪ್ರಾಯದ ಕೊಮಲೆ. ಕೆಂಪು ಬಣ್ಣದ, ಚಿಗುರೆಗಣ್ಣಿನ, ಗಿಣಿಯ ಮೂಗಿನ ದುಂಡುಮೋಗದ ತುಂಬು ಗಲ್ಲದ, ತುಂಬಿದೆದೆಯ ರೇಶಿಮೆ ಕೇಶರಾಶಿಯ ಅವಳ ಯೌವನ ದೇವಲೋಕದ ಅಪ್ಸರೆಗೆ ಸಮವಾದದೆಂದು ಹೇಳಬಹುದು. ಕಣ್ಣಿರುವವರು ಇವಳ ಯೌನಕ್ಕೆ ಸೋತು ಮರುಳಾಗದವರಿಲ್ಲ. ಸುಮಂಗಲಿ ಮಗುವಿದ್ದಾಗ ತಾಯಿಯನ್ನು ಕಳೆದುಕೊಂಡ ದುರಾದೃಷ್ಠೆ. ಇವಳ ತಂದೆ ಎರಡನೇ ಮದುವೆಯಾದ, ಆಕೆಗೂ ಎರಡು ಗಂಡು ಮಕ್ಕಳಿವೆ. ಆದರೆ ಇವಳಿಗೆ ಅವರು ಕಣ್ಣಿಟ್ಟರು ಸೇರೋಲ್ಲ. ಅವಳ ಕಣ್ಣಲ್ಲಿ ಬರಿ ಕೆಂಡವೆ ತುಂಬಿದೆ. ಇಳಿಗಾಗಿ ಅವಳ ಕಣ್ಣಲ್ಲಿ ಹನಿ ಕಣ್ಣಿರೂ ಇಲ್ಲ. ಆಕೆಗೆ ಹುಟ್ಟಿದ ಮಕ್ಕಳು ಕೂಡ ತಾಯಿಯಂತೆ ನೀಚರು. ಇವಳ ತಂದೆ ಮಾತ್ರ ಕುಡುಕ. ಕುಡಿದ ಅಮಲಿನಲ್ಲಿ ಮೊನ್ನೆ ರೈಲ್ವೆ ಹಳಿಯಲ್ಲಿ ಬಿದ್ದು ನುಚ್ಚುನೂರಾಗಿ ಸತ್ತ. ಆಗಿನಿಂದ ಸುಮಂಗಲಳ ಬಾಳೆಲ್ಲ. ಅಮಂಗಳವಾಗಿದೆ. ತಂದೆ ಇದ್ರೆ ಏನಾದ್ರೂ ಮಾಡಿ ಖೂಳ್ ತಂದು ಹಾಕ್ತಿದ್ದ. ಅದೂ ಗತಿ ಇಲ್ಲ. ಅಪ್ಪಾ ಗಳಿಸಿದ್ದು ಎನೂ ಇಲ್ಲ. ನೆಲೆಸಿದ್ದು ಬಾಡಿಗೆ ಮನೆ. ಆ ಮನೆ ಬಾಡಿಗೆ ಗತಿ ಇಲ್ದೆ ಹೋದಾಗ ಎಲ್ರೂ ಮನೆ ಖಾಲಿ ಮಾಡಬೇಕಾಯಿತು.”ಏ ಸುಮಂಗಲಿ, ಇಲ್ನೋಡು! ನಿಮ್ಮಪ್ಪಂತು ಸತ್ ಹ್ವಾದ ನಿಂಗಂತು ಗೊತ್ತೇ ಅದಾ, ಹ್ವಾಟ್ಟಿಗಿ ಬಟ್ಟೆಗಿ ಮತ್ ಬಾಡಗಿಗಿ ಗತಿ ಇಲ್ದೆ ಕೊರಗತ್ತಿದ್ದಿವಂತ. ನಾನಂತು ನನ್ನೆಡ್ಡು ಮಕ್ಳಿಗಿ ತಗೊಂಡ ಹೋಗತ್ತಿದ್ದಿನಿ. ನೀ ನಮ್ ಜೋತ್ಗೆ ಬರಬೇಡ. ನಿನ್ ಪಾಡಿಗಿ ನೀ ಎಲ್ಲಿಗಾದ್ರೂ ಹೋಗ್” ಅಂತ ಕಮಲಿ ತನ್ನ ಸಾಮಾನುಗಳನ್ನೆಲ್ಲ ಹಾಕಿ ಗಂಟು ಕಟ್ಟತೊಡಗಿದಳು. “ಯವ್ವಾ! ನಂಗ್ ಬಿಟ್ಟು ಹೋಗಬ್ಯಾಡವ್ವಾ! ನಂಗ್ ಬಿಟ್ ನೀ ಹೋಗಬ್ಯಾಡ” ಅಂತ ಕಣ್ಣೀರು ಹಾಕಿದ್ಳು ಸುಮಂಗಲಿ.”ನಿಂಗ್ ಕರ‍್ಕೊಂಡು ಹೋಗ್ಲಿಕ್ ನೀನೇನ್ ನನ್ ಸ್ವಂತ ಮಗ್ಳಾ? ನನ್ ಮಕ್ಳಿಗಿ ಅನ್ನಾ ಅರಿವೆ ಗತಿ ಕಾಣ್ತಿಲ್ಲಾ. ಮತ್ ನಿನ್ ಬ್ಯಾರೆ ಕೇಡು? ಛೇ!…” ಅಂತ ಕಮಲಿ ಹಾರಿಸಿ ಮಾತಾಡುತ ಬಟ್ಟೆ ಬರೆಗಳನ್ನೆಲ್ಲ ಚೀಲದಲ್ಲಿ ಹಾಕಿ ಗಂಟು ಮೂಟೆ ಕಟ್ಕೊಂಡು ಹೊರಡಲು ತಯಾರಾದಳು.”ಅವ್ವಾ! ನಂಗೊಬ್ಬಾಕಿಗಿ ಬಿಟ್ ಹೋಗಬ್ಯಾಡವ್ವ. ನಂಗೂ  ನಿಮ್ ಜೋತ್ಗೆ ಕರ‍್ಕೊಂಡು ಹೋಗವ್ವ. ನೀ ಹೇಳಿದು ಕೇಳ್ಕೊಂಡು ಬಿದ್ದಿರ‍್ತಿನಿ. ನಂಗೆ ತಬ್ಬಲಿ ಮಾಡಬ್ಯಾಡವ್ವ. ನಿನ್ ಹ್ವಾಟ್ಯಾಗ ಹುಟ್ಟಲಾರದ್ ತಪ್ಪಿಗಿ ಈ ಶಿಕ್ಷೆ ಕೊಡಬೇಡವ್ವ.” ಅಂತ ಆಕೆ ಮಲತಾಯಿ ಕಾಲ್ ಹಿಡ್ದು ಗಳಗಳಂತ ಅತ್ತಳು.”ಛೇ, ಸರಿಯೇ!” ಅಂತ ಕಮಲಿ ಸಿಡುಕಿದಳು.ಕಮಲಿಗೆ ಹುಟ್ಟಿದ ಮಾದು ಮತ್ತು ಕಾಂತು ಇಬ್ರು ಎಲ್ಲವೂ ನೋಡುತ ಮೌನವಾಗಿ ನಿಂತಿದ್ರು. ಹತ್ತು ಹನ್ನೇರಡ ವರ್ಷದವರಾದ ಅವರಿಗೆ ಅಕ್ಕಳೆಂಬ ಅಕ್ಕರೆಯ ಮಾತು ಗೊತ್ತಿದಂತೆ ಕಾಣಲಿಲ್ಲ. ಅವರಿಗೂ ಇವಳನ್ನು ಕಂಡ್ರೆ ಬೇಸರವಾದಂತೆ ಕಾಣ್ತಿತ್ತು ಆ ದೃಶ್ಯ.ಸುಮಂಗಲಿ ಬೆಳೆದು ನಿಂತಿದ್ದಾಳೆ. ಅವಳಗೆ ವರದಕ್ಷಿಣೆ ಕೊಟ್ಟು ಮದ್ವೆ ಯಾರ ಮಾಡ್ಬೇಕು? ಅನ್ನೋ ಪ್ರಶ್ನೆಯ  ಮನದ ಮಾತು ಅವರೆಲ್ಲರ ಮುಖದ ಮೇಲೆ ಎದ್ದು ತೋರುತ್ತಿತ್ತು.”ತಮ್ಮಂದಿರಾ, ನಂಗ್ ಬಿಟ್ ಹೋಗಬ್ಯಾಡರೋ…! ನಿಮ್ಮ ಕಾಲಿಗಿ ಬಿಳ್ತಿನಿ. ಅವ್ವಗ್  ಕರ‍್ಕೊಂಡು ಹೋಗಂತ ಹೇಳ್ರೋ!” ಅಂತ ಗೋಳಿಟ್ಟಳು. ಅವರ ಕರಳು’ ಚುರ್’ಽ ಅನ್ನಲಿಲ್ಲ. ಕಮಲಿ ತನ್ನೆರಡು ಮಕ್ಳಿಗಿ ಒಂದೊಂದು ಗಂಟು ಹೊರಿಸಿ ತಾನೊಂದು ಹೊತ್‌ಕೊಂಡು ಮನೆಬಿಟ್ಟು ನಡೆದಾಗ ಸುಮಂಗಲಿ ಪಾಪ ! ಎನ ಮಾಡ್ಯಾಳು? ಕನಿಕರವಿಲ್ಲದವರ ಎದಿಯಾಗ ಕಂಬನಿಗೆ ಬೆಲೆಯೆ ಇಲ್ಲವಲ್ಲ! ಅಳುತ ಅವರ ಹಿಂದೆ ಹಸು ಕಂಡ ಕರುವಿನಂಗೆ ಧಾವಿಸಿದಳು.”ಸುಮಂಗಲಿ, ನೀ ನಮ್ ಹಿಂದ್ ಬರಬ್ಯಾಡ್. ಎಲ್ಲಿಗದ್ರೂ… ನಿನ್ ಪಾಡಿಗಿ ನೀ ಹೋಗು” ಅಂತ ಕಣ್ಣ ಕಿಸಿದಳು ಕಮಲಿ. “ನಾ ಹೋಗಲ್ಲ! ನಿಮ್ ಜೋತ್ಗೆ ಬರ‍್ತಿನಿ” ಅಂತ ಕೂಗಿ ಅತ್ತಳು. ಅವರು ಮನೆ ಬಿಟ್ಟು ಹೋಗುವಾಗ; ಇವಳು ಅವರೊಂದಿಗೆ ಹೋಗಲು ಹಟ ಹಿಡಿದಳು. ಇವಳ ಹಟ ಹೆಚ್ಚಾಗಿತ್ತು. ಕಮಲಿಗೆ ಕೋಪ ನೆತ್ತಿಗೇರಿತ್ತು. ನೆತ್ತಿ ಮೇಲಿನ ಗಂಟು ಕೆಳಗಿಳಿಸಿದಳು. ಸಂತೈಸುವಂತೆ ಹತ್ತಿರ ಬಂದು ಕಪಾಳ ಮೋಕ್ಷ ಮಾಡಿದಳು. ಪೋರಿ ಪೆಟ್ಟು ತಿಂದು ನೆಲಕ್ಕುರುಳಿದಳು. ಆಕೆ ಇವಳತ್ತ ಗಮನಿಸದೆ ಇಳಿಸಿದ ಗಂಟು ಎತ್ಕೊಂಡು ಮಕ್ಕಳೊಂದಿಗೆ ಅಲ್ಲಿಂದ ಮಾಯವಾದಳು.ಹೊಟ್ಟೆಗೆ ಖೂಳಿಲ್ಲದೆ ಉಪವಾಸವಿದ್ದಾಗ ಸುಡುವ ಬೆಂಕಿಯಂತೆ ಬಿಸಿಲಿನಲ್ಲಿ ಕಮಲಿ ಕಪಾಳಕ್ಕೆ ಹೊಡೆದಾಗ ಸುಮಂಗಲಿ ಮೂರ್ಛೆ ಹೋಗಿರಬೇಕು. ಕೆಲ ಸಮಯದ ನಂತರ ಪ್ರಜ್ಞೆಯುಂಟಾಗಿ ‘ಪಿಳಿ ಪಿಳಿ’ ಕಣ್ಣು ಬಿಟ್ಟು ನೋಡಿದಳು.ಯಾರು ಇಲ್ಲ! ಬಾಯಾರಿಕೆಯಾಗಿದೆ. ಪಕ್ಕದಲ್ಲಿ ಮನೆಗಳಿಲ್ಲ. ಹೆದರಿ ಮುಂದೆ ಹೋಗುತ್ತಾಳೆ. ನೀರಿಗಾಗಿ ಬದುಕುವ ಬಯಕೆಗಾಗಿ. ಮುಂದಿನ ಭವಿಷ್ಯದ ಕನಸ್ಸಿಗಾಗಿ ಆದರೆ ಅಲ್ಲೆಲ್ಲೂ ಅವಳಿಗೆ ನೀರು ದೊರೆಯಲಿಲ್ಲ. ತುಂಭಾ ಬಾಯಾರಿಕೆಯಾಗಿದೆ. ಹೇಗೋ ದಣಿದ  ದೇಹದಿಂದ ಸರಿದು ಮುಂದೆ ಹೋಗಿ ಪಕ್ಕಕ್ಕೆ ನೋಡಿದರೆ ಸಣ್ಣದೊಂದು ಕೆರೆ ಇದೆ. ಅದರಲ್ಲಿ ಹಂದಿ, ಎಮ್ಮೆಗಳ ಪ್ರಪಂಚವಿದೆ. ಏನಿದ್ದರೇನಂತೆ? ದಣಿದ ದೇಹಕ್ಕೆ ನೀರು ಬೇಕಲ್ಲಾ? ಅದೇ, ಅದೇ ನೀರು ಕುಡಿದಳು. ಸ್ವಲ್ಪ ಬಾಯಾರಿಕೆ ಇಂಗಿದಂತಾಯಿತ್ತು. ಆದರೆ ಅನ್ನವಿಲ್ಲದ ದೇಹಕ್ಕೆ ಉತ್ಸಾಹವೆಲ್ಲಿ ಬಂದಿತ್ತು? ಮನಸ್ಸಿಗೆ ನೆಮ್ಮದಿಯೆಲ್ಲಿ ಆದಿತ್ತು? ಈಗ ಸುಮಂಗಲಿ ಬಾಳು ಆಸರೆ ಇಲ್ಲದ ಬಳ್ಳಿಯಂತೆ. ಆಕೆಗೆ ಈಗಂತು ಊರುಗೋಲಾಗಿ ಯಾರೂ ಇಲ್ಲ. ತಾನು ಎಲ್ಲಿಗಿ ಹೋಗಬೇಕು? ತನ್ನವರು ಯಾರಿದ್ದಾರೆ ಈ ಜಗದಲ್ಲಿ”? ಅಂತ ಅಲ್ಲೆ ಒಬ್ಬಳೆ ಕುಂತು ಅತ್ತಳು. ಕೊನೆಗೆ ತನ್ ತಾಯಿ ತವ್ರು ಮನೆಯವರ ನೆನಪಾಗುತ್ತದೆ. ಅಲ್ಲಿಗೆ ಹೋಗಬೇಕಾದ್ರೆ ಊರೇನು ಸಮೀಪವಿಲ್ಲ. ಬಸ್ ಚಾರ್ಜ ಬೇರೆ ಬೇಕು. ಅವಳಲ್ಲಿ ದುಡ್ಡಿಲ್ಲ. ಹ್ವಾದ ವರ್ಷ ದೀಪಾವಳಿಗೆಂದು ಕಾಲಲ್ಲಿ ಅಪ್ಪಾ ಮಾಡಿಸಿದ ಚೈನುಗಳಿವೆ.” ಇವು ಯಾರಿಗಾದ್ರೂ ಮಾರೋಣ ಬಂದ್ ದುಡ್ಡಲ್ಲಿ ಊರಿಗಿ ಹೋಗೋಣ” ಅಂತ ತನ್ ಮನದೊಳಗೆ ತಾನೆ ಭಾವಿಸಿಕೊಂಡಳು. ಅಲ್ಲಿಂದ ಅದೇ ನಗರಕ್ಕೆ ಬಂದು ಮನೆ ಮನೆಗೂ ತಿರುಗಿ”ಅಮ್ಮಾವ್ರೆ! ನಾ ಬ್ಹಾಳ ತೊಂದರೆಯಲ್ಲಿದ್ದಿನ್ರೀ! ಈ ಚೈನ್ ಇಟ್‌ಕೊಂಡು ನೂರ್ ರುಪೈ ಇದ್ರ ಕೊಡ್ರವ್ವಾ!” ಅಂತ ಕೇಳಿದಾಗ ಆ ನಗರದ ಮನೆಯವರೆಲ್ಲ ಅವು ಕೈಗಳಲ್ಲಿ ಹಿಡ್ಕೊಂಡು ನೋಡಿ “ನಮ್ಮಲ್ಲಿ ದುಡ್ಡಿಲ್ಲ. ಬೇರೆ ಮನೆ ಕೇಳು” ಅಂತ ಹತ್ತಾರು ಮನೆ ಹೆಂಗಸ್ರು ನೂರ್ ರುಪೈಗಿ ಗತಿ ಇಲ್ದೆ ದೂಡಿದರು. ಹಾಗೆ ಮುಂದೊಂದು ಮನೆಗೆ ಬಂದು “ಅಮ್ಮಾವ್ರೆ! ನಾ ಊರಿಗಿ ಹೋಗಬೇಕು. ನನ್ನಲ್ಲಿ ಬಸ್ ಚಾರ್ಜ ಇಲ್ಲ. ಅದಕ್ ಈ ಚೈನ್ ಇಟ್ಕೊಂಡು ನೂರ್ ರುಪೈ ಇದ್ರ ಕೊಡ್ರವ್ವಾ! ನಿಮ್ಗೆ ಕೈ ಮುಗಿತ್ತಿನಿ. ಇಲ್ಲಂತ ಅನಬ್ಯಾಡ್ರಿ” ಅಂತ ಮನೆಯ ಯಜಮಾನಿಯೊಬ್ಬಳ ಕೈಗೆ ಚೈನ್ ಕೊಟ್ಟು ತನ್ ಕತೆ ಹೇಳಿ ಅತ್ತಳು. ಆ ಮನೆಯವರಿಗೆಲ್ಲ “ಅಯ್ಯೋ !  ಪಾಪ ! ” ಅನಿಸಿ ಕರುಣೆಯಿಂದ “ನಿನ್ ಚೈನ್ ತಗೊಂಡು ನಾವಾರ್ಽ… ಏನ್ ಮಾಡೋಣ? ನಿನ್ನಂತ ಹೆಣ್‌ಮಕ್ಳು ನಮ್ಗೂ ಅವಾ. ಹೆಣ್ ಹೆತ್ತದೆ ಇದ್ದ ಆ ನಿನ್ ಮಲತಾಯಿಯಂತಲ್ಲ ನಮ್ ಹೃದಯ. ಜೀವನದಾಗ ನಿಮ್ಮಂತ ಮಕ್ಳಿಗಿ ಬೀದಿಯಲ್ಲಿ ಈ ರೀತಿ ಶಿಕ್ಷೆ ಕೊಡಭಾರದಾಗಿತ್ತು ಅವಳು. ನಿಂಗೆ ಬಸ್ಸಿಗಿ  ಹೋಗ್ಲಿಕ್ ರೊಕ್ಕ ಬೇಕಲ್ಲ? ಕೊಡ್ತಿನಿ ತಗೊಂಡು ನೀ ಎಲ್ಲಿಗಿ ಹೋಗಬೇಕು ಅಲ್ಲಿಗಿ ಹೋಗಿ ಸುಖವಾಗಿರು” ಅಂತ ಅವಳಿಗೆ ಸಂತೈಸುತ “ಏ, ರಮೇಶ ಇಲ್ಲಿ ಬಾರೋ..” ಅಂತ ತನ್ ಹಿರಿಯ ಮಗನಿಗೆ ಕೂಗಿ ಕರೆದಳು .ಹುಡುಗಿಯ ಗೋಳಿನ ಕತೆಯನ್ನೆಲ್ಲ ಕೇಳಿದ ನಂತರ ಅವನ ಹೃದಯ ಕರಗಿ ಹೋಯಿತ್ತು. ತುಂಬಿ ನಿಂತ  ಮೌನದ  ಚಲುವೆಯ ಕಂಡು “ಅಯ್ಯೋ! ಅನ್ನಿಸಿತಲ್ಲದೆ ಅವಳ ಮೇಲೆ ಪ್ರೀತಿ ಉಂಟಾಯಿತ್ತು.”ನೋಡು,  ಈ ಹುಡಗಿಗೆ ಬಸ್ಸಿಗಿ ಕಳಿಸಿ ಬಾ” ಅಂತ ಯಜಮಾನಿ ಮಗನೊಂದಿಗೆ ಸುಮಂಗಲಿಯನ್ನು ಕೊಟ್ಟು ಕಳಿಸಿದಳು. ಅವನಿಗೆ ಅವಳನ್ನು ಮಾತಾಡಿಸುವ ಆಸೆಯಾಗಿತ್ತು. ಇದು ಒಳಿತಲ್ಲಾ? ಜೊತೆಗೆ ಕರೆದುಕೊಂಡು ಬಸ್ ಸ್ಟಾಂಡಿಗೆ ಸಾಗಿದನು.”ನೀವು ಊರಿಗಿ ಯಾಕ ಹೋಗತ್ತಿರಿ? ಎಂದು ರಮೇಶ ಹಾದ್ಯಾಗ ಆಕಿಗಿ ಸಂದರ್ಶನ ಸುರು ಮಾಡಿದ. “ಅದು ತನ್ ತಾಯಿ ತವ್ರ ಮನಿ. ಅಲ್ಲಿ ಏನ್ರ ಆಶ್ರಯ ಸಿಗಬಹುದಂತ ಹೋಗತ್ತಿದ್ದೀನಿ””ಅಲ್ಲಿ ನಿಮ್ಗೆ ಆಶ್ರಯ ಸಿಗಲಿಲ್ಲ. ಅಂದ್ರೆ ಮತ್ತೇಲ್ಲಿಗಿ ಹೋಗ್ತೀರಿ?” “ಎಲ್ಲಿಗೂ ಹೋಗಲ್ಲ. ದೇವರಿಚ್ಚೆಯಂತೆ ಬದುಕ್ತಿನಿ””ಛೇ! ಛೇ!… ನಿಮ್ಮಂಥವರು ಹಾಗಾಗಬಾರದು. ನೋಡಿ, ನಿಮ್ಮ ಹೆಸರೇನು?”ಸುಮಂಗಲಿ…..””ನೋಡಿ ಸುಮಂಗಲಾವ್ರೆ! ನಿಮ್ಗೆ ಅಲ್ಲಿ ಆಶ್ರಯ ಸಿಗಲಿಲ್ಲ ಅಂದ್ರೆ ವಾಪಾಸ್ ಇಲ್ಲಿಗೆ ರ‍್ರಿ. ನಮ್ಮನೆಯಲ್ಲೇ ರ‍್ರಿ””ಯಾಕೆ ?”ಯಾಕೂ ಇಲ್ಲ. ನಿಮ್ಮನ್ನ ಕಂಡ್ರೆ ಹಾಗನುಸ್ತು ಅದ್ಕೆ””ನೋಡಿ ರಮೇಶ, ನಿವ್ ತೋರಿದ ಆ ಕನಿಕರ ಸಹಾಯವೆ ಸಾಕು ನಂಗೆ. ನಿಮ್ಮನ್ನು ನಾ ತುಂಭಾ ಕೃತಜ್ಞಳಾಗಿದ್ದೇನೆ. ದಯಮಾಡಿ ನಂಗೆ ಬಸ್ಸಿನ ಬೋರ್ಡು ಓದ್ಲಿಕ್ ಬರೋಲ್ಲ. ಬಸ್ ಬಂದ ಕೂಡ್ಲೆ ಸಹಾಯ ಮಾಡಿ. ನಾ ಹೋಗಿ ಬರ‍್ತಿನಿ” ಎಂದಾಗ ಆತ ಆಯಿತು ಎನ್ನುವಂತೆ ಗೋಣು ಅಲ್ಲಾಡಿಸಿದ. ಇಬ್ರು ನಡೆದುಕೊಂಡು ಬಸವಕಲ್ಯಾಣ ಬಸ್ ಡೀಪೋ ತಲುಪಿದರು. ಬಸ್ಸು ನಿಂತಿತ್ತು. ರಮೇಶ ಆಕೆಗೆ ಸೀಟು ದೊರಕಿಸಿ ಕುಳಿತುಕೊಳ್ಳಲು ಹೇಳಿದ.”ಸುಮಂಗಲಾ ನಿಮ್ಗೆ ಅಲ್ಲಿ ಸರಿ ಕಾಣಿಸಿದ್ರೆ ಇದ್ದ ಬಿಡ್ರಿ. ಇಲ್ಲಾಂದ್ರೆ ವಾಪಾಸ್ ಬಂದ್ ಬಿಡ್ರಿ” ಅಂತ ಜೇಬಿನಲ್ಲಿನ ದುಡ್ಡು ತೆಗೆದು ಅಮ್ಮಾ ಕೊಟ್ಟಿದ್ದ ನೂರ್ ರುಪೈಗೆ ,ನಾಲ್ಕು ನೂರ್ ಸೇರಿಸಿ ಒಟ್ಟು ಐದನೂರ್ ರುಪೈ ಅವಳ ಮುಂದೆ ಹಿಡಿದು “ಹೂಂ, ಈ ಐದನೂರ್ ರುಪೈ ತಗೋಳ್ರೀ” ಅಂದ”ಬ್ಯಾಡ್ರಿ , ನೂರ್ ರುಪೈಯೇ ಸಾಕು. ಅಷ್ಟೊಂದು ಯಾಕ್ ಕೊಡ್ತಿರಿ ನಂಗೆ?” ಅಂತ ಮೆಲ್ಲಗೆ ನುಡಿದಳು.”ಪರವಾಗಿಲ್ಲ. ತಗೋಳ್ರೀ ಒಂದ್ ವ್ಯಾಳೆ ಅಲ್ಲಿ ಆಶ್ರಯ ಸಿಗಲಿಲ್ಲ ಅಂದ್ರೆ ವಾಪಾಸ್ ಬರ‍್ಲಿಕ್ ಬೇಕಲ್ಲ? ಅಂತ ಒತ್ತಾಯ ಮಾಡಿದಾಗ ಅಕೆ  ಆ ರುಪೈ ತಗೊಂಡು ಮುಗುಳ್ನಕ್ಕಳು.”ನಾ ಹೋಗ್ತಿನಿ ಬೈ” ಎಂದು ರಮೇಶ ಕೆಳಗಿನಿಂದ ಕೈ ಬೀಸಿದ ಬಸ್ಸು ಮುಂದೆ ಸಾಗಿತ್ತು. ಆಕೆಯೂ “ಬೈ” ಹೇಳಿ ಕೈ ಬೀಸಿ ಮತ್ತೆ ಮುಗುಳ್ನಕ್ಕಳು. ಬಸ್ಸು ಮುಂದೆ ಮುಂದೆ ಸಾಗಿ ಮರೆಯಾಗಿತ್ತು. ಬಸ್ಸು ಊರು ತಲುಪಿತ್ತು. ಸುಮಂಗಲಿ ತನ್ ತಾಯಿ ತವರು ಮನೆಗೆ ಹೋದಾಗ ಅಲ್ಲಿ ಅವಳ ತಾಯಿಯ ತಂದೆ ತಾಯಿಯರು ಎಂದೋ !  ಕಾಲವಶರಾಗಿದ್ದ ವಿಷಯ ತಿಳಿಯಿತು. ಆದರೂ ಒಬ್ಬ ಸ್ವಾದರ ಮಾವನೆಂಬ ಸಂಬಂಧವಿದೆ. ಅವನ ಮನೆಗೆ ಹೋದಳು  ಅವನಿಗೂ ಐದಾರು ಮಕ್ಕಳು. ಆತ ಕೂಲಿ ಕೆಲಸ ಮಾಡುವವನು. ಆ ಕೆಲಸವು ಬಹಳ ವಿರಳ. ಕುಟುಂಬ ದೊಡ್ಡದು. ಇವಳಿಗೆಲ್ಲಿ ಇಟ್ಟಕೊಂಡಾನವನು? ಹೌದು, ಇಟಗೊಂಡು ಅನ್ನ ಹಾಕಬಹುದು. ಆದರ ವರದಕ್ಷಿಣೆ ಕೊಟ್ಟು ಮದ್ವೆ? ಅವನಿಗೂ ಸುತರಾಂ ಇಷ್ಟವಿಲ್ಲ. ಹುಡಗಿ ತನ್ನೆಲ್ಲಾ ಕತೆ ಹೇಳಿದಳು. ಅವನಿಗೆ ತಂಗಿಯ ಮಗಳೆಂದು ಸ್ವಲ್ಪ ಮನ ಕರಗಿತ್ತು. ಆದರೆ….. ! ಅವ್ನ ಹೆಂಡ್ತಿ ಹೃದಯ ಯಾಕೆ ಕರಗಬೇಕು? ಅವಳು ಕಮಲಿಯಂತೆ ಸ್ವಾರ್ಥಿ ಕಪಟಿಯಾಗಿದ್ದಳು.”ನೋಡ ಸುಮಂಗಲಿ ನಾವೂನು ಬಡವರವ, ಕೂಲಿ ಮಾಡಿದ್ರ ನಮ್ ಹ್ವಾಟ್ಟಿ ತುಂಬತದ್ ಇಲ್ಲಾಂದ್ರ ಉಪವಾಸ ಕೊರಗಬೇಕಗತದ. ಅದರಾಗ ನೀನ್ ಬೇರೆ ತುಂಬಿ ನಿಂತಿದ್ದಿ. ನಿಂಗ್ ಅನ್ನ ಹಾಕಿ ಏನೋ !; ಇಟ್ಟಕೋಬಹುದು. ಆದರ..ವರದಕ್ಷಿಣೆ ಕೊಟ್ಟು ನಿನ್ನ ಕಲ್ಯಾಣ ಮಾಡುವಷ್ಟು ಗತಿಯಿಲ್ಲ ನಮ್ಗೆ. ನಿಂಗ್ ಯಾರ್ ರೊಕ್ಕ ಕೊಟ್ಟು ಕಳಿಸಿದ್ದಾರಲ್ಲ  ಅವರಲ್ಲಿಗೆ ಹೋಗು. ನಮ್ಮ ಸ್ಥಿತಿ ನಮ್ಗೆ ಇರ‍್ಲಿ. ಇದರಾಗ ನೀ ಬಂದು ಭಾಗಿಯಾಗಬೇಡ” ಅಂತ ಆಕೆ ನೇರವಾಗಿಯೇ ಹೇಳಿದಳು.”ನೋಡಕ್ಕ , ನಾ ನಿಮ್ ಜೋತೆ ಕೂಲಿ ಮಾಡ್ತಿನಿ. ನಿಮ್ಗೆ ನಾ ಭಾರ ಆಗೊಲ್ಲ. ಮತ್ ನೀವ್ ಹೇಳದಾಂಗ ಕೇಳತ್ತಿನಿ” ಅಂತ ಕಣ್ಣೀರು ಹಾಕಿದಳು.”ದಯಮಾಡಿ ನಿನ್ ಪಾಡಿಗಿ ನೀ ಹ್ಯಾಂಗ್ ಬಂದಿದ್ದಿ: ಹಾಂಗ್ ಹೋಗು. ಇಲ್ಲಿ ಇರಬ್ಯಾಡ್ ನಿನ್ನ ಕೈ ಮುಗಿತೀನಿ” ಅಂತ ತಿರಸ್ಕಾರ ಭಾವನೆಯಿಂದ ಹೇಳಿದಾಗ ಸ್ವಾದರ ಮಾವ ‘ಪಿಟ್’ ಅಂತ ಒಂದ್ ಮಾತ ಕೂಡ ಆಡಲಿಲ್ಲ. ಎಲ್ಲವೂ ಅವನ ಹೆಂಡ್ತಿಯೇ ಆಡಿದ್ದಾಳೆ.  ಇವನೇನು ಆಡ್ಯಾನು? ಇವರ ತಿರಸ್ಕಾರ ಮನೋಭಾವನೆ ಕಂಡು ಗಾಯವಾದ ಹೃದಯದ ಮೇಲೆ ಮತ್ತೆ ಬರೆ ಎಳೆದಂತಾಯಿತು. ಅವಳ ಸ್ಥಿತಿ. ಆ ಕ್ಷಣವೇ ಅವರ ಮನೆಯಿಂದ ಹೊರಬಿದ್ದು  ಆಸರೆ ಇಲ್ಲದ ಬಳ್ಳಿಯಂತಾಗಿ ವಿಲವಿಲನೆ ಚಡಪಡಿಸಿದಳು. ಮತ್ತೆ ಮರಳಿ ದುಡ್ಡು ಕೊಟ್ಟು ಪ್ರೀತಿ ತೋರಿದವರ ಮನೆಗೆ ಆಸರೆ ಬಯಸಿ ಬಂದಳು. ಅಲ್ಲಿನ ತೀರಸ್ಕಾರ ಭಾವನೆಯ ಕತೆಯನ್ನೆಲ್ಲ ಬಿಚ್ಚಿಟ್ಟಳು.”ಅಮ್ಮಾವ್ರೇ! ನಂಗ್ಯಾರು ದಿಕ್ಕಿಲ್ಲ. ನಿಮ್ಮನೆಲಿ ಕೆಲ್ಸ ಕೊಡ್ರಿ ಮನೆಗೆಲಸ ಮಾಡ್ಕೊಂಡು ಬಿದ್ದರ‍್ತಿನಿ. ನೀವ್ ಮಾತ್ರ ಇಲ್ಲಾಂತ ಅನಬ್ಯಾಡ್ರಿ!” ನಿಮ್ಗೆ ದಮ್ಮಯ್ಯಾ ಅಂತಿನಿ” ಅಂತ ಕಣ್ಣೀರಿಟ್ಟು ಬಿಕ್ಕಿದಳು.”ಆಯಿತು, ಇದ್ದು ಬಿಡು ನಮ್ಮಯಲ್ಲು ಕೆಲಸದವಳು ಬೇಕಾಗಿದ್ದಳು. ಇದು ಒಳ್ಳೆಯದೆ ಆಯಿತ್ತು. ಸರಿಯಾಗಿ ಕೆಲ್ಸ ಮಾಡ್ಕೊಂಡಿರು” ಅಂತ ಪಾರ್ವತಿ ನೊಂದು ಬೆಂದು ಹೋದ ಸುಮಂಗಲಿಗೆ ಹೇಳಿದಾಗ ಆಕೆಗೆ ಅವಳು ಆಸರೆಯ ಮರವಾಗಿ ಗೋಚರಿಸಿದಳು.”ದೇಶದಲ್ಲಿ ಎಲ್ರೂ ಕೆಟ್ಟವರಿಲ್ಲ. ಪುಣ್ಯವಂತರು ಇದ್ದಾರಲ್ಲ!” ಎಂದು ಸುಮಂಗಲಿ ಸ್ವಲ್ಪ ಸಮಾಧಾನ ಪಡುವಂತಾಯಿತು. ಆ ಮನೆಯಲ್ಲಿ ಮುಸುರಿ ತಿಕ್ಕುವುದು, ಕಸ ಗುಡಿಸುವುದು, ಬಟ್ಟೆ- ಬರೆ ತೊಳೆಯುವುದು. ಅವಳ ದಿನ ನಿತ್ಯದ ಕೆಲಸವಾಯಿತು.ಚಿಕ್ಕ ಪ್ರಾಯದ ಚಲುವೆಯಾದ ಇವಳನ್ನು ಯಾರಾದರೂ ಮರುಳಾಗದೆ ಇರ‍್ತಾರೇನು? ಮನೆಯಲ್ಲೇ ಇದ್ದ ರಮೇಶ ಮೊದಲ ನೋಟಕ್ಕೆ ಇವಳ ಸೌಂದರ್ಯಕ್ಕೆ ಸೋತು ಹೋಗಿದ್ದ, ಅವಳು ಅಷ್ಟೇ. ಅವನು ಊದುವ ಪುಂಗಿಯ ನಾದಕ್ಕೆ  ಅನಿವಾರ್ಯವಾಗಿ ತಲೆಯಾಡಿಸುತ್ತಿದ್ದಳು. ಅವನ ಎಲ್ಲಾ ವರ್ತನೆಗಳನ್ನು ಸಹಿಸಿಕೊಳ್ಳುತ್ತಿದ್ದಳು. ಇಬ್ಬರು ಪ್ರೇಮಿಗಳಾದರು. ಈ ವಿಷಯ ಬಹಳ ದಿನಗಳು ಮುಚ್ಚಿ ನಡೆದರೆ, ಕೊನೆಗೆ ಮನೆಯಲ್ಲಿ ಸಂಶಯಕ್ಕೇನು ತಡವಾಗಲಿಲ್ಲ. “ರಮೇಶ ಈ ಹುಡಗಿ ಜೋತೆಗೆ ತಪ್ಪ ಮಾಡ್ತಿದ್ದಿಯಂತೆ ? ಈ ನಿನ್ ವರ್ತನೆಗಳಿಂದ ನಮಗೆಲ್ಲ  ಗೊತ್ತಾಗುತ್ತಿದೆ. ಯಾಕೆ ಹಾಂಗ ಮಾಡ್ತಾ ಇದ್ದಿ ? ” ಅಂತ ಪಾರ್ವತಿ ಪ್ರಶ್ನಿಸಿದಕ್ಕೆ ರಮೇಶ ಪ್ರತ್ಯುತ್ತರವಾಗಿ”ಅಮ್ಮಾ! ನಾ ಅವಳನ್ನ ಪ್ರೀತಿಸುತ್ತಿದ್ದಿನಿ. ಅನಾಥೆಯಾದ ಅವಳಿಗೆ ಪ್ರೀತಿಸಿದ್ರೆ ತಪ್ಪೇ? ಎಂದಾಗ  “ಬಾಯಿ ಮುಚ್ಚೋ !  ಬೆಪ್ಪೆ!” ಎಂದು ಅಕ್ರೋಶದಿಂದ ನುಡಿದಳು.”ನೋಡು ಇನ್ ಮುಂದ್ ಅವಳ್ನ ಕಣ್ಣೆತ್ತಿ ನೋಡಕೂಡದು. ಆಕಿ ಕೇವಲ ನಮ್ ಮನೆ ಕೆಲ್ಸದೋಳು””ಅಮ್ಮಾ! ಅವ್ಳು ಬರಿ ಮನೆ ಕೆಲ್ಸದೋಳಲ್ಲ. ಈ ಮನೆ ಸೊಸೆ ಆಗೋಳು” ಎಂದಾಗ ಪಾರ್ವತಿಯ ತಲೆಯ ಮೇಲೆ ಪರ್ವತವೊಂದು ಕಡಿದು ಬಿದ್ದಂತಾಯಿತು. ಆ ದಿನದಿಂದ ತಾಯಿ ಮಗನಿಗೂ ವಾದ ಪ್ರತಿವಾದ ಮುಂದುವರೆದಿತ್ತು. ಈ ವಾದಲ್ಲಿ ತಾನೆ ಗೆಲ್ಲಬೇಕೆಂಬ ಹಟದಿಂದ ರಮೇಶ ಒಂದು ದಿನ ಮನೆಯವರ ಕಣ್ಣು ತಪ್ಪಿಸಿ ದೇವಾಲಯವೊಂದಕ್ಕೆ ಕರೆದೊಯ್ದು “ಸುಮಂಗಲಿ ನಿನ್ ಸೌಂದರ್ಯ ನಂಗೆ ಹುಚ್ಚ ಹಿಡಸ್ಯಾದ. ನಿನ್ ಗಂಡನಾಗಬೇಕೆಂಬ ಆಸೆಯಾಗ್ಯಾದ. ನಿಂಗ್ ಮದ್ವೆ ಮಾಡ್ಕೋಬೇಕಂತ ಈ ಬಸವೇಶ್ವರ ದೇವಸ್ಥಾನಕ ಕರ‍್ಕೊಂಡು ಬಂದಿನಿ” ಅಂತ ಮರವೊಂದು ಬಳ್ಳಿಯನ್ನು ಸುತ್ತುವರೆದುಕೊಂಡಂತೆ ಅವಳನ್ನು ತನ್ನ ಎಡ ಬಾಹುವಿನಲ್ಲಿ ಹಿಡಿದು ಮಾತಾಡಿದ.ಆಕೆ ಏನೂ ಅರ್ಥವಾಗದಂತೆ ಮೌನವಾಗಿದ್ದರಿಂದ ಒಮ್ಮೆ ಅವಳ ಕೆನ್ನೆ ಹಿಡಿದು “ಏ ಯಾಕ್ ಮೌನವಾಗಿದ್ದಿ? ನಿಂಗ್ ನಾ ಹೇಳಿದ್ದು ಕೇಳಿಸಲಿಲ್ಲವೇ? ಅಥವಾ ಈ ಮದ್ವೆ ಇಷ್ಟ ಇಲ್ವೆ?” ಎಂದು ಪ್ರಶ್ನಿಸಿದ.”ನೀವು ನಂಗ್ ಮದ್ವಿಯಾದ ವಿಷಯ ನೀಮ್ ತಾಯ್ಗಿ ಗೋತ್ತಾದರೇ? ಎಂದು ಮೌನ ಒಡೆದು ಭಯದಿಂದ ನುಡಿದಳು.”ಗೊತ್ತಾದರೇನಂತೆ?  ಗಂಡಾ-ಹೆಂಡ್ತಿ ಆಗಿದ್ದಿವಿ ಅಂತ ಸಹಜವಾಗಿ ಹೇಳಿ ಬಿಟ್ರೆ ಸಾಕು. ತಾನೆ ತಾನಾಗಿ ಒಪ್ಕೋತಾರೆ. ಅದಕ್ ಯಾಕ್ ಇಷ್ಟ ಹೆರ‍್ತಿ?” ಅಂದಾಗ ಒಲ್ಲದ ಮನಸ್ಸಿನಿಂದ ಒಪ್ಪಿದಳು. ಆತ ದೇವರ ಸಾಕ್ಷಿಯಾಗಿ ತಾಳಿ ಕಟ್ಕೊಂಡು ಮನಿಗಿ ತಂದ, ಮನೆಲಿ ಅವಳ ಕೊರಳಲ್ಲಿ ತಾಳಿ ಕಂಡು ನಂಬಲಾಗಲಿಲ್ಲ. “ತಾಳಿ ಯಾರೆ ಕಟ್ಟಿದ್ದಾರೆ?” ಎಂದು ಪ್ರಶ್ನಿಸಿದಳು ಪಾರ್ವತಿ. ಅವಳ ಮೈಯೆಲ್ಲ ಭಯದಿಂದ ವಿದ್ಯುತ್ ಸಂಚರಿಸಿದಂತಾಗಿ ಮತ್ತೆ ಮೌನದ ಬೊಂಬೆಯಾಗಿ ನಿಂತಿದ್ದಳು.”ನಿಂಗೆ ಕೇಳ್ತಿರೋದು ತಾಳಿ ಯಾರ‍್ದು ಅಂತ?”” ನೀ…….ಮ್ಮ…….ದೆ……. ! ”  ಎಂದಳು ಮೆಲ್ಲಗೆ.”ಏನೂ ನಾಚ್ಕಿಯಾಗಲ್ಲ ನಿಂಗೆ?” ಎಂದು ಕಪಾಳಕ್ಕೆ ಹೊಡೆದಳು. ಸುಮಂಗಲಿಯ ಕಣ್ಣಲ್ಲಿ ಕಣ್ಣೀರಿಗೇನು ಬರವಿರಲಿಲ್ಲ. ಅವು ತಾನಾಗಿಯೇ ಉದುರುತ್ತಿದ್ದವು.”ಏನೋ! ದಿಕ್ಕಿಲ್ಲದವಳಂತ  ಕೆಲ್ಸ ಕೊಡಿಸಿದ್ರೆ ನನ್ ಮಗನಿಗಿ ಬ್ಯಾರೆ ಬುಟ್ಟಿಗಿ ಹಾಕ್ಕೊಂಡಿದ್ದಿಯಾ ರಂಡಿ?” ಎಂದು ರೋಷದಿಂದ ನುಡಿದಳು. “ಇಲ್ಲ, ಅತ್ತೆ !  ನಿಮ್ಮಗನೇ ಒತ್ತಾಯ…” ಎಂದು ಮುಂದುವರೆಸುತ್ತಿರುವಾಗ ಅವಳ ಮಾತು ಅರ್ಧಕ್ಕೆ ತಡೆದು”ಏನೇ ಭೋಸಡಿ !  ನನ್ ಮಗಾ ತಿಳಿಯದೆ ತಾಳಿ ಕಟ್ಟಿದ ಮಾತ್ರಕ್ಕೆ ನಾ ನಿನ್ ಅತ್ತೆ ಆದೇನೆ ಹಲ್ಕಟ್ ಚೋದಿ? ಏ !  ಮೊದ್ಲು ಆ ತಾಳಿ ಬಿಚ್ಚಿಕೊಡು” ಎಂದು ಕಣ್ಣು ಕಿಸಿದಳು.”ಇಲ್ಲ! ಇಲ್ಲ!” ನಾ ಕೊಡಲ್ಲಾ” ಅಂತ ತನ್ನೇರಡು ಕೈಗಳು ಕುತ್ತಿಗೆಗೆ ಹಿಡಿದುಕೊಂಡಳು. ರಮೇಶ ಜೋತೆಗಿದ್ದರು ಎಲ್ಲಾ ನೋಡುತ್ತ ಸುಮ್ಮನಾಗಿದ್ದ.”ಏನೋ ! ನಿಂಗೆ ಮದ್ವೆ ನಿಶ್ಚಿತ್ತಾಗಿದ್ದು ಗೊತ್ತಿಲ್ವೇನೋ? ಗೊತ್ತಿದ್ದು ಈ ದರಿದ್ರಳಿಗೆ ತಾಳಿ ಕಟ್ಕೊಂಡು ಬಂದಿಯಲ್ಲೋ?”ಅಂತ ಪಾರ್ವತಿ ಮಗನ ಭುಜ ಹಿಡಿದು ಅಲುಗಾಡಿಸಿದಳು. ಆತ ಬರಿ ಮೌನ ತಾಳಿದ. ಆಗ ಮತ್ತೆ ಪಾರ್ವತಿ  ” ಏನೋ! ಮಾತಾಡು ನಿಂಗೆ ಒಂದ್ ಲಕ್ಷ ರುಪೈ ಹುಂಡಾ ಜೋತ್ಗೆ ಒಂದು ಹಿರೋ ಹೊಂಡಾ ಐದು ತೊಲಿ ಬಂಗಾರ ವರದಕ್ಷಿಣೆ ಜೋತೆಗೆ ಸುಂದರ ಬಿ.ಇ ಮಾಡಿರೋ ಹುಡುಗಿಗೆ ಮದ್ವೆ ನಿಶ್ಚಿತ್ತಾಗಿದ್ದು ಮರೆತು ಬೀದಿಲಿ ಹೋಗೋ ಭೀಕಾರಿಗಿ ತಾಳಿ ಕಟ್ಟಿಕೊಂಡು ಬಂದಿಯಲ್ಲೋ ? ಈ ಸಮಾಜದಾಗ ನಮ್ ಮಾನ ಮರ್ಯಾದೆ ಬೀದಿ ಪಾಲಾಗೋಯಿತ್ತಲ್ಲೋ ! ನಾ ಮಂದ್ಯಾಗ ಮಾರಿ ಹ್ಯಾಂಗ ತೋರಿಸ್ಲಿ?  ಮಾತಾಡೋ ಮಾತಾಡು” ಎಂದಾಗ ರಮೇಶ ಮೌನ ಒಡೆದು “ಅಮ್ಮಾ ನನ್ ಮದ್ವೆ ನಿಶ್ಚಿತ್ತಾಗಿದ್ದು ಮರೆತು ನಾ ತಪ್ಪು ಮಾಡಬಿಟ್ಟೆ. ಕಾರಣ ಮದ್ವೆ ನಿಶ್ಚಿತ್ತಾಗಿ ವರ್ಷಗಳೇ ಉರುಳಿದರು ನೀವು ಮದ್ವೆ ಮಾಡಲಿಲ್ಲಾ? ಅದಕೆ ನಾನಿವಳಿಗೆ ತಾಳಿ ಕಟ್ಟಿರೋದು ನೀ ಬ್ಯಾಡ್ ಅಂದ್ರೆ ಈಗ್ಲೆ ಕಿತ್ಕೋತಿನಿ.” ಅಂತ ಅವಳ ಹತ್ತಿರ ಬರುವಾಗ.”ಬೇಡ ಬೇಡ ರಮೇಶ ನೀನೆ ಕಟ್ಟಿದ ತಾಳಿ ನೀನೆ ಕೀಳಬೇಡ. ನಂಗೆ ವಿಧವೆ ಮಾಡಬೇಡ. ಬಾಳ ಕೊಡ್ತಿನಂತ ಕಲ್ಯಾಣ ಬಸವೇಶ್ವರರ ಸಾಕ್ಷಿಯಾಗಿ ಮದ್ವಿಯಾಗಿದ್ದಿ. ನೀ ಹಿಂಗ್ ಮಾಡಿದ್ರೆ ಆ ದೇವ್ರು ಮೆಚ್ಚಲಿಕ್ಕಿಲ್ಲ. ನೀ ಮಾಡ್ತಿರೋದು ಅನ್ಯಾಯ ಆಗತದ್. ನನ್ ಕೊರಳು ಬರಡಾಗಿಸಬೇಡ. ನಿನ್ ಕಾಲಿಗಿ ಬಿಳ್ತಿನಿ” ಅಂತ ಗಳಗಳ ಅಳುತ್ತಿದ್ದಾಗ ಬಲವಂತವಾಗಿ ಕುತ್ತಿಗೆಗೆ ಕೈ ಹಾಕಿ ತಾಳಿ ಕಿತ್ಕೊಂಡ. ಬಳ್ಳಿಗೆ ಆಸರೆಯಾದ ಮರವೇ ಜೋರಾದ ಸುಂಟರ ಗಾಳಿಯಲ್ಲಿ ಭಯಗೊಂಡು ಭದ್ರವಾಗಿ ನಿಲ್ಲದೆ ಬುಡ ಮೆಲಾಗಿ ಬಿದ್ದಾಗ ಬಳ್ಳಿಯೂ ನುಚ್ಚು ನೂರಾಗಿ ಹರಿದು ಹೋದಂತೆ ಸುಮಂಗಲಿಯ ಬಾಳು ಹರಿದು ಹೋದಾಗ ದುಃಖದ ಸುರಿಮಳೆಯೇ ಆಕೆಯ ಕಣ್ಣಿಂದ ಧಾರಾಕಾರವಾಗಿ ಹರಿಯತೊಡಗಿತ್ತು. ಅವಳ  ರೋಧನವೂ ಮುಗಿಲು ಮುಟ್ಟಿತ್ತು.”ನೋಡು ಈ ಕ್ಷಣ ಇಲ್ಲಿಂದ ಹೊರಟು ಹೋಗು” ಎಂದು ಆತ  ಕಿರುಚಿದ. ಆ ಸಮಯ ರಾತ್ರಿ ಹನ್ನೆರಡು ಗಂಟೆ. ಹುಡುಗಿ ಎಲ್ಲಿಗೆ ಹೋದಾಳು?ಅವಳೀಗ ಆಸರೆಯಿಲ್ಲದ ಬಳ್ಳಿಯಂತೆ ಕುಸಿದಿದ್ದಾಳೆ. ಆಕೆ ಎನೇ ಹೇಳಿದ್ರು, ಕೇಳಿದ್ರು ದುಃಖ ಉಕ್ಕಿ ಅತ್ತುಬಿಟ್ರು ಅವಳ ರೋಧನ ಕೇಳುವವರಿಲ್ಲ. ತನ್ನವರು ಅನ್ನೋರು ಯಾರು ಇಲ್ಲ. ಈ ಪ್ರಪಂಚದಲ್ಲಿ ಆಕೆಗೆ. ಯಾರನ್ನ ನಂಬಿ ಏನೆಲ್ಲ ಕೊಟ್ಳೊ! ಅದಕ್ಕೆ ಪ್ರತಿಯಾಗಿ ದೊರೆತದ್ದು ಕಣ್ಣೀರೆ ಹೊರತು ಬೇರೇನು ಇಲ್ಲ.”ನೀ ಈ ಕ್ಷಣವೇ ಇಲ್ಲಿಂದ ಹೊರಟು ಹೋಗು. ಬೆಳಗಾದ್ರೆ ನಿಂಗೆ ಒಳ್ಳೆದಲ್ಲ.” ಅಂತ ಮನೆ ಹೊರಗೆ ನೂಕಿ ಬಾಗಿಲು ಹಾಕಿದ.”ನೋಡ ರಮೇಶ, ನೀ ನಂಗ್ ಮೋಸ ಮಾಡಬಾರದಾಗಿತ್ತು. ಮಾಡಿದ್ದಿ ಪರವಾಗಿಲ್ಲ. ನಾ ಸಹಿಸ್ಕೋತಿನಿ. ಆದ…ರ! ನಂಗ್ ಮಾಡಿದಾಂಗ ಮತ್ತೆ ಬರೋ ಹೆಣ್ಣಿಗಿ ಮೋಸ ಮಾಡಬ್ಯಾಡ್ರಿ. ನಾ ಹೋಗ್ತಿನಿ. ನನ್ ಹೊಟ್ಟೆಲಿ ನಿನ್ ಪಿಂಡ್ ಬೇರೆ ಬೆಳಿಲಾಕ್ ಹತ್ಯಾದ. ಅದರ …. ! ನಾ ಸಾಯೋಲ್ಲ ! ರಮೇಶ, ನಾ ಸಾಯೋಲ್ಲ ! ನನ್ನ ಗರ್ಭದಲ್ಲಿರೋ… ಕೂಸಿಗಾಗಿ ಬದುಕಿ ಬಾಳ್ತಿನಿ. ಒಂದಲ್ಲ ಒಂದಿನ ಆ ಕೂಸು ನಿನಗೆ ಉತ್ರ ಹೇಳತದಽ ” ಅಂತ ಆ ಕ್ಷಣವೇ ಸುಮಂಗಲಿ ಮೂರು ತಿಂಗಳು ಗರ್ಭ ಹೊತ್ತುಕೊಂಡು ಅಲ್ಲಿಂದ ಮಾಯವಾದಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ