ಶಿವ ಸ್ವರೂಪಿ ಶ್ರೀ ಸತ್ಯ ಚಿದಂಬರ.
(ಶ್ರೀ ಶಿವ ಚಿದಂಬರ ಮಹಾ ಸ್ವಾಮಿಗಳ ಜಯಂತಿಯ ನಿಮಿತ್ತ ಈ ಕವನ
ಬಂದನೋ ಚಿದಂಬರ ಕಣ್ಮುಂದೆ ನಿಂತ ಗುರುವರ
ಭಕ್ತರ ಹೃದಯದಿ ನಿತ್ಯವು ನೆಲೆಸುವ ಸತ್ಯ ಚಿದಂಬರ.
ದೀಕ್ಷಿತ ವಂಶಜನು ಮಾರ್ತಾಂಡ ಪುತ್ರನು
ಶಿವನ ಸ್ವರೂಪನು ಲಕ್ಷ್ಮೀ ಮಾತೆಯ ಕಂದನು
ಆರ್ತರ ಮೊರೆ ಕೇಳಿ ಅವರ ಕಷ್ಟವ ಪರಿಹರಿಸಿ
ಪ್ರೀತಿಯಿಂದಲಿ ಭಕ್ತರನೆಲ್ಲಾ ಸಲಹುವ ದೇವನು
ನಮ್ಮ ಸ್ವಾಮಿ ಚಿದಂಬರನು.
ಬಹುಧಾನ್ಯ ಸಂವತ್ಸರದ ಕಾರ್ತೀಕ ಮಾಸದಲಿ
ಕೃಷ್ಣ ಪಕ್ಷದ ಷಷ್ಠಿ ತಿಥಿಯ ಸೋಮವಾರದಲಿ
ಪುಷ್ಯ ನಕ್ಷತ್ರದಲಿ ಬ್ರಹ್ಮ ನಾಮ ಯೋಗದಲಿ
ಭಕ್ತರ ಭಾಗ್ಯದ ಜ್ಯೋತಿಯಾಗಿ ಉದಿಸಿದ ಬುವಿಯಲ್ಲಿ
ಲಕ್ಷ್ಮೀ ಮಾತೆಯ ಉದರದಲಿ.
ಅಷ್ಟಮ ವರ್ಷದ ಬಾಲಕನಾಗಿ ನಿಂತನು ಎದುರಿನಲಿ
ರುದ್ರಾಕ್ಷಿ ವಿಭೂತಿ ಭೂಷಿತನಾಗಿ ಹೊಳೆಯುತಲಿ
ಬಿಲ್ವ ದಳಗಳು ಕುಸುಮಾಕ್ಷತೆಯು ಇವೆ ಬಲಗಿವಿಯಲ್ಲಿ
ಕಂಗೊಳಿಸಿದನು ಎಲ್ಲರು ಅಚ್ಚರಿ ಪಡುವ ರೀತಿಯಲಿ
ಮಿನುಗುತ ದೈವೀ ಕಳೆಯಲ್ಲಿ.
ಬಾಲ ಲೀಲೆಗಳ ತೋರಿದ ಬಾಲ ಚಿದಂಬರನು
ತನ್ನ ಲೀಲೆಯಿಂದಲಿ ಮನಸೂರೆಗೊಂಡನು
ಕಲ್ಲಿನ ಹರಳುಗಳ ಸಕ್ಕರೆಯಾಗಿಸಿ ತಿನಿಸಿದನು
ಎಲ್ಲರಿಂದಲೂ ಪೂಜೆಗೊಳ್ಳುವ ಚೆಲ್ವ ಚಿದಂಬರನು
ಮುದ್ದು ಸಾಂಬ ಚಿದಂಬರನು.
ಸತ್ತ ಎತ್ತನು ಬದುಕಿಸಿ ಜೀವವ ತುಂಬಿದ
ಮೃತ್ತಿಕೆಯಾನೆಯನು ನಡೆಸಿ ಮಹಿಮೆಯ ತೋರಿದ
ಮುತ್ತೈದೆತನವ ಕರುಣಿಸಿ ವಿಧವೆಯ ತಾ ಪೊರೆದ
ನಿತ್ಯವು ಭಕ್ತರ ಮನದಲಿ ವಾಸಿಪ ಸತ್ಯ ಚಿದಂಬರನು
ಶ್ರೀ ಸತ್ಯ ಚಿದಂಬರನು.
ಕರುಣಾಸಾಗರನೇ ಸರಸ್ವತಿ ಸಾವಿತ್ರೀಶನೇ
ಮುರಗೋಡದಲಿ ಜನಿಸಿ ಕೆಂಗೇರಿಯಲಿ ನಿಂತವನೇ
ಕರದಿ ಕಮಂಡಲ ಪಿಡಿದು ಅಭಯವ ನೀಡುವ ಪರಶಿವನೇ
ಪರಮ ಪವಿತ್ರೌದುಂಬರವಾಸನ ಪಾದಕೆ ವಂದನೆ
ನಮ್ಮಯ ಭಕ್ತಿ ಸಮರ್ಪಣೆ.
– ಜಿ.ಎಸ್.ಗಾಯತ್ರಿ
ಶಿಕ್ಷಕಿ ಬಾಪೂಜಿ ಶಾಲೆ
ಹರಿಹರ.
(ಶ್ರೀ ಶಿವ ಚಿದಂಬರ ಮಹಾ ಸ್ವಾಮಿಗಳ ಜಯಂತಿಯ ನಿಮಿತ್ತ ಈ ಕವನ )