Oplus_131072

ಹುಡುಬಿ ಸರ್ಕಲ್‌ನಲ್ಲಿ ಒಂದು ರಾತ್ರಿ.

 

ದಿನಾ ರಾತ್ರಿ ಒಂಭತ್ತಕ್ಕೆ ಬರಬೇಕಿದ್ದ ಬಸ್ಸು ಹನ್ನೊಂದಾದರೂ ಅದರ ಸುಳಿವಿರಲಿಲ್ಲ. ಬಸ್ಸಿಗಾಗಿ ಕಾಯುತ್ತಿರುವುದು ಆ ಸರ್ಕಲ್‌ನಲ್ಲಿ ನನ್ನನ್ನೂ ಬಿಟ್ರೆ ಇನ್ಯಾರು  ಇರ‍್ಲಿಲ್ಲ. ಕಾಲೇಜ್ ವಿದ್ಯಾರ್ಥಿಯಾದ ನನ್ನಲ್ಲಿ ‘ಬಸ್‌ಪಾಸ್’ ಇದ್ದಿದ್ದರಿಂದ ಬಸ್ಸಿಗಾಗಿ ಕಾಯುವುದು
ಅನಿವಾರ್ಯವಾಗಿತ್ತು. ಹೊಟ್ಟೆ ತಾಳ ಹಾಕುತ್ತಿರುವುದರಿಂದ  ಬೇಗ ಮನೆ ಸೇರೋಣವೆಂದರೆ ಯಾವ ವಾಹನವು ಕತ್ತಲೆಯನ್ನು ಸೀಳಿ ಮುಂದೆ ಬರುತ್ತಿರಲಿಲ್ಲ. ಈ ಹುಡುಬಿ ಸರ್ಕಲ್ಲೆ ಹೀಗೆ ರಾತ್ರಿ ಒಂಭತ್ತರ ನಂತರ ಭಣಭಣ ಅನ್ನುತ್ತದೆ. ಇನ್ನೂ ನಮ್ಮೂರಿಗೆ ಹೋಗಬೇಕಾದ್ರೆ ಸರ್ಕಾರಿ ಬಸ್ಸೇ ಗತಿ.
ಬಸ್ಸಿಗಾಗಿ ಕಾದು ಕಾದು ದೇಹ ದಣಿದು ಮನಸ್ಸು ಬೇಸರಗೊಂಡಿದ್ದ ಸಮಯದಲ್ಲಿ ಬೀದಿ ದೀಪಗಳು ಆರಿ  ಕತ್ತಲು ಆವರಿಸಿತ್ತು. ಕೃಷ್ಣ ಪಕ್ಷದ ತೃಯೋದಶಿ ದಿನವಾಗಿದ್ದರಿಂದ ಕತ್ತಲಲ್ಲಿ ಕಣ್ಣಿದ್ದು ಕುರುಡನಂತೆ ಸುಮ್ಮನೆ ನಿಂತು “ಇಲ್ಲಿಂದ ನಮ್ಮೂರಿಗೆ ನಡೆದುಕೊಂಡು ಹೋಗಬೇಕಾದ್ರೆ 6 ಕಿ.ಮೀ. ದೂರವಿದೆ. ಹೋಗಬಹುದು. ಕತ್ತಲು ಬೇರೆ. ಕತ್ತಲಿದ್ದರೂ ಪರವಾಗಿಲ್ಲ. ಆದ್ರೆ ರಸ್ತೆಲಿ ತಗ್ಗುಗಳಿಗೇನು ಕೊರತೆಯಿಲ್ಲ. ಬೆಳ್ಳಿಗ್ಗೆ ನಡೆಯೋದಕ್ಕೆ ಕಷ್ಟವಾಗಿರೋ ದಾರಿಯಲ್ಲಿ ರಾತ್ರಿ ನಡೆಯುವುದೇ? ಬೆಳ್ಳಿಗ್ಗೆ ನೋಡಿದ ಬಾವಿಗೆ ರಾತ್ರಿ ಬಿದ್ದಂತೆ ಆಗಬಾರದು ಅಲ್ವೇ? ಕೈಯಲ್ಲಿ ಟಾರ್ಚ್ ಬೇರೆ ಇಲ್ಲ. ಈ ಹೊತ್ತಿನಲ್ಲಿ ಅಪರಿಚಿತರ ಮನೆಗ್ಹೋಗಿ ಕೇಳಿದರೆ ಅಷ್ಟು ಸಲಿಸಾಗಿ ಟಾರ್ಚ್ ಕೊಡುವರೇ? ಛೇ! ಛೇ! ಇಷ್ಟೊತ್ತಿನಲ್ಲಿ ಅಪರಿಚಿತರ ಮನೆಗ್ಹೋಗಿದರೆ ನೋಡಿದೋರು ‘ಕಳ್ಳ” ಅಂದಾರು. ಬೇಡ, ಬೇಡ,” ಅಂತ ನನ್ನಲ್ಲೆ ನಾನು ನಿರ್ಧರಿಸಿಕೊಂಡೆ. ಕಾರಣ ಹುಡುಬಿಯಲ್ಲಿ ಕಳ್ಳತನದ ಹಾವಳಿ ನಡೆದು ಹೋಗಿದ್ದಕ್ಕೆ ಸಾಕಷ್ಟು ಉದಾಹರಣೆಗಳಿದ್ದವು.
ಬೀದಿ ದೀಪಗಳು ಒಮ್ಮೆಲೆ ಜಗ್ಗನೆ ಹೊತ್ತಿಕೊಂಡವು. ಬೆಳಕು ಸರ್ಕಲ್ ತುಂಬೆಲ್ಲ ಆವರಸಿಕೊಂಡಿತ್ತು. ಆ ಬೆಳಕಿನಲ್ಲಿ ದಕ್ಷಿಣದ ಕಡೆಗೆ ಸುಂದರ ಸ್ತ್ರೀಯೊಬ್ಬಳು ಮೋಹಿನಿಯಂತೆ ಬರತೊಡಗಿದಳು. “ಈ ಹೊತ್ತಿನಲ್ಲಿ ಇವಳ್ಯಾರು ವೇಶ್ಯೆ ಇರಬಹುದೇ?
ರಾತ್ರಿ ರಾಣಿಯರಂದ್ರೆ ಇವರೇನಾ?” ಅನ್ನೋದು ನನ್ನ ಕಲ್ಪನೆಯಾಗಿತ್ತು. ಆಕೆ ಪೂರ್ವದ ಸಂಧಿಯಿಂದ ಪಶ್ಚಿಮದ ಡಾಂಬರ್ ರೋಡಿಗೆ ಸೇರಿಕೊಂಡು ಬಲಕ್ಕೆ ತಿರುಗಿ, ಉತ್ತರದಲ್ಲಿ ನಿಂತ ನನ್ನೆಡೆಗೆ ಬರತೊಡಗಿದಳು. ಬೀದಿ ನಾಯಿಗಳು ಒಂದೇ ಸವನೆ ಬೋಗುಳ ತೊಡಗಿದವು. ಆದರೂ ಆಕೆ ಅವುಗಳಿಗೆ ಬೈಯದೆ ಮೌನವಾಗಿ ನಡೆದು ಬರುತ್ತಿದ್ದಳು. ಡಾಂಬರ್ ರಸ್ತೆಯ ಮೇಲೆ ಮೆಲ್ಲ ಮೆಲ್ಲನೆ ಹೆಜ್ಜೆ ಇಟ್ಟು ಬರುವಾಗ ಕಾಲಲ್ಲಿಯ ಗೆಜ್ಜೆನಾದ ‘ಗಿಲ್ ಗಿಲ್” ಅಂತ ಕೇಳಿಸುತ್ತಿತ್ತು. ಅವಳು ನೋಡಲು ಸುಂದರವಾಗಿದ್ದಳು. ವಯಸ್ಸು ಇಪ್ಪತ್ತೆರಡರೊಳಗಿರಬೇಕು. ಸಾಮಾನ್ಯ ಸ್ತ್ರೀ ಯಂತೆ ಕಾಣುತ್ತಿದ್ದ ಅವಳ ಮುಖದಲ್ಲಿ ನೀರಾಸೆಯ ಭಾವ ಎದ್ದು ಕಾಣತೊಡಗಿತ್ತು. ಬಹುಶಃ ಯಾವುದಾದರೂ ಗಿರಾಕಿಗಾಗಿ ಹುಡುಕಾಡುತ್ತಿರಬೇಕು ಅಂದುಕೊಂಡಿದ್ದೆ.
ಆಕೆ ಮುಂದೆ ಬರುತ್ತಿದ್ದಾಗ ನನ್ನೆದೆ ‘ಡವಡವ’ ಹೊಡೆದುಕೊಳ್ಳತೊಡಗಿತ್ತು. ಅವಳಾಗಿಯೇ ಏನಾದರೂ ಕೇಳಬಹುದು ಅಂದುಕೊಂಡಿದ್ದೆ. ಏನೂ ಕೇಳಲಿಲ್ಲ.  ಬರಿ !  ಮೌನದಲ್ಲಿ ನನ್ನಂತೆ ನಿಂತು ಬಿಟ್ಟಳು. ಅವಳ ಹಾವಭಾವಗಳು ನನ್ನ ಕಳ್ಳ ದೃಷ್ಟಿಗೆ ಬಲಿಯಾಗತೊಡಗಿದವು. ಮನಸ್ಸಿನಲ್ಲಿ ಬಿರುಗಾಳಿ ಎದ್ದು ದಾಂಧಲೆ ಮಾಡತೊಡಗಿತ್ತು. ಅವಳ ಯೌವನ ರೂಪ ಕಂಡು ನನ್ನೊಳಗಿನವ ಹುಚ್ಚನಂತೆ  ವರ್ತಿಸತೊಡಗಿದ. ಆದರೂ ಅವನನ್ನೂ ಹಿಡಿತದಲ್ಲಿ ಇಟ್ಟುಕೊಂಡಿದ್ದೆ.
ಬೇಸರ ಮತ್ತು ನೀರಾಸೆಯೆ ಮಧ್ಯೆ ಸಮಯದ ಕುದುರೆ ಓಡತೊಡಗಿತ್ತು. ಆ ಹೊತ್ತಿನಲ್ಲಿ ಪಶ್ಚಿಮದ ಕತ್ತಲಿನಿಂದ ಆ ಸರ್ಕಲಿನ ಬೆಳಕಿನೊಳಗೆ ಕರಿ ಕಂಬಳಿ ಹೊದ್ದುಕೊಂಡು ವಯಸ್ಕನೊಬ್ಬ ಅವಳ ಮುಂದೆ ಹಾದು ಹೋಗುತ್ತಿದ್ದ. ಮಾಗಿಯ ಚಳಿ ಇರುವುದರಿಂದ ಆತ ಮೈಯೆಲ್ಲ ಕಂಬಳಿಯಿಂದ ಮುಚ್ಚಿಕೊಂಡಂತ್ತಿತ್ತು. ಆತ ಅವಳಿರುವಲ್ಲಿಗೆ ಹೋಗಿ ಗಕ್ಕನೆ ನಿಂತುಬಿಟ್ಟ. ಆಕೆ ಮನದಲ್ಲಿ ಅಲ್ಲೋಲ ಕಲ್ಲೋಲ ಆಗಿರಬೇಕು. ಸ್ವಲ್ಪ ಹಿಂದೆ ಸರಿದು ವಿದ್ಯುತ್ ದೀಪದ ಕಂಬದ ಪಕ್ಕ ನಿಂತು ಮುಖ ಕೆಳಗೆ ಮಾಡಿ ಸೇರಗಿನಿಂದ ತನ್ನೆದೆ ಮುಚ್ಚಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಿದ್ದಳು. ಆ ಅಸಾಮಿ ಅಕ್ಕಪಕ್ಕ ಯಾರಾದರೂ ಇದ್ದಾರೋ ಇಲ್ಲವೋ ಅನ್ನುವಂತೆ ಅಷ್ಟ
ದಿಕ್ಕುಗಳೆಲ್ಲ ಒಮ್ಮೆ ಗೋಣ ತಿರುವಿ ನೋಡಿದ. ಅವನ ದೃಷ್ಟಿಯಲ್ಲಿ ನಾನು ಸೆರೆಯಾದೆ.
“ಏನಮ್ಮಾ! ಈ ಹೊತ್ತಿನಲ್ಲಿ ನೀ ಯಾರು? ಇಲ್ಲಿ ಯಾಕೆ ನಿಂತಿದ್ದಿ?” ಅಂತ ಕೇಳಿದ.
“ಅಣ್ಣಾವ್ರೆ !ನಾ ರಾಜಮಂಡ್ರಿಗಿ ಹೋಗ್ಬೇಕು. ಈಗ ಯಾವ್ದೂ ಬಸ್ ಇಲ್ಲೇನು?” ಅಂತ ಅಳುಕು ಧ್ವನಿಯಲ್ಲಿ ಕೇಳಿದಳು.
“ಏನವ್ವ! ತಂಗಿ ಈ ಹೊತ್ತನಲ್ಲಿ ಹ್ಯಾಂಗ್ ಹೋಗ್ತಾವ, ಏನಿದ್ರೂ ರಾತ್ರಿ ಒಂಭತ್ತರೊಳಗೆ ಹೋಗ್ತಾವೆ- ಬರ‍್ತಾವೆ. ನಿನ್ಯಾಕ್ ಇಲ್ಲಿ ಸಿಕ್ಕ ಹಾಕೊಂಡಿದ್ದಿ? ಈ ಸರ್ಖಲ್‌ದಾಗಿನ ಜನ ಸರಿ ಇಲ್ಲ. ರಾತ್ರಿ ಹೆಣ್ಣು ಈ ರೀತಿ ಒಂಟೆಯಾಗಿ ತಿರುಗುವುದರಿಂದ ನೋಡಿದವ್ರು ಸುಮ್ಮನೆ ಬಿಡ್ತಾರ? ಮೊದ್ಲೆ ಇದು ಹುಡುಬಿ ಎಡವಟ್ಟಾದ್ರೆ ಹಡಬಿ ಆಗೋದು ಸಹಜ” ಅಂದಾಗ ಅವಳು ಅಳುವುದಕ್ಕೆ ಸುರು ಮಾಡಿದಳು. ಅವಳ ಅಳುವಿನ ಶಬ್ದ ಕೇಳಿದ ಅಕ್ಕಪಕ್ಕದ ಮನೆಯ ಜನ ಸರ್ಕಲಿನೆಡೆಗೆ ಬರತೊಡಗಿದರು.
“ಯಾರವ್ವ , ನೀನು ಯಾಕ್ ಅಳುತ್ತಿದ್ದಿ?” ನೆರೆದ ಜನರಲ್ಲಿ ಒಬ್ಬ ಕೇಳಿದ.
“ನಮ್ಮೂರು ರಾಜಮಂಡ್ರಿ ಅದಾರಿ ಯಣ್ಣಾ!” ಅಂತ ಹೇಳಿ ಮತ್ತೆ ಬಿಕ್ಕುತ್ತಿದ್ದಳು.
“ಇರ‍್ಲಿ ! ಇಲ್ಲಿಗ್ಯಾಕ್‌ ಬಂದಿದ್ದಿ? ಏನ್ ದಂಧಾ ಮಾಡ್ತಿ” ಅಂತ ಮತ್ತೊಬ್ಬ ಪ್ರಶ್ನಿಸಿದ.
“ಇಂಥವರೆಲ್ಲ ಏನ್ ದಂಧಾ ಮಾಡ್ತಾರೆ . ಬೀದಿ ಸೂಳೇರು ! ರಾತ್ರಿಯಾದ್ರೆ ಸರ್ಕಲ್‌ ನ್ಯಾಗೆ ಗಿರಾಕಿಗಾಗಿ ಹುಡುಕಾಡುತ್ತಾರೆ. ಇಂಥಹ ಬೀದಿ ಬಸ್ವಿಯರಿಂದ್ಲೆ ನಮ್ ಸಂಸ್ಕೃತಿ ಹಾಳಾಗಿ ‘ಏಡ್ಸ್’ ಮಹಾಮಾರಿ ಬರ‍್ತಿರೋದು” ಅಂತ ಮತ್ತೊಬ್ಬ ತಾನು ಸುಸಂಸ್ಕೃತ ಎನ್ನುವಂತೆ ಮಾತಾಡ್ತಿದ್ದ.
ಈ ರೀತಿ ಜನರಡುವ ಮಾತು ಕೇಳಿ ನೊಂದು ಹೋದ ಅವಳು ಜೋರಾಗಿ ಅಳತೊಡಗಿದಳು. ಆಗ ಜನರೆಲ್ಲ ಮೌನ ತಾಳಿದರು. “ನಿಮ್ಮನೆಯಲ್ಲಿ ನಿಮ್ ಅಕ್ಕತಂಗಿಯರಿಗೇನಾದರೂ ಈ ರೀತಿ ಆದ್ರೆ ಹಿಂಗೆಲ್ಲಾ ಮಾತಾಡ್ತಿದ್ದಿರಾ ? ನಂಗೆ ನನ್ನ ಗಂಡನ ಕಾಟ ಜಾಸ್ತಿಯಾಗಿದೆ. ದಿನಾ ಕುಡ್ದು ವರದಕ್ಷಿಣೆ ತಗೊಂಡ ಬಾ ಅಂತ ಹೊಡಿತ್ತಾನೆ. ನನ್ನ ತವರು ಮನೆಯವರು ಮದ್ವೆ ಮಾಡಿ ಸಾಕಷ್ಟು ಸಾಲ ಮಾಡ್ಕೊಂಡಿದ್ದಾರೆ.  ಅಂಥದರಲ್ಲಿ ಇವನ ಕಾಟ ಬೇರೆ. ಈ ಸಮಸ್ಯೆ ನನ್ ತಾಯಿ ತಂದಿಗಿ ಹೇಳಿದ್ರೆ ಎದಿ ಒಡಕೋತ್ತಾರಂತ ನಾ ಹೇಳಿಲ್ಲ. ಹೇಳಿದ್ರೂ ವಯಸ್ಸಾಗಿರೋ ಅವರು ಕೊಡುವಂತೆಯೂ ಇಲ್ಲ. ಆದ್ದರಿಂದ ನಾ ಅವನಿಗಿ ಎದಿರಾಡಿದ್ರೆ ದನಕ್ ಬಡಿದಾಂಗ ಬಡಿತ್ತಾನೆ. ಅವನ ಹೊಡೆತ ಎಷ್ಟು ದಿನಾಂತ ನಾ ಸಹಿಸಿಕೊಳ್ಳಲಿ ? ನೋವು ತಾಳಲಾರದೆ ಮೊನ್ನೆ ಪೊಲೀಸ್ ಸ್ಟೇಷನಕ್ಕೆ ಬಂದು ಹೇಳಿದೆ. ಪೋಲಿಸ್ರು ಅವ್ನಿಗಿ ಕರೆದು ಪಿ.ಎಸ್.ಐ  ಸಾಹೇಬ್ರಿಂದ ಬುದ್ದಿ ಹೇಳಿಸಿದ್ರು. ಅವ್ರು ಕೈಯಾಗಿನ ಬಡಗಿಗಿ ಹೇದರಿ” ಆಯಿತು ಸರಿಯಾಗಿ ನೋಡಿಕೊಳ್ಳುತ್ತೆನೆ” ಅಂತ ಒಪ್ಪಿಕೊಂಡಿದ.
“ನೋಡಮ್ಮ ಮಲ್ಲಮ್ಮಾ,! ನಾವೂ ಹೇಳಿದಂತೆ ಕೇಳ್ತಿನಿ ಅಂತಿದ್ದಾನೆ. ನೀವೂ ಸರಿಯಾಗಿದ್ರೆ ನಮ್ಗೂ ಖುಷಿ. ಒಂದ್ ವೇಳೆ ಹೀಗೆ ಕುಡಿದು ಕಿರಿಕಿರಿ ಮಾಡ್ತಿದನು ಅಂದ್ರೆ ನೀ ಆವಾಗ್ಲೆ ಬಂದು ಬೀಡು. ಈ ಮಗ್ನಿಗಿ ಚೋಲೋ ಬುದ್ಧಿ ಕಲಿಸ್ತಿನಿ. ನೀ ಯೇನು ಚಿಂತೆ ಮಾಡಬ್ಯಾಡ ಹೋಗು” ಅಂತ ಹೇಳಿ ಕಳಿಸಿದರು.
ಅವತ್ತಿನಿಂದ ನಾಲ್ಕೈದು ದಿನಾ ಕುಡಿಯಲಿಲ್ಲ. ಹೊಡೆಯಲಿಲ್ಲ. ಯಾವಾಗ ಕೂಲಿ ಮಾಡಿದ ಪಗಾರ ಅವ್ನ ಕೈಗಿ ಬಂತೋ ! ಆಗ ಸುರುವಾಯಿತು ಕುಡಿಯುವುದು……….. ಹುಂಡಾ ತಗೊಂಬಾ. ನಿಮ್ಮಪ್ಪಗ್ ಹೇಳಿ ಎಡ್ಡ ತೊಲಿ ಬಂಗಾರ ಹಾಕ್ಸು” ಅಂತ ಜಗಳ  ತೆಗ್ದು ಹೊಡೆತ್ತಿದ್ದ. ಪಿ.ಎಸ್.ಐ ಸಾಹೇಬ್ರು ಹೇಳಿದ ಮಾತು ನೆನಪಾಯಿತು. ಅವನಿಂದ ಬಿಡಿಸ್ಕೊಂಡು ಪಕ್ಕದ ಮನೆ ಪಾರಕ್ಕನ ಹತ್ರ ಹತ್ತು ರುಪೈ ಇಸ್ಕೊಂಡು ರಸ್ತೆಲಿ ಬರೋ ಬಸ್ಸಿಗೆ ಕೈ ಮಾಡಿ ಈ ಹುಡುಬಿಗಿ ಬಂದೆ. ಪೋಲಿಸ್ ಸ್ಟೇಷನದಾಗ ಬಂದ ಹೇಳಿದ್ರ “ಸಾಹೇಬ್ರು ಇಲ್ಲ. ನಾಳೆ ಬಾ” ಅಂತ ಅಂದ್ರು.ಅದಕ್ ವಾಪಸ್ಸು ಹೋಗ್ಬೇಕಂತ ಇಲ್ಲಿ ನಿಂತಿನಿ. ಯಾವುದೂ ಗಾಡಿ ಸಿಗವಲ್ಲವು. ಅಂತ ಕಣ್ಣೀರು ಉದರಿಸತೊಡಗಿದಳು.
“ಮನೆಯಲ್ಲಿ ಮೂರ್ ತಿಂಗ್ಳು ಹಸುಗೂಸಿದೆ. ಹೇಗಾದರೂ ಆಗಲಿ ನಾ ಮನೆಗೆ ಹೋಗಬೇಕು. ಅದಕ್ಕೆ ಇಷ್ಟತ್ತಾದ್ದರೂ ಈ ಬೀದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇನೆ. ಹೋಗುವುದಕ್ಕೆ ಯಾವುದು ವಾಹನ ಇಲ್ಲ. ಅಂದಾಗ ನನ್ನ ಕೂಸಿನ ನೆಂಪಾಗಿ ಸುಮ್ಮನೆ ಬಂದೆನಲ್ಲಾ” ಅಂತ ಪಶ್ಚಾತಾಪ ಪಡ್ತದ್ದೀನಿ” ಅಂತ ಬಿಕ್ಕುವುದು ಮುಂದುವರೆಸಿದಳು.
ಇದಕ್ಕೂ ಮೊದ್ಲು ನಾನವಳ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿದ್ದೆ. ಈಗವಳ ಪರಿಸ್ಥಿತಿ ಕೇಳಿ ಕರುಳು ‘ಚುರ್” ಎಂದಿತ್ತು.
“ಇರ‍್ಲಿ ! ಅಳಬೇಡ್ ಆ ಕೂಸಿಗೇನು ಆಗಲ್ಲ. ಮನೆಯಲ್ಲಿ ನಿನ್ ಗಂಡ ಇದ್ರೆ  ನೋಡ್ಕೋತಾನೆ. ನೀ ಇವತ್ತೊಂದು ರಾತ್ರಿ ಗಂಗಾಮಾಯಿ ಹೋಟಲ್‌ ದಾಗ ಇರು. ಹೋಟೆಲ್‌ನಲ್ಲಿ ಗಂಗಾಮಾಯಿಗಿ ಬಿಟ್ರೆ ಬೇರೆ ಯಾರು ಇರಲ್ಲ. ನಿನಗೆ ಎಲ್ಲಾ ವ್ಯವಸ್ಥೆ
ಮಾಡಿಸ್ತಿವಿ. ಗಂಗಾಮಾಯಿ ತುಂಬಾ ಒಳ್ಳೆಯವಳು. ಹೋಗಿ ಮಲಗಿಕೊಂಡು ಮುಂಜಾನೆ ಎದ್ದು ಹೋಗು”ಅಂತ ಮತ್ತೊಬ್ಬ ಗಂಗಜ್ಜಿಯ ಸಹಾಯ ಪಡೆಯಲು ಹೇಳುತ್ತಿದ್ದ. ಆದ್ರ ಆ ಗಂಗಜ್ಜಿ ಎಂಥವಳು?
ಅವಳು ನಿಜವಾಗಲೂ ಒಳ್ಳೆಯವಳೆ ? ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಹೊಳೆಯಲಿಲ್ಲ.
“ಅಣ್ಣಾವ್ರೆ! ನನ್ ಕೂಸು ತುಂಬಾ ಎಳಿಕ್ ಅದರ‍್ರೀ! ಅದ್ಕೆ ಬಿಟ್ಟಿರಲಾಕ್ ಆಗಲ್ಲಾರಿ ! ಮತ್ತೆ ಇಷ್ಟೊತ್ತನಕ ಕೂಸು ಹಸಿದಿರತದ್ರಿ! ನಿಮ್ಮಗ ಪುಣ್ಯ ಬರ‍್ತಾದೆ. ಹೇಗಾದ್ರೂ ಮಾಡ್ರಿ ಎನಾದ್ರೂ ಮಾಡ್ರಿ ನಾ ನಿಮ್ಮ ಕಾಲಿಗಿ ಬೀಳ್ತಿನಿ. ನಂಗ್ ಬಿಟ್ ಬರ‍್ಲಾಕ್ ಯಾವದಾದ್ರೂ ಅಟೋ ವ್ಯವಸ್ಥಾ ಮಾಡ್ರಿ; ನಾ ನಿಮ್ಮ ದುಡ್ಡು ನಮ್ಮೂರಿಗಿ ಹ್ವಾದ ಮ್ಯಾಲ್ ಕೊಡ್ತಿನಿ” ಅಂತ ಅವಳು ಕರುವಿಗೆ ಹಂಬಲಿಸುವಂತೆ ಚಡಪಡಿಸಿದಳು.
ಆ ಸಮಯದಲ್ಲಿ ಯಾವುದೂ ಅಟೋಗಳಿರಲಿಲ್ಲ. ಈ ಊರಲ್ಲಿ ಯಾರ ಹತ್ರನೂ ಜೀಪ ಅಟೋ ವಾಹನಗಳಿದ್ದಂತೆ ತೋರಲಿಲ್ಲ. ಹಾಗಾಗಿ ಅಲ್ಲಿದ್ದವರೆಲ್ಲ. ಅಸಾಹಾಯಕರಾಗಿ  ಬಿಟ್ಟಿದರು. ಜನ ಮಾತ್ರ ಒಂಟೆ ಹೆಣ್ಣಿನ ತೊಳಲಾಟ ನೋಡುಗರಂತೆ ಜಮಾಯಿಸತೊಡಗಿದರು. ಆಕೆ ಮಾತ್ರ ಎಲ್ಲರೆದುರು ಕಣ್ಣೀರು ಸುರಿಸುತ್ತಿದ್ದಳು. ಆಗ ಹಿಂದಿನಿಂದ ವಾಹನವೊಂದು ಕತ್ತಲು ಸೀಳಿ ಬರತೊಡಗಿತ್ತು. ಜನ ಅದರ ಬೆಳಕಿನೆಡೆಗೆ ದೃಷ್ಟಿ ಬೀರಿದರು. ಅದು ಹತ್ತಿರ ಹತ್ತಿರ ಬರತೊಡಗಿತ್ತು.
“ಹೇಗಾದರೂ ಮಾಡಿ ಆ ವಾಹನಕ್ಕೆ ನಿಲ್ಲಿಸಬೇಕು. ಒಯ್ಯಲಿಲ್ಲ ಅಂದ್ರು ಅವ್ರ ಕೈ ಕಾಲ್ ಬಿದ್ದಿ ಆದ್ರೂ ಕೂಡ ಆಕೆಗೆ ಕಳಿಸ್ಬೇಕು. ಪಾಪ! ಕೂಸಿನ ತಾಯಿ ಹಳಾ” ಅಂತ ಎಲ್ಲರೂ ರಸ್ತೆ ತುಂಬಾ ನಿಂತು ಕೈ ಮಾಡ್ರಿ ಅವಾ ನಿಲ್ಸೆ ನಿಲ್ಲಿಸ್ತಾನೆ ಅಂತ ಕರಿ ಕಂಬಳಿಯ ವ್ಯಕ್ತಿ ನುಡಿದ ” ಆಗ ಜನ ” ಹೌದು, ಹೌದು.” ಅಂತ ಕೈ ಕೈ ಹಿಡಿದು ರಸ್ತೆಗೆ ಅಡ್ಡ ನಿಂತು ಬಿಟ್ರು. . ವಾಹನದ ವೇಗ ಕಡಿಮೆಯಾಗಿ ಹತ್ತಿರ ಬರುತ್ತಿದ್ದಂತೆ ಅದು ಕಾರು, ಜೀಪು, ಬಸ್ಸು  ಆಗಿರಲಿಲ್ಲ. ಅದು ಹೀರೋ ಹೊಂಡಾವೆಂದು ತಿಳಿಯಿತು. ಜನರ ಗುಂಪು ಗದ್ದಲ ಕಂಡ ದ್ವಿಚಕ್ರ ಸವಾರನು ಜನರೆಲ್ಲರಿಗೂ ಪರಿಚಯಸ್ಥ  ಪೋಲಿಸನಾಗಿದ್ದ .
ಲಂಕಾಧಿಪತಿ ರಾವಣನು ಆಕಾಶ ಮಾರ್ಗವಾಗಿ ಪುಷ್ಪಕ ವಿಮಾನದಲ್ಲಿ ಕುಳಿತು ಸೀತಾದೇವಿ ಕಂಡೊಡನೆ ತಂದು ಧರೆಯ ಮೇಲೆ ಮೆಲ್ಲಗೆ ನಿಲ್ಲಿಸುವಂತೆ ಆ ಹೀರೋ ಹೊಂಡಾ ನಿಧಾನವಾಗಿ ಜನರ ಗುಂಪಿನ ಮಧ್ಯ ತಂದು ನಿಲ್ಲಿಸಿದ
“ಏನೂ, ಯಾಕಿಷ್ಟೇಲ್ಲ ಜನ ನೆರದ್ದಿದ್ದೀರಿ?” ಅಂತ ಕೇಳಿ ಆ ಸ್ತ್ರೀಯ ಕಡೆಗೆ ಮುಖ ಮಾಡಿ “ಏನಮ್ಮಾ! ನೀನಿನ್ನೂ ಊರಿಗಿ ಹೋಗಿಲ್ವೇನು? ಅಂತ ಪ್ರಶ್ನಿಸಿದ.
“ಇಲ್ರಿ! ಸಾಹೇಬ್ರೆ ಹಿನ್ನಾ ಯಾವ್ದೂ ಗಾಡಿಗೋಳ್ ಬರ‍್ಲಿಲ್ಲ” ಅಂತ ಕಣ್ಣೀರು ಕಪಾಳಕ್ಕೆ ಜಾರಿಸಿದಳು.
“ನೋಡಮ್ಮಾ, ಇಷ್ಟೊತ್ತಿನಲ್ಲಿ ಯಾರು ಹೆಣ್ ಮಕ್ಳು ಪೊಲೀಸ್ ಸ್ಟೇಷನಕ್ ಬರಭಾರದು. ಅದೇನಿದ್ರು ಮುಂಜಾನೆ ಬರಬೇಕು. ಈಗ ಹ್ಯಾಂಗ ಮಾಡ್ತಿ”? ಇಲ್ಲೆ ಯಾರಾದ್ರೂ ಬೀಗ್ರೂ ಇದ್ರೆ ಇದ್ದು ಮುಂಜಾನೆ ಹೋಗಿ ಬಿಡು. ಅಂತ ಪೋಲಿಸ್ ಹೇಳತೊಡಗಿದಾಗ ಜನ ಆತನ ಸುತ್ತುವರೆದು ಮುಗ್ಧರಂತೆ ಮೌನವಾಗಿ ನಿಂತಿದ್ದರು. ಆಗ ಅದರಲ್ಲೊಬ್ಬ, “ಸರ್! ತಾವೀಗ ಎಲ್ಲಿಗಿ ಹೋಗ್ತಿದ್ದಿರಿ”ಅಂತ ಕೇಳಿದ.
“ಈಗ ನನ್ನ ಡಿವಟಿ ಮುಗಿತು. ನಾನೀಗ ನಮ್ಮೂರಿಗೆ ಹುಮನಾಬಾದಿಗೆ ಹೋಗ್ತಿದ್ದಿನಿ
” ಅಂತ ಹೀರೋ ಹೊಂಡಾ ಸ್ಟಾಟ್ ಮಾಡಿದ.
“ಅರೆ ! ಸಾಬ್ರೆ ! ಹ್ಯಾಂಗೂ ಹುಮನಾಬಾದಿಗೆ ನಡೆದಿದ್ದಿರಿ. ಹಾಂಗೆ ಈಕಿಗಿ ದಾರಿಯಲ್ಲಿ ಇರೋ ರಾಜಮಂಡ್ರಿಗೆ ಬಿಡ್ರಿ. ಪಾಪ್! ಹೆಣ್ ಮಗಳು ಮೂರ ತಿಂಗ್ಳ ಕೂಸಿಗಿ ಬೇರೆ ಬಿಟ್ ಬಂದಾಳಂತೆ ಜರಾ ಒಯಿದು ಪುಣ್ಯ ಕಟ್ಟಕೊಳ್ರಿ!” ಅಂತ ಕರಿ ಕಂಬಳಿ ಮುದುಕ ಹೇಳಿದಾಗ “ಹೂನ್ರಿ” ಸಾಬ್ರೆ ನಾ ನಿಮ್ ಕಾಲಿಗಿ ಬೀಳ್ತಿನಿ. ಅಷ್ಟು ಮಾಡಿ ಪುಣ್ಯ ಕಟ್ಕೋಳ್ರಿ ! ಮನ್ಯಾಗ ಕೂಸ ಸಣ್ಣೂದ್ಽ ಅದಾರಿ. ಅದು ಹಸಿದಿರುತ್ತದ” ಅಂತ ಆತನ ಸಹಾಯ ಕೇಳಿ ಅಳತೊಡಗಿದಳು.
“ಹೂಂ, ಹಾಂಗಂದ್ರೆ ಕೂಡು” ಅಂತ ಅಪ್ಪಣೆ ಮಾಡಿದಾಗ ಅವಳ ಮುಖದಲ್ಲಿ ಒಮ್ಮೆ ಬದ್ಲಾವಣೆ ಕಂಡು ಬಂದಿತ್ತು. ಅಳುವುದು ನಿಲ್ಲಿಸಿ ಕಣ್ಣೀರು ತನ್ ಸೆರಗಿನಿಂದ ಒರೆಸಿಕೊಂಡು ಮಗುವಿನ  ಹಂಬಲ ಅತಿಯಾಗಿ ಸಂತಸದಿಂದ ಪೋಲಿಸ್‌ನ ಹಿಂದೆ ಕುಳಿತುಕೊಳ್ಳುವಾಗ ಅವಳ ಎದೆಯ ಸ್ತನಗಳು ಆತನ ಬೆನ್ನಿಗೆ ಸ್ಪರ್ಶ ಮಾಡತೊಡಗಿದವು. ಅದು ಆಕೆಗೆ ಯಾವುದೂ ಅರಿವಿರಲಿಲ್ಲ. ಮನೆ ಸೇರುವ ತವಕ ಮಾತ್ರ ಅವಳಲ್ಲಿ ಎದ್ದು ಕಾಣತೊಡಗಿತ್ತು. ಪೊಲೀಸು ಹೀರೋ ಹೋಂಡಾದ ಕಿಕ್ ಹೊಡೆದು ಸ್ಟಾಟ್ ಮಾಡಿ ಫಸ್ಟಗೇರ್ ಹಾಕಿ ಬರ‍್ತಿನಿ ಬೈ ! ” ಅಂತ ನಿಂತ ಜನರೆಡೆಗೆ ಹೇಳುತ್ತಾ ಅವಳನ್ನು ಹೊತ್ತುಕೊಂಡು ರಾವಣ ನಗೆ ನಕ್ಕು ಕತ್ತಲೆಯನ್ನು ಸೀಳಿಕೊಂಡು ಓಡತೊಡಗಿದ. ಅಲ್ಲಿದ್ದ ಜನರು ಮಾತ್ರ ಇದೊಂದು ದೊಡ್ಡ ಸಾಧನೆ ಮಾಡಿದಂತೆ ಹೆಮ್ಮೆಯಿಂದ ತಲೆ ಅಲ್ಲಾಡಿಸಿ ಕೈ ಬೀಸಿದರು. ಆದರೆ ಮಧ್ಯರಾತ್ರಿಯಲ್ಲಿ ಒಂದು ಹೆಣ್ಣಿಗೆ ಒಂದು ಗಂಡು ಒಯ್ಯುವುದೆಂದರೆ ಏನು ಅರ್ಥ? ಈ ಜನರಿಗೇಕೆ ತಿಳಿಯಲಿಲ್ಲ? ಎಂದು ಯೋಚಿಸುತ್ತಿದ್ದೆ. ಅಷ್ಟೋತ್ತಿನಲ್ಲಿ ಕೈ ಗಡಿಯಾರ ನೋಡಿಕೊಂಡೆ.  ಹನ್ನೊಂದು ಗಂಟೆ. ರಾತ್ರಿ ಒಂಬತ್ತಕ್ಕೆ ಬರಬೇಕಾದ  ನಮ್ಮೂರ ಬಸ್ಸು ಈಗ  ಬರಬೇಕೆ ? ನಾನು ಇದೆಲ್ಲ ಮರೆತು  ಬಸ್ಸು ಹತ್ತಿದೆ.

     – ಮಚ್ಚೇಂದ್ರ ಪಿ.ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ