ಬದುಕಲು ಬೇಕು, ಭರವಸೆಯ ಮಾತು
ನಾವು ಸತ್ತ ನಂತರ ನಮ್ಮ ಹಣ ಬ್ಯಾಂಕಿನಲ್ಲಿ ಉಳಿಯುತ್ತದೆ. ಆದರೂ ಕೂಡ ನಾವು ಬದುಕಿದ್ದಾಗ ನಮ್ಮ ಬಳಿ ಖರ್ಚು ಮಾಡಲು ಹಣವಿರುವುದಿಲ್ಲ… ಇದರರ್ಥ ಬದುಕಿದ್ದಾಗ ನಾವು ಖರ್ಚು ಮಾಡಲು ಹಿಂಜರಿಯುತ್ತೇವೆ ಎಂದು.
ಸುಪ್ರಸಿದ್ಧ ವ್ಯಾಪಾರಸ್ಥನೊಬ್ಬ ಚೀನಾದಲ್ಲಿ ಇತ್ತೀಚೆಗೆ ಮರಣ ಹೊಂದಿದ ಆತನ ಪತ್ನಿಗೆ ಆತ ಉಳಿಸಿ ಹೋಗಿದ್ದು ಒಂದು ಪಾಯಿಂಟ್ ಒಂಬತ್ತು ಬಿಲಿಯನ್ ಡಾಲರ್ ಹಣ. ಮುಂದೆ ಆಕೆ ತನ್ನ ಮನೆಯ ಕಾರು ಚಾಲಕನನ್ನು ಮದುವೆಯಾದಳು.
ಮದುವೆಯಾದ ನಂತರ ಆತನ ಚಾಲಕ ನಾನು ನನ್ನ ಮಾಲೀಕನಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ನಾನು ಸದಾ ಅಂದುಕೊಳ್ಳುತ್ತಿದ್ದೆ,ಆದರೆ ನನ್ನ ಮಾಲೀಕ ನನಗಾಗಿ ಕೆಲಸ ಮಾಡುತ್ತಿದ್ದ ಎಂದು ನನಗೀಗ ಅರ್ಥವಾಗುತ್ತಿದೆ ಎಂದು ಹೇಳಿದ
ಬದುಕಿನ ಕ್ರೂರ ಸತ್ಯವೆಂದರೆ ನಾವು ನಮ್ಮ ಸಂಪಾದಿಸಿದ ಹಣಕ್ಕಿಂತ ಹೆಚ್ಚಿನ ಜೀವಿತವನ್ನು ಹೊಂದಿರಬೇಕು ಆದ್ದರಿಂದ ನಾವು ಒಳ್ಳೆಯ ಗಟ್ಟಿಮುಟ್ಟಾದ ಮತ್ತು ಆರೋಗ್ಯವಂತ ಶರೀರವನ್ನು ಹೊಂದಿರಬೇಕು. ಯಾರು ಯಾರಿಗಾಗಿ ಕಾರ್ಯನಿರ್ವಹಿಸುತ್ತೇವೆ ಎಂಬ ಚಿಂತೆ ಬೇಡ
ಅತ್ಯಂತ ದುಬಾರಿ ಬೆಲೆಯ ಫೋನಿನಲ್ಲಿ ಕೂಡ 70% ಆಪ್ ಗಳು ಉಪಯೋಗವಿಲ್ಲದಾಗಿರುತ್ತವೆ.
ವಿಪರೀತ ದುಬಾರಿ ಕಾರಿನಲ್ಲಿ ಕೂಡ ವೇಗ ಮತ್ತು ಗ್ಯಾಜೆಟ್ ಗಳ ಅವಶ್ಯಕತೆ ಇರುವುದಿಲ್ಲ.
ಅತ್ಯಂತ ವೈಭವೋಪೇತ ಮಹಲಿನಲ್ಲಿ ಕೂಡ ಸಾಕಷ್ಟು ಜಾಗ ಖಾಲಿಯಾಗಿಯೇ ಇರುತ್ತದೆ ಅಥವಾ ಬಳಸಲ್ಪಡುವುದಿಲ್ಲ
ಅಲಮಾರಿಯ ತುಂಬಾ ಸಾಕಷ್ಟು ಬಟ್ಟೆಗಳಿದ್ದರೂ ಧರಿಸಲು ಸಾಧ್ಯವಾಗುವುದಿಲ್ಲ.
ಕೆಲಸ ಮತ್ತು ದುಡಿಮೆಯಲ್ಲಿ ಮನುಷ್ಯ ಆತ ಖರ್ಚು ಮಾಡಲು ಸಾಧ್ಯವಿಲ್ಲದಷ್ಟು ವ್ಯಸ್ತವಾಗಿರುತ್ತಾನೆ ಎಂದರೆ ಪರಿಸ್ಥಿತಿಯ ವಿಪರ್ಯಾಸವನ್ನು ಗಮನಿಸಿ.
ನಮ್ಮ ಬದುಕಿನ ಬಹು ಭಾಗವನ್ನು ನಾವು ನಿರರ್ಥಕ ಗಳಿಕೆಯಲ್ಲಿ ಕಳೆಯುವ ಬದಲು ಬದುಕಿನ ಉಳಿದ ಭಾಗವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ವಿಹಿತ.
ಅಂತಹ ಕೆಲ ಅವಶ್ಯಕ ಕಾರ್ಯಗಳ ಪಟ್ಟಿ ಇಲ್ಲಿದೆ.
*ಆರೋಗ್ಯ ಸರಿ ಇದ್ದಾಗಲೂ ಕೂಡ ನಿಗದಿತವಾಗಿ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಲೇಬೇಕು
*ನೀರಡಿಕೆ ಇರದಿದ್ದರೂ ಪರವಾಗಿಲ್ಲ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು.
*ಸಣ್ಣ ಪುಟ್ಟ ತೊಂದರೆಗಳಿಗೆ ವಿಪರೀತ ತಲೆ ಕೆಡಿಸಿಕೊಳ್ಳದೆ ಹೋಗಲಿ ಬಿಡು ಎಂಬ ನಿರ್ಲಿಪ್ತತೆ ನಮ್ಮಲ್ಲಿರಬೇಕು.
* ನಾನೇ ಸರಿ ಎಂದು ವಾದಿಸುವುದನ್ನು ಬಿಟ್ಟುಬಿಡಬೇಕು.
* ಸಾಕಷ್ಟು ಶ್ರೀಮಂತ ಮತ್ತು ಶಕ್ತಿಯುತ ವ್ಯಕ್ತಿ ನಾವಾಗಿದ್ದರೂ ವಿನಮ್ರತೆ ನಮ್ಮದಾಗಿರಬೇಕು.
” ಎಷ್ಟೋ ಬಾರಿ ನಾವು ಆಯ್ದುಕೊಂಡು ದಾರಿ ಸರಿಯಾಗಿದ್ದರೂ ಕೂಡ ಬೇರೆಯವರಿಗಾಗಿ ಬಿಟ್ಟು ಕೊಡುವುದು ಧೈರ್ಯದ ಕೆಲಸವೇ ಸರಿ.
*ಹೆಚ್ಚು ಹೆಚ್ಚು ವಿಷಯಗಳ ಜ್ಞಾನವನ್ನು ಹೊಂದಿರಿ.
*ನೀವು ಅದಷ್ಟೇ ಕರ್ತವ್ಯದಲ್ಲಿ ನಿರತರಾಗಿದ್ದರೂ ವ್ಯಾಯಾಮ ಮತ್ತು ಧ್ಯಾನಕ್ಕೆ ಸಮಯ ನೀಡಿ.
*ನಿಮ್ಮ ಕುರಿತು ಕಾಳಜಿ ವಹಿಸುವ ಜನರ ಮತ್ತು ನೀವು ಕಾಳಜಿ ವಹಿಸುವ ಜನರ ಕುರಿತು ಅಷ್ಟೇ ಜವಾಬ್ದಾರಿಯತವಾಗಿ ವರ್ತಿಸಿ.
ಈ ಜೀವನ ಬಹಳ ಚಿಕ್ಕದು ಜೀವನದ ಪ್ರತಿ ಕ್ಷಣವನ್ನು ತುಂಬು ಹೃದಯದಿಂದ ಆಸ್ವಾದಿಸಿ.
ಹಿಂದಿನ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಮುಂದಾಗಬಹುದು ಎಂದು ಭಾವಿಸುವ ಘಟನೆಗಳನ್ನು ಕುರಿತು ಭಯ ಪಡುತ್ತಾ ಜೀವಿಸುವುದರಲ್ಲಿ ಅರ್ಥವಿಲ್ಲ. ಈ ದಿನ ಈ ಘಳಿಗೆ ಮಾತ್ರ ನಮ್ಮದು ಎಂಬ ಉತ್ಸಾಹ ನಿಮ್ಮಲ್ಲಿರಲಿ. ನಿಮ್ಮ ಸಂತೋಷ ಮತ್ತು ದುಃಖಗಳಿಗೆ ನೀವೇ ಹೊಣೆಗಾರರು ಎಂಬುದನ್ನು ಮರೆಯದಿರಿ. ನಗುನಗುತ್ತಾ ಜೀವಿಸುವುದರಲ್ಲಿ ಜೀವನದ ಸಾರವನ್ನು ಕಂಡುಕೊಳ್ಳಬೇಕು.
ಎಲ್ಲಾ ವಾದಗಳಲ್ಲಿ ಗೆಲ್ಲಲೇಬೇಕೆಂಬ ಹಂಬಲ ಬೇಡ. ಎಲ್ಲರ ಯೋಚನೆಗಳು ಮತ್ತು ಯೋಜನೆಗಳು ಒಂದೇ ಸಮ ಇರುವುದಿಲ್ಲ. ಅತ್ಯವಶ್ಯಕ ಅಲ್ಲದ ಹೊರತು ಬೇರೆಯವರ ದೃಷ್ಟಿಕೋನವನ್ನು, ಯೋಚನೆಗಳನ್ನು ತಪ್ಪು ಎಂದು ವಾದಿಸುವ ಬದಲು ಒಪ್ಪಿಕೊಳ್ಳುವುದು ಒಳಿತು. ವಿಶಾಲ ಮನೋಭಾವ ಮತ್ತು ಕ್ಷಮಾ ಗುಣ ನಮ್ಮದಾಗಿರಲಿ.
ಕುಟುಂಬದ ಸದಸ್ಯರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರಬೇಕು. ಮನೆಯ ಹಿರಿಯ ಸದಸ್ಯರು ಮತ್ತು ಚಿಕ್ಕ ಮಕ್ಕಳೊಂದಿಗೆ ಹೆಚ್ಚು ಪ್ರೀತಿ ಮತ್ತು ವಿಶ್ವಾಸದಿಂದ ಒಡನಾಡಬೇಕು.
ಪ್ರತಿದಿನ ಏನನ್ನಾದರೂ ಹೊಸತನ್ನು ಮಾಡುವ ಮತ್ತು ಒಳ್ಳೆಯ ವಿಷಯದಲ್ಲಿ ಕಲಿಕೆಯನ್ನು ಹೊಂದಬೇಕು. ನಿಮ್ಮ ಹೆಸರು ಇಲ್ಲವೇ ನಿಮ್ಮ ಮಾತಿನಿಂದ ನಿಮ್ಮೆದುರಿಗಿನವರ ಮುಖದಲ್ಲಿ ನಗೆ ಹೂವು ಅರಳಲಿ.
ಯಾವಾಗಲೂ ಸರಿಯಾದ ಆಯ್ಕೆ ನಮ್ಮದಾಗಿರಬೇಕು . ನಮ್ಮ ಕುರಿತು ಬೇರೆಯವರು ಏನು ಯೋಚಿಸುತ್ತಾರೆ ಎಂಬ ಭಯ ಆತಂಕ ಬೇಡ. ಅವರವರ ಯೋಚನೆಗಳು ಅವರವರಿಗೆ. ಅವರ ಯೋಚನೆಗಳು ನಮ್ಮಂತೆಯೇ ಇರಬೇಕೆಂಬ ಭಾವನೆ ಖಂಡಿತ ಬೇಡ.
ಅದೆಷ್ಟೇ ತೊಂದರೆ ನೋವು ನಿರಾಸೆ ನಮ್ಮನ್ನು ಕಾಡಿದರೂ ನಮ್ಮ ದೈನಂದಿನ ಕೆಲಸಗಳಲ್ಲಿ ಎಂದಿನಂತೆ ತೊಡಗಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಎದ್ದು ನಮ್ಮ ನಿಯಮಿತ ದಿನಚರಿಯನ್ನು ಪಾಲಿಸಿದಾಗ ಬದುಕಿನ ದುರ್ಬರ ದಿನಗಳು ಸಹನೀಯವಾಗುತ್ತವೆ. ಕಾಲಕ್ಕೆ ಎಲ್ಲವನ್ನು ಮರೆಸುವ ಮತ್ತು ಗುಣಪಡಿಸುವ ಶಕ್ತಿ ಇದೆ. ಪ್ರತಿದಿನ ಮುಂಜಾನೆ ಎದ್ದೊಡನೆ ಮತ್ತು ರಾತ್ರಿ ಮಲಗುವಾಗ ದೇವರನ್ನು ಪ್ರಾರ್ಥಿಸುವುದನ್ನು ಮರೆಯಬೇಡಿ. ದೇವರು ಎಂಬ ಅಗೋಚರ ಧನಾತ್ಮಕ ಶಕ್ತಿ ನಮ್ಮನ್ನು ಕಾಯುತ್ತದೆ, ಬದುಕಿನಲ್ಲಿ ಆಶಾಭಾವನೆಯನ್ನು ಮೂಡಿಸುತ್ತದೆ. ಮಾನವೀಯ ಸಂಬಂಧಗಳಲ್ಲಿ ನಂಬಿಕೆಯನ್ನು ಹುಟ್ಟಿಸುತ್ತವೆ. ನಮ್ಮ ಅಂತರಂಗವು ಸಮಚಿತ್ತತೆ ಮತ್ತು ಸಂತಸದಿಂದ ಇದ್ದರೆ ಬಾಹ್ಯದಲ್ಲಿ ನಾವು ಕೂಡ ಪ್ರಪುಲಿತರಾಗಿರುತ್ತೇವೆ. ಬದುಕಿನಲ್ಲಿ ಬರುವ ಎಲ್ಲಾ ಏರಿಳಿತಗಳನ್ನು ಒಮ್ಮನದಿಂದ ಸ್ವೀಕರಿಸಬೇಕು.
ಮಾನವನ ಬದುಕು ಆ ದೇವರು ಕೊಟ್ಟ ಕೊಡುಗೆ…ತಾಯಿ ತನ್ನ ಮಗುವನ್ನು ರಕ್ಷಿಸುವಂತೆಯೇ ಬದುಕು ಮತ್ತು ಶಿಕ್ಷಣನಮ್ಮನ್ನು ಬದುಕಿಸುತ್ತದೆ.
“ಮಾನವನ ಜೀವನ ಕಲ್ಪನಾ ವಿಲಾಸ
ನಿಸರ್ಗದ ಪ್ರತಿಕ್ರಿಯೆ ಚಿದ್ವಿಲಾಸ ”
ನಾವು ಕಲ್ಪನೆಯ ಬದುಕನ್ನು ಬದುಕಲು ಬಯಸಿದರೆ ನಿಸರ್ಗವು ನಮಗೆ ಕೊಡ ಮಾಡುವ ಚಿರ ಶಾಶ್ವತವಾದ ಸಂತೋಷವನ್ನು ಕಳೆದುಕೊಳ್ಳುತ್ತೇವೆ ಎಂಬ ಅರಿವನ್ನು ಹೊಂದಿ ನೆಮ್ಮದಿಯ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು.
ಏನಂತೀರಾ ಸ್ನೇಹಿತರೆ?
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್.