Oplus_131072

ಆಯುರ್ವೇದ ಉಕ್ತಿಗಳಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ

ಭಾರತ ದೇಶವು ಆಯುರ್ವೇದ ಶಾಸ್ತ್ರದ ಪಿತಾಮಹ. ಜಗತ್ತಿನ ಬಹುತೇಕ ಎಲ್ಲಾ ನಾಗರಿಕತೆಗಳು ಕಣ್ತೆರೆಯುವ ಮುನ್ನವೇ ಭರತ ಖಂಡವು ಐತಿಹಾಸಿಕವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲ ರಂಗದಲ್ಲಿಯೂ ಮಂಚೂಣಿಯಲ್ಲಿತ್ತು.

ಆರೋಗ್ಯ ಕ್ಷೇತ್ರದಲ್ಲಂತೂ ಭಾರತದ ವಿಜ್ಞಾನ ಪಿತಾಮಹರು ಇತಿಹಾಸವನ್ನೇ ರಚಿಸಿದರು. ಧನ್ವಂತರಿಯು ನಮ್ಮ ಆಯುರ್ವೇದದ ದೇವತೆ. ಚರಕ, ಸುಶ್ರುತರಂತಹ ಆಯುರ್ವೇದ ಪಂಡಿತರು ಅಂದಿನ ಕಾಲದಲ್ಲಿಯೇ ಅಂಗ ರಚನಾ ಶಾಸ್ತ್ರ, ರೋಗ ನಿಧಾನ ಶಾಸ್ತ್ರ, ಅರವಳಿಕೆಗಳ ಬಗ್ಗೆ ಮತ್ತು ಶಸ್ತ್ರಚಿಕಿತ್ಸೆಗಳ ಬಗ್ಗೆ ಜ್ಞಾನವನ್ನು ಹೊಂದಿದ್ದರು. ಅಂಗಕಸಿ ವಿಜ್ಞಾನ ಕೂಡ ಚಾಲ್ತಿಯಲ್ಲಿತ್ತು. ಅಂತಹ ಭಾರತೀಯ ವೈದ್ಯ ಪರಂಪರೆಯಲ್ಲಿ ಆಯುರ್ವೇದ ಚಿಕಿತ್ಸೆ, ಯೋಗ ಚಿಕಿತ್ಸೆ, ಯುನಾನಿ ಚಿಕಿತ್ಸೆ, ಪ್ರಕೃತಿ ವಿಜ್ಞಾನ ಚಿಕಿತ್ಸೆ ಮತ್ತು ಹೋಮಿಯೋಪತಿ ಚಿಕಿತ್ಸೆಗಳು ಪ್ರಮುಖ ಪಾತ್ರ ವಹಿಸಿದ್ದವು.

ಆಯುರ್ವೇದ, ಆಹಾರ, ಪ್ರಕೃತಿ ಚಿಕಿತ್ಸೆ ಮತ್ತು ವೈದ್ಯಕೀಯ ಶಾಸ್ತ್ರವಂತೂ ಇಡೀ ಜಗತ್ತಿನಲ್ಲಿ ಇಂದಿಗೂ ಮನ್ನಣೆ ಪಡೆದಿದೆ. ಇಂದಿಗೂ ಕೂಡ ಜಗತ್ತಿನ ಬಹುತೇಕ ಜನರು ಭಾರತದ ಯೋಗ ಧ್ಯಾನ ಆಯುರ್ವೇದ ಮತ್ತು ಸಂಸ್ಕೃತಿಗಳತ್ತ ಆಕರ್ಷಿತರಾಗಲು ಅದಕ್ಕಿರುವ ದಿವ್ಯ ಶಕ್ತಿಯೇ ಕಾರಣ.

ಇಲ್ಲಿನ ಭಾರತದ ಆಹಾರ ಶಾಸ್ತ್ರ ಮತ್ತು ಆಯುರ್ವೇದದಲ್ಲಿನ ಆರೋಗ್ಯದ ಗುಟ್ಟುಗಳು ಸಂಸ್ಕೃತ ಉಕ್ತಿಯಲ್ಲಿದ್ದು ನಮ್ಮೆಲ್ಲರಿಗೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ

*ಅಜೀರ್ಣ ಭೋಜನಮ್ ವಿಷಂ………ದೇಹದಲ್ಲಿ ಈಗಾಗಲೇ ತಿಂದ ಆಹಾರ ಜೀರ್ಣವಾಗಿದೆ ಎಂದರೆ ಮಾತ್ರ ಮನುಷ್ಯನಿಗೆ ಹಸಿವಾಗುತ್ತದೆ. ಆಹಾರವು ಜೀರ್ಣವಾಗದೆ ಇದ್ದಾಗ ಅಂದರೆ ಹೊಟ್ಟೆ ಹಸಿಯದೆ ಇದ್ದಾಗ ಆಹಾರವನ್ನು ಸೇವಿಸುವುದು ವಿಷವನ್ನು ಸೇವಿಸುವುದಕ್ಕೆ ಸಮಾನ ಎಂದು ನಮ್ಮ ಆಯುರ್ವೇದ ಶಾಸ್ತ್ರವು ಹೇಳುತ್ತದೆ.

ಅರ್ಧ ರೋಗ ಹರಿ ನಿದ್ರಾಮ್.… . ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೂ ವಿಶ್ರಾಂತಿ ದೊರೆಯುತ್ತದೆ.ನಿದ್ರೆಗೆಡುವುದು ನಮ್ಮೆಲ್ಲ ರೋಗಗಳಿಗೆ ಮೂಲ ಕಾರಣವಾಗಿರುತ್ತದೆ.

ನಿದ್ರೆಗೆಡುವುದರಿಂದ ಮನುಷ್ಯನಿಗೆ ಅಜೀರ್ಣ, ಆಯಾಸ, ಬಳಲಿಕೆ, ರಕ್ತದೊತ್ತಡದ ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ನಿರಾಳವಾದ, ನೆಮ್ಮದಿಯುತವಾದ, ಸುಖಕರವಾದ ನಿದ್ರೆ ಅರ್ಧದಷ್ಟು ಕಾಯಿಲೆಗಳನ್ನು ದೂರವಿಡುತ್ತದೆ.

*ಮುಗ್ಗದಾಲಿ ಗದವ್ಯಾಲಿ…. ನಾವು ಬಳಸುವ ಎಲ್ಲ ಬೇಳೆ ಕಾಳುಗಳಲ್ಲಿ ಹೆಸರು ಕಾಳು ಮತ್ತು ಹೆಸರುಬೇಳೆ ಅತ್ಯಂತ ಮಹತ್ವದ ಆಹಾರ ಪದಾರ್ಥ. ಉಳಿದೆಲ್ಲ ಬೇಳೆ ಕಾಳುಗಳಿಗೆ ಒಂದಲ್ಲ ಒಂದು ಅಡ್ಡ ಪರಿಣಾಮಗಳು ಇರುತ್ತವೆ. ಆದರೆ ಹೆಸರು ಕಾಳಿಗೆ ಅಂತಹ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

*ಭಗ್ನಾಸ್ಥಿ ಸಂಧಾನಕರೋ ಲಶುನಃ….
ಅಡುಗೆಯಲ್ಲಿ ಬೆಳ್ಳುಳ್ಳಿಯ ಬಳಕೆ ಅತ್ಯಂತ ಪರಿಣಾಮಕಾರಿಯಾದದು. ಬೆಳ್ಳುಳ್ಳಿಯು ಮುರಿದ ಮೂಳೆಗಳನ್ನು ಕೂಡ ಕೂಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಬೆಳ್ಳುಳ್ಳಿಯ ಉಷ್ಣ ಗುಣವು ನೆಗಡಿ, ಕಫ, ಕೆಮ್ಮಿನಂತಹ ತೊಂದರೆಗಳನ್ನು ಕೂಡ ನಿವಾರಿಸುತ್ತದೆ. ಆಗತಾನೆ ಹುಟ್ಟಿದ ಮಕ್ಕಳಿಗೆ ನೆಗಡಿಯಾದರೆ ಒಂದು ಎಸಳು ಬೆಳ್ಳುಳ್ಳಿಯನ್ನು ಅರೆದು ಹತ್ತಿಯ ಒಳಗೆ ಸೇರಿಸಿ ಅರಳೆತ್ತಿಯಲ್ಲಿ ಹಾಕಿ ಮೇಲೆ ಕುಂಚಿಗೆ/ಕುಲಾವಿ (ಉತ್ತರ ಕರ್ನಾಟಕದಲ್ಲಿ ಮಕ್ಕಳ ತಲೆಗೆ ಕಟ್ಟುವ ಒಂದು ವಿಧದ ಟೋಪಿ) ಕಟ್ಟುತ್ತಾರೆ. ಕೆಮ್ಮಿಗೆ ಬೆಳ್ಳುಳ್ಳಿಯ ಪಳಕುಗಳನ್ನು ಬಿಸಿ ಮಾಡಿಕೊಡುತ್ತಾರೆ.

ಬಾಣಂತಿಯರಿಗೆ ಕೂಡ ಬಿಸಿ ಅನ್ನದಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕೊಡುತ್ತಾರೆ. ಅಲ್ಲದೆ ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕಾಯಿಸಿ ಬಾಣಂತಿಗೆ ಶರೀರಕ್ಕೆ ಲೇಪಿಸುತ್ತಾರೆ.

*ಅತಿ ಸರ್ವತ್ರ ವರ್ಜಯೇತ್…. ಯಾವುದೇ ಆಹಾರವಾಗಲಿ, ರುಚಿಕರವಾಗಿದೆ ಎಂದು ಅತಿಯಾಗಿ ಸೇವನೆ ಮಾಡುವುದು ಸಲ್ಲದು. ಹಿತಮಿತ ಆಹಾರ ಅತ್ಯಂತ ಒಳ್ಳೆಯದು ಆದ್ದರಿಂದಲೇ ಆಯುರ್ವೇದ ಶಾಸ್ತ್ರದಲ್ಲಿ ಹಿತ ಭುಕ್, ಮಿತ ಭುಕ್, ಋತುಭುಕ್ ಎಂದು ಹೇಳಿದ್ದಾರೆ. ವ್ಯಕ್ತಿಯ ಆರೋಗ್ಯಕ್ಕೆ ಹಿತಕರವಾದುದನ್ನು ಮಿತವಾಗಿ ಮತ್ತು ಆಯಾ ಋತುವಿಗೆ ಅನುಸಾರವಾಗಿ ಆಹಾರ ಸೇವಿಸುವುದಕ್ಕೆ ಆಯುರ್ವೇದದಲ್ಲಿ ಮಾನ್ಯತೆ ಇದೆ.
ಉದಾಹರಣೆಗೆ…ಬೇಸಿಗೆಯಲ್ಲಿ ಮೊಸರು ಮಜ್ಜಿಗೆ ಧಾರಾಳ ಸೇವನೆ ಮಾಡಬೇಕು, ಆದರೆ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಮೊಸರು ಮಜ್ಜಿಗೆಗಳ ಸೇವನೆ ಅಷ್ಟೇನೂ ಅಪೇಕ್ಷಣೀಯವಲ್ಲ. ರಾತ್ರಿಯ ಹೊತ್ತಿನಲ್ಲಿ ಮೊಸರಿನ ಸೇವನೆ ಕೂಡ ಕಫ ಪ್ರಕೃತಿಯವರೆಗೆ ಹಿತಕಾರಿಯಲ್ಲ.

*ನಾಸ್ತಿ ಮೂಲಮನೌಷಧಂ….
ಎಲ್ಲಾ ತರಕಾರಿಗಳಲ್ಲಿಯೂ ದೇಹಕ್ಕೆ ಲಾಭಕಾರಿಯಾಗುವಂತಹ ಅಂಶಗಳು ಇದ್ದೇ ಇರುತ್ತವೆ, ಆದ್ದರಿಂದ ಹೆಚ್ಚು ತರಕಾರಿಗಳ ಸೇವನೆ ಒಳ್ಳೆಯದು.

*ನ ವೈದ್ಯ ಪ್ರಭುರಾಯುಶಃ…. ಯಾವುದೇ ವೈದ್ಯರಾದರು ಆಯುಷ್ಯವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆರೋಗ್ಯವನ್ನು ಹೇಗೆ ಕಾಯ್ದಿಟ್ಟುಕೊಳ್ಳಬೇಕು ಎಂಬುದನ್ನು ಮಾತ್ರ ಅವರು ಹೇಳಬಲ್ಲರು.

*ಚಿಂತಾ ವ್ಯಾಧಿ ಪ್ರಕಾಶಾಯ/ಚಿಂತಾ ಜರಾನಾಂ ಮನುಷ್ಯಾಯಣ0….. ಮನುಷ್ಯನು ಚಿಂತೆಯನ್ನು ಮಾಡುವುದರಿಂದ ಆತನ ರೋಗವು ಉಲ್ಬಣವಾಗುತ್ತದೆ. ಆದ್ದರಿಂದ ರೋಗಿಯು ಯಾವಾಗಲೂ ಸಕಾರಾತ್ಮಕ ಚಿಂತನೆಯನ್ನು ಮಾಡಬೇಕು. ಸಕಾರಾತ್ಮಕ ಚಿಂತನೆಯು ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಿಂತೆಯ ಮನುಷ್ಯನ ಆಯುಷ್ಯವನ್ನು ಕಡಿಮೆಗೊಳಿಸುತ್ತದೆ. ಚಿಂತೆಗು ಚಿತೆಗು ಇರುವುದು ಸೊನ್ನೆಯಷ್ಟೇ ವ್ಯತ್ಯಾಸ ಎಂದು ಅದಕ್ಕೆ ನಮ್ಮ ಪೂರ್ವಜರು ಹೇಳಿದ್ದಾರೆ. ಚಿಂತೆ ಮಾಡುವುದು ಚಿತೆಗೆ ದಾರಿ ಮಾಡಿಕೊಡುತ್ತದೆ.

*ವ್ಯಾಯಾಮಸ್ಯ ಶನೈಃ ಶನೈಃ…. ನಿಧನಿಧಾನವಾಗಿ ವ್ಯಾಯಾಮವನ್ನು ಮಾಡಬೇಕು. ಉಸಿರಾಟದ ಗತಿ ವಿಧಿಗಳನ್ನು ಅನುಸರಿಸಿ ವ್ಯಾಯಾಮವನ್ನು ಮಾಡುವುದರಿಂದ ಉತ್ತಮ ದೇಹಾರೋಗ್ಯ ಲಭಿಸುತ್ತದೆ. ತ್ವರಿತ ತೂಕ ಇಳಿಕೆಯ ಕಾರಣಕ್ಕಾಗಿ ಅತಿಯಾಗಿ ವ್ಯಾಯಾಮ ಮಾಡುವುದು ವರ್ಜ್ಯ.

*ಅಜವತ್ ಚರ್ವಣ ಕುರ್ಯಾತ್…. ಹಾಡಿನಂತೆ ನಿಧಾನವಾಗಿ ಆಹಾರವನ್ನು ಅಗಿದು ತಿನ್ನಬೇಕು ಹೀಗೆ ಮಾಡುವದರಿಂದ ಬಾಯಲ್ಲಿನ ಜೊಲ್ಲು ರಸವು ಆಹಾರದೊಂದಿಗೆ ಮಿಳಿತವಾಗಿ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.

ಸ್ನಾನಂ ನಾಮ ಮನ ಪ್ರಸಾಧನಕರಂ.. ದುಸ್ವಪ್ನ ವಿದ್ವ0ಸನಂ
ಸ್ನಾನ ಮಾಡುವುದರಿಂದ ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ದೇಹದ ಕೊಳೆಯನ್ನು ನಿವಾರಿಸುವುದರ ಜೊತೆ ಜೊತೆಗೆ ಸ್ನಾನವು ಮನದ ಕೊಳೆಯನ್ನು ಕೂಡ ನಿವಾರಿಸುತ್ತದೆ. ಸ್ನಾನವು ದುಃಸ್ವಪ್ನಗಳನ್ನು ನಿವಾರಿಸುತ್ತದೆ.

*ನಾ ಸ್ನಾನ ಮಾಚರೇತ ಭುಕ್ತ್ವಾಂ.... ಆಹಾರ ಸೇವನೆ ಮಾಡಿದ ನಂತರ ಸ್ನಾನ ಮಾಡುವುದು ವಿಷಮಕರವಾಗಿ ಪರಿಣಮಿಸುತ್ತದೆ. ಆದ್ದರಿಂದ ಯಾವತ್ತೂ ನಿತ್ಯಕರ್ಮ ಮತ್ತು ಸ್ನಾನಾದಿಗಳ ನಂತರವೇ ಆಹಾರ ಸೇವನೆ ಮಾಡಬೇಕು.

*ನಾಸ್ತಿ ಮೇಧ ಸಮಂ ತೋಯಂ…. ಮಳೆ ನೀರಿನಷ್ಟು ಪರಿಶುದ್ಧವಾದ ನೀರು ಈ ಭೂಮಿಯ ಮೇಲೆ ಯಾವುದು ಇಲ್ಲ. ಆದ್ದರಿಂದ ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು.

*ಅಜೀರ್ಣೆ ಭೇಷಜಂ ವಾರಿ.…. ಆಹಾರ ಪಚನವಾಗದೆ ಅಜೀರ್ಣ ತಲೆದೋರಿದಾಗ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು. ನೀರು ಉತ್ತಮ ಅಜೀರ್ಣ ನಿವಾರಕ.

*ಸರ್ವತ್ರ ನೂತನ ಶಸ್ತಮ್, ಸೇವಕಾನ್ನ ಪುರಾತನೇ…. ಯಾವಾಗಲೂ ತಾಜಾ ಮತ್ತು ಆಗ ತಾನೇ ತಯಾರಿಸಿದ ಆಹಾರವನ್ನು ಸೇವಿಸಿ. ಹಾಲು ಹಣ್ಣು ಮತ್ತು ತರಕಾರಿಗಳಿಗೂ ಈ ವಿಷಯವು ಅನ್ವಯಿಸುತ್ತದೆ. ಆದರೆ ಅಕ್ಕಿ ಮತ್ತು ಕೆಲಸದವರು ಮಾತ್ರ ಹಳೆಯದಾಗಿರಬೇಕು ಎಂದು ಇದರ ಅರ್ಥ.

*ನಿತ್ಯಾಂ ಸರ್ವ ರಸಾ ಭಕ್ಷು…. ಆಯುರ್ವೇದದಲ್ಲಿ ಹೆಸರಿಸಲಾದ ಕಟು ಮಧುರ ತಿಕ್ತ ಉಪ್ಪು ಹುಳಿ ಖಾರ ಕಹಿ ಒಗರು ರುಚಿ ಎಂಬ ಷಡ್ರಸಗಳನ್ನು ನಿತ್ಯವೂ ಸೇವಿಸಬೇಕು.

ಷಡ್ರಸೋಪೇತ ಭೋಜನ ವ್ಯಕ್ತಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

*ಜಠರಂ ಪೂರಯೇದರ್ದಮ್ ಅನ್ನೈರ್ ಅರ್ಧಭಾಗಂ ಜಲೇಚ, ವಾಯೋಃ ಸಂಚರಣಾರ್ಥಾಯ ಚತುರ್ಥಮವಶೇಷಯೇತ್

ಅಂದರೆ ಜಠರದ ಅರ್ಧ ಭಾಗವು ಘನ ಆಹಾರದಿಂದಲೂ ಕಾಲು ಭಾಗವು ನೀರಿಂದಲೂ ಇನ್ನುಳಿದ ಭಾಗವು ವಾಯುವಿನ ಸಂಚಾರಕ್ಕಾಗಿ ಇರಲೆಬೇಕು. ಅಂದರೆ ನಾಲ್ಕನೇ ಎರಡು ಭಾಗ ಆಹಾರ ಒಂದು ಭಾಗ ನೀರು ಮತ್ತು ಒಂದು ಭಾಗ ಖಾಲಿಯಾಗಿರಬೇಕು.

*ಭುಕ್ವಾಂ ಶತಪದಗಚ್ಚೈತ್ ಯದಿಚ್ಛೇತ್ ಚಿರಂಜೀವಿತಂ
ಪ್ರತಿ ಬಾರಿ ಆಹಾರ ಸೇವಿಸಿದ ನಂತರವೂ ಕುಳಿತುಕೊಳ್ಳಬಾರದು. ಬದಲಾಗಿ ಕನಿಷ್ಠ ಕೆಲ ನಿಮಿಷಗಳಾದರು ನಡೆಯಬೇಕು. ಇದರಿಂದ ಆಹಾರ ಜೀರ್ಣವಾಗಲು ಮತ್ತಿತರ ಪ್ರಕ್ರಿಯೆಗೆ ಅನುಕೂಲವಾಗುತ್ತದೆ.

ಕ್ಷುತ್ಸ್ವಾ ಘುತಂ ಜನಯತಿ…. ಹಸಿವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಸಿವಾದಾಗ ಮಾತ್ರ ಆಹಾರವನ್ನು ಸೇವಿಸಬೇಕು.

*ಶತಮ್ ವಿಹಾಯ ಬೋಕ್ತೆಂಚ ಸಹಸ್ರ
ಸ್ನಾನಮಾಚರೇತ್.... ಭೋಜನದ ಸಮಯದಲ್ಲಿ ನೂರು ಕೆಲಸಗಳು ಬಂದರೂ ಅವುಗಳನ್ನು ಬದಿಗಿಟ್ಟು ಆಹಾರ ಸೇವಿಸಲೇಬೇಕು.

*ಸರ್ವಧರ್ಮೇಶು ಮಧ್ಯಮಾಂ….. ಯಾವುದೂ ಅತಿಯಾಗಬಾರದು. ಯಾವುದು ಕಡಿಮೆಯೂ ಆಗಬಾರದು. ಪ್ ಮಧ್ಯಮ ಮಾರ್ಗವು ಯಾವಾಗಲೂ ಸ್ವಾಗತಾರ್ಹ. ದಿನದ ಒಂದು ಹೊತ್ತು ಅತಿಯಾಗಿ ಆಹಾರ ಸೇವಿಸಿ ಮತ್ತೊಂದು ಹೊತ್ತಿನಲ್ಲಿ ಸಂಪೂರ್ಣ ಆಹಾರ ಸೇವನೆ ಮಾಡದೆ ಇರುವುದು ಸರಿಯಲ್ಲ. ಹಸಿವಾದಾಗ ಮಿತವಾಗಿ ಆಹಾರ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು.

ಹೀಗೆ ಸಂಸ್ಕೃತದ ಹಲವಾರು ವ್ಯಕ್ತಿಗಳ ಮೂಲಕ ನಮ್ಮ ಪೂರ್ವಜರು ನಮ್ಮನ್ನು ಕಾಲ ಕಾಲಕ್ಕೆ ಎಚ್ಚರಿಸಿದ್ದಾರೆ. ಅವರೇ ಈ ಉಕ್ತಿಗಳನ್ನು ಓದಿ ತಿಳಿದುಕೊಳ್ಳುವುದಲ್ಲದೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸ್ವಸ್ಥ, ಆರೋಗ್ಯಕರವಾದ ಸಮಾಜದ ನಿರ್ಮಾಣ ಸಾಧ್ಯವಾಗುವುದು ಈ ದೆಸೆಯಲ್ಲಿ ನಾವು ನೀವುಗಳು ಹೆಜ್ಜೆ ಇಡೋಣ ಎಂಬ ಆಶಯದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ