ಪರಿಚಿತರು ಎಂಬ ಆತ್ಮೀಯ ವಲಯ
ಆ ತಂದೆ ಮಗನ ಸವಾರಿ ಬ್ಯಾಂಕಿಗೆ ಬಂದಿತ್ತು. ತಂದೆ ತಮ್ಮ ಅಕೌಂಟಿನಲ್ಲಿದ್ದ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸಲು ಬಂದಿದ್ದರು.ಮಗನಿಗೋ ಅಸಹನೆ.ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿರು ವುದಕ್ಕೆ. ಎಷ್ಟೋ ಬಾರಿ ತನ್ನಪ್ಪನಿಗೆ ಅಪ್ಪ ಇನ್ನಾದರೂ ನಿಮ್ಮ ಅಕೌಂಟನ್ನು ಇಂಟರ್ನೆಟ್ ಬ್ಯಾಂಕಿಂಗ್ ಗೆ ಅನುಕೂಲವಾಗುವಂತೆ ಆಕ್ಟಿವೇಟ್ ಮಾಡಿಸಲೇ ಎಂದು ಹಲವಾರು ಬಾರಿ ಕೇಳಿದ್ದ. ಅಪ್ಪ ನಾನೇಕೆ ಮಾಡಿಸಬೇಕು ಎಂಬಂತೆ ಮುಖ ಮಾಡಿ ನಕ್ಕು ತಲೆ ಅಲ್ಲಾಡಿಸಿದ್ದರು.
“ಬ್ಯಾಂಕ್ ನಲ್ಲಿ ತಾಸುಗಟ್ಟಲೆ ಕಾಯ್ದು ನಿಲ್ಲುವ ಬದಲು ನೀವು ಆನ್ಲೈನ್ ನಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬಹುದು. ಔಷಧಿಗಳನ್ನು, ಬಟ್ಟೆಗಳನ್ನು ಮತ್ತಿತರ ವಸ್ತುಗಳನ್ನು ಖರೀದಿಸಬಹುದು. ಎಲ್ಲವೂ ಬಹಳ ಸುಲಭವಾಗುತ್ತದೆ ಅಪ್ಪಾ” ಎಂದು ಅತ್ಯಂತ ಕಾತುರದಿಂದ ತನ್ನ ತಂದೆಗೆ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಕುರಿತು ಪರಿಚಯಿಸಲು ಮಗ ಪ್ರಯತ್ನಿಸಿದ.
ಅದಕ್ಕೆ ಉತ್ತರವಾಗಿ ಅಪ್ಪ “ಆನ್ಲೈನ್ ನಲ್ಲಿ ಎಲ್ಲವನ್ನು ನಿರ್ವಹಿಸಿದರೆ ನಾನು ಮನೆಯಿಂದ ಹೊರಬರುವ ಪ್ರಮೇಯವೇ ಇರುವುದಿಲ್ಲ, ಅಲ್ಲವೇ?” ಎಂದು ಕೇಳಿದರು.
“ಹೌದು ಹೌದು” ಎಂದು ಮಗ ಉತ್ತರಿಸಿದ. ಮುಂದುವರಿಸಿ ಆತ “ಬಹಳಷ್ಟು ಆನ್ಲೈನ್ ವ್ಯವಸ್ಥೆಗಳು ನಿಮ್ಮ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತವೆ. ನಿಮ್ಮ ಸಮಯ ಯಾವುದೇ ರೀತಿಯಲ್ಲಿ ವ್ಯರ್ಥವಾಗುವುದಿಲ್ಲ. ನೀವು ಆರಾಮವಾಗಿ ಮನೆಯಲ್ಲಿಯೇ ಕುಳಿತು ಶಾಪಿಂಗ್ ನ ಮಜಾ ಅನುಭವಿಸಬಹುದು’ ಎಂದು ಮಗ ಹೇಳಿದ.
ತಲೆಯನ್ನು ಅಲ್ಲಾಡಿಸಿದ ತಂದೆ “ನಾನು ಬ್ಯಾಂಕಿಗೆ ಬಂದ ಒಂದು ಗಂಟೆಯಲ್ಲಿ ನನ್ನ ನಾಲ್ವರು ಬಾಲ್ಯ ಸ್ನೇಹಿತರನ್ನು ಕಂಡು ಮಾತನಾಡಿದೆ. ಇಲ್ಲಿಯ ಬ್ಯಾಂಕಿನ ಸಿಬ್ಬಂದಿ ನನ್ನನ್ನು ನೋಡಿ ಪರಿಚಯದ ನಗೆ ಬೀರಿ ನನ್ನೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದರು. ನಾವು ಮನೆಯಲ್ಲಿ ಇಬ್ಬರೇ ಇರುತ್ತೇವೆ .ನಮಗೆ ಜೊತೆಗಾರರ ಅವಶ್ಯಕತೆ ಇದೆ,ಆದ್ದರಿಂದಲೇ ನಾನು ಮುಂಜಾನೆ ನನ್ನೆಲ್ಲಾ ಕೆಲಸಗಳನ್ನು ಪೂರೈಸಿ ತಿಂಡಿ ತಿಂದು ನಂತರ ತಯಾರಾಗಿ ಬ್ಯಾಂಕಿಗೆ ಬರುತ್ತೇನೆ. ನನಗೆ ಸಾಕಷ್ಟು ಸಮಯವಿದೆ. ನಮಗೆ ಮಾನಸಿಕ ಸಾಂಗತ್ಯದ ಅವಶ್ಯಕತೆ ಇದೆ”.
ಎರಡು ವರ್ಷಗಳ ಹಿಂದೆ ನನಗೆ ಆರೋಗ್ಯದಲ್ಲಿ ತೊಂದರೆಯಾಯಿತು. ನಾನು ಯಾವಾಗಲೂ ಹಣ್ಣನ್ನು ಖರೀದಿಸುತ್ತಿದ್ದ ಅಂಗಡಿಯ ಮಾಲೀಕ ನನ್ನ ಮನೆಗೆ ಬಂದು ನನ್ನ ಹಾಸಿಗೆಯ ಪಕ್ಕದಲ್ಲಿ ಕುಳಿತು ನನ್ನ ಯೋಗಕ್ಷೇಮವನ್ನು ವಿಚಾರಿಸಿ ಕಾಳಜಿ ವಹಿಸಿದ. ಕೆಲ ದಿನಗಳ ಹಿಂದೆ ನಿನ್ನ ತಾಯಿ ಮುಂಜಾನೆಯ ವಾಕಿಂಗ್ ಗೆ ಹೋದಾಗ ಬಿದ್ದು ಪೆಟ್ಟು ಮಾಡಿಕೊಂಡಳು. ನಾವು ಯಾವಾಗಲೂ ದಿನಸಿಯನ್ನು ಖರೀದಿಸುವ ಕಿರಾಣಿ ಅಂಗಡಿಯ ಮಾಲೀಕರು ನಿನ್ನಮ್ಮನನ್ನು ಗುರುತಿಸಿ ತಕ್ಷಣವೇ ಕಾರನ್ನು ಗೊತ್ತು ಮಾಡಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ನಂತರ ನನಗೆ ಕರೆ ಮಾಡಿ ಹೇಳಿದರು. ಇಂತಹ ಮಾನವೀಯ ಸಂಬಂಧಗಳನ್ನು ನೀವು ಆನ್ಲೈನ್ ನಲ್ಲಿ ಕಾಣಲು ಸಾಧ್ಯವೇ?
ಎಲ್ಲವೂ ಆನ್ಲೈನ್ ನಲ್ಲಿ ಸಿಗುತ್ತದೆ ನಿಜ, ಆದರೆ ಜನರೊಂದಿಗಿನ ಒಡನಾಟ, ಮಾನವೀಯತೆಯ ಸ್ಪರ್ಶ ಸಾಧ್ಯವಾಗುವುದಿಲ್ಲ ಅಲ್ಲವೇ? ಕಂಪ್ಯೂಟರ್, ಮೊಬೈಲ್ ನಂತಹ ಗ್ಯಾಜೆಟ್ ಗಳು ನನ್ನ ಅವಶ್ಯಕತೆಗಳನ್ನು ಪೂರೈಸಬಹುದು ಆದರೆ ಆತ್ಮೀಯ ಸಂಬಂಧಗಳನ್ನು ನಿಭಾಯಿಸಲು ಅವುಗಳಿಂದ ಸಾಧ್ಯವಿಲ್ಲ.
ನನ್ನ ಅವಶ್ಯಕತೆಗಳಿಗಾಗಿ ನಾನು ಗ್ರಾಹಕನಾಗಿರುವ ಎಲ್ಲ ಅಂಗಡಿಯ ಮಾಲೀಕರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ… ನಿನ್ನ ಆನ್ಲೈನ್ ನಲ್ಲಿ ಇಂತಹ ಬಾಂಧವ್ಯ ಸಾಧ್ಯವೇ?
ತಂತ್ರಜ್ಞಾನ ಜೀವನದ ಒಂದು ಭಾಗವಾಗಿರಬೇಕೆ ಹೊರತು ತಂತ್ರಜ್ಞಾನವೇ ಜೀವನವಲ್ಲ.
ಪ್ರಸ್ತುತ ದಿನಮಾನಗಳಲ್ಲಿ ನಾವು ಪರಿಚಿತರೊಂದಿಗೆ ಸ್ನೇಹಿತರೊಂದಿಗೆ ದಿನಗಳನ್ನು ಕಳೆಯಬೇಕೆ ಹೊರತು ವಸ್ತುಗಳೊಂದಿಗೆ,ಎಲೆಕ್ಟ್ರಾನಿಕ್ ಗ್ಯಾಜೆಟ್ಗಳೊಂದಿಗೆ ಅಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ನಾವು ಸಾವಿರಾರು ಜನರೊಂದಿಗೆ ಸ್ನೇಹ ಬೆಳೆಸಿರಬಹುದು…. ಆದರೆ ಅದೊಂದು ಭ್ರಮಾ ಜಗತ್ತು. ಅನುವು ಆಪತ್ತಿನಲ್ಲಿ ನಮಗೆ ಅಕ್ಕಪಕ್ಕದವರು ಒದಗುತ್ತಾರೆಯೇ ಹೊರತು ಈ ವರ್ಚುಯಲ್ ಲೋಕದ ಜನರಲ್ಲ ಎಂದು ಅಪ್ಪ ನಿಧಾನವಾಗಿ ಮಗನಿಗೆ ತಿಳಿ ಹೇಳಿದಾಗ ಆಧುನಿಕ ವಿಚಾರಧಾರೆಗಳನ್ನು ಹೊಂದಿದ ಅಂತರ್ಜಾಲವೇ ನಿಜವಾದ ಜಗತ್ತು ಎಂದು ಭಾವಿಸಿದ ಮಗನ ಕಣ್ಣಿಗೆ ಕಟ್ಟಿದ ಪೊರೆ ಹರಿದು ವಾಸ್ತವ ಜಗತ್ತಿನ ಅರಿವು ಮೂಡಿತು.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.