ಭಗವದ್ಗೀತೆಯ ಸಾರ
ಮಹರ್ಷಿ ವ್ಯಾಸರು ಮಹಾಭಾರತ ಭಗವದ್ಗೀತೆಯನ್ನು, ಪೂರ್ಣಗೊಳಿಸಿದ ದಿನವನ್ನು, ‘ಗೀತಾ ಜಯಂತಿ’ ಎಂದು ಕರೆಯಲ್ಪಟ್ಟಿದೆ. ಇದು ಮಾರ್ಗಶೀರ ಮಾಸದ ಏಕಾದಶಿಯಂದು ಬರುತ್ತದೆ. ಈ ವರ್ಷ ಡಿಸೆಂಬರ್ 11 ರಂದು ಬಂದಿದೆ. ಇದಕ್ಕೆ ‘ಮೋಕ್ಷದಾ ಏಕಾದಶಿ’ ಎಂದು ಕೂಡ ಕರೆಯುತ್ತಾರೆ .
೭೦೦ ಶ್ಲೋಕಗಳ ಸಾರವನ್ನು ಕವಯತ್ರಿ ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಅದರ ಪ್ರಯುಕ್ತವಾಗಿ ಈ ಕವಿತೆ ಪ್ರಕಟಿಸಲಾಗಿದೆ.
– ಸಂಪಾದಕರು
ಬದುಕುವ ಕಲೆ
ಭಗವಂತ ಶ್ರೀಕೃಷ್ಣ ಪರಮಾತ್ಮನು
ಪಾರ್ಥನ ಮೂಲಕ
ಬೋಧಿಸಿದನು ಭಗವದ್ಗೀತೆಯನು
ಇಡೀ ಮಾನವಕುಲಕೆ
ಜೀವನವೊಂದು ಸಂಘರ್ಷಮಯ
ಕುರುಕ್ಷೇತ್ರ ಇದ್ದಂತೆ
ಜಗತ್ತು ಪರಿವರ್ತನಶೀಲವಾಗಿದೆ
ಮಾಡು ಧರ್ಮಕ್ಷೇತ್ರದಂತೆ//
ಅಹಂಕಾರ ಮಮಕಾರ ವೈರಭಾವ
ಪೂರ್ಣ ತೊರೆಯುತಲಿ
ಕಾಮ ಕ್ರೋಧ ಮದ ಮತ್ಸರಾದಿಗಳನು
ನಿಯಂತ್ರಣದಲಿಡುತಲಿ
ಯಮ ನಿಯಮ ತಿತಿಕ್ಷಾ ಅಹಿಂಸಾದಿ
ನಿಷ್ಠೆಯಿಂದ ಪಾಲಿಸುತಲಿ
ಮಿಥ್ಯ ಜಗದಲಿ ಆತ್ಮ ಅಮರ ನಿತ್ಯ
ಸತ್ಯವನರಿಯುವೆ ನೀ//
ಕರ್ಮ ಮಾರ್ಗದಿ ನಿಷ್ಕಾಮ ಕರ್ಮದಲಿ
ನಿರುತ ಕ್ರಿಯಾ ಶೀಲನಾಗು
ಸ್ವಧರ್ಮಾಚರಣೆ ಕರ್ತವ್ಯ ನಿಷ್ಠೆಯಿಂದ
ಪೂಜೆ ಮಾಡುವವನಾಗು
ಕರ್ಮಕ್ಕೆ ಬಂಧಿತನು ಫಲಾಪೇಕ್ಷೆಯನು
ಬಿಟ್ಟು ಬಿಡುವಂಥನಾಗು
ಆಸೆ ನಿರಾಸೆ ಸೋಲು ಗೆಲವುಗಳನು ಸಮ ಭಾವದಿ ನೋಡುವವನಾಗು //
ಭಕ್ತಿ ಮಾರ್ಗದಿ ಉತ್ಕಟ ಭಕ್ತಿಯಲಿ
ಮೈ ಮರೆಯಬೇಕು
ಸನ್ನಡತೆ ಸದಾಚಾರ ನವವಿಧ ಭಕ್ತಿ
ಗಳಿಂದ ಅರ್ಚಿಸಬೇಕು
ಭಾವನೆಯ ತರಂಗಗಳಿಂದ ಜಗವಿದೆ
ಭಾವಪರವಶತೆ ಬೇಕು
ಭಜಿಸಿ ಪೂಜಿಸಿ ದೇಹ ಭಾವವಳಿದು
ದೇವಭಾವ ಇರಬೇಕು//
ಜ್ಞಾನ ಮಾರ್ಗದಿ ಸುಜ್ಞಾನವನರಿಯಲು
ಗುರುಕೃಪೆ ಹೊಂದಲು
ಶರಣಾಗತಿ ಧ್ಯಾನ ಧಾರಣೆಗಳಿಂದ
ಸಾಧನೆಯ ಸಾಧಕನಾಗಲು
ಸ್ಥಿತಪ್ರಜ್ಞ ಸ್ಥಿತಿಯಲಿ ತನ್ನ ತಾನರಿತು
ಆತ್ಮ ಜ್ಞಾನವ ಪಡೆಯಲು
ಜ್ಞಾನೋದಯವಾಗಿ ಪ್ರಜ್ಞಾನಜ್ಯೋತಿ
ಬೆಳಕಲಿ ತೇಲುವನು//
ಸೃಷ್ಟಿಯು ಕರ್ತಾರನ ಕಮ್ಮಟದಂತೆ
ಬದುಕುವ ಕಲೆ ಅರಿತು
ವ್ಯಷ್ಟಿ ಸಮಷ್ಟಿ ಪರಮೇಷ್ಟಿಯನರಿವ
ಸುಂದರ ನೆಲೆಯಲಿ ಬೆರೆತು
ದೇಹದ ಕಣ ಕಣದಲಿ ಮಣ್ಣಿನ ಅಣು
ಅಣುವಿನಲಿ ದೇವನಂಶ
ಸಾಕ್ಷಾತ್ಕಾರ ಪಡೆಯುವ ಅಂತಿಮ
ಗಂತವ್ಯ ಗೀತೆಯ ಸಂದೇಶ//
– ಅನ್ನಪೂರ್ಣ ಸುಭಾಶ್ಚಂದ್ರ ಸಕ್ರೋಜಿ ಪುಣೆ.