Oplus_131072

ಅಸಾಧ್ಯವಪ್ಪ ಇಂಥವರ ಜೊತೆಗಿನ ಬದುಕು.

 

ವೀಣಾ ಹೇಮಂತ್ ಗೌಡ ಪಾಟೀಲ. 

 

ಕೆಲ ಜನರು ಸೃಷ್ಟಿಸುವ ಅವಘಡಗಳಿಗೆ, ತೊಂದರೆಗಳಿಗೆ ಈಡಾಗುವ ಬಹಳಷ್ಟು ಜನರ ಬಾಯಿಂದ ಬರುವ ಒಂದೇ ಒಂದು ಉದ್ಗಾರ ಅಸಾಧ್ಯವಪ್ಪ ಇಂಥವರನ್ನು ಸಂಭಾಳಿಸುವುದು! ಅಂತ,ಅದರಲ್ಲೂ ಆ ವ್ಯಕ್ತಿ ನಿಮ್ಮ ಅತ್ಯಂತ ಆಪ್ತ ವಲಯದಲ್ಲಿ ಇದ್ದರೆ, ಸಂಬಂಧಿಯಾಗಿದ್ದರೆ ಅನಿವಾರ್ಯವಾಗಿಯಾದರೂ ಅಂತವರನ್ನು ಸಂಭಾಳಿಸಲೇಬೇಕಾದ ಪರಿಸ್ಥಿತಿ ನಮ್ಮದಾಗಿರುತ್ತದೆ.

ಬದುಕಿನಲ್ಲಿ ಅವರು ಅನುಭವಿಸಿರುವ ತೊಂದರೆಗಳು ಚಿಕ್ಕಂದಿನ ಆಘಾತಗಳು, ಸ್ವಪ್ರತಿಷ್ಠೆ, ಮೇಲರಿಮೆ ಅಥವಾ ಕೀಳರಿಮೆಗಳು ಬದುಕಿನೆಡೆಗೆ ಇರುವ ನಿರಾಶೆಗಳ ಒಟ್ಟು ಮೊತ್ತವೇ ಅವರಾಗಿದ್ದು
ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬಂತೆ ವರ್ತಿಸಲು ಕಾರಣಗಳು ಹಲವು. ಅವುಗಳನ್ನು ಅವಲೋಕಿಸಿ ಅರಿತುಕೊಂಡಾಗ ಅವರನ್ನು ಸಂಭಾಳಿ ಸುವುದು ತುಸು ಹಗುರ ಎಂದೆನಿಸಬಹುದು.ಅವರ ಆ ರೀತಿಯ ಸ್ವಭಾವಕ್ಕೆ ಕಾರಣಗಳನ್ನು ಅರಿಯಬೇಕು.

ಅಸುರಕ್ಷತಾ ಭಾವನೆ, ಬಾಲ್ಯದ ದುರ್ಘಟನೆಗಳು, ಈಡೇರದ ಆಶಯಗಳು,ವಿಪರೀತ ಮೇಲರಿಮೆ ಇಲ್ಲವೇ ಕೀಳರಿಮೆಗಳು ಅವರಲ್ಲಿ ನಿರಾಶೆಯನ್ನು ಹುಟ್ಟಿಸಿದ್ದು ಈ ರೀತಿ ಅವರು ವರ್ತಿಸಲು ಕಾರಣವಾಗಿರುತ್ತದೆ. ಇದನ್ನು ಅರಿತುಕೊಂಡಾಗ ಅವರೊಂದಿಗಿನ ಕಿರಿಕಿರಿಯ ಸಂಬಂಧದ ಬದಲಾಗಿ ಸಹಾನುಭೂತಿಯಿಂದ ವರ್ತಿಸಲು ಸಾಧ್ಯವಾಗುತ್ತದೆ.

ಸ್ವಯಂ ನಿಯಂತ್ರಣವನ್ನು ಕಳೆದುಕೊಂಡಿರುವ, ಸವಾಲೆಸೆಯುವಂತಹ ವ್ಯಕ್ತಿತ್ವವನ್ನು ಹೊಂದಿರುವವ ರೊಂದಿಗೆ ವರ್ತಿಸುವಾಗ ಶಾಂತತೆ ಮತ್ತು ಹೊಂದಾಣಿಕೆ ಯ ಮನೋಭಾವದಿಂದ ಪರಿಸ್ಥಿತಿಯನ್ನು ಪರಿಣಾಮ ಕಾರಿಯಾಗಿ ನಿರ್ವಹಿಸಬೇಕಾದ್ದು ಅತ್ಯವಶ್ಯಕ.

ಅವರೊಂದಿಗಿನ ಸಂವಹನದಲ್ಲಿ ನಿಮ್ಮ ಸಮಯ ಮತ್ತು ಶಕ್ತಿ ತೋರಿಹೋಗದಂತೆ ಸ್ಪಷ್ಟವಾದ ಮಿತಿಗಳನ್ನು ಹಾಕಿಕೊಳ್ಳುವುದು ಒಳಿತು. ಒಪ್ಪಿಕೊಳ್ಳಬಹುದಾದ ಮತ್ತು ಒಪ್ಪಿಕೊಳ್ಳಲಾಗದ ವರ್ತನೆಗಳ ನಡುವಿನ ಅಂತರವನ್ನು ಅರಿತು ನಿಮ್ಮಆತ್ಮಗೌರವ ಮತ್ತು ಅಂತಃಸ್ಸತ್ವವನ್ನು ಉಳಿಸಿಕೊಳ್ಳಬೇಕು. ಅಂತಹ ವ್ಯಕ್ತಿಗಳೊಂದಿಗಿನ ಮಾತುಕತೆಯಲ್ಲಿ ಅವರ ತೊಂದರೆಯ ಕುರಿತು ಗಮನಹರಿಸಬೇಕೆ ವಿನಃ ಆ ವ್ಯಕ್ತಿಯನ್ನು ಕುರಿತಲ್ಲ. ವಿಷಯದ ಕುರಿತಾದ ಚರ್ಚೆ ರಚನಾತ್ಮಕವಾಗಿದ್ದು ಯಾವುದೇ ರೀತಿಯ ವೈಯುಕ್ತಿಕ ದೋಷಾರೋಪಗಳನ್ನು ಹೊರಿಸಲು ಸಾಧ್ಯವಾಗದಂತೆ ಇರಬೇಕು..ಸಮಸ್ಯೆಯನ್ನು ದೀರ್ಘಕಾಲ ಎಳೆಯದೆ ಸೂಕ್ತವಾಗಿ ಮತ್ತು ಕ್ಷಿಪ್ರವಾಗಿ ಪರಿಹರಿಸಬೇಕು. ತಮ್ಮದೇ ಅಹಮ್ಮಿನ ಕೋಟೆಯೊಳಗೆ ಬಂಧಿಯಾಗಿರುವ ಅವರು ಬೇರೆಯವರ ಅಭಿಪ್ರಾಯ ಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ, ಆದರೂ ಪ್ರಯತ್ನ ಮಾಡಿದರೆ ತಪ್ಪಿಲ್ಲ ಎಂಬ ಭಾವದಿಂದ ಪ್ರಯತ್ನಿಸಿ. ನಿಮ್ಮ ಮುಂದೆ ಒಪ್ಪದೇ ಹೋದರು ಅವರ ಅಂತರಾತ್ಮಕ್ಕೆ ತಪ್ಪು ಸರಿಗಳ ಕಿಂಚಿತ್ ಅರಿವಾದರೂ ಉಂಟಾಗಬಹುದು.

ನಿಮ್ಮ ಅವಶ್ಯಕತೆಗಳನ್ನು ಮತ್ತು ಅಭಿಪ್ರಾಯಗಳನ್ನು ಜೋರು ಮಾತಿಂದ ಹೇಳದೆ ಮೆಲುವಾಗಿ ಆದರೆ ಸ್ಪಷ್ಟ ಮತ್ತು ಗೌರವಯುತ ಸಂಭಾಷಣೆಯ ಮೂಲಕ ವ್ಯಕ್ತಪಡಿಸಬೇಕು. ಇದು ವಿಷಯದೆಡೆಗಿನ ನಿಮ್ಮ ದೃಢ ಮತ್ತು ಅಧಿಕಾರಯುತ ವರ್ತನೆಗೆ ಸಾಕ್ಷಿಯಾಗಬೇಕು. ಪ್ರತಿ ಬಾರಿಯೂ ಹೋಗಲಿ ಬಿಡು ಎಂಬ ಉದಾರ ಭಾವವನ್ನು ನಿಮ್ಮ ಬಲಹೀನತೆ ಎಂದು ಅವರು ತಿಳಿದುಕೊಳ್ಳಬಾರದು.. ಅವಶ್ಯವೆನಿಸಿದಲ್ಲಿ ತುಸು ಕಠಿಣತೆ ಒಳ್ಳೆಯದು.ಎಲ್ಲ ಯುದ್ಧಗಳನ್ನು ಗೆಲ್ಲಲೇಬೇಕೆಂದಿಲ್ಲ, ಮತ್ತೆ ಕೆಲ ಯುದ್ಧಗಳು ಹೋರಾಟಕ್ಕೆ ಯೋಗ್ಯವಲ್ಲ, ಬದಲಾಗಲು ಇಲ್ಲವೇ ಹೊಂದಿಕೊಳ್ಳಲು ಒಬ್ಬ ವ್ಯಕ್ತಿ ಒಪ್ಪದೇ ಹೋದಾಗ ನೀವು ನಿಮ್ಮ ವೈಯುಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಿಂದೆ ಸರಿಯಬಹುದು.ಇದನ್ನೇ ನಮ್ಮ ಹಿರಿಯರು “ಬೇಕಿದ್ದರೆ ಬೆರೆತು ನಡೆ, ಬೇಡವಾದರೆ ಸರಿದು ನಡೆ” ಎಂದು ಹೇಳಿರುವುದು. ಅವರು ಎದುರಿಸುತ್ತಿರುವ ಸವಾಲುಗಳನ್ನು ಸಹಾನುಭೂತಿಯಿಂದ ನೋಡುವುದರಲ್ಲಿ ತಪ್ಪಿಲ್ಲ ಆದರೆ ಅವರ ನಿರಾಶಾವಾದ ನಮ್ಮ ಬದುಕಿನ ಮೇಲೆ ಪರಿಣಾಮವನ್ನು ಬೀರದಂತೆ ಸಮತೋಲನವನ್ನು ಸಾಧಿಸಬೇಕು. ಸ್ವಯಂ ಅರಿವು, ಭಾವನಾತ್ಮಕ ಜಾಣ್ಮೆ ಮತ್ತು ಜಾಣ ನಡೆಗಳ ಮೂಲಕ ಇಂತಹ ವ್ಯಕ್ತಿಗಳನ್ನು ಸಂಭಾಳಿಸುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳಿತು. ಇಂತಹ ವ್ಯಕ್ತಿಗಳು ತಮ್ಮ ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಸೋತಿದ್ದು ‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬಂತೆ ತಮ್ಮ ಬದುಕಿನ ಎಲ್ಲಾ ಆಗುಹೋಗುಗಳಿಗೆ ತಮ್ಮ ಕ್ರಿಯಾಶೀಲತೆಯ ಕೊರತೆಯನ್ನು ಕಾರಣವಾಗಿಸದೆ ಬೇರೆಯವರತ್ತ ಬೆರಳು ತೋರುತ್ತಾರೆ.ತಮ್ಮದೇ ಸರಿ ಎಂಬ ಧೋರಣೆಯಲ್ಲಿ ಬೇರೆಯವರನ್ನು ನೋಯಿಸಿ ನರಳಿಸುತ್ತಾರೆ, ಎಲ್ಲರಲ್ಲೂ, ಎಲ್ಲದರಲ್ಲೂ ಪರಿಪೂರ್ಣತೆಯನ್ನು ಆಶಿಸುವ ಅವರು ತಾವು ಮಾತ್ರ ಅಪರಿಪೂರ್ಣರಾಗಿಯೇ ಉಳಿಯುತ್ತಾರೆ.

ಅಕಸ್ಮಾತ್ ಕುಟುಂಬದಲ್ಲಿ ಇಂತಹ ನಿರಾಶಾವಾದವನ್ನು ಹೊಂದಿರುವ, ತಾನೇ ಸರಿ ತನ್ನದೇ ಸರಿ ಎಂಬ ಮನೋಭಾವವನ್ನು ಹೊಂದಿರುವ ವ್ಯಕ್ತಿ ಇದ್ದರೆ, ಮತ್ತು ಅವರು ತಮ್ಮಿಂದ ಬೇರೆಯವರಿಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಅರಿತುಕೊಳ್ಳದೆ ಹೋದಾಗ( ಬಹುತೇಕ ಸಂದರ್ಭದಲ್ಲಿ ಅರಿತುಕೊಳ್ಳುವುದಿಲ್ಲ ಕೂಡ),ಆ ಕುಟುಂಬ ಅವರಿಂದ ಬಹಳಷ್ಟು ಮಾನಸಿಕ ತೊಂದರೆಗಳನ್ನು ಅನುಭವಿಸುವುದಲ್ಲದೆ ಸಾಮಾಜಿಕವಾಗಿಯು ಘನತೆಯ ಬದುಕನ್ನು ಬದುಕಲು ಸಾಧ್ಯವಾಗದ ಪರಿಸ್ಥಿತಿ ಒದಗುತ್ತದೆ.
ಇಲ್ಲದ ಪ್ರತಿಷ್ಟೆಗಳು, ವೈಯುಕ್ತಿಕ ಹಿತಾಸಕ್ತಿ, ವಿವೇಚನಾ ರಹಿತ ನಡೆಗಳ ಮೂಲಕ ಅಪಹಾಸ್ಯಕ್ಕೆ ಒಳಗಾಗುವ ಇಂತಹವರು ತಾವು ಎಲ್ಲಿ ತಪ್ಪುತ್ತಿದ್ದೇವೆ ಎಂಬುದನ್ನು ಪರಾಮರ್ಶೆಗೆ ಒಳಪಡಿಸದೆ ಹೋಗುತ್ತಾರೆ.ತಮ್ಮನ್ನು ತಾವು ತಿದ್ದಿಕೊಳ್ಳಲು ಯೋಚಿಸದೆ ಹೋದಾಗ ಅವರ ಜೊತೆಗಿರುವ ಜನ ದೂರ ಸರಿಯುವುದನ್ನು ಕಂಡು ಅವರ ಮೇಲೆ ಇಲ್ಲದ ಅಪವಾದಗಳನ್ನು ಹೊರಿಸುವ ಮೂಲಕ ತೃಪ್ತಿಯನ್ನು ಕಂಡುಕೊಳ್ಳಲು ಬಯಸುತ್ತಾರೆ. ಇಂಥವರಿಗೆ ಹೊಂದಾಣಿಕೆ,ಪ್ರೀತಿ, ವಿಶ್ವಾಸ, ಇದ್ದುದರಲ್ಲಿಯೇ ತೃಪ್ತಿಯನ್ನು ಕಂಡುಕೊಳ್ಳುವ ವಿಶಾಲ ಮನೋಭಾವ ಮತ್ತು ಸೂಕ್ತ ಮಾನಸಿಕ ಚಿಕಿತ್ಸೆಯ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಅವರ ಕುಟುಂಬದವರು ಕಾರ್ಯ ನಿರ್ವಹಿಸಬೇಕು.

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ
ಗದಗ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ