ಒಲ್ಲೆನೆನಬೇಡ.
ನೆನಪಿನಂಗಳದಲ್ಲಿ ಮುತ್ತು ರತ್ನಗಳುಂಟು
ಹೆಕ್ಕೋಣ ಬಾ ಗೆಳೆಯ ಒಲ್ಲೆನೆನಬೇಡ
ಚಿಕ್ಕದಾಗಲಿ ದೊಡ್ಡದಾಗಿರಲಿ ಬಿಡಬೇಡ
ಮಿಕ್ಕಿದರು ಸರಿಯೆ ದಣಿವಾಯಿತೆನಬೇಡ ||೧||
ನಮಗಂಟಿಕೊಂಡಿರುವ ವಾಸ್ತವದ ಬದುಕಿಂದ
ತುಸು ಹೊರಗೆ ನೀ ನೋಡು ಒಮ್ಮೆಬಂದು
ಅಕ್ಕಪಕ್ಕದ ಜಾಡು ಹಸಿರು ಹೊನ್ನಿನ ಮಾಡು
ಗೊಂದಲಕೆ ವಿರಾಮವದು ನಿಂದು ನೋಡು ||೨||
ಕಪ್ಪು ಮೋಡದ ಮಾತು ಕಠಿಣವಾದರು ಏನು
ನಿಷ್ಕಲ್ಮಶದಿ ಬಂದ ಭಾವಗೀತೆ
ಮಂಕಾದ ಮುಗಿಲಲ್ಲೆ ಮೊಳೆವ ಬೀಜಗಳುಂಟು
ಕಣ್ಮುಚ್ಚಿ ಕೂರದಿರು
ಚಿಂತೆ ||೩||
ಹತ್ತಾರು ಕನಸುಗಳ ಗೆಜ್ಜೆ ಸದ್ದಿನ ಕತೆಗೆ
ಮುನ್ನುಡಿಯ ದೀವಟಿಗೆ ನೀನಾಗು ಬಾ
ಮಾಗಿರುವ ಹಣ್ಣಲ್ಲೆ ಹೊಸತನದ ಭವಿಷ್ಯವು
ಬೇಗುದಿಯ ತೊರೆದುದಯಮುಖಿಯಾಗಿ ಬಾ ||೪||
– ನಾಗರತ್ನಾತ್ಮಜೆ
(ಮಂಜಮ್ಮ ಎ ಬಿ) ಹೊಳೆಸಿರಿಗೆರೆ ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ