ಓದಿನ ಮಹತ್ವ.
– ವೀಣಾ ಹೇಮಂತ್ ಗೌಡ ಪಾಟೀಲ್.
ಒಳ್ಳೆಯ ಓದು, ಚಿಂತೆಗಳನ್ನು ಮನದ ದುಗುಡಗಳನ್ನು ದೂರ ಮಾಡಿ ನಮ್ಮನ್ನು ಒತ್ತಡರಹಿತರನ್ನಾಗಿಸುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ. ನಮ್ಮ ಗುರಿಯನ್ನು ತಲುಪಲು ಓದು ಸಹಕಾರಿಯಾಗಿದ್ದು ಪಠ್ಯಕ್ರಮದ ಓದುವಿಕೆಯು ನಮ್ಮನ್ನು ಚಾಣಾಕ್ಷರನ್ನಾಗಿಸುವುದಲ್ಲದೆ ನಮ್ಮ ವೈಯುಕ್ತಿಕ ಬದುಕಿನಲ್ಲಿ ಮಹತ್ತರ ಸ್ಥಾನವನ್ನು ಗಳಿಸಲು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಪ್ರಾಚೀನ ಕಾಲದಿಂದಲೂ ಮನುಷ್ಯನ ಅತ್ಯುತ್ತಮ ಹವ್ಯಾಸಗಳಲ್ಲಿ ಒಂದಾಗಿರುವುದು ಪುಸ್ತಕದ ಓದು. ನಮ್ಮ ಬುದ್ಧಿಯ ತೃಷೆಗೆ ಅಮೃತದ ಸವಿಯನ್ನು ನೀಡುವ ಓದು ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಹೊಸ ವಿಷಯಗಳ ಕುರಿತು ಅರಿವನ್ನು ಮೂಡಿಸುತ್ತದೆ.
ಜಗತ್ತಿನ ಸರ್ವ ಚರಾಚರಗಳಲ್ಲಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮನುಷ್ಯನಿಗೆ ಓದು ಮತ್ತು ಬರಹ ಎಂಬ ಎರಡು ಅಸ್ತ್ರಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡವರೇ ಧನ್ಯರು.
ಜ್ಞಾನವನ್ನು ಸಂಪಾದಿಸಲು ಓದು ಮುಖ್ಯ. ಭೂಗೋಳದಿಂದ ಖಗೋಳದವರೆಗೆ, ಪ್ರಾಚೀನ ಕಾಲದಿಂದ ಇಂದಿನವರೆಗೆ, ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೆ ಬದುಕಿನ ವಿವಿಧ ಹಂತಗಳಲ್ಲಿ ಜಾತಿ, ಮತ, ಲಿಂಗ, ವಯಸ್ಸುಗಳ ಭೇದವಿಲ್ಲದೆ ಓದುವಿಕೆಯ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
ಒಳ್ಳೆಯ ಓದು ನಮ್ಮ ಜಾಣ್ಮೆಯನ್ನು ಹೆಚ್ಚಿಸಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಸಕಾರಾತ್ಮಕ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ತಪ್ಪು ಸರಿಗಳನ್ನು ಪರಿಕಿಸಿ ನೋಡುವ,ವಿವೇಚಿಸುವ ಶಕ್ತಿಯನ್ನು ಕೊಡುತ್ತದೆ. ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಓದಿನಿಂದ ಸಂಪಾದಿಸಿದ ಜ್ಞಾನವು ಸಹಾಯಕ.
ಒಳ್ಳೆಯ ಓದು ನಿಮ್ಮನ್ನು ಉತ್ತಮ ಬರಹಗಾರರನ್ನಾಗಿ ರೂಪಿಸುತ್ತದೆ. ನಿಮ್ಮಲ್ಲಿ ಸೃಜನಶೀಲತೆಯನ್ನು ತುಂಬಿ ಮೇಧಾವಿಗಳನ್ನಾಗಿಸುತ್ತದೆ. ಬೇರೊಬ್ಬರ ಮನದ ಭಾವನೆಗಳನ್ನು ಓದಲು ಓದು ಸಹಾಯಕವಾಗುತ್ತದೆ. ಓದು ನಮ್ಮಲ್ಲಿ ಜ್ಞಾನವನ್ನು ಹೆಚ್ಚಿಸಿ ಸರಿ ತಪ್ಪುಗಳ ಒಳಿತು ಕೆಡುಕುಗಳ, ಮಹಾನತೆ ಮತ್ತು ಗಹನತೆಗಳ
ಚಿಂತನೆಗೊಳಪಡಿಸುತ್ತದೆ.
ಒಳ್ಳೆಯ ಓದು, ಚಿಂತೆಗಳನ್ನು ಮನದ ದುಗುಡಗಳನ್ನು ದೂರ ಮಾಡಿ ನಮ್ಮನ್ನು ಒತ್ತಡರಹಿತರನ್ನಾಗಿಸುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ. ನಮ್ಮ ಗುರಿಯನ್ನು ತಲುಪಲು ಓದು ಸಹಕಾರಿಯಾಗಿದ್ದು ಪಠ್ಯಕ್ರಮದ ಓದುವಿಕೆಯು ನಮ್ಮನ್ನು ಚಾಣಾಕ್ಷರನ್ನಾಗಿಸುವುದಲ್ಲದೆ ನಮ್ಮ ವೈಯುಕ್ತಿಕ ಬದುಕಿನಲ್ಲಿ ಮಹತ್ತರ ಸ್ಥಾನವನ್ನು ಗಳಿಸಲು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಓದುವಿಕೆ ನಮ್ಮಲ್ಲಿ ವಿಭಿನ್ನ ಸಾಂಸ್ಕೃತಿಕ ಸಾಮಾಜಿಕ ರಾಜಕೀಯ ಮತ್ತು ಐತಿಹಾಸಿಕ ವಿಷಯಗಳನ್ನು ಅರಿಯಲು ಸಹಾಯಕ. ತುಲನಾತ್ಮಕ ಓದುವಿಕೆಯ ಮೂಲಕ ನಾವು ವಿಭಿನ್ನ ಪರಿಸರಗಳು ನೆಲೆಗಳು ಸಾಮಾಜಿಕ ಸ್ಥಿತ್ಯಂತರಗಳ ಯುದ್ಧಗಳ ವಾಸ್ತವಿಕತೆಯನ್ನು ಅರಿಯಬಹುದು. ಒಳ್ಳೆಯ ಓದು, ಸ್ನೇಹಿತನಂತೆ ನಮ್ಮನ್ನು ಕೈ ಹಿಡಿಯುತ್ತದೆ, ನೊಂದ ಜೀವಕ್ಕೆ ತಂಪನೆರೆಯುತ್ತದೆ, ಮನಸ್ಸಿಗೆ ಸಂತೋಷ, ಸಮಾಧಾನ,ನೆಮ್ಮದಿ ಮತ್ತು ಆಹ್ಲಾದತೆಯನ್ನು ತಂದು ಕೊಡುತ್ತದೆ. ದಣಿದ ದೇಹಕ್ಕೆ ಅಮ್ಮನಂಥ ಪ್ರೀತಿಯನ್ನು, ಅಪ್ಪನ ತಿಳುವಳಿಕೆಯನ್ನು, ಸೋದರ ವಾತ್ಸಲ್ಯವನ್ನು, ಪ್ರೀತಿಯ ಸಾಂಗತ್ಯವನ್ನು ನೀಡಿ ನಮ್ಮನ್ನು ಸಲಹುತ್ತದೆ.
ಓದುವಿಕೆ ನಮಗೆ ಬೌದ್ಧಿಕ ಶಕ್ತಿ-ಸಾಮರ್ಥ್ಯಗಳನ್ನು, ವಿವೇಚನಾ ಶಕ್ತಿಯನ್ನು ನೀಡುತ್ತದೆ,ನಮ್ಮ ಕಲ್ಪನೆಯ ಹಕ್ಕಿಯ ರೆಕ್ಕೆಗೆ ಕಸುವನ್ನು ತುಂಬುತ್ತದೆ. ಓದು ಮಾತನಾಡುವ, ಬರೆಯುವ ಕೌಶಲವನ್ನು ಹೆಚ್ಚಿಸುತ್ತದೆ.
ಓದು ನಮ್ಮಲ್ಲಿ ಮಾನವೀಯ ಗುಣಗಳ ಆಗರವನ್ನು ಸೃಷ್ಟಿಸುತ್ತದೆ. ಮನುಷ್ಯನಲ್ಲಿರುವ ಅಸುರೀ ಗುಣಗಳಾದ ದ್ವೇಷ, ಅಸಹನೆ, ಸಿಟ್ಟು, ಅಸೂಯೆ,ಮೋಹ, ಮದ, ಮತ್ಸರಗಳನ್ನು ನಾಶ ಮಾಡಿ ಪ್ರೀತಿ ಕರುಣೆ ದಯೆ ಮತ್ತು ಸಹಾನುಭೂತಿಗಳನ್ನು ಕಲಿಸುತ್ತದೆ. ಓದು ನಮ್ಮನ್ನು ಮನುಷ್ಯನಿಂದ ಮಾನವನನ್ನಾಗಿಸುತ್ತದೆ. ಸಂಕುಚಿತ ಮನಸ್ಥಿತಿಯಿಂದ ವಿಶ್ವ ಮಾನವನನ್ನಾಗಿಸುವ ಓದುವಿಕೆಯನ್ನು ನಿಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಿ. ಓದುವಿಕೆ ನಿಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಲಿ.
ಅಯ್ಯೋ! ನಮ್ಮ ಆಧುನಿಕ ಜೀವನದ ಒತ್ತಡಗಳಲ್ಲಿ ಓದಲು ಸಾಧ್ಯವಾಗುವುದಿಲ್ಲ ಎಂದು ಹಲುಬುವವರಿಗೆ ಓದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕೆಲ ಟಿಪ್ಸ್ ಗಳು.
1. ದಿನಕ್ಕೆ ಕಡ್ಡಾಯವಾಗಿ ಒಂದು ಪುಟವನ್ನಾದರೂ ಓದುತ್ತೇನೆ ಎಂದು ಮಿತಿಯನ್ನು ಹಾಕಿಕೊಳ್ಳಬೇಕು… ನಂತರ ಕ್ರಮೇಣ ಈ ಮಿತಿಯನ್ನು ಹೆಚ್ಚಿಸುತ್ತಾ ಹೋಗಬಹುದು.
2. ವಿವಿಧ ವಿಷಯಗಳನ್ನು ಅರಿಯುವ ಕುತೂಹಲವನ್ನು ಬೆಳೆಸಿಕೊಂಡಾಗ ಓದುವಿಕೆ ನಿಮ್ಮ ಕೈ ಹಿಡಿಯುತ್ತದೆ.
3. ಮೊದಮೊದಲು ತಮಾಶೆಯ, ಚರ್ವಿತ ಚರ್ವಣ ಎಂದೆನಿಸುವ ವಿಷಯಗಳನ್ನು ಓದಲು ಆರಂಭಿಸಿ. ಒಮ್ಮೆ ಓದಿನ ರುಚಿ ದೊರೆತ ನಂತರ ವಿಷಯದಲ್ಲಿ ವೈವಿಧ್ಯತೆ ಯನ್ನು ನೀವೇ ಹೊಂದುವಿರಿ.
4. ಒಂದು ಓದಿಗೆ ಮುಗಿಯುವಂತಹ ಪುಟ್ಟ ಆದರೆ ಆಕರ್ಷಕವಾದ ಒಂದು ಇಲ್ಲವೇ ಎರಡು ಪುಟದ ಲೇಖನಗಳನ್ನು ಓದಲಾರಂಭಿಸಿ…. ಸತತವಾಗಿ ಹೀಗೆ ಪ್ರಯತ್ನಿಸುತ್ತಾ ಸಾಗಿದಾಗ ಮುಂದೆ ಇನ್ನೂ ಹೆಚ್ಚಿನ ಗಹನ ವಿಷಯಗಳನ್ನು ಅರಿಯುವ ಆಸಕ್ತಿ ತನ್ನಿಂತಾನೇ ಉಂಟಾಗುತ್ತದೆ.
5. ಕಡ್ಡಾಯವಾಗಿ ಓದಲೇಬೇಕು ಎಂದು ನೀವು ಹಾಕಿಕೊಂಡ ಮಿತಿ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ತಪ್ಪಿ ಹೋಗಬಹುದು…. ಆಗ
ಅಯ್ಯೋ ನನ್ನಿಂದ ಆಗೋದಿಲ್ಲ ಎಂದು ಕೈಬಿಡದೆ ಮರಳಿ ಪ್ರಯತ್ನಿಸಿ ಓದುವಿಕೆಯನ್ನು ನಿಮ್ಮದಾಗಿಸಿಕೊಳ್ಳಿ.
ಸ್ನೇಹಿತರೆ ಒಳ್ಳೆಯ ಓದಿನ ಮಹತ್ವವನ್ನು ಅರಿತು ಓದಿರಿ, ಓದಲು ಕಲಿಸಿರಿ ಮತ್ತು ಓದಿನ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸಿ ಮುಂದಿನ ಜನಾಂಗಕ್ಕೆ ದಾರಿ ದೀಪವಾಗುವ ಆಶಯವನ್ನು ಜೀವಂತವಾಗಿರಿಸೋಣ ಎಂಬ ಹಾರೈಕೆಯೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.