Oplus_131072

ರೈತ ದಿನಾಚರಣೆ

 

ಸಂಗಮೇಶ ಎನ್ ಜವಾದಿ.

ಭಾರತ ಕೃಷಿ ಪ್ರಧಾನ ದೇಶ, ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ನಮ್ಮನ್ನು ಸದಾ ಕಾಲ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯ ಆಗಾರ. ಭಾರತವು ಮುಖ್ಯವಾಗಿ ಕೃಷಿ ಗ್ರಾಮಗಳ ನಾಡು ಮತ್ತು ಹಳ್ಳಿಗಳಲ್ಲಿ ವಾಸಿಸುವ ಬಹುಪಾಲು ರೈತರಿಗೆ ಕೃಷಿ ಆದಾಯ ಪ್ರಮುಖ ಮೂಲವಾಗಿದೆ. 70% ಭಾರತೀಯರು ಈಗಲೂ ಕೃಷಿ ಮೂಲಕ ಉತ್ಪತ್ತಿಯಾದ ಆಹಾರ ಹಾಗೂ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ ಎನ್ನವುದಂತು ಸತ್ಯ ಅಲ್ಲವೇ? ಹಾಗಾಗಿ ದೇಶದ ಕೃಷಿಗೆ 9000 ಕ್ರಿ ಪೂ. ದ ಇತಿಹಾಸ ಇರುವುದು ಕಾಣುತ್ತವೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಹಾಗೂ ಸ್ವಾರ್ಥ ರಾಜಕೀಯ ನಾಯಕರುಗಳ ಕಪಿಮುಷ್ಟಿ ಹಿಡಿತದಲ್ಲಿ ನರಳುತ್ತಿರುವದರಿಂದ ರೈತನ ಬದುಕು ಅಸಹನೀಯ – ಅಯೋಮಯವಾಗಿದೆ, ಇಂದಿನ ಕೃಷಿ, ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಯೋಜನೆಗಳು ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು (ಕೃಷಿಗೆ) ಕಠಿಣ ಸ್ಥಿತಿ ಕಾಣುತ್ತಿರುವುದು ಸ್ಪಷ್ಟ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಾವ್ಯಾರು ಮರೆಯಬಾರದು ರೈತ ಬಂಧುಗಳೆ.

ಭಾರತೀಯ ರೈತರು ಎದುರಿಸುತ್ತಿರುವ ಸವಾಲುಗಳು:

ಭಾರತೀಯ ರೈತರು ಎದುರಿಸುತ್ತಿರುವ ಮುಖ್ಯವಾದ ಸಮಸ್ಯೆಗಳನ್ನು ಎಂದರೆ, ಹವಾಮಾನ ವೈಪರೀತ್ಯ, ಮಳೆ ಅಭಾವ, ಪ್ರವಾಹ, ಸಣ್ಣ ಹಿಡುವಳಿ, ರೈತರ ಉತ್ಪಾದನೆಗೆ ಬೆಂಬಲ ಬೆಲೆ ನಿಗದಿ ಆಗದೆ ಇರುವುದು ಹಾಗೆ ವಿವಿಧ ಕಾರಣಗಳಿಗಾಗಿ ರೈತನಿಗೆ ಸಮೃದ್ಧ ಉತ್ಪಾದನೆ ಮತ್ತು ಲಾಭದಾಯಕ ಆದಾಯ ಬರುತ್ತಾ ಇಲ್ಲ. ಆದರೆ ಇನ್ನೊಂದೆಡೆ ಬ್ಯಾಂಕ್ ಅಧಿಕಾರಿಗಳು ಕೊಟ್ಟ ಸಾಲ ಬೆಳೆಯುತ್ತಿದೆ. ಉದಾರೀಕರಣ, ಜಾಗತೀಕರಣ, ಹೊಸ ಆರ್ಥಿಕ ನೀತಿಗಳು ಇವುಗಳು ರೈತರ ಮೇಲೆ ಋಣಾತ್ಮಕ ಪರಿಣಾಮವನ್ನೂ ಬೀರುತ್ತಿವೆ. ಒಂದು ಕಾಲದಲ್ಲಿ ಸ್ವಾವಲಂಬಿಗಳಾದ ರೈತರು ಇಂದು ಬೀಜ, ಗೊಬ್ಬರ, ಔಷಧ, ಉಪಕರಣಗಳು, ಸಾಲ, ಸಾರಿಗೆ, ಮಾರುಕಟ್ಟೆ, ಬೆಲೆ, ತಾಂತ್ರಿಕ ಜ್ಞಾನ ಮುಂತಾದ ಕಾರಣಗಳಿಗಾಗಿ ಪರಾವಲಂಬಿಗಳಾಗುತ್ತಿದ್ದಾರೆ. ರೈತರು ತಮ್ಮ ತಪ್ಪಲ್ಲದ ಕಾರಣಕ್ಕಾಗಿ ಕಷ್ಟ-ನಷ್ಟಗಳನ್ನು ಎದುರಿಸುವಂತಾಗಿದೆ. ರೈತರ ಸ್ಥಿತಿ ಚಿಂತಾಜನಕವಾಗಿದೆ.ಸರಕಾರಗಳು ರೈತರಿಗೆ ಬೇಕಾದ ಬೀಜ, ಗೊಬ್ಬರ ಇತ್ಯಾದಿ ಅವಶ್ಯ ವಸ್ತುಗಳನ್ನು ಪೂರೈಸಲು ಮುಂಗಡವಾಗಿಯೇ ಕ್ರಮ ಕೈಗೊಳ್ಳುವುದಿಲ್ಲ. ಅಧಿಕಾರಿಗಳು, ವಿಷಯ ತಜ್ಞರು ಸರಕಾರ ನಡೆಸುವವರ ಕೈಗೊಂಬೆಯಾಗಿದ್ದಾರೆ. ಅವರು ಸರಕಾರಗಳಿಗೆ ಸೂಕ್ತ ಸಲಹೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಸಹಕಾರಿ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರೀಕ್ಷಿತ ಮಟ್ಟದಲ್ಲಿ ನಿರ್ವಹಿಸುತ್ತಿಲ್ಲ. ಇವೆಲ್ಲವುಗಳ ಪರಿಣಾಮವಾಗಿ ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ನಿರೀಕ್ಷಿತ ಇಳುವರಿ ಬರುತ್ತಿಲ್ಲ. ಪ್ರತೀಕ್ಷಿತ ಆದಾಯ ಬರುತ್ತಿಲ್ಲ. ರೈತರು ಕಂಗಾಲಾಗಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡುವುದು ಕಷ್ಟವಾಗಿದೆ. ಸಾಲ ಹಾಗೂ ಬಡ್ಡಿ ಬೆಳೆಯುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ರೈತರಿಗೆ ಧೈರ್ಯ, ಶಕ್ತಿ ಸಾಲದಾಗಿದೆ. ಪರಿಣಾಮವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಂತೂ ಭಾರತೀಯ ರೈತರಲ್ಲಿ ಈ ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, 2002 ರಿಂದ ಈಚಿಗೆ ದೇಶದಲ್ಲಿ ಪ್ರತಿ ಅರ್ಧ ತಾಸಿಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದು ಅತ್ಯಂತ ನೋವಿನ ವಿಚಾರ ವಲ್ಲವೇ? ಮತ್ತು ರೈತ ಸಮುದಾಯಕ್ಕೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿ ಸೇವಾ ಸೌಲಭ್ಯವನ್ನು ಹೆಚ್ಚಿಸುವುದು ಇಂದಿನ ತುರ್ತು ಅಗತ್ಯ ಆದರೆ ಈ ನಿಟ್ಟಿನಲ್ಲಿ ಕೆಲಸ ಆಗದೆ ಇರುವುದು ದುರುಷ್ಟಕರ ಸಂಗತಿ ಜೊತೆಗೆ ಉತ್ಪಾದನೆ ಮತ್ತು ಮಾರಾಟ ಕ್ರಿಯೆಗಳ ನಡುವಣ ಅಂತರ, ಕೈಗಾರಿಕೆಗಳೊಡನೆ ಅನುಮತಿ ಸರಳೀಕರಣ ವ್ಯವಸ್ಥೆಯಲ್ಲಿನ ಕೊರತೆ, ಹಣಕಾಸು ಸೌಲಭ್ಯ ಒದಗಿಸುವಲ್ಲಿ ಕೊರತೆ, ಸಂಸ್ಥೆಗಳಿಗೆ ನೀಡುವ ಹಕ್ಕುಗಳ ವಿಷಯದಲ್ಲಿ ಕೊರತೆ, ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲತೆ, ಪ್ರಾವೀಣ್ಯತೆಯುಳ್ಳ ವೈಜ್ಞಾನಿಕ ಸಿಬ್ಬಂದಿಯ ಕೊರತೆ ಹಾಗೂ ತಂತ್ರಜ್ಞಾನದ ಕೊರತೆ ಮಖ್ಯವಾದವುಗಳು ಹಾಗೆ ರೈತರು ತಮಗೆ ಬೇಕಾಗುವಷ್ಟು ಸಾವಯವ ಗೊಬ್ಬರಗಳನ್ನು ಮುಂಚಿತವಾಗಿ ಆಲೋಚಿಸಿ, ಯೋಜಿಸಿ, ತಯಾರಿಸಿಕೊಂಡಿರುವುದಿಲ್ಲ. ಇಲ್ಲವೇ ಆ ಗೊಬ್ಬರ ಹಳ್ಳಿಗಳಲ್ಲಿ ಕೊಂಡುಕೊಳ್ಳಲು ಸಿಗುವುದಿಲ್ಲ. ಇದರ ಜೊತೆಗೆ ಬೆಳೆಗಳಿಗೆ ಸೂಕ್ತ ಮತ್ತು ಸಿಫಾರಸು ಮಾಡಿದ ರಸಾಯನಿಕ ಗೊಬ್ಬರ ಗ್ರಾಮಗಳಲ್ಲಿರುವ ರೈತರ ಸಹಕಾರ ಸಂಘಗಳಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಖಾಸಗಿ ವ್ಯಾಪಾರಸ್ಥರ ಹತ್ತಿರ ಸಿಗುತ್ತಿದ್ದರೂ ದುಪ್ಪಟ್ಟು ಹಣ ಕೊಡಬೇಕಾಗುತ್ತದೆ. ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರ ಹತ್ತಿರ ಇಂತಹ ರಸಾಯನಿಕ ಗೊಬ್ಬರಗಳನ್ನು ಖರೀದಿಸಲು ಹಣ ಇರುವುದಿಲ್ಲ. ಸಾಲು ಕೊಡಲು ಗ್ರಾಮೀಣ ಬ್ಯಾಂಕುಗಳು ಎಲ್ಲಾ ಹಳ್ಳಿಯಲ್ಲಿಯೂ ಇರುವುದಿಲ್ಲ. ಸಾಲ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಮತ್ತೆ ರೈತರು ಬೆಳೆಯನ್ನು ಯೋಗ್ಯ ಬೆಲೆಗೆ ಮಾರಲು ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ಗ್ರಾಮಾಂತರ ಮಾರುಕಟ್ಟೆ ಇಲ್ಲ ಎನ್ನುವುದು ಮತ್ತೊಂದು ದೊಡ್ಡ ಹಿನ್ನಡೆ ಹಾಗೆ ರೈತರ ಉತ್ಪಾದನೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ, ರೈತರು ತಮ್ಮ ಜೀವನದ ದೈನಂದಿನ ಕೆಲಸಕ್ಕಾಗಿ ಖಾಸಗಿ ವ್ಯಾಪಾರಿಗಳಿಗೆ, ಅಗ್ಗದ ಬೆಲೆಗಾಗಿ ಮಾರಾಟ ಮಾಡಬೇಕಾಗುತ್ತದೆ. ಪರಿಣಾಮವಾಗಿ ರೈತನಿಗೆ ಉಳಿಯಬೇಕಾದ ನಿವ್ವಳ ಆದಾಯ-ಲಾಭ ವ್ಯಾಪಾರಿಗಳ ಪಾಲಾಗುತ್ತದೆ. ಹೀಗಾಗಿ ಇಂತಹ ಅನೇಕ ದೊಡ್ಡ ಸಮಸ್ಯೆಗಳ ಪರಿಣಾಮದಿಂದ ಭಾರತೀಯ ರೈತರು ಎದುರಿಸುತ್ತಿರುವ ಸವಾಲುಗಳ ಕಾರಣಗಳಿಗಾಗಿ ರೈತ ಸಮುದಾಯ ಇಂದು ಕಂಗಾಲಾಗಿದೆ ಎನ್ನಬಹುದು .

ರೈತರ ಸಮಸ್ಯೆಗಳಿಗೆ ಪರಿಹಾರೋಪಾಯಗಳು:

ರೈತರ ಸಾಲ ಮನ್ನಾ ರೈತರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವಂತು ಅಲ್ಲವೇ ಅಲ್ಲ. ತಾತ್ಕಾಲಿಕವಾದ ಒಂದು ಪರಿಹಾರವಷ್ಟೇ. ಪ್ರತಿ ವರ್ಷ ಸಾಲ ಮನ್ನಾ ಮಾಡುತ್ತ ಹೋದರೆ ದೇಶದ ಸಂಪತ್ತೆ ಸಾಕಾಗುವುದಿಲ್ಲ. ಅಲ್ಲದೆ ದೇಶದ ಆರ್ಥಿಕ ಸಾಮರ್ಥ್ಯವನ್ನೂ ಕುಂಠಿತಗೊಳಿಸುತ್ತದೆ. ಸಾಲ ಮನ್ನಾ ಎಂಬ ತಾತ್ಕಾಲಿಕವಾದ ಕ್ರಮವನ್ನು ಬಿಟ್ಟು ರೈತರನ್ನು ಹೆಚ್ಚು ಸಮರ್ಥರನ್ನಾಗಿಸುವತ್ತ ಚಿಂತನೆ ಮಾಡಿ ಸೂಕ್ತ ಯೋಜನೆಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿಂತಿಸಬೇಕು. ಇಂತಹ ಒಂದು ಚಿಂತನೆಗೆ ಬುದ್ಧಿಜೀವಿಗಳು, ಆನುಭವಿ ರೈತರುಗಳು, ವಿಜ್ಞಾನಿಗಳು, ತಜ್ಞರು, ಕೃಷಿ ಕ್ಷೇತ್ರದ ಬಗ್ಗೆ ಜ್ಞಾನವುಳ್ಳ ಕೃ ಚಿಂತಕರು, ಕೃಷಿ ಪ್ರಜ್ಞಾವಂತ ಅಧಿಕಾರಿಗಳ ಸಲಹೆಗಳನ್ನೊಳಗೊಂಡ ಸಮಿತಿಯ ಶಿಫಾರಸ್ಸುಗಳನ್ನು ಪಡೆಯಬೇಕಲ್ಲದೆ ಅಧಿಕಾರದಲ್ಲಿರುವವರು ತಮಗೆ ಬೇಕಾದವರನ್ನಷ್ಟೇ ಅಂದರೆ ತಮ್ಮ ಸುತ್ತ ಓಡಾಡುವಂತಹವರನ್ನೇ ಸಮಿತಿಗಳಿಗೆ ನೇಮಕ ಮಾಡಿ ಮಾರ್ಗದರ್ಶನ ಪಡೆದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ ಬದಲಾಗಿ ಕೃಷಿಗೆ ಬೇಕಾಗುವ ಪರಿಹಾರದ ಮಾರ್ಗೋಪಾಯಗಳು ಕಂಡು ಹಿಡಿಯುವ ನಿಟ್ಟಿನಲ್ಲಿ ರೈತರ ಹೊಲಗಳಿಗೆ ತೆರಳಿ ಅವರು ಎದುರಿಸುತ್ತಿರುವ ಕಷ್ಟಗಳನ್ನು ಕೊಲಂಕುಷವಾಗಿ ಅಧ್ಯಯನ – ಸಂಶೋಧನೆ, ಮಾಡುವ ಮೂಲಕ ಸಲಹೆ,ಸೊಚನೆಗಳು ನೀಡುವುದು ಸೊಕ್ತ. ಹಾಗೂ ಈ ದಿಸೆಯಲ್ಲಿ ಉತ್ತಮ ಫಸಲನ್ನು ಪಡೆಯಲು ರೈತರು ಹಟ್ಟಿಗೊಬ್ಬರ, ಕಾಂಪೋಷ್ಟ್ ಗೊಬ್ಬರ, ಹಸುರೆಲೆಗೊಬ್ಬರ (ರಾಸಾನಿಯಕ ಗೊಬ್ಬರ – ಅವಶ್ಯ ಕಂಡಲ್ಲಿ ಮಾತ್ರ) ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು, ಉಪಯೋಗಿಸು ವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಅಲ್ಲದೆ ಉತ್ತಮ ಇಳುವರಿ ಬರಲು ಸಾಧ್ಯವಾಗಬಹುದು.ಮತ್ತು
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾರಾಟ ಕೇಂದ್ರ ಗಳು ಪ್ರಾರಂಭ ಆಗಬೇಕು. ಅಲ್ಲಿ ರೈತ ಸ್ನೇಹಿ ಸೂಕ್ತ ಹಾಗೂ ಉಪಯುಕ್ತ ಮಾರುಕಟ್ಟೆ ವ್ಯವಸ್ಥೆ ಇರಬೇಕು. ಇದಕ್ಕೆ ಕೆಲವು ಅಪವಾದಗಳೂ ಇವೆ. ರೈತರ ಉತ್ಪಾದನೆಗೆ ಸೂಕ್ತ ಬೆಲೆಗಳನ್ನು ಸರಕಾರಗಳು ಆಗಾಗ್ಗೆ ಪರಿಷ್ಕರಿಸಿ ಪ್ರಕಟಿಸುತ್ತಿರಬೇಕು. ಉತ್ಪಾದನಾ ಗುಣಮಟ್ಟದ ಆಧಾರದ ಮೇಲೆ ಪದಾರ್ಥಗಳ ವರ್ಗೀಕರಣ, ತೂಕ, ಬೆಲೆ, ವಂಚನೆ ರಹಿತ ವ್ಯವಸ್ಥೆ ಮಾರುಕಟ್ಟೆಯಲ್ಲಿ ಸಿಗುವಂತಾಗಬೇಕು. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತೆ ಸರಕಾರ ಯೋಜನೆ ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ಕುರಿತು ಅಧ್ಯಯನ ಮಾಡಲು 2006ರಲ್ಲಿ ಕೇಂದ್ರ ಸರಕಾರ ಸ್ವಾಮಿನಾಥನ್‌ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿತ್ತು. ಈ ಕಮಿಟಿ ದೇಶದ ನಾನಾ ಕಡೆ ಪ್ರವಾಸ ಮಾಡಿ 8 ತಿಂಗಳಲ್ಲಿ ವರದಿ ಸಲ್ಲಿಸಿದೆ. ವರದಿ ಸಲ್ಲಿಸಿ 10 ವರ್ಷಗಳು ಕಳೆದರೂ ಇನ್ನೂ ಈ ವರದಿ ಜಾರಿಯಾಗಿಲ್ಲ ಇದು ಜಾರಿಗೆ ಆಗುವ ದಿಸೆಯಲ್ಲಿ ಸರಕಾರ ಯೋಚನೆ ಮಾಡುವುದು ಒಳ್ಳೆಯದು ಹಾಗೂ ಕೃಷಿಕರ ಸಮಸ್ಯೆಗಳ ಅವಲೋಕನ ಹಾಗೂ ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು. ಅತೀವೃಷ್ಟಿ, ಅನಾವೃಷ್ಟಿ, ಮುಂದಾಲೋಚನೆ ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತ್ಯೇಕ ಹಣ ತೆಗೆದಿಟ್ಟು, ಅವಘಡಗಳು ಸಂಭವಿಸಿದಾಗ ರೈತರಿಗೆ ಬೆಳೆ ಪರಿಹಾರ ನೀಡುವ ಮೂಲಕ ರೈತರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರಕಾರಗಳು ಸಂಪೂರ್ಣವಾಗಿ ಹೊರಬೇಕು ಜೊತೆಯಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳು ಮತ್ತು ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಕೊಡುವುದು. ಕೃಷಿ ಇಲಾಖೆಯ ಸಂಪೂರ್ಣ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳುವ ವಿಧಾನಗಳ ಬಗ್ಗೆ ಮಾಹಿತಿ ಕೊಡುವುದು. ರೈತರ ಜಮೀನುಗಳ ಆರೋಗ್ಯ ಕಾಪಾಡುವುದು ಸಾವಯವ ಕೃಷಿಯ ಮಾಹಿತಿ ನೀಡುವುದು ಮತ್ತು ನೀರು ನಿರ್ವಹಣೆ ಮತ್ತು ಅಂತರ್ಜಲ ಹೆಚ್ಚಿಸಿಕೊಳ್ಳುವ ಮಾಹಿತಿ ಒದಗಿಸುವುದು. ಬೀಜ ಸಂಗ್ರಹ, ಬೀಜೋಪಚಾರ ಮತ್ತು ಲಘುಪೋಷಕಾಂಶಗಳ ಬಗ್ಗೆ ಮಾಹಿತಿ ನೀಡುವುದು. ರೈತರು ಬೆಳೆದ ಉತ್ಪನ್ನಗಳಿಂದ ಲಾಭಾಂಶವನ್ನು ಪಡೆದುಕೊಳ್ಳುಲು ರೈತರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ. ಮಾರುಕಟ್ಟೆಯಲ್ಲಿ ಹಾಗೂ ವಿವಿಧ ಇಲಾಖೆಯಲ್ಲಿ ರೈತರಿಗೆ ಬೇಕಾಗುವ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಇನ್ನುಳಿದ ಸಲಕರಣೆಗಳು ಸರಿಯಾದ ಸಮಯಕ್ಕೆ ಹಾಗೂ ನ್ಯಾಯಯುತ ಬೆಲೆಯಲ್ಲಿ ರೈತರಿಗೆ ಒದಗಿಸಲು ಸರಕಾರವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು ಸಹ ಕೃಷಿ ಕ್ಷೇತ್ರದ ಪರಿಹಾರಗಳು ಹಾಗೆ ಕೇವಲ ಸರಕಾರದ ಮೇಲೆ ಅವಲಂಬನೆಯಾಗದೇ ಕೆಲವಷ್ಟು ಮುಂಜಾಗ್ರತೆ ಕ್ರಮಗಳು ನಮ್ಮ ರೈತರು ತೆಗೆದುಕೊಳ್ಳುವುದು ಸೊಕ್ತ ಈ ದಿಸೆಯಲ್ಲಿ ರೈತರು ಕೃಷಿಗೆ ಹೆಚ್ಚಾಗಿ ರಸಾಯನಿಕ ಬಳಸುವ ಬದಲು ಸಾವಯವ ಕೃಷಿಯತ್ತ ಹೆಚ್ಚಿನ ಗಮನ ಹರಿಸಿದಾಗ ಪಲವತ್ತಾದ ಇಳುವರಿ ಜೊತೆಗೆ ಮಣ್ಣಿನ ಖನಿಜಾಂಶವನ್ನು ಉಳಿಸಲು ಸಾದ್ಯತೆ ಹೆಚ್ಚು ಇದಲ್ಲದೆ ಹವಾಮಾನ ವೈಪರಿತ್ಯ ಹಾಗೂ ಮಳೆಯ ಅಭಾವದ ಕಾರಣ ಮಣ್ಣಿನ ಫಲವತ್ತೆ, ಮಣ್ಣಿನಲ್ಲಿರುವ ಜೀವಕಾಂಶಗಳು ಹಾಳಾಗುತ್ತಿದೆ ಅದನ್ನು ಉಳಿಸಿಕೊಂಡು ಹೋಗಲು ರೈತರು ಪ್ರಜ್ಞಾವಂತರಾ ಗಬೇಕು.ಕ್ಷೇತ್ರ ಬದುಗಳು ನಿರ್ಮಾಣ ಮಾಡಿಕೊಳ್ಳುವುದು ಸರಿಯಾದ ಕ್ರಮ ಹಾಗೂ ಬರಡು ಜಮೀನುಗಳಲ್ಲಿ ಕೃಷಿ ಹೊಂಡ ಹಾಕಿಸಿಕೊಳ್ಳುವುದು ಉತ್ತಮ ಇದರಿಂದ ಮಳೆ ನೀರು ಉಳಿಸಿಕೊಂಡು, ಬೆಳೆಗಳಿಗೆ ಬೇಕಾದಾಗ ನೀರು ಬೀಡಲು ಸಹಾಯವಾಗುತ್ತದೆ. ಆಗಾಗ ಮಣ್ಣಿನ ಸಂರಕ್ಷಣೆಯ ಜೊತೆಗೆ ಜೇನು ಸಾಕಣಿಕೆ, ದ್ವಿದಳ ಧಾನ್ಯ, ಅಣಬೆ, ಕೋಕ್ ,ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ತರಕಾರಿ ಜೊತೆಗೆ ಸಾವಯವ ಕೃಷಿ ಮಾಡುವುದರಿಂದ ಸಮಗ್ರ ಕೃಷಿಯನ್ನು ಪದ್ದತಿಯನ್ನು ಅಳವಡಿಸಿಕೊಂಡು ಹೋಗುವುದು ಇಂದಿನ ದಿನಮಾನಗಳಲ್ಲಿ ಅವಶ್ಯವಾಗಿದೆ.

ರೈತರ ಬಗ್ಗೆ ಕಾಳಜಿ ಇರಲಿ :

ಚುನಾವಣೆ ಬಂದಾಗ ಭಾರತೀಯ ರೈತರನ್ನು ತಲೆ ಮೇಲೆ ಹೊತ್ತು ಕಾಳಜಿ ತೋರಿಸುವ ಇಂದಿನ ರಾಜಕೀಯ ಪಕ್ಷಗಳು ರೈತರನ್ನು ಹಾಗೂ ರೈತರ ದಿನಾಚರಣೆಯನ್ನೇ ಮರೆತಿವೆ. ಇದು ದೇಶಕ್ಕೆ ಅನ್ನ ಹಾಕುವ ಅನ್ನದಾತನಿಗೆ ಬಂದ ದುಃಸ್ಥಿತಿ. ರೈತರನ್ನು ಬೇಕಾದಾಗ ಉಪಯೋಗಿಸಿಕೊಂಡು ನಂತರ ಬೀಸಾಕುವ ವಸ್ತುವನ್ನಾಗಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ರಾಜಕೀಯ ಪಕ್ಷಗಳಿಗೆ ರೈತರು ತಕ್ಕ ಪಾಠ ಕಲಿಸಲು ಮುಂದಾಗಬೇಕು, ಮುಂದಾದಾಗಲೇ ರೈತರ ಬಾಳು ಹಸನಾಗಲು ಸಾಧ್ಯವಾಗಬಹುದು.ಹಾಗಾಗಿ ಇಂದು ಬಿಸಿಲು,ಮಳೆ,ಗಾಳಿ, ಚಳಿಯನ್ನು ಲೆಕ್ಕಿಸದೇ ಕೃಷಿ ನಂಬಿ ನಿರಂತರ ಪರಿಶ್ರಮದ ದುಡಿಮೆಯ ಮೂಲಕ ಬದುಕು ಸಾಗಿಸುತ್ತಿರುವ ಅನ್ನದಾತ ರೈತರ ಸ್ಥಿತಿ ಬಹಳಷ್ಟು ಕಷ್ಟಕರವಾಗಿದೆ.ಮುಂದಿನ ದಿನಗಳಲ್ಲಿ ಅನ್ನಕ್ಕಾಗಿ ಪರದಾಡುವ ಮೊದಲೇ ರೈತಾಪಿ ವರ್ಗದವರ ಮೂಲ ಉದ್ಯೋಗ ಕೃಷಿಯನ್ನು ಉಳಿಸಿ, ಬೆಳೆಸುವ ಆಸಕ್ತಿಯನ್ನು ಸರ್ಕಾರ ತೋರಬೇಕಾದ ಅವಶ್ಯಕತೆ ಇದೆ ಶೇ.75 ರಷ್ಟು ವ್ಯವಸಾಯ ಅವಲಂಬಿತ ದೇಶವಾಗಿದ್ದರೂ ರೈತರಿಗೆ ಸಿಗಬೇಕಾದ ಸೌಲಭ್ಯ,ಬೆಳೆಗೆ ಯೋಗ್ಯ ಬೆಲೆ,ಬೆಳೆ ಹಾನಿ ಪರಿಹಾರ ಇತ್ಯಾದಿಗಳು ಸಮಯಕ್ಕೆ ಸರಿಯಾಗಿ ಸಿಗದ ಪರಿಣಾಮ ವ್ಯವಸಾಯಕ್ಕಾಗಿ ಮಾಡಿದ ಸಾಲಕ್ಕೆ ಹೆದರಿ ರೈತ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ರೈತನಿಗೆ ಬಂದೊದಗಿದೆ. ಸರ್ಕಾರದ ಸೌಲಭ್ಯ ಗಳನ್ನು ರೈತನಿಗೆ ಸರಿಯಾಗಿ ಮುಟ್ಟುಸುತ್ತಿಲ್ಲ(ತಲುಪುತ್ತಿಲ್ಲ). ಅತಿವೃಷ್ಟಿ, ಅನಾವೃಷ್ಟಿಯಿಂದ ಬಳಲುತ್ತಿರುವ ರೈತನ ಬಗ್ಗೆ ವಿಚಾರಿಸದೇ ಬರೀ ಸರಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಚಿಂತನೆಯನ್ನು ಮಾಡುವ ಮೂಲಕ ಅವರಿಗೆ ವೇತನ ಪರಿಷ್ಕರಣೆ ಮಾಡುತ್ತಿರುವುದು ನಾವೆಲ್ಲರೂ ಗಮನಿಸುತ್ತಿದೇವೆ ಪರವಾಗಿಲ್ಲ ಅವರಿಗೆ ಹೆಚ್ಚಿನ ವೇತನ ಮಾಡಿದ್ದು ಖಂಡಿತಾವಾಗಿಯೂ ನಮ್ಮಗೆ ದುಃಖ ವಿಲ್ಲಾ,ಆದರೆ ನಮ್ಮ ರೈತರ ಬವಣೆ – ದುಃಖಕ್ಕೊ ಬೆಲೆ ನೀಡಿ,ದಯವಿಟ್ಟು ಸ್ವಂದನೆ ಮಾಡಿ,ಮಾಡುವ ಮೂಲಕ ರೈತರ ಹಿತ ಕಾಪಾಡಿ, ಕಾಪಾಡುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದ್ಯ ಕರ್ತವ್ಯ ಎನ್ನುವುದು ಮರೆಯಬೇಡಿ,ಹೀಗಾದಾಗ ಮಾತ್ರ ರೈತ ಆತ್ಮಹತ್ಯೆ ಎಂಬ ಕವಲು ದಾರಿ ತುಳಿಯುವ ಹಂತಕ್ಕೆ ಹೋಗುವುದಿಲ್ಲ. ಆದ್ದರಿಂದ ನಿಜವಾಗಿಯೂ ರೈತರಿಗೆ ಸಲ್ಲಬೇಕಾದ ಸರ್ಕಾರದ ಎಲ್ಲಾ ಸವಲತ್ತುಗಳನ್ನು ನೀಡಿದಾಗ – ಕೊಟ್ಟಾಗ ಮಾತ್ರ ರೈತರ ಬದುಕು ಬಂಗಾರವಾಗಬಲ್ಲದು ಎಂಬುದು ನಿಜ.

ಈ ದಿಸೆಯಲ್ಲಿ ಅಂದಿನ ರೈತ ಹೋರಾಟಗಾರರು ಎಂದೇ ಹೆಸರುವಾಸಿಯಾದ ಚೌಧರಿ ಚರಣಸಿಂಗ್‌ ರವರು 1979 ರಲ್ಲಿ ದೇಶದ ಪ್ರಧಾನಿ ಪಟ್ಟಕ್ಕೇರಿದ ಸಂದರ್ಭದಲ್ಲಿ ರೈತರ ಬದುಕು ಹಸನವಾಗುವಂತೆ ಹಲವು ಕೃಷಿ ಯೋಜನೆಗಳ ಮೂಲಕ ಕ್ರಮಗಳನ್ನು ಕೈಗೊಂಡಿದ್ದರು. ಆ ಕಾರಣಕ್ಕಾಗಿ ಅವರು ಹುಟ್ಟಿದ ಡಿ.23ನೇ ದಿನವನ್ನು ಅವರ ಗೌರವಾರ್ಥ ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಹಾಗಾಗಿ ರೈತರ ಸರ್ವಾಂಗೀಣ ಅಭಿವೃದ್ಧಿಗೆ ರೈತ ಸಂಘಗಳು ಗುಂಪುಗಾರಿಕೆ ಹಾಗೂ ಆಂತರಿಕ ಕಚ್ಚಾಟ ಮರೆತು ಪ್ರಾಮಾಣಿಕವಾಗಿ ಶ್ರಮಿಸಬೇಕು.

ಆಶಯ ಮಾತು:

ರೈತರಿಗೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸಿ ನ್ಯಾಯ ನೀಡುವ ರೈತ ಸಂಘಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಆದರೆ ಇತ್ತೀಚಿನ ಕೆಲ ಕಹಿ ಘಟನೆಗಳನ್ನು ನೆನಪಿಸಿಕೊಂಡಾಗ ರೈತರಿಗೆ ಅನ್ಯಾಯವಾಗುತ್ತಿರುವುದು ಕಂಡು ಬರುತ್ತದೆ ಹಾಗೂ ರೈತರಿಗೆ ಸಿಗಬೇಕಾದ ಯೋಜನೆಯ ಸೌಲಬ್ಯಗಳನ್ನು ಒದಗಿಸಲು ಸರಕಾರದ ಮಟ್ಟದಲ್ಲಿ ಅಧಿಕಾರಿಗಳು ಗಮನಕ್ಕೆ ತರಬೇಕು. ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಕೃಷಿಯ ಬೆಳವಣಿಗೆಯ ಬಗ್ಗೆ ವೆಜ್ಞಾನಿಕ ಅರಿವು ಹಾಗೂ ಸಾವಯವ-ನೈಸರ್ಗಿಕ ಪದ್ದತಿ ಕುರಿತು ಸಮಗ್ರಹ ವಿವರ ಮಾಹಿತಿ ನೀಡಿದಾಗ ಮಾತ್ರ ರೈತರ ಬದುಕು ಬಂಗಾರವಾಗಲು ಸಾಧ್ಯವಾಗುತ್ತದೆ ಜೊತೆಗೆ ಸಾರ್ಥಕವಾಗುತ್ತದೆ.
ಅಲ್ಲದೆ ರೈತ ದಿನಾಚರಣೆ ಬರಿ ನಾಲ್ಕು ಗೋಡೆಗಳ ಮಧ್ಯೆಯಾಗದೆ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ರೈತರು ತಮ್ಮ ಗ್ರಾಮಗಳಲ್ಲಿ ದಿನಾಚರಣೆಯನ್ನು ಮಾಡುವಂತಾಗಬೇಕು . ಸಾವಯವ ಕೃಷಿಯ ಬಗ್ಗೆ ರೈತರಿಗೆ ಅಧಿಕಾರಿಗಳು ಕೃಷಿಗೆ ಪೂರಕವಾದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಸಾಗಬೇಕು ಮತ್ತು ಸಾಗುವ ಅವಶ್ಯಕತೆಯನ್ನು ಮನ್ನಗಂಡು ಭಾರತೀಯ ರೈತರ ಶ್ರೇಯಸ್ಸಿಗಾಗಿ ಎಲ್ಲರೂ ಕಂಕಣ ಬದ್ಧರಾಗಬೇಕು

ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು,ಹೋರಾಟಗಾರರು,    ಪರಿಸರ ಸಂರಕ್ಷಕರು.
ಚಿಟಗುಪ್ಪ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ