Oplus_131072

ನಾನೊಬ್ಬ ರೈತ.

 

ವೀಣಾ ಹೇಮಂತ್ ಗೌಡ ಪಾಟೀಲ್.

 

ಈ ಲೇಖನವು ರೈತ ದಿನಾಚರಣೆಯ ಪ್ರಯುಕ್ತವಾಗಿ ಪ್ರಕಟಿಸಲಾಗಿದೆ.- ಸಂ.

 

ಮಾಸಿದ ಬಟ್ಟೆ ,ಎಣ್ಣೆಕಾಣದ ತಲೆ, ಬಸವಳಿದ ಮುಖ ಇಷ್ಟು ಸಾಕೇ ನನ್ನ ಪರಿಚಯಕ್ಕೆ ??ಹೌದು ನಾನೊಬ್ಬ ರೈತ. ಒಕ್ಕಲುತನ ನನ್ನ ಉಸಿರು. ಜೋಡೆತ್ತುಗಳು ನನ್ನ ಒಡನಾಡಿಗಳು, ಹಗಲಿರುಳು ನನ್ನೊಂದಿಗೆ ದುಡಿವ ಜೀವಿಗಳು. ಹೊಲವೆ ನನ್ನ ಆಡುಂಬೊಲ.
ನನ್ನವರ ಪಾಲಿಗೆ ಭೂಮಿ ಹರಿಯದ ಹಚ್ಚಡ. ನಿರಂತರ ಅನ್ನದಾನ ಮಾಡುವ ಕರುಣಾಮಯಿ. ಈಕೆಯ ಮಡಿಲಲ್ಲಿ ನಾವು ಶಾಂತಿ, ಸಮಾಧಾನ ಅರಸುವ ಮಕ್ಕಳು. ಮಣ್ಣು, ನೀರು, ಗಾಳಿಯ ಸತತ ಸಾಂಗತ್ಯ ನಮ್ಮದು. ಬಿಸಿಲಿನ ತಾಪಕ್ಕೆ, ಬೀಸುವ ಗಾಳಿಗೆ, ಮೂಳೆ ಕೊರೆಯುವ ಚಳಿಗೆ, ಸತತ ಕೆಲಸಕ್ಕೆ ಈಡಾಗುವ ನನಗೆ ಮಧ್ಯವಯಸ್ಸಿನಲ್ಲೆ ಮುಪ್ಪು ಬರುವುದು ಅನಿವಾರ್ಯ. ಬಿತ್ತನೆ
ಬೀಜ ಗೊಬ್ಬರಗಳ ಅಭಾವ, ಬಾರದ ಮಳೆ, ಕೈಕೊಟ್ಟ ಬೆಳೆ, ಬೆಳೆದು ನಿಂತ ಮಕ್ಕಳು, ಅವರನ್ನು ಕಾಡುವ ಪೌಷ್ಟಿಕತೆಯ ಕೊರತೆ, ನೋವು ನನ್ನನ್ನು ನಿರಂತರವಾಗಿ ಕಾಡುವ ಶತ್ರುಗಳು. ಸಮಕಾಲೀನ ಪರಿಸ್ಥಿತಿಯಲ್ಲಿ ಅತ್ಯಂತ ದೈನೇಸಿ ಸ್ಥಿತಿ ನಮ್ಮದು.
ಇದರೊಂದಿಗೆ ಸರ್ಕಾರ ಇತ್ತೀಚೆಗೆ ತರುತ್ತಿರುವ ಎಸ್ಇಝಡ್ ಎಂಬ ವಿಶೇಷ ಆರ್ಥಿಕ ಯೋಜನೆಯಡಿ ಭೂಮಿ ವಶಪಡಿಸಿಕೊಳ್ಳುವ ಯೋಜನೆಗಳ ಭಯ ಎಲ್ಲಿ ನಮ್ಮ ಭೂಮಿಯು ಈ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗಿ ನಾವು ಭೂರಹಿತರಾಗುವೆವೋ ಎಂಬ ಹೆದರಿಕೆ ನಿರಂತರವಾಗಿ ಕಾಡುವ ಸಮಸ್ಯೆ .

ಸಮಸ್ಯೆ, ಆರ್ಥಿಕ ಹಿಂಜರಿತಗಳಿಂದ ನಾನೆಂದೂ ವಿಮುಖನಾಗಿಲ್ಲ. ಬಾರದ ಮಳೆಯಿಂದ ಕಂಗೆಟ್ಟರೂ ನಿರಂತರ ಆಶಾವಾದಿ ನಾನು.ಆಳುಗಳ ಕೊರತೆ, ಮಳೆಯ ಕಣ್ಣುಮುಚ್ಚಾಲೆ, ಗೊಬ್ಬರ, ಬೀಜಗಳ ಅಸಮರ್ಪಕ ಪೂರೈಕೆಯಿಂದಾಗಿ ಕಡಿಮೆ ಬೆಳೆ ಬರುವುದು, ಬಂದಷ್ಟು ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ನನಗೆ ಸರ್ವೇಸಾಮಾನ್ಯ.
ಆದರೂ ನಾನು ಸೋತು ಕೈ ಚೆಲ್ಲುವವನಲ್ಲ, ಪ್ರಕೃತಿಯ ಮುನಿಸಿಗೆ ತುತ್ತಾಗಿದ್ದರೂ ಭೂತಾಯಿಯ ಮೇಲಿನ ನಂಬಿಕೆ ಕಳೆದುಕೊಂಡಿಲ್ಲ.ಅಮ್ಮನ ಕೈಯಿಂದ ಹೊಡೆಸಿಕೊಂಡ ಪುಟ್ಟ ಮಗು ಅಮ್ಮನ ಕಾಲಿಗೇ ಜೋತುಬೀಳುವಂತೆ ಭೂಮಿ ತಾಯಿಯ ಮೇಲಿನ ಪ್ರೀತಿ ಅಳಿಸಿಲ್ಲ.ಸಂಕಷ್ಟಗಳಿಂದ ಜರ್ಜರಿತನಾಗಿದ್ದರೂ, ಬವಣೆಯೇ ಬದುಕಾಗಿದ್ದರೂ ಭೂಮಿತಾಯಿಯ ಸೇವೆಯಲ್ಲಿ ಎಲ್ಲವನ್ನೂ ಮರೆತು ಸಾರ್ಥಕತೆಯ ಭಾವ ಹೊಂದುತ್ತೇನೆ. ಎಲ್ಲರೂ ಏನನ್ನಾದರೂ ಕೊಟ್ಟು ಕಳೆದುಕೊಂಡ ಭಾವ ಅನುಭವಿಸುತ್ತಾರೆ ಆದರೆ ನಾವು ರೈತರು ಎಲ್ಲರಿಗೂ ಹಂಚಿ ಖುಷಿಯನ್ನು ಅನುಭವಿಸುತ್ತೇವೆ.

ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹದಿಹರೆಯದ ಮಕ್ಕಳು ರಿಸೆಷನ್ ಎಂಬ ಹೆಸರಿನಲ್ಲಿ ಕೆಲಸ ಕಳೆದುಕೊಂಡಾಗ ಪಿಂಕ್ ಸ್ಲಿಪ್ ಗಳನ್ನು ಪಡೆದಾಗ ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ನಮ್ಮ ಬದುಕು ನೋಡಿ… ನಾವು ರೈತರು ನಮಗೆ ಜೀವನವೇ ಒಂದು ಲಾಟರಿಯಂತೆ. ಭೂಮಿ ನಮ್ಮದಲ್ಲವಾದಾಗ್ಯೂ ಕೂಡ ಅದನ್ನು ಜತನವಾಗಿ ಕಾಯ್ದುಕೊಳ್ಳುತ್ತೇವೆ. ಸಮವಾಗಿ ರಂಟೆ ಕುಂಟೆ ಉಪಯೋಗಿಸಿ ಹದನಾಗಿಸಿಕೊಳ್ಳುತ್ತೇವೆ. ಉತ್ತುತ್ತೇವೆ ಬಿತ್ತುತ್ತೇವೆ ಮಳೆಗಾಗಿ ಚಾತಕ ಪಕ್ಷಿಯಂತೆಕಾಯುತ್ತೇವೆ.ಮಳೆ ಕೈ ಕೊಟ್ಟರೆ ನೀರಿನ ಆಶ್ರಯ ತಾಣಗಳ ಮೂಲಕ ಪಂಪ್ಸೆಟ್ ನೆರವಿನಿಂದ ಹೊಲಗಳಿಗೆ ನೀರು ಹಾಯಿಸುತ್ತೇವೆ. ಇಲ್ಲೂ ಕೂಡ ವಿದ್ಯುತ್ ಕಣ್ಣು ಮುಚ್ಚಾಲೆ ಆಡುತ್ತಾ ಕೈ ಕೊಟ್ಟರೆ ನಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ. ಕರೆಂಟು ಬಂದಾಗ ಅದು ಹಗಲಿರಲಿ, ಸರಹೊತ್ತಿರಲಿ ಹೊಲಕ್ಕೆ ಹೋಗಿ ನೀರು ಹಾಯಿಸಲೇಬೇಕು ಇಲ್ಲದಿದ್ದರೆ ಬೆಳೆ ಒಣಗುತ್ತದೆ. ಇಷ್ಟಕ್ಕೆ ಮುಗಿಯೋದಿಲ್ಲ ನಮ್ಮ ಫಜೀತಿ. ಬೆಳೆ ಕೈಗೆ ಬರುವ ಹೊತ್ತಿಗೆ ಹಕ್ಕಿಗಳ ಕಾಟ ಅವುಗಳನ್ನು ಓಡಿಸಲು ಮತ್ತೆ ಕವಣೆ ಹಿಡಿದು, ಗಂಟಲು ಹರಿಯುವಂತೆ ಕೂಗುತ್ತಾ ಇಲ್ಲವೇ ತಮಟೆ ಬಾರಿಸುತ್ತಾ ಹೊಲವನ್ನು ಹಗಲಿನಲ್ಲಿಯೂ,ರಾತ್ರಿಯಲ್ಲಿ ಪ್ರಾಣಿಗಳಿಂದ ಕಾಯಬೇಕು. ಈ ಸಮಯದಲ್ಲಿ ಬೆಳೆಗಳ ಮಧ್ಯದಲ್ಲಿ ಬರುವ ಕಳೆಯನ್ನು ಕೂಡ ಕೀಳಲು ಆಳುಗಳಿಗೆ ಹೊಂಚಬೇಕು. ಇಲ್ಲವೇ ನಾವೇ ಮನೆ ಮಂದಿಯ ಸಹಾಯದಿಂದ ಕಳೆ ಕೀಳಬೇಕು, ಗೊಬ್ಬರ ಹಾಕಬೇಕು, ಕ್ರಿಮಿಕೀಟಗಳಾಗದಂತೆ ಕ್ರಿಮಿನಾಶಕ ಸಿಂಪಡಿಸಬೇಕು. ಅಂತಿಮವಾಗಿ ಫಸಲು ಕೊಯ್ಯುವ ಸಮಯದಲ್ಲಿ ಮತ್ತೊಮ್ಮೆ ಆಳಿಗಾಗಿ ಹುಡುಕಾಟ, ಅವರ ಮರ್ಜಿ ಕಾಯ್ದು ಆಳುಗಳನ್ನು ಕರೆ ತಂದು ಫಸಲು ಕೊಯ್ದು ರಾಶಿ ಮಾಡುವ ಹೊತ್ತಿಗೆ ನಾನು ಹೈರಾಣಾಗಿ ಹೋಗುತ್ತೇನೆ. ಕಥೆ ಇಲ್ಲಿಗೇ ಮುಗಿಯಲಿಲ್ಲ ಈಗ ಮಾರಾಟದ ಸರದಿ. ಮನೆಗೆ ಬೇಕಾಗುವಷ್ಟು ಧಾನ್ಯಗಳನ್ನು ಉಳಿಸಿಕೊಂಡು ಮಾರುಕಟ್ಟೆಗೆ ಉಳಿದ ಧಾನ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಮಧ್ಯವರ್ತಿಗಳ, ದಲ್ಲಾಳಿಗಳ ಮೂಲಕ ಮಾರಾಟ ಮಾಡುವಷ್ಟರಲ್ಲಿ ಅರ್ಧಕ್ಕರ್ಧ ಬೆಳೆ ಮಾರಿದ ಹಣ ಕೈಬಿಟ್ಟು ಹೋಗುತ್ತದೆ. ಅಲ್ಲಿಯೂ ಕೂಡ ಎಲ್ಲರೂ ಒಂದೇ ಬೆಳೆ ಬೆಳೆದು ನಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಎಷ್ಟೋ ಬಾರಿ ನಾವು ಬೆಳೆದ ಬೆಳೆಯ ಕೇವಲ ಒಂದು ಪಾಲಿನಷ್ಟು ಉತ್ಪನ್ನ ನಮಗೆ. ಇದನ್ನೇ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂದು ಹೇಳುವುದು. ಎಷ್ಟೋ ಸಾರಿ ಒಂದು ಬೆಳೆ ಬೆಳೆಯಲು ನಾವು ಇದರ ಒಂದೂವರೆ ಪಟ್ಟು ಹಣವನ್ನು ಹೆಚ್ಚು ಖರ್ಚು ಮಾಡಿಕೊಂಡಿರುತ್ತೇವೆ ಇದರ ಮೇಲೆ ಮಾನವ ಶ್ರಮ ಕೂಡ …ಆದರೆ ಫಲಿತಾಂಶ ಶೂನ್ಯ.

ಬ್ಯಾಂಕುಗಳು ನಾವು ರೈತರಿಗೆ ಬೆಳೆ ಸಾಲ, ಬೆಳೆ ವಿಮೆಯಂತಹ ಸಹಾಯವನ್ನು ಸರಕಾರಗಳ ನಿಯಮಾವಳಿಗಳ ಪ್ರಕಾರ ಮಾಡುತ್ತವೇನೋ ನಿಜ ಆದರೆ ಇದು “ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ” ಯಾತಕ್ಕೂ ಸಾಲದು. ಸರಕಾರಗಳು ಕಡಿಮೆ ದರದಲ್ಲಿ ಪೂರೈಸುವ ಬಿತ್ತನೆ ಬೀಜ, ಗೊಬ್ಬರ ಎಷ್ಟೋ ಬಾರಿ ಸಮಯ ಮೀರಿದ ನಂತರ ದೊರೆಯುತ್ತವೆ…. ಇಲ್ಲೂ ಕೂಡ ನಮಗೆ ಕಡಿತಗಳ ತೊಂದರೆಯೇ. ಆದರೂ ಕೂಡ ರೈತರು ಕಂಗೆಡಲಾರರು, ನಿಟ್ಟುಸಿರು ಬಿಡುತ್ತಲೇ ಸಮಾಧಾನ ಪಡುವರು.

ರೈತರ ಮೇಲೆ ಇನ್ನೂ ಒಂದು ಆರೋಪವಿದೆ… ಈ ಆರೋಪದಲ್ಲಿಯೂ ಹುರುಳಿಲ್ಲದೆ ಇಲ್ಲ. ಎಷ್ಟೋ ಸಾರಿ ಕುಟುಂಬದ ಜವಾಬ್ದಾರಿ ಹೊತ್ತ ಮನೆಯ ಯಜಮಾನ ಸರಕಾರದ ಸವಲತ್ತುಗಳಿಗಾಗಿ ಬ್ಯಾಂಕುಗಳ, ಕೃಷಿ ಸಹಾಯ ಕೇಂದ್ರಗಳ ಮುಂದೆ ಸರದಿ ಕಾಯುತ್ತಾನೆ. ಸುಳ್ಳು ಬೆಳೆ ವಿಮೆಯ ನಾಟಕವಾಡುತ್ತಾನೆ. ನಿರಂತರ ಮತ್ತು ಉಚಿತ ವಿದ್ಯುತ್,ನೀರಾವರಿ ಹಾಗೂ ಇನ್ನಿತರ ಸೌಲಭ್ಯಗಳಿಗೆ ಎಡತಾಕುತ್ತಾನೆ. ಆದರೆ ಆತನಿಗೆ ದೊರೆಯುವ ಸಹಾಯ ಸೌಲಭ್ಯಗಳು ಅತ್ಯಂತ ಕಡಿಮೆಯೇ. ಆತನಿಗೆ ಮನೆ ಕಟ್ಟಿಕೊಳ್ಳುವಷ್ಟು, ಐಷಾರಾಮಿ ಜೀವನವನ್ನು ನಡೆಸುವಷ್ಟು, ಕಾರು ಕೊಳ್ಳುವಷ್ಟು ಸಹಾಯವೇನು ದೊರೆಯುವುದಿಲ್ಲ… ದೈನಂದಿನ ಜೀವನವೇ ತ್ರಾಸದಾಯಕವಾಗಿರುವಾಗ ಆತ್ಮಭಿಮಾನಿಯಾಗಿರುವ, ಎದೆ ಸೆಟೆಸಿ ನಡೆಯುವ ರೈತ ಇಂತಹ ಸೌಲಭ್ಯಗಳನ್ನು ಪಡೆಯುವಾಗ ಒಮ್ಮೊಮ್ಮೆ ಕುಗ್ಗಿ ಹೋಗುವುದೂ ಉಂಟು. ಇನ್ನೂ ಕೆಲವು ಬಾರಿ ಕೈಸಾಲಗಳನ್ನು, ಬ್ಯಾಂಕಿನ ಸಾಲಗಳನ್ನು ಮರುಪಾವತಿ ಮಾಡಲಾಗದೆ, ಸಾಲ ವಸೂಲಾತಿಗೆ ಮನೆಯ ಮುಂದೆ ಸಾಲ ಕೊಟ್ಟವರು ಬಂದು ನಿಂತಾಗ ಅವಮಾನ ತಾಳಲಾರದೆ ಸಾವಿಗೆ ಶರಣಾಗುವುದು ಉಂಟು. ಒಟ್ಟಿನಲ್ಲಿ ನನ್ನಂತಹ ರೈತರ ಬಾಳು… ಅದೊಂದು ಮುಗಿಯಲಾರದ ಗೋಳು. ಇದು ಯಾವ ಉದ್ಯೋಗ ಕಡಿತಕ್ಕಿಂತಲೂ ಕಡಿಮೆಯಲ್ಲ. ಯಾವ ಪಿಂಕ್ ಸ್ಲಿಪ್ ಕೂಡ ಕೊಡದೆ ಪ್ರಕೃತಿ ಮತ್ತು ಹವಾಮಾನಗಳು ನಮ್ಮನ್ನು ಪರೀಕ್ಷಿಸುತ್ತದೆ.

ಸುಧಾರಿತ ಆರ್ಥಿಕ ಸೌಲಭ್ಯಗಳನ್ನು ನಾನು ಬಯಸದಿದ್ದರೂ ಒಮ್ಮೊಮ್ಮೆ ಭವಿಷ್ಯವೇ ಭೂತವಾಗಿ ಕಾಡುತ್ತದೆ. ನನ್ನ ಮಕ್ಕಳಿಗೆ ಸರಿಯಾದ ಬಟ್ಟೆ, ವಸತಿ, ವಿದ್ಯೆ ಮತ್ತು ಉತ್ತಮ ಭವಿಷ್ಯ ಒದಗಿಸುವಲ್ಲಿ ಸೋಲುತ್ತಿದ್ದೇನೆಯೆ ಎಂಬ ಭಾವ ಮಿಂಚಿ ಮರೆಯಾಗಿ ಹೋಗುತ್ತದೆ. ಆದರೂ ನಾನು ನಿಜವಾದ ರೈತ. ನನ್ನ ಬೆವರಿನ ಶ್ರಮದಲ್ಲಿಯೇ ನಿಮ್ಮೆಲ್ಲರ ಬದುಕಿದೆ. ನನ್ನಿಂದಲೆ ಈ ಜಗತ್ತು. ರೈತನ ಶ್ರಮದಾಯಕ ಬದುಕಿನ ಅಡಿಪಾಯದ ಮೇಲೆ ವ್ಯಾಪಾರಿಗಳ, ಉದ್ಯೋಗಿಗಳ, ನಾಡಿನ ಭವಿಷ್ಯ ನಿಂತಿದೆ… ಎಲ್ಲರ ಭವ್ಯ ಭವಿಷ್ಯದ ರೂವಾರಿಯಾದ ನನ್ನ ಭವಿಷ್ಯವೇ ಕತ್ತಲೆಯಲ್ಲಿ ಮುಳುಗಿದೆ. ಇನ್ನು ನಾಗರಿಕ ಸಮಾಜ ನನಗೆ ಕನಿಷ್ಠ ಮರ್ಯಾದೆಯನ್ನು ಕೊಡುವುದಿಲ್ಲ… ಮಾಲ್ ಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಅವರು ಹೇಳಿದ ದರಕ್ಕೆ ಗೋಣು ಹಾಕಿ ಹಣ ಸಂದಾಯ ಮಾಡುವ, ದುಬಾರಿ ಹೋಟೆಲ್ಗಳಲ್ಲಿ ಒಂದು ಹೊತ್ತಿನ ಊಟಕ್ಕೆ ಸಾವಿರಾರು ರೂಗಳನ್ನು ಖರ್ಚು ಮಾಡುವ, ಫ್ರೀಜರ್ ಗಳಲ್ಲಿಟ್ಟು ಮಾಲ್ ಗಳಲ್ಲಿ ಮಾರಾಟ ಮಾಡುವ ಹಣ್ಣು, ತರಕಾರಿಗಳಿಗೆ ಅವರು ಕೇಳಿದಷ್ಟು ಹಣ ಕೊಡುವ ನಾಗರಿಕ ಸಮಾಜದ ಜನ ನಮ್ಮಂತ ರೈತರು ಬೆಳೆವ ಹಣ್ಣು, ತರಕಾರಿಗಳಿಗೆ ಅತ್ಯಂತ ಕಡಿಮೆ ಬೆಲೆಯನ್ನು ಕೇಳುತ್ತಾರೆ. ನಮ್ಮ ಪರಿಸ್ಥಿತಿಯೋ ಆ ದೇವರಿಗೇ ಪ್ರೀತಿ. ಕೊಡದೆ ಇದ್ದರೇ ನಮ್ಮ ಮೇಲೆ ರೋಪು ಹಾಕಿ ನಮ್ಮ ಮೇಲೆಯೇ ಸೊಕ್ಕಿನವರು ಎಂಬ ಆರೋಪ ಹೊರಿಸುತ್ತಾರೆ. ಒಂದೆರಡು ದಿನಗಳ ತಾಜಾತನವನ್ನು, ಜೀವಂತಿಕೆಯನ್ನು ಹೊಂದಿರುವ ತರಕಾರಿ, ಹಣ್ಣುಗಳನ್ನು ಅಂದಂದೇ ಮಾರಬೇಕಾದ ಪರಿಸ್ಥಿತಿ ನಮ್ಮದು.ಹಾಗಾಗಿ ನಾವು ಕೂಡ ಸಿಕ್ಕಷ್ಟಕ್ಕೆ ಹೋಗಲಿ ಎಂಬ ಅನಿವಾರ್ಯ ಭಾವದಿಂದ ಮಾರಾಟ ಮಾಡುತ್ತೇವೆ.

ದೇಶದ ಬೆನ್ನೆಲುಬಾದ ನಮ್ಮ ಬೆನ್ನೆಲುಬು ಮುರಿದಿದ್ದರೂ, ಮನೆಯ ಸೂರು ಸೋರುತ್ತಿದ್ದರೂ, ಆರ್ಥಿಕ ಅಭದ್ರತೆ ಕಾಡುತ್ತಿದ್ದರೂ, ಮಕ್ಕಳ ಭವಿಷ್ಯವೇ ಡೋಲಾಯಮಾನವಾಗಿದ್ದರೂ ನಾನು ಕಂಗೆಡುವುದಿಲ್ಲ. ನಮ್ಮನ್ನು ನೀವು ಪ್ರೋತ್ಸಾಹಿಸದಿದ್ದರೆ ಬೇಡ, ಬೆನ್ನು ತಟ್ಟದಿದ್ದರೂ ಪರವಾಗಿಲ್ಲ ಅವಮಾನಿಸಬೇಡಿ, ನಮ್ಮ ಮಕ್ಕಳು ನಿಮ್ಮಂತಿಲ್ಲವೆಂದು ಹೀಗಳೆಯಬೇಡಿ. ಬದುಕಿನ ಈ ಏರಿಳಿತದ ಹಾದಿಯಲ್ಲಿ ಪಲಾಯನವಾದಿಯಾಗದೆ ಕನಸುರಹಿತ ದಾರಿಯಲ್ಲಿ ನಿರಂತರ ಪಯಣ ಮುಂದುವರೆಸಿದ್ದೇನೆ ….ಅನಂತ ಭರವಸೆಯ ದೀಪ ಹೊತ್ತಿಸಿ.
— ಇಂತಿ ನಿಮ್ಮ ರೈತ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ