Oplus_131072

ಕಳಂಕಿನಿ.(ಕತೆ)

 

ಡಾ.ಎಂ.ಜಿ.ದೇಶಪಾಂಡೆ. ಬೀದರ

 

ಜಹಿರಾಬಾದ ಸ್ಟೇಷನ್ ಬಿಟ್ಟು ರೈಲು ಚಲಿಸತೊಡಗಿತ್ತು. ಹೈದರಾಬಾದಿಗೆ ಹೋಗಲು ಜನರಲ್ ಬೋಗಿಯಲ್ಲಿ ಕುಳಿತ ಶ್ರೀನಿವಾಸ ಒಂದು ಸಲ ರೈಲಿನ ಕಿಟಕಿಯಿಂದ ಹೊರಗೆ ಇಣಕಿದನು. ಯಾರೋ ಜನ ಯಾರಿಗೋ ವಿದಾಯ ಹೇಳುತ್ತಿದ್ದರು. ಯಾರಿಗಾಗಿಯೇ ಯಾರೋ ! ಅವಸರದಲ್ಲಿ ಓಡುತ್ತಿದ್ದರು. ಬಿಸ್ಕತ್‌, ಚಹಾ ಮಾರಾಟಗಾರರು ತಮ್ಮ ಗಿರಾಕಿಗಳನ್ನು ಹುಡುಕುತ್ತ ಅವಸರ ಮಾಡುತ್ತಿದ್ದರು.

ದಿನವೂ ಎಂಟು ಗಂಟೆಗೆ ಬಿಡುವ ರೈಲು ಇಂದು ತುಸು ತಡವಾಗಿ ಹೊರಟಿತ್ತು. ರೈಲಿನಲ್ಲಿ ಜನ ದಟ್ಟಣೆ ತುಂಬಿತ್ತು. ಒಂದು ಕಡೇ ಒಂದು ಬೋಗಿಯಲ್ಲಿ ಸಿಟೋಂದು ಹಿಡಿದು ಶ್ರೀನಿವಾಸ ಕುಳಿತು ಚಲಿಸುತ್ತಿರುವ ರೈಲಿನ ಕಿಟಕಿಯಿಂದ ಎಡಬಿಡದೆ ನೋಡುತ್ತಿದ್ದ. ಶ್ರೀನಿವಾಸನಿಗೆ ಮಾಧವಿ ನೆನಪಾಗಿ ಕಣ್ಣೀರು ತುಂಬಿ ಬಂದವು.

ಹಾಗೇ ನೋಡಿದರೆ ಮಾಧವಿ ಮತ್ತು ತನಗೆ ಯಾವುದೇ ರಕ್ತ ಸಂಬಂಧವಿಲ್ಲ. ಆದರೂ ಅವಳೊಂದಿಗೆ ಅವಿನಾಭಾವ ಸಂಬಂಧ ಬೆಳೆದು ಬಂದಿತ್ತು.

ಮಾಧವಿಗೆ ನೋಡಲು ಮನಸ್ಸು ಕಾತರಿಸುತ್ತಿತ್ತು. ಶ್ರೀನಿವಾಸನಿಗೆ ಅವಳನ್ನು ನೋಡದೇ ಎಷ್ಟೋ ವರ್ಷವಾಗಿತ್ತು. ಅವಳು ಈಗ ಹೇಗಿದ್ದಿರಬಹುದು ! ಈಗ ಅವಳಿಗೆ ಸುಮಾರಾಗಿ ಮುವತ್ತು ವರ್ಷ ಆಯಸ್ಸು. ಅವಳು ತಮ್ಮ ಮನೆಯಲ್ಲಿದ್ದಾಗ ಹದಿನೆಂಟು ವರ್ಷದ ಚಲುವೆಯಾಗಿದ್ದಳು. ನೇರ ನಾಸಿಕ ದೊಡ ಕಂಗಳು, ಅಗಲವಾದ ಹಣೆ ಉದ್ದನೆಯ ಕೇಶರಾಶಿ ಕೋಗಿಲೆಯಂತಹ ಇಂಪಾದ ದನಿ ಸ್ಥೂಲವಲ್ಲದ ತನು ಎಲ್ಲವೂ ದೇವರು ಹೇಳಿ ಮಾಡಿಸಿದಂತೆ ಸೃಷ್ಟಿಯಾಗಿದ್ದಳು. ಮಾಧವಿಯು ಬಾಲ್ಯದಿಂದಲೂ ಶ್ರೀನಿವಾಸನ ಮನೆಯಲ್ಲಿ ಹುಟ್ಟಿ ಬೆಳೆದವಳು.

ಮಾಧವಿಯ ತಂದೆ ವಿಠಲರಾಯರು ಒಂದು ಖಾಸಗಿ ಸಂಸ್ಥೆಯಲ್ಲಿ ಕಾರಕೂನರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಠಲರಾಯ ಮತ್ತು ರುಕ್ಮೀಣಿ ಬಾಯಿಯವರಿಗೆ ಓರ್ವಳೇ ಮಗಳು ಮಾಧವಿ. ಇವಳ ತಾಯಿ ತಂದೆ ತೀರ ಬಡತನವನ್ನು ಅನುಭವಿಸುತ್ತಿದ್ದವರು. ಶ್ರೀನಿವಾಸರ ಮನೆಯ ಪುಟ್ಟ ಕೋಣೆಯೊಂದರಲ್ಲಿ ಬಾಡಿಗೆಯಿಂದ ವಾಸವಾಗಿದ್ದರು. ಮೂಲತಃ ಹೈದರಾಬಾದಿನವರಾದ ವಿಠಲರಾಯರಿಗೆ ಹೇಳಿಕೊಳ್ಳುವಂತಹ ಬಳಗವೇನಿರಲಿಲ್ಲ.

ಶ್ರೀನಿವಾಸರ ಮನೆಯಲ್ಲಿ ಬಾಡಿಗೆಯಿಂದ ಉಳಿದಾಗಿನಿಂದಲೂ ರಾಯರ ಮನೆಗೆ ಯಾವ ಸಂಬಂಧಿಕರು ಇತ್ತ ಸುಳಿದಿಲ್ಲ. ತಾವಾಯ್ತು ತಮ್ಮ ಬಾಳಾಯ್ತು ತಿಳಿದು ಬಾಳ್ವೆ ಮಾಡುತ್ತಿರುವ ಅವರಿಗೆ ಹೊರಗಿನ ಪ್ರಪಂಚವೇ ತಿಳಿದಿರಲಿಲ್ಲ. ಇವರಿಗೆ ಹಲವು ವರ್ಷಗಳೀಂದ ಮಕ್ಕಳಾಗದೇ ಇದ್ದಾಗ ಶ್ರೀನಿವಾಸರ ತಂದೆ ತಾಯಿಯರ ಮುಂದೆ ತಮ್ಮ ಅಳಲನ್ನು ತೋಡಿಕೊಂಡು ಅಳುತ್ತಿದ್ದರು. ಅದಕ್ಕೆ ಶ್ರೀನಿವಾಸರ ಪಾಲಕರು ಸಮಾಧಾನ ಹೇಳೂವುದಲ್ಲದೇ ಸಂತಾನೋಪಾಯರ್ಥವಾಗಿ ಏನೇನೋ ಸಲಹೆಗಳು ನೀಡುತ್ತಿದ್ದರು.

ವಿಠಲರಾಯರಿಗೆ ವಯಸ್ಸು ಮೀರುತ್ತಿದ್ದಂತೆ ರುಕ್ಮೀಣಿ ಬಾಯಿಗೂ ವಯಸ್ಸಾಗಿತ್ತು. ವರ್ಷಗಳು ಉರುಳುತ್ತಿರುವ ಹಾಗೆ ಕೊನೆಗೂ ದೇವರು ಕರುಣಿಸಿದ. ವಿಠಲರಾಯರಿಗೆ ಐವತ್ತರ ವರ್ಷದಗಡಿ ದಾಟಿದಾಗ ಅವರಿಗೆ ದೇವರು ದಯೆ ಪಾಲಿಸಿದಂತೆ ದಂಪತಿಗಳಿಗೆ, ಮಾಧವಿ ಮುತ್ತಾಗಿ ಜನಿಸಿದಳು. ಹೆಣ್ಣಾದರೇನು ಗಂಡಾದರೇನು! ತಮಗೊಂದು ಮಗುವಾಯಿತೆಂದು ನೆನೆದು ತೃಪ್ತಿಯಿಂದ ಕೋರಿಕೊಂಡ ದೇವತೆಗಳಿಗೆ ಹರಕೆ ಮುಟ್ಟಿಸಿ ಸಂತಸದಿಂದ್ದ ಇದ್ದರು.

ಮಾಧವಿ ಹುಟ್ಟಿದಾಗಿನಿಂದಲೂ ಚಲುವೆಯಾಗಿದ್ದಳು. ಶ್ರೀನಿವಾಸ ಮಾಧವಿಗಿಂತಲೂ ಹದಿನೈದು ವರುಷ ದೊಡ್ಡವನು ಮಾಧವಿಯನ್ನು ಆಡಿಸಿ ಬೆಳೆಸಿದವನು. ಮಾಧವಿ ಹುಟ್ಟಿದ ಮೇಲೆ ಶ್ರೀನಿವಾಸನು ವಿಠಲರಾಯರ ಕೋಣೆಯಲ್ಲಿಯೇ ಕಾಲ ಕಳೆಯುತ್ತಿದ್ದನು. ಮಾಧವಿಯ ಪಾಲಕರು ಮಾಧವಿಗೆ ಅತ್ಯಂತ ಪ್ರೀತಿಯಿಂದ ಬೆಳೆಸಿದರು. ಶ್ರೀನಿವಾಸನಿಗೆ ತನಗೆ ತಿಳಿಯದಂತೆ ಮಾಧವಿಯ ಕುಟುಂಬದವರ ಮೇಲೆೆ ಅನುರಕ್ತನಾಗಿದ್ದನು.

ಶ್ರೀನಿವಾಸನ ಪಾಲಕರಿಗೂ ಓರ್ವನೇ ಇವನು ಪುತ್ರ ತಂದೆ ತಾಯಿಯರ ಅಪ್ಪಣೆ ಮೇರೆಗೆ ಮಾಧವಿ ಕಾಲೇಜವರೆಗೆ ಅಭ್ಯಾಸ ಮಾಡಿದಳು. ಆದರೆ ಹಲವು ಕಾರಣಗಳಿಂದ ಕಾಲೇಜು ಅಭ್ಯಾಸ ನಿಂತಿತ್ತು. ಮಾಧವಿ ಬೆಳೆದು ದೊಡ್ಡವಳಾಗಿರುವಂತೆ ಕಣ್ಣು ತುಂಬುವಂತೆ ಕಾಣುವಳು. ವಿಪುಲ ಕೇಶರಾಶಿ, ದೊಡ್ಡ ಕಂಗಳ ತುಂಬಿ ಬಂದ ಕೆನ್ನೆ ಸುಂದರ ಮೈಮಾಟ ಚಲುವಿಗೆ ಹೇಳಿ ಮಾಡಿದಿಂತಿದ್ದವು ಎಂಬುದು ಈ ಮೊದಲೆ ಹೇಳಲಾಗಿದೆ.

ಆಗಾಗ ವಿಠಲರಾಯರು ಮಗಳು ಚಿಕ್ಕವಳಿರುವಾಗ ಶ್ರೀನಿವಾಸ ನಮ್ಮ ಮಾಧವಿಗೆ ಮದುವೆ ಮಾಡಿಕೊಳ್ಳುವೆಯಾ? ಎಂದಾಗ ಒಳಗೊಳಗೆ ಖುಷಿಯಾದರೂ ಸಂಕೋಚಭರಿತವಾಗಿ ಸುಮ್ಮನಾಗಿರುತ್ತಿದ್ದನು. ಆದರೂ ವಯಸ್ಸಿನಿಂದ ತೀರ ಚಿಕ್ಕವಳಾದ ಮಾಧವಿಗೆ ತಾನು ಲಗ್ನವಾಗಲು ಸಾಧ್ಯವಿಲ್ಲ ಎನಿಸದೇ ಇರುತ್ತಿರಲಿಲ್ಲ.

ವಿಠಲರಾಯರಿಗೆ ವಯಸ್ಸಾಗತೊಡಗಿತ್ತು. ಕಾರಣ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುವುದು ಸಾಧ್ಯವಾಗದೇ ಕೆಲಸವನ್ನು ಬಿಟ್ಟು ಬಿಟ್ಟರು. ಈ ಮಧ್ಯ ಮನೆಯಲ್ಲಿ ಒಂದು ಅವಾಂತರ ನಡೆಯಿತು. ಕಾಲೇಜಿಗೆ ಹೋಗುತ್ತಿರುವ ಮಾಧವಿ ಒಂದು ದಿನ ಅಳುತ್ತ ಮನೆಗೆ ಬಂದಳು. ಕಾರಣ ಕಾಲೇಜಿನಲ್ಲಿ ತನ್ನೊಂದಿಗೆ ಸಹಪಾಠೀಯಾಗಿ ಅಭ್ಯಾಸಿಸುತ್ತಿರುವ ಸೋಮು ದಲಿತ ಹುಡುಗ ಮಾಧವಿಯನ್ನು ಪ್ರೀತಿಸ ತೊಡಗಿದನು. ಆದರೆ ಈ ವಿಷಯ ಮಾಧವಿಗೆ ತಿಳಿಯದು.

ಅದೊಮ್ಮೆ ಕಾಲೇಜ ವರ್ಗದಲ್ಲಿ ಬಿಡುವಿನ ವೇಳೆ ಹುಡುಗಿಯರೊಂದಿಗೆ ಮಾಧವಿ ಕಾಲೇಜ ಅಂಗಣದಲ್ಲಿ ಹೋಗಿದ್ದಳು. ಪುನಃ ವರ್ಗಕ್ಕೆ ಬಂದಾಗ ಗುರುಗಳು ಬಂದು ಪಾಠ ಪ್ರಾರಂಭಿಸಿದರು. ಅಷ್ಟರಲ್ಲಿ ಎನೋ ! ಬರೆದುಕೊಳ್ಳಲು ‘ನೋಟಬುಕ್’ದ ಪುಟಗಳನ್ನು ತೆರೆಯುತ್ತಿರುವಂತೆ ಕೂಡಲೇ ಬೆಚ್ಚಿಬಿದ್ದಳು. ಪುಟಗಳ ಮಧ್ಯ ತನ್ನ ವರ್ಗದ ಹುಡುನೊಬ್ಬನ ಬರೆದ ಪ್ರೇಮ ಪತ್ರ. ಅದನ್ನುನೋಡುತ್ತಿರುವಂತೆ ಬದಿಯಲ್ಲಿದ್ದ ಕಲ್ಪನಾ ನೋಡಿದಳು. ಆ ವಿಷಯ ಬದಿಯಲ್ಲಿದ ಮಂಗಲಾಳಿಗೆ ತಿಳಿಯಿತು. ಹೀಗೆ ಕ್ಷಣಾರ್ಧದಲ್ಲಿ ವರ್ಗದಲ್ಲಿ ಏನೇನೋ ಗುಸು-ಗುಸು ಪ್ರಾರಂಭವಾಯಿತು. ಸೋಮುವಿಗೆ ತಿಳಿದು ಈಗಾಗಲೇ ಕುತೂಹಲದಿಂದ ಕಾಯುತ್ತಿದ್ದವನಿಗೆ ಖುಷಿಕೊಟ್ಟು ತನ್ನ ಗೆಳೆಯರ ಮುಂದೆ ತಾನು ಮಾಧವಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡನು. ಮಾಧವಿಯ ಕಂಗಳಲ್ಲಿ ಸೋಮುವಿನ ಪ್ರೇಮ ಪತ್ರವೇ ಸುಳಿದಾಡಿತ್ತು.

ಪ್ರೀತಿಯ ಮಾಧವಿ,

ನಾನು ನಿನ್ನನ್ನು ಸುಮಾರು ದಿನಗಳಿಂದಲೂ ಪ್ರೀತಿಸುತ್ತಿರುವೆ. ನನ್ನ ಪ್ರೀತಿ ಪವಿತ್ರವಾಗಿದೆ. ಮದುವೆಯಾದರೆ ನಿನ್ನನ್ನೆ ಆಗುತ್ತೇನೆ. ನೀನು ನಿರಾಕರಿಸಿದರೆ ನಿನ್ನನ್ನು ಎತ್ತಿಕೊಂಡು ಹೋಗಿ ಲಗ್ನವಾಗುವೆ. ಅದಕ್ಕು ನೀನು ಕೈ ಗೆಟುಕದಿದ್ದರೆ ನನಗಂತೂ ಆತ್ಮಹತ್ಯೆಯೇ ಗತಿ.

ಯಾವುದಕ್ಕು ಒಲ್ಲೆ ಎನ್ನದೇ ನನ್ನೊಂದಿಗೆ ಮದುವೆಯಾಗಲು ಒಪ್ಪಿಕೊಳ್ಳು ನೀನು ಒಪ್ಪಿದ ಬಗ್ಗೆ ಉತ್ತರ ಕೊಡಬೇಕು. ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ

ನಿನ್ನ ಪ್ರೀತಿಯ ಸೋಮು. . . .

ಹೀಗೆ ಸೋಮುವಿನ ಪತ್ರದ ಬಗ್ಗೆ ವರ್ಗದಲ್ಲಿ ಚರ್ಚೆಯಾಗುತ್ತಿರುವಂತೆ ಗುರುಗಳಾದ ರಮೇಶರ ಕಿವಿಗೆ ಅದು ತಲುಪಿತು. ಕೂಡಲೇ ಗುರುಗಳು ತಮ್ಮ ಪಾಠವನ್ನು ಸ್ಥಗಿತಗೊಳಿಸಿ, ವರ್ಗದಲ್ಲಿ ಏನು ಗಲಾಟೆ ! ವ್ಹಾಟ್ ಇಜ್ ಗೋಯಿಂಗ್ ಆನ್! ಕರ್ಕಶವಾಗಿ ನುಡಿದರು.

ವರ್ಗವೆಲ್ಲ ನಿಶ್ಯಬ್ದವಾಯಿತು. ಕಲ್ಪನಾ ಏನು ನಡಿತ್ತಿದೆ ಅಲ್ಲಿ, ಗುರುಗಳ ಮಾತಿಗೆ ಕಲ್ಪನಾ ಎದ್ದು ನಿಂತಳು. ಮಾತಾಡಲಿಲ್ಲ, ಮಾಧವಿ! ಗುರುಗಳು ಪುನಃ ಗದ್ದರಿಸಿದ್ದರು.

ಮಾಧವಿ ಎದ್ದು ನಿಂತು ತನ್ನ ನೋಟ್‌ಬುಕ್‌ನಲ್ಲಿದ್ದ ಸೋಮುವಿನ ಪ್ರೇಮ ಪತ್ರ ಗುರುಗಳ ಹತ್ತಿರ ತೆಗೆದುಕೊಂಡು ಹೋಗಿ ಕೊಟ್ಟಳು. ತರಗತಿಯಲ್ಲಿ ಗಂಭೀರ ಮೌನ ಎಲ್ಲರೂ ಗುರುಗಳ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದರು.

ಕಂಡು ಗುರುಗಳು ಕೆಂಡಾಮಂಡಲವಾದರು. ಕೂಡಲೇ ವಿದ್ಯಾರ್ಥಿಗಳತ್ತ ದೃಷ್ಟಿ ಹರಿಸಿ ! ‘ಯಾರು ಮಾಡಿದ್ದು ಈ ಕಿತಾಪತಿ!’ ಗದ್ದರಿಸಿದರು. ಇನ್ನು ವರ್ಗದಲ್ಲಿ ಪ್ರತಿಕ್ರಿಯೆ ಇಲ್ಲ. ಬರಿ ಗಂಭೀರ ಮೌನ ಸೂಜಿ ಉರುಳಿದರೂ ಕೇಳುವಷ್ಟು ಗಂಭೀರ ವಾತಾವರಣ ಈಗ ಪುನಃ ಗುರುಗಳು ಸೋಮು ಯಾರು !’ ಎಂದರು. ಹಿಂದಿನ ಬೆಂಚಿನಲ್ಲಿದ್ದ ಸೋಮು ಮೆಲ್ಲಗೆ ನೋಡುತ್ತ ಎದ್ದು ನಿಂತನು. ಅವನ ಮೊಗ ಪೇಲವಗೊಂಡಿತ್ತು.

‘ನಿನಗೆ ಇಂಥ ಪತ್ರ ಬರೆಯಲು ನಾಚಿಕೆಯಾಗದೇ? ನಿನ್ನ ತಂದೆ ತಾಯಿ ಕಾಲೇಜಿಗೆ ಹೋಗಿ ಇದೇ ಮಾಡೆಂದು ಹೇಳಿದ್ದರೇ! ನಾನ್ನಸೆನ್ಸ್. . .’ ರಮೇಶ ಗುರುಗಳು ಅತ್ಯಂತ ಎತ್ತರ ಧನಿಯಲ್ಲಿ ನುಡಿದು ‘ಹೋಗು ಆಚೆ, ಪ್ರಿನ್ಸಿಪಲ್‌ರಿಗೆ ಹೇಳಿ ಈ ಕಾಲೇಜಿನಿಂದ ನಿನ್ನ ಅಡಮಿಷನ್ ತೆಗೆಸಿ ಬಿಡಸ್ತಿನಿ’ ಎನ್ನುವಾಗ ಸೋಮು ನಿಂತಲ್ಲೇ ಅಳುತ್ತ ‘ಕ್ಷಮಿಸಿ ಸರ್ ನನ್ನಿಂದ ತಪ್ಪಾಗಿದೆ’ ನುಡಿದನು. ತಪ್ಪಾಗಿದೆ . . . ಅಂದರೆ ಆಯ್ತೆ ಯಾವ ತಪ್ಪು ಎಂತಹ ತಪ್ಪು ಇದು ಸಾಮಾನ್ಯ ತಪ್ಪೆ! ‘ನಿನ್ನ ಚಿಕ್ಕ ತಪ್ಪು ಈ ಹುಡುಗಿಯ ಭವಿಷ್ಯ ಹಾಳು ಮಾಡುತ್ತೆ, ಜೀವನ ವೆಂದರೆ ಚಲ್ಲಾಟ ತಿಳಿದಿದೆಯೆ’ ಹೋಪಲೆಸ್ಸ ಫೆಲೊ, ಗುರುಗಳು ಸೋಮುವಿಗೆ ಬೈಯ್ಯುವಾಗ ಮಾಧವಿ ಅಳತೊಡಗಿದಳು.

ಮಾಧವಿ ಎದ್ದುನಿಂತ ‘ಸಾರಿ ಸರ್. . .’ ಎಂದು ಅಳುತ್ತ ಸರಸರನೆ ಕಾಲೇಜು ವರ್ಗದಿಂದ ಹೊರ ನಡೆದಳು ಅವಳ ಎದೆ ಢವ ಢವ ಬಡಿದುಕೊಳ್ಳ ತೊಡಗಿತ್ತು. ಗುರುಗಳು ಮಾಧವಿ ಎಂದರೂ ಸಾರ್ ಪರಮಿಷನ್ ಕೊಡಿ ನಾನು ಮನೆಗೆ ಹೋಗಬೇಕು. ಎನ್ನುತ್ತ ಗುರುಗಳ ಉತ್ತರಕ್ಕೂ ಕಾಯದೇ ವರ್ಗದಿಂದ ಅವಳು ಹೊರ ನಡೆದಳು. ಗುರುಗಳು ಅವಳ ಹೋದ ದಿಕ್ಕಿನತ್ತ ಕಣಹೊತ್ತು ಕಂಡರು. ಮತ್ತೆ ಕಾಲೇಜಿನಲ್ಲಿ ಏನು ನಡೆಯಿತೋ ! ಮಾಧವಿ ತಿಳಿಯಲಿಲ್ಲ.

ಮಾಧವಿ ಮನೆಗೆ ಬಂದು ಕಣ್ಣೀರು ಹರಿಯುವವರೆಗೆ ಅತ್ತಳು. ಆತ್ಮಹತ್ಯೆಯೇ ಮಾಡಿಕೊಳ್ಳಬೇಕೇನ್ನುವಷ್ಟು ನಿರ್ಧಾರಕ್ಕೆ ಬಂದಂತೆ ದುಡಕಿಯೂ ತನ್ನ ತಾನೆ ಸಮಾಧಾನ ತಂದು ಕೊಂಡು ಇದಕ್ಕೆಲ್ಲ ತನ್ನದೇನು, ಸಕ್ರಿಯೆತನ ಇಲ್ಲದಿದ್ದಾಗ ದುಃಖವೇಕೊ ? ಎಂದು ಕೊಂಡಳು.

ವಿಠಲರಾಯರು ಅತ್ಯಂತ ಪ್ರೀತಿಯಿಂದ ಮಾಧವಿಗೆ ಬೆಳೆಸಿದ ಅವರು ಮಗಳು ಈ ರೀತಿ ದುಃಖ ಪಡುವುದು ಕಂಡು ಚಡಪಡಿಸಿದರು. ಮತ್ತು ಆಗಲೇ ಕಾಲೇಜಿಗೆ ಹೋಗಿ ಇದ್ದ ವಿಷಯ ತಿಳಿದುಕೊಂಡು ಬಂದು ಮಾಧವಿಗೆ ಸಮಾಧಾನ ಹೇಳಿದ್ದರು. ರುಕ್ಮೀಣಿ ಬಾಯಿಯು ಸಂತೈಸಿದರು. ಈ ಅಘಾತವಾದ ಮೇಲೆ ಮಾಧವಿ ಎರಡು ಮೂರು ದಿವಸ ಕಾಲೇಜಿಗೆ ಹೋಗಲಿಲ್ಲವಾದರೂ ಕಾಲೇಜಿನಲ್ಲಿ ಸೋಮು ಮತ್ತು ಮಾಧವಿಯ ಕುರಿತು ಚರ್ಚೆಗಳು ನಡೆದವು. ವಿದ್ಯಾರ್ಥಿಗಳಿಗೆ ಹಾಸ್ಯದ ಇದೊಂದು ವಿಷಯ ಗ್ರಾಸವಾಗಿತ್ತು. ಸೋಮು ಸಹಿತ ಕಾಲೇಜಿಗೆ ಬರಲಿಲ್ಲ.

ಗುರುಗಳು, ಪ್ರಿನ್ಸಿಪಾಲ್‌ ರೆಲ್ಲರೂ ಮಾಧವಿ ಮನೆಗೆ ಬಂದು ಕ್ಷಮೆ ಯಾಚಿಸಿ ರಕ್ಷಣೇ ನೀಡುವುದಾಗಿ ಕಾಲೇಜಿಗೆ ಬರಲು ಆಹ್ವಾನಿಸಿದರು. ಆದರೆ ಇಷ್ಟರಲ್ಲೆ ಒಂದು ಅಘಾತ ಸುದ್ಧಿ ಕಾಲೇಜಿನಲ್ಲಿ ಕೇಳಿ ಬಂತು. ಸೋಮು ಈ ಘಟನೆಯಾದ ಮೇಲೆ ತಾನು ತುಂಬ ಬೇಸರ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಅಲ್ಲದೆ ಕಾಲೇಜಿನ ಎಲ್ಲ ವರ್ಗಗಳಲ್ಲೂ ಮಾಧವಿಯ ಹೆಸರು ರಾರಾಜಿಸಿತ್ತು. ಇದನ್ನು ಕೇಳಿದ ಮಾಧವಿಯ ಕಾಲೇಜಿಗೆ ಹೋಗದಿರುವುದಕ್ಕೆ ನಿರ್ಧಾರವೇ ಕೈಕೊಂಡಳು.

ಮಾಧವಿಯ ಮನದ ಮೇಲೆ ಆ ಕಾಲೇಜಿನ ಘಟನೆ ಮರೆಯದಂತೆ ಮಾಡಿತ್ತು. ಅನ್ನ ನೀರುಗಳು ಬಿಟ್ಟು ಬಡಕಲಾದಳು. ಹಗಲು ರಾತ್ರಿ ಏನೋ ಚಿಂತೆಯಲ್ಲಿ ಹಾಸಿಗೆಯಲ್ಲಿಯೇ ಪವಡಿಸಿದಳು. ಪಾಲಕರು ಎಷ್ಟು ಹೇಳಿದರೂ ಮಾಧವಿ ವಾಸ್ತವಕಕ್ಕೆ ಬರದೇ ಬಡಕಲಾದಳು. ಮನೆಯ ಮಾಲಿಕರಾದ ಶ್ರೀನಿವಾಸನಿಗೆ ಇದೆಲ್ಲ ವಿಷಯಗಳ ತಿಳಿದು ವಿಠಲರಾಯರ ಮನೆಗೆ ಬಂದು ಮಾಧವಿಗೆ ಸಾಂತ್ವನ ಹೇಳಿದ್ದನು. ಈಗೀಗ ಶ್ರೀನಿವಾಸನು ಹೆಚ್ಚಿನ ಅಭ್ಯಾಸ ಮಾಡಿ ವಿದ್ಯಾವಂತನಾದರೂ ಎಲ್ಲಿಯೂ ನೌಕರಿ ಮಾಡದೇ ತಂದೆಯ ಕಾಯಕವಾದ ವ್ಯವಹಾರದ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ಅತ್ಯಂತ ಶ್ರೀಮಂತರಾದ ಮನೆಯ ಮಾಲಿಕರು ಶ್ರೀನಿವಾಸನಿಗೆ ಇನ್ನೂ ವಿವಾಹ ಮಾಡಿರಲಿಲ್ಲ. ಈ ಬಗ್ಗೆ ತಿಳಿದಿದ್ದ ವಿಠಲರಾಯರು ತಮ್ಮ ಮಾಧವಿಗೆ ಶ್ರೀನಿವಾಸನಿಗೆ ಮದುವೆ ಮಾಡಿ ಕೊಡುವ ಬಗ್ಗೆ ಮಡದಿ ಮುಂದೆ ನುಡಿದಾಗ ರುಕ್ಮೀಣಿ ಬಾಯಿ ‘ಹುಡಗನ ವಯಸ್ಸು ಜಾಸ್ತಿಯಾಗಿದೆ, ನಮ್ಮ ಮಾಧವಿಗೆ ಹೊಂದಾಣಿಕೆಯಾಗದು’ ಎಂದು ನಿರಾಕರಿಸಿದರು. ಆದರೂ ವಿಠಲರಾಯರು ಅದಕ್ಕೆ ಜಗ್ಗದೆ ಹೇಗಾದರೂ ಮಾಡಿ ಮಾಧವಿಯನ್ನು ಶ್ರೀವಾಸನಿಗೆ ಕೊಡಬೇಕೆಂದು ಮನದಲ್ಲಿ ನಿರ್ಧಾರ ಕೈಗೊಂಡರು. ಈ ವಿಷಯ ಮಾಧವಿಗೂ ಗೊತ್ತಾಗಿ ಅದಕ್ಕೆ ನಿರಾಕರಿಸಿದಳು. ಆದರೂ ರಾಯರು ತಮ್ಮ ಮನದಿಂಗಿತ ಶ್ರೀನಿವಾಸನ ಪಾಲಕರಾದ ರಾಮಚಂದ್ರರಾಯರ ಮುಂದೆ ತೋಡಿಕೊಂಡಾಗ ಅದಕ್ಕೆ ಅವರು ಖಡಾಖಂಡಿತರಾಗಿ ಅವರ ಮಾತಿನ ಮೇಲೆ ಬೆಳಕು ಚಲ್ಲಲಿಲ್ಲ.

ಶ್ರೀನಿವಾಸನಿಗೂ ಮಾಧವಿಯ ಚರಿತ್ರೆಯ ಬಗ್ಗೆ ಶಂಕೆಯಾಗಿ ಅವಳನ್ನು ಮದುವೆಯಾಗಲು ಹಿಂಜರಿದನು.

ಇದಾದ ಕಲವೇ ದಿನಗಳಲ್ಲಿ ವಿಠಲರಾಯರು ತಮ್ಮ ಕುಟುಂಬವನ್ನು ಹೈದರಾಬಾದಿಗೆ ವರ್ಗಾಯಿಸುವಲ್ಲಿ ಶ್ರೀನಿವಾಸ ಮನೆ ಖಾಲಿ ಮಾಡಿದರು.

ವಿಠಲರಾಯರ ಸಂಸಾರ ಶ್ರೀನಿವಾಸರ ಮನೆಯಿಂದ ಹೋದ ಮೇಲೆ ಮನೆ ಬಿಕೋ ಎನ್ನುತ್ತಿತ್ತು. ಪದೆ ಪದೇ ಶ್ರೀನಿವಾಸನಿಗೆ ಮಾಧವಿ ನೆನಪಾಗುತ್ತಿದ್ದಳು. ಅವಳ ಸುಂದರ ರೂಪ ಇವನಲ್ಲಿ ಮನೆ ಮಾಡಿತ್ತು. ಚರಿತ್ರೆಯ ಬಗ್ಗೆ ಸಂಶಯ ಮೂಡಿದರೂ ತಾನೇಕೆ ಮಧವಿಯನ್ನು ವರಿಸಲಿಲ್ಲ ಎಂದುಕೊಂಡನು. ದಿನಗಳೆದ ಹಾಗೆ ನೆನಪು ಇನ್ನಷ್ಟು ಹೆಪ್ಪುಗಟ್ಟಿ ಎದೆಯಲ್ಲಿ ಮನೆ ಮಾಡಿತ್ತು. ಹೀಗೆ ಹತ್ತು ವರುರ್ಷ ಉರುಳಿದವು ಏಕೋ ಪಾಲಕರ ಒತ್ತಾಯದ ನಂತರವೂ ಶ್ರೀನಿವಾಸ ಮದುವೆಯಾಗದೇ ಹಾಗೆ ಉಳಿದನು. ಪಾಲಕರು ಇದೇ ಚಿಂತೆಯಲ್ಲಿ ಸ್ವರ್ಗ ಕಂಡರು. ಈಗ ಶ್ರೀನಿವಾಸ ತಂದೆ ತಾಯಿಯರ ಕಳೆದುಕೊಂಡು ತಬ್ಬಲಿಯಾಗಿದ್ದನು.

ಅದೊಂದು ದಿನ ಶ್ರೀನಿವಾಸನಿಗೆ ಹೈದರಾಬಾದಿಗೆ ತೆರಳಿ ಮಾಧವಿಯನ್ನು ಕಾಣಬೇಕೆಂಬ ಬಲವಾದ ಬಯಕೆ ಕಾದಿತ್ತು. ಅದಕ್ಕೆ ಪೂರಕವಾಗಿಯೇ ತಮ್ಮ ಮನೆಯಲ್ಲಿ ವಿಠಲರಾಯರ ಹೈದರಾಬಾದ ವಿಳಾಸವು ಕೈ ಸೇರಿತ್ತು.

ಒಂದು ಬೆಳಿಗ್ಗೆ ಮನದಲ್ಲಿ ಮಾಧವಿಯನ್ನೆ ನೆನಪು ಮಾಡಿಕೊಳ್ಳುತ್ತ ತಾವು ಉಳಿದ ನಗರವಾದ ಜಹಿರಾಬಾದದಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ.

* * * *

ಹೈದರಾಬಾದ ನಾಮಪಲ್ಲಿಗೆ ಬಂದು ರೈಲು ನಿಲ್ದಾಣದಲ್ಲಿ ಇಳಿದು ನೇರವಾಗಿ ರಾಮಾಂತಪೂರಕ್ಕೆ ಶ್ರೀನಿವಾಸನು ಬಂದು ವಿಳಾಸ ಕೇಳಿಕೊಂಡು ಮಾಧವಿ ಮನೆಗೆ ಬಂದಿದ್ದ. ಬದಿಯ ಮನೆಯ ಅಂಗಳದಲ್ಲಿ ಕುಳಿತ ಹೆಣ್ಮಕ್ಕಳಿಗೆ, ಮಾಧವಿಯ ಹೆಸರು ಉಚ್ಛಾರ ಮಾಡುತ್ತಲೆ ಆ ನಾರಿಯರು ಮೊಗ ಒಂದು ರೀತಿಯಿಂದ ಮಾಡಿಕೊಂಡು ‘ಹೌದು ಅದೆ ಮನೆ’ ಬೆರಳು ತೋರಿ ಎದ್ದು ಒಳ ಹೋದರು. ಅವರು ಮಾಡುವ ವಿಚಿತ್ರ ರೀತಿಯ ವರ್ತನೆ ಕಂಡು ಏನೋ ಯೋಚಿಸುತ್ತ ಮಾಧವಿಯ ಮನೆಯ ಬಾಗಿಲಿನ ಕಾಲ್‌ಬೆಲ್ ಮಾಡಿದನು.

‘ಯಾರು!’ ಒಳಗಿನಿಂದ ಧ್ವನಿ ಮೂಡಿ ಬಂತು ಅದು ಮಾಧವಿಯ ದನಿಯೇ ಆಗಿತ್ತು.

‘ನಾನು. . . . . ನಾನು ಶ್ರೀ. . ನಿವಾಸ’ ಎಂದು ಉತ್ತರ ಕೊಡುತ್ತ ಶ್ರೀನಿವಾಸ ಹಾಗೆ ನಿಂತ. ಮಾಧವಿ ಈಗ ಹೇಗಿದ್ದ್ದಿರಬಹುದು ಮನೆಯಲ್ಲಿ ಅವಳ ಪಾಲಕರಿಲ್ಲವೆ ! ಏನೆಲ್ಲ ಯೋಚ್ನೆ ಬಂದವು. ತಾನು ಮಾಧವಿಯನ್ನು ವಿವಾಹವಾಗಬೇಕಿತ್ತು ಎನಿಸಿತ್ತು.

ಅಷ್ಟರಲ್ಲಿ ಮಾಧವಿ ಹೊರಗೆ ಬಂದಳು. ಶ್ರೀನಿವಾಸನ ಕಂಡಾಕ್ಷಣ ನಗು ಮೊಗದಲ್ಲಿ ಒಳಗೆ ಕರೆದಳು. ಮನೆಯೊಳಗೆ ಶ್ರೀನಿವಾಸ ಹೆಜ್ಜೆ ಇಡುತ್ತಿರುವಂತೆ ಎಲ್ಲೊ ಬಂದಂತೆನಿಸಿತ್ತು. ಬಟ್ಟೆಗಳೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯೊಳಗೆ ಏನೋ ಒಂದು ರೀತಿಯ ಗಮಟುವಾಸನೆ.

ಮಾಧವಿಗೆ ಕಂಡಾಗ ತುಂಬ ಬದಲಾಗಿದ್ದಳು. ಕೇಶಗಳೆಲ್ಲ ಭುಜದ ಮೇಲೆ ಚಲ್ಲಿದ್ದವು. ಅತ್ಯಂತ ಕಿಮ್ಮತ್ತಿನ ಸೀರೆ ಅಂಗಾಂಗಗಳ ಕಾಣುವಂತೆ ಧರಿಸಿದಳು. ಹಣೆಯ ಮೇಲೆ ಕುಂಕುಮವಿರಲಿಲ್ಲ. ನಿದ್ದೆಗಣ್ಣಿನಂತೆ ಕಂಗಳು, ಸುಕ್ಕು ಗಟ್ಟಿದ ಕಪೋಲಗಳು, ಅವಳನ್ನು ನೋಡುತ್ತ ಅಲ್ಲಿರುವ ಕುರ್ಚಿಯ ಮೇಲೆ ಹಾಗೆ ಕುಳಿತನು. ಮಾಧವಿ ಒಳ ಮನೆಗೆ ಹೋಗಿ ಸ್ವಲ್ಪ ಹೊತ್ತಿಗೆ ಒಂದು ಗ್ಲಾಸ್ ನೀರು ಮತ್ತು ಟೀ ಕಪಿನೊಂದಿಗೆ ಹೊರಬಂದು. ‘ಟೀ ತಗೊಳ್ಳಿ ಈಗಾಗಲೇ ಬರುವುದಾಯಿತೆ ? ’ ಎಂದು ಪ್ರಶ್ನಿಸಿದಳು. ಹೌದು ಎಂದು ಮುಗಳು ನಗುತ್ತ ಅಪ್ಪ ಅಮ್ಮ ಕಾಣಿಸುತ್ತಿಲ್ಲ! ಪುನಃ ಮಾತನಾಡಿದನು.

‘ಅವರು ತೀರಿಕೊಂಡು ಎರಡು ವರ್ಷವಾಯಿತು’ ಎಂದು ಗಂಭಿರವಾಗಿ ನುಡಿದು ಇನ್ನೊಂದು ಖಾಲಿ ಇರುವ ಚೇರ್‌ನಲ್ಲಿ ಕುಳಿತಳು. ಅಷ್ಟರಲ್ಲಿ ಕಾಲಿಂಗ್‌ಬೆಲ್ ಮಾಧವಿ ಎದ್ದು ಹೊರಗೆ ಬಂದು ಯಾರದೋ ಜೊತೆ ನಕ್ಕು ‘ರಾತ್ರಿ ಒಂಬತ್ತು ಗಂಟೆಗೆ. . .’ ‘ನಾನೀಗ ಬುಜಿ. . .’ ಎನ್ನುವುದು ಶ್ರೀನಿವಾಸನಿಗೆ ಮಾಧವಿಯ ದನಿ ಕೇಳಿ ಬಂತು.

ಮಾಧವಿ ಒಳ ಬಂದಾಗ ಮಾಧವಿ ನೀವೀಗ ಮೊದಲಿನಂತೆ ಕಾಣುತ್ತಿಲ್ಲ ನಿಮ್ಮಲೈಫ್ ಸ್ಟೈಲ್ ನಲ್ಲೇನೋ ! ವ್ಯತ್ಯಾಸ ಓಪನ್ ಆಗಿ ಮಾತನಾಡುತ್ತಿರುವೆ. ತಪ್ಪು ತಿಳಿಯದಿರಿ.
ವಿವಾಹ ಮಕ್ಕಳು. ? ಶ್ರೀನಿವಾಸನ ಮಾತಿಗೆ ‘ಶ್ರೀನಿವಾಸರೇ ಕ್ಷಮಿಸಿ ನನಗೆ ಈಗ ಟೈಮ ಇಲ್ಲ, ಈಗ ಬಂದ ಉದ್ದೇಶ ! ಎಂಜಾಯ್ ಮಾಡಬೇಕೆ !’ ಮಾಧವಿಯ ಮಾತುಗಳು ಶ್ರೀನಿವಾಸನ ಕಿವಿಗಳಲ್ಲಿ ಸಿಡಿಲಿನಂತೆ ಬಂದೆರಗಿದವು.

‘ಅಂದರೆ!. . .’ ಶ್ರೀನಿವಾಸ ಗಾಬರಿಯಾಗಿ ಕೇಳಿದನು. ತಪ್ಪು ತಿಳಿಯದಿರಿ, ನಾನಿರುವುದು ಈಗ ನಿಮ್ಮಂತಹವ ಆನಂದಕ್ಕಾಗಿ ಮಾತ್ರ. . . . ನನ್ನ ಹಿಂದೆ ಯಾವ ಮದುವೆ ಗಂಡ ಮಕ್ಕಳಿಲ್ಲ. ನನ್ನ ಪಾಲಕರ ನನ್ನ ಮದುವೆಯೂ ಮಾಡದೇ ತೀರಿ ಹೋದರು. ನನ್ನ ಬಾಳಿಗೆ ಇರೋದು ಇದೋಂದೆ ದಾರಿ. . . . ಮಾಧವಿ ಗಳಗಳನೆ ಅಳ ತೊಡಗಿದಳು. ಶ್ರೀನಿವಾಸ ಅವಳ ಹತ್ತಿರ ಹೋಗಿ ಅಳಬೇಡಿ ಮಾಧವಿ ಎಂದು ಹತ್ತಿರಕ್ಕೆ ಹೋದನು.

‘ನಿಮ್ಮ ಮನಸ್ಸಿಲ್ಲದಿದ್ದರೆ ನನ್ನ ಸ್ಪರ್ಶಿಸದಿರಿ, ನಾನೀಗ ವೇಶ್ಯೆ. . .ವೇಶ್ಯೆ ವೇಶ್ಯೆ. .’ ಅಲ್ಲಿ ಬದಿಯಲ್ಲಿರುವ ಮಂಚದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳ ತೊಡಗಿದಳು. ಆದರೂ ಶ್ರೀನಿವಾಸನು ಧೈರ್ಯ ಮಾಡಿ ಸ್ಪರ್ಶಿಸಿ ಅವಳನ್ನು ಸಾಂತ್ವನ ಗೊಳಿಸುತ್ತ ನುಡಿದನು.

‘ಮಾಧವಿ. . . ಅಳಬೇಡಿ ಜೀವನ ಯಾವ ಕ್ಷಣದಲ್ಲಿ ಹೇಗೆ ಬದಲಾಗುತ್ತದೆ ಯಾರು ಅರಿಯಲಾರರು. ಆದರೆ ಹಾಳಾದ ಬಾಳನ್ನು ರೂಪಿಸುವುದು ನಮ್ಮ ಕೈಯಲ್ಲಿದೆ ನಮ್ಮಲ್ಲಿ ಅಂತಹ ಆತ್ಮವಿಶ್ವಾಸಬೇಕು’.

‘ಎಂತಹ ವಿಶ್ವಾಸ, ಜೀವನವೇ ಛಿದ್ರಗೊಂಡು ಪತನವಾದ ಮೇಲೆ ಇನ್ನೇನು ಉಳಿದಿದೆ ? ಆತ್ಮವಿಶ್ವಾಸ, ನನ್ನ ಬಾಳು ಈಗ ಬರಿ ಕತ್ತಲಿನ ಮುದ್ದೆ ಜೀವನದಲ್ಲಿ ಎಷ್ಟು ದೂರ ಹೋದರೂ ಬೆಳಕೆಂಬುದು ಇಲ್ಲ ರಾತ್ರಿಯಾದರಾಯ್ತು ಹಾವಿಗೆ ಹದ್ದುಗಳು ಕುಕ್ಕುವಂತೆ ನನ್ನ ಸ್ಥಿತಿ. ನಾನು ಕಳಂಕಿನಿ. . . ಕಳಂಕಿನಿ. ನಾನು ಈ ಸಮಾಜದಲ್ಲಿ ಚರಿತ್ರ ಹೀನಳು’ ಮಾಧವಿಯ ದುಃಖದ ಕಟ್ಟ್ಟೆಯೊಡೆದು ಹೋಗಿತ್ತು. ಶ್ರೀನಿವಾಸ ಅವಳನ್ನು ಸಂತೈಸುತ್ತ ಹತ್ತಿರದಲ್ಲೆ ಕುಳಿತನು.

“ಮಾಧವಿ ನಿನಗೆ ಈ ಸ್ಥಿತಿ ಬರಲು ಯಾವ ಕಾರಣ ಕಾಡಿತ್ತು. ಶ್ರೀನಿವಾಸ ಮಾತಿಗೆ ಹೆಣ್ಣೊಂದು ಹಣ್ಣಿನ ಹೋಳು ಜಾರಿ ಬಿದ್ದರೆ ಮಣ್ಣಿನ ಧೂಳು. . .” ಎಂಬಂತೆ ನಿಮ್ಮೂರಿನಲ್ಲಿದ್ದಾಗ ಸೋಮು ಬರೆದ ಪ್ರೇಮ ಪತ್ರದಿಂದಾಗಿ ನನಗೆ ಅಂಟದ ಚರಿತ್ರಹೀನತೆ ದೋಷ ಈ ಸ್ಥಿತಿಗೆ ಕಾರಣವಾಯಿತು. ನನ್ನ ಚರಿತ್ರೆಯ ಬಗ್ಗೆ ಹೈದರಾಬಾದಿನಲ್ಲೂ ಎಲ್ಲ ಸಲ್ಲದ ಮಾತು ಕೇಳಿ ಬಂದವು. ಯಾರೂ ನನ್ನನ್ನು ವಿವಾಹವಾಗಲು ಮುಂದೆ ಬರಲಿಲ್ಲ. ಇದರಿಂದಾಗಿ ಅಪ್ಪ, ಅಮ್ಮ ನನ್ನ ಕುರಿತೇ ಚಿಂತಿಸಿ ಸಾವನಪ್ಪಿದರು. ಅವರು ತೀರಿಕೊಂಡ ಮೇಲೆ ನನಗೆ ಈ ನರಕ ಯಾತನೆ ಅಂಟಿಕೊಂಡಿತ್ತು. ಜನರು ನನ್ನನ್ನು ಒತ್ತಾಯ ಪೂರ್ವಕ ಬಲಾತ್ಕಾರ ಮಾಡಿ ಈ ದಾರಿಗೆ ಬರಲು ಕಾರಣರಾದರು. ಇನ್ನೇನು ಉಳಿದಿದೆ, ನನ್ನ ಕಥೆ ಕೇಳಲು ಶ್ರೀನಿವಾಸ ರಾಯರೆ !. . . . ಬಿಕ್ಕಿ ಬಿಕ್ಕಿ ಅಳುತ್ತ ಕಣ್ಣೀರಿನಲ್ಲಿ ತೋಯ್ದು ಹೋದಳು.

‘ಮಾಧವಿ. . .’ ಶ್ರೀನಿವಾಸ ಒಂದು ಸಲಗಟ್ಟಿಯಾಗಿ ಕೂಗಿಕೊಂಡ ‘ಏನು!. .’ ಎನ್ನುತ್ತ ಕೆಂಪುಗಣ್ಣುಗಳಲ್ಲೇ ಮಾಧವಿ ನೋಡಿದಳು.

‘ಈಗಲೂ ಕಾಲ ಮಿಂಚಿಲ್ಲ. . ನೀನು. . . ನೀನು. . ಒಪ್ಪಿವಿಯಾದರೆ. . . ಯಾದರೆ. . .’ ಶ್ರೀನಿವಾಸನ ಮಾತಿಗೆ ಅಂದರೆ ! ಎಂದು ಕೇಳಿದಳು.

‘ನೀನು ಒಪ್ಪುವಿಯಾದರೆ ನಾನು ನಿನ್ನೋಂದಿಗೆ ವಿವಾಹವಾಗಲು ಸಿದ್ದನಿದ್ದೇನೆ’.

‘ಶ್ರೀನಿವಾಸರಾಯರೆ!’

ಹೌದು ಮಾಧವಿ ಇದು ಸತ್ಯ ಮಾತು ನಾನು ನಿನಗಾಗಿ ಪರಿತಪಿಸಿ ಈಗಲೂ ಮದುವೆಯಾಗಲೇ ಇಲ್ಲ. ನಾನಂದೇ ನಿನ್ನ ವರಿಸಬಹದುತ್ತ್ತು. . . . ಆದರೆ ಅದೇನು ಗ್ರಹಚಾರವೊ ನಿನಗೆ ಇಂತಹ ದುಸ್ಥಿತಿ ಬಂದೊದಗಿತು. ಅದ್ದರಿಂದ ಇದಕ್ಕೆ ನೀನು ಒಪ್ಪಿಕೊಳ್ಳು ಮಾಧವಿ.

‘ಶ್ರೀನಿವಾಸರಾಯರೆ ನಾನೀಗ ಕೊಳೆತ ಹಣ್ಣು. ಇನ್ನೇನು ನಾನು ಪೂಜೆಗೆ ಒಪ್ಪಲಾರದ ವಸ್ತು ದಯವಿಟ್ಟು ನನ್ನನ್ನು ವಿವಾಹವಾಗುವ ವಿಚಾರ ಬಿಟ್ಟು ಬಿಡಿ. ನಾನೀಗ ಉತ್ತಮ ಸಮಾಜದಿಂದ ಬಹುದೂರ ಹೋಗಿರುವೆ. ನನಗೀಗ ಇದೆ ಕಾಯಕ ಶೊಭೆ. ನೀವು ಬಂದದಾರಿಗೆ ಸುಂಕವಿಲ್ಲದೆ ಹೋಗಿ ಬಿಡಿ. ಬೇಕಾದರೆ ಇವತ್ತೊಂದು ದಿನ ನನ್ನೊಂದಿಗೆ ಕಳೆದು ಸುಖ ಅನುಭವಿಸಿ. . ಆದರೆ ಮದುವೆಯ ಮಾತೆತ್ತಬೇಡಿ. . .’ ಪುನಃ ಮಾಧವಿ ಅಳತೊಡಗಿದಳು.

ಈಗ ಶ್ರೀನಿವಾಸ ಅವಳನ್ನು ಹತ್ತಿರಕ್ಕೆ ಕರೆದುಕೊಂಡು ಅವಳ ಕಂಗಳ ನೀರನ್ನು ತನ್ನ ಬಲಗೈಯಿಂದ ಒರೆಸುತ್ತ. . . ನೀನೀಗ ಮಾಧವಿ ನನ್ನವಳು. ಇದು ನನ್ನ ಕೊನೆಯ ದೃಢ ನಿರ್ಧಾರ. ನೀನು ಯಾವುದೇ ಕಾರಣಕ್ಕೂ ಇವತ್ತಿನಿಂದ ನೀನು ಬೇರೆಯವರಳಲ್ಲ ನನ್ನವಳು ಮಾತ್ರ. . . ಶ್ರೀನಿವಾಸ ನುಡಿದು ಮಾಧವಿಯನ್ನು ಅಲಂಗಿಸಿಕೊಂಡನು.

ಈಗ ದೊಡ್ಡರಾಗದಿಂದ ಅಳುತ್ತ ಮಾಧವಿ ಶ್ರೀನಿವಾಸನ ಮಡಿಲಲ್ಲಿ ತಲೆ ಇಟ್ಟಳು. ಹಾಗೇ ಅವಳ ಮೇಲೆ ಭಾರ ಹಾಕಿ ಮಾಧವಿಗೆ ಇನ್ನಷ್ಟು ಹತ್ತಿರಕ್ಕೆ ಎಳೆದು ಕೊಂಡು ಪ್ರೀತಿಯಿಂದ ಒಮ್ಮೆ ಚುಂಬಿಸಿದನು. ಮಾಧವಿ ಅವನ ಚುಂಬನಕ್ಕೆ ಸೋತು ಒಮ್ಮೆ ಮುಗಳು ನಕ್ಕಳು.

– ಡಾ.ಎಂ.ಜಿ.ದೇಶಪಾಂಡೆ
ಖ್ಯಾತ ಸಾಹಿತಿಗಳು ಬೀದರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ