ಸುಖದ ಮೂಲ ಎಲ್ಲಿದೆ ?
ಸುಖ- ಸಂತೋಷ ಎನ್ನುವುದು ನಾವು ನೋಡುವ ದೃಷ್ಟಿಕೋನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.ಯಾವುದೇ ಸವಾಲನ್ನು ನಾವು ಧನಾತ್ಮಕ ವಾಗಿ ತೆಗೆದುಕೊಂಡರೆ ಸುಖವನ್ನು ಕಂಡುಕೊಳ್ಳಬಹುದು. ಅದನ್ನೇ ಋಣಾತ್ಮಕವಾಗಿ ತೆಗೆದುಕೊಂಡರೆ ದು:ಖ ಕಟ್ಟಿಟ್ಟ ಬುತ್ತಿ. ನನಗೆ ದೇವರು ಏನು ಕೊಟ್ಟಿದ್ದಾನೆ? ಎಂದು ಪ್ರಶ್ನೆ ಹಾಕಿಕೊಂಡಾಗ ಏನೂ ಇಲ್ಲ ಅನಿಸಬಹುದು.ಕಷ್ಟಗಳ ಸರಮಾಲೆಗಳೇ ನನ್ನ ಮುಂದಿವೆ ಅನಿಸಬಹುದು. ಮನಸ್ಸು ಚಿಂತಾಕ್ರಾಂತವಾಗಿ ವ್ಯಗ್ರವಾಗಬಹುದು. ಅದೇ ಪ್ರಶ್ನೆಯನ್ನು ಈ ರೀತಿಯಾಗಿ ಕೇಳಿಕೊಳ್ಳಿ. ದೇವರು ನನಗೇನೆನೆಲ್ಲಾ ಕೊಟ್ಟಿದ್ದಾನೆ? ಎಂಬುದಾಗಿ. ಬೆಲೆ ಕಟ್ಟಲಾಗದ ಶರೀರ ನಮಗೆ ದೇವರು ಕೊಟ್ಚ ವರ. ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ಕಣ್ಣುಗಳಿವೆ. ಕೆಲಸ-ಕಾರ್ಯಗಳನ್ನು ಮಾಡಲು ಕೈಗಳು, ಸರಾಗವಾಗಿ ನಡೆಯಲು ಕಾಲುಗಳಿವೆ.ಮಾತನಾಡಲು ಬಾಯಿ,ಆಲಿಸಲು ಕಿವಿಗಳು,ರುಚಿಯನ್ನು ಗ್ರಹಿಸಲು ನಾಲಿಗೆ,ವಾಸನೆಯನ್ನು ಗ್ರಹಿಸಲು ಮೂಗು,ಆಲೋಚಿಸಲು ಮೆದುಳು,ಇಷ್ಟೆಲ್ಲವನ್ನೂ ದೇವರು ಅನುಗ್ರಹಿಸಿದ್ದಾನೆ ಅಂತ ಚಿಂತನೆ ಮಾಡುವುದೇ ಸುಖಕ್ಕೆ ಮೂಲ. ನಾವು ದು:ಖದಲ್ಲಿರುವಾಗ ನಮಗಿಂತ ದು:ಖದಲ್ಲಿರುವವರನ್ನು ನೋಡಿ ತೃಪ್ತಿಪಟ್ಟುಕೊಳ್ಳಬೇಕು. ಇದ್ದುದರಲ್ಲಿ ತೃಪ್ತಿಯ ಭಾವ ಅಂತರ್ಗತವಾಗಿ ಮೂಡಿಬರಬೇಕು. “ಪಾಲಿಗೆ ಬಂದದ್ದು ಪಂಚಾಮೃತ” ಎಂಬ ನುಡಿ ನಮ್ಮಬದುಕಿಗೆ ದಾರಿದೀಪವಾಗಬೇಕು. ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ಮಾತ್ರ ನಾವು ನಮಗಿಂತ ಮೇಲಿನವರನ್ನು ನೋಡಬೇಕು. ಅವರೆಲ್ಲಾ ಒಂದು ಕಾಲದಲ್ಲಿ ಕಷ್ಟಗಳನ್ನು ಅನುಭವಿಸಿ ಬಂದವರೇ. ಇಂದು ಎಷ್ಟೇ ದೊಡ್ಡ ಯಶಸ್ಸು ಪಡೆದ ವ್ಯಕ್ತಿಯನ್ನು ಮಾತನಾಡಿಸಿ ನೋಡಿ. ಅವರ ಜೀವನಚರಿತ್ರೆಯನ್ನು ಪರಾಂಬರಿಸಿ. ಆಗ ತಿಳಿಯುತ್ತದೆ ನಮಗೆ ಜೀವನದ ಪರಮಾರ್ಥ. ಹೇಗೆ ಮಹಡಿಯನ್ನು ಹತ್ತಲು ಮೆಟ್ಟಿಲುಗಳು ಸಹಾಯವಾಗುತ್ತವೋ ಹಾಗೆಯೇ ಉನ್ನತ ಸ್ಥಾನವನ್ನು ಪಡೆಯಲು ಪ್ರಯತ್ನಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು. ಆಗಲೇ ನಿಶ್ಚಿತವಾದ ಗುರಿಯನ್ನು ಹೊಂದಲು ಸಾಧ್ಯ.
ಹಣದಿಂದ ಸುಖವಿದೆಯೇ ?
ಇದೆ ಎಂದರೆ ಇದೆ. ಇಲ್ಲ ಎಂದರೆ ಇಲ್ಲ.ಹಣವನ್ನು ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬಳಸಿಕೊಂಡಾಗ ಸುಖವನ್ನು ಕಂಡುಕೊಳ್ಳಬಹುದು. ಅದೇ ಹಣ ಕೋಟಿ ಕೋಟಿ ಇದ್ದರೂ ನಮಗೆ ಬಾಯಿ ತೆರೆಯಲೂ ಆಗದಂತಹ ಸ್ಥಿತಿ ಬಂದೊದಗಿದರೆ?
ಹಣ ಎಷ್ಟಿದ್ದರೆ ಏನು ಪ್ರಯೋಜನ ?
ಆರೋಗ್ಯವೇ ನಿಜವಾದ ಸಂಪತ್ತು. ಹಸಿವೆ ಆದಾಗ ಅನ್ನ(ಆಹಾರ) ವೇ ಆಗಬೇಕೇ ಹೊರತು ಬೇರೆ ಆಯ್ಕೆಗಳಿಲ್ಲ. ಅದರ ಬದಲು ಹಣ ಕೊಟ್ಟರೆ ಅದನ್ನು ತಿನ್ನಲು ಸಾಧ್ಯವಾಗುದಿಲ್ಲವಲ್ಲಾ?
ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನು ಮನುಷ್ಯನಿಗೆ ಹತ್ತಿರವಾಗಿಲ್ಲ. ಯುಂತ್ರಗಳಿಗೆ ಹತ್ತಿರವಾಗಿ ಅವುಗಳ ದಾಸನಾಗಿದ್ದಾನೆ. ಸುಖ-ಸಂತೋಷಗಳೆಲ್ಲವೂ ಅವುಗಳಲ್ಲೇ ಅಡಗಿವೆ ಎಂಬ ಭ್ರಮೆಯಲ್ಲಿ ತೇಲಾಡಿ ವಾಸ್ತವವನ್ನು ಮರೆಯುತ್ತಿದ್ದಾನೆ. ಹಣದಿಂದ ಸುಪ್ಪತ್ತಿಗೆಯನ್ನು ಖರೀದಿಸಬಹುದು ಆದರೆ ನೆಮ್ಮದಿಯ ನಿದ್ರೆಯನ್ನಲ್ಲ. ಇಂದು ಭಾವನಾತ್ಮಕ ಸಂಬಂಧ ಶಿಥಿಲವಾಗಿ ಹೋದುದಕ್ಕೆ ನಾವೇ ಕಾರಣ.
ದೂರದರ್ಶನದ ರಿಮೋಟ್ ಕಂಟ್ರೋಲ್ ಹಿಡಿದ ಯಾವ ವ್ಯಕ್ತಿಯನ್ನಾದರೂ ಗಮನಿಸಿ. ಪಟಪಟ ಅಂತ ಚ್ಯಾನಲ್ ಗಳನ್ನು ಬದಲಾಯಿಸುತ್ತಿರುವುದು ಕಂಡುಬರುತ್ತದೆ.”ತಾಳ್ಮೆ” ಎನ್ನುವುದು ಕನ್ನಡಿಯ ಗಂಟಾಗಿದೆ. “ವ್ಯವಧಾನ” ಎಂಬುದು ತನ್ನ ಮೂಲಾರ್ಥವನ್ನು ಕಳೆದುಕೊಂಡಿರುವುದು ಶೋಚನೀಯ. ನಾವು ಮಾಡುತ್ತಿರುವುದನ್ನೇ ನಮ್ಮ ಮಕ್ಕಳು ನೋಡಿ ಕಲಿಯುತ್ತಿರುತ್ತಾರೆ.
ನಾವು ನಿಸರ್ಗಕ್ಕೆ ಸನಿಹವಾದಷ್ಟು ಸಂತೋಷ ಹೆಚ್ಚು. ಸೂರ್ಯೋದಯದ ಮೊದಲು ಎದ್ದು ನೋಡಿ. ಎಂತಹ ರಮಣೀಯ ಮೌನ!ಮಂದವಾಗಿ ಬೀಸುವ ಗಾಳಿಗೆ ಮೈಯೊಡ್ಡಿದಾಗ ಹಾಯೆನಿಸುತ್ತದೆ. ಅದೇ ಆ ಕ್ಷಣಕ್ಕೆ ಸುಖ. ದೇವರ ಧ್ಯಾನ,ಯೋಗ,ಪ್ರಾಣಾಯಾಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ತನುಮನದಲ್ಲಿ ವಿಶಿಷ್ಟ ಶಕ್ತಿಯ ಸಂಚಾರವಾಗುವುದಂತೂ ಶತಸಿದ್ಧ. ಬದುಕಿನ ಚಿಕ್ಕಚಿಕ್ಕ ಕ್ಷಣಗಳಲ್ಲೂ ನಾವು ಸುಖವನ್ನು ಪಡೆದುಕೊಳ್ಳಬೇಕು.
“ಮನಸ್ಸಿದ್ದಲ್ಲಿ ಮಾರ್ಗ” ಎಂಬ ಅನುಭವಸ್ಥರ ನುಡಿ ಎಷ್ಟು ಸತ್ಯವಾದುದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಆಕಾಶವೇ ತಲೆಗೆ ಬಿದ್ದವರಂತೆ ಮುಖ ಗಂಟು ಹಾಕಿಕೊಳ್ಳುತ್ತಾ ಕುಳಿತುಕೊಳ್ಳಬಾರದು.
ಸದಾ ನಗು ನಗುತ್ತಾ ಇರಬೇಕು.
ನಮ್ಮ ಒಂದು ನಗು,ಒಂದು ಚಿಕ್ಕ ಸಾಂತ್ವನದ ಮಾತು ನೊಂದವರ ಬಾಳಿನಲ್ಲಿ ಪವಾಡವನ್ನೇ ಸೃಷ್ಟಿಸಬಲ್ಲದು. ಅದಕ್ಕೆಲ್ಲಾ ನಾವು ಹಣ ತೆರಬೇಕೆಂದಿಲ್ಲ. ದು:ಖವಾದಾಗ ತಾಯಿಯ ಮಡಿಲು, ಸೋತಾಗ ತಂದೆಯ ಭರವಸೆಯ ನುಡಿ,ಬೇಸರವಾದಾಗ ಸ್ನೇಹಿತರ ಒಡನಾಟ,ಮಕ್ಕಳೊಂದಿಗೆ ಮಕ್ಕಳಾಗಿ ಆಡುವ ಆಟ,ಸಂಗಾತಿಯ ಮೆಚ್ಚುಗೆಯ ನೋಟ,ನಾ ನಿನ್ನೊಂದಿಗೆ ಸದಾ ಇರುವೆ ಎಂಬ ಮಾನಸಿಕ ಸ್ಥೈರ್ಯದ ಮಾತು ಇತ್ಯಾದಿಗಳಿಂದ ಮನಸ್ಸು ಪ್ರಪುಲ್ಲವಾಗಬಹುದು.ಇವೆಲ್ಲಾ ಎಷ್ಚೊಂದು ಸುಖದ ಕ್ಷಣಗಳು!ಇವುಗಳಿಗೂ ನಾವು ಹಣ ಕೊಡಬೇಕಾಗಿಲ್ಲ.
ಮೂಕ ಸಾಕು ಪ್ರಾಣಿಗಳಾದ ನಾಯಿ,ಬೆಕ್ಕು,ದನ,ಕರುಗಳೊಂದಿಗೆ ಸ್ವಲ್ಪ ಸಮಯ ಕಳೆದಾಗ ಎಷ್ಟೊಂದು ಸುಖ ಅನಿಸುತ್ತದೆ ಅಲ್ಲವೇ? ಅಷ್ಚೇ ಏಕೆ? ಹೂ,ಗಿಡ,ಮರಗಳೊಂದಿಗೂ ಭಾವನಾತ್ಮಕ ನಂಟು ಇಟ್ಟುಕೊಂಡರೆ ನೆಮ್ಮದಿ ಅನಿಸದಿರದು.
ನಾವು ನಮಗಾಗಿಯೇ ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ವಿನಿಯೋಗಿಸಬೇಕು. ಏಕಾಂತದಲ್ಲಿ ಕುಳಿತು ನಮ್ಮ ದಿನಚರಿಯ ಸಿಂಹಾವಲೋಕನ ಮಾಡಿಕೊಳ್ಳಬೇಕು. ಆತ್ಮ ವಿಮರ್ಶೆ ಮಾಡಿ,ಆತ್ಮ ಸಾಕ್ಷಿಗೆ ಅನುಗುಣವಾಗಿ ಬಾಳಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.
ಬದುಕಲು ಟಿ,ವಿ,ಪ್ರಿಡ್ಜ್, ಗ್ರೈಂಡರ್,ಮಿಕ್ಸಿ…ಹೀಗೆ ಸಕಲ ಸೌಕರ್ಯಗಳು ಇಂದು ಅನಿವಾರ್ಯ ಅನಿಸಿದರೂ ಅವೇ ನಮ್ಮ ಬದುಕಾಗಲು ಸಾಧ್ಯವಿಲ್ಲ. ಕುಟುಂಬದ ನಡುವಿನ ಸದಸ್ಯರು ಪ್ರೀತಿಯಿಂದ, ಪರಸ್ಪರ ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಬದುಕಿದಾಗ ಮಾತ್ರ ಸುಖವನ್ನು ಕಂಡುಕೊಳ್ಳಬಹುದು. ಉತ್ತಮ ಹವ್ಯಾಸ ವನ್ನು ರೂಢಿಸಿಕೊಂಡಾಗ ಸುಖಶಾಂತಿ ದೊರಕಲು ಸಾಧ್ಯ. ಮುರುಕಲು ಮನೆಯಲ್ಲಿ ಮಲಗಿ ಒಬ್ಬಾತ ಛಾವಣಿಯ ತೂತಿನಿಂದ ಹುಣ್ಣಿಮೆಯ ಚಂದಿರನನ್ನು ನೋಡಿ ನಾನೆಷ್ಚು ಭಾಗ್ಯವಂತ! ಎಂದು ಖುಷಿ ಪಟ್ಟು ಕೊಂಡರೆ ಅವನೆಷ್ಟು ಆ ಕ್ಷಣಕ್ಕೆ ಸುಖಿ? ಅಲ್ಲವೇ?
ಇಲ್ಲಗಳು ಕಡಿಮೆಯಾದಷ್ಟು ಸುಖ ಜಾಸ್ತಿ. ನಿರೀಕ್ಷೆಗಳು ಮಿತಿಮೀರದಂತೆ ಬದುಕಿನಲ್ಲಿ ಸಾಮರಸ್ಯವನ್ನು ಕಾಪಿಡಲು ಪ್ರಯತ್ನಿಸಬೇಕು. ಆಸೆಯೇ ದು:ಖಕ್ಕೆ ಮೂಲ ಎಂಬ ಬುದ್ಧನ ಮಾತನ್ನು ಇಲ್ಲಿ ಸ್ಮರಿಸುತ್ತಾ ಈ ಜಗತ್ತಿನಲ್ಲಿ ನಾವು ಇರುವಷ್ಚು ದಿವಸ ಪರೋಪಕಾರಿಯಾಗಿ ಬಾಳಲು ಪ್ರಯತ್ನಿಸಬೇಕು.
“ಕೊಟ್ಟಿದ್ದು ತನಗೆ.ಬಚ್ಚಿಟ್ಟದ್ದು ಪರರಿಗೆ “ ಇದು ನೈಜ ಬದುಕಿನ ಅನಾವರಣ. ನಶ್ವರವಾದ ಬದುಕಿನಲ್ಲಿ ಬಾಳುತ್ತಿರುವ ನಾವು ನಗುತ್ತಾ ಇತರರನ್ನು ನಗಿಸುತ್ತಾ ಸುಂದರವಾದ ಲೋಕವನ್ನು ನಿರ್ಮಾಣ ಮಾಡಿಕೊಳ್ಳೋಣ ಆಗದೇ? ಸಹೃದಯ ಬಂಧುಗಳೇ… ನೀವೇನಂತೀರಿ?
ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ
ಮುಂಡತ್ತಜೆ ಮನೆ
ಬಾರೆ ಬೆಟ್ಟು ಅಂಚೆ
ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು
ಪಿನ್ ಕೋಡ್: 574323 ದ.ಕ