Oplus_131072

ಯಶಸ್ಸಿಗೆ ರಹದಾರಿ

 

ವೀಣಾ ಹೇಮಂತ್ ಗೌಡ ಪಾಟೀಲ್.

 

ಕೇವಲ ಅದೃಷ್ಟದ ಬಲವೊಂದರಿಂದಲೇ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ಕಠಿಣ ಪರಿಶ್ರಮವೂ ಬೇಕು. ಅದೃಷ್ಟದಲ್ಲಿ ನಂಬಿಕೆ ಇಡುವುದು ಬೇಡ, ನಮ್ಮ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂಬ ಆವಾಸ್ತವಿಕ ಪ್ರಜ್ಞೆಯನ್ನು ಒಂದೆಡೆ ಇಟ್ಟು ನಿಮ್ಮ ಗುರಿಯನ್ನು ತಲುಪುವಲ್ಲಿ ಸತತ ಪ್ರಯತ್ನವನ್ನು ಜಾರಿಯಲ್ಲಿಡಿ.

 

ಓರ್ವ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದರೆ ಅದರ ಹಿಂದೆ ಆತನ ಅಪಾರ ಪರಿಶ್ರಮ, ತಾಳ್ಮೆ ಮತ್ತು ಶ್ರದ್ದೆಗಳು ಕಾರ್ಯನಿರ್ವಹಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿನ ಗುರಿಯನ್ನು ಸಾಧಿಸಲು ತನ್ನದೇ ಆದ ಶ್ರಮದ ಕಂದಾಯವನ್ನು ಕಟ್ಟಲೇಬೇಕು.

ಪ್ರಾಜ್ಞರು ಹೇಳಿರುವಂತೆ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ… ಯಶಸ್ಸಿನ ಹಾದಿ ಸುಲಭವಾದದ್ದಲ್ಲ. ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಹಲವಾರು ಕಷ್ಟಗಳೆಂಬ ಎಡರು ತೊಡರುಗಳನ್ನು ದಾಟಿ, ಬದುಕಿನ ಬವಣೆಗಳನ್ನು ನೀಗಿಕೊಂಡು ಸತತವಾಗಿ ಶ್ರದ್ದೆಯಿಂದ ಗುರಿಯನ್ನು ಬೆಂಬತ್ತಬೇಕು. ಯಾವುದೇ ರೀತಿಯ ಮನರಂಜನೆಗಳಿಗೆ ಅವಕಾಶವಿಲ್ಲದ ದಿನಗಳನ್ನು ಕೂಡ ಕಳೆಯಬೇಕಾಗಬಹುದು. ಗುರಿಯನ್ನು ಬೆನ್ನತ್ತಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು ಈ ಕೆಲವು ಕ್ರಮಗಳನ್ನು ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಲೇಬೇಕು.

ಸತತ ಪ್ರಯತ್ನ … ಅವನಿಗೇನು ಬಿಡಪ್ಪ! ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾನೆ ಎಂದು ಬೇರೆಯವರ ಅದೃಷ್ಟದ ಕುರಿತು ಮಾತನಾಡುವ ಸಾಕಷ್ಟು ಜನರನ್ನು ನಾವು ನೋಡಿದ್ದೇವೆ. ಆದರೆ ಕೇವಲ ಅದೃಷ್ಟದ ಬಲವೊಂದರಿಂದಲೇ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ನಮ್ಮ ಕಠಿಣ ಪರಿಶ್ರಮವೂ ಬೇಕು. ಅದೃಷ್ಟದಲ್ಲಿ ನಂಬಿಕೆ ಇಡುವುದು ಬೇಡ, ನಮ್ಮ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂಬ ಆವಾಸ್ತವಿಕ ಪ್ರಜ್ಞೆಯನ್ನು ಒಂದೆಡೆ ಇಟ್ಟು ನಿಮ್ಮ ಗುರಿಯನ್ನು ತಲುಪುವಲ್ಲಿ ಸತತ ಪ್ರಯತ್ನವನ್ನು ಜಾರಿಯಲ್ಲಿಡಿ.

ತಾಳ್ಮೆ…ನಿಮ್ಮ ಗುರಿಯನ್ನು ತಲುಪುವ ಸಮಯದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಂಡಿದ್ದೇ ಆದರೆ ನೀವು ಯಶಸ್ಸಿನ ಯುದ್ಧದಲ್ಲಿ ಸೋತಂತೆಯೇ ಸರಿ.
ನಿಮ್ಮ ನಿರಂತರ ಪರಿಶ್ರಮದ ಹೊರತಾಗಿಯೂ ನಿಮಗೆ ಮೊದಲ ಹಂತದಲ್ಲಿ ಯಾವುದೇ ಪ್ರತಿಫಲ ದೊರೆಯದೇ ಹೋಗಬಹುದು.ಎರಡನೆಯ ಹಂತದಲ್ಲಿ ತುಸು ಯಶಸ್ಸನ್ನು ಕಾಣಬಹುದು… ಮೂರನೆಯ ಹಂತದಲ್ಲಿ ಯಶಸ್ಸು ನಿಮ್ಮ ಕಾಲ ಬುಡದಲ್ಲಿಯೇ ಇರುತ್ತದೆ. ಆದರೆ ಬಹಳಷ್ಟು ಜನ ತಮ್ಮ ಪ್ರಯತ್ನದಲ್ಲಿ ವಿಫಲರಾದಾಗ ಮೊದಲ ಹಂತದಲ್ಲಿಯೇ ಪ್ರಯತ್ನವನ್ನು ಕೈಬಿಡುತ್ತಾರೆ. ನಿರುತ್ಸಾಹಿಗಳಾಗುತ್ತಾರೆ.ಈ ಹಂತದಲ್ಲಿ ಶತಾಯಗತಾಯ ಅವಡುಗಚ್ಚಿ ಸತತ ಪ್ರಯತ್ನವನ್ನು ಮಾಡಿದರೆ ಮುಂದಿನ ಹಂತವನ್ನು ಖಂಡಿತವಾಗಿಯೂ ತಲುಪಬಹುದು.

ತ್ಯಾಗ… ನೀವು ಬಯಸಿದ ಯಶಸ್ಸನ್ನು ಪಡೆಯಲು ನೀವು ಕೆಲವು ವಸ್ತು ಮತ್ತು ವಿಷಯಗಳನ್ನು ತ್ಯಾಗ ಮಾಡದೆ ಇದ್ದ ಪಕ್ಷದಲ್ಲಿ ನಿಮ್ಮ ಯಶಸ್ಸನ್ನೇ ತ್ಯಾಗ ಮಾಡಬೇಕಾಗಬಹುದು. ಪ್ರತಿಯೊಂದು ಯಶಸ್ಸಿಗೂ ತನ್ನದೇ ಆದ ಬೆಲೆ ಇದ್ದು, ನೀವು ಬಯಸುವ ಯಶಸ್ಸನ್ನು ಪಡೆಯಲು ನೀವು ಈ ಮೊತ್ತವನ್ನು ತೆರಲೇಬೇಕು. ಈ ಮೊತ್ತ ಹಣದ ರೂಪದಲ್ಲಿದ್ದರೆ ಶ್ರೀಮಂತರು ಯಶಸ್ಸನ್ನು ತಮ್ಮ ಮನೆಯ ಮೂಲೆಯಲ್ಲಿ ಕಟ್ಟಿ ಹಾಕಬಹುದಿತ್ತು. ಆದರೆ ಯಶಸ್ಸು ಬಯಸುವ ಮೊತ್ತ ನಿಮ್ಮ ಶ್ರದ್ದೆ, ಸಮಯ
ಪ್ರಜ್ಞೆ,ಮತ್ತು ಶಿಸ್ತಿನ ಜೀವನ ಶೈಲಿಯನ್ನು.. ಯಶಸ್ಸನ್ನು ಪಡೆಯಲು ನೀವು ಸ್ನೇಹಿತರ ಜೊತೆಗಿನ ಹರಟೆ, ಮನರಂಜನೆ, ಸುತ್ತಾಟಗಳನ್ನು ತ್ಯಾಗ ಮಾಡಲೇಬೇಕು.

ಸ್ಥಿರತೆ… ಓರ್ವ ಸಾಮಾನ್ಯ ಮನುಷ್ಯನನ್ನು ಕೂಡ
ಅತ್ಯುತ್ತಮ ವ್ಯಕ್ತಿಯನ್ನಾಗಿಸುವುದು ಆತನ ಸ್ಥಿರತೆ ಮಾತ್ರ. ಅಸಾಧಾರಣ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು ನಮ್ಮಲ್ಲಿ ಸ್ಥಿರತೆ ಮತ್ತು ಬದ್ಧತೆಗಳು ಖಂಡಿತವಾಗಿಯೂ ಇರಲೇಬೇಕು.
ತನ್ನ ನಡೆ-ನುಡಿಗಳಲ್ಲಿ, ಮಾಡುವ ಕಾರ್ಯದಲ್ಲಿ ಬದುಕಿನ ಎಲ್ಲಾ ಹಂತಗಳಲ್ಲಿಯೂ ಸ್ಥಿರತೆಯನ್ನು ಕಾಯ್ದುಕೊಳ್ಳುವ ವ್ಯಕ್ತಿ ಖಂಡಿತವಾಗಿಯೂ ಯಶಸ್ಸನ್ನು ಗಳಿಸುತ್ತಾನೆ.

ಸ್ವಯಂ ಶಿಸ್ತು.... ಯಶಸ್ವಿ ಜೀವನಕ್ಕೆ ಬೇಕಾಗಿರುವುದು ಶಿಸ್ತು ಬದ್ಧ ಜೀವನ. ದೈನಂದಿನ ಬದುಕಿನಲ್ಲಿ ಕರಾರುವಾಕ್ಕಾಗಿ ಏಳುವ, ತನ್ನ ನಿತ್ಯ ವಿಧಿಗಳನ್ನು ಪೂರೈಸುವ ಮತ್ತು ತನ್ನ ಗುರಿಯನ್ನು
ತಲುಪುವ ಹಾದಿಯಲ್ಲಿ ಕಾರ್ಯಗಳನ್ನು ನಿರ್ವಹಿಸುವ ವ್ಯಕ್ತಿಯು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಶಿಸ್ತಿನ ಜೀವನ ಶೈಲಿ ಯಶಸ್ಸಿಗೆ ಉತ್ತಮ ಅಡಿಪಾಯವಾಗಿರುತ್ತದೆ.
ಯಾವಾಗಲೋ ಎದ್ದು, ಏನನ್ನೋ ತಿಂದು, ಹೇಗೆ ಹೇಗೋ ಬದುಕುವವರು ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಅವರು ರೂಢಿಸಿಕೊಂಡಿರುವ ಅಶಿಸ್ತಿನ ಜೀವನ.

ಸತತ ಪ್ರಯತ್ನ… ಅದೆಷ್ಟೇ ಸೋಲು ನಮ್ಮನ್ನು ಪದೇಪದೇ ಕಂಗೆಡಿಸಿದರೂ ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಾವು ನಮ್ಮ ಶ್ರಮವನ್ನು ಜಾರಿಯಲ್ಲಿಡಬೇಕು. ತಾಳ್ಮೆ ಕಳೆದುಕೊಳ್ಳದೆ, ಉತ್ಸಾಹವನ್ನು ಮತ್ತೆ ಚಿಗುರಿಸಿಕೊಂಡು, ಸಂಯಮವನ್ನು ರೂಢಿಸಿಕೊಂಡು ಯಶಸ್ಸಿನ ಹಾದಿಯ ಪಯಣವನ್ನು ಅದ್ಭುತವಾಗಿ ಅನುಭವಿಸುತ್ತಾ ಸಾಗಬೇಕು.
ಯಶಸ್ಸಿನ ಸುತ್ತ ತುದಿಯಲ್ಲಿ ನಿಂತಾಗ ಆಗುವ ಸಂತೋಷಕ್ಕಿಂತ ಸಾಗಿ ಬಂದ ಪಯಣದ ಹಾದಿ ಬಹಳ ರಮ್ಯವೆನಿಸುತ್ತದೆ.

ಏನೆಲ್ಲಾ ಪ್ರಯತ್ನಗಳನ್ನು ಮಾಡಿಯೂ ಕೂಡ ಯಶಸ್ಸು ದಕ್ಕದೆ ಹೋದರೆ ಚಿಂತಿಸುತ್ತ ಕೂಡುವ ಅವಶ್ಯಕತೆ ಇಲ್ಲ. ಯಶಸ್ಸಿನ ಹಾದಿಯಲ್ಲಿ ನಡೆವಾಗಿನ ಪಯಣದ ಅನುಭವಗಳು ಬದುಕಿಗೆ ಬಹುದೊಡ್ಡ ಬುತ್ತಿಯನ್ನು ಕಟ್ಟಿಕೊಡುತ್ತವೆ. ಅನುಭವಗಳನ್ನು ಹಣ ಕೊಟ್ಟು ಕೊಂಡುಕೊಳ್ಳಲು ಆಗುವುದಿಲ್ಲ, ಅನುಭವಿಸಿಯೇ ಅರಿಯಬೇಕು.

ಬದುಕಿನಲ್ಲಿ ಸ್ವಯಂ ಶಿಸ್ತನ್ನು ಅಳವಡಿಸಿಕೊಂಡು, ಕೆಲವು ವಿಷಯಗಳನ್ನು ತ್ಯಾಗ ಮಾಡಿ ಮತ್ತೆ ಕೆಲವನ್ನು ಬದುಕಿನ ಭಾಗವಾಗಿಸಿಕೊಂಡು ನಿರಂತರ ಶ್ರದ್ದೆ, ಪರಿಶ್ರಮ ಮತ್ತು ತಾಳ್ಮೆಯಿಂದ ಗುರಿಯಡೆಗೆ ಸಾಗಿದರೆ ಯಶಸ್ಸು ಖಂಡಿತವಾಗಿಯೂ ದಕ್ಕುತ್ತದೆ. ಅಂತಹ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುವ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ