Oplus_131072

ಶರಣರ ದೃಷ್ಟಿಯಲ್ಲಿ ಬಸವಣ್ಣನವರು .

12ನೇ ಶತಮಾನದ ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯ ಅನುಭಾವ ನಮ್ಮ ಕನ್ನಡ ಸಾರಸ್ವತ ಲೋಕದ ಕೀರ್ತಿ ಜಾಗತಿಕ ಇತಿಹಾಸದಲ್ಲಿ ಅಜರಾಮರ ಹಾಗೂ ಮರೆಯಲಾಗದ ಮಾಣಿಕ್ಯವಾಗಿದೆ.  ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಕ್ರಾಂತಿಗೆ ವೈಚಾರಿಕ ಕ್ರಾಂತಿಗೆ ನಾಂದಿಗೈದ ಬಸವಾದಿ ಪ್ರಮಥರ ಬಗ್ಗೆ ತಿಳಿಯುವ ಪೂರ್ವದಲ್ಲಿ ಬಸವಣ್ಣನವರ ಬಗ್ಗೆ ಅರಿಯುವುದು ಅತ್ಯಂತ ಅವಶ್ಯಕವಾಗಿದೆ. ಬಸವಣ್ಣನವರ ಬಗ್ಗೆ ಹಲವಾರು ಕನ್ನಡ ತೆಲುಗಿನ ಮತ್ತು ಇನ್ನಿತರ ವಿವಿಧ ಭಾಷೆಗಳ ಕವಿಗಳು ಲೇಖಕರು ಬರೆದಿದ್ದಾರೆ ಅವರ ವ್ಯಕ್ತಿತ್ವದ ಬಗ್ಗೆ ತಿಳಿಸಿದ್ದಾರೆ.

ಎಷ್ಟೋ ಜನ ಕವಿಗಳಂತು ಬಸವಣ್ಣನವರಿಗೆ ‘ಅವತಾರ ಪುರುಷ‘ ಎಂದು ಹೊಗಳಿದ್ದಾರೆ.
ಆದರೆ ಬಸವಣ್ಣನವರ ಸಮಕಾಲಿನವರೇ ಆದಂತಹ ಹಲವಾರು ಜನ ವಚನಕಾರರು ಶರಣರು ಅವರನ್ನು ಅತ್ಯಂತ ಹತ್ತಿರದಿಂದ ಕಂಡಿದ್ದಾರೆ ಅವರ ದೃಷ್ಟಿಯಲ್ಲಿ ಬಸವಣ್ಣನವರ ವ್ಯಕ್ತಿತ್ವ ಹೇಗಿತ್ತು ಎಂದು ತಿಳಿಯಬೇಕಾದರೆ ವಚನ ಸಾಹಿತ್ಯದ ಅಧ್ಯಯನ ವಿಮರ್ಶೆ ಅತ್ಯವಶ್ಯಕವಾಗಿದೆ. ಜನಪದ ಸಾಹಿತ್ಯದ ಜನಪದರು ಕೂಡ ಬಸವಣ್ಣನವರ ಕುರಿತು….

” ಎಲ್ಲ ಬಲ್ಲಿದರಯ್ಯ
ಕಲ್ಯಾಣದ ಬಸವಯ್ಯ
ಚೆಲ್ಲಿದನು ತಂದು ಶಿವ ಬೆಳಕ ನಾಡೊಳಗೆ
ಸೊಲ್ಲೆತ್ತಿ ಜಗವು ಹಾಡುವುದು”  ಎಂದಿದ್ದಾರೆ.

ಭಕ್ತಿ ಭಂಡಾರಿ ಮಂತ್ರ ಪುರುಷ ಸುಮತಾವಾದಿ ಮಹಾ ಮಾನವತಾವಾದಿ ಇಷ್ಟೆ ಅಲ್ಲದೆ ಇನ್ನೂ ಹತ್ತು ಹಲವಾರು ಉಪನಾಮಗಳೊಂದಿಗೆ ಬಸವಣ್ಣನವರಿಗೆ ನಾವೇನು ಕರೆಯುತ್ತೇವೆಯೋ ! ಅದೆಲ್ಲದ್ದಕ್ಕಿಂತ ಚೆನ್ನಾಗಿ ನಮ್ಮ ಜನಪದ ಸಾಹಿತಿಗಳು ಬಸವಣ್ಣನವರ ಕುರಿತು ಹೇಳಿದ್ದಾರೆ.

ಬಸವಣ್ಣನವರು, ಎಲ್ಲಾ ಬಲ್ಲವನು ಅರಿತವನು ಮಹಾಜ್ಞಾನಿ ತನ್ನ ಮಹಾಜ್ಞಾನದ ಬೆಳಕನ್ನು ತನ್ನಲ್ಲೇ ಇಟ್ಟುಕೊಳ್ಳದೆ ಜಗಕ್ಕೆಲ್ಲ ತನ್ನ ಜ್ಞಾನ ವೆಂಬ ಜ್ಯೋತಿಯ ಬೆಳಕು ಬೀರಿ ಅಂಧಕಾರ ಎಂಬ ಜ್ಞಾನವನ್ನು ಹೊಡೆದುಡಿಸಿದ ಜಗಜ್ಯೋತಿ ಆದರು. ಹಾಗಾಗಿ ಇಡೀ ಜಗತ್ತು ಅವರನ್ನು ಹಾಡಿ ಹೋಗುತ್ತದೆ’ ಎಂದು ಹೇಳಿದ್ದಾರೆ.

ವೈರಾಗ್ಯ ನಿಧಿ ಅಕ್ಕಮಹಾದೇವಿ ಅವರು ಬಸವಣ್ಣನವರು ಕುರಿತು…

ಮುತ್ತು ನೀರಲ್ಲಾಯಿತು,ವಾರಿ ಕಲ್ಲು ನೀರಲ್ಲಾಯಿತು,ಉಪ್ಪು ನೀರಲ್ಲಾಯಿತು
ಉಪ್ಪು ಕರಗಿತ್ತು ವಾರಿಕಲ್ಲು ಕರಗಿತ್ತು ಮುತ್ತು ಕರಗಿದ ನಾರು ಕಂಡವರಿಲ್ಲ ನಾ ನಿಮ್ಮ ಮುಟ್ಟಿ ಕರಿಗೊಂಡೇನಯ್ಯಚೆನ್ನಮಲ್ಲಿಕಾರ್ಜುನ. “

ವಾರಿ ಕಲ್ಲು (ಗಾರು ), ಉಪ್ಪು ಮತ್ತು ಮುತ್ತು ಮೂರು ನೀರಿನಲ್ಲಿ ಹುಟ್ಟಿದರು ಇವುಗಳ ಗುಣ ವಿಶೇಷತೆ ಬೇರೆ ಬೇರೆಯಾಗಿದೆ. ಕೆಲವು ಮಹಾನಾತ್ಮಗಳು ವಾರಿ ಕಲ್ಲಿನಂತೆ ಈ ಭವಸಾಗರವೆಂಬ ಜಗದಲ್ಲಿ ಹುಟ್ಟಿ ತಾವಿದ್ದಷ್ಟು ದಿನ ಬೆಳೆಗಿ ಹೋಗುತ್ತಾರೆ. ಉಪ್ಪು ವಾರಿ ಕಲ್ಲಿಗಿಂತ ಸ್ವಲ್ಪ ತಡವಾಗಿ ಕರಗುತ್ತದೆ ಕೆಲವೊಂದು ಮತ ಪ್ರವರ್ತಕರು ಉಪ್ಪಿನಂತೆ ಸ್ವಲ್ಪ ದಿನಗಳ ಕಾಲ ಇದ್ದು ತಮ್ಮ ಪ್ರಭಾವ ಬೀರಿ ಸಮಾಜದಿಂದ ಮರೆಯಾಗಿ ಹೋಗುತ್ತಾರೆ. ಅವರಿದ್ದಷ್ಟು ಕಾಲ ಮಾತ್ರ ನಮಗೆ ಅವರ ಪ್ರಭಾವ ಕಂಡುಬರುತ್ತದೆ. ಆದರೆ ಗುರು ಬಸವಣ್ಣನವರ ಘನ ವ್ಯಕ್ತಿತ್ವವು ನೀರಲ್ಲಾದ ಮುತ್ತಿನಂತೆ ಭೂಲೋಕದಲ್ಲಿ ಎಲ್ಲರಂತೆ ಮಾನವರಾಗಿ ಜನಿಸಿದರು ಅವರು ಶಾಶ್ವತವಾಗಿ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ವಚನ ಸಾಹಿತ್ಯದ ಆಳ ಅಧ್ಯಯನ ಮಾಡಿದ ಪ್ರತಿಯೊಬ್ಬರಿಗೂ ಇದರ ಅರಿವಾಗುತ್ತದೆ.

ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ.
ತನ್ನಾಶ್ರಯದ ರತಿ ಸುಖವನು ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವ ತಾ ಮಾಡಬೇಕಲ್ಲದೆ !!
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತಬಲ್ಲರೂ ಕೂಡಲಸಂಗಮದೇವ. “

ಹಾಗಾಗಿಯೇ ಬಸವಣ್ಣನವರು ತಮ್ಮ ತಮ್ಮ ಆತ್ಮೋದ್ಧಾರ ತಾವೇ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಟ್ಟು ಕರಸ್ಥರದಲ್ಲಿ ಲಿಂಗ ಕೊಟ್ಟು ದೇಹಕ್ಕೆ ದೇವಾಲಯದ ಸ್ಥಾನ ಕೊಟ್ಟರು. ಇಷ್ಟ ಲಿಂಗವು ಕೇವಲ ದೇವರ ಕುರುಹು          ( ಚಿಹ್ನೆ )ಆಗಿರಲಿಲ್ಲ. ಅಂದಿನ ಕಾಲದ ಸಮ ಸಮಾಜದ ರಚನೆಯ ದಿಟ್ಟ ಹೆಜ್ಜೆಯಾಯಿತು.

12ನೇ ಶತಮಾನದಲ್ಲಿ ಬಸವಾದಿ ಶರಣರ ಪಾಥವು ಸತ್ಯದ ಪಥ, ಸಮಾನ ಬದುಕು,ವ್ಯಕ್ತಿಗೌರವ,ವೃತ್ತಿ ಗೌರವ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ತಮ್ಮ ವಿಚಾರ ಪ್ರಸ್ತುತ ಪಡಿಸಲು ಅನುಭವ ಮಂಟಪ ವೆಂಬ ವೇದಿಕೆ ಒದಗಿಸಿ ಕೊಟ್ಟವರು ಅಣ್ಣ ಬಸವಣ್ಣನವರಾಗಿದ್ದಾರೆ.

ಅಲ್ಲಮ ಪ್ರಭುದೇವರು ತಮ್ಮ ವಚನದಲ್ಲಿ ಬಸವಣ್ಣನವರ ಕುರಿತು ಹೀಗೆ ಬರೆದಿದ್ದಾರೆ…..

ಆಯತದಲ್ಲಿ ಪೂರ್ವ
ಚಾರಿಯ ಕಂಡೆ ಸ್ವಾಯತದಲ್ಲಿ ಪೂರ್ವಚಾರಿಯ ಕಂಡೆ
ಸನ್ನಿಹಿತದಲ್ಲಿ ಪೂರ್ವಾಚಾರಿಯ ಕಂಡೆ
ಗುಹೇಶ್ವರ ಲಿಂಗದಲ್ಲಿ ಪೂರ್ವಚಾರಿ ಸಂಗನ ಬಸವಣ್ಣನ ಶ್ರೀ ಪಾದಕ್ಕೆ ನಮೋ ನಮೋ ಎಂಬೆ.” ಎಂದು. ಇಲ್ಲಿ ಪ್ರಭುದೇವರು ಪೂರ್ವಚಾರಿ ಎಂದು ಬಸವಣ್ಣನವರಿಗೆ ಕರೆದಿರುವುದು ಅತ್ಯಂತ ಸ್ಪಷ್ಟವಾಗಿ ಕಂಡುಬಂದಿದೆ. ಪೂರ್ವಾಚಾರ್ಯ ಅಂದರೆ ಮೊದಲಿಗ (pioneer) ಎಂದರ್ಥ. ಸಂಸ್ಥಾಪಕ, ಪ್ರವರ್ತಕ, ಆದಿಪುರುಷ ಮುಂತಾದ ಹೆಸರುಗಳಿಂದ ಅರ್ಥೈಸಬಹುದು.

ಬಸವಣ್ಣನವರು ಸ್ತ್ರೀ ಸಮಾನತೆಯಿಂದ ಮೊದಲ್ಗೊಂಡು ದಲಿತೋದ್ಧಾರದವರೆಗೆ ಎಲ್ಲಾ ರಂಗಗಳಲ್ಲೂ ಇಂದಿಗೂ ಮತ್ತು ಎಂದಿಗೂ ಪ್ರಪ್ರಥಮ ಸಾಮಾಜಿಕ ಚಿಂತಕರಾಗಿ ಅಷ್ಟೇ ಅಲ್ಲ ಚಿಕಿತ್ಸತ್ತಕರಾಗಿ ಕಂಡುಬರುತ್ತಾರೆ.

ವೀರಗಣಚಾರಿ ಮಡಿವಾಳ ಮಾಚಿದೇವರು……

ಎನ್ನ ಕಾಯ ಬಸವಣ್ಣನ ಪೂಜಿಸಲಿಕ್ಕಾಯಿತು
ನನ್ನ ಜೀವ ಬಸವಣ್ಣನ ನೆನೆಯಲ್ಲಿಕ್ಕಾಯಿತು ಎನ್ನ ಸ್ತೋತೃ ಬಸವಣ್ಣನ ಚರಿತ್ರವ ಕೇಳಲಿಕ್ಕಾಯಿತು .
ಎನ್ನ ಪ್ರಾಣ ಬಸವಣ್ಣನ ಸ್ತುತಿಸಬೇಕ್ಕಾಗಿತ್ತು .
ಎನ್ನ ನೇತ್ರ ಬಸವಣ್ಣನ ಸರ್ವಾಂಗವ ನೋಡಲಿಕ್ಕಾಯಿತು .
ಎಂತೆನ್ನ ಪಂಚೇಂದ್ರಿಯಗಳು ಕಲಿಗಳಾಗಿ ಬಸವಣ್ಣನ ಹಿಡಿಯಲಿಕ್ಕಾಯಿತು .
ಬಸವಣ್ಣನ ಅರವಿನೊಳಗೆ ನಾನಿದ್ದೇನೆ ಕಾಣಾ ಕಲಿದೇವರದೇವ.” ಎಂದು ಅವರು ಬಣ್ಣಿಸಿದ್ದಾರೆ.

ಬಸವಣ್ಣನವರೆಂದರೆ ಎಲ್ಲರಿಗೂ ಅಚ್ಚು- ಮೆಚ್ಚು ಎಂತಹ ಘನ ವ್ಯಕ್ತಿತ್ವ ಬಸವಣ್ಣನವರದು ಎಂದು ಮಡಿವಾಳ ಮಾಚಿದೇವರು ತಮ್ಮ ವಚನದಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.
ಸರ್ವಜ್ಞ ಕವಿ ಬಸವಣ್ಣನವರನ್ನು ಕುರಿತು ಹೀಗೆ ಹೇಳಿದ್ದಾನೆ.

ಕಂತು ಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ದನು ಬಸವಣ್ಣನ ಪಾದಕ್ಕೆ ಶರಣ್ಣೆನ್ನಿರೆಲ್ಲ ಸರ್ವಜ್ಞ.” ಎಂದು

ಶಿವ ಸ್ವರೂಪಿಗಳು ಮಹಾ ಸುಂದರ ರೂಪಿ ನಮ್ಮ ಬಸವಣ್ಣನವರಾಗಿದ್ದರು. ಚಿಂತಾಯಕ ಎಂದರೆ ಮಹಾನ್ ಸಾಮಾಜಿಕ ಚಿಂತಕ ವಿಚಾರವಾದಿ ಮತ್ತು ತನ್ನ ನಡೆ-ನುಡಿಗಳಿಂದ ಆಚಾರ-ವಿಚಾರಗಳಿಂದ ಸಕಲರಿಗೆ ಮಂತ್ರಮುಗ್ದ ಗೊಳಿಸಬಲ್ಲ ಬಸವಣ್ಣನವರ ಪಾದಗಳಿಗೆ ಎಲ್ಲರೂ ಶರಣನೆಂದು ನಮಿಸಿ ಎಂದು ಅವರ ವ್ಯಕ್ತಿತ್ವವನ್ನು ಕುರಿತು ವಿವರಿಸಿದ್ದಾನೆ .

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಗಡಿ ಪಾರು ಶಿಕ್ಷೆಗೆ ಒಳಗಾಗಿ ಬಸವಣ್ಣನವರು ಮತ್ತೆ ಕೂಡಲಸಂಗಮಕ್ಕೆ ಬಂದು ನೆಲೆ ಸಿರುತ್ತಾರೆ ಆ ಸಂದರ್ಭದಲ್ಲಿ ಮಹಾ ಶರಣೆ ನೀಲಾಂಬಿಕೆಯವರು ತಮ್ಮ ದುಃಖವನ್ನು ವಚನದಲ್ಲಿ ವ್ಯಕ್ತಪಡಿಸಿದ್ದಾರೆ……

ನಾನಾರ ಸಾರುವೆನೆಂದು ಚಿಂತಿಸಲೆಕಯ್ಯ
ಬಸವಾ ! ನಾನಾರ ಹೊಂದುವನೆಂದು ಭ್ರಮೆ ಪಡಲೆಕಯ್ಯ ಬಸವಾ ! ನಾನಾರ ಇರುವ ನರಿವೆನೆಂದು ಪ್ರತಾಪಿಸಲೇಕಯ್ಯ ಬಸವಾ ! ಪರಿಣಾಮ ಮೂರ್ತಿ ಬಸವನ ರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೆಕಯ್ಯ ಬಸವಾ “ ಎಂದು

ಶ್ರಾವಣ ಶುದ್ಧ ಪಂಚಮಿ 30 – 07- 1196 ರಂದು ಬಸವಣ್ಣನವರು ಲಿಂಗೈಕ್ಯರಾದರು. 30 -04- 1134 ರಂದು ಜನಿಸಿದರು.
ಬಸವ ಜಯಂತಿ ಗಿಂತ ಬಸವ ಪಂಚಮಿ ನಮ್ಮೆಲ್ಲರಿಗೂ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಏಕೆಂದರೆ ಅವರು ಜನಿಸಿದಾಗ ನಮಗೆ ಯಾವುದೇ ತತ್ವವನ್ನು ಧರ್ಮವನ್ನು ಪಥವನ್ನು ನೀಡಿರಲಿಲ್ಲ. ಆದರೆ ಬಸವಣ್ಣನವರು ಲಿಂಗೈಕ್ಯರಾಗುವಾಗ ನಮಗೆಲ್ಲ ಅಪಾರ ಕೊಡುಗೆಯನ್ನು ಕೊಟ್ಟಿದ್ದರು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಭಂಡಾರ ದಂತಹ ಶರಣರ ವಚನ ಸಾಹಿತ್ಯ ರತ್ನಗಳನ್ನು ನೀಡಿದರು. ಹಾಗಾಗಿ ಬಸವಣ್ಣನವರ ಕುರಿತು ತಮ್ಮ ವಚನ ಒಂದರಲ್ಲಿ ವೀರ ಗಣಾಚಾರಿ ಮಡಿವಾಳ ಮಾಚಿದವರು ಮತ್ತೆ ಹೀಗೆ ಹೇಳಿದ್ದಾರೆ .

ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ
ಮೆಟ್ಟಿದ ಕೆರೆಹ ಕಳೆದು ಹೋದತ ನೀನಲಾ ಬಸವಣ್ಣ
ಕಟ್ಟಿದ ಮುಡಿಯ ಬಿಟ್ಟು ಹೋದತ ನೀನಲಾ ಬಸವಣ್ಣ
ಸೀಮೆ ಸಂಬಂಧವ ತಪ್ಪಿಸಿ ಹೋದವತ ನೀನಲಾ ಬಸವಣ್ಣ
ಲಿಂಗಕ್ಕೆ ಮಾಡಿದುದ ಸೋoಕದೆ ಹೋದೆಯಲಾ ಬಸವಣ್ಣ ಜಂಗಮಕ್ಕೆ ಮಾಡುವ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲ ಬಸವಣ್ಣ ಬೆಳಗನ್ನುಟು ಬಯಲಾಗಿ ಹೋದೆಯಲ್ಲ ಬಸವಣ್ಣ ಆ ಬಸವಣ್ಣಂಗೇ ಶರಣೆಂಬ ಪಥವೇ ತೋರು ಕಂಡ ಕಲಿದೇವರ ದೇವ.” ಎಂದಿದ್ದಾರೆ.

ಬಸವಣ್ಣನವರು ಲಿಂಗೈಕ್ಯರಾದ ನಂತರ ಅತ್ಯಂತ ದುಃಖದಲ್ಲಿ ಶರಣ ಮಡಿವಾಳ ಮಾಚಿದೇವರು ಈ ವಚನ
ರಚಿಸಿರುವುದು ಕಂಡುಬರುತ್ತದೆ.
ದೇಹ ನಸ್ವರ ಆತ್ಮ ಶಾಶ್ವತ ಎಂದು ಅರಿತಿರುವ ಶರಣರು ಬಸವಣ್ಣನವರು ಆತ್ಮಕ್ಕೆ ಹೊಂದಿಸಲಾದ ದೇಹವೆಂಬ ಸೀರೆಯನ್ನು ಬಿಟ್ಟು ಹೋಗಿದ್ದಾರೆ, ಕಟ್ಟಿದ ಮುಡಿಯ ಎಂದರೆ ತಮ್ಮ ಮಹಾಜ್ಞಾನವನ್ನು ವಚನಗಳ ಮೂಲಕ ನಮಗೆಲ್ಲರಿಗೂ ನೀಡಿದ್ದಾರೆ,
ಉಣಬಡಿಸಿದ್ದಾರೆ.

ಬಸವಣ್ಣನವರು ಆಗಲಿ ಹಲವು ಶತಮಾನಗಳು ಕಳೆದರೂ ಕೂಡ ಅವರ ವಿಚಾರಧಾರೆಗಳು, ಚಿಂತನೆಗಳು ಎಂದೆಂದಿಗೂ ಪ್ರಸ್ತುತ. ಇಂದಿನ ಆಧುನಿಕ ಜಗತ್ತಿಗೆ ಸದಾ ಮಾರ್ಗದರ್ಶಕವಾಗಿ ದಾರಿದೀಪವಾಗಿ ಅವರು ಕಂಡು ಬರುತ್ತಾರೆ. ಅವರ ವಚನ ಸಾಹಿತ್ಯದ ಮೂಲಕವಾಗಿ ಬಸವಾದಿ ಶರಣರ ವಚನ ಸಾಹಿತ್ಯದ ಮೂಲಕವಾಗಿ ಬಸವಣ್ಣನವರು ನಮ್ಮ ಮಧ್ಯ ಇಂದಿಗೂ ಎಂದಿಗೂ ನಮ್ಮ ಹೃದಯ ಅಂತರಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ವೀರಶೆಟ್ಟಿ ಹಳ್ಳಿ ಐನಾಪುರ
ಮನೆ ಸಂಖ್ಯೆ2/16 ಅಂಚೆ ಐನಾಪುರ ಚಿಂಚೋಳಿ ತಾಲೂಕ ಕಲಬುರ್ಗಿ ಜಿಲ್ಲೆ
ಮೊ. ನo. 9164512022

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ