ರೈತನ ಸ್ವಗತ
ಧೋ ಎಂದು ಸುರಿದ ಕೃತ್ತಿಕಾ ಮಳೆಗೆ ಭೂ ಪದರ ತೊಯ್ದು ತೊಪ್ಪೆಯಾಯ್ತಾ/
ಬಿರು ಬಿಸಿಲು ಬೇಸಿಗೆಯ ಧಗೆಯಲ್ಲಿ ಕುಂಟೆ ರೆಂಟೆ ಹಿಡಿದು ಆಳಕ್ಕೆ ತೂರಿಸಿ ಹದ ವಾಯ್ತಾ//
ಕೂಡಿಟ್ಟ ಕಾಳಿಗೆ ಗೋಮೂತ್ರದಿ ಉಪಚರಿಸಿ ಉಡಿಕಟ್ಟಿ ಬಿತ್ತಿದ್ದೆ ಕೂರಿಗೆ ಹಿಡಿದು/
ಹದವಾಗಿ ಮೈದುಂಬಿ ಪುಳಕ ವಿಟ್ಟಂತೆ ಭೂ ತಾಯಿ ಬಾಯಿಯಲ್ಲಿ ಒಂದೊಂದು ಕಾಳ ಒಗೆದು/
ಬಿಟ್ಟೆಂಟು ದಿನ ನೋಡಲು
ಮಣ್ಣ ಪದರ ಸೀಳಿ ಹೊರಚಾಚುವ ಮೊಳಕೆ ನೋಡಲು ಕಾತರ/
ಬೆಳೆವ ಸಿರಿ ಮೊಳಕೆಯಲ್ಲಿ
ಮೊಳಕೆ ಬಿಗಿಯಿದ್ದರೆ ಪೈರು ಹಸನ
ಮೊಳಕೆ ಆಚೆ ತೂರಿದ ಮೇಲೆ
ಬೇರುಗಳಿಗೆ ಗಾಳಿ ಮುಟ್ಟಿಸಲು ಅಡಿಕುಂಟೆ ಆಡಿಸಿದರೆ ಕಸವೂ ನಾಪತ್ತೆ/
ಅಳಿದುಳಿದ ಕಸವ ಹೆಕ್ಕಲು ಕುರ್ಚಿಗೆಯ ಕರಾಮತ್ತು ತೋರಿಸದರಾಯ್ತು
ಕುಪೋಷಿತ ಮೊಳಕೆಗೆ ಹಿಡಿ
ರಸಗೊಬ್ಬರ ಚೆಲ್ಲುತ್ತಾ ಪ್ರೋತ್ಸಾಹಿಸಬೇಕು//
ಹಾಗೆ ಅಡವಿ ಹಂದಿಯ ಕಾಟ
ಹೀಗೆ ಹಿರಣಗಳ ಕಾಟ
ಆಗಾಗ್ಗೆ ಬಂದು ಹೋಗುವ ದನಕರ ಕುರಿಗಳ ಕಾಟ
ಸೈರಿಸಲೇಬೇಕು//
ಬಂದ ರೋಗಕೆ ರಸಾಯನ ಸಿಂಪಡಿಸಿ ಗುಣಪಡಿಸಬೇಕು
ಇಲ್ಲವಾದರೆ ಅಧೋಗತಿ
ಬೆಳೆದು ಕಟಾವಿಗೆ ಬಂದಾಗ ಕೂಲಿ ಆಳು ಸಿಕ್ಕರೆ ಸಾಕು
ಮತ್ತೊಮ್ಮೆ ಹುಟ್ಟಿ ಬಂದಂತೆ
ಅವರ ವರ್ತನೆಯೋ ಸರಕಾರಿ ನೌಕರರಂತೆ ಎಲ್ಲವೂ ಸಮಯಕ್ಕೆ ಸರುಯಾಗಿ//
ಆಗಾಗ ಲಂಚದ ರೂಪದಲ್ಲಿ ಕೊಡಬೇಕು ನಂಜು ನಶೆಯ ಬಾಟಲು
ಒಟ್ಟಾರೆ ಬೆಳೆದ ಬೆಳೆ ರಾಶಿ ಚೀಲ ತುಂಬಿಸಿ ಗಂಡನ ಮನೆಗೆ ಕಳಿಸಿದಾಗಲೇ ಮನಸಿಗೆ ನೆಮ್ಮದಿ
ಅಲ್ಲಾದರೂ ಬರೀ ಅಂತೆ ಕಂತೆ
ಮಾಲು ಹೀಗಿದೆ ಹಾಗಿದೆ ಬಾಯಿಗೆ ಬಂದಷ್ಟೆ ದರ ಕೂಗುತ್ತಾ ಸಾಗುವರು//
ಮಾರುಕಟ್ಟೆಗೆ ಸಾಗಿಸಿದ ಬೆಳೆ ಸ್ಮಶಾನ ಮುಟ್ಟಿದ ಹೆಣ ಮರಳಿ ತರಲಾಗುವದೇ ಅಸಂಭವ
ಕೈಗೆ ಬರುವ ಅಷ್ಟೋ ಇಷ್ಟೋ ಪುಡಿಗಾಸು ಸಾಲಗಾರರಿಗೆ ಕೊಟ್ಟು
ಬರಿಗೈಲಿ ಮನೆ ದಾರಿ ಹಿಡಿಯಬೇಕು//
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ
ಕೃಷಿ ಕವಿತೆ ಚೆನ್ನಾಗಿ ಮೂಡಬಂದಿದೆ 👌👏
ಚಂದದ ಕವಿತೆ