Oplus_131072

ಕೈ ಕೈ ಎಲ್ಲಿ ಹೋದವು

ಎಲ್ಲಿ ಹೋದವು ಆ ಕೈಗಳು
ಹೊಳಪಿನ ಕಣ್ಗಳು
ಕಚಗುಳಿ ಇಡುವ ಆ ಬೆರಳುಗಳು/

ಕೆಟ್ಟ ಕೆಸರಲ್ಲಿ ಆಡಿದ ಆಟ
ಎಮ್ಮೆ ಬಾಲ ಹಿಡಿದು ಓಡಿದ ಓಟ
ಕೈ ಕೈ ಹಿಡಿದು ನಲಿದಾಡಿಡ ನವಿಲಿನಾಟ//

ಅವರ್ನ ಬಿಟ್ಟು ಇವರ್ಯಾರು
ಹೆಸರು ಹೇಳುವ ಕೌತುಕ
ಈಗ ಬರೀ ಸೂತಕ/
ಹತ್ತಿ ಕಟಗಿ ಬತ್ತಿ ಕಟಗಿ ಪದ
ಕಂಠಪಾಠ ಮರೆತು ಹೋಯ್ತು//

ಸಗಣೆ ಸಾರಿಸಿ ಬಿಟ್ಟ ರಂಗೋಲಿ ಗೋಲಿ ಆಡುತ ಅಳುಕಿಸಿ
ರಂಗೋಲಿ ಬರೆದವಳೊಂದಿಗೆ ವಾದಿಸಿದ ಮಾತು ಮೌನವಾಗಿದೆಯಿಂದು//

ಬಾರ ಕೋಲು ಬಿಗಿ ಬಿಗಿ
ಎಣ್ಣೇ ಹೋಳಿಗೆ ಕರಿ ಕರಿ
ಜಿಲೇಬಿ ಜಿಬಿ ಜಿಬಿ
ಬೆಂಡಿಕಾಯಿ ಲೊಳೆ ಲೊಳೆ//

ಯಾವ ಕವಿಯ ಪದ್ಯ
ಹೃದಯ ಮಾತ್ರ ಹೃದ್ಯ
ಬಾಯಲ್ಲೇ ರಾಮಾಯಣ
ಆಡಿದ್ದೇ ಮಹಾಭಾರತ/

ಯಾವ ಕುಲ ಉಚ್ಚ ನೀಚ
ಕುಲವಿಲ್ಲದ ಮನುಜ ಪಥ
ಬಾಲ್ಯದ ಬಾಲಕೆ ಅವನೇ ಹನುಮಂತ
ಆದರ್ಶ ಕೆ ಆ ರಾಮ//

ಅರಮನೆಯಿಲ್ಲದ ರಾಮ
ಗುಡಿಸಲೇ ದ್ವಾರುಕ
ಬಾಲ ವಿಲ್ಲದ ಹನುಮರು
ಲಗ್ಗೆ ಇಟ್ಟರು ಮಾವಿನ ಮರದ ಲಂಕೆಗೆ //

ಹಾಡಿ ಆಡಿದ ಕೋಲಾಟ
ಅದುವೇ ಎಲ್ಲಕ್ಕಿಂತ ಮೇಲಾಟ
ಮೊದ ಮೊದಲೆ ಬಣ್ಣ ಹಚ್ಚಿದ ಬಯಲಾಟ
ಭೀಮ ಧುರ್ಯೋಧನ ರ ಕಾಳಗದಾಟ//

ಏನಿತ್ತೋ ಆಗ ನಾ ಕಾಣೆ
ಕಂಡದೆಲ್ಲವೂ ರಸಮಯ ರಸಗಳಿಗೆ
ಈಗೇನಿಲ್ಲ ವೈದ್ಯ ಬರೆದುಕೊಡುವ ಅರ್ಥವಾಗದ ಗುಳಿಗೆ//

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ. ಗದಗ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ