Oplus_131072

ನಂಬಿಕೆ.

ನಂಬಿ ಕೆಟ್ಟವರಿಲ್ಲ .!  ನಂಬಿ ಕೆಟ್ಟವರಿಲ್ಲವೋ ..! ಈ ಗುರುಗಳ ..! ನಂಬದೇ ಕೆಡುವರುಂಟೋ ..! “ ಎಂದು ಶ್ರೀ ವ್ಯಾಸರಾಯರು ಹಾಡಿ ಹೊಗಳಿದ್ದಾರೆ. ಹಾಗಾಗಿ ನಂಬಿಕೆ ಎನ್ನುವುದು ಭರವಸೆಯ ಇನ್ನೊಂದು ರೂಪ .ಈ ನಂಬಿಕೆಯೂ ತನ್ನ ಎಲ್ಲೆಗಳನ್ನು ಚಾಚಿ ತನ್ನ ಹಾಗೂ ಇತರರ ಬದುಕಿಗೆ ಭರವಸೆಯನ್ನು ತುಂಬುತ್ತಾ ಜಗದ ತುಂಬೆಲ್ಲ ತನ್ನ ಮಹತ್ವವನ್ನು ಪಡೆದುಕೊಂಡಿದೆ.
ಆದುದರಿಂದ ನಂಬಿಕೆ ಎಂಬುವುದು ಅತಿ ಮುಖ್ಯವಾದ ಪದವಾಗಿದೆ. ಪ್ರಾಣಿಗಳಲ್ಲಿ ‘ ನಾಯಿ ‘ ನಂಬಿಕೆಗೆ ತುಂಬ ಅರ್ಹವಾದ ಪ್ರಾಣಿ ಎಂದು ಕರೆಯುತ್ತೇವೆ .ಅಂದರೆ ಅನ್ನ ಹಾಕಿದ ಮನೆಗೆ ಕನ್ನ ಹಾಕದೆ ಅತ್ಯಂತ ಪ್ರೀತಿ ಪಾತ್ರವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ಎಲ್ಲರ ನಂಬಿಕೆಗೂ ಅರ್ಹ ಎಂದು ಅದು ಜಗತ್ ಜಾಹೀರಗೊಂಡಿದೆ.

ಆದುದರಿಂದ ಪ್ರಾಣಿಗಳಲ್ಲಿ ಇರುವಂತಹ ಮೌಲ್ಯಗಳು ಸಹ ಇಂದು ಮಾನವನಲ್ಲಿ ಮರೆಯಾಗುತ್ತಿವೆ ಎಂದರೆ ನಾಚಿಕೆಗೆಡಿನ ಸಂಗತಿಯಾಗಿದೆ. ಇಂದು ನಾವುಗಳು ನಾವಾಗಿ ಉಳಿದು ಬದುಕಬೇಕಾದರೆ ನಮಗೆ ನಮ್ಮ ಮೇಲಿಯೇ ನಂಬಿಕೆ ಆತ್ಮ ವಿಶ್ವಾಸ ಅನ್ನೊದು ಅದಮ್ಯವಾಗಿ ಇರಬೇಕಾಗುತ್ತದೆ. ಆದುದರಿಂದ ಇತಿಹಾಸದ ಉದ್ದಕ್ಕೂ ನಂಬಿ ಬದುಕಿ ಜೊತೆಗೆ ವಿಶ್ವಾಸವನ್ನು ಹೊಂದಿ ನಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವ ಕಾರ್ಯ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ.

ಹಾಗಾದರೆ ನಾವುಗಳು ನಂಬಿಕೆ ಎಂಬ ಪದವನ್ನು ಸಂಕುಚಿತವಾಗಿ ಭಾವಿಸದೆ ವಿಶಾಲ ಅರ್ಥದಲ್ಲಿ ಅದೊಂದು ಕಾಯಕ ಎಂದು ಭಾವಿಸಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಅನ್ವಯಿಸಿಕೊಂಡು, ಅನುಕರಣೆ ಮಾಡಿ ಅದನ್ನು ಜೀವನದುದ್ದಕ್ಕೂ ಅವಿಭಾಜ್ಯ ಅಂಗ ಎಂದು ಭಾವಿಸಿ ,ಬೆಳೆಸಿ ಅನ್ವಯಿಸಿ ಬೆಳೆಸಬೇಕಾಗುತ್ತದೆ.
ಆದ್ದರಿಂದ ನಂಬಿಕೆ ಎಂಬ ಪದ ಚಿಕ್ಕದಾದರೂ ಸಹ ಅದು ತನ್ನ ವಿಶಾಲ ಅರ್ಥವನ್ನು ಹೊಂದಿದೆ. ಒಮ್ಮೆ ನಂಬಿಕೆ ಹೋದರೆ ಮತ್ತೆ ಅದನ್ನು ಗಳಿಸಿಕೊಳ್ಳುವುದು ತುಂಬಾ ಕಷ್ಟ ಆದುದರಿಂದ ನಂಬಿಕೆಗೆ ಅರ್ಹರಾದ ವ್ಯಕ್ತಿಗಳೊಂದಿಗೆ ನಮ್ಮ ಸಹವಾಸ ಇರಬೇಕು.
ಒಳ್ಳೆಯವರ ಸಂಘ ಜೇನು ಸವಿದಂಗ” ಎಂದು ಸರ್ವಜ್ಞ ಕವಿ ಹೇಳಿದ್ದಾನೆ ಅಲ್ವಾ ? ನಂಬಿಕಸ್ಥರು ಇಲ್ಲಿ ಒಳ್ಳೆಯತನಕ್ಕೆ ಸಾಕ್ಷಿಯಾಗಿ ಕಂಡುಬರುತ್ತಾರೆ. ಕೆಲ ಕಪಟ ಮೊಸಗಾರರು ಒಳ್ಳೆಯವರಂತೆ ನಟಿಸಿ ಮೋಸ ಮಾಡುವವರು ಇರುತ್ತಾರೆ ಅಂತಹವರಿಂದ ಜಾಗೃತರಾಗಿರಬೇಕು.
ಅಂದಾಗ ಮಾತ್ರ ಈ ನಂಬಿಕೆಯು ತನ್ನ ದೃಢತೆಯನ್ನು ತಂದುಕೊಂಡು ಜೀವನದುದ್ದಕ್ಕೂ ನಮಗೆ ಹೊಸ ಹುಮ್ಮಸ್ಸು ಹುರುಪು ಆತ್ಮವಿಶ್ವಾಸ ತಂದುಕೊಡುತ್ತದೆ.
ಹಾಗಾಗಿ ಹಿಂದಿನ ಬದುಕಿಗೆ ನಾಗಾಲೋಟದ ಸಮಯಕ್ಕೆ ಮೂಗುದಾರ ಹಾಕಿ ನಾವು ನಾವಾಗಿ ನಮ್ಮತನದಿಂದ ನಮ್ಮವರೊಂದಿಗೆ ಅತ್ಯಂತ ಜಾಗರೂಕತೆಯಿಂದ ಬದುಕುವ, ಭರವಸೆ ತುಂಬುವ ಮನೋಭಾವ ಇರುವುದು ಕೇವಲ ನಂಬಿಕೆಗೆ ಮಾತ್ರ. ಆದುದರಿಂದ ನಂಬಿಕೆಗೆ ಯೋಗ್ಯ ಆದವರಿಗೆ ಮಾತ್ರ ನಾವು ನಮ್ಮ ಮನೋಭಾವನೆಗಳನ್ನ ರೀತಿ ನೀತಿಯನ್ನು ವಿಷಯಗಳನ್ನು ಅದರಲ್ಲೂ ಸೂಪ್ತ ವಿಷಯಗಳನ್ನು ಸಹ ಹಂಚಿಕೊಂಡು ಬದುಕುವ ಕಾಯಕ ನಾವು ಮಾಡಬೇಕು.
ಅಂದಾಗ ಮಾತ್ರ ಅದಕ್ಕೊಂದು ಪುಷ್ಠಿ ದೊರೆತು ನಾವು ನಾವಾಗಿ ಬದುಕಲು ನಮಗೆ ಒಂದು ಅವಕಾಶ ಸಿಕ್ಕು ಅದನ್ನು ಜೀವನದ ಅವಿಭಾಜ್ಯ ಅಂಗ ಎಂದು ಭಾವಿಸಿ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಕಾರ್ಯ ಮಾಡಲು ನಂಬಿಕೆ ಅತಿ ಮುಖ್ಯವಾಗಿರುತ್ತದೆ. ಆದುದರಿಂದ ಹಿಂದಿನ ಕಾಲದಲ್ಲಿ ನಂಬಿಕಸ್ತ ಜನ ಎಂದೇ ಇರುತ್ತಿದ್ದರು ಹಾಗಾದರೆ ಇಂದಿನ ಕಾಲದಲ್ಲಿ ಆ ಭರವಸೆ ಮಾಯವಾಗಿ ಯಾರ ಮೇಲೂ ನಂಬಿಕೆ ಇಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಅರ್ಥ ಮಾನವ ತನ್ನ ಬುದ್ಧಿ ಬದಲಾಯಿಸಿಕೊಂಡು ಬದುಕುತ್ತಿದ್ದಾನೆ. ಸತ್ಯವನ್ನು ಅಸತ್ಯವೆಂದು ಬಿಂಬಿಸಲು ಹೊರಟಿದ್ದಾನೆ. ಹಾಗೆಯೇ ನಂಬಿಕೆಯ ಮೇಲೆ ಪೆಟ್ಟುಕೊಟ್ಟು ಭರವಸೆ ಕಳೆದುಕೊಂಡಿದ್ದಾನೆ. ಮತ್ತು ನೈಜ ಸನ್ನಿವೇಶವನ್ನು ಮರೆಮಾಚಿ ಆತ ತನ್ನದೇ ಆದ ವಾದ ಮಾಡುತ್ತಾ ನಂದೇ ಸರಿ ಎಂಬ ವಾದ ಮಂಡಿಸಿ ಯಶಸ್ಸು ಗಳಿಸಿ, ನಂಬಿಕೆಗೆ ಪೆಟ್ಟುಕೊಟ್ಟು ತನ್ನತನವನ್ನು ಕಳೆದುಕೊಂಡು ಮೌಲ್ಯಗಳಿಗೆ ಬೆಲೆ ಕೊಡದ ಮಾನವನಾಗಿದ್ದಾನೆ.

ಆದ್ದರಿಂದ ಈ ಕಾಲಕ್ಕೆ ನಂಬಿಕೆ ಅತಿ ಮುಖ್ಯ . ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು .ಮತ್ತು ಜೀವನಕ್ಕೆ ಆಧಾರವಾಗಿ ಮೌಲ್ಯಗಳನ್ನ ರೂಡಿಸಿಕೊಳ್ಳುವುದು ಸಾಹಸವೇ ಸರಿ .ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಸಹ ನಂಬಿಕಸ್ತ ಜನರನ್ನ ಮಾತ್ರ ಅರಮನೆಯ ಒಳಗೆ ತಮ್ಮ ವೈಯಕ್ತಿಕ ಮಾತುಕತೆಗೆ ಅವಕಾಶ ಕೊಡುತ್ತಿದ್ದರು ನಂಬಿಗಸ್ತ ಜನ ಎಂದರೆ ಅವರಿಗೆ ಬಲು ಇಷ್ಟವಾಗುತ್ತಿದ್ದರು ಇಂದು ಕಾಲ ಬದಲಾಗಿದೆ ಯಾರ ಮೇಲೆಯೂ ನಂಬಿಕೆ ಇರುವುದು ಇಡುವುದು ಸಾಧ್ಯವಾಗುತ್ತಿಲ್ಲ . ಆದ್ದರಿಂದ ಮೌಲ್ಯಗಳಲ್ಲಿ ಉತ್ತಮವಾದ ಮೌಲ್ಯ ನಂಬಿಕೆ ಇದನ್ನು ಗಳಿಸಿ, ಪ್ರೋತ್ಸಾಹಿಸಿ, ಉಳಿಸಿ, ಬೆಳೆಸಿ ,ಅನುಕರಿಸಿ ಜೀವನದಲ್ಲಿ ಸಾಧಿಸಿ ಯಶಸ್ಸು ಕಾಪಾಡಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ನಂಬಿಕೆ ಅದಕೆ ಬುನಾದಿಯಾಗಿ ಕಾರ್ಯ ಮಾಡುತ್ತದೆ. ಆದುದರಿಂದ ಮಾನವರಲ್ಲಿ ಇಂದು ನಂಬಿಕೆಯ ಮೌಲ್ಯ ಬೆಳಸಬೇಕಿದೆ . ಈ ನಂಬಿಕೆಯ ಮೇಲೆ ನಿತ್ಯ ಜೀವನ ನಡೆಯುತ್ತಿದೆ. ಆಕಾಶದ ಮೇಲೆ ವಿಮಾನ, ರಸ್ತೆ ಮೇಲೆ ಮೋಟಾರು, ಹಳಿಯ ಮೇಲೆ ರೈಲು ,ನೀರಿನ ಮೇಲೆ ದೋಣಿ ನಿತ್ಯ ಸಂಚಾರಿಸಲು ಈ ನಂಬಿಕೆಯೆ ಕಾರಣವಾಗಿದೆ. ಹಾಗಾಗಿ ನಮ್ಮ ಬದುಕು ಕೂಡ ಈ ಸಾಮಾಜಿಕ ಜೀವನದಲ್ಲಿ ಒಬ್ಬರ ಮೇಲೆ ಒಬ್ಬರು ನಂಬಿ ಜೀವನ ನಡೆಸಬೇಕು.ಹ್ಞಾ ! ಒಂದು ಮಾತು ನೆನಪಿರಲಿ. ನಂಬಿದವರಿಗೆ ಯಾವತ್ತು ಮೋಸ ಮಾಡಬೇಡಿ.

ಮಹೇಶ ಎಸ್ ಹೆಚ್.
ಹೆಸರೂರ
ಶಿಕ್ಷಕರು ಸಾಹಿತಿಗಳು
ಮುಂಡರಗಿ ತಾಲ್ಲೂಕು
ಜಿಲ್ಲಾ ಗದಗ

ಮಹೇಶ್ ಎಸ್ ಹೆಚ್ ಹೆಸರೂರ ಸಾಹಿತಿಗಳು ಹವ್ಯಾಸಿ ಬರಹಗಾರರು ಶಿಕ್ಷಕರು ತಾಲ್ಲೂಕು ಮುಂಡರಗಿ ಜಿಲ್ಲೆ ಗದಗ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ