Oplus_131072

1. ಸತ್ಯಸಂಧ ರಾಜಕಾರಣಿ-                        ಲಾಲಬಹುದ್ದೂರ ಶಾಸ್ತ್ರೀಜಿ

ದೇಶ ಕಂಡ ಸತ್ಯಸಂಧ ರಾಜಕಾರಣಿ
ಸಜ್ಜನಿಕೆ ಸ್ವಾಭಿಮಾನ ಮೆರೆದ ಪ್ರಧಾನಿ
ನಿಸ್ವಾರ್ಥ ಸೇವೆಗೈದ ಧೀಮಂತ ವ್ಯಕ್ತಿ
ಆಗಿಹರು ಶಾಸ್ತ್ರೀಜಿ ಭಾರತದ ಶಕ್ತಿ.

ದೇಶಾಭಿಮಾನಿ ದಂಪತಿಗಳ ಪುತ್ರನಾಗಿ
ದೇಶ ಪ್ರೇಮ ಮೈಗೂಡಿಸಿಕೊಂಡ ಬಾಲಕ
ಕಾಶಿ ವಿದ್ಯಾಪೀಠದಲಿ ಅಧ್ಯಯನವ ಮಾಡಿ
ಶಾಸ್ತ್ರಿ ಪದವಿ ಪಡೆದಂಥ ರಾಷ್ಟ್ರ ನಾಯಕ.

ಕಾಯಕದಲಿ ಸದಾಕಾಲ ನಿರತರಾಗಲು
ಚರಕ,ನೂಲು ವರದಕ್ಷಿಣೆಯಾಗಿ ಪಡೆದರು
ಆಡಂಬರವಿಲ್ಲದೆ ಸರಳ ಜೀವನವ ನಡೆಸಿ
ಹೆಮ್ಮೆ, ಗೌರವಗಳಿಗೆ ಪಾತ್ರರಾದರು.

ಸಾಮಾನ್ಯದಿಂದ ಅಸಾಮಾನ್ಯ ಪದವಿ ಗಳಿಸಿ
ಸರಳತೆಯೇ ಮೈವೆತ್ತ ಪುಣ್ಯ ಪುರುಷರು
ಪ್ರಾಮಾಣಿಕರಾಗಿ ದುಡಿದು ದಕ್ಷತೆಯ ತೋರಿಸಿ
ಆದರ್ಶರಾಗಿ ಮಡಿದ ಮಹಿಮಾನ್ವಿತರು.

ಹಂತಹಂತವಾಗಿ ಬೆಳೆದು ಪ್ರಧಾನಿ ಪಟ್ಟವನೇರಿ
ದೇಶವನಾಳಿದ ಪರಿಯು ನಿಜಕು ಅದ್ಭುತ
ಹದಿನೆಂಟು ತಿಂಗಳಲಿ ರಾಷ್ಟ್ರವ ಮುನ್ನಡೆಸಿದ
ಇವರ ಈ ಸಾಧನೆಯು ಇನ್ನೂ ಜೀವಂತ.

ದೇಶದ ಸ್ವಾತಂತ್ರ್ಯಕೆ ಚಳುವಳಿಯಲಿ ಧುಮುಕಿ
ಸಂತೋಷದಿ ಸೆರೆವಾಸವ ಅನುಭವಿಸಿದರು
ರಾಷ್ಟ್ರಕಾಗಿ ಬದುಕನೇ ಸಮರ್ಪಣೆಯ ಮಾಡಿ
ಮೇರು ವ್ಯಕ್ತಿಯಾಗಿ ಅಜರಾಮರರಾದರು.

‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವು
ಲಾಲ್ ಬಹಾದ್ದೂರರ ದಿವ್ಯ ಮಂತ್ರವು
ರೈತರಿಗೆ ಸೈನಿಕರಿಗೆ ಇವರೆ ಸ್ಫೂರ್ತಿಯು
ವಿಶ್ವಕೆಲ್ಲ ಹಬ್ಬಿತು ಇವರ ಕೀರ್ತಿಯು.

2. ವಿಶ್ವಮಾನ್ಯ ಬಾಪು.

ಭಾರತ ದೇಶದ ಸ್ವಾತಂತ್ರ್ಯಕಾಗಿ
ಹೋರಾಡಿದರು ಗಾಂಧೀಜಿ
ಮಹಾತ್ಮರೆಂದು ಖ್ಯಾತಿಯ ಪಡೆದ
ಅವರೇ ನಮ್ಮಯ ಬಾಪೂಜಿ.

ಸತ್ಯ, ಅಹಿಂಸೆ,ಶಾಂತಿಯ ದೂತ
ತ್ಯಾಗ, ಬಲಿದಾನಗಳ ಸಂಕೇತ
ಎಲ್ಲರ ನೆಚ್ಚಿನ ಗಾಂಧೀತಾತ
ಅವರೇ ಹೆಮ್ಮೆಯ ರಾಷ್ಟ್ರ ಪಿತ.

ಅಸ್ಪೃಶ್ಯತೆಯ ನಿರ್ಮೂಲನೆಗೆ
ಪಣತೊಟ್ಟರು ಈ ನೇತಾರ
ವರ್ಣಭೇದ ನೀತಿಯನು ಖಂಡಿಸಿದ
ಅವರೇ ರಾಷ್ಟ್ರದ ಸರದಾರ.

ರಾಮ ರಹೀಮರು ಬೇರೆಯಲ್ಲ
ದೇವನೊಬ್ಬನೇ ಎಂದಿಹರು
ನಾವೆಲ್ಲ ಆತನ ಮಕ್ಕಳು ಎಂದಿಹ
ಅವರೇ ದೇಶದ ಮಹಾತ್ಮರು.

ಚರಕದಿ ನೂಲನು ತೆಗೆದು ದೇಶದಲಿ
ತಯಾರಿಸಿದರು ಖಾದಿ
ಸ್ವದೇಶಿ ವಸ್ತ್ರದ ಮಹತ್ವ ಸಾರಿದ
ಅವರೇ ಮಹಾತ್ಮಾ ಗಾಂಧಿ.

ಸತ್ಯಾಗ್ರಹ, ಚಳುವಳಿಗಳ ನಡೆಸುತ
ಮೂಡಿಸಿ ತಮ್ಮಯ ಛಾಪು
ಸ್ವಾತಂತ್ರ್ಯಜ್ಯೋತಿಯ ಬೆಳಗಿಸಿದವರು
ಅವರೇ ನಲ್ಮೆಯ ಬಾಪು.

ಸರಳ ಸಜ್ಜನಿಕೆ ಮೈಗೂಡಿಸಿದ
ವ್ಯಕ್ತಿತ್ವವೇ ಅಸಾಮಾನ್ಯ
ಸತತ ಪರಿಶ್ರಮ, ಸಾಧನೆಯಿಂದ
ಆದರು ವಿಶ್ವ ಮಾನ್ಯ.

ಜಿ.ಎಸ್.ಗಾಯತ್ರಿ. (ಶಿಕ್ಷಕಿ)
ಬಾಪೂಜಿ ಶಾಲೆ. ಹರಿಹರ

(ಅಕ್ಟೋಬರ್ 2 ರ ಗಾಂಧಿ ಮತ್ತು ಲಾಲಬಹುದ್ದೂರ ಶಾಸ್ತ್ರೀಯವರ ಜಯಂತಿ ಪ್ರಯುಕ್ತ ಈ ಕವಿತೆ ಪ್ರಕಟಿಸಲಾಗಿದೆ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ