ಹೇ ಗಾಂಧಿ…! (ನೀಳ್ಗವನ)
ಹಸನ್ಮುಖಿ ಶಾಂತಿಪ್ರಿಯ
ನಗು ಮೊಗದ ತಾತ
ನೀ ಬದುಕಿರುವತನಕ
ನೂರಾರು ಸ್ವಾತಂತ್ರ ಹೋರಾಟಗಾರರ
ಬಲದಿಂದ ಬ್ರಿಟೀಷರನ್ನು
ಓಡಿಸಲು ನೀ ಪಣತೊಟ್ಟೆ
ಗುಂಡಿಟ್ಟು ಕೊಂದರು ನಿನ್ನ
ಗೋಡ್ಸೆಯೆಂಬ ಭಿನ್ನ ವ್ಯಕ್ತಿಯಿಂದ
ಹೇ…! ರಾಮ ಎಂದು
ಕೊನೆಯುಸಿರೆಳೆದೆ
ಈಗೇನಾಗುತ್ತಿದೆ ನೋಡು
ಜಗದಲ್ಲಿ
ಈ ದೇಶ ರಾಮರಾಜ್ಯ ಆಗಲಿಲ್ಲ
ರಾಕ್ಷಸರ ರಾಜ್ಯವಾಗಿ ಎಲ್ಲೆಂದರಲ್ಲಿ
ಅತ್ಯಾಚಾರ ಕೊಲೆ ಸುಲಿಗೆ ದರೋಡೆ
ಭ್ರಷ್ಟ ರಾಜಕಾರಣಿಗಳ
ಕಪಿ ಮುಷ್ಠಿಗೆ ಸಿಲುಕಿ
ದೀವಾಳಿತನಕ್ಕೆ ಸಾಕ್ಷಿಯಾಗಿದೆ
ಒಂಟಿ ಹೆಣ್ಣು ಓಡಾಡಲು
ದಾರಿಗಳಿಲ್ಲದಂತಾಗಿದೆ.
ಕಾಮುಕರ ಅಟ್ಟಹಾಸದಲ್ಲಿ
ನರಳುತ್ತಿರುವ ಸ್ತ್ರೀಯರು
ಹೆಣ್ಣು ಹೆತ್ತವರ ರೋಧನೆ
ನಿನಗೆ ಕೇಳಿಸುತಿದ್ದರೆ
ಕೇಳು ಕಿವಿಗೊಟ್ಟು
ಅವಳ ಆಕ್ರಂದನ ಮುಗಿಲು ಮುಟ್ಟಿದೆ
ಗಾಂಧಿ ನಿನ್ನ ಪ್ರತಿಮೆಯ ಕಿವಿಗಳು
ಕಿವುಡಾಗಿ, ಒಡೆದ ಕನ್ನಡಕದಲ್ಲಿ
ಕಣ್ಣು ಕುರುಡಾಗಿವೆ
ಬಿರುಕು ಬಿಟ್ಟ ಪ್ರತಿಮೆಗಳ
ಬೋಳು ತಲೆಯ ಮೇಲೆ
ಕುಳಿತ ಕಾಗೆಗಳು
ಕಾವ್ ಕಾವ್ ಎನ್ನುತ್ತಲೇ
ಕಕ್ಕಾ ಮಾಡುತ್ತಿವೆ
ಇಲ್ಲಿನ ರಾಜಕೀಯ ವ್ಯವಸ್ಥೆಗೆ
ಹಿಡಿದ ಕನ್ನಡಿಯಾಗಿ ನಿನ್ನೆದುರಿಗೆ
ತಂದಿಡುತ್ತಿರುವರು
ಬೊಚ್ಚು ಬಾಯಿಯ ಮುದುಕ
ನಿನ್ನ ಮುಗುಳ್ನಗೆ
ಜನರ ದಾರಿ ತಪ್ಪಿಸುತ್ತಿದೆ
ಪ್ರಮುಖ ವೃತ್ತಗಳಲ್ಲಿ
ಅದಕ್ಕಾಗಿ ನೀ
ಮತ್ತೆ ಹುಟ್ಟಿ ಬರುವುದನ್ನೇ ಮರೆತಂತಿದೆ
ಮಲಗಿಹ ನಿನ್ನ ಬಡಿದೆಚ್ಚರಿಸುವರಾರು?
ಅದೇ ನಗು ಮೊಗದ
ಗಾಂಧಿ ತಾತ
ನಿನ್ನಾ ಭಾವಚಿತ್ರವಿರುವ
ನೋಟುಗಳು ಬಂಧಿಯಾಗುತ್ತಲೇ ಇವೆ
ಗಾಂಧಿ ಹೆಸರು ಅಳಿಸಿ
ಮುಂದೊಂದು ದಿನ
ಮೋದಿ ಭಾವಚಿತ್ರವಿರುವ
ನೋಟುಗಳು ಬಂದರೂ ಅಚ್ಚರಿಯಾಗಬೇಡ
ಅದೇ ಮಂದಹಾಸದ ನಗೆಯಲ್ಲಿ
ನಿನ್ನ ಪ್ರತಿಮೆಯನ್ನೂ ಉರುಳಿಸುವರು.!
ಆಗ ಅಚ್ಚರಿ ಪಡಬೇಕಾದ್ದು ನಾವು
ಭಾರತ ದೇಶದ ಪ್ರಜೆಗಳಾಗಿ
ಶಾಂತ ಮೂರ್ತಿಯಂತೆ ನಮ್ಮನ್ನು ಕೂರಿಸುವರು
ನಗುತ್ತಿರುವುದಷ್ಟೇ ನಿನಗೆ ಗೊತ್ತು
ಗಾಂಧಿ ನಿನ್ನಾ ಪ್ರತಿಮೆಗಳು ಕೆಡವಿ
ಮೋದಿ ಭಾವ ಚಿತ್ರವಿರುವ
ಪ್ರತಿಮೆಗಳು ಕುಳಿತರೆ…?
ಗಾಬರಿಯಾಗಬೇಡ ಗಾಂಧಿ ತಾತ
ಹುಚ್ಚ ಗಾಂಧಿಯೆಂದು ನಿನಗೆ ತುಚ್ಛವಾಗಿರಿಸುವರು
ಗೇಲಿ ಮಾಡುತ್ತಿರುವ ವ್ಯಂಗ್ಯದ ಭಾವಚಿತ್ರಗಳು
ಎಲ್ಲೆಂದರಲ್ಲಿ ಅಂಟಿಸುತ್ತಿರುವರು
ಅರೆಬೆತ್ತಲೆಯಾಗಿದ್ದ ನಿನಗೆ ಅಣಕಿಸಲು
ಖಾದಿ ಬಿಳಿ ಬಟ್ಟೆ ತೊಟ್ಟು ರಾರಾಜಿಸುತ್ತಿರುವರು
ರಾಜಕಾರಣಿಗಳು…
ಬಡವರ ರಕ್ತ ಹೀರುವ ಹುಳಗಳು
ಬಡವರಿಗೆ ಬಡವರನ್ನಾಗಿಯೇ ಉಳಿಸಿ
ಲೂಟಿ ಹೊಡೆದು ಗಳಿಸುತ್ತಿರುವರು
ದೇಶದ ಸಂಪತ್ತು….
ಗೊತ್ತಾ ನಿನಗೆ ಗಾಂಧಿ ತಾತ…?
ಅವರ ಬಳಿ ಇರುವ
ಗಗನದೆತ್ತರದ ಬಂಗಲೆಗಳು
ಆಸ್ತಿ ಅಂತಸ್ತು ಐಶಾರಾಮಿ ಕಾರುಗಳು
ಬ್ಯಾಂಕ್ ಬ್ಯಾಲೇಂನ್ಸ್ ಎಷ್ಟಂತ ಕೇಳು
ಹೊಗಲೇ ಗಾಂಧಿ ಎನ್ನುತಿದ್ದಾರೆ
ತುಳಿತಕೊಳಗಾದ ದೀನ ದಲಿತ ಬಡವರು
ಶಾಂತಿಧೂತ ಗಾಂಧಿ, ಅಹಿಂಸಾವಾದಿ
ಗಾದಿಯೇರಿದವರ ಕೊರಳ ಪಟ್ಟಿ ಹಿಡಿದು-
ಕೇಳು, ಯಾರು ಎಷ್ಟೇಷ್ಟು
ಲೂಟಿ ಹೊಡೆದರೆಂದು
ಯಾರನ್ನೆಲ್ಲ ಲೂಟಿ ಮಾಡಿದಿರೆಂದು
ಅವರಾರು ಉತ್ತರಿಸುವುದಿಲ್ಲ ನಿನಗೆ
ಕಪ್ಪು ಹಣ ಮೋದಿ ತರುವುದಿಲ್ಲ ಗಾಂಧಿ
ನಿನ್ನಾ ಕನಸಿನಂತೆ ರಾಮರಾಜ್ಯವಾಗಲಿಲ್ಲ
ರಾಮ ಮಂದಿರ ಕಟ್ಟಿದರಷ್ಟೇ…
ಮಧ್ಯರಾತ್ರಿಯಲ್ಲಿ ಒಂಟಿ ಹೆಣ್ಣು ಓಡಾಡುವ
ರಾಮರಾಜ್ಯದ ನಿನ್ನಾ ಕನಸಗಳು ಕಮರಿವೆ
ನಿಜವಾದ ರಾಮಾಯಣ ಏನಾಗಿತ್ತು
ನಿನಗೇನಾದರೂ ಗೊತ್ತಿದ್ದರೆ ಹೇಳು
ಮತ್ತೊಮ್ಮೆ ಉಪವಾಸ ಸತ್ಯಾಗ್ರಹ
ಧರಣಿ ಕುಳಿತು, ದಂಡಿಯಾತ್ರೆ ನಡೆಸು
ಕೇಳು ಮೂಲ ರಾಮಾಯಣ ತಿರುಚಿದವರನ್ನ
ನಿಜ ಕಥೆ ಏನಾಗಿತ್ತು ಎಂದು ಜನರಿಗೆ
ಡಂಗೂರ ಸಾರಿ ಹೇಳೋಣ ಬಾ
ಹೇ…ರಾಮ ಎಂದು ಕೇಳು ಬಾ
ನಮ್ಮ ಮಕ್ಕಳು ಮೊಮ್ಮಕ್ಕಳು ಕೇಳುತಿದ್ದಾರೆ
ಅಪ್ಪಾ ಈ ಗಾಂಧಿ ತಾತ ಯಾರಪ್ಪ ಎಂದು
ಅವರಿಗೆಲ್ಲ ನಿಜವಾದ ಐತಿಹಾಸಿಕ ಚರಿತ್ರೆ
ತೆರೆದಿಡುವುದೇ ತಪ್ಪಾ..?
ನಮಗರಿವಿಲ್ಲದ ಚರಿತ್ರೆ ನಿನಗೇನಾದರೂ
ಗೊತ್ತಿದ್ದರೆ ತಿಳಿಹೇಳು ಬಾ ತಾತ
ಈಗ ಎಲ್ಲೆಂದರಲ್ಲಿ ಮೋದಿ ಹೆಸರೇ
ಕೇಳಿ ಬರುತ್ತಿದೆ, ಗಾಂಧಿ ಹೆಸರು ?
ಕೇವಲ ಕಥೆ, ಕಾವ್ಯ, ಲೇಖನ
ಕಲ್ಪನೆಗಳಲ್ಲೇ ಇದೆ ಯಾಕೆ ಅಂತ
ಮಕ್ಕಳು ರಚ್ಚೆ ಹಿಡಿದು ಕೇಳುತಿದ್ದಾರೆ
ನೀ ಉತ್ತರಿಸುವತನಕ
ಮತ್ತೆ ಹುಟ್ಟಿ ಬಂದು
ಭ್ರಷ್ಟರನ್ನು ಪ್ರಶ್ನಿಸುವತನಕ
ಹಾಗಾದರೆ ಗಾಂಧಿ ತಾತ
ನಿನ್ನ ಹೆಸರು ಉಳಯುವುದಿಲ್ಲ
ಮುಂದೊಂದು ದಿನ….
ಮೋದಿ ಹೆಸರಿನಲ್ಲೂ
ಗಾಂಧಿ ಹೆಸರಿದೆ…. ಎನುತ್ತಿರುವರು
ಆದರೆ ಸೊನ್ನೆಯೊಂದು ಹೋಗಿದೆ
ಎನ್ನುವ ಬೊಗಳೆ ಭಟ್ಟರು
ರಾಜಕೀಯ ಪಕ್ಷಗಳ ಬಕೇಟ್ ಹಿಡಿಯುವರು
ಯಾಕಾದರೂ ನಿನಗೆ ನಾ
ಸ್ಮರಿಸಿಕೊಂಡೆ ಗೊತ್ತಿರದ ನಿಗೂಢ
ಜಗತ್ತಿನಲ್ಲಿ ಬದುಕುತ್ತಿರುವರು ನಾವು
ಗಾಂಧಿ ಆಗ್ಬೇಕಂದುಕೊಂಡವರಿಗೆಲ್ಲ
ಇದೇ ಪ್ರಶ್ನೆ ಕಾಡುತ್ತಿದೆ…
ಗಾಂಧಿ ಹಾದಿ ತುಳಿದವರಿಗೆಲ್ಲ
ಗುಂಡಿಟ್ಟು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ
ಎಂಬ ಭೀತಿಯಲ್ಲಿ…
ಗಾಂಧಿ ತಾತ ನಿನ್ನ ದಾರಿ ಹಿಡಿದವರು
ಹಂತಕರಿಂದ ಹತರಾಗುತ್ತಿರುವರು ಗೊತ್ತಾ?
ಮತ್ತೆ ಮತ್ತೆ ಗುಂಡಿಗೆ ಬಲಿಯಾದವರು
ಗೌರಿ ಲಂಕೇಶ, ಎಂ.ಎಂ.ಕಲಬುರ್ಗಿ
ಪನ್ಸಾರೆ, ದಾಬೋಲಕರ್,
ಹೀಗೆ ಮುಂತಾದವರೆಲ್ಲರ
ಪಟ್ಟಿ ಬೆಳೆಯುತ್ತಲೇ ಇದೆ
ಈಗಿನ ಯುಗದ ಮಕ್ಕಳಿಗೆ
ಏನು ಉತ್ತರಿಸುವೆ ಹೇಳು ಗಾಂಧಿ…
-ವೀರಣ್ಣ ಮಂಠಾಳಕರ್
ಬಸವಕಲ್ಯಾಣ.
ಹೇ ಗಾಂಧಿ… ಕವನ ಚೆನ್ನಾಗಿ ಮೂಡಿ ಬಂದಿದೆ.
ನೈಜತೆಯಿಂದ ಕೂಡಿದ್ದ ತಮ್ಮ ಕವನದಲ್ಲಿ ಸಾಮಾಜಿಕ ಕಳಕಳಿಯಿದೆ.
ಬೂಟಾಟಿಕೆ ಬಗ್ಗೆ ತಿರಸ್ಕಾರ ಇದೆ.
ನಗ್ನ ಸತ್ಯ ಅನಾವರಣಗೊಂಡಿದೆ.
“ತಮ್ಮಿಂದ ಇಂತಹ ಇನ್ನೂ ಅನೇಕ ಕಥೆ ಕಾದಂಬರಿ ಕವನಗಳು ಹೊರಹೊಮ್ಮಲಿ.
ಕನ್ನಡ ಸಾರಸತ್ವಲೋಕ ಶ್ರೀಮಂತಗೊಳ್ಳಲಿ.
ಸಮಾಜ ಸುಧಾರಣೆಯಾಗಲಿ.
ಓದುಗರ ಮನತಣಿಯಲಿ”ಎಂದು ಈ ಮೂಲಕ ಹಾರೈಸುತ್ತೇನೆ.
– ಜಿ ಎಲ್ ನಾಗೇಶ ಧನ್ನೂರ್(ಆರ್) ಬಸವಕಲ್ಯಾಣ