Oplus_131072

ಶಿಕ್ಷಣ ಕುರಿತ ಗಾಂಧೀಜಿ ಭಾಷಣಕ್ಕೆ ಶತಮಾನದ ಗರಿ.

ಅಗಸ್ಟ್ ಒಂದು, 1924. ಅಹಮದಾಬಾದಿನಲ್ಲಿ ಗಾಂಧೀಜಿಯವರು ರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ನೂರು ವರ್ಷಗಳಾದವು. ಈ ಶತಮಾನದ ಭಾಷಣ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ದಿಕ್ಸೂಚಿಯಾಗಬಲ್ಲದು.ಈ ಭಾಷಣದ ಸಾರಾಂಶವನ್ನು ಇಲ್ಲಿ ವಿವೇಚಿಸಲಾಗಿದೆ.

ಭಾರತ ಸ್ವತಂತ್ರಗೊಳ್ಳಲು ಗಾಂಧೀಜಿ ರೂಪಿಸಿದ್ದ ಹಲವು ತಂತ್ರಗಳಾದ ಅಸಹಕಾರ, ಸತ್ಯಾಗ್ರಹ ಚಳುವಳಿ ಕುರಿತು ಮಾತನಾಡುತ್ತಾ ಶಿಕ್ಷಣದ ಹಲವು ದೃಷ್ಟಿಕೋನಗಳನ್ನು ಕೂಡ ನೀಡುತ್ತಾರೆ. ಈ ಭಾಷಣದಲ್ಲಿ ಗುಜರಾತಿನ ಶಿಕ್ಷಣ ವ್ಯವಸ್ಥೆ ಕುರಿತು ಮಾತಾಡುತ್ತಾರೆ. ಅವುಗಳು ಸ್ವತಂತ್ರಕ್ಕಾಗಿ ನೀಡಿದ ಸಹಕಾರವನ್ನು ನೆನಪಿಸಿಕೊಳ್ಳುವರು. ಪುರಾತತ್ವ ಮಂದಿರ, ದಕ್ಷಿಣಾಮೂರ್ತಿ, ವಿದ್ಯಾರ್ಥಿ ಭವನ, ಚಾ ರೋ ತರ ಮಂಡಲ್, ಬ್ರೋಚ್ ಕೇಲವಾನಿ ಮಂಡಲ ಸಂಸ್ಥೆಗಳು ಚಳುವಳಿಗೆ ಸಹಕಾರವನ್ನು ನೀಡಿದ್ದ ವು.ಈ ಸಂಸ್ಥೆಗಳಿಗೆ ರೂಪಿಸಿದ ಪಠ್ಯಕ್ರಮವನ್ನು ಗಾಂಧೀಜಿ ಜೈಲಿನಿಂದ ಪರಿಶೀಲಿಸಿ ಮೆಚ್ಚುಗೆ ಸೂಚಿಸಿದ್ದರು. ಗುಜರಾತಿನ ಶಿಕ್ಷಣ ಹಾಗೂ ಪಠ್ಯ ಪುಸ್ತಕಗಳ ಕುರಿತಾಗಿ ಗಾಂಧೀಜಿ ಮಾತಾಡುತ್ತಿದ್ದರು. ಪಠ್ಯ ಪುಸ್ತಕಗಳ ಗಾತ್ರ ದೊಡ್ಡದಾಗಿದ್ದವು.ಮುದ್ರಣವು ಚೆನ್ನಾಗಿದೆ ಆದರೆ ಬಡ ಕುಟುಂಬದರು ಇವುಗಳನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಗಾಂಧೀಜಿ ವಿಷಾದಿಸಿದ್ದರು. ಗಾಂಧಿ ತಾವು ಬರೆದ ‘ಬಾಲಪೋತಿ’ ಪುಸ್ತಕದ ಕುರಿತು ಸ್ವ ವಿಮರ್ಶಿಸಿಕೊಳ್ಳುತ್ತಾರೆ.

ಒಬ್ಬ ಶಿಕ್ಷಕನು ತನ್ನ ಮಾತಿನ ಮೂಲಕ ಮಾತ್ರ ವಿದ್ಯಾ ದಾನ ಮಾಡಬೇಕು. ಪುಸ್ತಕ ಮತ್ತು ಪಠ್ಯಪುಸ್ತಕಗಳು ಅವನಿಗೆ ಈ ವಿಷಯದಲ್ಲಿ ಹೆಚ್ಚು ಸಹಾಯ ಮಾಡಲಾರವು. ಮುಂದುವರೆದು ಪಠ್ಯಪುಸ್ತಕವನ್ನು ಇಟ್ಟುಕೊಂಡು ಬೋಧಿಸಿದ ಶಿಕ್ಷಕರಿಗೂ ಪಠ್ಯಪುಸ್ತಕವನ್ನು ಇಟ್ಟುಕೊಳ್ಳದೆ ಬೋಧಿಸಿದ ಶಿಕ್ಷಕರಿಗೂ ಹೆಚ್ಚಿನ ಜ್ಞಾನ ಸಾಮರ್ಥ್ಯ ಮಕ್ಕಳಿಗೆ ಕೊಡುತ್ತಾರೆ ಎಂದು ಮನಗೊಂಡಿದ್ದರು. ಶಿಕ್ಷಕರು ಪಠ್ಯಪುಸ್ತಕಗಳನ್ನು ಓದಲಿ. ಪಠ್ಯ ಪುಸ್ತಕಗಳನ್ನು ಮಕ್ಕಳಿಗಾಗಿ ಬರೆದಾಗ ಶಿಕ್ಷಕರು ಅದನ್ನು ಯಾಂತ್ರಿಕಗೊಳಿಸುತ್ತಾರೆ. ಇದರಿಂದ ಶಿಕ್ಷಕರ ಸೃಜನಶೀಲತೆಯನ್ನು ಅದು ಮೊಟಕು ಗೊಳಿಸುತ್ತದೆ. ಹೊಸ ಪ್ರಯತ್ನಗಳಿಗೆ ಅವಕಾಶ ಇರು ರುವುದಿಲ್ಲ.ಪಠ್ಯ ಪುಸ್ತಕ ಮಕ್ಕಳ ಮೆದುಳಿಗೆ ಹೊರೆ ಆಗಬಾರದೆಂಬ ದೃಷ್ಟಿಕೋನ ಗಾಂಧೀಜಿಯವರ ಮಾತಿನಲ್ಲಿದೆ. ಈ ಪೂರ್ವದ ಎಲ್ಲಾ ಸಂಸ್ಥೆಗಳು ಸ್ವರಾಜ್ಯ ಸ್ಥಾಪನೆಯ ಹಿನ್ನೆಲೆಗಾಗಿ ಸ್ಥಾಪಿತಗೊಂಡವು ಎಂಬುದನ್ನು ಮರೆಯಬಾರದೆಂದು ತಿಳಿಸುತ್ತಿದ್ದರು. ಸ್ವರಾಜ್ಯ ಸಿಕ್ಕ ನಂತರ ಶಿಕ್ಷಣ ಶಿಕ್ಷಣವನ್ನಾಗಿ ನೋಡಬೇಕೆಂದು ಕರೆ ಕೊಟ್ಟಿದ್ದರು. ಅವರ ಮೊದಲ ಆದ್ಯತೆ ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸುವುದಾಗಿತ್ತು. ಶಿಕ್ಷಣ ಸಂಸ್ಥೆಗಳನ್ನು ಅವರು ಸ್ವಾತಂತ್ರ್ಯದ ಹೋರಾಟದ ಕೇಂದ್ರಗಳನ್ನಾಗಿ ರೂಪಿಸಬೇಕೆಂದು ಹೇಳುತ್ತಿದ್ದರು. ಹಾಗೆಂದ ಮಾತ್ರಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿ ಅವರದಾಗಿತ್ತು.

ಅಂತ್ಯರಿಗೆ ಪ್ರವೇಶವಿಲ್ಲದ ಶಾಲೆ ರಾಷ್ಟ್ರೀಯ ಶಾಲೆಯಲ್ಲ. ಸ್ವರಾಜ್ಯಕ್ಕಾಗಿ ಆ ಶಾಲೆ ಅಲ್ಲ ಅದು ಅಸಹಕಾರಿ ಶಾಲೆಯು ಅಲ್ಲ ಎಂದರು. ಸ್ವರಾಜ್ಯ ಕ್ಕಾಗಿ ಶಾಲೆಗಳನ್ನು ಸದೃಢಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಗಾಂಧೀಜಿ ಮಾಡುತ್ತಿದ್ದರು. ಅಂತ್ಯಜರಿಗೆ ವಿಶೇಷ ಶಾಲೆಗಳನ್ನು ತೆರೆಯುವ ಸಾಹಸಕ್ಕೂ ಮುಂದಾಗಿದ್ದರು.

ಗಾಂಧೀಜಿಯವರು ನೂಲುವ ಅಥವಾ ಚರಕ ಪರೀಕ್ಷೆಯಲ್ಲಿ ತೇರ್ಗಡೆ ಯಾಗದಿದ್ದರೆ ಯಾವ ಪದವೀಧರನಿಗೂ ಪ್ರಶಸ್ತಿ ಪತ್ರ ನೀಡುವುದಿಲ್ಲ ಎನ್ನುತ್ತಿದ್ದರು. ಇದರಿಂದ ಪ್ರತಿ ಶಾಲೆಯು ಸ್ವಾವಲಂಬನೆ ಯಾಗಬಹುದು ಎಂಬ ಆಲೋಚನೆ ಇತ್ತು. ಶಿಕ್ಷಕರು ಕೇವಲ ಅಕ್ಷರ ಕಲಿಸಿದರೆ ಸಾಲದು. ನೂಲುವುದು ನೇಯುವುದನ್ನು ತಾವು ಕಲಿತು ಮಕ್ಕಳಿಗೆ ಕಲಿಸಲು ಮುಂದಾಗಬೇಕು. ಬೇರೆಯವರು ಕಲಿಸಲಿ ಎಂಬ ಧೋರಣೆಯಿಂದ ಶಿಕ್ಷಕರು ವಿಮುಖರಾಗಬೇಕು.
ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೊನೆಯಲ್ಲಿ ಹಳ್ಳಿಗಳಿಗೆ ಹೋಗಬೇಕೆಂಬ ಗುರಿ ಇರಬೇಕು ಕೆಲವರು ಬಂದರು ಸಾಕೆಂದಿದ್ದರು ಗಾಂಧೀಜಿ.
ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ವಿದ್ಯಾವಂತರು ಹಳ್ಳಿಗಳಿಗೆ ಹಿಂತಿರುಗಿ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡಿದ್ದು ಕಾಲದ ಮಹಿಮೆ ಎನ್ನಬಹುದು.
ದೊಡ್ಡ ಕಟ್ಟಡಗಳಿಂದ ಶಿಕ್ಷಣದ ಗುರಿ ಈಡೇರುವುದಿಲ್ಲ. ಭಿಕ್ಷಾನ್ನವನ್ನುಂಡು ಪಾಠ ಮಾಡಿದ ಶಿಕ್ಷಕರು ಈಗಿಲ್ಲ. ಇರುವ ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ.ಶಿಕ್ಷಕರು ಚೆನ್ನಾಗಿದ್ದರೆ ಶಿಕ್ಷಣ ಚೆನ್ನಾಗಿರುತ್ತದೆ. ಶಿಕ್ಷಕರು ಚೆನ್ನಾಗಿರದಿದ್ದರೆ ಶಿಕ್ಷಣ ಚೆನ್ನಾಗಿ ಇರುವುದಿಲ್ಲ. ಎಷ್ಟೊಂದು ಒಳ್ಳೆಯ ಪಠ್ಯಕ್ರಮವಿದ್ದರೂ ಅದು ಸಾಧಿಸುವ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ.

ಎಲ್ಲಾ ಮಕ್ಕಳು ಓದುವುದು,ಬರೆಯುವುದು ಮತ್ತು ಗಣಿತ ಜ್ಞಾನ ಪಡೆಯುತ್ತಿದ್ದರು. ಈಗಿನ ಪರಿಸ್ಥಿತಿ ಹಾಗೆ ಇದೆ ಎಂದು ಹೇಳಬಹುದು.1924ರ ಪರಿಸ್ಥಿತಿ 2024ರ ಸ್ಥಿತಿಯು ಬೇರೆಯಾಗಿಲ್ಲ.ಇಂದಿನ ಬುನಾದಿ ಸಾಮರ್ಥ್ಯಗಳು ಎಫ್ಎಲ್ಎಂ. ( ಫಂಡಮೆಂಟಲ್ ಲರ್ನಿಂಗ್ ನ್ಯೂಮರೆಟಿಕ್ಸ್) ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಜಾರಿಯಾಗುತ್ತಿರುವುದು ದುರದೃಷ್ಟಕರ. ಗಾಂಧಿ ಕಾಲದ ಶಿಕ್ಷಣದ ಸಮಸ್ಯೆ ಇಂದಿಗೂ ಜೀವಂತವಾಗಿರುವುದು ನಾವೆಲ್ಲರೂ ಕಣ್ಣಿದ್ದು ಕುರುಡರಾಗಿದ್ದೇವೆ.
ಈ ಸಂದರ್ಭದಲ್ಲಿ ಮಹಿಳೆಯ ಕುರಿತಾಗಿ ಅಷ್ಟೊಂದು ಗಾಂಧೀಜಿ ಮಾತಾಡಲಿಕ್ಕೆ ಸಾಧ್ಯವಾಗಲಿಲ್ಲ. ಹೆಣ್ಣು ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಸೇರಿಸಬೇಕು. ನೂಲುವುದನ್ನು ಕಲಿಸಬೇಕು
ಗಾಂಧೀಜಿ ಆಡಿದ ಮಾತುಗಳ ಹಿನ್ನೆಲೆಯನ್ನು ಗಮನಿಸುವದಾದರೆ ಅದರಲ್ಲಿ ಮಹಿಳಾ ಶಿಕ್ಷಣದ ಮಹತ್ವವನ್ನು ಕೂಡ ದಾಖಲಿಸಿರುತ್ತಾರೆ. ಮಹಿಳೆಯರು ಪದವಿ ಪಡೆದ ಮಾತ್ರಕ್ಕೆ ಅವರು ಶಿಕ್ಷಣ ಪಡೆದಂತಾಗುವುದಿಲ್ಲ. ಸ್ತ್ರೀಯು ಪುರುಷನಿಗಿಂತ ಶ್ರೇಷ್ಠ ಎಂಬ ಅರಿವು ಮೂಡಿದರೆ ನಿಜವಾದ ಶಿಕ್ಷಣವೆಂದು ಗಾಂಧೀಜಿ ಸಾರಿದ್ದರು.

ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡದೆ ಹೋದರೆ ನಮಗೆ ಭವಿಷ್ಯವಿಲ್ಲ. ಅಂತ್ಯಜ ಮಕ್ಕಳಿಗೆ ಶಿಕ್ಷಣವನ್ನು ನೀಡಿದರೆ ದೇಶದ ಭವಿಷ್ಯ ಮತ್ತಷ್ಟು ಅಭಿವೃದ್ಧಿಯಾಗುವುದು. ಅಂತ್ಯಜ ಶಿಕ್ಷಕನ ಮೇಲೆ ಬಹಳಷ್ಟು ಜವಾಬ್ದಾರಿ ಇದೆ ಎಂದು ನವ ಜೀವನ ಪತ್ರಿಕೆಯಲ್ಲಿ ಅಂತ್ಯಜ ಶಿಕ್ಷಕನ ಕುರಿತಾಗಿ ಬಂದ ಪರಿಚಯ ಲೇಖನವನ್ನು ಮನಗಾಣಿಸುತ್ತಾರೆ.
ಗಾಂಧೀಜಿ ಪೋಷಕರ ಇಂಗ್ಲಿಷ್ ವ್ಯಾಮೋಹಕ್ಕೂ ಕಳವಳಗೊಂಡಿದ್ದರು. ಶಿಕ್ಷಣ ತಾಯ್ನುಡಿಯಲ್ಲಿ ನಡೆಯಬೇಕೆಂಬ ಕಾಳಜಿ ಗಾಂಧಿಗೆ ಇತ್ತು. ಮಕ್ಕಳು ಕೆಟ್ಟ ಗುಜರಾತಿ ಮಾತಾಡಿದರೆ ತೊಂದರೆ ಇಲ್ಲ. ಇಂಗ್ಲಿಷ್ ಭಾಷೆ ಚೆನ್ನಾಗಿ ಮಾತಾಡಿದರೆ ಸಾಕೆಂಬ ಆಸೆ ಪೋಷಕರದ್ದಾಗಿದೆ. ಇವತ್ತಿನ ಪೋಷಕರ ಮನಸ್ಥಿತಿಯು ಹೀಗೆಯೇ ಇದೆ. ಈ ಸಂಕಷ್ಟದ ಬಲೆಯಿಂದ ಹೊರ ಬರಬೇಕೇ ಅಥವಾ ಬೇಡವೇ ಎಂಬ ಚರ್ಚೆಯ ಚಕ್ರವ್ಯೂಹದೊಳಗೆ ಇಂದಿಗೂ
ಹೋರಾಡುತ್ತಿದ್ದೇವೆ.

ಹೀಗೆ ಗಾಂಧೀಜಿಯವರು ರಾಷ್ಟ್ರೀಯ ಶಿಕ್ಷಣ ಸಮ್ಮೇಳನದ ನಿರ್ಣಯಗಳನ್ನು ಪ್ರಚುರ ಪಡಿಸುತ್ತಾ ಅಧ್ಯಕ್ಷೀಯ ಭಾಷಣವನ್ನು ಮಾಡಿ ಚರ್ಚೆಗೆ ಚಾಲನೆ ನೀಡಿದರು. ಈ ಭಾಷಣ 1924ರ ಭಾರತದ ಒಟ್ಟು ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. 1924 ರಲ್ಲಿ ಗಾಂಧೀಜಿ ಅಸಹಕಾರ ತತ್ವವನ್ನು ಪ್ರತಿಪಾದಿಸಿದ್ದ ರು.ಅಸ್ಪೃಶ್ಯತೆಯ ನಿರ್ಮೂಲನೆಯ ಹೋರಾಟವೂ ಕೂಡ ನಡೆದಿತ್ತು. ಅಂತ್ಯಜರಿಗೆ ಶಿಕ್ಷಣ ನೀಡುವುದು ಅತ್ಯವಶ್ಯವಾಗಿ ತಿಂದು ಗಾಂಧಿ ನಂಬಿದ್ದರು. ನಾವೇ ಬ್ರಿಟಿಷರಿಗೆ ಅಸ್ಪೃಶ್ಯತೆಯನ್ನು ಕಲಿಸಿಕೊಟ್ಟೆವು ಎಂದು ಗಾಂಧೀಜಿ ಹೇಳುತ್ತಿದ್ದರು. ಚರಕದ ಮಹತ್ವ ಪ್ರತಿಯೊಬ್ಬರು ಅರಿಯಬೇಕು ಮತ್ತು ಸ್ವರಾಜ್ಯದ ಪರಿಕಲ್ಪನೆ ಮತ್ತೆ ಮತ್ತೆ ರಾಷ್ಟ್ರೀಯ ಶಿಕ್ಷಣ ಸಮ್ಮೇಳನದ ಭಾಷಣದಲ್ಲಿ ಪ್ರತಿಧ್ವನಿಸುತಿತ್ತು. ಇಲ್ಲಿ ಕೈಗೊಂಡ ಪ್ರತಿಯೊಬ್ಬರು ವಿಮರ್ಶಿಸಬಹುದು ಅಥವಾ ಸ್ವೀಕರಿಸಬಹುದು ಎಂದು ಗಾಂಧೀಜಿ ಹೇಳಿದ್ದರು. ಜನಸಾಮಾನ್ಯರ ಅಭಿಪ್ರಾಯವೇ ಮೊದಲ ಆದ್ಯತೆಯಾಗಬೇಕೆಂಬುದು ಗಾಂಧಿಯವರ ನಿಲುವಾಗಿತ್ತು. ಶಿಕ್ಷಣದ ಕುರಿತಾಗಿ ಗಾಂಧೀಜಿ ಆಲೋಚನೆಗಳನ್ನು ಇಂದು ನಾವು ಪುನರ್ಬಲನ ಮಾಡಿಕೊಳ್ಳಬಹುದು. ಅಥವಾ ವಿಮರ್ಶಿಸಲು ಬಹುದು.

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್,
ಸಂಶೋಧಕರು, ಜಿಪಿಟಿ ಶಿಕ್ಷಕರು, ಯಾದಗಿರಿ

ಆಧಾರ ಗ್ರಂಥ :
ಮಹಾತ್ಮ ಗಾಂಧಿ ಕೃತಿ ಸಂಚಯ ಸಂಪುಟ 24 : ಭಾರತೀಯ ವಿದ್ಯಾ ಭವನ, ಬೆಂಗಳೂರು 2011

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ