ಶ್ಯಾಣೇರ ನಾವು
ಏನ್ ಕಾಲ ಬಂತೋ
ಈ ಬದುಕು ಹಿಂಗ್ಯಾಕ ಆತೋ
ಶ್ಯಾಣೇರ ನಾವು ಅಂದ್ಕೊಂಡ್ರೇ
ನಮ್ಗಾ ನಾಚ್ಕಿ ಬರ್ತೈತೋ.
ಮನುಷ್ಯರ್ ಖಬರು ಇಲ್ದಂಗ
ಮನ್ಸಿಗೆ ಬಂದ್ಹಾಂಗ ಆಡ್ತೀವಿ
ಬುದ್ಧಿ ಮಾತ್ ಕೆಳ್ದಂಗ
ಮಾತ್ ಮಾತಿಗೆ ಸೆಟ್ಗೊಂತೀವಿ.
ಧರ್ಮ ಧರ್ಮ ಅಂತೀವಿ
ತಿರುಳು ಅರಿಯದೇ ತಿರ್ಗತೀವಿ
ತತ್ವ ಸಿದ್ಧಾಂತ ಮೂಲೆಗೊತ್ತಿ
ಮೂಗಿನ ನೇರಕೆ ನಡಿತೀವಿ
ದೇವ್ರು ಒಬ್ಬನೇ ಅಂತೇಳ್ತೀವಿ
ಮನಿಗೊಂದು ದೇವ್ರ ಇಟ್ಟೀವಿ
ನಂದಾ ಬ್ಯಾರೆ ನಿಂದಾ ಬ್ಯಾರೆ ಅಂತ
ಗುಡಿ , ಚರ್ಚ್ , ಮಸೀದಿ ಕಟ್ಟೀವಿ
ನಮ್ನ ಕಾಯೋ ದೇವ್ರೇ ಅಂತೀವಿ
ದೇವ್ರ ಕಾಯಾಕ ಪೋಲೀಸ್ ಕರೆಸ್ತೀವಿ
ಬಿಗಿ ಬಂದೋಬಸ್ತ್ ಇಲ್ದಿದ್ರ
ನಾವ್ ನಾವೇ ಕಚ್ಚಾಡಿ ಸಾಯ್ತೀವಿ.
ಮಹಾತ್ಮರ ಪೂಜೆ ಮಾಡ್ತೀವಿ
ಮನೇಲಿ ಫೋಟೋ ಹಾಕ್ತೀವಿ
ಜಾತಿಗೊಬ್ಬರ ಮೀಸಲು ಮಾಡಿ
ವಿಚಾರಗಳಿಗೆ ಪಿಂಡ ಬಿಡ್ತೀವಿ
ಸ್ವಂತ ವಿಚಾರ ಮಾಡಂಗಿಲ್ಲ
ಹೇಳೋರ್ ಮಾತು ಕೇಳಂಗಿಲ್ಲ
ಸಾವ್ಕಾಸ ಸತ್ಯ ತಿಳ್ಕೊಳ್ದಂಗ
ಯುವ ಪೀಳಿಗೆ ಎದ್ದು ಹೊಂಟೈತಲ್ಲ.
ಮಾನವರೊಂದೇ ಅನ್ನೋದು ಹೆಸ್ರಿಗೆ
ಒಬ್ರ ಕಂಡ್ರ ಇನ್ನೊಬ್ರಿಗೆ ಆಗಂಗಿಲ್ಲ.
ಮಾನವೀಯತೆ ಮರೆತರೆ ಮುಂದ
ಒಳ್ಳೇ ಜೀವನ ಸಿಗಾಂಗಿಲ್ಲ.
✍️ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ ರಾಯಚೂರು