ಆಧುನಿಕ ಭಾರತದ ಮೊದಲ ಜ್ಞಾನಮಾತೆ : ಸಾವಿತ್ರಿಬಾಯಿ ಫುಲೆ
– ದೇವೇಂದ್ರ ಕಟ್ಟಿಮನಿ, ಕಮಲಾಪುರ
ಹೆಣ್ಣೊಂದು ಕಲಿತರೆ; ಶಾಲೆಯೊಂದು ತೆರೆದಂತೆ. ಎಂಬ ನುಡಿಯ ಭಾವರ್ಥ ಸಾಕಾರಗೊಳ್ಳಿಸುವಂತೆ, ಭಾರತದ ಇತಿಹಾಸದಲ್ಲಿ ಮರೆಯಲಾರದ ಮಹಿಳಾ ಮಾಣಿಕ್ಯಗಳೆಂದರೆ, ಸಾವಿತ್ರಿಬಾಯಿ ಫುಲೆ ಮತ್ತು ಶೇಖ್ ಫಾತಿಮಾ. ಶೋಷಿತ ಸಮಾಜದ ಜನತೆಗೆ ಶಾಸ್ವತ ಜ್ಞಾನದ ಬೆಳಕು ನೀಡಿದ ಮಾಹಾನ್ ಮಾತೆಯರನ್ನು ನೆನೆಯುವ ದಿನ ಇದಾಗಿದೆ.
ಭಗವಾನ್ ಗೌತಮ ಬುದ್ಧರ ಆದರ್ಶಗಳು ಹೊತ್ತ ಭಾರತದ ಆ ದಿನಗಳಂದು, ಭಾರತವು ವಿಶ್ವಕ್ಕೆ ಬೆಳಕಾಗಿತ್ತು. ಗುರುವಾಗಿತ್ತು, ಎಂಬ ಮಾತುಗಳು ಸೂರ್ಯನಷ್ಟೇ ಕಟುಸತ್ಯ. ಆನಂತರದ ಕಾಲಘಟ್ಟಗಳಲ್ಲಿ, ಭಾರತದಲ್ಲಿ ಧರ್ಮಾಂಧತೆ, ಅಜ್ಞಾನ, ಮೌಡ್ಯ, ಶೋಷಣೆ, ಮಾನಸಿಕ ಭಯೊತ್ಪಾದಕತೆ, ಎತೆಚ್ಛವಾಗಿ ಬೆಳೆದುಕೊಂಡಿತು. ಸೀಮಿತ ವರ್ಗದ ಪುರುಷ ಪ್ರಧಾನ ರಾಷ್ಟ್ರವಾಗಿ ಭಾರತದ ಮೂಲರೂಪವನ್ನೇ ಬದಲಿಸಿದರು. ಸ್ವಾರ್ಥಿಗಳು ಸೃಷ್ಟಿಸಿದ ಕಗ್ಗತ್ತಲಿನಲ್ಲಿ ಶತಶತಮಾನಗಳೆ ಉರುಳಿ ಹೋದವು. ನಿಧಾನವಾಗಿ ಮರೆಯಾದ ಸಮತೆ, ಮಮತೆ, ಸಮಾನತೆ, ಪ್ರಜ್ಞೆ, ಶೀಲ, ಕರುಣೆಗಳ ನೈತಿಕ ಬೆಳಕು ಮತ್ತೆ ಮೂಡಿದ್ದೇ 1848 ಕಾಲ ಘಟ್ಟದಲ್ಲಿ. ಭಾರತದ ಇತಿಹಾಸದಲ್ಲಿ ಇಂತಹ ಹೊಸ ಪುಟಗಳು ಬಿಚ್ಚಿಟ್ಟ ಖ್ಯಾತಿ ಡಾ. ಬಿ.ಆರ್ಬೇಡ್ಕರ್ ಅವರಿಗೆ ಸಲ್ಲುತ್ತದೆ. ಇಂತಹ ಅನೇಕ ಅಂಶಗಳು ಜ್ಞಾನದಾಹಿಗಳಿಗೆ ಅಮೃತ ಬಡಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾ.ಶ 1848 ರಿಂದ ಈ ಹೊಸ ಬೆಳಕು ಉದಯಿಸಿತು. ಏಕೆ ? ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರವೇ ಸಾವಿತ್ರಿಬಾಯಿ ಫುಲೆ.
ಸಾವಿತ್ರಿಬಾಯಿ ಫುಲೆ 1831 ರಲ್ಲಿ ಮಾಹಾರಾಷ್ಟ್ರದ ಸತಾರ ಜಿಲ್ಲೆಯ ʼನೈಗಾಂವ್ʼನಲ್ಲಿ ಲಕ್ಷ್ಮಿಬಾಯಿ – ಖಂಡೋಜಿ ನೇವಸೆ ದಂಪತಿಗಳ ಮಡಿಲಲ್ಲಿ ಜನಿಸಿದ್ದು, ಆಧುನಿಕ ಭಾರತದ ಹೆಮ್ಮೆ. ಅಂದಿನ ಭಾರತದ ಧರ್ಮಾಂಧಕಾರಕ ಮೌಡ್ಯದ ಬಲೆಗೆ ಸಿಲುಕಿ, ಹಿರಿಯರ ಸಮ್ಮತಿಯಂತೆ ತನ್ನ 8 ವರ್ಷ ವಯಸ್ಸಿನಲ್ಲಿಯೇ ಮುಗ್ಧ ಮನವು ಬಾಲ್ಯದಲ್ಲಿಯೇ, 13 ವರ್ಷ ವಯಸ್ಸಿನ ಜ್ಯೋತಿಬಾಫುಲೆಯವರನ್ನು ಮದುವೆಯಾದರು. ಸಾವಿತ್ರಿಯವರಿಗೆ ಮನೆಯು ಮೊದಲ ಪಾಠಶಾಲೆಯಾದರೆ, ಜ್ಯೋತಿಬಾಫುಲೆ ಮೊದಲ ಗುರುವಾದರು.
18 -19 ನೇ ಶತಮಾನಗಳಲ್ಲಿ ಅಮೇರಿಕಾ ಮತ್ತು ಯುರೋಪಿನಲ್ಲಿ ನಡೆದ ಸ್ವಾತಂತ್ರ ಮತ್ತು ಕೈಗಾರಿಕ ಕ್ರಾಂತಿಯ ಕಿಚ್ಚು, ವಿಶ್ವದ ವಿವಿಧ ದೇಶಗಳಿಗೆ ಹಬ್ಬಿತು. ಹಾಗೆ 1948 ರ ಹೊತ್ತಿಗೆ ಯುರೋಪಿನಲ್ಲಿ ನಡೆದ ಸ್ವಾತಂತ್ರದ ಕ್ರಾಂತಿಯ ಬಿಸಿಗಾಳಿ ಭಾರತದ್ಲಲ್ಲಿಯೂ ಬಿಸಿ ಮುಟ್ಟಿಸಿತ್ತು. ಬದಲಾವಣೆಯ ಹೊಸ ಸಂದೇಶ ಸಾರಿತು. ಇದರ ಪರಿಣಾಮವಾಗಿ ಸತ್ಯ ಶೋಧಕ ಸಮಾಜದ ಸ್ಥಾಪಕರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರು ಅಂದಿನ ಧರ್ಮಾಡಳಿತದ ದೌರ್ಜನ್ಯ, ಸಾಮಾಜಿಕ ಅಸ್ಥಿರತೆ, ಜಾತಿ ವ್ಯವಸ್ಥೆ, ಬಡತನ, ಹೆಣ್ಣುಮಕ್ಕಳ ಮೇಲಿನ ಶೋಷಣೆಗಳಂತಹ ಸಮಾಜದ ಸಂದಿಗ್ದ ಪರಸ್ಥಿತಿಯಲ್ಲಿ ಬಿಡುವಿನ ವೇಳೆ ಮತ್ತು ರಾತ್ರಿವೇಳೆಯಲ್ಲಿ ಜ್ಯೋತಿಬಾರೊಂದಿಗೆ ಕುಳಿತು, ಮಹಿಳಾ ಶಿಕ್ಷಣಕ್ಕೆ ವಿರೋಧವಿರುವ ಮನೆ ಮತ್ತು ಸಮಾಜದ ನಡುವೆ, ಶಿಕ್ಷಣ ಪಡೆದುಕೊಂಡರು. ಮುಂದೆ 1847 ರಲ್ಲಿ “ವಿಚಾಲ್ ನಾರ್ಮಲ್” ಶಾಲೆಯಲ್ಲಿ ಶಿಕ್ಷಕರ ತರಬೇತಿಯನ್ನು ಮುಗಿಸಿ ದೇಶದ ಮೋದಲ ಮಹಿಳಾ ಶಿಕ್ಷಕಿಯಾಗಿ, ಸಗುನಾಬಾಯಿ ಅವರೊಂದಿಗೆ ಸಲಹೆ ಪಡೆದು, ಜನವರಿ 1, 1848 ರಲ್ಲಿ ಮೊಟ್ಟ ಮೊದಲ ಬಾಲಕಿಯರ ಶಾಲೆಯೊಂದನ್ನು, ಪುಣೆಯ ಬಿಡೆವಾಡದಲ್ಲಿ ಅಂದಿನ ಸರಕಾರದ ಸಹಾಯವಿಲ್ಲದೆ ಪ್ರಾರಂಭಿಸಿದರು. ಹಾಗೆ ಮುಂದುವರೆದು ಗಂಜಿಪೇಟೆ, ವೇತಾಳ ಪೇಟೆ, ಪುಣೆ ಹೀಗೆ ವಿವಿದ ಸ್ಥಳಗಳಲ್ಲಿ 18 ಶಾಲೆಗಳು ಪ್ರಾರಂಭಿಸಿದರು. ಇವೆಲ್ಲವುಗಳ ಪರಿಣಾಮದಿಂದಾಗಿ, ಆ ಕಾಲದ ಸ್ತ್ರೀಯೊಬ್ಬಳು ಶಿಕ್ಷಣ ಪಡೆಯುವುದು, ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಅಂದಿನ ಮನುವಾದದ ಮೇಲ್ವರ್ಗದವರು ಅವರನ್ನು ಅವಮಾನಿಸುತ್ತಿದ್ದರು. ಅಲ್ಲದೇ ಕೆಲವರು ಕೆಸರು, ಸೆಗಣಿ, ಕಲ್ಲುಗಳು ತೂರುತ್ತಿದ್ದರು. 1849 ರಲ್ಲಿ ಸಮಾಜದ ಒಂದು ವರ್ಗದ ವಿರೋಧದಿಂದಾಗಿ ತಂದೆ ಗೋವಿಂದ ಫುಲೆಯವರು ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದರು.
ಛಲಬಿಡದ ಫುಲೆ ದಂಪತಿಗಳಿಗೆ ಆತ್ಮೀಯ ಗೆಳೆಯನಾದ ಪ್ರಗತಿಪರ ಚಿಂತಕ ಉಸ್ಮಾನ್ ಶೇಕ್ ಅಂದಿನ ಆ ಸಮಾಜವನು ಎದುರು ಹಾಕಿಕೊಂಡು ತಮ್ಮ ಮನೆಯಲ್ಲಿ ಉಳಿಸಿಕೊಂಡರು. ಹಾಗೆ ಅಲ್ಲಿ ಒಂದು ಶಾಲೆಯೊಂದನ್ನು ಪ್ರಾರಂಭಿಸಿದರು. ಉಸ್ಮಾನ್ ಶೇಕ್ ರ ಸಹೊದರಿ ಫಾತಿಮಾ ಶೇಕ್ “ಅಹಮದ್ ನಗರದ ಮಿಸ್ ಫರಾರ್” ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆದು ತಮ್ಮ ಮನೆಯಲ್ಲಿ ಪ್ರಾರಂಭಿಸಿದ ಮೊದಲ ಶಾಲೆಗೆ ಶಿಕ್ಷಕಿಯಾಗಿ ಫುಲೆ ದಂಪತಿಗೆ ವಿಶ್ವಾಸ ತುಂಬಿದಳು. ಅಷ್ಟೆ ಅಲ್ಲದೆ, 1852 ರಲ್ಲಿ ಪ್ರಾರಂಭಿಸಿದ ಶಾಲೆಗೆ ಫಾತಿಮಾ ಶೇಕ್ ರವರು ಮುಖ್ಯ ಶಿಕ್ಷಕಿಯಾಗಿ ಮುನ್ನಡೆಸಿದ್ದು ಭಾರತಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ. ಸಾವಿತ್ರಿಬಾಯಿ ಫುಲೆಯವರ ಜೊತೆಗಿದ್ದು ಎಲ್ಲಾ ಜವಾಬ್ದಾರಿಗಳು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಇಬ್ಬರೂ ಗೆಳತಿಯರು ತಮ್ಮ ಕಾರ್ಯಾನುಭವವನ್ನು ಮತ್ತು ಮುಂದಿನ ಯೋಜನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು.
1897 ರಲ್ಲಿ ಸಾವಿತ್ರಿಬಾಯಿ ಫುಲೆಯವರು ಪ್ಲೇಗ್ ಹಾವಳಿಗೆ ಉಂಟಾದ ಅನಾರೋಗ್ಯದಿಂದಾಗಿ, ವಿಶ್ರಾಂತಿಗಾಗಿ ತವರಿಗೆ ಹೋಗುತ್ತಾರೆ. ಸಾವಿತ್ರಿಬಾಯಿಯ ಅನುಪಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಮತ್ತು ದಲಿತ ಮಕ್ಕಳ ತರಗತಿಯ ಜವಾಬ್ದಾರಿಯನ್ನು ಸ್ವತ: ಫಾತಿಮಾ ಶೇಕ್ ರವರೆ ನಿಭಾಯಿಸುತ್ತಾರೆ. “ನನ್ನ ಗೈರು ಹಾಜರಿಯಿಂದಾಗಿ ಸಹ ಶಿಕ್ಷಕಿ ಫಾತಿಮಾ ಶೇಕ್ ಅವರಿಗೆ ತೊಂದರೆಯಾಗಿರಬಹುದು. ಆದಷ್ಟು ಬೇಗ ಗುಣಮುಖಳಾಗಿ ಬರುತ್ತೇನೆ” ಎಂದು ತಮ್ಮ ಪತ್ರದಲ್ಲಿ ಸಾವಿತ್ರಿಬಾಯಿ ಉಲ್ಲೇಖಿಸಿರುವುದು ಕಂಡು ಬರುತ್ತದೆ. ಫಾತಿಮಾ ಶೇಕ್ ರವರು ಜ್ಯೋತಿಬಾ ಫುಲೆಯವರು ಪ್ರಾರಂಭಿಸಿದ ಚಳುವಳಿಯಲ್ಲಿ ಭಾಗಿಯಾದ ಸಾಮಾಜಿಕ ಚಳುವಳಿಗಾರ್ತಿ, ಹೆಣ್ಣುಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಲು ಕಂಕಣ ತೊಟ್ಟ ಸಾವಿತ್ರಿಬಾಯಿಯ ಗೆಳತಿ, ಭಾರತದ ಮೊಟ್ಟಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಎನ್ನುವುದಂತು ಧಿಟ್ಟ ನಿಲುವು. ಮೌರ್ಯರ ಕಾಲದ ಮತ್ತು ಶರಣರ ಕ್ರಾಂತಿಯ ನಂತರ, ಇಂದು ಭಾರತದ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆಯ ಹಕ್ಕು ಪಡೆದಿರುವೂದಕ್ಕೆ ಸಾವಿತ್ತಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ರವರು ತಳಹದಿಯಲ್ಲಿ ಅಂಬೇಡ್ಕರರು ಸಂವಿಧಾನದ ಮೂಲಕ ಫಲಿತ ಮರವಾದರು. ಇಂದಿನ ಮಹಿಳಾ ಸಮಾಜ ಇದನ್ನು ಮರೆಯುವಂತಿಲ್ಲ. ಇದರ ಪರಿಣಾಮವಾಗಿ ಸಾವಿತ್ರಿಯವರಿಗೆ ಬ್ರೀಟಿಷ್ ಸರ್ಕಾರ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ನೀಡಿ ಗೌರವಿಸಿತು. ಶಿಕ್ಷಕಿಯಾಗಿ, ಸಾಹಿತಿಯಾಗಿ, ಲೇಖಕಿಯಾಗಿ 1854 ರಲ್ಲಿ “ಕಾವ್ಯಫುಲೆ” ಎಂಬ ಕವನ ಸಂಕಲನ, 1891 ರಲ್ಲಿ “ಭವನಕಾಶಿ ಸುಬೋಧ ರತ್ನಾಕರ” 1892 ರಲ್ಲಿ “ಜ್ಯೋತಿಬಾ ರವರ ಭಾಷಣಗಳು” ಸಂಪಾದಿತ ಕೃತಿ ಹಾಗು “ಕರ್ಜೆ” ಕೃತಿಗಳನ್ನು ಸಾಮಾಜಿಕ ಕಳಕಳಿಯ ಕೃತಿಗಳಾಗಿ, 18 ನೇ ಶತಮಾನದ ಸಮಾಜದ ಸ್ಥಿತಿಗತಿ ದಾಖಲಿಸುವ ಮೈಲಿಗಲ್ಲಾಗಿವೆ.
ಅಂದಿನಿಂದ ಇಂದಿನವರೆಗೂ ಪ್ರಗತಿಪರ ಚಿಂತಕರನ್ನು ಕೆಲವು ವರ್ಗದವರು ವಿರೋಧಿಸಿರುವದಂತು ಸತ್ಯ. ಆದರೆ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಕ್ ರನ್ನು ಭಾರತದ ಜನತೆ ಮರೆಯುವಂತಿಲ್ಲ. ಮನುಕುಲದ ಆದರ್ಶ ಶಿಕ್ಷಣದ ಇತಿಹಾಸವನ್ನು ಜಾತಿವಾರು, ವರ್ಗವಾರು, ಧರ್ಮವಾರು ವಿಂಗಡಿಸಿ ಸಂಕುಚಿತಕ್ಕಿಳಿಯದೆ, ಇವರುಗಳೆ ನಮ್ಮ ನಿಜವಾದ ವಿದ್ಯಾದೇವತೆಯರು ಎಂದು ಭಾವಿಸಿ, ಇವರನ್ನು ಇತಿಹಾಸದಿಂದ ಅಜ್ಞಾತಕ್ಕೆ ತಳ್ಳದೆ, ಮುಖ್ಯ ವಾಹಿನಿಗೆ ತಂದರೆ, ಅದುವೆ ಬೋಧಿ ಸತ್ವದ ಭಾರತ, ಬಹುಜನರ ಭಾರತ, ಅವರ ಆದರ್ಶಗಳು ಪ್ರಬುದ್ದ ಭಾರತಕ್ಕೆ ಬುನಾದಿ. ಸಮತೆ ಎಂದಿಗೂ ಅದು ನಮ್ಮದು. ಆ ಭಾರತವೇ ಈ ಭಾರತ .
– ದೇವೇಂದ್ರ ಕಟ್ಟಿಮನಿ, ದೈ.ಶಿ.ಶಿ. ಕಮಲಾಪುರ ಕಲಬುರಗಿ.
ಲೇಖನ ಪ್ರಕಟಿಸಿದ್ದಕ್ಕೆ ಕಲ್ಯಾಣ ಸಿರಿಗನ್ನಡ ಅಂತರ್ಜಾಲ ಪತ್ರಿಕೆಗೆ ಅನಂತ ಧನ್ಯವಾದಗಳು.