Oplus_131072

ಆದಿಕವಿ ವಾಲ್ಮೀಕಿ

ರಾಮಾಯಣ ಮತ್ತು ಮಹಾಭಾರತ ‌ ಹಿಂದೂ ಧರ್ಮದ ಎರಡು ಮಹಾಕಾವ್ಯಗಳು. ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನೂ, ಮಹರ್ಷಿ ವೇದವ್ಯಾಸರು ಮಹಾಭಾರತವನ್ನೂ ಸಂಸ್ಕೃತದಲ್ಲಿ ರಚಿಸಿದ್ದು, ಈ ಎರಡೂ ಮಹಾಕಾವ್ಯಗಳು ಮಾನವನ ಬದುಕಿಗೆ ಆದರ್ಶಪ್ರಾಯವಾಗಿವೆ.

ಪಿತೃವಾಕ್ಯ ಪರಿಪಾಲಕನೂ, ‌ ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮಚಂದ್ರನ ಆದರ್ಶಗಳನ್ನು ಎತ್ತಿ ತೋರಿಸುವ ರಾಮಾಯಣದಂತಹ ಮಹಾಕಾವ್ಯವನ್ನು ಹಿಂದೂ ಧರ್ಮ ಕ್ಕೆ ಕೊಡುಗೆಯಾಗಿ ಕೊಟ್ಟ ಮಹರ್ಷಿ ವಾಲ್ಮೀಕಿಯ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಲೇಬೇಕು.
ಆಶ್ವಯುಜ ಮಾಸ ಶುಕ್ಲಪಕ್ಷದ ಹುಣ್ಣಿಮೆಯಂದು ಜನಿಸಿದ ವಾಲ್ಮೀಕಿ ಮಹರ್ಷಿಗಳ ಜನ್ಮದಿನವನ್ನು ‘ವಾಲ್ಮೀಕಿ ಜಯಂತಿ’ ಎಂದು ದೇಶದಾದ್ಯಂತ ನಾವೆಲ್ಲರೂ ಆಚರಿಸುತ್ತೇವೆ. ಮಹರ್ಷಿ ವಾಲ್ಮೀಕಿಯು ಪ್ರಚೇತಸನ ಮುನಿಯ ಮಗನಾದ್ದರಿಂದ ಅವರಿಗೆ ‘ಪ್ರಾಚೇತಸ‘ ಎಂದೂ ಕರೆಯಲಾಗುತ್ತದೆ. ಒಂದು ದಂತಕಥೆಯ ಪ್ರಕಾರ ಯಾವುದೋ ಕಾರಣಕ್ಕೆ ತಂದೆಯಿಂದ ತಿರಸ್ಕೃತನಾದ ಬಾಲಕ ಪ್ರಚೇತಸನು ಕಾಡಿನಲ್ಲಿ ಬಿಲ್ಲವರ ಕೈಗೆ ಸಿಕ್ಕು ಅವರಿಂದ ರತ್ನಾಕರ ಎಂಬ ಹೆಸರು ಪಡೆಯುತ್ತಾನೆ .
ಕ್ರೂರಿಯಾದ ರತ್ನಾಕರ ಮಹರ್ಷಿಯಾದದ್ದೇ ಒಂದು ರೋಚಕ.

ದರೋಡೆಕೋರರಾಗಿ ಕಾಡಿನ ಜನರನ್ನು ಲೂಟಿ ಮಾಡುತ್ತಿದ್ದ ಬಿಲ್ಲವ ಜನರಿಂದ ಅಪಹರಿಸಲ್ಪಟ್ಟ ಬಾಲಕನಾದ ರತ್ನಾಕರನು ಅವರಂತೆಯೇ ತಾನೂ ಕೂಡ ದರೋಡೆ, ಲೂಟಿ ಮಾಡತೊಡಗುತ್ತಾನೆ. ದೇವತೆಗಳು ಅವನನ್ನು ಸರಿದಾರಿಗೆ ತಂದು ಕಾಡಿನ ಜನರನ್ನು ಆತನಿಂದ ರಕ್ಷಿಸಬೇಕೆಂದು ಆಲೋಚಿಸುತ್ತಾರೆ. ಆದ್ದರಿಂದ ನಾರದರು ಉಪಾಯ ಮಾಡಿ ಕಾಡಿನಲ್ಲಿ ಹೋಗುತ್ತಿದ್ದಾಗ ರತ್ನಾಕರ ಅವರನ್ನು ಬಂಧಿಸಿ ತನ್ನ ಬಳಿ ಇರಿಸಿಕೊಳ್ಳುತ್ತಾನೆ. ಆಗ ನಾರದ ಮುನಿಗಳು ಅವನು ಮಾಡಿದ ಪಾಪ ಕೃತ್ಯದ ಬಗ್ಗೆ ಅನೇಕ ರೀತಿಯಲ್ಲಿ ಅವನಿಗೆ ಬುದ್ಧಿ ಹೇಳುತ್ತಾ,

ನಿನ್ನ ಪಾಪ ಕಾರ್ಯದಲ್ಲಿ ನಿನ್ನ ಕುಟುಂಬದವರು ಪಾಲುದಾರರಾಗುತ್ತಾರೆಯೆ? ಕೇಳು” ಎನ್ನುತ್ತಾರೆ . ನಾರದರ ಮಾತಿನಂತೆ ರತ್ನಾಕರನು ಕೇಳಲು ಕುಟುಂಬದವರಾರೂ ತನ್ನ ಪಾಪದಲ್ಲಿ ಪಾಲುದಾರರರಾಗಲು ಒಪ್ಪದಿದ್ದಾಗ ರತ್ನಾಕರನಿಗೆ ಜ್ಞಾನೋದಯವಾಗಿ ಪ್ರಪಂಚದ ಬಗ್ಗೆ ಅರಿವು ಮೂಡುತ್ತದೆ. ಆಗ ನಾರದರ ಬಳಿ ಬಂದ ರತ್ನಾಕರ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಕೇಳುತ್ತಾನೆ. ಇದನ್ನು ಕೇಳಿದ ನಾರದರು ರಾಮನಾಮ ಮಂತ್ರವನ್ನು ಪಠಿಸುವಂತೆ ಹೇಳುತ್ತಾರೆ. ಅಂದಿನಿಂದ ರತ್ನಾಕರ ತನ್ನ ಕ್ರೂರತನವನ್ನೆಲ್ಲ ಬಿಟ್ಟು ಸದ್ವ್ಯಕ್ತಿಯಾಗಿ ಭಗವಂತನನ್ನು ಕುರಿತು ಅನೇಕ ವರ್ಷಗಳ ಕಾಲ ತಪಸ್ಸನ್ನಾಚರಿಸುತ್ತ , ರಾಮನಾಮ ಪಠಣ ಮಾಡುತ್ತಾ ಕುಳಿತಿರುವಾಗ ಅವನ ಸುತ್ತ ಹುತ್ತ ಬೆಳೆಯುತ್ತದೆ. ಸಂಸ್ಕೃತದಲ್ಲಿ ಹುತ್ತಕ್ಕೆ ‘ವಲ್ಮೀಕ‘ ಎಂದು ಕರೆಯುತ್ತಾರೆ. ವಲ್ಮೀಕವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ನಾರದರೇ ಅವನಿಗೆ ‘ವಾಲ್ಮೀಕಿ‘ ಎಂದು ನಾಮಕರಣ ಮಾಡುತ್ತಾರೆ . ಅಂದಿನಿಂದ ರತ್ನಾಕರರು ‘ಮಹರ್ಷಿ ವಾಲ್ಮೀಕಿ’ ಎಂದೇ ಪ್ರಖ್ಯಾತರಾದರು.

ಸಂಸ್ಕೃತದ ಮೊದಲ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿದ್ದರಿಂದ ಅವರಿಗೆ ‘ಆದಿಕವಿ‘ ಎಂದು ಕೂಡ ಕರೆಯುತ್ತಾರೆ.
ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ಬರೆಯಲು ಪ್ರೇರಣೆ ನೀಡಿದ ಘಟನೆ ತುಂಬಾ ಕುತೂಹಲಕಾರಿಯಾದುದು.

ಮಹರ್ಷಿಗಳು ತಮಸಾ ನದೀ ತೀರದಲ್ಲಿ ಸ್ನಾನಕ್ಕೆಂದು ಹೋದಾಗ ಸಂತೋಷವಾಗಿ ಹಾರಾಡುತ್ತಿದ್ದ ಜೋಡಿ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ಬೇಡನೊಬ್ಬನು ತನ್ನ ಬಾಣದಿಂದ ಕೊಲ್ಲುತ್ತಾನೆ. ಆಗ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಮನ ಕಲಕುವ ಈ ಘೋರ ದೃಶ್ಯವನ್ನು ನೋಡಿ ದುಃಖಿತರಾದ ಮಹರ್ಷಿಗಳ ಬಾಯಿಯಿಂದ ಅವರಿಗರಿವಿಲ್ಲದೇ ಒಂದು ಶ್ಲೋಕವು ಹೊರಹೊಮ್ಮುತ್ತದೆ.

ಮಾ ನಿಷಾದ ! ಪ್ರತಿಷ್ಠಾ ತ್ವಂ
ಆಗಮ: ಶಾಶ್ವತೀ: ಸಮಾ:
ಯತ್ಕ್ರೌಂಚ ಮಿಥುನಾದೇಕಂ
ಅವಧೀ: ಕಾಮಮೋಹಿತಂ”

ಪ್ರಾಸಬದ್ಧವಾಗಿ ಲಯ, ಛಂದಸ್ಸುಗಳಿಂದ ಕೂಡಿದ ಈ ಶ್ಲೋಕದ ಅರ್ಥ ಹೀಗಿದೆ.

ವಿನಾ ಕಾರಣ ಹಕ್ಕಿಯನ್ನು ಕೊಂದ ಪಾಪಿಯೇ, ನಿನ್ನ ಪಾಪದ ಫಲವಾಗಿ ನಿನಗೆ ಪ್ರೀತಿಯು ಸಿಗದೆ ತಕ್ಷಣವೇ ನೀನು ಮರಣ ಹೊಂದು.”
ತಕ್ಷಣವೇ ವಾಲ್ಮೀಕಿ ಮಹರ್ಷಿಗಳು ‘ನಾನೇಕೆ ಆ ರೀತಿ ಶಪಿಸಿದೆ? ‘ ಎಂದು ಚಿಂತಾಕ್ರಾಂತರಾಗುತ್ತಾರೆ. ಆ ವೇಳೆಗೆ ಸರಿಯಾಗಿ ಆಶ್ರಮಕ್ಕೆ ಬಂದ ಬ್ರಹ್ಮ ದೇವರು ಅವರನ್ನು ಸಮಾಧಾನಿಸುತ್ತಾ ಇದೇ ಶ್ಲೋಕದಿಂದ ಮೊದಲು ಗೊಂಡು ರಾಮಾಯಣ ಕಾವ್ಯ ರಚಿಸಲು ವಾಲ್ಮೀಕಿ ಮಹರ್ಷಿಗೆ ಹೇಳುತ್ತಾರೆ. ನಾರದರು ತಮಗೆ ಸಂಗ್ರಹ ರೂಪದಲ್ಲಿ ಹೇಳಿದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನು, ಏಳು ಕಾಂಡಗಳನ್ನು ಒಳಗೊಂಡ ‘ರಾಮಾಯಣ‘ ಎಂಬ ಮಹಾಕಾವ್ಯವನ್ನು ರಚಿಸುತ್ತಾರೆ. ಇದು ಸೀತಾ ರಾಮರ ಅವಳಿ ಮಕ್ಕಳಾದ ಲವಕುಶರಿಂದ ಪ್ರಚಲಿತವಾಗುತ್ತದೆ.

ವಾಲ್ಮೀಕಿ ಕೇವಲ ಒಬ್ಬ ವ್ಯಕ್ತಿಯಲ್ಲ, ಅದ್ಭುತ ಶಕ್ತಿ. ರಾಮಾಯಣ ಕೇವಲ ಗ್ರಂಥವಲ್ಲ , ಅದೊಂದು ಮೌಲ್ಯಗಳ ಮಹಾವೃಕ್ಷ. ಇದರಲ್ಲಿನ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ರಾಮನ ಆದರ್ಶ, ದಶರಥನ ಪುತ್ರವಾತ್ಸಲ್ಯ, ಲಕ್ಷ್ಮಣ, ಭರತ, ಶತ್ರುಘ್ನರ ಭ್ರಾತೃಪ್ರೇಮ, ಸೀತೆಯ ಪತಿಭಕ್ತಿ , ಕಪಿಸೈನ್ಯದ ಸ್ವಾಮಿ ನಿಷ್ಠೆ, ರಾವಣನ ಹಠ….ಹೀಗೆ ರಾಮನ ಜನನದಿಂದ ಹಿಡಿದು ರಾವಣನ ವಧೆಯಾಗಿ, ಶ್ರೀ ರಾಮ ಪಟ್ಟಾಭಿಷೇಕದ ನಂತರ ಸೀತೆಯ ಅಗ್ನಿ ಪ್ರವೇಶದವರೆಗೂ ಪ್ರತಿಯೊಂದು ಸನ್ನಿವೇಶವೂ ಸುಂದರವಾಗಿ ಮೂಡಿ ಬಂದಿದೆ. ವಾಲ್ಮೀಕಿ ಮಹರ್ಷಿಗಳಿಂದ ಶ್ರೀರಾಮನ ಕಥೆಯನ್ನು ಕೇಳಿ ತಿಳಿದುಕೊಂಡ ಲವಕುಶರು ರಾಮನನ್ನು ತಮ್ಮ ತಂದೆಯೆಂದು ತಿಳಿಯದೆ ಅವನ ಮುಂದೆಯೇ ಅದನ್ನು ಸುಶ್ರಾವ್ಯವಾಗಿ ಹಾಡಿ ತೋರಿಸುತ್ತಾರೆ. ಈ ಸನ್ನಿವೇಶವು ಸೀತಾರಾಮರ ಪುನರ್ಮಿಲನಕ್ಕೆ ಕಾರಣವಾಗುವುದಲ್ಲದೆ, ಲವಕುಶರು ತನ್ನ ಮಕ್ಕಳೆಂದು ಶ್ರೀರಾಮನಿಗೆ ತಿಳಿಯುತ್ತದೆ. ಇಂತಹ ಸುಂದರವಾದ, ಬೃಹತ್ತಾದ ಮಹಾಕಾವ್ಯವನ್ನು ನಮಗೆ ಕೊಡುಗೆಯಾಗಿ ಕೊಟ್ಟು ಬೇರೆ ಬೇರೆ ಭಾಷೆಗಳಲ್ಲಿ ರಚನೆ ಮಾಡಲು ಕವಿಗಳಿಗೆ, ಲೇಖಕರಿಗೆ ಸ್ಫೂರ್ತಿಯಾದ ವಾಲ್ಮೀಕಿ ಮಹರ್ಷಿಗಳು ಅಂದಿಗೂ, ಇಂದಿಗೂ, ಎಂದೆಂದಿಗೂ ಪೂಜನೀಯರು.

ಕೂಜಂತಂ ರಾಮರಾಮೇತಿ
ಮಧುರಂ ಮಧುರಾಕ್ಷರಂ
ಆರುಹ್ಯ ಕವಿತಾ ಶಾಖಾಂ
ವಂದೇ ವಾಲ್ಮೀಕಿ ಕೋಕಿಲಂ.

ಕಾವ್ಯವೆಂಬ ಮರದ ಕೊಂಬೆಯ ಮೇಲೆ ಕುಳಿತು ರಾಮ ರಾಮ ಎಂಬ ಮಧುರವಾದ ನಾಮವನ್ನು ಸುಮಧುರವಾಗಿ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಾನು ವಂದಿಸುತ್ತೇನೆ ‘

ಎಂಬುದು ಈ ಶ್ಲೋಕದ ಅರ್ಥ.
ವಾಲ್ಮೀಕಿ ಮಹರ್ಷಿಗಳ ಪಾಂಡಿತ್ಯವನ್ನು ಎತ್ತಿ ಹಿಡಿಯಲು ಬುಧಕೌಶಿಕ ಮುನಿ ವಿರಚಿತ ‘ಶ್ರೀ ರಾಮ ರಕ್ಷಾ ಸ್ತೋತ್ರ’ ದಲ್ಲಿರುವ ಈ ಒಂದು ಶ್ಲೋಕ ಸಾಕಲ್ಲವೆ?

– ಗಾಯತ್ರಿ.ಜಿ.ಎಸ್. (ಶಿಕ್ಷಕಿ)
ಬಾಪುಜಿ ಶಾಲೆ
ಹರಿಹರ.

(ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಈ ಲೇಖನ)

ಲೇಖಕಿಯರ ಪರಿಚಯ:

ಗಾಯತ್ರಿ ಜಿ.ಎಸ್.

ಗಾಯತ್ರಿ. ಜಿ.ಎಸ್ ರವರು ದಾವಣಗೆರೆ ಜಿಲ್ಲೆಯ ಹರಿಹರದ ನಿವಾಸಿ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಹರಿಹರದ ಬಾಪುಜಿ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಆಸಕ್ತರಾದ ಇವರ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಅಂತರ್ಜಾಲ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡು ಹೆಸರುವಾಸಿಯಾಗಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ