Oplus_131072

ಆಶಾಕಿರಣ.(ಕತೆ)

 

ಎಂ.ಜಿ.ದೇಶಪಾಂಡೆ. ಬೀದರ

 

ಸಾಲದ ಸುಳಿಯಲ್ಲಿ ಸಿಲುಕಿದ  ಆ ಮೇಲ್ಮನೆಯ ಸೋಮಣ್ಣನೆಂಬ ರೈತ ಸಾಲ ತಿರಿಸಲಾಗದೆ  ಫಾಸಿ ಹಾಕ್ಕೊಂಡು ಸತ್ತಾನೆಂಬೋ ಸುದ್ದಿ ಸಂಗಪ್ಪನಿಂದ ತಿಳಿದ   ಸಿದ್ದಪ್ಪ  ಒಮ್ಮೆ ಬೆಚ್ಚಿ ಕೆಳಗೆ ಕುಸಿದು ಬಿದ್ದನು. ಸಾಲ ಮಾಡಿದ ರೈತ ಸಿದ್ದುಪ್ಪನ  ಕೈ ಕಾಲುಗಳಲ್ಲಿ ಅಧೀರತೆ ಬಂದಂತೆನಿಸಿತ್ತು. ಈಗ ತನ್ನ ಸರದಿ ಬಂತೆಂಬಂತೆ ಯೋಚಿಸತೊಡಗಿದನು.

 

ಬೆಳಗಿನ ಜಾವ ಸಿದ್ದುವಿಗೆ ಎಚ್ಚರವಾಗಿತ್ತು. ಎದ್ದಾಗಿ ನಿಂದಲೂ ಏನೇನೋ ವಿಚಾರಗಳು ನೆನಪಿಗೆ ಬಂದು ಕಾಡುತ್ತಲೆ ಇದ್ದವು. ಇನ್ನೂ ಈರಮ್ಮ ಹಾಸಿಗೆಯಿಂದ ಎದ್ದಿರಲಿಲ್ಲ.ರಾತ್ರಿಯೆಲ್ಲವೂ ಮಕ್ಕಳ ಆರೈಕೆಯಲ್ಲಿಯೇ ದುಡಿದು ಮಲಗಿ ನಿದ್ದೆಹೋಗಿದ್ದಳು.ಮೂವರು ಮಕ್ಕಳಾದ ಕಲ್ಲು,ಮಲ್ಲು,ಲಕ್ಷ್ಮೀ ದೊಡ್ಡವರಾಗುತ್ತಿದ್ದರು.ಇದ್ದ ಎರಡು ಏಕರೆ ಭೂಮಿಯಲ್ಲಿ ಹೋದ ವರ್ಷ ಬೆಳೆ ಏನು ಬೆಳೆದಿರಲಿಲ್ಲ.ಈ ವರುಷವೂ ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳಾಯ್ತು ಆದರೂ ಆಕಾಶವೆಲ್ಲ ಇನ್ನೂ ನೀಲಿಯಾಗಿ ಶುಭ್ರಿಸುತಿತ್ತು. ಗಗನದಲ್ಲಿ ತುಣುಕು ಮಳೆ ಮೋಡಗಳು ಕಾಣುತ್ತಿರಲಿಲ್ಲ.ಕಂಡರೂ ಭೂಮಿಗೆ ಹನಿ ನೀರು ಚೆಲ್ಲುತ್ತಿರಲಿಲ್ಲ.ಹೋದ ವರ್ಷ ಸಹಕಾರ ಸಂಘದಿಂದ ತಂದ ಸಾಲ ಇನ್ನು ತೀರಿಸಿಲ್ಲ. ಅದು ಬಡ್ಡಿ ಸಮೇತ ಇನ್ನು ಜಾಸ್ತಿಯಾಗಿರಲೂಬಹುದು.
ಹೀಗೆ ಸಿದ್ದು ಯೋಚಿಸುತ್ತಿರುವಾಗಲೇ ನಿದ್ದೆಯಲ್ಲಿ ಮಲಗಿದ್ದ ಈರಮ್ಮ ಮಗ್ಗಲು ಹೊರಳಿಸಿದಳು.ಇದನ್ನು ಕಂಡ ಸಿದ್ದುವಿಗೆ ವಾಸ್ತವದ ಅರಿವಾಗಿತ್ತು.

ಹಾಸಿಗೆಯಲ್ಲಿ ಕುಳಿತಿದ್ದ ಸಿದ್ದು ಒಂದು ಕ್ಷಣ ಮಲಗಿದ್ದ ಲಕ್ಷ್ಮೀ ಯತ್ತ ಕಣ್ಣು ಹೊರಳಿಸಿದನು. ಲಕ್ಷ್ಮೀ ಮಲಗಿ ನಿದ್ರಿಸುತಿದ್ದಳು.ಅವಳು ಧರಿಸಿದ್ದ ಧಾವಣಿ ಹರಿದು ಹೋಗಿತ್ತು.ಲಂಗಕ್ಕು ಅಲ್ಲಲ್ಲಿ ತೂತು ಬಿದ್ದಂತಿದ್ದವು. ಆದರೂ ಅವಳು ಒಂದು ದಿನವೂ ‘ಅಪ್ಪ ನನ್ನ ಓಡಣಿ ಹರಿದಿದೆ’ ಎಂದು ಬಾಯಿಬಿಚ್ಚಿ ಹೇಳಿರಲಿಲ್ಲ. ಈ ಬಗ್ಗೆ ಈರಮ್ಮ ಸಹ ತನಗೆ ಒಂದು ಮಾತನಾಡಿರಲಿಲ್ಲ.ಈಗ ಸಿದ್ದುವಿನ ಕಂಗಳು ಹಸಿಯಾದವು. ಹೀಗೆ ಯೋಚಿಸಿ ಕೊಂಡಾಗ ಸಿದ್ದು ಎಷ್ಟೋ ರ‍್ಯತರು ಸಾಯುತ್ತಿದ್ದಾರೆ ಮತ್ತೆ ನಾನೇಕೆ ಇರಬೇಕು.ನಾನು ಸತ್ತರೂ ಚಿಂತೆಯಿಲ್ಲ.

ಸರಕಾರ ಕೊಡುವ ಅನುಕಂಪನೆಯ ಹಣದಿಂದಲಾದರೂ ನನ್ನ ಕುಟುಂಬದ ಉದ್ಧಾರ ಸಾಧ್ಯ ಎಂದು ಮನದಲ್ಲಿಯೇ ನುಡಿದುಕೊಂಡನು. ಹೇಗಾದರೂ ಆಗಲಿ ಇವತ್ತಂತು ಆತ್ಮಹತ್ಯೆ ಮಾಡಿಕೊಳ್ಳಲೇಬೇಕು. ಸಿದ್ದುವಿನ ನಿರ್ಧಾರ ಗಟ್ಟಿಗೊಳ್ಳತೊಡಗಿತ್ತು. ಅಷ್ಟರಲ್ಲಿ ಬೆಳಗು ಹರಿದು ಹೊರಗೆ ಹಕ್ಕಿಗಳ ಇಂಚರ ನಾದ ಕೇಳಿಬಂದಿತ್ತು. ಬೆಳಕು ಈ ಭೂಮಿಯ ಮೇಲೆ ತನ್ನ ಸಾಮ್ರಾಜ್ಯ ಸ್ಥಾಪಿಸಲು ಅಣಿಯಾಗತೊಡಗಿತ್ತು. ಅಷ್ಟರಲ್ಲಿ ಈರಮ್ಮ ಕೂಡಲೆ ಎದ್ದುಕುಳಿತು ಗಂಡನತ್ತ ದೃಷ್ಟಿಹರಿಸಿ ಬೆಚ್ಚಿ ‘ಏಕೆ ಯಾವಾಗಿನಿಂದ ಎದ್ದು ಕುಳಿತೀರಿ ನಿದ್ದೆ ಬಂದಿಲ್ಲವೇ?’ ಪ್ರಶ್ನಿಸಿದಳು. ಆದರೂ ಸಿದ್ದು ಮಾತನಾಡಲಿಲ್ಲ.

ಈರಮ್ಮ ಮಲಗಿದ್ದ ಮಕ್ಕಳ ಕಡೆ ತಿರುಗಿ ‘ಮಕ್ಕಳೇ ಏಳಿ ಇವತ್ತು ಪಂದ್ರಾ ಆಗಸ್ಟ ಇಲ್ಲವೇ ?,ಬೇಗ ಶಾಲೆಗೆ ಹೋಗಿ ಪ್ರಭಾತ ಫೇರಿಯಲ್ಲಿರಬೇಕು.’ ಈರಮ್ಮಳ ಮಾತಿಗೆ ಹಾಸಿಗೆಯಲ್ಲಿಯೇ ಲಕ್ಷ್ಮೀ ಬೇಸರದಿಂದ ‘ಅವ್ವ ಇವತ್ತು ನಾನು ಶಾಲೆಗೆ ಹೋಗುವದಿಲ್ಲ ಏಕೆಂದರೆ ನನ್ನ ಬಟ್ಟೆಯೆಲ್ಲ ಹರಿದಿವೆ’ ಅಳುತ್ತ ನುಡಿದಳು.ಅದಕ್ಕೆ ಈರಮ್ಮ ಸಂತೈಸುತ್ತ ‘ಹಾಗೆಲ್ಲ ಅಳಬಾರದು, ಇನ್ನೆರಡು ತಿಂಗಳಾಗಲಿ ಅಪ್ಪ ಇನ್ನೊಂದು ಹೊಸ ಜೋಡು ಬಟ್ಟೆ ಕೊಡಿಸುತ್ತಾರೆ. ಇಂದು ರಾಷ್ಟ್ರೀಯ ಹಬ್ಬವಲ್ಲವೆ !ನೀನು ಹೀಗೆ ಜಿದ್ದು ಮಾಡಬಾರದು,ಜಾಣೆಯಲ್ಲವೇ ?

ಇನ್ನೊಂದು ಹರಿದ ಬಟ್ಟೆಯಿದೆ ಅದನ್ನು ಶುಭ್ರವಾಗಿ ತೊಳೆದಿದ್ದೇನೆ. ಅದನ್ನು ಹಾಕಿಕೊಂಡು ಹೋಗು ಲಕ್ಷ್ಮೀ.” ಎಂದು ಈರಮ್ಮ ನುಡಿದಳು. ಮಗಳು ಲಕ್ಷ್ಮೀ ಯ ಮಾತನ್ನು ಕೇಳಿದ ಸಿದ್ದುವಿಗೆ ದುಃಖ ಉಮ್ಮಳಿಸಿ ಬಂತು.ಅಷ್ಟರಲ್ಲಿ ಈರಮ್ಮ ಪತಿಯತ್ತ ಮುಖಮಾಡಿ ‘ನೀವೇಕೆ ಹಾಗೆ ಕುಳಿತಿರಿ, ಚಾ ಮಾಡ್ತಿನಿ ಮಾರಿ ತೋಳಿರಿ’ ನುಡಿದು ಮನೆಗೆಲಸಗಳ ಮಾಡಲು ಎದ್ದು ಹೊರ ನಡೆದಳು. ಸಿದ್ದು ಹೆಂಡತಿಯ ಮಾತುಗಳಿಗೆ ನಿರುತ್ಸಾಹರೂಪದಲ್ಲಿ ಮುಖ ತೊಳೆಯಲು ಬಚ್ಚಲಿಗೆ ನಡೆದನು. ಅಷ್ಟರಲ್ಲಿ ಬದಿಯ ಮನೆಯ ಸಂಗಪ್ಪ ಮನೆಯೊಳಗೆ ಬಂದನು.ಕಂಡ ಸಿದ್ದು ‘ಬಾ ಸಂಗಣ್ಣ ಏನು ಸುದ್ದಿ’ ನುಡಿದನು. ಈಗ ಸಿದ್ದುವಿನ ಪ್ರಶ್ನೆಗೆ ಸಂಗಪ್ಪ ಸಿದ್ದವಿನತ್ತ ದೃಷ್ಟಿ ಹರಿಸಿ ‘ಆ ಮೇಲ್ಮನೆಯ ಸೋಮಣ್ಣ ರೈತ ಇವತ್ತು ಫಾಸಿ ಹಾಕ್ಕೊಂಡು ಸತ್ತಾನಂತ’ ನುಡಿದನು. ಸಂಗಪ್ಪನ ಮಾತು ಕೇಳುತ್ತಲೆ ಸಿದ್ದು ‘ಹ್ಞಾಂ..’ಎನ್ನುತ್ತ ಬೆಚ್ಚಿ ಬಿದ್ದವನಂತೆ ಕೆಳಗೆ ಕುಸಿದು ಬಿದ್ದನು.ಸಿದ್ದುವಿನ ಕೈ ಕಾಲುಗಳಲ್ಲಿ ಅಧೀರತೆ ಬಂದಂತೆನಿಸಿತ್ತುಬೀದ

ರಗ ತನ್ನ ಸರದಿ ಬಂತೆಂಬಂತೆ ಯೋಚಿಸತೊಡಗಿದನು ಸಿದ್ದು. ಸಂಗಪ್ಪ ಹಾಂ ಹಾಂ ಎನ್ನುತ್ತಿರುವಂತೆ ಕೇಳಿ ಈರಮ್ಮ ಓಡೋಡಿ ಬಚ್ಚಲು ಹತ್ತಿರ ಬಂದು ಗಂಡನತ್ತ ದೃಷ್ಟಿ ಹರಿಸಿದಳು.’ಏಕೆ ಹೀಗೆ ಮಾಡುತ್ತಿದ್ದೀರಿ,ಏನಾಯ್ತು ನಿಮಗೆ!’ನುಡಿದಳು.ಪುನಃ ಪತಿಯನ್ನುದ್ದೇಶಿಸಿ ‘ಇವತ್ತು ರೇಡಿಯೋನಲ್ಲಿ ಕೇಳಿದ್ದೀರೋ ಇಲ್ಲವೋ ಮಾನ್ಯ ಮುಖ್ಯ ಮಂತ್ರಿಗಳು ರೈತರೇ ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ,ನಾವು ನಿಮ್ಮ ಜೊತೆಗೆ ಇದ್ದೇವೆ.ನಿಮ್ಮ ಕಷ್ಟ ಸುಖಗಳಲ್ಲಿ ನಾವೂ ಪಾಲುದಾರರು, ನಿಮ್ಮ ಸಮಸ್ಯೆ ಏನಿದ್ದರೂ ನಮ್ಮೊಂದಿಗೆ ಚರ್ಚಿಸಿ,ಅದಕ್ಕೆ ಪರಿಹರಿಸಿ ಬೆಂಬಲಿಸುತ್ತೇವೆ.’ ಎಂದಿದ್ದಾರೆ.

ಸಾಲಗಳಿಗಾಗಿ,ಚಿಕ್ಕ ತೊಂದರೆಗಳಿಗಾಗಿ ಬಾಳು ಹಾಳುಮಾಡಿಕೊಂಡರೆ ಏನು ಪ್ರಯೋಜನ ಸಂಗಪ್ಪಣ್ಣ ನೀನೇ ಹೇಳು !.ಇವರು ಆ ಸೋಮಣ್ಣನ ಸುದ್ದಿ ಕೇಳುತ್ತಲೆ ಇಷ್ಟೊಂದು ಸುಸ್ತಾಗಿದ್ದಾರೆ. ಏನು ಮಾಡಲಿ ನಾನು, ರಾತ್ರಿಯಿಂದಲೂ ಹೀಗೆ ಹುಚ್ಚರಂತೆ ವರ್ತಿಸುತಿದ್ದಾರೆ.ಕಂಬನಿ ತೆಗೆದು ಈರಮ್ಮ ಅಳತೊಡಗಿದಳು.

ಈಗ ಸಂಗಪ್ಪ ಈರಮ್ಮಳ ಮಾತು ಕೇಳಿ ಈರಮ್ಮಳನ್ನು ಸಂತೈಸುತ್ತ ಮತ್ತೆ ಸಿದ್ದವಿನತ್ತ ಹೊರಳಿ ‘ಸಿದ್ದ ನಿನಗೇನಾಯ್ತು ಧಾಡಿ, ಹೀಗೆ ಕುಸಿದುಬೀಳಲು,ಹೀಗೆ ಅವನು ಆತ್ಮಹತ್ಯೆ ಮಾಡಿಕೊಂಡು ಸಾಯುವದರಿಂದ ಅವನ ಜೀವಕ್ಕೆ ಹಾನಿ.ಹೊರತುಪಡಿಸಿ ಇದರಿಂದೇನು ಫಲ ! ನೀನೇ ಯೋಚಿಸು.ಅವನು ಸತ್ತರೆ ಸರಕಾರ ಕೊಡುವ ಒಂದಿಷ್ಟು ಹಣ ಯಾವ ಲೆಕ್ಕಕ್ಕೆ ?ಅದರಿಂದ ಅವನ ಮಕ್ಕಳ ಭವಿಷ್ಯ ಬದಲಾಯಿಸಲು ಸಾಧ್ಯವೇ. ನಮಗೆ ಸಿಕ್ಕ ಜೀವನ ಅತ್ಯಮೂಲ್ಯ.ನಿನಗೆ ಮುತ್ತಿನಂತಹ ಸುಂದರ ಮೂರು ಮಕ್ಕಳಿವೆ.ಜೊತೆಗೆ ಈರಮ್ಮ ನಿನ್ನ ಮನಸ್ಸು ಅರಿತು ಬಾಳ್ವೆ ಮಾಡುವ ಸಾಧ್ವಿ ಹೆಣ್ಣುಮಗಳು.ಹೀಗಿರುವಾಗ ನೀನು ಕೆಟ್ಟ ಯೋಚನೆಮಾಡಿ ಇಂತಹ ನಂದನವನದಂತಹ ಬಾಳು ಹಾಳುಮಾಡಿಕೊಳ್ಳುವದೆಂದರೆ ಅದು ಮೂರ್ಖರ ಲಕ್ಷಣವೇಸರಿ.

‘ಈಸಬೇಕು ಇದ್ದು ಜೈಸಬೇಕು’ ಎಂದು ಹಿರಿಯರು ಹೇಳುವುದಿಲ್ಲವೇ! ಗಟ್ಟಿಯಾಗಬೇಕು ಎಂತಹ ಕಷ್ಟಗಳು ಬಂದರೂ ಎದುರಿಸುವ ಸಾಮರ್ಥ್ಯನಮ್ಮಲ್ಲಿ ಬರಬೇಕು ಅದೇ ನಿಜವಾದ ಬದುಕು’ಸಂಗಪ್ಪ ನುಡಿದನು. ‘ಇಲ್ಲ ಸಂಗಣ್ಣ ಏಕೋ ಏನೋ ಜೀವನವೇ ನಿರಾಶೆಯೆನಿಸತೊಡಗಿದೆ.ಬೆಳಿಗೆದ್ದರೆ ಎಷ್ಟೊಂದು ಸಮಸ್ಯೆಗಳು. ಮಕ್ಕಳಿಗೆ ಬಟ್ಟೆ ಇಲ್ಲ, ಮನೆಯಲ್ಲಿ ಊಟಕ್ಕೆ ತೊಂದರೆ,ಹೊರಗೆ ಸಂಘದ ಸಾಲ, ಈಗ ಎರಡು ವರ್ಷಗಳಿಂದ ಜಮೀನಿನಲ್ಲಿ ಬೆಳೆಯು ಬೆಳೆಯುತ್ತಿಲ್ಲ. ನಾನು ಏನು ಮಾಡುವುದು ನೀನೆ ಹೇಳು’ ಸಿದ್ದು ಕಣ್ಣೀರಿಟ್ಟನು.ಈಗ ಈರಮ್ಮನ ಕಣ್ಣಲ್ಲಿ ಕಂಬನಿ ಹರಿದು ಬಂತು.

ಅಷ್ಟರಲ್ಲಿ ಹೊರಗೆ ಯಾರೋ ಭಿಕ್ಷುಕನೊಬ್ಬ ‘ಅಮ್ಮ ಏನಾದರೂ ನೀಡಿಯಮ್ಮ” ಎಂದು ಮನೆಯ ಮುಂದೆ ನಿಂತನು.ಇದನ್ನು ಕಂಡ ಸಂಗಪ್ಪ ಆ ಭಿಕ್ಷುಕನತ್ತ ನೋಡಿ’ ನೋಡು ಸಿದ್ದು ಪಾಪ ಆ ಭಿಕ್ಷುಕನಿಗೆ ಮನೆ ಇಲ್ಲ,ನಿಂತ ಆ ಪುಟ್ಟ ಮಕ್ಕಳಿಗೆ ಬಟ್ಟೆ ಇಲ್ಲ ನೀನೇ ನೋಡು.ಆ ಮಕ್ಕಳಮೈ ಮೇಲೆ ಹೊಲಸು ಬಟ್ಟೆ.ಇಷ್ಟಾದರೂ ಅವನು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಮಾಡಿಹನೇ ನೀನೆ ಹೇಳು ? ಅವರು ಜೀವನದ ಜೊತೆ ಹೋರಾಟ ಮಾಡುತಿಹರೆ ವಿನಃ ನಿರಾಶರಾಗಿಲ್ಲ, ನೀನು ಅವರ ಬಗ್ಗೆಯಾದರೂ ತುಸು ವಿಚಾರ ಮಾಡು…’ಸಂಗಪ್ಪನ ಮಾತು ಕೇಳಿದಾಗ ಈಗ ಒಂದು ಕ್ಷಣ ಸಿದ್ದು ಗಂಭೀರನಾಗಿ ಅವನಂತ್ತಲೇ ನೋಡಿದನು.ಸಂಗಪ್ಪ ಹೇಳಿದ ಮಾತು ನಿಜವಾಗಲು ಸತ್ಯವೆನಿಸಿತ್ತು. ಕೂಡಲೆ ಮುಗಳು ನಗುತ್ತ ಸಿದ್ದು ಅಲ್ಲಿಂದ ಎದ್ದು ಅ ಭಿಕ್ಷುಕನಿಗೆ ಇದ್ದುದರಲ್ಲಿಯೇ ಮನೆಯಲ್ಲಿದ್ದ ತುಸು ಧಾನ್ಯ ಹಾಕಿ ತಾನು ಬಚ್ಚಲು ಮನೆಗೆ ಹೋಗಿ ಮುಖಮಾರ್ಜನ ಮಾಡಿಕೊಳ್ಳತೊಡಗಿದನು.ಸಂಗಪ್ಪ ಅವನ ಉತ್ಸಾಹದ ಹಾವ ಭಾವ ಕಂಡು ಸಂತಸಗೊಂಡನು.

ಅಷ್ಟರಲ್ಲಿ ಈರಮ್ಮ ಚಹ ತೆಗೆದುಕೊಂಡು ಹೊರ ಬಂದಳು.ಸಿದ್ದು ಮತ್ತು ಸಂಗಪ್ಪ ಕುಳಿತು ಚಹ ಕುಡಿಯತೊಡಗಿದರು. ಇದೇ ಸಂದರ್ಭದಲ್ಲಿ ಮಕ್ಕಳು ಮೂವರು ನಗುತ್ತ ಇದ್ದ ಹರಿದ ಬಟ್ಟೆಗಳನ್ನೆ ಧರಿಸಿಕೊಂಡು ಹೊರಬಂದು ‘ಅಪ್ಪ ನಾವು ಶಾಲೆಗೆ ಝೇಂಡಾ ಹಾರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತೇವೆ,ಆ ಮೇಲೆ ನಮಗೆ ಹೊಸ ಬಟ್ಟೆ ಕೊಡಿಸಿ’ಎಂದಾಗ ಸಿದ್ದು ಮುಗುಳು ನಕ್ಕು ‘ಆಗಲಿ ಹೋಗಿ ಬನ್ನಿ ಮಕ್ಕಳೆ’ ನುಡಿದನು.ಮತ್ತೆ ಈಗ ಸಂಗಪ್ಪನತ್ತ ದೃಷ್ಟಿ ಹರಿಸಿದ ಸಿದ್ದು ಸಂಗಪ್ಪನನ್ನುಉದ್ದೇಶಿಸಿ ನುಡಿಯುತ್ತ ‘ನಡೆ ಸಂಗಣ್ಣ ನಾವು ಧ್ವಜಾರೋಹಣ ಕಾರ್ಯಕ್ರಮನೋಡಲು ಕ್ರೀಡಾಂಗಣಕ್ಕೆ ಹೋಗೋಣ.ಮಂತ್ರಿಗಳ ಭಾಷಣ ಕೇಳೋಣ’ಎಂದನು.

ಸಂಗಪ್ಪ ಸಿದ್ದುವಿನ ಮಾತು ಕೇಳಿ ನಗುತ್ತ ಅವನೊಂದಿಗೆ ಹೊರಗೆ ಹೆಜ್ಜೆ ಹಾಕಿದನು.’ಹೌದು ಈಸಬೇಕು ಇದ್ದು ಜೈಸಬೇಕು’ಎನ್ನುವ ಸಿದ್ದವಿನ ಕಂಗಳಲ್ಲಿ ಬದುಕುವ ಆಶಾಕಿರಣ ಮೂಡಿಬಂತು.ಸಿದ್ದು ಈರಮ್ಮಳತ್ತ ನೋಡಿ ನಕ್ಕು ಹೊರನಡೆದನು. ಪತಿಯ ಮೊಗದ ಮೇಲೆ ನಗುವಿನ ಖುಷಿಯ ಛಾಯೆ ಕಂಡಾಗ ಅವಳಿಗೆ ನೆಮ್ಮದಿ ಎನಿಸಿತ್ತು. ಹಾಗೆ ಈರಮ್ಮ ಮನೆಯ ಬಾಗಿಲಿನ್ನಲ್ಲಿ ನಿಂತು ಒಂದು ಕ್ಷಣ ಗಂಡನತ್ತ ಕಂಡು ಮುಗುಳನಕ್ಕಳು.

ಎಂ.ಜಿ.ದೇಶಪಾಂಡೆ.ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ